ನಮ್ಮ ಕೂಸಳ್ಳಿ ಜಲಪಾತದ ಚಾರಣ ಬಹಳ ಚೆನ್ನಾಗಿತ್ತು, ನನಗೂ ಆ ಸ್ಥಳ ತುಂಬಾನೇ ಹಿಡಿಸಿತ್ತು. ಅಂತೆಯೇ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೂಸಳ್ಳಿಗೆ ನಮ್ಮ ಚಾರಣದ ಬಗ್ಗೆ ಲೇಖನವೊಂದನ್ನು ಕಳಿಸಿದೆ. ಯಾವುದೇ ಪತ್ರಿಕೆಗೆ ನಾನು ಕಳಿಸಿದ ಪ್ರಥಮ ಲೇಖನ ಅದಾಗಿತ್ತು.
೨೦೦೪ ನವೆಂಬರ್ ತಿಂಗಳ ಅದೊಂದು ದಿನ (ನವೆಂಬರ್ ೯ ಇದ್ದಿರಬಹುದು) ಮುಂಜಾನೆ ೧೦ರ ಹೊತ್ತಿಗೆ ಗೆಳೆಯ ದಿನೇಶ್ ಹೊಳ್ಳರ ಫೋನು. ಇವತ್ತಿನ ವಿಜಯ ಕರ್ನಾಟಕ ನೋಡಿದ್ರಾ? ಎಂಬ ಪ್ರಶ್ನೆ. ಕೆಟ್ಟ ಸುದ್ದಿ ಅನ್ನುತ್ತಾ, ಕೂಸಳ್ಳಿ ಜಲಪಾತದಲ್ಲಿ ಚಾರಣಿಗನೊಬ್ಬನ ಮರಣದ ಬಗ್ಗೆ ಸುದ್ದಿ ಬಂದಿರುವುದಾಗಿ ತಿಳಿಸಿದರು. ಅಷ್ಟಕ್ಕೆ ನಿಲ್ಲಿಸದೇ, 'ನೀವು ಬರೆದ ಲೇಖನವನ್ನು ಆಧಾರವಾಗಿಟ್ಟುಕೊಂಡೇ ಅಣ್ಣ ತಮ್ಮಂದಿರಿಬ್ಬರು ಬಂದಿದ್ದರು, ಅವರಲ್ಲೊಬ್ಬ ದುರ್ಮರಣಕ್ಕೀಡಾದ' ಎಂದಾಗ ಅದೇನೋ ಕಳವಳ. ಒಬ್ಬ ಚಾರಣಿಗನ ಸಾವಿಗೆ ಕಾರಣನಾದೆನಲ್ಲ ಎಂಬ ಚಡಪಡಿಕೆ. ಆ ದಿನವೆಲ್ಲಾ ಯಾವುದೂ ಸರಿಯಾಗಿ ನಡೆಯಲಿಲ್ಲ. ದೊಡ್ಡ ಬಜೆಟಿನ ಜಾಹೀರಾತೊಂದರಲ್ಲಿ ತಪ್ಪು ಮಾಡಿ ಕ್ಲೈಂಟ್ ಕಡೆಯಿಂದ ಉಗಿಸಿಕೊಂಡೆ. ಎಂದೂ ಆಗದ ತಪ್ಪುಗಳು ಅಂದಾದವು. ಮನಸ್ಸು ಆಫ್ ಆಗಿತ್ತು.
ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳನ್ನು ಸಹೋದ್ಯೋಗಿ ಪ್ರಶಾಂತ್ ಕೈಗೊಪ್ಪಿಸಿ ಸಂಜೆ ಬೇಗನೇ ಉಡುಪಿ ಬಸ್ಸು ಹತ್ತಿ ಮನೆಗೆ ಬಂದುಬಿಟ್ಟೆ. ಮನೆಗೆ ಬಂದರೂ ಎಲ್ಲಿದೆ ಮನಸ್ಸಿಗೆ ನೆಮ್ಮದಿ? ಮತ್ತದೇ ಚಿಂತೆ, ಯೋಚನೆ. ಯಾರಿದ್ದಿರಬಹುದು? ಹೇಗೆ ಪ್ರಾಣ ಕಳಕೊಂಡಿರಬಹುದು? ಏನಾಗಿರಬಹುದು? ಹಾಳಾದ್ದು; ಯಾಕಾದರೂ ಲೇಖನ ಬರೆದೆನೋ...ಬರೆಯದಿದ್ದಲ್ಲಿ ಒಬ್ಬ ಚಾರಣಿಗನ ಜೀವವಾದರೂ ಉಳಿಯುತ್ತಿತ್ತಲ್ಲ ಎಂಬ ಮಾತು ಬಹು ಕಾಡುತ್ತಿತ್ತು. ಯಾರ ಮಗನೋ? ಯಾರ ಸಹೋದರನೋ? ಮದುವೆಯಾಗಿತ್ತೆ? ಮಕ್ಕಳಿದ್ದರೆ? ಎಂಬಿತ್ಯಾದಿ ಪ್ರಶ್ನೆಗಳು. ಉತ್ತರ ಕೊಡುವವರು ಯಾರಿರಲಿಲ್ಲ. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅದೇ ಶನಿವಾರದಂದು(ನವೆಂಬರ್ ೧೩, ೨೦೦೪) ಮಧ್ಯಾಹ್ನ ಕಲ್ಲಿಕೋಣೆಯತ್ತ ಯಮಾಹ ಓಡಿಸಿದೆ.
ಕಲ್ಲಿಕೋಣೆ ತಲುಪಿದಾಗ ಸಮಯ ೪ ಆಗಿತ್ತು. ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಕಲ್ಲಿಕೋಣೆ ಮತ್ತು ಲಕ್ಷ್ಮಣ ನನ್ನನ್ನು ಕಂಡೊಡನೆ ಮನೆಯೆಡೆ ಬಂದರು. ಮೃತನಾದವನ ಬಗ್ಗೆ ವಿಚಾರಿಸಿದೆ. ಇದ್ದ ಪ್ರಶ್ನೆಗಳನ್ನೆಲ್ಲಾ ಕೇಳಿದೆ. ಬಂದವರು ಅಣ್ಣ ತಮ್ಮಂದಿರೆಂದು, ಮೃತನಾದವನು ಹಿರಿಯವನೆಂದು, ಅವಿವಾಹಿತನೆಂದು, ಬೆಂಗಳೂರಿನವರೆಂದು, ಇಬ್ಬರೇ ಮಕ್ಕಳೆಂದು, ಅನುಭವಿ ಚಾರಣಿಗರೆಂದು ತಿಳಿದುಕೊಂಡೆ. ಹಾಗೆ ಮಾತು ಮುಂದುವರಿಯಿತು.
ಬೆಂಗಳೂರಿನ ಸ್ವರೂಪ್ ಮತ್ತು ಶ್ರೀನಾಥ್ ಸಹೋದರರು. ಇಬ್ಬರೂ ಅನುಭವಿ ಚಾರಣಿಗರು. ಇವರಿಗೆ ಇಬ್ಬರೇ ಚಾರಣಕ್ಕೆ ಹೋಗುವುದು ಅಭ್ಯಾಸವಾಗಿಬಿಟ್ಟಿತ್ತು. ಕರ್ನಾಟಕದ ಕಾಡುಗಳನ್ನು, ಜಲಧಾರೆಗಳನ್ನು ಸುತ್ತಾಡಿ ಬಲ್ಲವರಾಗಿದ್ದರು. ನವೆಂಬರ್ ೨೦೦೪ರ ದೀಪಾವಳಿ ರಜೆಯಂದು ಕೂಸಳ್ಳಿ ಜಲಪಾತಕ್ಕೆ ಚಾರಣಗೈಯುವ ಸಲುವಾಗಿ ಅದೊಂದು ಮುಂಜಾನೆ ಕಲ್ಲಿಕೋಣೆಗೆ ಆಗಮಿಸಿದರು. ಡೆಕ್ಕನ್ ಹೆರಾಲ್ಡ್ ಲೇಖನದಲ್ಲಿ ನಾನು ಸೂಚಿಸಿದಂತೆ ಶಿರೂರಿನಿಂದ ಕಲ್ಲಿಕೋಣೆಗೆ ಆಟೋವೊಂದರಲ್ಲಿ ಆಗಮಿಸಿ, ಆತನಿಗೆ ಮರಳಿ ಸಂಜೆ ಬರುವಂತೆ ಹೇಳಿ, ನಾರಾಯಣ ಕಲ್ಲಿಕೋಣೆಯ ಮನೆಯವರೊಂದಿಗೆ ಸ್ವಲ್ಪ ಕಾಲ ಕಳೆದರು. ನಂತರ ದಾರಿ ಕೇಳಿ ಜಲಪಾತದೆಡೆ ಮುಂದುವರಿದರು. ಆ ದಿನ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿಯಲು ಶುರುವಾಗಿದ್ದು ಆಗಾಗ ಹನಿ ಮಳೆ ಬೀಳುತ್ತಿತ್ತು ಎಂದು ನಾರಾಯಣ ಕಲ್ಲಿಕೋಣೆಯ ನೆನಪು.
ನಾವೆಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರಿಂದ ನಮಗ್ಯಾರಿಗೂ ಅವರೊಂದಿಗೆ ಹೋಗಲು ಆಗಲಿಲ್ಲ. ಒಂದು ವೇಳೆ ಹೋಗಿದ್ದರೆ ಈ ಅನಾಹುತ ಆಗುತ್ತಿರಲಿಲ್ಲವೇನೋ ಎಂದು ನಾರಾಯಣರ ಆಳಲು. ಮಧ್ಯಾಹ್ನ ಸುಮಾರು ೩.೩೦ರ ಹೊತ್ತಿಗೆ ಶ್ರೀನಾಥ್ ಒಬ್ಬರೇ ಅಳುತ್ತಾ, ಮಾತನಾಡಲೂ ಆಗದೇ, ಏದುಸಿರು ಬಿಡುತ್ತಾ ನಾರಾಯಣರ ಮನೆಯೆಡೆ ಬಂದಾಗ ಏನೋ ಅನಾಹುತ ಘಟಿಸಿದೆ ಎಂದು ಮನೆಯವರಿಗೆ ಅರಿವಾಗತೊಡಗಿತು. ವಿಷಯ ತಿಳಿದು ನಾರಾಯಣ, ಆತನ ಮಗ ಲಕ್ಷ್ಮಣ ಮತ್ತು ಮತ್ತಿಬ್ಬರು ಶ್ರೀನಾಥ್ ರೊಂದಿಗೆ ಜಲಪಾತದೆಡೆ ತೆರಳಿದರು.
ಕಲ್ಲಿಕೋಣೆಯಿಂದ ಅನಾಹುತ ನಡೆದ ಸ್ಥಳಕ್ಕೆ ೬೦ ನಿಮಿಷಗಳ ಹಾದಿ. ಸ್ವರೂಪ್ ಬಿದ್ದಲ್ಲಿ ಅವರ ಬ್ಯಾಗ್ ಮಾತ್ರ ನೀರಲ್ಲಿ ತೇಲಾಡುತ್ತಿತ್ತು. ಉದ್ದನೆಯ ಕೋಲೊಂದರಿಂದ ನೀರಲ್ಲಿ ತಡಕಾಡಿ ಮೃತದೇಹವನ್ನು ಹುಡುಕುವ ಪ್ರಯತ್ನ ಮಾಡಲಾಯಿತು. ಮೃತದೇಹವನ್ನು ಅಂದೇ ಮೇಲೆತ್ತಲಾಯಿತೋ ಅಥವಾ ಅಂದು ಸಿಗದೇ ಮರುದಿನ ಮುಂಜಾನೆ ಮತ್ತೆ ತೆರಳಿ ಮೇಲೆತ್ತಲಾಯಿತೋ ಎಂಬುದರ ಬಗ್ಗೆ ಅವರೆಲ್ಲ ಹೇಳಿದ್ದು ನನಗೆ ಸರಿಯಾಗಿ ನೆನಪಿಲ್ಲ. ಆದರೆ ಮೃತದೇಹವನ್ನು ನೀರಿನಿಂದ ಮೇಲೆತ್ತಿ ಅಲ್ಲೇ ಬಂಡೆಯೊಂದರ ಮೇಲಿಟ್ಟು, ಎಲ್ಲರೂ ಕಲ್ಲಿಕೋಣೆಗೆ ಮರಳಿದ್ದನ್ನು ನಾರಾಯಣ ಮತ್ತು ಲಕ್ಷ್ಮಣ ನನಗೆ ಹೇಳಿದ್ದು ಚೆನ್ನಾಗಿ ನೆನಪಿದೆ. ಮೃತದೇಹವೊಂದನ್ನು ಹಾಗ್ಯಾಕೆ ಬಿಟ್ಟುಬಂದಿರಿ ಎಂದು ನಾನು ಕೇಳಲು, ಪೊಲೀಸರಿಂದ ಅನಾವಶ್ಯಕ ಕಾಟವನ್ನು ತಪ್ಪಿಸಿಕೊಳ್ಳಲು ಹಾಗೆ ಮಾಡಲು ಊರ ಜನರು ನಿರ್ಧರಿಸಿದರು ಎಂದು ನಾರಾಯಣ ತಿಳಿಸಿದರು.
ಘಟನೆ ನಡೆದ ಸ್ಥಳವನ್ನು ಲಕ್ಷ್ಮಣ ಎಷ್ಟೇ ವಿವರಿಸಿದರೂ ನನಗೆ ತಿಳಿಯಲಿಲ್ಲ. ಕಡೆಗೆ ಆರನೇ ಹಂತದ ಆಸುಪಾಸಿನಲ್ಲೆಲ್ಲೋ ಅನಾಹುತ ಆಗಿರಬೇಕು ಎಂದು ಗ್ರಹಿಸಿದೆ. ಜಾರಿ ಬೀಳುವಾಗ ಬಂಡೆಗಳಿಗೆ ತಲೆ ಬಡಿದು ನೀರಿಗೆ ಬೀಳುವ ಮೊದಲೇ ಸ್ವರೂಪ್ ಪ್ರಾಣಪಕ್ಷಿ ಹಾರಿಹೋಗಿತ್ತು. ಕಣ್ಣ ಮುಂದೆ ಅಣ್ಣನನ್ನು ಕಳಕೊಂಡು, ಏನು ಮಾಡಬೇಕೆಂದು ತೋಚದೆ, ೬೦ ನಿಮಿಷ ನಡೆದು ಕಲ್ಲಿಕೋಣೆಗೆ ಬರುವಾಗ ಶ್ರೀನಾಥ್ ಮನಸ್ಥಿತಿ ಹೇಗಿರಬಹುದೆಂದು ಊಹಿಸಲೂ ಸಾಧ್ಯವಾಗದು. ನಂತರ ಮತ್ತೆ ತೆರಳಿ ಮೃತದೇಹಕ್ಕಾಗಿ ಹುಡುಕಾಟ ನಂತರ ರಾತ್ರಿಯಾಗುತ್ತಿದ್ದಂತೆ ಕಲ್ಲಿಕೋಣೆಗೆ ವಾಪಾಸ್, ಅಬ್ಬಾ ವೇದನೆಯೇ. ಆ ರಾತ್ರಿ ಅವರು ಹೇಗೆ ಕಳೆದಿರಬಹುದು?
ಮರುದಿನ ಮಧ್ಯಾಹ್ನದ ಹೊತ್ತಿಗೆ ಶ್ರೀನಾಥ್ ತಂದೆಯವರು ಬೆಂಗಳೂರಿನಿಂದ ಕಲ್ಲಿಕೋಣೆಗೆ ಆಗಮಿಸಿದ್ದರು. ಪೊಲೀಸರೂ ಇದ್ದರು. 'ಈ ಸ್ಥಳದ ಬಗ್ಗೆ ನಿಮಗ್ಯಾರು ಮಾಹಿತಿ ನೀಡಿದರು' ಎಂದು ಪೊಲೀಸರು ಕೇಳಿದಾಗ, ಶ್ರೀನಾಥ್ ತನ್ನ ಬ್ಯಾಗಿನಿಂದ ನಾನು ಡೆಕ್ಕನ್ ಹೆರಾಲ್ಡ್ ನಲ್ಲಿ ಬರೆದಿದ್ದ ಲೇಖನವನ್ನು ಹೊರತೆಗೆದರು ಎಂದು ಲಕ್ಷ್ಮಣ ತಿಳಿಸಿದ. ಶ್ರೀನಾಥರ ತಂದೆ ಮತ್ತು ಪೊಲೀಸರು ವಿನಂತಿಸಿದ ಬಳಿಕ ಮತ್ತೆ ಘಟನೆ ನಡೆದಲ್ಲಿ ತೆರಳಿದ ಹಳ್ಳಿಗರು ಸ್ವರೂಪ್ ಮೃತದೇಹವನ್ನು ಕಲ್ಲಿಕೋಣೆಗೆ ತಂದರು.
ನಾನೇ ಸ್ವರೂಪ್ ಸಾವಿಗೆ ಕಾರಣ ಎಂಬ ಅಪರಾಧಿ ಭಾವನೆ ನನ್ನಲ್ಲಿ ಮುಡತೊಡಗಿತ್ತು. ಆ ಲೇಖನವನ್ನು ನಾನು ಬರೆಯದಿದ್ದರೆ ಕೂಸಳ್ಳಿ ಜಲಪಾತಕ್ಕೆ ಸ್ವರೂಪ್ ಮತ್ತು ಶ್ರೀನಾಥ್ ಬರುತ್ತಲೇ ಇರುತ್ತಿರಲಿಲ್ಲ. ಯಾರಲ್ಲಿ ಕ್ಷಮೆ ಕೇಳುವುದು ಎಂದು ಯೋಚಿಸುತ್ತಲೇ ೨ ವರ್ಷಗಳು ಉರುಳಿದವು. ಆ ನಂತರ ಯಾವುದೇ ಪತ್ರಿಕೆಗೆ ಲೇಖನವನ್ನು ನಾನು ಕಳಿಸಿಲ್ಲ. ಬ್ಲಾಗ್ ಶುರುಮಾಡುವ ಮೊದಲು ಬಹಳ ಯೋಚಿಸಿದ್ದೆ. ಆದರೆ ನಾನು ಭೇಟಿ ನೀಡಿದ ತಾಣಗಳನ್ನು ಇತರ ಪ್ರಕೃತಿ ಪ್ರಿಯರಿಗೆ ಪರಿಚಯ ಪಡಿಸುವ ಸುಲಭ ವಿಧಾನ ಬೇರೊಂದು ಇರಲಿಲ್ಲವಾದ್ದರಿಂದ ಬ್ಲಾಗಿಂಗ್ ಶುರುಮಾಡಿಬಿಟ್ಟೆ.
ಅಂತರ್ಜಾಲದಲ್ಲಿರುವ ನನ್ನ ಚಿತ್ರಗಳ ಸಂಗ್ರಹಕ್ಕೆ ಕಳೆದ ಫೆಬ್ರವರಿ ತಿಂಗಳ ಒಂದು ದಿನ ಬೆಂಗಳೂರಿನ ಶ್ರೀನಾಥ್ ಎಂಬವರಿಂದ ವಿ-ಅಂಚೆಯೊಂದು ಬಂತು. 'ನನಗೆ ಚಾರಣ ಅಂದರೆ ಇಷ್ಟ ಆದರೆ ಎರಡು ವರ್ಷಗಳ ಹಿಂದೆ ಕೂಸಳ್ಳಿ ಜಲಪಾತಕ್ಕೆ ಚಾರಣ ಮಾಡುವಾಗ ಅಣ್ಣನನ್ನು ಕಳಕೊಂಡ ಬಳಿಕ ಈಗ ಚಾರಣ ಕಡಿಮೆಯಾಗಿದೆ........' ಎಂದು ಶ್ರೀನಾಥ್ ಬರೆದಿದ್ದರು. ಅಂತೂ ೨ ವರ್ಷಗಳಿಂದ ಯಾರಿಗೆ ಕ್ಷಮೆ ಯಾಚಿಸಲು ಕಾಯುತ್ತಿದ್ದೇನೊ ಅವರ ಸಂಪರ್ಕ ಸಾಧ್ಯವಾಯಿತು. ಕೂಡಲೇ ಶ್ರೀನಾಥ್ ಗೆ ವಿ-ಅಂಚೆಯೊಂದನ್ನು ಬರೆದು ಕ್ಷಮೆ ಯಾಚಿಸಿದೆ. ಅವರು 'ಛೇ, ಇದರಲ್ಲಿ ನಿಮ್ಮದೇನು ತಪ್ಪು? ಹೊಸ ಜಲಪಾತವೊಂದನ್ನು ನಮಗೆ ಪರಿಚಯಿಸಿದಿರಿ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳಬೇಕು. ಇನ್ನು ಅನಾಹುತ ನಡೆದದ್ದು ನನ್ನ ದುರಾದೃಷ್ಟ. ಸ್ವಲ್ಪ ಹುಷಾರಾಗಿದ್ದರೆ ನನ್ನಣ್ಣ ಇವತ್ತು ಇರುತ್ತಿದ್ದ' ಎಂದು ವಿಷಯವನ್ನು ಅಲ್ಲೇ ಅದುಮಿದರು. ಈ ಕೆಳಗಿನ ಚಿತ್ರವನ್ನು ಅಣ್ಣತಮ್ಮಂದಿರಿಬ್ಬರು ಯಲ್ಲಾಪುರ ಸಮೀಪದ ಶಿರಲೆ ಜಲಪಾತಕ್ಕೆ ತೆರಳಿದಾಗ ತೆಗೆದದ್ದು. ನೀಲಿ ಜೀನ್ಸ್ ಪ್ಯಾಂಟ್ ಹಾಕಿರುವವರು ಸ್ವರೂಪ್ ಮತ್ತು ಬಿಳಿ ಅಂಗಿ ತೊಟ್ಟವರು ಶ್ರೀನಾಥ್.
ಸ್ವರೂಪ್ ಮರಣದ ಬಳಿಕ ಏನಾಯಿತು ಎಂಬುದು ನನಗೆ ತಿಳಿದಿತ್ತು. ಆದರೆ ಹೇಗಾಯಿತು ಎಂಬುದನ್ನು ಕೇವಲ ಶ್ರೀನಾಥ್ ಹೇಳಬಲ್ಲವರಿದ್ದರು. ಅವರ ಪ್ರಕಾರ ಐದನೆ ಹಂತದಲ್ಲಿ ಇಬ್ಬರೂ ಮನಸಾರೆ ಜಲಕ್ರೀಡೆಯಾಡಿದರು. ಅಪರಾಹ್ನ ೨ ಗಂಟೆಯ ಸುಮಾರಿಗೆ ಆಗಸದಲ್ಲಿ ಕರಿಮೋಡಗಳು ಮುಡಲಾರಂಭಿಸಿದವು ಮತ್ತು ಒಂದೆರಡು ಸಣ್ಣ ಮಳೆ ಅದಾಗಲೇ ಬಿದ್ದಿದ್ದರಿಂದ ಕಲ್ಲುಬಂಡೆಗಳು ಒದ್ದೆಯಾಗಿ ಜಾರುತ್ತಿದ್ದವು. ಮಳೆ ಬಿರುಸಾಗಿ ಬಂದರೆ ನಂತರ ಕಲ್ಲಿಕೋಣೆ ತಲುಪಲು ತಡವಾಗಬಹುದು ಎಂದು ಇಬ್ಬರೂ ಕೊಂಡುಹೋಗಿದ್ದ ತಿಂಡಿಯನ್ನೂ ತಿನ್ನದೆ ಅವಸರದಿಂದ ಹೊರಟರು. ಶ್ರೀನಾಥ್ ಪ್ರಕಾರ ಅಲ್ಲೊಂದು ೧೫ ಅಡಿಯಷ್ಟು ಅಂತರವನ್ನು ಸ್ವಲ್ಪ ಎಚ್ಚರಿಕೆಯಿಂದ ದಾಟಬೇಕಾಗಿತ್ತು, ಮತ್ತು ಅಗಷ್ಟೆ ಬಿದ್ದ ಮಳೆಯಿಂದ ಜಾರುತ್ತಿತ್ತು ಕೂಡಾ. ಸ್ವರೂಪ್ ಗಿಂತ ನಾಲ್ಕೈದು ಹೆಜ್ಜೆ ಮುಂದಿದ್ದ ಶ್ರೀನಾಥ್ ಆ ೧೫ ಆಡಿಯ ಸ್ಥಳವನ್ನು ಸಾವಕಾಶವಾಗಿ ಎಚ್ಚರಿಕೆಯಿಂದ ದಾಟಿ ಅಣ್ಣನಿಗೆ ನಿಧಾನವಾಗಿ ಬರುವಂತೆ ಹೇಳುತ್ತಾ ಮುಂದಿನ ಹೆಜ್ಜೆಯಿಟ್ಟರು. ಆಗಲೇ ಸ್ವರೂಪ್ ಜಾರಿ, ಹಿಡಿಯಲು ಆಧಾರವೇನೂ ಇರಲಿಲ್ಲವಾದ್ದರಿಂದ ಕೆಳಗೆ ಬಿದ್ದುಬಿಟ್ಟರು. ಸದ್ದು ಕೇಳಿ ಶ್ರೀನಾಥ್ ಹಿಂದೆ ತಿರುಗಿದರೆ ಅಲ್ಲಿ ಸ್ವರೂಪ್ ಇಲ್ಲ. ಕೆಳಗೆ ನೋಡಿದರೆ, ನೀರಿನಲ್ಲಿ ಸ್ವರೂಪ್ ಬ್ಯಾಗ್ ಮಾತ್ರ ತೇಲಾಡುತ್ತಿತ್ತು.
ದಂಗಾದ ಶ್ರೀನಾಥ್, ಆದಷ್ಟು ಬೇಗ ಕೆಳಗೆ ಬಂದು, ಅಣ್ಣನ ಹೆಸರನ್ನು ಕೂಗಿ ಕೂಗಿ ಕರೆದರು. ಉತ್ತರ ಎಲ್ಲಿಂದಲೂ ಬರಲಿಲ್ಲ...ನೀರ ಹರಿವಿನ ಶಬ್ದವೊಂದನ್ನು ಬಿಟ್ಟರೆ ಎಲ್ಲಾ ಕಡೆ ಮೌನ. ಅಚೀಚೆ ಎಲ್ಲಾ ಕಡೆ ಹುಡುಕಾಡಿದರು, ಅತ್ತರು, ರೋದಿಸಿದರು, ಆದರೆ ಕೇಳುವವರು ಯಾರೂ ಇರಲಿಲ್ಲ. ಶ್ರೀನಾಥ್ ಪ್ರಕೃತಿಯ ನಡುವೆ ಅಣ್ಣನನ್ನು ಕಳಕೊಂಡು ಒಬ್ಬಂಟಿಯಾಗಿಬಿಟ್ಟಿದ್ದರು. ಕೂಸಳ್ಳಿ ಜಲಪಾತ ಏನೂ ಅಗದೇ ಇರದಿದ್ದಂತೆ ಧುಮುಕುತ್ತಿತ್ತು, ನೀರು ತನ್ನ ಪಾಡಿಗೆ ಹರಿಯುತ್ತಿತ್ತು, ಮರ ಗಿಡಗಳು ಶ್ರೀನಾಥ್ ಪಾಡನ್ನು ನೋಡಿ ಮರುಗುತ್ತಿದ್ದರೆ, ಬಂಡೆಗಳು ಘಟನೆಗೆ ಮುಕಸಾಕ್ಷಿಗಳಾಗಿದ್ದವು. ಎಲ್ಲಾ ಕಡೆ ಹುಡುಕಾಡಿ ಅತ್ತು ಅತ್ತು ಏನು ಮಾಡಬೇಕೆಂದು ದಿಕ್ಕು ತೋಚದ ಶ್ರೀನಾಥ್ ಕಲ್ಲಿಕೋಣೆಯತ್ತ ಧಾವಿಸಿದರು. ಹೀಗೆ ಕಲ್ಲಿಕೋಣೆಯತ್ತ, ಎರಡೂ ಬದಿಯಿಂದ ದಟ್ಟ ಕಾಡಿನಿಂದ ಆವೃತವಾಗಿರುವ ಹಳ್ಳಗುಂಟ ಒಬ್ಬಂಟಿಯಾಗಿ ಧಾವಿಸುವಾಗ ಆ ಒಂದು ತಾಸು ಅವರ ಪಾಡು ...... ಊಹಿಸಲಸಾಧ್ಯ.
ಶ್ರೀನಾಥ್ ರಲ್ಲಿ, ಸ್ವರೂಪ್ ಚಿತ್ರವೊಂದಿದ್ದರೆ ಕಳಿಸಿಕೊಡಿ ಎಂದು ವಿನಂತಿಸಿದೆ. ಅವರು ಕಳಿಸಿದ ಚಿತ್ರ ನೋಡಿ ಇನ್ನೂ ನೊಂದುಕೊಂಡೆ. ಸ್ವರೂಪ್ ಪಿಟೀಲು ಬಾರಿಸುತ್ತಾ ಇದ್ದ ಚಿತ್ರವಾಗಿತ್ತದು. ತನ್ನ ಅಣ್ಣ ಒಬ್ಬ ಅತ್ಯುತ್ತಮ ಪಿಟೀಲು ವಾದಕನಾಗಿದ್ದ ಎಂದು ಶ್ರೀನಾಥ್ ಹೇಳಿದಾಗ, ಚಾರಣಿಗನೊಂದಿಗೆ ಸಂಗೀತಗಾರನೊಬ್ಬನನ್ನೂ ಕಳಕೊಂಡದ್ದು, ನನಗೆ ಇನ್ನಷ್ಟು ನೋವನ್ನುಂಟುಮಾಡಿತು.
ಸ್ವರೂಪ್ ಚಿತ್ರವನ್ನು ಇಲ್ಲಿ ಪ್ರಕಟಿಸಲು ಮತ್ತು ಘಟನೆಯ ಬಗ್ಗೆ ವಿವರಿಸಿ ಇಲ್ಲಿ ಬರೆಯಲು ಅನುಮತಿ ನೀಡಿದ ಶ್ರೀನಾಥ್ ರಿಗೆ ಧನ್ಯವಾದಗಳು. ಶ್ರೀನಾಥ್ ರನ್ನು av.srinath at gmail dot com ಇಲ್ಲಿ ಸಂಪರ್ಕಿಸಬಹುದು.