ಚಾರಣಕ್ಕೆ ಹೊರಡುವ ಒಂದೆರಡು ದಿನಗಳ ಮೊದಲು, ’ಯಾರೆಲ್ಲ ಬರುತ್ತಿದ್ದಾರೆ’ ಎಂದು ವಿವೇಕ್ ಬಳಿ ಕೇಳುವುದು ವಾಡಿಕೆ. ಅಂದು ನಿತಿನ್ ಬಿಲ್ಲೆಯ ಹೆಸರನ್ನು ವಿವೇಕ್ ಹೇಳಿದ ಕೂಡಲೇ ಆಶ್ಚರ್ಯವಾಯಿತು. ’ಓ’ ಎಂಬ ಉದ್ಗಾರ ತೆಗೆದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಧಾರವಾಡ-ಹುಬ್ಬಳ್ಳಿ ಕ್ರಿಕೆಟ್ ಲೀಗ್‍ನಲ್ಲಿ ವಿವೇಕ್ ಆಡುವ ಎಸ್‍ಡಿಎಮ್ ತಂಡದ ಪರವಾಗಿಯೇ ನಿತಿನ್ ಬಿಲ್ಲೆ ಕೂಡಾ ಆಡುವುದರಿಂದ ಇಬ್ಬರಿಗೂ ಪರಿಚಯ.
ನಿತಿನ್ ಬಿಲ್ಲೆ ಒಬ್ಬ ಕ್ರೀಡಾಳು. ಕ್ರಿಕೆಟ್ ಅವರ ಜೀವನ. ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದ ನಿತಿನ್, ರಾಜ್ಯ ಕಿರಿಯರ ತಂಡವನ್ನು ೧೫, ೧೯ ಹಾಗೂ ೨೨ರ ವಯೋಮಿತಿಯ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ಕೂಡಲೇ ’ಸ್ಪೋರ್ಟ್ಸ್ ಕೋಟಾ’ದಲ್ಲಿ ಇಂಡಿಯನ್ ರೈಲ್ವೇಸ್‍ನಲ್ಲಿ ಉದ್ಯೋಗ ದೊರಕಿತು. ಕಳೆದ ೩ ವರ್ಷಗಳಿಂದ ಅವರು ಹುಬ್ಬಳ್ಳಿಯಲ್ಲಿ ರೈಲ್ವೇಸ್ ಉದ್ಯೋಗಿ. ದಿನಾಲೂ ಮುಂಜಾನೆ ಐದು ಗಂಟೆಯಿಂದ ಮೂರು ತಾಸು ಧಾರವಾಡದ ಎಸ್‍ಡಿಎಮ್ ಕಾಲೇಜು ಮೈದಾನದಲ್ಲಿ ನಿತಿನ್ ಕಠಿಣ ತಾಲೀಮು ಮಾಡುತ್ತಾರೆ. ಕಟ್ಟುಮಸ್ತಾದ ಆಕರ್ಷಕ ಮೈಕಟ್ಟು ಹೊಂದಿದ್ದಾರೆ. ಮಾತಿನಲ್ಲಿ ನಯ ವಿನಯ ಗೌರವ ಎದ್ದು ಕಾಣುತ್ತದೆ. ಮಾತು ಕಡಿಮೆ. ಆಲಿಸುವುದೇ ಹೆಚ್ಚು.
ನಾನು ಕ್ರಿಕೆಟ್ ಬಗ್ಗೆ ಅದರಲ್ಲೂ ರಣಜಿ ಪಂದ್ಯಗಳ ಬಗ್ಗೆ ಮಾತನಾಡಲು ಆರಂಭಿಸಿದರೆ, ಎದುರಿದ್ದವನೇ ’ಸಾಕು’ ಎನ್ನುವವರೆಗೂ ಮಾತು ಮುಂದುವರಿಯುತ್ತದೆ. ಹಾಗಿರುವಾಗ ರಣಜಿ ಆಟಗಾರನೊಬ್ಬ ಸಿಕ್ಕಾಗ ನಾನು ಯಾವ ಪರಿ ಮಾತನಾಡಿರಬಹುದು? ನಿಜ ಹೇಳಬೇಕೆಂದರೆ ನಿತಿನ್ ಬಳಿ ಪರಿಚಯ, ಕುಶಲೋಪರಿ ಮತ್ತು ಒಂದೆರಡು ಮಾತುಗಳನ್ನು ಬಿಟ್ಟರೆ ಹೆಚ್ಚಿಗೆ ಮಾತನಾಡುವ ಗೋಜಿಗೇ ನಾನು ಹೋಗಲಿಲ್ಲ. ಕ್ರಿಕೆಟಿಗರು ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡಲು ಎಂದಿಗೂ ಉತ್ಸುಕರಾಗಿರುವುದಿಲ್ಲ. ದೈನಂದಿನ ಕ್ರಿಕೆಟ್ ಅಭ್ಯಾಸ, ತಾಲೀಮು, ಕೆಲಸ ಇವುಗಳಿಂದ ಸ್ವಲ್ಪ ಬಿಡುವು ಪಡೆಯಲು ಕ್ರಿಕೆಟಿಗರು ಬಹಳ ಅಪರೂಪಕ್ಕೆ ಪ್ರವಾಸ/ಚಾರಣಕ್ಕೆ ಹೋಗುತ್ತಾರೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಮಾತನಾಡಿ ಅವರಿಗೆ ಬೋರ್ ಮಾಡುವುದು ನನಗಿಷ್ಟವಿರಲಿಲ್ಲ. ನಿತಿನ್ ಅಂದು ತನ್ನ ಜೀವನದಲ್ಲೇ ಮೊದಲ ಬಾರಿಗೆ ಚಾರಣಕ್ಕೆ ಬಂದಿದ್ದರು. ನನ್ನ ಕೊರೆತದಿಂದ ಕಂಗಾಲಾಗಿ ಅದೇ ಅವರ ಕೊನೆಯ ಚಾರಣ ಆಗಬಾರದು ಎಂಬ ಉದ್ದೇಶವೂ ಇತ್ತು!
೨೦೧೧ರಲ್ಲಿ ತನ್ನ ೨೨ನೇ ವಯಸ್ಸಿನಲ್ಲಿ ರೈಲ್ವೇಸ್ ಪರವಾಗಿ ಚೊಚ್ಚಲ ರಣಜಿ ಪಂದ್ಯವನ್ನಾಡಿದ ನಿತಿನ್, ಕಳೆದೆರಡು ಋತುಗಳಲ್ಲಿ ೯ ಪಂದ್ಯಗಳಲ್ಲಿ ಆಡಿದ್ದಾರೆ. ಸಾಧಾರಣ ಪ್ರದರ್ಶನ ನೀಡಿದ್ದಾರೆ. ಬಲಿಷ್ಠ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ದುರ್ಬಲ ತಂಡಗಳ ವಿರುದ್ಧ ಹೆಚ್ಚು ಓಟಗಳನ್ನು ಗಳಿಸುವಲ್ಲಿ ನಿತಿನ್ ಯಶಸ್ಸು ಕಾಣಲಿಲ್ಲ. ಈ ಬಾರಿ ರೈಲ್ವೇಸ್ ತಂಡಕ್ಕೆ ಮತ್ತೆ ಆಯ್ಕೆಯಾಗಿರುವ ನಿತಿನ್, ಈಗ ಮಳೆಗಾಲ ಮುಗಿದ ಕೂಡಲೇ (ಬಹುಶ: ಸೆಪ್ಟೆಂಬರ್ ಕೊನೆಯ ವಾರದಲ್ಲಿ) ರೈಲ್ವೇಸ್ ತಂಡದ ಕೇಂದ್ರವಾಗಿರುವ ದೆಹಲಿಯ ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ಹಾಜರಿರಬೇಕು. ರೈಲ್ವೇಸ್ ತಂಡದ ಎಲ್ಲಾ ಆಟಗಾರರೂ ಇಲ್ಲಿ ಒಂದುಗೂಡಿ ಒಂದು ತಿಂಗಳ ಕ್ಯಾಂಪ್‍ನಲ್ಲಿ ಪಾಲ್ಗೊಳ್ಳುತ್ತಾರೆ. ನವೆಂಬರ್ ಮೊದಲ ವಾರದಿಂದ ಹೊಸ ರಣಜಿ ಋತು ಆರಂಭ. ನಂತರ ಆಟ, ತಾಲೀಮು, ಪ್ರಯಾಣ, ಇತ್ಯಾದಿಗಳ ಬಿಡುವಿಲ್ಲದ ದಿನಚರಿ. ಈ ಋತುವಿನಿಂದ ಎರಡು ರಣಜಿ ಪಂದ್ಯಗಳ ನಡುವೆ ನಾಲ್ಕು ದಿನಗಳ ಅಂತರವಿಡುವ ಮಾತುಕತೆ ನಡೆಯುತ್ತಿದೆ. ಹಾಗಾದರೆ ಆಟಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ, ಇಲ್ಲವಾದಲ್ಲಿ ಈಗಿರುವ ಮೂರು ದಿನಗಳ ಅಂತರ ಏನೇನೂ ಸಾಲದು.
ನಿತಿನ್ ನೀಡಿದ ಮಾಹಿತಿಯ ಪ್ರಕಾರ ಯೆರೆ ಗೌಡ ಈಗ ರೈಲ್ವೇಸ್ ಬ್ಯಾಟಿಂಗ್ ಕೋಚ್! ಸಂಜಯ್ ಬಾಂಗರ್ ಕಳೆದ ಋತುವಿನಲ್ಲಿ ನಿವೃತ್ತಿ ಹೊಂದಿರುವುದರಿಂದ, ಈ ಋತುವಿನಲ್ಲಿ ತಂಡವನ್ನು ಮುನ್ನಡೆಸುವವರು ಮುರಳಿ ಕಾರ್ತಿಕ್. ಹೊಸ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ನಿತಿನ್ ಬಿಲ್ಲೆಗೆ ಶುಭ ಹಾರೈಕೆಗಳು.
ಚಾರಣದುದ್ದಕ್ಕೂ ಮಳೆ ಸುರಿಯುತ್ತಿದ್ದು, ತನ್ನ ಮೊದಲ ಚಾರಣವನ್ನು ನಿತಿನ್ ಆನಂದಿಸಿದರು. ಇನ್ನು ಮುಂದೆ ನಿತಿನ್ ಚಾರಣಕ್ಕೆ ಬಂದರೆ ಅವರು ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಅವರ ಅದೃಷ್ಟ ಚೆನ್ನಾಗಿತ್ತು, ಈ ಬಾರಿ ಏನೂ ಆಗದೆ ಪಾರಾದರು. ಜಲಧಾರೆಯನ್ನು ಕಂಡು ಸಂತೋಷಗೊಂಡ ನಿತಿನ್, ತನ್ನಿಬ್ಬರು ಗೆಳೆಯರೊಂದಿಗೆ ಜಲಧಾರೆಯ ಮೇಲ್ಭಾಗದಲ್ಲಿ, ನೀರು ಕೆಳಗೆ ಧುಮುಕುವಲ್ಲಿ ನಿಂತು ಬಗ್ಗಿ ಕೆಳಗೆ ನೋಡತೊಡಗಿದರು. ಇನ್ನೇನು ಹಿಂತಿರುಗಬೇಕು ಎನ್ನುವಷ್ಟರಲ್ಲಿ ಜಾರಿ ಸಮತೋಲನ ಕಳಕೊಂಡರು. ’ಅಷ್ಟು ಮುಂದೆ ಹೋಗಬೇಡಿ, ಹಿಂದೆ ಬನ್ನಿ’ ಎಂದು ಸೂಚನೆ ನೀಡುತ್ತಿದ್ದ ನಮಗೆ, ಅವರು ಜಾರಿದ್ದನ್ನು ಕಂಡು ಮೈನಡುಕ ಉಂಟಾಯಿತು. ಅವರ ಸಮೀಪದಲ್ಲೇ ಇದ್ದ ನಮ್ಮ ಮಾರ್ಗದರ್ಶಿ ಅವರನ್ನು ಹಿಡಿದಿದ್ದರಿಂದ ಕೆಳಗೆ ಬೀಳುವುದರಿಂದ ನಿತಿನ್ ಪಾರಾದರು. ಇಲ್ಲವಾದಲ್ಲಿ ಜಾರಿ ನೇರವಾಗಿ ಜಲಧಾರೆಯ ಕೆಳಗೆ ಬಿದ್ದುಬಿಡುತ್ತಿದ್ದರು.
ಕ್ರೀಡೆಯಲ್ಲಿ ಎದುರಾಳಿಯನ್ನು ಗೌರವಿಸಿದರೆ ಮಾತ್ರ ಜಯಿಸುವ ಅವಕಾಶ ಹೆಚ್ಚಾಗಿರುತ್ತದೆ. ಚಾರಣವೂ ಹಾಗೆಯೇ ತಾನೆ? ಪ್ರಕೃತಿಯನ್ನು ಗೌರವಿಸಿದರೆ ಮಾತ್ರ ಚಾರಣವನ್ನು ಸುರಕ್ಷಿತವಾಗಿ ಮುಗಿಸುವ ಅವಕಾಶ ಹೆಚ್ಚಾಗಿರುತ್ತದೆ.