ನನ್ನ ಸೋದರಮಾವ ವಿಶಿಷ್ಟ ತಳಿಯ ಅಕ್ಕಿ ತರಲು ಕಾಲ್ನಡಿಗೆಯಲ್ಲಿ ಈ ಹಳ್ಳಿಗೆ ಹೋಗುವ ವಿಷಯವನ್ನು ಆಗಾಗ ನನ್ನಲ್ಲಿ ಹೇಳುತ್ತಿದ್ದರು. ಅದೊಂದು ಸಲ ಈ ಅಕ್ಕಿಯ ಅನ್ನ ಮಾಡಿ ಬಡಿಸಿದ್ದರು. ಅನ್ನಕ್ಕೇನೋ ವಿಶಿಷ್ಟ ಪರಿಮಳ. ’ಏನಿದು, ಅನ್ನಕ್ಕೆ ಸೆಂಟ್ ಹೊಡೆದು ನನಗೆ ಬಡಿಸಿದ್ದೀರಾ’.. ಎಂದು ಕೇಳಿದರೆ ಅವರು ಬೊಚ್ಚು ಬಾಯಿ ತೆಗೆದು ನಗುತ್ತಾ, ’ಹೆ ಹೆ ಹೆ ನೀನು ಹಂಗಿಸ್ತಿದ್ದಿಯಲ್ಲ, ಬರೀ ಆ ಹಳ್ಳಿಯ ಅಕ್ಕಿಯ ಬಗ್ಗೆ ಮಾತನಾಡುವುದೇ ಆಯ್ತು... ರುಚಿ ಯಾವಾಗ ತೋರಿಸ್ತೀರಾ ಅಂತಾ, ಅದಕ್ಕೆ ಈ ಸಲ ಆ ಅಕ್ಕಿಯನ್ನು ತರಿಸಿದವರಿಂದ ಸ್ವಲ್ಪ ಖರೀದಿಸಿ ನಿನಗೆ ರುಚಿ ತೋರಿಸುತ್ತಿದ್ದೇನೆ....’ ಎಂದರು. ’ಸರಿ ಸರಿ, ಅಲ್ಲಿ ಜಲಧಾರೆಯೇನಾದರೂ ಇದೆಯೇ..’ ಎಂದು ನಾನು ಮರುಪ್ರಶ್ನೆ ಹಾಕಿದಾಗ, ’ಜಲಧಾರೆ ಬಗ್ಗೆ ಗೊತ್ತಿಲ್ಲ. ಕೋಟೆಯೊಂದಿದೆ’ ಎಂದಿದ್ದರು. ನನಗೆ ಅಷ್ಟೇ ಸಾಕಿತ್ತು, ಈ ಹಳ್ಳಿಗೆ ತೆರಳುವ ನಿರ್ಧಾರ ಮಾಡಲು.
೨೦೦೩ರಲ್ಲಿ ಆ ಅಕ್ಕಿಯ ರುಚಿ ತೋರಿಸಿದ ಅವರು ೨೦೦೯ರಲ್ಲಿ ತೀರಿಕೊಂಡರು. ಅವರಿಗಾಗ ೯೦ ವರ್ಷ ವಯಸ್ಸು. ಅವರ ಪ್ರಕಾರ ಮೊದಲು ಈ ಹಳ್ಳಿಯಲ್ಲಿ ಕೇವಲ ನಾಲ್ಕಾರು ಮನೆಗಳಿದ್ದವು. ಅವರು ಕೊನೆಯ ಬಾರಿ ತೆರಳಿದಾಗ ಸುಮಾರು ೨೦ ಮನೆಗಳಿದ್ದವು. ಈಗ ನಾವು ತೆರಳಿದಾಗ ೪೨ ಮನೆಗಳಿದ್ದವು! ಜನರ ಸಂಖ್ಯೆ ಹೆಚ್ಚಿದಂತೆ ಮನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡನ್ನು ಕಡಿದು ಸ್ಥಳಾವಕಾಶ ಮಾಡಿ ಸುಂದರವಾದ ಸ್ಥಳಗಳಲ್ಲಿ ಅಂದವಾದ ಮನೆಗಳನ್ನು ನಿರ್ಮಿಸಲಾಗಿದೆ.
ಕಾಲುದಾರಿ ಮಾತ್ರವಿದ್ದ ಈ ಹಳ್ಳಿಗೆ ರಸ್ತೆ ಸಂಪರ್ಕ ಆಗಿದ್ದು ಮೂರು ವರ್ಷಗಳ ಮೊದಲು. ಮಳೆಗಾಲದಲ್ಲಿ ಹಾಳಾಗುವ ರಸ್ತೆಯನ್ನು ಹಳ್ಳಿಗರೇ ದುರಸ್ತಿಪಡಿಸಿಕೊಳ್ಳುತ್ತಾರೆ. ರಸ್ತೆಯಾದ ಬಳಿಕ ಈಗ ೩ ಮನೆಗಳಲ್ಲಿ ದ್ವಿಚಕ್ರ ವಾಹನಗಳಿವೆ. ಇವರು ಹಳ್ಳಿಯಿಂದ ಕೆಳಗೆ ಮುಖ್ಯ ರಸ್ತೆಗೆ ಬಾಡಿಗೆಗೆ ಬೈಕು ಓಡಿಸುತ್ತಾರೆ! ಒಂದು ಟ್ರಿಪ್‍ಗೆ ೧೫೦ ರೂಪಾಯಿಗಳು. ’ಪೆಟ್ರೋಲ್ ಬಹಳ ಖರ್ಚಾಗ್ತದಲ್ರೀ..... ವಾಪಸ್ ಬರ್ಬೇಕಾದ್ರೆ ಅಪ್ಪೇ.... ಫಸ್ಟ್ ಗೇರೇ....’, ಇದು ನೂರಾ ಐವತ್ತು ರೂಪಾಯಿಗೆ ಸಿಕ್ಕ ಸಮಜಾಯಿಷಿ ಅದು ಕೂಡಾ ನಾವು ಕೇಳದೆ.
ಹಳ್ಳಿಗೆ ದಾರಿ ಪ್ರಾರಂಭವಾಗುವುದೇ ಕಡಿದಾದ ಏರಿನೊಂದಿಗೆ. ಮೂರು ತಿರುವುಗಳನ್ನು ಒಳಗೊಂಡಿರುವ ಈ ಅರಂಭಿಕ ಏರು ಮುಗಿಸುವಷ್ಟರಲ್ಲೇ ನಾನು ಏದುಸಿರು ಬಿಡಲಾರಂಭಿಸಿದ್ದೆ. ನನ್ನ ಇಬ್ಬರು ಸಹಚಾರಣಿಗರು ಮುಂದೆ ಸಾಗಿಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿರುವ ದಟ್ಟ ಮತ್ತು ಸುಂದರ ಕಾಡನ್ನು ಆನಂದಿಸುತ್ತಾ ನಿಧಾನವಾಗಿ ಮುನ್ನಡೆದೆ. ನೆರಳಿನಲ್ಲೇ ಚಾರಣ ಸಾಗುತ್ತಿತ್ತು. ದಾರಿ ಆರಂಭವಾದಾಗಿನಿಂದಲೇ ಹೆಣ್ಣೊಬ್ಬಳ ಪಾದರಕ್ಷೆಯ ಗುರುತು ರಸ್ತೆಯ ಮೇಲಿತ್ತು. ಯುವತಿಯದ್ದಾಗಿರಬಹುದೇ...?
ಅಲ್ಲಲ್ಲಿ ನಿಲ್ಲುತ್ತಾ ಹೃದಯ ಜೋರಾಗಿ ಬಡಿದುಕೊಳ್ಳುವ ಶಬ್ದ ಸ್ಥಿರಗೊಂಡ ಬಳಿಕ ಮತ್ತೆ ಮುಂದುವರಿಯುತ್ತಿದ್ದೆ. ಸ್ವಲ್ಪ ಮುಂದೆ ಸಹಚಾರಣಿಗರಿಬ್ಬರು ನನಗಾಗಿ ಕಾಯುತ್ತಿದ್ದರು. ಇವರಿಬ್ಬರು ಕೂಡಾ ’ಆಕೆ’ಯ ಬಗ್ಗೆನೇ ಮಾತನಾಡುತ್ತಿದ್ದರು. ಆ ಹೆಜ್ಜೆ ಗುರುತುಗಳೇ ನಮಗೆ ವೇಗವಾಗಿ ನಡೆಯಲು ಟಾನಿಕ್ ಎಂಬ ಮಾತು ಬೇರೆ. ಒಬ್ಬರಿಗೆ ಹಿಂದಿನ ವಾರದ ಚಾರಣದ ಸಮಯದಲ್ಲಿ ಪಾದ ಉಳುಕಿ ವಿಪರೀತ ನೋವು ಇದ್ದರೂ ಮತ್ತೆ ಈ ವಾರ ಚಾರಣಕ್ಕೆ ಬಂದಿದ್ದರು. ಆದರೆ ನಡೆಯುವ ವೇಗ ಮಾತ್ರ ಕಡಿಮೆಯಾಗಿರಲಿಲ್ಲ. ’ನೋವಿಲ್ಲ, ನೋವಿಲ್ಲ’ ಎಂದು ಹೇಳುತ್ತಾ ಮುಂದೆ ಸಾಗುತ್ತಿದ್ದರೂ ನೋವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
ಇಲ್ಲಿ ಒಂದೈದು ನಿಮಿಷ ವಿಶ್ರಮಿಸಿದ ಬಳಿಕ ಮತ್ತೆ ಮುಂದೆ ಸಾಗಿದೆವು. ಒಂದೇ ನಿಮಿಷದಲ್ಲಿ ಅವರಿಬ್ಬರು ಮುಂದೆ ಸಾಗಿ ಕಣ್ಮರೆಯಾಗಿಬಿಟ್ಟರು. ಮತ್ತೆ ಮುಂದಿನ ’ರೆಸ್ಟ್ ಪಾಯಿಂಟ್’ ಬರುವವರೆಗೆ ನನ್ನ ಸಂಗಾತಿಗಳೆಂದರೆ ಹಾವಿನಂತೆ ಸಾಗುವ ರಸ್ತೆ, ಪಿಸುಗುಡುವ ಗಾಳಿ, ಸದ್ದು ಮಾಡುವ ತರಗೆಲೆಗಳು, ಸಹಚಾರಣಿಗರ ಹೆಜ್ಜೆ ಗುರುತುಗಳು ಮತ್ತು ’ಅವಳ ಹೆಜ್ಜೆ’.
ರಸ್ತೆ ಆಗಾಗ ಪಡೆಯುತ್ತಿದ್ದ ಅಸಂಬದ್ಧ ತಿರುವುಗಳನ್ನು ಕಂಡರೆ ಹಳ್ಳಿ ಯಾವ ದಿಕ್ಕಿನಲ್ಲಿದೆ ಎಂದು ಊಹಿಸುವುದೇ ಅಸಾಧ್ಯವಾಗಿತ್ತು. ಒಂದು ದೊಡ್ಡ ಏರನ್ನು ಹತ್ತಿ ವಿಶ್ರಮಿಸಲು ನಿಂತಾಗ ಅಲ್ಲೇ ಮುಂದೆ ಮತ್ತೊಮ್ಮೆ ನನ್ನ ಸಹಚಾರಣಿಗರು ನನಗಾಗಿ ಕಾಯುತ್ತಿದ್ದರು. ಇಲ್ಲಿ ಸ್ವಲ್ಪ ಹೆಚ್ಚೇ ಹೊತ್ತು ವಿಶ್ರಮಿಸಿ ಮುನ್ನಡೆದೆವು. ನನ್ನನ್ನು ಮತ್ತೊಮ್ಮೆ ನನ್ನ ಸಂಗಾತಿಗಳ ಜೊತೆಗೆ ಬಿಟ್ಟು ಸಹಚಾರಣಿಗರಿಬ್ಬರು ಮುಂದೆ ಸಾಗಿದರು. ಸ್ವಲ್ಪ ಮುಂದೆ ನಡೆದು ವಿಶ್ರಮಿಸಲು ನಿಂತಾಗ ಹಿಂದೆ ಏನೋ ಶಬ್ದವಾಗಿ ಬೆಚ್ಚಿಬಿದ್ದೆ. ಸುಮಾರು ಆರುವರೆ ಅಡಿ ಎತ್ತರವಿದ್ದ ಯುವಕನೊಬ್ಬ ಕೈಯಲ್ಲೊಂದು ಸಣ್ಣ ಚೀಲ ಹಿಡಿದುಕೊಂಡು, ಎಲೆ ಅಡಿಕೆ ಜಗಿಯುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದ್ದ. ಕುಶಲೋಪರಿಯ ಬಳಿಕ ’ಘಟ್ಟ ಇನ್ನು ಮುಗಿಯಿತು’ ಎಂಬ ಸಂತೋಷದ ಸುದ್ದಿ ತಿಳಿಸಿ ಮುನ್ನಡೆದ.
ಈಗ ನೇರ ರಸ್ತೆಯಾಗಿದ್ದ ಕಾರಣ ನಾನೂ ವೇಗವಾಗಿ ಅವಳ ಹೆಜ್ಜೆಯನ್ನು ಹಿಂಬಾಲಿಸುತ್ತಿದ್ದೆ. ಕಾಡಿನ ನೆರಳಿನಲ್ಲಿ ಸಮತಟ್ಟಾದ ರಸ್ತೆಯಲ್ಲಿ ಅಹ್ಲಾದಕರ ನಡಿಗೆ. ಶೀಘ್ರದಲ್ಲೆ ಬಂತು ೩ನೇ ರೆಸ್ಟ್ ಪಾಯಿಂಟ್. ಅಡ್ಡಬಿದ್ದಿದ್ದ ಮರವೊಂದರ ಮೇಲೆ ಕಾಲುನೋವು ಇಲ್ಲದ ಸಹಚಾರಣಿಗ ಮಲಗಿ ವಿಶ್ರಮಿಸುತ್ತಿದ್ದರೆ, ಕಾಲುನೋವು ಇದ್ದ ಸಹಚಾರಣಿಗ ಕಾಲಿಗೆ ಸಣ್ಣ ಪ್ರಮಾಣದಲ್ಲಿ ಮಸಾಜ್ ಮಾಡಿಕೊಳ್ಳುತ್ತಿದ್ದರು. ನಾನು ಏನೂ ಕೇಳದಿದ್ದರೂ ’ನೋವಿಲ್ಲ’ ಎಂದು ಮತ್ತೆ ಆಶ್ವಾಸನೆ ನೀಡಿದರು. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ ತಲೆಯ ಮೇಲೆ ಮೂಟೆಗಳನ್ನು ಹೊತ್ತ ಇಬ್ಬರು ಹಳ್ಳಿಗರು ಎದುರಾದರು. ಒಬ್ಬರಿಗೆ ಸುಮಾರು ೫೦-೫೫ ವಯಸ್ಸಾಗಿದ್ದರೆ ಇನ್ನೊಬ್ಬರಿಗೆ ಸುಮಾರು ೬೫ರ ಆಸುಪಾಸು ಆಗಿರಬಹುದು. ಆ ಅಜ್ಜನ ತಲೆ ಮೇಲೆ ಎರಡು ಮೂಟೆಗಳು! ಇವರಿಗೆ ಘಟ್ಟದ ಕೆಳಗೆ ತಲುಪಲು ಕನಿಷ್ಠ ಒಂದು ತಾಸಾದರು ಬೇಕು. ಆ ಭಾರ ಹೊತ್ತುಕೊಂಡು ಅವರಿಬ್ಬರು ವೇಗವಾಗಿ ಸಾಗಿದ ಪರಿ ಕಂಡು ದಂಗಾಗಿ ಅವರನ್ನು ನೋಡುತ್ತಾ ನಿಂತುಬಿಟ್ಟೆ.
ಸುಮಾರು ೩ ತಾಸು ನಡೆದು ಹಳ್ಳಿ ತಲುಪಿದಾಗ ಮಧ್ಯಾಹ್ನದ ಸಮಯ. ಕೋಟೆ ಇನ್ನೂ ನಾಲ್ಕು ಕಿಮಿ ದೂರದಲ್ಲಿತ್ತು. ಗದ್ದೆ, ತೋಟ, ಬಯಲು ಇತ್ಯಾದಿಗಳನ್ನು ದಾಟಿ ಮುನ್ನಡೆದೆವು. ಹಳ್ಳಿಯ ಶಾಲೆಯ ಮುಂದೆ ಒಂದು ಸುಂದರ ಒಂಟಿ ಮರ. ಸಮೀಪದ ಪಟ್ಟಣದಿಂದ ಆಗಮಿಸಿದ ಸುಮಾರು ಹದಿನೈದು ಯುವಕರ ತಂಡವೊಂದು ಇಲ್ಲಿ ಬೀಡು ಬಿಟ್ಟಿತ್ತು. ಮೋಜಿಗಾಗಿ ಬಂದಿದ್ದ ಅವರು ಹಳ್ಳಿಗರಿಂದ ಪಾತ್ರೆ ಪಗಡಿಗಳನ್ನು ಎರವಲು ಪಡೆದುಕೊಂಡು ಆ ಒಂಟಿ ಮರದ ಕೆಳಗೆ ಕೋಳಿ ಪದಾರ್ಥ ತಯಾರಿಸಲು ಆರಂಭಿಸಿದ್ದರು. ಅದರೊಂದಿಗೆ ಶರಾಬು ಕೂಡಾ ಇತ್ತು. ಇದೇ ಕಾರಣಕ್ಕಾಗಿ ನನ್ನ ಸಹಚಾರಣಿಗರಿಗೆ ಸ್ಥಳದ ಮಾಹಿತಿ ಎಲ್ಲೂ ಹಾಕಬೇಡಿ ಎಂದು ನಾನು ಯಾವಾಗಲೂ ವಿನಂತಿಸಿಕೊಳ್ಳುತ್ತೇನೆ. ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ, ಬ್ಲಾಗುಗಳಲ್ಲಿ ಹಾಕಿಕೊಳ್ಳಲಿ. ಆದರೆ ಮಾಹಿತಿ ಯಾಕೆ ನೀಡಬೇಕು? ನಾನು ಒಂದು ಸ್ಥಳದ ಬಗ್ಗೆ ಕಷ್ಟಪಟ್ಟು ಎಲ್ಲೆಲ್ಲಿಂದಲೋ ಮಾಹಿತಿ ಸಂಗ್ರಹಿಸಿ ನಂತರ ಅದನ್ನು ಗೌಪ್ಯವಾಗಿಡಲು ಬದ್ಧನಾಗಿದ್ದರೆ ನನ್ನೊಂದಿಗೆ ಬಂದ ಸಹಚಾರಣಿಗ(ರು) ಸಲೀಸಾಗಿ ಮಾಹಿತಿಯನ್ನು ಎಲ್ಲೆಡೆ ಹರಡಿಬಿಡುವುದನ್ನು ಕಂಡಾಗ ಬಹಳ ನೋವಾಗುತ್ತದೆ.
ಇಲ್ಲಿ ನಮ್ಮ ಭೇಟಿಯಾಯಿತು ಹನುಮಂತ ಗೌಡರೊಂದಿಗೆ. ಕೋಟೆಗೆ ದಾರಿ ತೋರಿಸಲು ಯಾರನ್ನಾದರು ಕಳಿಸಿಕೊಡುವಂತೆ ಅವರಲ್ಲಿ ಕೇಳಿಕೊಂಡೆವು. ಹಳ್ಳಿಗರಲ್ಲಿ ಕೆಲವರಿಗೆ ದೇವಸ್ಥಾನದ ಕೆಲಸ, ಇನ್ನೂ ಕೆಲವರಿಗೆ ಕೊನೆ ಕೊಯ್ಯುವ ಕೆಲಸ, ತೋಟದ ಕೆಲಸ ಹೀಗೆ ಎಲ್ಲರೂ ಕೆಲಸದಲ್ಲಿ ನಿರತರಾಗಿದ್ದರು. ಗೌಡ್ರಿಗೆ ದೇವಸ್ಥಾನದ ಕೆಲಸ. ಅವರು ಅಲ್ಲಿ ಇಲ್ಲಿ ಓಡಾಡಿ, ಫೋನ್ ಮಾಡಿದರೂ ಯಾರೂ ಸಿಗಲಿಲ್ಲ. ಕೋಟೆಗೆ ಹೋಗುವ ದಾರಿಯಲ್ಲೇ ತನ್ನ ಮನೆ ಇದೆ, ಸದ್ಯಕ್ಕೆ ಅಲ್ಲಿಗೆ ಬನ್ನಿ, ಅಲ್ಲಿ ಯಾರಾದರೂ ಸಿಗುತ್ತಾರೋ ನೋಡೋಣ ಎಂದು ನಮ್ಮನ್ನು ಅವರ ಮನೆಗೆ ಕರೆದೊಯ್ದರು. ದಣಿದಿದ್ದ ನಾವು ಇಲ್ಲಿ ಒಂದು ತಾಸಿಗೂ ಅಧಿಕ ಸಮಯ ವಿಶ್ರಮಿಸಿದೆವು.
ನನ್ನ ಸಹಚಾರಣಿಗರಿಬ್ಬರಿಗೆ ಸ್ವಲ್ಪ ಹೆಚ್ಚೇ ದಾಕ್ಷಿಣ್ಯ. ’ಊಟ ಮಾಡಿಕೊಂಡು ಹೋಗಿ’ ಎಂದು ಗೌಡರು ಹೇಳಿದರೆ ಅವರಿಬ್ಬರು ಬೇಡ ಎಂದುಬಿಟ್ಟರು. ನಾನು ಮೌನವಾಗಿದ್ದೆ. ಗೌಡರು ಮತ್ತೊಮ್ಮೆ ಕೇಳಿದರು, ಆಗಲೂ ಅವರಿಬ್ಬರಿಂದ ’ಬೇಡ’ ಎಂಬ ಉತ್ತರವೇ ಬಂತು. ನಾನು ಅಷ್ಟು ಚಪಾತಿಗಳನ್ನು ಮಧ್ಯಾಹ್ನದ ಊಟಕ್ಕೆಂದು ತಂದಿದ್ದೆ. ಮುಂಜಾನೆ ಉಪಹಾರ ಮಾಡಲು ಸಮಯ ಸಿಗದ ಕಾರಣ ಊಟಕ್ಕೆಂದು ತಂದ ಚಪಾತಿಗಳನ್ನು ಮುಂಜಾನೆಯ ಉಪಹಾರವನ್ನಾಗಿ ಖಾಲಿಮಾಡಿದ್ದೆವು. ಈಗ ನಮ್ಮಲ್ಲಿ ಏನೂ ಇರಲಿಲ್ಲ. ಇದೆಲ್ಲಾ ಗೊತ್ತಿದ್ದೂ, ’ಬೇಡ’ ಎನ್ನುವ ದಾಕ್ಷಿಣ್ಯದ ಪರಮಾವಧಿ ಕಂಡು ಸೋಜಿಗವೆನಿಸಿತು.
’ಇದನ್ನಾದರೂ ತಿನ್ನಿ’ ಎನ್ನುತ್ತಾ ಗೌಡರು ಬಾಳೆಹಣ್ಣಿನ ಗೊನೆಯನ್ನು ತಂದಿರಿಸಿದರು. ಠಣ್ ಠಣ್ ಠಣ್! ಎರಡೇ ನಿಮಿಷದಲ್ಲಿ ಅರ್ಧ ಗೊನೆಯಷ್ಟು ಬಾಳೆಹಣ್ಣುಗಳು ಖಾಲಿ! ತೋರುಬೆರಳಿನಷ್ಟು ಉದ್ದವಿದ್ದ ಬಾಳೆಹಣ್ಣುಗಳನ್ನು ಸಹಚಾರಣಿಗರಿಬ್ಬರು ಗುಳುಂ ಮಾಡಿಬಿಟ್ಟರು. ಅವರ ವೇಗ ಕಂಡು ಗೌಡರ ವಯೋವೃದ್ಧ ತಂದೆ ತಿಮ್ಮಾಗೌಡ್ರು ಕೂತಲ್ಲೇ ಹುಬ್ಬೇರಿಸಿದರು. ಏನಾಗುತ್ತಿದೆ ಎಂದು ಹನುಮಂತ ಗೌಡ್ರಿಗೆ ತಿಳಿಯುವಷ್ಟರಲ್ಲಿ ಅವರ ಬಾಳೆಗೊನೆ ಅರ್ಧ ಖಾಲಿಯಾಗಿತ್ತು. ಅವಕ್ಕಾದ ಗೌಡ್ರು ಅವರಿಬ್ಬರು ಸ್ವಲ್ಪ ನಿಧಾನಿಸಿದ ಕೂಡಲೇ ಅಳಿದುಳಿದ ಬಾಳೆಗೊನೆಯನ್ನು ಬೇಗನೇ ಒಳಗೆ ತಗೊಂಡುಹೋದರು.
ಬಾಳೆಗೊನೆ ಒಳಗಿಟ್ಟು ಹೊರಬಂದ ಗೌಡರು ’ತುಂಬಾ ಹಸಿವಿತ್ತೇನೋ, ಊಟ ಮಾಡಿದ್ರೆ ಒಳ್ಳೇದಿತ್ತು...’ ಎಂದ ಕೂಡಲೇ ನಾನು ’ಕೊಡಿ ಗೌಡ್ರೆ, ಊಟ ಕೊಡಿ’ ಎಂದುಬಿಟ್ಟೆ. ಊಟಕ್ಕಿರುವುದು ತರಕಾರಿ ಸಾರು ಎಂದು ಖಾತ್ರಿಮಾಡಿ ಊಟಕ್ಕೆ ಕುಳಿತೆವು. ಗೌಡರ ಮಡದಿ ತನ್ನ ಗಂಡ ಸೇವಿಸುವ ಅನ್ನದ ಪ್ರಮಾಣದಷ್ಟೇ ನಮಗೆ ಬಡಿಸಿದಾಗ ಅದನ್ನು ಖಾಲಿ ಮಾಡಲು ಬಹಳ ಪ್ರಯಾಸಪಡಬೇಕಾಯಿತು. ಅದೇನೋ ಉಪ್ಪಿನಲ್ಲಿ ನೆನೆಸಿದ್ದ ಮಾವಿನ ತುಂಡುಗಳನ್ನು ನೀಡಿದರು. ಅದನ್ನು ಇನ್ನಷ್ಟು ಕೇಳಿ ಬಡಿಸಿಕೊಂಡು ನನ್ನ ಪಾಲಿನ ಅನ್ನ ಖಾಲಿ ಮಾಡಿದೆ. ಕಾಲುನೋವು ಇದ್ದ ಚಾರಣಿಗ ಅಷ್ಟೆಲ್ಲಾ ಬಾಳೆಹಣ್ಣುಗಳನ್ನು ತಿಂದಿದ್ದರೂ ಈಗ ಇಷ್ಟೆಲ್ಲಾ ಅನ್ನ ಖಾಲಿ ಮಾಡಿದರು. ಅವರು ಕಾಲು ನೋವಿನಿಂದ ಬಹಳ ಬಳಲಿದ್ದು ಖಾತ್ರಿಯಾಯಿತು. ಕಾಲು ನೋವಿಲ್ಲದ ಚಾರಣಿಗ ಅನ್ನ ಖಾಲಿ ಮಾಡಲು ಪರದಾಡಿ ಆಗದೇ ಗೌಡ್ರಲ್ಲಿ ಕ್ಷಮೆಯಾಚಿಸಿ ಅರ್ಧದಷ್ಟು ಊಟವನ್ನು ಬಿಟ್ಟುಬಿಟ್ಟರು.
ಊಟದ ಬಳಿಕ ಮತ್ತೆ ರೆಸ್ಟ್. ಚಾಪೆ ಹಾಸಿ ಅಡ್ಡಬಿದ್ದೆವು. ಕೊನೆಗೂ ಗೌಡರ ಅವಿರತ ಪ್ರಯತ್ನದಿಂದ ಮಂಜುನಾಥ ಗೌಡ ಎಂಬ ಯುವಕ ಕೋಟೆಗೆ ನಮ್ಮ ಮಾರ್ಗದರ್ಶಿಯಾಗಿ ಬರಲು ಅಣಿಯಾದ. ಅದಾಗಲೇ ಸಮಯ ೩ ದಾಟಿತ್ತು. ಘಟ್ಟದ ಕೆಳಗೆ ಕೊನೆಯ ಬಸ್ಸು ಸಂಜೆ ೭ಕ್ಕೆ. ಕೋಟೆ ನೋಡಿ ನಂತರ ೭ ಗಂಟೆಯೊಳಗೆ ರಸ್ತೆಯತ್ತ ತಲುಪುವುದು ಅಸಾಧ್ಯವಾಗಿತ್ತು. ಗೌಡರೊಂದಿಗೆ ಚರ್ಚಿಸಿದಾಗ, ಕೋಟೆಯಿಂದಲೇ ಆರಂಭವಾಗುವ ಕಾಲುದಾರಿಯೊಂದು ಮತ್ತೊಂದು ಹಳ್ಳಿಗೆ ತೆರಳುವುದೆಂದೂ, ೭ ಗಂಟೆಯ ಬಸ್ಸು ಈ ಹಳ್ಳಿಗೆ ತಲುಪುವಾಗ ೭.೧೫ ಆಗುವುದೆಂದೂ ಹಾಗೂ ಕೋಟೆಯಿಂದ ಈ ಹಳ್ಳಿಗಿರುವ ದೂರ ನಾವು ಬಂದ ದಾರಿಯ ಅರ್ಧದಷ್ಟು ಎಂದು ತಿಳಿದುಬಂದಾಗ ಅಲ್ಲಿಗೇ ತೆರಳುವ ನಿರ್ಧಾರ ಮಾಡಿದೆವು. ನಮಗೆ ಆತಿಥ್ಯ ನೀಡಿ, ಮಾರ್ಗದರ್ಶಿಯನ್ನೂ ನೀಡಿ ಬಹಳ ಸಹಕರಿಸಿದ ಗೌಡರಿಗೆ ವಿದಾಯ ಹೇಳಿ ಮಂಜುನಾಥನೊಂದಿಗೆ ಕೋಟೆಯತ್ತ ಹೆಜ್ಜೆ ಹಾಕಿದೆವು.
ಕಾಡು, ಕೋಟೆಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೋಟೆಯ ಮೇಲ್ಭಾಗದಲ್ಲಿ ಇರುವ ತೆರೆದ ಸ್ಥಳವೊಂದನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕಾಡು, ಕಾಡು ಮತ್ತು ಕೇವಲ ಕಾಡು. ಬೆಟ್ಟದ ಪ್ರಾಕೃತಿಕ ರಚನೆಯನ್ನು ಕೋಟೆ ನಿರ್ಮಿಸಲು ಚಾಣಾಕ್ಷ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಬೆಟ್ಟದ ಬುಡದಿಂದ ಸ್ವಲ್ಪ ಮೇಲೆ ಕೋಟೆಯ ಮೊದಲ ಸುತ್ತಿನ ಮಹಾದ್ವಾರವಿದೆ. ಸಣ್ಣ ಸಣ್ಣ ಚಪ್ಪಡಿ ಕಲ್ಲುಗಳನ್ನು ಬಳಸಿ ಕೋಟೆಯ ಗೋಡೆಗಳನ್ನು ಸುಭದ್ರವಾಗಿ ನಿರ್ಮಿಸಲಾಗಿದೆ. ಗೋಡೆ ಮೇಲಕ್ಕೆ ಹೋದಂತೆ ಕೆಂಪುಕಲ್ಲುಗಳನ್ನು ಬಳಸಲಾಗಿದೆ.
ಕೋಟೆಯ ಒಳಗಡೆ ಹೋದಂತೆಲ್ಲಾ ಎಲ್ಲವೂ ಗೊಂದಲಮಯ. ಎಲ್ಲಾ ದಿಕ್ಕುಗಳಿಂದಲೂ ಕಾಡು ಆವೃತವಾಗಿರುವುದರಿಂದ ಕೋಟೆ ಎಷ್ಟು ಸುತ್ತುಗಳನ್ನು ಹೊಂದಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಬೆಟ್ಟವೇರಿದಂತೆ ಒಂದೊಂದೇ ಸುತ್ತನ್ನು ದಾಟುತ್ತಾ ಮುನ್ನಡೆದೆವು. ಪ್ರತಿ ಸುತ್ತುಗಳ ನಡುವೆ ಇರುವ ಕಂದಕದ ರಚನೆ ಪ್ರಾಕೃತಿಕವಾಗಿದೆ. ಒಂದನೇ ಸುತ್ತಿನಿಂದ ನೋಡುವಾಗ ಎರಡನೇ ಸುತ್ತಿನ ಗೋಡೆ ೩೦-೪೦ ಅಡಿಗಳಷ್ಟು ಎತ್ತರವಾಗಿ ಕಾಣಿಸಿದರೂ, ಒಳಗಿನಿಂದ ಕೇವಲ ನಾಲ್ಕೈದು ಅಡಿ ಎತ್ತರವಿದೆ.
ಇದು ಸುಮಾರು ಮೂರು ಅಥವಾ ನಾಲ್ಕು ಸುತ್ತಿನ ಕೋಟೆಯಿರಬಹುದು. ಕೋಟೆಯ ಬುರುಜುಗಳನ್ನು ಮತ್ತು ಎಲ್ಲಾ ಸುತ್ತಿನ ಗೋಡೆಗಳನ್ನು ಮರಗಳು, ಬೇರುಗಳು ಹೆಬ್ಬಾವಿನಂತೆ ಸುತ್ತಿಕೊಂಡಿವೆ. ಮಳೆಗೆ, ಗಾಳಿಗೆ ಈ ಮರಗಳು ಉರುಳಿದರೆ ಕೋಟೆಯ ಆ ಭಾಗ ಧರಾಶಾಹಿಯಾದಂತೆ.
ಕೋಟೆಯ ತುದಿಯಲ್ಲಿ ಸಭಾಂಗಣದಂತೆ ಕಾಣುವ ರಚನೆಯಿದೆ. ಅರ್ಧಚಂದ್ರಾಕಾರ ವೃತ್ತದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿದ್ದು, ಮುಂದೆ ಸುಮಾರು ೨೫ ಅಡಿ ಸ್ಥಳ ಬಿಟ್ಟು ಚೌಕಾಕಾರದ ವೇದಿಕೆಯೊಂದರ ಅವಶೇಷವಿದೆ. ಈ ವೇದಿಕೆಗೆ ಮೊದಲು ಸುಂದರವಾದ ಮಂಟಪವಿತ್ತೇನೋ. ಮಂಟಪ ರಚಿಸಲು ಬಳಸಿದ ಕಲ್ಲುಗಳು ಅಲ್ಲೇ ಬಿದ್ದುಕೊಂಡಿವೆ.
ಕೋಟೆಯ ಒಂದು ಸುತ್ತಿನಿಂದ ಶೀಘ್ರವಾಗಿ ಹೊರಬರಲು ಕಳ್ಳದಾರಿಯೊಂದಿದೆ. ಇದು ಎರಡು ಸುತ್ತುಗಳ ನಡುವೆ ಇರುವ ಕಂದಕಕ್ಕೆ ತೆರೆದುಕೊಳ್ಳುತ್ತದೆ. ಈ ಕಂದಕದಲ್ಲಿ ನಿಂತರೆ ಅದೊಂದು ಮರೆಯಲಾಗದ ಕ್ಷಣ. ಇಕ್ಕೆಲಗಳಲ್ಲಿರುವ ಎತ್ತರದ ಗೋಡೆಗಳು ಮತ್ತು ಸುತ್ತಮುತ್ತಲೂ ಇರುವ ಮರಗಳ ನಡುವೆ ತರಗೆಲೆಗಳಿಂದ ತುಂಬಿಹೋಗಿದ್ದ ಕಂದಕದಲ್ಲಿ ನಿಲ್ಲುವುದೇ ಒಂದು ರೋಮಾಂಚಕ ಅನುಭವ.
ಬಳಿಯಲ್ಲೇ ಇದ್ದ ಎತ್ತರದ ಬುರುಜೊಂದನ್ನು ಕಾಡಿನ ಬಳ್ಳಿಗಳು, ಮರಗಳು ಮತ್ತು ಬೇರುಗಳು ಆವರಿಸಿಕೊಂಡುಬಿಟ್ಟಿದ್ದವು. ಇದರ ಮೇಲೆ ತೆರಳಿ ಅಲ್ಲಿಂದ ಕಾಡಿನ ಸೌಂದರ್ಯವನ್ನು ಇನ್ನಷ್ಟು ಸವಿದೆವು.
ನಂತರ ಕೋಟೆಯ ಮತ್ತಷ್ಟು ಒಳಗೆ ಮಂಜುನಾಥ ನಮ್ಮನ್ನು ಕರೆದೊಯ್ದ. ಕಡಿದಾದ ಇಳಿಜಾರಿನ ದಾರಿಯ ಬಳಿಕ ಧುತ್ತೆಂದು ಎದುರಾದ ಕೋಟೆಯ ರಕ್ಷಕನೂ ಮತ್ತು ಕೋಟೆಯ ದೇವರೂ ಆಗಿರುವ ’ಗಂಡುಬೀರಪ್ಪ’.
ಘಟ್ಟದ ಕೆಳಗಿನ ಹಳ್ಳಿಗಳಲ್ಲಿ ವಾಸವಿರುವ ಸಾಬಿಗಳು ಈ ಕೋಟೆಗೆ ನಿಧಿ ತೆಗೆಯಲು ಬಂದಿದ್ದರು. ಸುಮಾರು ನಾಲ್ಕು ದಿವಸ ಕೋಟೆಯಲ್ಲೇ ಇದ್ದು ಅಲ್ಲಲ್ಲಿ ಅಗೆದು ತೆಗೆದು ನೋಡಿದರೂ ಏನೂ ಸಿಗಲಿಲ್ಲ. ಅದೊಂದು ದಿನ ತಮ್ಮೆಲ್ಲಾ ಸಲಕರಣೆಗಳನ್ನು ಹಿಡಿದುಕೊಂಡು ಲಬೋಲಬೋ ಎಂದು ಹೊಯ್ಕೊಳ್ಳುತ್ತಾ ಹಳ್ಳಿಯೆಡೆ ಓಡಿಬಂದರು. ಅವರ ಪಾಡು ಹೇಳತೀರದು. ಮೈ ಕೈಯಲ್ಲೆಲ್ಲಾ ಪರಚಿದ ಗಾಯಗಳು. ಕಾಲುಗಳಲ್ಲಿ ರಕ್ತ. ಮುಖದಲ್ಲಿ ಪ್ರೇತಕಳೆ. ಏನನ್ನೋ ತೊದಲುತ್ತಾ ಘಟ್ಟದ ಕೆಳಗೆ ಓಡಿದರು. ಹಳ್ಳಿಗರು ವಿವರಿಸಿದ ಘಟನೆ ಇದು.
ಕೋಟೆಯ ನಡುವೆ ಇರುವ ಸೂರಿಲ್ಲದ ದೇವರಾದ ’ಗಂಡುಬೀರಪ್ಪ’ ಈ ಕೋಟೆಯ ಮತ್ತು ಈ ಹಳ್ಳಿಯ ರಕ್ಷಕ ಎಂದು ಹಳ್ಳಿಗರು ನಂಬಿದ್ದಾರೆ. ಕೋಟೆಯ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಮರಕಡಿಯುವುದು, ನಿಧಿಶೋಧನೆಗಾಗಿ ಅಗೆಯುವುದು ಇತ್ಯಾದಿ ಮಾಡಿದರೆ ಗಂಡುಬೀರಪ್ಪನೇ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಎಲ್ಲರ ನಂಬಿಕೆ. ಆದ್ದರಿಂದ ಯಾರೂ ಕೋಟೆಯ ಮತ್ತು ಈ ಕಾಡಿನ ತಂಟೆಗೆ ಬರುವುದೇ ಇಲ್ಲ. ಅಪ್ಪಿತಪ್ಪಿ ಯಾರಾದರೂ ಕೋಟೆಯ ಅಥವಾ ಕಾಡಿನ ಉಸಾಬರಿಗೆ ಬಂದರೆ ಆ ಸಾಬಿಗಳಿಗೆ ಆದ ದುರವಸ್ಥೆಯೇ ಎಲ್ಲರಿಗೂ ಆಗುವುದು ಎಂಬ ನಂಬಿಕೆ ಎಲ್ಲೆಡೆ ಮನೆಮಾಡಿಕೊಂಡಿದೆ.
ಕೋಟೆ ತುಂಬಾ ಚಿನ್ನ ತುಂಬಿದೆ ಎಂಬ ನಂಬಿಕೆಯೂ ಎಲ್ಲೆಡೆ ಇದೆ. ಆದರೆ ಗಂಡುಬೀರಪ್ಪನ ಹೆದರಿಕೆಯೂ ಎಲ್ಲರಿಗಿದೆ. ಕೋಟೆಯ ಒಳಗೆ ಹೇರಳ ನೀರು ಲಭ್ಯವಿರುವುದರಿಂದ ಇಲ್ಲಿ ಕಾಡು ಕಡಿದು ತೋಟ ಮಾಡುವ ದುರಾಲೋಚನೆಯೂ ಕೆಲವು ಹಳ್ಳಿಗರಿಗೆ ಬಂದಿತ್ತು. ಆದರೆ ಗಂಡುಬೀರಪ್ಪನಲ್ಲಿ ತೋಟ ಮಾಡುವ ವಿಚಾರವನ್ನು ಪ್ರಶ್ನೆ ರೂಪದಲ್ಲಿ ಕೇಳಿದಾಗ ನಕಾರಾತ್ಮಕ ಉತ್ತರ ಬಂದ ಕಾರಣ ಆ ವಿಚಾರವನ್ನೂ ಕೈಬಿಡಲಾಗಿದೆ.
ಅದೇನೇ ಇರಲಿ. ಗಂಡುಬೀರಪ್ಪನ ಇರುವಿಕೆ ಮತ್ತು ಆತನ ಶಕ್ತಿಯಲ್ಲಿ ಹಳ್ಳಿಗರಿಗೆ ಇರುವ ಅಪಾರ ನಂಬಿಕೆಯಿಂದ ಕಾಡು ಮತ್ತು ಕೋಟೆ ಸುರಕ್ಷಿತವಾಗಿವೆ. ಇದೊಂದೇ ಕಾರಣಕ್ಕಾಗಿ ಗಂಡುಬೀರಪ್ಪನಿಗೆ ಜೈಕಾರ ಜೈಕಾರ ಜೈಕಾರ.
ಕೋಟೆಯ ಮೊದಲನೇ ಸುತ್ತಿಗೆ ಹಿಂತಿರುಗಿ ಅಲ್ಲಿ ಸ್ವಲ್ಪ ಸಮಯ ವಿಶ್ರಮಿಸಿದೆವು. ಇಲ್ಲೊಂದು ಮಾಸಿದ ವೀರಗಲ್ಲು ಇದೆ. ಮಂಜುನಾಥನ ಮನೆನಾಯಿ ’ಫಂಡು’ ಕೋಟೆಯುದ್ದಕ್ಕೂ ನಮ್ಮೊಂದಿಗೆ ಅಲೆದಾಡಿ ಈಗ ನಮ್ಮೊಂದಿಗೆ ಕುಳಿತಿದ್ದ. ಅಲ್ಲೇ ಇದ್ದವು ಮಂಜುನಾಥನ ಮನೆಯ ದನಗಳು. ಮನೆಯೆಡೆ ಹೊರಟಿದ್ದ ಅವುಗಳು, ತಮ್ಮ ಒಡೆಯ ಕೋಟೆಯೊಳಗೆ ತೆರಳುವುದನ್ನು ಕಂಡು ಅಲ್ಲೇ ಮೇಯುತ್ತಾ ಮಂಜುನಾಥ ಹಿಂತಿರುಗುವುದನ್ನು ಕಾಯುತ್ತಿದ್ದವು.
ಮಂಜುನಾಥನು ಮನೆಯತ್ತ ತೆರಳಲು ಅಣಿಯಾದರೆ ನಾವು ಆ ಮತ್ತೊಂದು ಹಳ್ಳಿಯೆಡೆ ಘಟ್ಟ ಇಳಿಯಲು ಅಣಿಯಾದೆವು. ಸಮಯ ೫ ಗಂಟೆಯಾಗಿ ೫ ನಿಮಿಷ ಆಗಿತ್ತು. ಸರಿಯಾಗಿ ೬.೩೦ಕ್ಕೆ ಕತ್ತಲು ಆಗುತ್ತದೆ. ಅಷ್ಟರೊಳಗೆ ಕೆಳಗಿನ ಹಳ್ಳಿ ತಲುಪುವ ಇರಾದೆ. ನಮ್ಮಲ್ಲಿ ಟಾರ್ಚ್ ಇರಲಿಲ್ಲ. ಕತ್ತಲಾದರೆ ಒಂದು ಹೆಜ್ಜೆ ಇಡಲು ಸಾಧ್ಯವಾಗದಷ್ಟು ದಟ್ಟ ಕಾಡು.
ಒಂದೈದು ನಿಮಿಷ ಸಾಗಿದ ಕೂಡಲೇ ಕೋಟೆಯ ಗಡಿ ಸೂಚಿಸುವ ಮೊದಲ ಸುತ್ತಿನ ಗೋಡೆಯನ್ನು ದಾಟಿದೆವು. ದಾರಿ ಹಾಗೆ ಮುಂದುವರಿಯಿತು. ಸ್ವಲ್ಪ ಮುಂದೆ ದೇವಿಯೊಬ್ಬಳ ಮೂರ್ತಿ. ಆ ದಿನವೇ ಯಾರೋ ಪೂಜೆ ಮಾಡಿ ಹೋದ ಕುರುಹುಗಳು. ಸಮಯ ೫.೩೦ ದಾಟಿದರೂ ಇನ್ನು ಘಟ್ಟದ ಇಳಿಜಾರು ಸಿಗದಾಗ ಆತಂಕ ಶುರುವಾಯಿತು. ಪಶ್ಚಿಮದ ಆಗಸ ಅದಾಗಲೇ ನಸುಗೆಂಪು ಬಣ್ಣಕ್ಕೆ ತಿರುಗುವ ತಯಾರಿ ಮಾಡಿತ್ತು. ಅಂತೂ ಅರ್ಧ ಗಂಟೆಯ ಬಳಿಕ ಇಳಿಜಾರು ಆರಂಭವಾಯಿತು.
ಸಹಚಾರಣಿಗರಿಬ್ಬರು ವೇಗವಾಗಿ ಮುನ್ನಡೆದು, ನನಗಾಗಿ ಕಾದು ಮತ್ತೆ ವೇಗವಾಗಿ ಮುನ್ನಡೆಯುವ ಪ್ರಕ್ರಿಯೆ ಆರಂಭಿಸಿದ್ದರು. ಹೋಗುವುದು ಬರುವುದು ಸೇರಿ ಹೆಚ್ಚೆಂದರೆ ೧೦ ಕಿಮಿ ಆಗಬಹುದು ಎಂದು ಬಂದರೆ ಈಗ ಸುಮಾರು ೨೦ ಕಿಮಿ ಸಮೀಪ ಆಗತೊಡಗಿದಾಗ ಎಡಕಾಲಿನ ಮೊಣಗಂಟು ಮಾತನಾಡತೊಡಗಿತು. ’ಇಪ್ಪತ್ತು ಕಿಮಿ ಎಂದು ಮೊದಲೇ ಹೇಳಬೇಕಿತ್ತು’ ಎಂದು ಆಕ್ಷೇಪಣೆ ಎತ್ತುತ್ತಿದ್ದ ಮೊಣಗಂಟಿನಿಂದ ನನ್ನ ವೇಗ ಕಡಿಮೆಯಾದರೂ ಎಲ್ಲೂ ನಿಲ್ಲದೆ ಮುನ್ನಡೆದೆ.
ಇಳಿಜಾರಿನ ಹಾದಿ ಕೊನೆಗೊಂಡಿದ್ದು ಹಳ್ಳಿಯ ಸರಹದ್ದು ತಲುಪಿದಾಗಲೇ. ಸಮಯ ೬.೩೦ ಆಗಿತ್ತು. ನಾಲ್ಕೈದು ಗದ್ದೆಗಳನ್ನು ದಾಟಿ ಹಳ್ಳಿಯ ರಸ್ತೆ ತಲುಪಿದಾಗ ಕತ್ತಲೆ ಆವರಿಸಿಬಿಟ್ಟಿತ್ತು. ಅಲ್ಲಿಂದ ಇನ್ನೆರಡು ಕಿಮಿ ನಡೆದು ಮುಖ್ಯ ರಸ್ತೆ ತಲುಪಿ ಕೊನೆಯ ಬಸ್ಸನ್ನೇರಿ ಟಿಕೇಟು ತೆಗೆದ ಕೂಡಲೇ ನಿದ್ರಾದೇವಿಗೆ ಶರಣಾಗಿಬಿಟ್ಟೆವು.