ಬುಧವಾರ, ಏಪ್ರಿಲ್ 04, 2007

ಕುರಿಂಜಾಲಿನ ಕಡೆ ಹೆಜ್ಜೆ


ಮುರ್ಖರ ದಿನ 2007ರಂದು ನಮ್ಮ ಚಾರಣ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗಿರುವ ಕುರಿಂಜಾಲಿಗೆ. ಗೈಡ್ ಇಲ್ಲದೆ ರಾಷ್ಟ್ರೀಯ ಉದ್ಯಾನದೊಳಗೆ ಎಲ್ಲೂ ಚಾರಣಕ್ಕೆ ಹೋಗುವಂತಿಲ್ಲ ಎಂದು ಅರಣ್ಯ ಇಲಾಖೆಯ ಕಟ್ಟಪ್ಪಣೆ ಇದೆ. ಮುನ್ನಾ ದಿನ ಮಲ್ಲೇಶ್ವರಕ್ಕೆ ತೆರಳಿ ಅಲ್ಲಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ನಾನು ಖುದ್ದಾಗಿ ಚಾರಣ ಶುಲ್ಕವಾದ ಒಬ್ಬರಿಗೆ 50 ರೂಪಾಯಿಯನ್ನು, ಭಗವತಿಯಲ್ಲಿ ರಾತ್ರಿ ಕಳೆಯಲು ಅವಶ್ಯವಿದ್ದ ಇತರ ಶುಲ್ಕಗಳೊಂದಿಗೆ ಕಟ್ಟಿ ಬಂದಿದ್ದೆ. ಆದರೆ ಬೆಳಗ್ಗೆ 9.30 ಆದರೂ ಗೈಡ್ ಕಾಣದಿದ್ದಾಗ ನಾವು ಇನ್ನೂ ಕಾದು ಮುರ್ಖರಾಗುವುದು ಬೇಡವೆಂದು ನಾವಾಗಿಯೇ ಕುರಿಂಜಾಲಿನೆಡೆ ಹೊರಟೆವು. ಅದಾಗಲೇ ಸೂರ್ಯನ ಕಿರಣದಿಂದ ಮೈ ಸುಡುತ್ತಿತ್ತು. ಟಾರು ರಸ್ತೆಯ ಬದಿಯಲ್ಲಿರುವ ಅರಣ್ಯ ಇಲಾಖೆಯ ಟ್ರೇಡ್ ಮಾರ್ಕ್ ಹಸಿರು - ನೀಲಿ ಬಣ್ಣದ ಗೇಟೊಂದರ ಬಳಿಯಿಂದ ಒಳಹೊಕ್ಕು ಆ ಜೀಪ್ ದಾರಿಯಲ್ಲಿ ಹೆಜ್ಜೆ ಹಾಕಿದೆವು.

ಹಿಂದೆ ಕುರಿಂಜಾಲಿನ ಬುಡದಲ್ಲೊಂದು ಮೈಕ್ರೋವೇವ್ ಸ್ಟೇಷನ್ ಮತ್ತು ಮೈಕ್ರೋವೇವ್ ಟವರ್ ಇತ್ತು. ಈಗಲೂ ಇವೆ ಆದರೆ ಕಾರ್ಯ ಮಾಡುತ್ತಿಲ್ಲ. ಈ ಸ್ಟೇಷನ್ ಇದ್ದ ಕಾರಣ, ಟಾರು ರಸ್ತೆಯಿಂದ ಕುರಿಂಜಾಲಿನ ಬುಡದವರೆಗೆ ಜೀಪ್ ರಸ್ತೆ ಇದೆ. ಸೇತುವೆಯೊಂದನ್ನು ದಾಟಿದ ಬಳಿಕ ಏರುಹಾದಿ ಶುರು. ಬಿಸಿಲಿನಿಂದ ಪಾರಾಗಲು ನೆರಳು ಸಿಗುತ್ತಿರಲಿಲ್ಲ. ನಿಧಾನವಾಗಿ ನಡೆದು ಕಾಡು ಹೊಕ್ಕಾಗಲೇ ಸ್ವಲ್ಪ ರಿಲೀಫ್.

ರಸ್ತೆಯ ಎರಡೂ ಬದಿಯ ಕಾಡು, ನಾನು ಎಮ್ಮೆಶಿರ್ಲ ಜಲಪಾತದ ಕಣಿವೆಯ ಕೆಳಗಿಳಿಯುವಾಗ ಇದ್ದ ಕಾಡನ್ನು ಹೋಲುತ್ತಿತ್ತು. ಆಗ ನಾನು ಮತ್ತು ಜಿರಾಫೆ ಹೊಳ್ಳ ಇಬ್ಬರೇ ಇದ್ದರೆ ಈಗ 10 ಮಂದಿ ಇದ್ದೆವು. ಆದ್ದರಿಂದ 'ಭಯ' ಎಂಬ ಶಬ್ದ ದೂರವುಳಿದಿತ್ತು. ಕೊನೆಯ 60 ನಿಮಿಷದ ಹಾದಿ ಮತ್ತೆ ಬಿಸಿಲಿನಲ್ಲಿ. ಈಗ ಬೆಟ್ಟದ ಬದಿಯಲ್ಲೇ 'ಝಿಗ್ ಝ್ಯಾಗ್' ರೂಪದಲ್ಲಿದ್ದ, ಕೆಟ್ಟುಹೋಗಿದ್ದ, ಕಲ್ಲು ಮಣ್ಣುಗಳಿಂದ ಕೂಡಿದ್ದ ರಸ್ತೆಯಲ್ಲಿ ನಡಿಗೆ. ಇದೊಂದು ಸುಂದರ ಮತ್ತು ಆಹ್ಲಾದಕರವಾದ ವಾಕ್. ಬಿಸಿಲಿದ್ದರೂ, ಆಗಾಗ ಬೀಸುತ್ತಿದ್ದ ತಂಗಾಳಿ ನೀಡುತ್ತಿದ್ದ ಸುಖ, ಆಹಾ. ನಾಲ್ಕೈದು 'ಯು ಟರ್ನ್' ಬಳಿಕ ಮತ್ತೆ ನೇರ ರಸ್ತೆ ಮತ್ತು ದೂರದಲ್ಲಿ ಪ್ರಥಮ ಬಾರಿಗೆ ಕುರಿಂಜಾಲಿನ ದರ್ಶನ. ಧುತ್ತೆಂದು ಭೂಮಿಯಿಂದ ಮೇಲೆದ್ದಂತೆ ಕಾಣುತ್ತದೆ ಕುರಿಂಜಾಲು ಅಥವಾ ಕುರಿಂಗಲ್ಲು. ನೋಡಿದ ಕೂಡಲೇ ನನ್ನ ಮನಸ್ಸಿಗೆ ನಾಟಿದ್ದು ಕುರಿಂಗಲ್ಲಿನ ಅಂದ ಮತ್ತು ಗಾಂಭೀರ್ಯ. ಆ ಕರಿಗಲ್ಲು ರಾಜಗಾಂಭೀರ್ಯದಿಂದ ನಿಂತಿರುವ ಚೆಲುವನ್ನು ನೋಡಿದಾಗ ನನಗೆ ಎತ್ತಿನಭುಜದ ನೆನಪು ಬರದೇ ಇರಲಿಲ್ಲ.

ತನ್ನ ಆಚೀಚೆ ಇರುವವರಿಗಿಂತ ತಾನು ಭಿನ್ನ ಎಂದು ಪೋಸು ಕೊಡುತ್ತಿದ್ದ ಕುರಿಂಜಾಲಿನ ಬುಡದಲ್ಲಿದ್ದ ಮೈಕ್ರೋವೇವ್ ಸ್ಟೇಷನ್ ಕಡೆ ಹೆಜ್ಜೆ ಹಾಕತೊಡಗಿದೆವು. ಮೊದಲ 'ಝಿಗ್ ಝ್ಯಾಗ್' ರಸ್ತೆಗಳ ನಂತರದ ನೇರ ರಸ್ತೆಯಲ್ಲಿ ನಡೆದು ಕುರಿಂಜಾಲಿನೆಡೆ ಬರುತ್ತಿರುವಾಗ, ಅದರ ಸೌಂದರ್ಯವನ್ನು 'ಮ್ಯಾಕ್ಸಿಮಮ್' ಆಗಿ ಆಸ್ವಾದಿಸಬಹುದು. ಹತ್ತು ಹೆಜ್ಜೆಗೊಮ್ಮೆ ನಿಂತು ಅದರ ಬೃಹತ್ ಆಕಾರವನ್ನು, ಗಾತ್ರವನ್ನು ಕಣ್ತುಂಬಾ ನೋಡಿಯೇ ಮುಂದೆ ಹೆಜ್ಜೆ ಹಾಕುತ್ತಿದ್ದೆ. ನೋಡಿದಷ್ಟೂ ಸಾಲುತ್ತಿರಲಿಲ್ಲ. ನಂತರ ಮೈಕ್ರೊವೇವ್ ಸ್ಟೇಷನ್ ಬುಡಕ್ಕೆ ಬಂದಾಗ ಮತ್ತೆ ನಾಲ್ಕೈದು 'ಯು ಟರ್ನ್' ಗಳಿರುವ ಝಿಗ್ ಝ್ಯಾಗ್ ರಸ್ತೆ. ಈ ಮೈಕ್ರೊವೇವ್ ಸ್ಟೇಷನ್ ಪಾಳುಬಿದ್ದಿದೆ. ಇದರ ಬದಿಯಿಂದಲೇ ಕಡಿದಾದ ದಾರಿಯಲ್ಲಿ 10 ನಿಮಿಷ ಮೇಲೇರಿ ಕುರಿಂಗಲ್ಲಿನ ಮೇಲೆ ತಲುಪಿದೆವು.

12 ವರ್ಷಗಳಿಗೊಮ್ಮೆ ಹೂ ಬಿಡುವ ಕುರುಂಜಿ ಸಸ್ಯಗಳು ದೊಡ್ಡ ಸಂಖ್ಯೆಯಲ್ಲಿ ಈ ಪ್ರದೇಶದಲ್ಲಿರುವುದರಿಂದ ಮೊದಲು 'ಕುರುಂಜಿಕಲ್ಲು' ಇದ್ದದ್ದು ನಂತರ 'ಕುರಿಂಗಲ್ಲು' ಮತ್ತು 'ಕುರಿಂಜಾಲ್' ಆಗಿರಬೇಕು ಎಂದು ಕುದುರೆಮುಖ ಪ್ರದೇಶವನ್ನು ಚೆನ್ನಾಗಿ ಬಲ್ಲ ಜಗದೀಶ್ ಕಾಮತ್ ಅಭಿಪ್ರಾಯ. ಕುದುರೆಮುಖದಲ್ಲಿ ಟಾರು ರಸ್ತೆ ನಿರ್ಮಾಣ ಆದದ್ದು 1975ರಲ್ಲಿ.

ರಸ್ತೆಯ ಬದಿಯಲ್ಲೊಂದು ಸಣ್ಣ ಗಣಪತಿ ದೇವಾಲಯವಿದ್ದು ಅದಕ್ಕೆ ಗಣಪತಿ ಕಟ್ಟೆ ಎನ್ನುತ್ತಾರೆ. ಈ ಗಣಪತಿ ಕಟ್ಟೆಯ ಮುಂಭಾಗದಲ್ಲಿ ಅಂದರೆ ಈಗಿರುವ ರಸ್ತೆಯ ಮತ್ತೊಂದು ಬದಿಯಲ್ಲಿ ಈಗ ಸಾವಿರಾರು ಎಕರೆ ವಿಶಾಲ ಬೋಳು ಪ್ರದೇಶ. 1966ರಲ್ಲಿ ಇಲ್ಲಿ ಕಾಡಿಗೆ ಭಾರೀ ಬೆಂಕಿ ಬಿದ್ದು ಸಾವಿರಾರು ಎಕರೆ ಕಾಡು ಸುಟ್ಟುಹೋಗಿತ್ತು. ಈ ಬೆಂಕಿ 3 ತಿಂಗಳ ಕಾಲ ಉರಿದಿತ್ತು ಎಂದರೆ ಆದ ನಾಶದ ಅಗಾಧತೆಯನ್ನು ಊಹಿಸಿ. ಇಲ್ಲಿ ರಸ್ತೆಯಿಂದ ಒಂದೆರಡು ಕಿಮಿ ದೂರಕ್ಕೆ ನಡೆದರೆ ಸುಟ್ಟು ಕರಟಿಹೋದ ಮರಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಆಗ ರಸ್ತೆಯಿರದಿದ್ದರೂ ಕಳಸ, ಕಾರ್ಕಳ, ಶೃಂಗೇರಿ ಮುಂತಾದ ಊರುಗಳಿಂದ ಜನರು ಬೆಂಕಿ ವೀಕ್ಷಿಸಲು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಈ ಬೆಂಕಿ ಗಣಪತಿ ಕಟ್ಟೆಯನ್ನು ದಾಟಿ ಕುರಿಂಜಾಲ್ ಇದ್ದ ಕಡೆಗೆ ಹಬ್ಬಲಿಲ್ಲ. ಯಾಕೆಂದರೆ ಕುರುಂಜಿ ಸಸ್ಯ ಮತ್ತು ಕುರುಂಜಿ ಹೂಗಳು ಬೆಂಕಿಯಲ್ಲಿ ನಾಶವಾಗದೇ, ಬೆಂಕಿ ಹಬ್ಬಲು ಸಹಕರಿಸದೇ ಇರುವುದರಿಂದ ಗಣಪತಿ ಕಟ್ಟೆಯ ನಂತರ ಕುರಿಂಜಾಲ್ ಕಡೆ ಇರುವ ಕಾಡು 1966ರ ಭಾರೀ ಬೆಂಕಿಯಿಂದ ಪಾರಾಯಿತು. ಈ ಕಡೆ ಇದ್ದ ಕುರುಂಜಿ ಸಸ್ಯಗಳು ಬೆಂಕಿ ನಿರೋಧಕ ಶಕ್ತಿಯುಳ್ಳವಾದ್ದರಿಂದ ಬೆಂಕಿ ಗಣಪತಿ ಕಟ್ಟೆಯ ಆ ಕಡೆಗೇ ಸೀಮಿತವಾಯಿತು ಎಂದು ಜಗದೀಶ್ ವಿವರಿಸುತ್ತಿದ್ದಾಗ ಆಸಕ್ತಿಯಿಂದ ಕೇಳುತ್ತಿದ್ದೆ ನಾನು.

ಹಿಂತಿರುಗುವಾಗ ದಾರಿಯಿಂದ ಬಲಕ್ಕೆ ಕಾಡಿನೊಳಗೆ ಸ್ವಲ್ಪ ನಡೆದಾಗ ಅಲ್ಲೊಂದು ಸುಂದರ ಕೆರೆ ಮತ್ತು ಪಕ್ಕದಲ್ಲೊಂದು ಮಚಾನ್. ಹಾಗೇ ಮರಳಿ ದಾರಿಗೆ ಬಂದು, ನಂತರ ಗೇಟು ದಾಟಿ ಟಾರು ರಸ್ತೆಯಲ್ಲೊಂದು ಕಿಮಿ ನಡೆದು ಭಗವತಿ ತಲುಪಿದಾಗ ಮಧ್ಯಾಹ್ನ 3ರ ಸಮಯ ಮತ್ತು ಊಟ ಜಸ್ಟ್ ರೆಡಿಯಾಗಿತ್ತು. ಊಟದ ಬಳಿಕ ಹೆಚ್ಚಿನವರು ಜಲಕ್ರೀಡೆಯಾಡಲು ತೆರಳಿದರೆ ನಾನು ಡೇರೆಯೊಳಗೆ ತೆರಳಿ ಮಂಚದ ಮೇಲೆ ಅಂಗಾತ ಬಿದ್ದು ನಿದ್ರಾವಶನಾದೆ.

2 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ಇವತ್ತು ಬೆಳಿಗ್ಗೆ ಅಂದುಕೊಂಡೆ..ಯಾಕೆ ಕುರಿಂಜಾಲ್ ಚಾರಣದ ಬಗ್ಗೆ ಇನ್ನು ಬರೆದಿಲ್ಲ ಅಂತ ಕೇಳ್ಬೇಕೂಂತ. ಅಷ್ಟ್ರಲ್ಲೆ ಬರೆದುಬಿಟ್ಟಿದೀರ.. ನಿಮ್ಮ ಬರಹವೇ ಇಷ್ಟು ಚೆನ್ನಾಗಿದ್ರೆ ಚಾರಣ ಹೇಗಿದ್ದಿರಬಹುದು..! ಈ ಬಿರುಬಿಸಿಲಲ್ಲು ಅಲ್ಲಿ ಹೋಗಲೇಬೇಕು ಅನ್ನಿಸುವಂತಿದೆ ಜಾಗ. ನಾನು ಮಿಸ್ ಮಾಡಿಕೊಂಡೆ ಇದನ್ನ.. :(. ಮುಂದೆ ನಾವು ಪ್ಲಾನ್ ಮಾಡುವಾಗ ವಿವರಗಳಿಗೆ ನಿಮ್ಮನ್ನೇ ಕಾಡಲಿದ್ದೇನೆ.. ;)
ಫೋಟೋಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ. ಹೀಗೇ ತುಂಬ ಕಾಡುಗಳನ್ನ ನೋಡುತ್ತಿರಿ..ನಮಗೂ ನೋಡಿಸಿ..

ರಾಜೇಶ್ ನಾಯ್ಕ ಹೇಳಿದರು...

ಸಿಂಧು,

ಬೇಕಾದಷ್ಟು ಕಾಡಿ. ಪ್ರಕೃತಿ ಪ್ರಿಯರೊಂದಿಗೆ ನನಗೆ ಗೊತ್ತಿರುವ ಮಾಹಿತಿಗಳನ್ನು ಹಂಚಿಕೊಳ್ಳುವುದೇ ನನಗೆ ಸಂತೋಷ.