’ತೋಳದ ಗುಹೆ’ ಅಥವಾ ’ತೋಳದ ಮನೆ’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಜರ್ಮನಿಯ ಸಮರ ಯೋಜನೆ ಮತ್ತು ರಣನೀತಿಗಳಿಗೆ ಅಂತಿಮ ರೂಪ ಕೊಡುವ ಸಭೆಗಳು ನಡೆಯುತ್ತಿದ್ದ ಗುಹೆಯಂತಹ ಕಟ್ಟಡ. ಆಗಿನ ಜರ್ಮನಿಯ ಪ್ರಾಂತ್ಯವಾಗಿದ್ದ ಪೂರ್ವ ಪ್ರಷ್ಯಾದ ರಾಸ್ಟೆನ್-ಬರ್ಗ್ (ಈಗ ಪೋಲಂಡ್-ನ
ಕೆಂಟ್ಝುನ್) ಎಂಬ ಪಟ್ಟಣದ ಸಮೀಪವಿದೆ ಈ ತೋಳದ ಗುಹೆ.
ಆ ದಿನ ತಾರೀಕು ಜುಲಾಯಿ ೨೦, ೧೯೪೪. ತೋಳದ ಗುಹೆಯಲ್ಲಿ ಹಿಟ್ಲರ್ ಮತ್ತು ಆತನ ಸೈನ್ಯಾಧಿಕಾರಿಗಳು ಮೇಜೊಂದರ ಸುತ್ತಲೂ ನಿಂತು ಆ ಮೇಜಿನ ಮೇಲೆ ಹರಡಲಾಗಿದ್ದ ನಕ್ಷೆಯೊಂದರ ಮೂಲಕ ಯುದ್ಧದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಮಧ್ಯಾಹ್ನ ೧೨.೪೨ಕ್ಕೆ ಸರಿಯಾಗಿ ಆ ಮೇಜಿನ ಕೆಳಗಿರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತು! ಕೆಲವೇ ನಿಮಿಷಗಳ ಮೊದಲು ಆ ಬಾಂಬ್ ಇದ್ದ ಬ್ರೀಫ್-ಕೇಸನ್ನು ಮೇಜಿನ ಕೆಳಗಿರಿಸಿ, ಅಲ್ಲಿಂದ ಹೊರನಡೆದಿದ್ದ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ಹಿಟ್ಲರ್ ಸತ್ತೇ ಹೋಗಿದ್ದಾನೆ ಎಂದು ತಿಳಿದು ಸಂತಸದಿಂದ ಬೀಗುತ್ತಾ ಬರ್ಲಿನ್ ಗೆ ಹೊರಟರು.
ಆದರೆ ಹಿಟ್ಲರ್ ಸತ್ತಿರಲಿಲ್ಲ, ಗಾಯಗೊಂಡಿದ್ದನಷ್ಟೆ ಮತ್ತು ವೈದ್ಯರಲ್ಲಿ, ’ನಾನು ಅಮರ... ನನ್ನನ್ನೇನು ಮಾಡಲಾಗದು... ನಾನು ಅಮರ’ ಎಂದು ರೋಷದಿಂದ ಬಡಬಡಿಸುತ್ತಿದ್ದ. ಮೊದಲ ಎರಡು ಪ್ರಯತ್ನಗಳಂತೆ, ಹಿಟ್ಲರ್-ನನ್ನು ಕೊಂದು ಜರ್ಮನಿಯನ್ನು ಆತನ ಕಪಿಮುಷ್ಠಿಯಿಂದ ಪಾರುಗೊಳಿಸುವ ಈ ೩ನೇ ಪ್ರಯತ್ನವೂ ವಿಫಲವಾಯಿತು.
ಜೂನ್ ೧೯೪೪ರ ಹೊತ್ತಿಗೆ ಎರಡನೇ ಮಹಾಯುದ್ಧ ಸಾಗುತ್ತಿದ್ದ ರೀತಿಯನ್ನು ಅವಲೋಕಿಸಿದಾಗ ಜರ್ಮನಿಯ ಅವನತಿಯನ್ನು ತಡೆಯುವುದು ಅಸಾಧ್ಯ ಎಂದು ಒಬ್ಬ ಅಡಾಲ್ಫ್ ಹಿಟ್ಲರ್-ನನ್ನು ಬಿಟ್ಟು ಉಳಿದೆಲ್ಲಾ ಉನ್ನತ ನಾಝಿ ಅಧಿಕಾರಿಗಳಿಗೆ ಗೊತ್ತಾಗಿ ಹೋಗಿತ್ತು. ತನ್ನ ಅಧಿಕಾರಿಗಳು ನೀಡುತ್ತಿದ್ದ ಶಾಂತಿ ಸಂಧಾನದ ಸಲಹೆಗಳನ್ನು ಕೇಳಲು ಹಿಟ್ಲರ್ ತಯಾರಿರಲಿಲ್ಲ. ಜರ್ಮನಿ ಇನ್ನೂ ಯುದ್ಧ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಭ್ರಮೆಯಲ್ಲೇ ’ತೋಳದ ಗುಹೆ’ಯಲ್ಲಿ ಘರ್ಜಿಸುತ್ತಾ ತನ್ನ ಅಧಿಕಾರಿಗಳಿಗೆ ಆದೇಶಗಳನ್ನು ನೀಡುತ್ತಿದ್ದ.
ಕೆಲವು ಉನ್ನತ ನಾಝಿ ಅಧಿಕಾರಿಗಳು ಮತ್ತು ಕೆಲವು ಪ್ರಮುಖ ನಾಗರಿಕರು, ಹಿಟ್ಲರ್ ಸಾಯುವ ಮೂಲಕ ಜರ್ಮನಿಯನ್ನು ರಕ್ಷಿಸಲು ಸಾಧ್ಯವಾಗುವುದಾದರೆ ಅದಕ್ಕೂ ಸಿದ್ಧರಾಗಿದ್ದರು. ಇವರಲ್ಲಿ ಪ್ರಮುಖರಾದವರೆಂದರೆ
ಜನರಲ್ ಲೂಡ್ವಿಷ್ ಬೆಕ್,
ಮೇಜರ್ ಜನರಲ್ ಬಾರೋನ್ ಹೆನ್ನಿಂಗ್ ವೊನ್ ಟ್ರೆಸ್ಕೊವ್,
ಲೆಫ್ಟಿನಂಟ್ ಜನರಲ್ ಫ್ರೀಡ್ರಿಷ್ ಓಲ್-ಬ್ರೈಷ್ಟ್,
ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್ ಮತ್ತು ಲೈಪ್-ಝಿಷ್ ನಗರದ ಮಾಜಿ ಮೇಯರ್ ಮತ್ತು ಹಿಟ್ಲರ್ ಸರಕಾರದ ಮಾಜಿ ಸದಸ್ಯರಾಗಿದ್ದ
ಕಾರಲ್ ಗರ್ಡೆಲೊರ್.
ಹಿಟ್ಲರ್-ನನ್ನು ಮುಗಿಸುವ ಮೊದಲ ಪ್ರಯತ್ನ ನಡೆದದ್ದು ಮಾರ್ಚ್ ೧೯೪೩ರಲ್ಲಿ.
ವೊನ್ ಟ್ರೆಸ್ಕೊವ್ ಮತ್ತು ಆತನ ಗೆಳೆಯ
ಕ್ಯಾಪ್ಟನ್ ಫಾಬಿಯಾನ್ ವೊನ್ ಸ್ಲಾಕನ್-ಡೊರ್ಫ್, ಬ್ರಾಂಡಿ ಬಾಟ್ಲಿಗಳಿದ್ದ ಪಾರ್ಸೆಲ್ ಒಂದರಲ್ಲಿ ಬಾಂಬನ್ನು ಇರಿಸಿ ಹಿಟ್ಲರ್-ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಆ ಬಾಂಬ್ ಸ್ಫೋಟಗೊಳ್ಳಲೇ ಇಲ್ಲ. ಕೆಲವು ತಿಂಗಳುಗಳ ಬಳಿಕ
ಕರ್ನಲ್ ರುಡೊಲ್ಫ್ ವೊನ್ ಗೆರ್ಸ್-ದೊರ್ಫ್ ತನ್ನ ಕೋಟಿನ ಜೇಬುಗಳಲ್ಲಿ ಬಾಂಬುಗಳನ್ನಿರಿಸಿ ಹಿಟ್ಲರ್ ಸಮೀಪಕ್ಕೆ ಬಂದ ಕೂಡಲೇ ಆತನ ಮೇಲೆ ಜಿಗಿದು ಬಾಂಬನ್ನು ಸ್ಫೋಟಗೊಳಿಸಿ ಹಿಟ್ಲರ್-ನನ್ನು ಸಾಯಿಸಿ ತಾನೂ ಸಾಯಲು ಮುಂದಾದರು. ಈ ಪ್ರಯತ್ನವೂ ವಿಫಲವಾಯಿತು.
ನಂತರ ನಡೆದದ್ದು ಮೇಲೆ ತಿಳಿಸಿದಂತೆ ೩ನೇ ಪ್ರಯತ್ನ. ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ೩೭ ವರ್ಷ ವಯಸ್ಸಿನ ಚಾಣಾಕ್ಷ ಮತ್ತು ಸಮರ್ಥ ಅಧಿಕಾರಿಯಾಗಿದ್ದರು. ಟ್ಯುನೀಶಿಯಾದಲ್ಲಿ ’ನಾಝಿ ಆಫ್ರಿಕಾ ಪಡೆ’ಯ ಪರ ಹೋರಾಡುವಾಗ ಬಲ ತೋಳು, ಬಲ ಕಣ್ಣು ಮತ್ತು ಎಡ ಕೈಯಲ್ಲಿನ ಎರಡು ಬೆರಳುಗಳನ್ನು ಕಳಕೊಂಡಿದ್ದರು. ಸ್ಟೌಫನ್-ಬರ್ಗ್ ನ ಸಾಧನೆಗಳನ್ನು ಗಮನಿಸಿದ ಹಿಟ್ಲರ್, ಆತನಿಗೆ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಜನರಲ್ ಫ್ರೀಡ್ರಿಷ್ ಹೊಮ್ಮ್ ಅವರ ಚೀಫ್ ಆಫ್ ಸ್ಟಾಫ್ ಆಗಿ ಭಡ್ತಿ ನೀಡಿದನು. ಯುದ್ಧದ ರಣನೀತಿಗಳನ್ನು ಚರ್ಚೆ ಮಾಡುವಾಗ ಮೀಸಲು ಪಡೆಯ ಅಧಿಕಾರಿಗಳ ಉಪಸ್ಥಿತಿ ಅತ್ಯಗತ್ಯ. ಹಾಗಾಗಿ ಈಗ ಸ್ಟೌಫನ್-ಬರ್ಗ್ ಹಿಟ್ಲರ್-ನ ಸಮೀಪ ಸುಲಭದಲ್ಲಿ ಸುಳಿಯಬಹುದಾಗಿತ್ತು.
ಸ್ಟೌಫನ್-ಬರ್ಗ್ ಒಬ್ಬ ದೇಶಪ್ರೇಮಿಯಾಗಿದ್ದರೂ, ನಾಝಿ ಆಡಳಿತದ ವಿರೋಧಿಯಾಗಿದ್ದ. ಒಬ್ಬ ಜರ್ಮನಿಯ ಅಧಿಕಾರಿಯಾಗಿ ಯುದ್ಧದಲ್ಲಿ ಪಾಲ್ಗೊಂಡನೇ ಹೊರತು ನಾಝಿ ಯೋಧನಾಗಿಯಲ್ಲ. ನಾಝಿ ಆಡಳಿತ ವೈಖರಿ, ಆಚಾರ ವಿಚಾರಗಳು ಸ್ಟೌಫನ್-ಬರ್ಗ್ ಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ. ಜರ್ಮನಿಯ ಸೋಲು ಖಚಿತವಾದ ಬಳಿಕವೂ ಅನಾವಶ್ಯಕವಾಗಿ ಯುದ್ಧವನ್ನು ಮುಂದುವರಿಸಿದ್ದ ಹಿಟ್ಲರ್-ನನ್ನು ಮುಗಿಸುವ ಸಂಚಿನ ರೂವಾರಿಯಾಗಿದ್ದ ಸ್ಟೌಫನ್-ಬರ್ಗ್, ತೋಳದ ಮನೆಯಲ್ಲಿ ಬಾಂಬ್ ಇರಿಸುವ ಸ್ವಲ್ಪ ದಿನಗಳ ಮೊದಲು, ’ಜರ್ಮನಿಯನ್ನು ರಕ್ಷಿಸಲು ಈಗ ತಾನೇನಾದರು ಮಾಡಲೇಬೇಕು’ ಎಂದು ತನ್ನ ಪತ್ನಿಯಲ್ಲಿ ಹೇಳಿದ್ದ.
ತನ್ನ ಕೆಳಗಿನ ಅಧಿಕಾರಿಗಳು ಹೂಡುತ್ತಿರುವ ಸಂಚು ನಾಝಿ ಮೀಸಲು ಪಡೆಯ ಮುಖ್ಯಸ್ಥ
ಫ್ರೀಡ್ರಿಷ್ ಹೊಮ್ಮ್ ಅವರಿಗೆ ತಿಳಿದಿತ್ತಾದರೂ ಅವರು ಅದರಲ್ಲಿ ಯಾವುದೇ ರೀತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಮತ್ತು ತನ್ನ ಮೇಲಧಿಕಾರಿಗಳಿಗೆ ಇದರ ಬಗ್ಗೆ ಸುಳಿವನ್ನೂ ನೀಡಲಿಲ್ಲ. ತಟಸ್ಥ ನಿಲುವನ್ನು ತಾಳಿದರು. ಈ ದಿವ್ಯ ಮೌನ ನಂತರ ಫ್ರೀಡ್ರಿಷ್ ಹೊಮ್ಮ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಸ್ಟೌಫನ್-ಬರ್ಗ್, ಕಾರಲ್ ಗರ್ಡೆಲೊರ್, ಲೂಡ್ವಿಷ್ ಬೆಕ್, ಫ್ರೀಡ್ರಿಷ್ ಓಲ್-ಬ್ರೈಷ್ಟ್, ವೊನ್ ಟ್ರೆಸ್ಕೊವ್ ಮತ್ತು ಇತರ ನಾಝಿ ವಿರೋಧಿ ಪ್ರಮುಖರು ಹಿಟ್ಲರ್-ನನ್ನು ಮುಗಿಸಿ ತಮ್ಮದೇ ಒಂದು ಹೊಸ ಸರಕಾರವನ್ನು ನಿರ್ಮಿಸಿ ಮಿತ್ರಪಡೆಗಳೊಂದಿಗೆ ಶಾಂತಿ ಸಂಧಾನದ ಮಾತುಕತೆಯನ್ನು ನಡೆಸುವ ಕಾರ್ಯತಂತ್ರವೊಂದನ್ನು ರೂಪಿಸಿದರು. ಇದಕ್ಕೆ
’ಆಪರೇಷನ್ ವಾಲ್ಕರಿ’ ಎಂಬ ಹೆಸರನ್ನಿಡಲಾಯಿತು. ಆಪರೇಷನ್ ವಾಲ್ಕರಿಯಲ್ಲಿ ೩ ಹಂತಗಳಿದ್ದವು. ಒಂದನೇಯದು ಹಿಟ್ಲರ್-ನನ್ನು ಮುಗಿಸುವುದು, ಎರಡನೇಯದು ನಾಝಿ ಪರ ಅಧಿಕಾರಿಗಳನ್ನು ಬಂಧಿಸಿ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡು ದೇಶವನ್ನು ತಮ್ಮ ಆಧೀನಕ್ಕೆ ತೆಗೆದುಕೊಳ್ಳುವುದು ಮತ್ತು ೩ನೇಯದು ಮಿತ್ರಪಡೆಗಳೊಂದಿಗೆ ಶಾಂತಿ ಮಾತುಕತೆ. ಪ್ಲ್ಯಾನ್ ಚೆನ್ನಾಗಿತ್ತು ಆದರೆ ಎಕ್ಸಿಕ್ಯೂಷನ್ ವೆರಿ ವೆರಿ ಬ್ಯಾಡ್.
೧೯೪೪ ಜುಲಾಯಿ ೨೦ರ ಮುಂಜಾನೆ ಸ್ಟೌಫನ್-ಬರ್ಗ್, ತನ್ನ ಸಹಾಯಕ
ವೆರ್ನರ್ ವೊನ್ ಹಾಫನ್ ಜೊತೆಗೆ ತೋಳದ ಗುಹೆ ಇರುವ ರಾಸ್ಟೆನ್ ಬರ್ಗ್ ಗೆ ವಿಮಾನದಲ್ಲಿ ತೆರಳಿದರು. ಇಬ್ಬರ ಕೈಯಲ್ಲೂ ಬಾಂಬ್ ಇರುವ ಒಂದೊಂದು ಬ್ರೀಫ್-ಕೇಸ್ ಇತ್ತು. ನಂತರ ಸ್ಟೌಫನ್-ಬರ್ಗ್ ಗೆ ತಿಳಿದುಬಂದ ವಿಷಯವೆಂದರೆ, ಆ ದಿನ ಮಧ್ಯಾಹ್ನ ಬೆನಿಟೋ ಮುಸ್ಸೋಲಿನಿ ರಾಸ್ಟೆನ್-ಬರ್ಗ್ ಗೆ ಆಗಮಿಸಲಿರುವುದರಿಂದ ಯಾವ ಸಭೆಗಾಗಿ ತನ್ನನ್ನು ಹಿಟ್ಲರ್ ಕರೆದಿದ್ದನೋ ಆ ಸಭೆಯನ್ನು ಒಂದು ತಾಸು ಮುಂಚಿತವಾಗಿಯೇ ನಡೆಸಲಾಗುವುದು ಎಂದು. ಈ ಸುದ್ದಿ ಕೇಳಿ ಸ್ಟೌಫನ್ ಬರ್ಗ್ ತನ್ನ ಕೆಲಸ ಸ್ವಲ್ಪ ಬೇಗನೇ ಮುಗಿಯಲಿದೆ ಎಂದು ಸಂತಸಪಟ್ಟನು. ಆದರೆ ಅಲ್ಲೊಂದು ಪ್ರಾಬ್ಲೆಮ್ ಇತ್ತು. ಹಿಟ್ಲರ್ ಯಾವಾಗಲೂ ಇಂತಹ ಸಭೆಗಳನ್ನು ತೋಳದ ಮನೆಯ ಭೂಮಿಯ ಮಟ್ಟಕ್ಕಿಂತ ಕೆಳಗಿರುವ ಬಂಕರ್ ಒಂದರಲ್ಲಿ ಮಾಡುತ್ತಿದ್ದ. ಆದರೆ ಇಂದು ಈ ಬಂಕರ್ ನಲ್ಲಿ ಸ್ವಲ್ಪ ದುರಸ್ತಿ ಕಾರ್ಯವಿದ್ದುದರಿಂದ, ಮರದ ಸಾಮಗ್ರಿಗಳಿಂದ ನಿರ್ಮಿಸಲಾಗಿದ್ದ ಕಿಟಕಿಗಳಿದ್ದ ತಾತ್ಕಾಲಿಕ ಕೊಠಡಿಯೊಂದರಲ್ಲಿ ಈ ಸಭೆಯನ್ನು ನಡೆಸುವುದಾಗಿ ನಿರ್ಧರಿಸಲಾಗಿತ್ತು. ಈ ಕೊಠಡಿಯಲ್ಲಿ ಬಾಂಬ್ ಸ್ಫೋಟಗೊಳಿಸಿದರೆ, ಬಂಕರಿನಲ್ಲಿ ಉಂಟಾಗುವಷ್ಟು ಹಾನಿ ಆಗುವುದಿಲ್ಲ ಎಂದು ಸ್ಟೌಫನ್ ಬರ್ಗ್ ಗೆ ಮನವರಿಕೆಯಾದರೂ, ಈಗ ಹಿಂದೇಟು ಹಾಕುವಂತಿರಲಿಲ್ಲ.
ತನ್ನ ಪೈಲಟ್-ಗೆ ತಯಾರಾಗಿರುವಂತೆ ಆದೇಶಿಸಿ, ವೆರ್ನರ್ ವೊನ್ ಹಾಫನ್ ಜೊತೆ ತೋಳದ ಗುಹೆಯೆಡೆ ಸ್ಟೌಫನ್ ಬರ್ಗ್ ತೆರಳಿದನು. ಬಾಂಬ್ ಇಟ್ಟ ಬಳಿಕ ಆದಷ್ಟು ಬೇಗ ಅಲ್ಲಿಂದ ನಿರ್ಗಮಿಸಲು ಸಹಕಾರಿಯಾಗುವಂತೆ ವೊನ್ ಹಾಫನ್ ನನ್ನು ಕಾರಿನಲ್ಲೇ ಇರಲು ತಿಳಿಸಿ, ತಾನು ಮಾತ್ರ ಬ್ರೀಫ್ ಕೇಸ್ ಹಿಡಿದು ಸಭೆ ನಡೆಯುವ ಕೊಠಡಿಗೆ ತೆರಳಿದನು. ಅಲ್ಲಿ ಹಿಟ್ಲರ್ ಮತ್ತು ೨೩ ಇತರ ಅಧಿಕಾರಿಗಳು ದೊಡ್ಡ ಮೇಜೊಂದರ ಮೇಲೆ ನಕ್ಷೆಯೊಂದನ್ನು ಹರಡಿ ಚರ್ಚಿಸುತ್ತಿದ್ದರು. ಸ್ಟೌಫನ್ ಬರ್ಗ್, ಬ್ರೀಫ್ ಕೇಸನ್ನು ಟೇಬಲಿನ ಕಾಲೊಂದಕ್ಕೆ ಒರಗಿಸಿ ಹಿಟ್ಲರ್ ನಿಂದ ಸುಮಾರು ೬ ಅಡಿ ದೂರ ಇರಿಸಿದನು. ಸ್ವಲ್ಪ ಸಮಯದ ಬಳಿಕ ತುರ್ತು ಕರೆಯೊಂದನ್ನು ಮಾಡಲಿರುವುದು ಎಂಬ ನೆವ ಹೇಳಿ ಅಲ್ಲಿಂದ ಆತ ಹೊರನಡೆದನು. ಆಗ ಸಭೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ
ಕರ್ನಲ್ ಹೈನ್ಝ್ ಬ್ರಾಂಟ್, ಹಿಟ್ಲರಿನ ಸಮೀಪ ತೆರಳುವ ಅಥವಾ ತನ್ನ ಕಾಲನ್ನು ಉದ್ದಕ್ಕೆ ಚಾಚುವ ಆತುರದಲ್ಲಿ (ಇವೆರಡರಲ್ಲಿ ಯಾವುದು ಸರಿ ಎಂದು ಎಲ್ಲೂ ಸರಿಯಾಗಿ ತಿಳಿಸಲಾಗಿಲ್ಲ), ಮೇಜಿನ ಕಾಲಿಗೆ ಒರಗಿ ಇರಿಸಿದ್ದ ಬ್ರೀಫ್ ಕೇಸನ್ನು ಕೆಳಗೆ ಬೀಳಿಸಿದನು. ನಂತರ ಅದನ್ನೆತ್ತಿ ಹಿಟ್ಲರಿನಿಂದ ಸ್ವಲ್ಪ ದೂರದಲ್ಲಿ ಸರಿಯಾಗಿ ಇರಿಸಿದನು.
ಇದೇ ಸಮಯದಲ್ಲಿ ಸ್ಟೌಫನ್ ಬರ್ಗ್, ವೊನ್ ಹಾಫನ್ ಇದ್ದ ಕಾರಿನೆಡೆ ತೆರಳುತ್ತಿದ್ದನು. ಆತ ಕಾರಿನೆಡೆ ತಲುಪಿದಾಗ ಸಮಯ ೧೨.೪೨. ಆಗ ಇತ್ತ ಬಾಂಬ್ ಸ್ಫೋಟಗೊಂಡಿತು. ಆ ದೊಡ್ಡ ಸದ್ದು ಮತ್ತು ಚೀತ್ಕಾರಗಳನ್ನು ಕೇಳಿ, ಹಿಟ್ಲರ್ ಸತ್ತಿರುವನೆಂದು ತಿಳಿದು ಆಪರೇಷನ್ ವಾಲ್ಕರಿಯ ಮೊದಲ ಹಂತ ಯಶಸ್ವಿಯಾಯಿತೆಂದು ಸ್ಟೌಫನ್ ಬರ್ಗ್, ವೊನ್ ಹಾಫನ್ ಜೊತೆ ಬರ್ಲಿನ್ ಗೆ ವಿಮಾನದಲ್ಲಿ ಹಿಂತಿರುಗಿದನು.
ಆದರೆ ಹಿಟ್ಲರ್ ಬದುಕುಳಿದಿದ್ದ. ಕಿಟಕಿಗಳಿಂದ ಕೂಡಿದ್ದ ತಾತ್ಕಾಲಿಕ ಕೊಠಡಿಯ ಪರಿಣಾಮ ಮತ್ತು ಕರ್ನಲ್ ಬ್ರಾಂಟ್ ಆ ಬ್ರೀಫ್ ಕೇಸನ್ನು ಇದ್ದಲ್ಲಿಂದ ತೆಗೆದು ದೂರವಿರಿಸಿದ್ದು: ಈ ಎರಡು ಕಾರಣಗಳಿಂದ ಬಾಂಬ್ ನಿರೀಕ್ಷಿಸಿದಂತೆ ಸ್ಫೋಟಗೊಂಡರೂ, ಹಾನಿ ಮಾತ್ರ ನಿರೀಕ್ಷಿಸಿದಂತೆ ಆಗಲಿಲ್ಲ. ನಾಲ್ಕು ಜನರು ಸತ್ತು ಹಲವು ಉನ್ನತ ನಾಝಿ ಅಧಿಕಾರಿಗಳು ಬಹಳ ಕೆಟ್ಟದಾಗಿ ಗಾಯಗೊಂಡರು. ಹಿಟ್ಲರ್ ಕುಂಟುತ್ತಾ ಅಲ್ಲಿಂದ ಹೊರನಡೆದನು.
ತನ್ನ ಕೆಳಗಿರುವ ಆಧಿಕಾರಿಗಳು ನಡೆಸಿರುವ ಕೃತ್ಯದ ಬಗ್ಗೆ ತಿಳಿದಿದ್ದ ಫ್ರೀಡ್ರಿಷ್ ಹೊಮ್ಮ್, ಸ್ಟೌಫನ್ ಬರ್ಗ್ ಬೀಗುತ್ತಾ ಬಂದಿರುವುದನ್ನು ಗಮನಿಸಿದ ಕೂಡಲೇ ತೋಳದ ಗುಹೆಗೆ ಫೋನಾಯಿಸಿ ಹಿಟ್ಲರ್ ಇನ್ನೂ ಬದುಕಿರುವನೆಂದು ತಿಳಿದುಕೊಂಡನು. ಈಗೆಲ್ಲಾದರೂ ಸ್ಟೌಫನ್ ಬರ್ಗ್ ಮತ್ತು ಇತರರು ಬಂಧಿಸಲ್ಪಟ್ಟರೆ ಅವರು ತನ್ನ ಬಗ್ಗೆ ಬಾಯಿ ಬಿಡುವರೆಂಬ ನಡುಕ ಫ್ರೀಡ್ರಿಷ್ ಹೊಮ್ಮ್ ಗೆ ಆರಂಭವಾಯಿತು. ಕೂಡಲೇ ಹಿಟ್ಲರ್ ಕೊಲೆ ಪ್ರಯತ್ನದ ಆರೋಪದ ಮೇಲೆ ಸ್ಟೌಫನ್ ಬರ್ಗ್, ವೊನ್ ಹಾಫನ್, ಓಲ್ ಬ್ರೈಷ್ಟ್ ಮತ್ತು
ಕರ್ನಲ್ ಮತ್ಝ್ ವೊನ್ ಕ್ವಿರ್ನ್-ಹೈಮ್ ಇವರುಗಳನ್ನು ಬಂಧಿಸಿ, ಕೋರ್ಟ್ ಮಾರ್ಷಲ್ ಮಾಡಿಸಿ ಮಧ್ಯರಾತ್ರಿಯ ಬಳಿಕ ಗುಂಡಿಟ್ಟು ಕೊಲ್ಲಿಸಿದನು. ನಂತರ ಸೆರೆಸಿಕ್ಕ ೮ ನಾಝಿ ವಿರೋಧಿ ಅಧಿಕಾರಿಗಳನ್ನು ತಂತಿಗಳ ಸಹಾಯದಿಂದ ನೇಣು ಹಾಕಲಾಯಿತು. ಈ ೮ ಮಂದಿಯ ಯಾತನೆಭರಿತ ಸಾವನ್ನು ರೆಕಾರ್ಡ್ ಮಾಡಿ ನಂತರ ಹಿಟ್ಲರ್ ತನ್ನ ಮನೋರಂಜನೆಗಾಗಿ ಅವನ್ನು ವೀಕ್ಷಿಸುತ್ತಿದ್ದ.
ಹಿಟ್ಲರ್ ಕೊಲೆ ಪ್ರಯತ್ನದ ನಂತರದ ಬಂಧನಗಳು ಮತ್ತು ಮರಣದಂಡನೆಗಳು ಐದಾರು ತಿಂಗಳುಗಳವರೆಗೆ ನಡೆದವು.
’ಜನರ ನ್ಯಾಯಾಲಯ’ ಎಂಬ ಹೆಸರಿನ ನ್ಯಾಯಾಲಯದ ಕುಪ್ರಸಿದ್ಧ ನ್ಯಾಯಾಧೀಶರಾಗಿದ್ದ
ರೋಲಂಡ್ ಫ್ರೈಸ್ಲರ್ ನ್ಯಾಯ ದೊರಕಿಸುವ ನೆವದಲ್ಲಿ ಕಾಟಾಚಾರದ ವಿಚಾರಣೆಗಳನ್ನು ನಡೆಸಿ ಬಂಧನೆಗೆ ಒಳಗಾದವರನ್ನೆಲ್ಲಾ ಮರಣದಂಡನೆಗೆ ಒಳಪಡಿಸಿದನು. ಎಲ್ಲವೂ ಫ್ಯೂಹ್ರರ್ (ಸರ್ವಾಧಿಕಾರಿ ಹಿಟ್ಲರ್) ನನ್ನು ಸಂತುಷ್ಟಪಡಿಸುವ ಸಲುವಾಗಿ. ಸುಮಾರು ೫೦೦೦ ಜನರನ್ನು ಯಾವುದೇ ವಿಚಾರಣೆ ಇಲ್ಲದೇ ಮರಣದಂಡನೆಗೆ ಒಳಪಡಿಸಲಾಯಿತು.
ಈ ಸಂಚಿನಲ್ಲಿ ಭಾಗಿಯಾಗಿದ್ದ ಲೂಡ್ವಿಷ್ ಬೆಕ್ ಆತ್ಮಹತ್ಯೆ ಮಾಡಿಕೊಂಡರು. ವೊನ್ ಟ್ರೆಸ್ಕಾವ್ ರಷ್ಯಾ ಜೊತೆಗಿನ ಯುದ್ಧದಲ್ಲಿ ತಾನಾಗಿಯೇ ವೈರಿಯ ಗುಂಡಿನ ಮಳೆಯತ್ತ ನಡೆದುಕೊಂಡು ಹೋದರು. ಫ್ರೀಡ್ರಿಷ್ ಹೊಮ್ಮ್ ಅವರನ್ನು ಸಂಚಿನ ಬಗ್ಗೆ ತಿಳಿದೂ ಮೌನ ವಹಿಸಿದ್ದರಿಂದ ಕರ್ತವ್ಯ ಲೋಪದ ಆರೋಪದಲ್ಲಿ ಮರಣದಂಡನೆಗೆ ಒಳಪಡಿಸಲಾಯಿತು.
೨೦೦೮ರ ಕೊನೆಯಲ್ಲಿ ಟಾಮ್ ಕ್ರೂಸ್, ಸ್ಟೌಫನ್ ಬರ್ಗ್ ಪಾತ್ರಧಾರಿಯಾಗಿ ನಟಿಸಿರುವ
’ವಾಲ್ಕರಿ’ ಎಂಬ ಹೆಸರಿನ ಚಲನಚಿತ್ರವನ್ನು ಈ ನೈಜ ಘಟನೆಯನ್ನು ಕಥಾವಸ್ತುವನ್ನಾಗಿ ಮಾಡಿಕೊಂಡು ನಿರ್ಮಿಸಲಾಗಿದೆ. ಹಾಗೇನೆ ಈ ಚಿತ್ರವನ್ನು ನಿರ್ಮಿಸುವಾಗ ಸ್ಟೌಫನ್-ಬರ್ಗ್ ಅವರ ಮಗ, ಚಿತ್ರದ ಬಗ್ಗೆ ಹೇಳಿರುವ ಮಾತುಗಳನ್ನು
ಇಲ್ಲಿ ಓದಬಹುದು.