ಸೋಮವಾರ, ಸೆಪ್ಟೆಂಬರ್ 15, 2008

ಕಲ್ಲೇಶ್ವರ ದೇವಾಲಯ - ಬಾಗಳಿ


ಬಾಗಳಿಯಲ್ಲಿರುವ ಕಲ್ಲೇಶ್ವರ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎನ್ನುತ್ತಾರೆ. ಕೆರೆಯ ಬದಿಯಲ್ಲಿರುವ ದೇವಾಲಯವನ್ನು ನವೀಕರಿಸಿ ಪುರಾತತ್ವ ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದೆ. ನವರಂಗ ಚಾಳುಕ್ಯ ಶೈಲಿಯಲ್ಲಿದೆ. ಮುಖಮಂಟಪ/ಸುಖನಾಸಿ ಹೊಯ್ಸಳ ಶೈಲಿಯಲ್ಲಿದೆ. ಕಡೆಯದಾಗಿ ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕು ಶೈಲಿಗಳ ಮಿಲನ ಬೇರೆಲ್ಲಾದರೂ ಕಾಣಸಿಕ್ಕೀತೆ?

ಪೂರ್ವಾಭಿಮುಖವಾಗಿರುವ ಈ ಏಕಕೂಟ ದೇವಾಲಯವನ್ನು ಇಸವಿ ೧೧೧೮ರಲ್ಲಿ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನು ನಿರ್ಮಿಸಿದನೆಂದು ಶಾಸನಗಳಲ್ಲಿ ತಿಳಿಸಲಾಗಿದೆ. ಇಲ್ಲಿ ಸಿಕ್ಕಿರುವ ೪೧ ಶಾಸನಗಳಲ್ಲಿ ೧೨ ಚಾಲುಕ್ಯ ದೊರೆ ೬ನೇ ವಿಕ್ರಮಾದಿತ್ಯನ ಕಾಲದ್ದಾಗಿವೆ. ಬಾಗಳಿ ಊರಿನಲ್ಲಿ ಸುಂದರ ವೀರಗಲ್ಲುಗಳೂ ದೊರೆತಿವೆ. ಗರ್ಭಗುಡಿಯಲ್ಲಿರುವ ಕಲ್ಲೇಶ್ವರನ ಮೇಲೆ ಯುಗಾದಿಯ ಶುಭ ದಿನದಂದು ಸೂರ್ಯನ ಕಿರಣಗಳು ಬೀಳುತ್ತವಂತೆ. ಗರ್ಭಗುಡಿಯ ಮೇಲೆ ಗೋಪುರವಿದ್ದರೂ ಯುಗಾದಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ಹೇಗೆ ಒಳಗೆ ತೂರಿ ಬರುತ್ತವೆಂದು ಕಾರಣವನ್ನು ಕಂಡು ಹಿಡಿಯಲು ಇದುವರೆಗೆ ಆಗಿಲ್ಲವಂತೆ. ಆದರೆ ಇದನ್ನು ವೀಕ್ಷಿಸಲು ಯುಗಾದಿಯಂದು ಬಹಳಷ್ತು ಜನರು ಇಲ್ಲಿ ಸೇರುತ್ತಾರೆ.


ಸುಂದರ ಉದ್ಯಾನದ ನಡುವೆ ಇರುವ ದೇವಾಲಯವನ್ನು ಹೊಕ್ಕರೆ ಮುಖಮಂಟಪದಲ್ಲಿ ಅತ್ಯುನ್ನತ ಕೆತ್ತನೆಯಿರುವ ೬೪ ಕಂಬಗಳ ಸ್ವಾಗತ. ಇವುಗಳಲ್ಲಿ ನಟ್ಟನಡುವೆ ಇರುವ ೪ ಕಂಬಗಳಿಗೆ ಪ್ರಭಾವಳಿಯಿರುವ ವಿಶಿಷ್ಟ ಕೆತ್ತನೆ. ಎಲ್ಲಾ ೬೪ ಕಂಬಗಳನ್ನು ಬೇರೆ ಬೇರೆ ರೀತಿಯಲ್ಲಿ ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಕಂಬಗಳ ವಿನ್ಯಾಸದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ. ಆದರೆ ಕೂಲಂಕುಷವಾಗಿ ಗಮನಿಸಲು ನನಗೆ ತಾಳ್ಮೆ ಮತ್ತು ಸಮಯ ಇರಲಿಲ್ಲ. ಇಲ್ಲಿಗೆ ಬರುವ ಕೆಲವು ಅನಾಗರೀಕರು ಈ ಸುಂದರ ಕಂಬಗಳ ಮೇಲೆ ತಮ್ಮ ಹೆಸರುಗಳನ್ನು ಬರೆದು ಅವುಗಳ ಅಂದಗೆಡಿಸಿರುವುದು ಖೇದಕರ. ನಂದಿ ಮುಖಮಂಟಪದ ಆರಂಭದಲ್ಲೇ ಇದೆ.

ನವರಂಗಕ್ಕೆ ಎರಡು ದ್ವಾರಗಳಿವೆ. ಒಂದು ದ್ವಾರ ಪಾರ್ಶ್ವದಲ್ಲಿದ್ದು ದೇವಾಲಯದ ಹೊರಗೆ ತೆರೆದುಕೊಂಡರೆ, ಇನ್ನೊಂದು ದ್ವಾರ ಪ್ರಮುಖ ದ್ವಾರವಾಗಿದ್ದು, ಮುಖಮಂಟಪ/ಸುಖನಾಸಿಗೆ ತೆರೆದುಕೊಳ್ಳುತ್ತದೆ. ಎರಡೂ ದ್ವಾರಗಳು ಉನ್ನತ ಕೆತ್ತನೆ ಕೆಲಸವನ್ನು ಹೊಂದಿದ್ದು ಆಕರ್ಷಕವಾಗಿವೆ. ನವರಂಗದ ಪ್ರಮುಖ ದ್ವಾರ ೭ ತೋಳಿನದ್ದಾಗಿದ್ದು ಗಜಲಕ್ಷ್ಮಿಯ ಸುಂದರ ಕೆತ್ತನೆಯನ್ನು ಮತ್ತು ಮೇಲ್ಗಡೆ ದೇವ ದೇವಿಯರ ಸೂಕ್ಷ್ಮ ಕೆತ್ತನೆಯನ್ನೂ ಹೊಂದಿದೆ. ಕೆಳಗಡೆ ದ್ವಾರಪಾಲಕ(ಕೆ)ಯರ ಕೆತ್ತನೆಗಳು. ನವರಂಗದ ಇನ್ನೊಂದು ದ್ವಾರವೂ ೭ ತೋಳಿನದ್ದಾಗಿದ್ದು ಪ್ರತಿಯೊಂದು ತೋಳಿನಲ್ಲೂ ಸುಂದರ ಕೆತ್ತನೆ ಕೆಲಸವನ್ನು ಮಾಡಲಾಗಿದೆ. ಈ ದ್ವಾರ ಬಾಗಳಿ ಕಲ್ಲೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ ಎನ್ನಬಹುದು. ಸಮೀಪದಲ್ಲಿ ಸಿಕ್ಕಿರುವ ಅಪೂರ್ಣ ದೇವಾಲಯದಲ್ಲಿದ್ದ ನಂದಿಯ ಮೂರ್ತಿಯನ್ನು ನವರಂಗದಲ್ಲಿರಿಸಲಾಗಿದೆ.

ಅಂತರಾಳದ ದ್ವಾರಕ್ಕೆ ಸುಂದರ ಜಾಲಂಧ್ರದ ರಚನೆಯಿದೆ. ಗರ್ಭಗುಡಿಯ ದ್ವಾರ ೫ ತೋಳಿನದ್ದಾಗಿದೆ. ಕಲ್ಲೇಶ್ವರನಿಗೆ ಊರಿನವರು ಸುಂದರ ಮುಖವಾಡವನ್ನು ಮಾಡಿಸಿದ್ದಾರೆ. ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ.


ಈ ದೇವಾಲಯದ ಸಮೀಪ ಉತ್ಖನನ ನಡೆಸುತ್ತಿರುವಾಗ ಕೆರೆಯ ಮರಳಿನಲ್ಲಿ ಹುದುಗಿಹೋಗಿದ್ದ ಮತ್ತೊಂದು ದೇವಾಲಯ, ಕಲ್ಲಿನ ಮೂರ್ತಿಗಳು ಮತ್ತು ಕೆಲವು ಬೃಹದಾಕಾರದ ಕಂಬಗಳು ಸಿಕ್ಕಿವೆ. ಈ ಹೊಸದಾಗಿ ಕಂಡುಹುಡುಕಿರುವ ಸಣ್ಣ ದೇವಾಲಯದಲ್ಲಿ ಯಾವುದೇ ಮೂರ್ತಿ ಕಂಡುಬರಲಿಲ್ಲ. ಈ ದೇವಾಲಯದ ಕೆಲವೊಂದು ಕೆತ್ತನೆ ಕೆಲಸಗಳು ಅಪೂರ್ಣವಾಗಿರುವುದರಿಂದ ದೇವಾಲಯದ ನಿರ್ಮಾಣವನ್ನು ಅರ್ಧಕ್ಕೇ ಕೈಬಿಡಲಾಗಿತ್ತು ಎಂದು ಊಹಿಸಬಹುದು. ದೇವಾಲಯದ ಸಮೀಪ ಸಿಕ್ಕಿರುವ ಎಲ್ಲಾ ಶಾಸನಗಳನ್ನು, ಮೂರ್ತಿಗಳನ್ನು ಬಾಗಳಿ ಊರಿನಲ್ಲಿರುವ ಸಂಗ್ರಹಾಲಯದಲ್ಲಿ ಇಡಲಾಗಿದೆ.

ಮುಖಮಂಟಪದ ಬಲಬದಿಯಲ್ಲೊಂದು ಗರ್ಭಗುಡಿಯಿದ್ದು ಇದರಲ್ಲಿ ಉಗ್ರನರಸಿಂಹ ಹಿರಣ್ಯಕಷಿಪುವನ್ನು ತೊಡೆಯ ಮೇಲೆ ಇರಿಸಿ ಉದರವನ್ನು ಬಗೆಯುವ ಮತ್ತು ಪ್ರಹ್ಲಾದ ಹಾಗೂ ನಾರದ ಮುನಿ ಇದನ್ನು ವೀಕ್ಷಿಸುವ ಅದ್ಭುತ ಕೆತ್ತನೆಯ ಕರಿಕಲ್ಲಿನ ಮೂರ್ತಿಯಿದೆ. ಮೂರ್ತಿ ಎಷ್ಟು ನಯವಾಗಿದೆಯೆಂದರೆ ಧೂಳಿನ ಕಣ ಕೂಡಾ ಜಾರಿ ಕೆಳಗೆ ಬೀಳಬೇಕು. ಉಗ್ರನರಸಿಂಹನ ಕೈಬೆರಳಿನ ಉಗುರುಗಳು ಕೂಡಾ ಸ್ಪಷ್ಟವಾಗಿ ಕಾಣುತ್ತವೆ. ಅಷ್ಟು ಅದ್ಭುತವಾಗಿ ಮತ್ತು ಸೂಕ್ಷ್ಮವಾಗಿ ಕೆತ್ತಲಾಗಿದೆ ಈ ಮೂರ್ತಿಯನ್ನು. ಎಷ್ಟೇ ವಿನಂತಿಸಿದರೂ ಅಲ್ಲಿನ ಸಿಬ್ಬಂದಿ ಈ ಅಪ್ರತಿಮ ಮೂರ್ತಿಯ ಚಿತ್ರ ತೆಗೆಯಲು ಬಿಡಲೇ ಇಲ್ಲ. ಬೇರೆ ಉಪಾಯವಿಲ್ಲದೆ ಕಣ್ತುಂಬಾ ಈ ಮೂರ್ತಿಯನ್ನು ನೋಡುತ್ತಾ ಬಹಳ ಹೊತ್ತು ಅಲ್ಲೇ ಕುಳಿತೆ. ದೇವಸ್ಥಾನ ಪ್ರೇಮಿಗಳು ಬಾಗಳಿಯ ಕಲ್ಲೇಶ್ವರ ದೇವಸ್ಥಾನಕ್ಕೆ ಈ ಉಗ್ರನರಸಿಂಹನ ಮೂರ್ತಿಯನ್ನು ನೋಡಲಾದರೂ ಭೇಟಿ ನೀಡಲೇಬೇಕು.

ದೇವಾಲಯಕ್ಕೊಂದು ಸುತ್ತು ಹಾಕುವಾಗ ಗರ್ಭಗುಡಿಯ ಹೊರಭಾಗದಲ್ಲಿ ಸುಂದರ ಮತ್ತು ವಿಶಿಷ್ಟ ಮಿಥುನ ಶಿಲ್ಪಗಳನ್ನು ಕಾಣಬಹುದು. ಅಲ್ಲಿನ ಸಿಬ್ಬಂದಿ ಇವುಗಳ ಬಗ್ಗೆ ಸಂಪೂರ್ಣ ವಿವರಣೆ ನೀಡುತ್ತಾರೆ. ಇದೇ ಕಾರಣಕ್ಕಾಗಿ ಈ ದೇವಾಲಯವನ್ನು ಕರ್ನಾಟಕದ ಖಜುರಾಹೋ ಎನ್ನುತ್ತಾರಂತೆ!

3 ಕಾಮೆಂಟ್‌ಗಳು:

ಮಿಥುನ ಹೇಳಿದರು...

ನಿಮ್ಮ ಬರೆಹಗಳ ವೇಗಕ್ಕೆ ಮತ್ತು ಕೊಡುತ್ತಿರುವ ಮಾಹಿತಿಗಳಿಗೆ ಬಾಯಿ ತುಂಬ ಅಭಿನಂದನೆ.
ಇಂತು
ನಿಮ್ಮ ಬರೆಹಗಳನ್ನು ಕದಿಯುತ್ತಿರುವ ಕಳ್ಳ!

Parisarapremi ಹೇಳಿದರು...

ಯಾವಾಗ ಎಲ್ಲಿ ಹೋಗಬೇಕು ಅನ್ನಿಸಿದಾಗ, ನಾಯಕ್ರು ಏನಾದ್ರು ಹೊಸಾ ಐಡಿಯಾ ಕೊಟ್ಟಿರ್ತಾರೆ, ಅನ್ನೋ ಭರವಸೆ ಇಂದಲೇ ನಿಮ್ಮ ಬ್ಲಾಗನ್ನು ತೆರೆದಾಗ ಎಂದೂ ನಿರಾಶೆಯಾಗಿಲ್ಲ. ಅತಿ ಶೀಘ್ರದಲ್ಲೇ ಈ ಖಜುರಾಹೋಗೆ ಹೊರಡೋದೇ.. :-)

ರಾಜೇಶ್ ನಾಯ್ಕ ಹೇಳಿದರು...

ಮಿಥುನ್,
ವಂದನೆಗಳು. ಪ್ರೋತ್ಸಾಹ ಇರಲಿ.

ಅರುಣ್,
ಥ್ಯಾಂಕ್ಸ್. ’ನಿರಾಸೆಯಾಗಲಿಲ್ಲ’ ಅಂದೀರಲ್ಲ... ಬಹುಮಾನ ಸಿಕ್ಕ ಹಾಗಾಯ್ತು ನೋಡಿ. ಮತ್ತೊಮ್ಮೆ ಥ್ಯಾಂಕ್ಸ್.