ಈ ದಾರಿಯಲ್ಲಿ ಪ್ರಯಾಣಿಸುವಾಗ ಈ ಬೆಟ್ಟ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿತ್ತು. ಬೆಟ್ಟದ ಹೆಸರೇನೆಂದು ಗೊತ್ತಿರಲಿಲ್ಲ. ಆದರೆ ಅದನ್ನು ನೋಡಿದಾಗಲೆಲ್ಲಾ ಅದರ ತುದಿಗೊಂದು ಸಲ ಭೇಟಿ ನೀಡಬೇಕೆಂಬ ಆಸೆ ಹೆಚ್ಚಾಗುತ್ತಿತ್ತು. ಮೊನ್ನೆ ಮೇ ೪ರಂದು ರಾಕೇಶ್ ಹೊಳ್ಳ ಮತ್ತು ಅಶೋಕ, ಇಬ್ಬರೊಂದಿಗೆ ಆ ಬೆಟ್ಟದೆಡೆ ಹೊರಟೆ. ರಾಕೇಶ್ ಶರವೇಗದಲ್ಲಿ ಬೈಕ್ ಓಡಿಸಿದರೆ ನಾನು ಬಹಳ ನಿಧಾನ. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರಲ್ಲಿ ಇವರಿಬ್ಬರು ಬೋರ್ ಹೊಡೆಸಿಕೊಂಡು ನನಗೆ ಕಾಯುತ್ತಿದ್ದರು. 'ಎಂತ ಮಾರ್ರೆ ನೀವು. ನಾವು ದೇವಿಗೆ ನಮಸ್ಕಾರ ಹಾಕಿ, ದೇವಸ್ಥಾನಕ್ಕೆ ೩ ಸುತ್ತು ಹಾಕಿ, ಚಾ ಕುಡ್ದು, ಅಚೀಚೆ ನೋಡಿ ಎಲ್ಲ ಮಾಡಾಯ್ತು ಆದ್ರೂ ನಿಮ್ಮ ಪತ್ತೆ ಇಲ್ಲ.....' ಎಂದು ರಾಕೇಶ ತನ್ನ ಅಸಹನೆಯನ್ನು ವ್ಯಕ್ತಪಡಿಸಿದ.
ಅಶೋಕನ ಪ್ರಕಾರ ನಾವು ತೆರಳುವುದು ಅಂಬಾರಗುಡ್ಡ ಇರಬಹುದು. ಅಂಬಾರಗುಡ್ಡ ಹೆಸರು ನಾನು ಕೇಳಿದ್ದೆ. ಇಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯ ವಿರುದ್ಧ ರಾಮಚಂದ್ರಾಪುರ ಮಠದ ಸ್ವಾಮಿಗಳ ನೇತೃತ್ವದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದಾಗ ಗಣಿಗಾರಿಕೆ ಸ್ಥಗಿತಗೊಂಡಿತ್ತು ಎಂದು ಓದಿದ ನೆನಪು. ಅಶೋಕನಿಗಂತೂ ನಾವು ತೆರಳುವುದು ಅಂಬಾರಗುಡ್ಡಕ್ಕೇ ಎಂಬುದು ಖಚಿತವಾಗಿತ್ತು. ಆದರೆ ನನಗೆ ಸಂಶಯವಿತ್ತು.
ಹೊಸಕೊಪ್ಪದಲ್ಲಿ ಮನೆಯೊಂದರ ಬಳಿ ಮಾಹಿತಿ ಕೇಳೋಣವೆಂದು ನಿಂತೆವು. ಮನೆಯ ಯಜಮಾನ ಒಳಗಿನಿಂದಲೇ ಜೋರಾಗಿ ಒದರುತ್ತಾ ಮಾಹಿತಿ ನೀಡುತ್ತಿದ್ದರೆ ನಾವು ಹೊರಗಿನಿಂದ ಜೋರಾಗಿ ಒದರುತ್ತಾ ಪ್ರಶ್ನೆ ಕೇಳುತ್ತಿದ್ದೆವು. 'ಒಳ್ಗೆ ಬನ್ನಿ. ನಾನು ತಿಂಡಿ ತಿಂತಾ ಇದ್ದೀನಿ. ಸ್ವಲ್ಪ ಹೊತ್ತು ಕೂತ್ಕೊಂಡು ಹೋಗಿ' ಎಂದು ಒಳಗೆ ಕರೆದರು. ಇವರು ಪ್ರಭಾಕರ ಹೆಗಡೆ. ಆ ಬೆಟ್ಟದ ಹೆಸರು ಅಂಬಾರಗುಡ್ಡ ಎಂದು ತಿಳಿಸಿ, ಹೋಗುವ ದಾರಿಯನ್ನೂ ತಿಳಿಸಿ, ಹಿಂತಿರುಗುವಾಗ ಎಷ್ಟೇ ತಡವಾದರೂ ಪರವಾಗಿಲ್ಲ ಮನೆಗೆ ಬಂದು ಊಟ ಮಾಡಿಕೊಂಡೇ ತೆರಳಬೇಕೆಂದು ನಮ್ಮನ್ನು ಕಳಿಸಿಕೊಟ್ಟರು.
ಗಣಿಗಾರಿಕೆ ಇದ್ದ ಕಾರಣ ಅಂಬಾರಗುಡ್ಡದ ಮೇಲಿನವರೆಗೂ ರಸ್ತೆಯಿದೆ. ಕೊನೆಗೊಂದು ೩೦ ನಿಮಿಷ ನಡೆದರಾಯಿತಷ್ಟೇ. ಇಲ್ಲಿ ನೆಲವನ್ನು ಅಗೆಯಬೇಕಾಗಿಲ್ಲ, ಗುಡಿಸಿದರೂ ಮ್ಯಾಂಗನೀಸ್ ಅದಿರು ಸಿಗುತ್ತದೆ. ಅಲ್ಲಲ್ಲಿ ಅದಿರನ್ನು ಬಗೆದು ರಾಶಿ ಹಾಕಲಾಗಿತ್ತು. ದೂರದಲ್ಲಿ ಕೊಡಾಚಾದ್ರಿ ಶಿಖರ ಮತ್ತು ಬೆಟ್ಟಗಳ ಶ್ರೇಣಿ ಕಾಣುತ್ತಿತ್ತು. ಸುತ್ತಲೂ ಹಳ್ಳಿಗಳಿವೆ. ಆದರೆ ಒಂದು ಪಾರ್ಶ್ವದಲ್ಲಿ ಸುಂದರವಾದ ಕಣಿವೆಯಿದೆ. ಈ ಕಣಿವೆ ದಾಟಿ, ಮಳೆ ಕಾಡೊಂದನ್ನು ದಾಟಿದರೆ ಇನ್ನೊಂದು ಬೆಟ್ಟ. ಮುಂದಿನ ಸಲ ಇಲ್ಲಿಗೆ ಬಂದರೆ ಆ ಬೆಟ್ಟಕ್ಕೂ ತೆರಳಬೇಕು. ಕಣಿವೆಯ ಸೌಂದರ್ಯವನ್ನು ಆನಂದಿಸುತ್ತಾ ನಿಧಾನವಾಗಿ ಅಂಬಾರಗುಡ್ಡದ ತುದಿಯನ್ನು ಸಮೀಪಿಸತೊಡಗಿದೆವು.
ತುದಿ ತಲುಪಿದ ಕೂಡಲೇ ಇನ್ನೊಂದು ಸುಂದರ ದೃಶ್ಯ. ಮುಂದೆ ಕೆಳಗಡೆ ಇನ್ನೊಂದು ಶಿಖರ. ಹಾವಿನಂತೆ ಮುಂದಕ್ಕೆ ಚಾಚಿಕೊಂಡಿರುವ ಈ ಬೆಟ್ಟದ ದೃಶ್ಯ ನೋಡಿ ರಾಕೇಶ ಸಂತೋಷದಿಂದ ಚೀರಾಡುತ್ತಿದ್ದ. ಅಂಬಾರಗುಡ್ಡದ ತುದಿಯಿಂದ ಹಾಗೆ ಕೆಳಗಿಳಿದು ಈ ಮತ್ತೊಂದು ಬೆಟ್ಟದ ಮೇಲಕ್ಕೆ ಬರಬಹುದು. ಈ ಬೆಟ್ಟದ ಒಂದು ಬದಿ ೯೦ ಡಿಗ್ರೀ ಪ್ರಪಾತವಿದ್ದರೆ ಇನ್ನೊಂದು ಬದಿ ಇಳಿಜಾರಾಗಿದೆ. ನಡುವೆ ನಡೆಯುತ್ತಾ ಅದರ ಇನ್ನೊಂದು ತುದಿಯತ್ತ ಸಾಗುವಾಗ ಬೀಸುತ್ತಿದ್ದ ಗಾಳಿ ನೀಡುತ್ತಿದ್ದ ಸಂತೋಷವನ್ನು ಸದಾ ಅನುಭವಿಸುತ್ತಾ ಅಲ್ಲೇ ಇದ್ದು ಬಿಡೋಣವೆಂದೆನಿಸುತ್ತಿತ್ತು. ಇಲ್ಲಿಂದ ಕೋಗಾರಿಗೆ ತೆರಳುವ ರಸ್ತೆ ಕಾಣುತ್ತಿತ್ತು. ಬಹು ದಿನದ ಆಸೆಯೊಂದು ಈಡೇರಿತು. ಅಲ್ಲೇ ಸಣ್ಣ ಗಿಡವೊಂದರ ನೆರಳಿನಲ್ಲಿ ಸುಮಾರು ಒಂದು ತಾಸು ವಿಶ್ರಮಿಸಿದೆವು.
ಅಂಬಾರಗುಡ್ಡದಲ್ಲಿ ಚಾರಣ ಕಡಿಮೆ. ಆದರೆ ಇಲ್ಲಿ ಪ್ರಕೃತಿಯ ಅನುಪಮ ಸೌಂದರ್ಯ ಲಭ್ಯ. ಎಲ್ಲಾ ಕೋನಗಳಲ್ಲಿ ಫೋಟೋಗಳನ್ನು ತೆಗೆದು ಅಲ್ಲಿಂದ ಹೊರಟವರು ಮತ್ತೆ ನಿಂತದ್ದು ಹೊಸಕೊಪ್ಪ ಪ್ರಭಾಕರ ಹೆಗಡೆಯವರ ಮನೆಯಲ್ಲಿ ಊಟಕ್ಕೆ!