ಭಾನುವಾರ, ಜನವರಿ 24, 2016

ಚಿಕ್ಕೇಶ್ವರ ದೇವಾಲಯ - ಚಿನ್ನ ಮುಳಗುಂದ

 

ಚಿನ್ನ ಮುಳಗುಂದದ ಶಾಲೆಯ ಬಳಿ ನಿಂತು ನೋಡಿದರೆ ಗದ್ದೆಗಳ ಅಂಚಿನಲ್ಲಿ ಅಸ್ಪಷ್ಟವಾಗಿ ದೇವಾಲಯದ ಒಂದು ಭಾಗ ಮಾತ್ರ ಕಾಣುತ್ತದೆ. ಗಿಡಗಳು, ಪೊದೆಗಳು ದೇವಾಲಯವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮೊದಲ ನೋಟಕ್ಕೆ ದೇವಾಲಯದ ಇರುವಿಕೆಯ ಬಗ್ಗೆಯೇ ಅನುಮಾನ ಹುಟ್ಟುತ್ತದೆ.



ಶಾಲೆಯನ್ನು ದಾಟಿ ಗದ್ದೆಗಳ ಅಂಚಿನಲ್ಲಿ ನಡೆಯುತ್ತಾ ದೇವಾಲಯವನ್ನು ಸಮೀಪಿಸಿದರೆ ಇದೊಂದು ಪಾಳುಬಿದ್ದ ದೇವಾಲಯವೆಂಬ ಭಾವನೆ ಮೂಡತೊಡಗಿತು. ದೇವಾಲಯದ ಗೋಪುರವನ್ನು ಮರವೊಂದು ಸಂಪೂರ್ಣವಾಗಿ ಮರೆಮಾಚಿದೆ. ಇಕ್ಕೆಲಗಳಲ್ಲಿ ದೇವಾಲಯದ ಛಾವಣಿಯಷ್ಟು ಎತ್ತರದವರೆಗೂ ಗಿಡಗಳು ಬೆಳೆದಿವೆ.


ದೇವಾಲಯದ ಒಂದು ಪಾರ್ಶ್ವದಲ್ಲಿ ಗದ್ದೆಗಳಿದ್ದರೆ ಇನ್ನೊಂದು ಪಾರ್ಶ್ವದಲ್ಲಿ ಪೊದೆಗಳ ರಾಶಿ. ಪಾರ್ಶ್ವನೋಟದ ಚಿತ್ರ ತೆಗೆಯಲು ಈ ಪೊದೆಗಳ ನಡುವೆ ದಾರಿಮಾಡುತ್ತಾ ಸಾಗಬೇಕಾದರೆ ಸ್ವಲ್ಪ ಎಚ್ಚರ ವಹಿಸಬೇಕು. ದೇವಾಲಯದ ಈ ಪಾರ್ಶ್ವ ಬಹಿರ್ದೆಸೆ ಮಾಡುವ ತಾಣ!



೧೩ನೇ ಶತಮಾನದಲ್ಲಿ ನಿರ್ಮಿತ ಈ ದೇವಾಲಯವನ್ನು ಶಾಸನಗಳಲ್ಲಿ ’ಚಿಕ್ಕನಾಥ’ ದೇವಾಲಯವೆಂದು ಮತ್ತು ಚಿನ್ನ ಮುಳಗುಂದವನ್ನು ’ಮುನಿಗುಂದ’ವೆಂದೂ ಕರೆಯಲಾಗಿದೆ. ಈ ಏಕಕೂಟ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ಗಿಡಗಂಟಿಗಳಿಂದ ಮುಕ್ತವಾಗಿದೆ.



ಪಾಳು ಬಿದ್ದ ದೇವಾಲಯವೆಂದು ಒಳಗೆ ಕಾಲಿರಿಸಿದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಒಳಗಿನ ನೋಟ ಹೊರಗಿನ ನೋಟಕ್ಕೆ ತದ್ವಿರುದ್ಧ. ದಿನಾಲೂ ಚಿಕ್ಕೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳು ಬಹಳ ಸ್ವಚ್ಛವಾಗಿವೆ.



ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಕಾಣುವುದು ನಾಲ್ಕೇ ಕಂಬಗಳಾದರೂ, ಇದು ೧೬ ಕಂಬಗಳನ್ನು ಬಳಸಿ ನಿರ್ಮಿಸಲಾಗಿರುವ ನವರಂಗ. ಇಷ್ಟು ಸಣ್ಣ ದೇವಾಲಯಕ್ಕೆ ವಿಶಾಲ ನವರಂಗ ಎನ್ನಬಹುದು.



ತ್ರಿಶಾಖ ಶೈಲಿಯ ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದೆ. ಅಂತರಾಳದಲ್ಲೇ ನಂದಿಯ ಸಣ್ಣ ವಿಗ್ರಹವಿದೆ. ದ್ವಾರದ ಇಕ್ಕೆಲಗಳಲ್ಲಿರುವ ಎರಡೂ ದೇವಕೋಷ್ಠಗಳು ಖಾಲಿ ಇವೆ.


ಗರ್ಭಗುಡಿಯಲ್ಲಿ ಚಾಲುಕ್ಯ ಶೈಲಿಯ ಪೀಠದ ಮೇಲೆ ಸುಮಾರು ಒಂದು ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗುಡಿಯ ದ್ವಾರ ಅಲಂಕಾರರಹಿತವಾಗಿದೆ. ಲಲಾಟದಲ್ಲಿ ಇದ್ದ ಕೆತ್ತನೆ (ಗಜಲಕ್ಷ್ಮೀಯದ್ದಾಗಿರಬಹುದು) ನಶಿಸಿದೆ. ದ್ವಾರದ ತಳಭಾಗದಲ್ಲಿರುವ ಮೂರ್ತಿಗಳೂ ಅಸ್ಪಷ್ಟವಾಗಿದ್ದು ನಶಿಸಿಹೋಗಿವೆ.



ದೇವಾಲಯದ ಹೊರಗೋಡೆಯಲ್ಲಿ ೩ ದೇವಕೋಷ್ಠಗಳಿದ್ದು ಅವೂ ಖಾಲಿ ಇವೆ. ಈ ದೇವಕೋಷ್ಠಗಳ ಮೇಲೆ ಸಣ್ಣ ಶಿಖರಗಳ ರಚನೆಯಿದೆ. ದೇವಾಲಯದ ಗೋಪುರದ ಮೇಲೆ ಬೆಳೆದಿರುವ ಮರ ಗೋಪುರವನ್ನೇ ಬಲಿ ತೆಗೆದುಕೊಂಡಿದೆ. ಮರವನ್ನು ಪೂರ್ಣವಾಗಿ ಕಡಿದುಹಾಕಿ, ಗೋಪುರವನ್ನು ಸಂಪೂರ್ಣವಾಗಿ ಕಳಚಿ ಪುನ: ನಿರ್ಮಿಸುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ.



ಆದರೂ ಗಿಡಮರಗಳು ಈ ಪರಿ ದೇವಾಲಯವನ್ನು ಆವರಿಸಿಕೊಳ್ಳುತ್ತಿರಬೇಕಾದರೆ ಹಳ್ಳಿಗರು ಕಡ್ಲೆಕಾಯಿ ತಿನ್ನುತ್ತಿದ್ದರೇ? ಪೂಜೆ ಸಲ್ಲಿಸುವ ಭಕ್ತಿ ಇರುವಾಗ ದೇವಾಲಯವನ್ನು ಸ್ವಚ್ಛಗೊಳಿಸಲು ಯಾಕೆ ಅಸಡ್ಡೆ? ಈಗ ಪರಿಸ್ಥಿತಿ ಕೈಮೀರಿದೆ. ದೇವಾಲಯದ ಮೇಲ್ಭಾಗವನ್ನು ಸಂಪೂರ್ಣವಾಗಿ ಬಿಚ್ಚಿ ಮತ್ತೆ ನಿರ್ಮಿಸುವುದೇ ಉಳಿದಿರುವ ದಾರಿ. ಪ್ರಾಚ್ಯ ವಸ್ತು ಇಲಾಖೆ ದೇವಾಲಯದ ಜೀರ್ಣೋದ್ಧಾರಕ್ಕೆ ತಯಾರಾಗಿದೆ. ಆದರೆ ಹಳ್ಳಿಗರು ದೇವಾಲಯವನ್ನು ಬಿಚ್ಚಲು ಬಿಡರು. ಆದ್ದರಿಂದ ಚಿಕ್ಕೇಶ್ವರ ಇನ್ನೂ ಗಿಡಮರಪೊದೆಗಳಿಂದ ಆವೃತನಾಗಿಯೇ ಇದ್ದಾನೆ.

ಮಂಗಳವಾರ, ಜನವರಿ 19, 2016

ಹೀಗೊಂದು ಊರು - ೪

 

ಸಂಗಾತಿ ಬೇಕೆ? ಸಾಂಗತ್ಯದ ಅವಶ್ಯಕತೆ ಇದೆಯೇ? ಇಲ್ಲಿದೆ ಸಂಗಾತಿ ನಗರ. ಆದರೆ ಹೋಗುವ ದಾರಿ ನೋಡಿದರೆ....

 

ಈ ದಾರಿಯನ್ನು ರಸ್ತೆ (??!!!) ಎಂದು ಬೇರೆ ಹೇಳಿದ್ದಾರೆ!

ಭಾನುವಾರ, ಜನವರಿ 10, 2016

ಬಸವೇಶ್ವರ ದೇವಾಲಯ - ಲಕ್ಕುಂಡಿ

 

ಈ ದೇವಾಲಯವನ್ನು ಹಾಲುಗುಂದ ಬಸವೇಶ್ವರ ಎಂದು ಕರೆಯಲಾಗುತ್ತದೆ. ತ್ರಿಕೂಟ ಶೈಲಿಯ ದೇವಾಲಯದ ಎಲ್ಲಾ ಗರ್ಭಗುಡಿಗಳಲ್ಲಿ ಶಿವಲಿಂಗಗಳಿವೆ. ಇಲ್ಲಿ ನಂದಿಯ ದೊಡ್ಡ ಮೂರ್ತಿಯಿರುವುದರಿಂದ, ಈ ದೇವಾಲಯವನ್ನು ಬಸವೇಶ್ವರ ದೇವಾಲಯವೆಂದು ಕರೆಯಲಾಗುತ್ತದೆ.



ದೇವಾಲಯದ ಎಲ್ಲಾ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿವೆ. ದೇವಾಲಯವು ಒಂದೇ ನವರಂಗವನ್ನು ಹೊಂದಿದ್ದು, ಇಲ್ಲಿ ನಾಲ್ಕು ಕಂಬಗಳಿವೆ. ನಂದಿಯು ಕೂಡಾ ನವರಂಗದಲ್ಲೇ ಆಸೀನನಾಗಿದ್ದಾನೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು, ಆಕರ್ಷಕ ಕೆತ್ತನೆಗಳನ್ನು ಈ ಶಾಖೆಗಳಲ್ಲಿ ಕಾಣಬಹುದು. ಪ್ರಥಮ, ದ್ವಿತೀಯ, ಚತುರ್ಥ ಹಾಗೂ ಪಂಚಮಿ ಶಾಖೆಗಳಲ್ಲಿ ಕ್ರಮವಾಗಿ ವಜ್ರತೋರಣ, ಬಳ್ಳಿತೋರಣದ ನಡುವೆ ಕೆತ್ತಲಾಗಿರುವ ವಾದ್ಯಗಾರರು, ಕೀರ್ತಿಮುಖ-ಪೂರ್ಣಕುಂಭ-ತೋರಣಗಳಿಂದ ಅಲಂಕೃತ ಆಕರ್ಷಕ ಸ್ತಂಭ ಮತ್ತು ಹೂತೋರಣವನ್ನು ಕಾಣಬಹುದು.



ತೃತೀಯ ಶಾಖೆಯಲ್ಲಿ ಇಕ್ಕೆಲಗಳಲ್ಲಿ ಗಂಡು-ಹೆಣ್ಣು ಜೋಡಿ ನೃತ್ಯ ಮಾಡುವುದನ್ನು ಅತಿ ಸುಂದರವಾಗಿ ಕೆತ್ತಲಾಗಿದೆ. ಇಲ್ಲಿರುವ ವ್ಯತ್ಯಾಸವೆಂದರೆ ದ್ವಾರದ ಎಡಭಾಗದಲ್ಲಿರುವ ಜೋಡಿ ಮತ್ತು ಬಲಭಾಗದಲ್ಲಿರುವ ಜೋಡಿಯನ್ನು ಭಿನ್ನವಾಗಿ ತೋರಿಸಲಾಗಿದೆ. ಎಡಭಾಗದಲ್ಲಿ ತೋರಿಸಿರುವ ಜೋಡಿಯ ನೃತ್ಯ ಭಂಗಿಗಳೇ ಆಕರ್ಷಕವಾಗಿವೆ.



ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದ್ದರೆ, ತಳಭಾಗದಲ್ಲಿ ಶಾಖೆಗೊಂದರಂತೆ ಮಾನವ ರೂಪದ ೫ ಮೂರ್ತಿಗಳಿವೆ.



ನಂದಿಯು ನವರಂಗಲ್ಲಿದ್ದರೂ, ಪೂರ್ವದಲ್ಲಿರುವ ಶಿವಲಿಂಗಕ್ಕೆ ಮುಖಮಾಡಿಕೊಂಡಿದೆ. ಎಲ್ಲೆಡೆ ಪಶ್ಚಿಮದಲ್ಲಿರುವ ಗರ್ಭಗುಡಿಗೆ ನಂದಿ ಮುಖಮಾಡಿ ಕುಳಿತಿರುತ್ತಾನೆ. ಆದರೆ ಇಲ್ಲಿ ಹಾಗಿಲ್ಲದಿರುವುದು ವೈಶಿಷ್ಟ್ಯ.



ಎಲ್ಲಾ ಗರ್ಭಗುಡಿಗಳು ಪಂಚಶಾಖೆಗಳನ್ನು ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ. ಮೂರೂ ಗರ್ಭಗುಡಿಯ ದ್ವಾರದ ಪಂಚಶಾಖೆಗಳು ಕೂಡಾ, ಪ್ರಮುಖ ದ್ವಾರದಲ್ಲಿರುವಂತೆ ವಜ್ರತೋರಣ, ವಾದ್ಯಗಾರರು, ಜೋಡಿ ನೃತ್ಯಗಾರರು, ಸ್ತಂಭ ಹಾಗೂ ಹೂತೋರಣಗಳನ್ನು ಹೊಂದಿವೆಯಾದರೂ, ಅವೆಲ್ಲಾ ನಶಿಸುತ್ತಿವೆ.



ಈ ದೇವಾಲಯದಲ್ಲಿರುವ ಮೂರು ಶಿವಲಿಂಗಗಳು ಒಂದೇ ತೆರನಾಗಿಲ್ಲ. ಅವುಗಳ ಆಕಾರ ಹಾಗೂ ಗಾತ್ರದಲ್ಲಿ ವ್ಯತ್ಯಾಸವಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ.



ದೇವಾಲಯ ವಿಶಾಲವಾದ ಕೆರೆಯ ತಟದಲ್ಲಿದೆ ಮತ್ತು ಬಳಿಯಲ್ಲಿಯೇ ಇರುವ ಎಂದೂ ಬತ್ತದ ಪುರಾತನ ಬಾವಿಯನ್ನು ಮಜ್ಜಲ ಬಾವಿ ಎಂದು ಕರೆಯುತ್ತಾರೆ.


ಆಂದ ಹಾಗೆ ಲಕ್ಕುಂಡಿ ಹಾಗೂ ಆಸುಪಾಸಿನ ಜನರು ಹೊಸ ವಾಹನ (ಹೆಚ್ಚಾಗಿ ಬೈಕು, ಟ್ರಾಕ್ಟರು) ಖರೀದಿಸಿದರೆ, ಅವನ್ನು ತಂದು ಮೊದಲ ಪೂಜೆ ಸಲ್ಲಿಸುವುದು ಬಸವೇಶ್ವರನಿಗೆ.

ಭಾನುವಾರ, ಜನವರಿ 03, 2016

ದೀಪಸ್ತಂಭದ ಮೇಲಿನಿಂದ ನೋಟ...

 

ಈ ಊರಿನ ಬಂದರು ಬ್ರಿಟಿಷರ ಸಮಯದಲ್ಲಿ ಮತ್ತು ಅದಕ್ಕೂ ಮೊದಲಿನಿಂದಲೂ ವಹಿವಾಟು ಮತ್ತು ಸರಕು ಸಾಮಗ್ರಿಗಳ ಸಾಗಾಟಕ್ಕೆ ಬಹಳ ಹೆಸರುವಾಸಿಯಾಗಿತ್ತು. ಅಂದಿನ ಕಾಲದಲ್ಲಿ ಕರಾವಳಿಯ ಪ್ರಮುಖ ಬಂದರು ಆಗಿತ್ತು.


ಈ ಊರಿನಲ್ಲಿ ಸಮುದ್ರ ಸೇರುವ ಶರಭಿ ನದಿಯು ಬಂದರು ನಿರ್ಮಾಣಕ್ಕೆ ಸರಿಯಾದ ಸ್ಥಳವನ್ನು ಪ್ರಾಕೃತಿಕವಾಗಿ ನಿರ್ಮಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟದ ಮೇಲೆ ದೀಪಸ್ತಂಭವನ್ನು ಬ್ರಿಟಿಷರ ಸಮಯದಲ್ಲಿ ನಿರ್ಮಿಸಲಾಗಿದೆ. ದೀಪಸ್ತಂಭದ ಸಮೀಪದಲ್ಲೇ ಶಿವನ ದೇವಸ್ಥಾನವಿದೆ.

 
 
ಸರಿಸುಮಾರು ಮೂವತ್ತು ವರ್ಷಗಳ ಹಿಂದೆ, ೧೯೮೬ರಲ್ಲಿ ನನ್ನ ಸೋದರಮಾವ, ನನ್ನನ್ನು ಮತ್ತು ಸಂಬಂಧಿ ಅರುಣಾಚಲನನ್ನು ಅವರ ಪ್ರಿಮಿಯರ್ ಪದ್ಮಿನಿ ಕಾರಿನಲ್ಲಿ ಇಲ್ಲಿಗೆ ಕರೆತಂದಿದ್ದರು. ತದನಂತರ ಇಲ್ಲಿಗೆ ಭೇಟಿ ನೀಡಿದ್ದು ೨೦೧೫ರಲ್ಲಿ. ಕೆಲವು ಚಿತ್ರಗಳು.