೨೦-೦೧-೨೦೦೯.
ಒಂದು ದೇವಸ್ಥಾನ ಮತ್ತು ೨ ಬಸದಿಗಳನ್ನು ನೋಡಿ ಬರೋಣವೆಂದು ಲಕ್ಷ್ಮೇಶ್ವರಕ್ಕೆ ತೆರಳಿದರೆ ಅಲ್ಲಿ ಇನ್ನೂ ೩ ದೇವಾಲಯಗಳು ಮತ್ತು ಒಂದು ಆಕರ್ಷಕ ಮಸೀದಿಯಿರುವ ಬಗ್ಗೆ ತಿಳಿಯಿತು. ಒಂದು ಕಡೆಯಿಂದ ಮತ್ತೊಂದೆಡೆ ನಡೆದೇ ತೆರಳಬೇಕಾಗಿತ್ತು. ಆ ಉರಿ ಬಿಸಿಲಿನಲ್ಲಿ ಸುಮಾರು ಒಂದು ತಾಸು ಅಲ್ಲಿ ಇಲ್ಲಿ ನಡೆದು ಹೋಗಬೇಕಾದರೆ ಸಾಕು ಸಾಕಾಯಿತು. ಸೋಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಮಹಾಂತಯ್ಯನ ಗುಡಿ, ಅನಂತನಾಥ ಬಸದಿ ಮತ್ತು ಶಾಂತಿನಾಥ ಬಸದಿಗಳನ್ನು ನೋಡುವಷ್ಟರಲ್ಲಿಯೇ ಸಮಯ ಕಳೆದುಹೋಯಿತು. ಬಾಳೇಶ್ವರ ದೇವಾಲಯ, ಗೊಲ್ಲಾಳೇಶ್ವರ ದೇವಾಲಯ ಮತ್ತು ಇಸವಿ ೧೬೧೭ರಲ್ಲಿ ನಿರ್ಮಾಣಗೊಂಡಿರುವ ಜುಮ್ಮಾ ಮಸೀದಿಗಳನ್ನು ನೋಡಲು ಆಗಲಿಲ್ಲ.
ಹಿಂದೆ ’ಪುಲಿಗೆರೆ’ ಎಂದು ಕರೆಯಲಾಗುತ್ತಿದ್ದ ಊರು ಇಂದು ಲಕ್ಷ್ಮೇಶ್ವರ ಎಂದು ಬದಲಾಗಿದೆ. ಚಾಲುಕ್ಯ ಆಡಳಿತ ಕಾಲದಲ್ಲಿ ಲಕ್ಷ್ಮೇಶ್ವರ ಪ್ರಖ್ಯಾತ ಜೈನ ಧಾರ್ಮಿಕ ಕೇಂದ್ರವಾಗಿತ್ತು. ಆದಿಕವಿ ಪಂಪ ಪುಲಿಗೆರೆಯಲ್ಲಿ ಕಾವ್ಯರಚನೆ ಮಾಡಿದ್ದನೆಂದು ಶಾಸನಗಳಿಂದ ಮತ್ತು ಆತನ ಕಾವ್ಯಗಳಿಂದಲೇ ತಿಳಿದುಬರುತ್ತವೆ. ಚಾಲುಕ್ಯರಲ್ಲದೇ ಈ ನಾಡನ್ನು ರಾಷ್ಟ್ರಕೂಟರು ಮತ್ತು ಕದಂಬರು ಕೂಡಾ ಆಳಿದ್ದಾರೆ.
ಲಕ್ಷ್ಮೇಶ್ವರದಲ್ಲಿ ಪ್ರಸಿದ್ಧಿ ಪಡೆದಿರುವ ದೇವಾಲಯವೆಂದರೆ ಸೋಮೇಶ್ವರ ದೇವಾಲಯ. ಈ ದೇವಾಲಯವನ್ನು ೧೧ನೇ ಶತಮಾನದ ಕೊನೆಯಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರನನ್ನು ಕವಿಗಳಾದ ಹರಿಹರ ಮತ್ತು ರಾಘವಾಂಕ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸೂರ್ಯನ ಪ್ರಥಮ ಕಿರಣ ಗರ್ಭಗುಡಿಯಲ್ಲಿರುವ ಸೋಮೇಶ್ವರನ ಮೇಲೆ ಬೀಳುವಂತೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜೈನರ ಪ್ರಕಾರ ಇದು ಮೊದಲು ಜೈನ ಬಸದಿಯಾಗಿದ್ದು ನಂತರ ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ. ಆದರೆ ದೇವಾಲಯದ ರಚನೆಯನ್ನು ಮತ್ತು ಶಿಲ್ಪಕಲೆಯ ವೈಭವತೆಯನ್ನು ಗಮನಿಸಿದರೆ ಈ ಮಾತನ್ನು ನಂಬುವುದು ಬಹಳ ಕಷ್ಟ.
೩೨ ಕಂಬಗಳುಳ್ಳ ಮುಖಮಂಟಪ, ೪ ಕಂಬಗಳುಳ್ಳ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ಸೋಮೇಶ್ವರ ದೇವಾಲಯ ಏಕಕೂಟವಾಗಿದ್ದು ವಿಶಾಲವಾಗಿದೆ. ಅಂತರಾಳ ಮತ್ತು ಗರ್ಭಗುಡಿಗಳಲ್ಲಿ ನೆಲಕ್ಕೆ ಮಾರ್ಬಲ್ ಹಾಸುವ ಮೂಲಕ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಗರ್ಭಗುಡಿಯಲ್ಲಿ ಶಿವ ಮತ್ತು ಪಾರ್ವತಿಯರು ನಂದಿಯನ್ನೇರಿ ಕುಳಿತಿರುವ ಸುಂದರ ಕರಿಕಲ್ಲಿನ ಮೂರ್ತಿಯಿರುವುದು ಇಲ್ಲಿನ ವೈಶಿಷ್ಟ್ಯ. ಮುಂದಿನಿಂದ ನೋಡಿದರೆ ಪಾರ್ವತಿ ಶಿವನ ಹಿಂದೆ ಕುಳಿತಿರುವುದು ಕಾಣಬರುವುದಿಲ್ಲ. ಆಕೆ ಕಾಣಲೆಂದು ಮೂರ್ತಿಯ ಹಿಂದೆ ಕನ್ನಡಿಯೊಂದನ್ನು ಇರಿಸಲಾಗಿದೆ. ಈ ಮೂರ್ತಿ ಬಹಳ ಸುಂದರವಾಗಿದೆ. ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮತ್ತು ಅದಕ್ಕೆ ಮುಖ ಮಾಡಿ ನಂದಿಯಿದ್ದರೆ, ಇಲ್ಲಿ ಮಾತ್ರ ನಂದಿಯನ್ನೇರಿ ಲೋಕಸಂಚಾರಕ್ಕೆ ಹೊರಟಿರುವ ಭಂಗಿಯಲ್ಲಿ ಶಿವ ಮತ್ತು ಪಾರ್ವತಿ!
ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ಪ್ರವೇಶ ದ್ವಾರಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸೋಮೇಶ್ವರನಿಗಾಗಿ ನಾಟ್ಯಸೇವೆಗಳು ಇದೇ ಮುಖಮಂಟಪದಲ್ಲಿ(ಸಭಾಮಂಟಪ) ನಡೆಯುತ್ತಿದ್ದವು. ನವರಂಗಕ್ಕೂ ೩ ದ್ವಾರಗಳಿವೆ. ಇಕ್ಕೆಲಗಳಲ್ಲಿರುವ ಎರಡು ದ್ವಾರಗಳು ತಲಾ ೪ ಕಂಬಗಳುಳ್ಳ ಸುಂದರ ಕೆತ್ತನೆಗಳನ್ನೊಳಗೊಂಡಿರುವ ಮುಖಮಂಟಪಗಳನ್ನು ಹೊಂದಿವೆ.
ದೇವಾಲಯದ ಗರ್ಭಗುಡಿಯ ಮತ್ತು ಗೋಪುರದ ಹೊರಭಾಗದಲ್ಲಿರುವ ಚಾಲುಕ್ಯ ಶಿಲ್ಪಗಳು ಉತ್ತಮವಾಗಿವೆ. ಅಲ್ಲಲ್ಲಿ ಸಣ್ಣ ತೇಪೆ ಸಾರಿಸಿ ಪುರಾತತ್ವ ಇಲಾಖೆ ಮೂಲ ರೂಪ ಕಾದುಕೊಳ್ಳುವ ಪ್ರಯತ್ನ ಮಾಡಿದೆ.
ದೇವಾಲಯದ ಹಿಂಭಾಗದಲ್ಲಿ ಅದ್ಭುತವಾದ ಪುಷ್ಕರಿಣಿಯೊಂದಿದೆ. ಆಯತಾಕಾರದ ವಿಶಿಷ್ಟ ಮಾದರಿಯ ಪುಷ್ಕರಿಣಿಯಿದು. ಎರಡು ವರ್ಷದ ಹಿಂದಿನವರೆಗೂ ಈ ಪುಷ್ಕರಿಣಿ ಕಸಕಡ್ಡಿಗಳಿಂದ ತುಂಬಿಹೋಗಿ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಇಲ್ಲೊಂದು ಪುಷ್ಕರಿಣಿಯಿದೆ ಎಂದರೆ ನಂಬಲೂ ಅಸಾಧ್ಯವಾದ ಮಟ್ಟಿಗೆ ಸ್ಥಳೀಯರು ಇದನ್ನೊಂದು ಕಸದ ತೊಟ್ಟಿಯನ್ನಾಗಿ ಪರಿವರ್ತಿಸಿಕೊಂಡಿದ್ದರು. ಈಗ ಪುರಾತತ್ವ ಇಲಾಖೆ ಬಹಳಷ್ಟು ಶ್ರಮವಹಿಸಿ ಹಂತಹಂತವಾಗಿ ಪುಷ್ಕರಿಣಿಯನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದಿದೆ. ಈಗ ಪುಷ್ಕರಿಣಿ ಸ್ವಚ್ಛ ನೀರಿನಿಂದ ನಳನಳಿಸುತ್ತಿದೆ.
ಸೋಮೇಶ್ವರ ದೇವಾಲಯದ ನಂತರ ಅನಂತನಾಥ ಬಸದಿ. ಇದಕ್ಕೆ ಯಾವಾಗಲೂ ಬೀಗ ಜಡಿದಿರುತ್ತದೆ. ಅಲ್ಲೇ ಬದಿಯಲ್ಲಿ ಸಂದಿಗೊಂದಿಗಳಲ್ಲಿ ಸ್ವಲ್ಪ ದೂರ ನಡೆದು ಮನೆಯೊಂದರಿಂದ ಬೀಗ ಕೇಳಿ ಪಡಕೊಂಡು ನಾವಾಗಿಯೇ ಪ್ರಾಂಗಣದ ಮತ್ತು ಬಸದಿಯ ಬೀಗಗಳನ್ನು ತೆಗೆದು ವೀಕ್ಷಿಸಬೇಕು. ಇದೊಂದು ತ್ರಿಕೂಟ ಶೈಲಿಯ ಬಸದಿ.
ನಂತರದ ಸರದಿ ಶಾಂತಿನಾಥ ಬಸದಿಯದ್ದು. ಈ ತೀರ್ಥಂಕರರ ಲಾಂಛನ ಶಂಖವಾಗಿರುವುದರಿಂದ ಈ ಬಸದಿಯನ್ನು ಶಂಖ ಬಸದಿಯೆಂದೂ ಕರೆಯಲಾಗುತ್ತದೆ. ಇದು ಬಹಳ ಪುರಾತನ ಬಸದಿಯೆಂದು ಇತಿಹಾಸಕಾರರ ಅಭಿಪ್ರಾಯ. ಸುಮಾರು ೬ ಅಡಿ ಎತ್ತರದ ಅಧಿಷ್ಠಾನದ ಮೇಲೆ ಈ ಬಸದಿಯನ್ನು ನಿರ್ಮಿಸಲಾಗಿದೆ. ೧೬ ಕಂಬಗಳುಳ್ಳ ಚೌಕಾಕಾರದ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಈ ಬಸದಿ ಹೊಂದಿದೆ. ಈ ಬಸದಿಯಲ್ಲಿ ೩ ವಿಶೇಷಗಳಿವೆ.
ಒಂದನೇಯದು ಇಲ್ಲಿರುವ ಬಹಳ ಅಪರೂಪದ ’ಸಹಸ್ರಕೂಟ ಜಿನಬಿಂಬ’ ಮೂರ್ತಿ. ಸುಮಾರು ೫-೬ ಅಡಿ ಎತ್ತರವಿರುವ ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿ ಅಪ್ರತಿಮವಾಗಿದೆ. ಸಾವಿರ ತೀರ್ಥಂಕರರನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವುದರಿಂದ ಹಾಗೆ ಹೆಸರು. ಇದೊಂದು ಬಹಳ ಅಪರೂಪದ ಮೂರ್ತಿ. ಭಾರತದಲ್ಲಿ ಬೇರೆಲ್ಲೂ ಈ ತರಹದ ಮೂರ್ತಿ ಇಲ್ಲ. ಊರಿನ ಹೊಲವೊಂದರಲ್ಲಿ ದೊರಕಿದ ಈ ಮೂರ್ತಿಯನ್ನು ಬಸದಿಯ ಮುಖಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಶಾಂತಿನಾಥ ಬಸದಿಯಲ್ಲಿರುವ ಎರಡನೇ ವಿಶೇಷವೆಂದರೆ ೫ ತೀರ್ಥಂಕರರಿರುವ ’ಪಂಚ ಪರಮೇಷ್ಠಿ’ ಮೂರ್ತಿ. ಕರಿಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿಯಲ್ಲಿ ಇಬ್ಬರು ತೀರ್ಥಂಕರರನ್ನು ಕುಳಿತುಕೊಂಡಿರುವಂತೆ ಮತ್ತು ೩ ತೀರ್ಥಂಕರರನ್ನು ನಿಂತಿರುವ ಶೈಲಿಯಲ್ಲಿ ಸುಂದರವಾಗಿ ಕೆತ್ತಲಾಗಿದೆ.
ಮೂರನೇ ವಿಶೇಷವೆಂದರೆ ಮುಖಮಂಟಪದ ಹೊರಗೋಡೆಗಳಲ್ಲಿರುವ ಮಿಥುನ ಶಿಲ್ಪಗಳು. ಬಸದಿಗಳಲ್ಲಿ ಮಿಥುನ ಶಿಲ್ಪಗಳಿರುವುದು ವಿರಳ. ಬಸದಿಯ ಎದುರಿಗೆ ದೀಪಸ್ತಂಭವಿದೆ. ಈ ಶಂಖ ಬಸದಿಯಲ್ಲೇ ಕುಳಿತು ಪಂಪ ತನ್ನ ಪ್ರಸಿದ್ಧ ಕಾವ್ಯ ’ಆದಿ ಪುರಾಣ’ವನ್ನು ರಚಿಸಿದನೆಂದು ಹೇಳಲಾಗುತ್ತದೆ.
ಸ್ಥಳೀಯ ಜೈನ ಸಮುದಾಯದವರೇ ಈ ಎರಡೂ ಬಸದಿಗಳ ರಕ್ಷಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಂದು ಸಮುದಾಯ ಅನಂತನಾಥ ಬಸದಿಯನ್ನು ನೋಡಿಕೊಂಡರೆ ಇನ್ನೊಂದು ಸಮುದಾಯ ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುತ್ತದೆ. ಈಗಲೂ ಸುತ್ತಮುತ್ತಲಿನ ಹೊಲಗಳಲ್ಲಿ ಭಗ್ನಗೊಂಡಿರುವ ಮೂರ್ತಿಗಳು ಸಿಗುತ್ತಿರುತ್ತವೆ. ಅಂತಹ ವಿಗ್ರಹಗಳನ್ನು ’ಫೋಟೋ ತೆಗೆಯಬಾರದು’ ಎಂಬ ಷರತ್ತಿನೊಂದಿಗೆ ಬಸದಿ ನೋಡಿಕೊಳ್ಳುವ ಯುವಕ ನನಗೆ ತೋರಿಸಿದ. ಬಸದಿಯ ಹಿಂದೆಯೇ ೨೪ ತೀರ್ಥಂಕರರ ಪೀಠವೊಂದು ದೊರಕಿದೆ. ಪೀಠದ ಮೇಲಿನ ತೀರ್ಥಂಕರರ ಮೂರ್ತಿಗಳು ನಾಪತ್ತೆ.
ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುವ ಯುವಕನ ಹೆಸರು ನೇಮಿನಾಥ! ಈ ನೇಮಿನಾಥ ನನಗೆ ಲಕ್ಷ್ಮೇಶ್ವರದಲ್ಲಿರುವ ಇನ್ನುಳಿದ ದೇವಾಲಯಗಳ ಬಗ್ಗೆ ಅತ್ಯುತ್ಸಾಹದಿಂದ ಮಾಹಿತಿ ನೀಡತೊಡಗಿದ. ಸೋಮೇಶ್ವರ ದೇವಾಲಯ ಮತ್ತು ೨ ಬಸದಿಗಳನ್ನು ನೋಡುವ ಇರಾದೆ ಇದ್ದ ನನಗೆ ಈಗ ಲಕ್ಷ್ಮೇಶ್ವರದಲ್ಲೇ ನೋಡಲು ಇನ್ನಷ್ಟು ಸ್ಥಳಗಳಿವೆ ಎಂಬ ಮಾಹಿತಿ ದೊರಕಿತು. ಅದಾಗಲೇ ನಡೆದು ನಡೆದು ಸುಸ್ತಾಗಿದ್ದೆ. ಆದರೂ ಇನ್ನೆರಡು ದೇವಾಲಯಗಳನ್ನಾದರೂ ನೋಡೋಣವೆಂದು ಲಕ್ಷ್ಮಣೇಶ್ವರ ದೇವಾಲಯದೆಡೆ ಹೆಜ್ಜೆ ಹಾಕಿದೆ. ನೇಮಿನಾಥ ನನ್ನೊಡನೆ ಮಾರ್ಗದರ್ಶಿಯಾಗಿ ಬರಲು ಒಪ್ಪಿಕೊಂಡ. ಊರಿನಲ್ಲೊಂದು ೪೦೦ ವರ್ಷ ಹಳೇಯ ಮಸೀದಿಯಿರುವುದಾಗಿಯೂ ಅಲ್ಲಿನ ವಿಶೇಷವೆಂದರೆ ಕಲ್ಲಿನ ಸರಪಳಿಗಳು ಎಂದು ನೇಮಿನಾಥ ವಿವರಿಸತೊಡಗಿದ.
ಹಳೇ ಲಕ್ಷ್ಮೇಶ್ವರದಲ್ಲಿರುವುದು ಲಕ್ಷ್ಮಣೇಶ್ವರ ದೇವಾಲಯ. ಈ ದೇವಾಲಯವನ್ನು ’ಲಕ್ಷ್ಮಿಲಿಂಗನ ದೇವಾಲಯ’ವೆಂದೂ ಕರೆಯುತ್ತಾರೆ. ಈ ದೇವಾಲಯ ತ್ರಿಕೂಟಾಚಲ ಶೈಲಿಯಲ್ಲಿದ್ದು ಉತ್ತಮ ಶಿಲ್ಪಕಲೆಯನ್ನು ಹೊಂದಿದೆ. ಹೆಚ್ಚಿನೆಡೆ ಕೆತ್ತನೆಗಳು ನಶಿಸಿಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಲ್ಲಿ ಸಿಕ್ಕಿರುವ ಕೆತ್ತನೆಗಳ ತುಂಡುಗಳನ್ನು ದೇವಾಲಯದ ಹೊರಗೋಡೆಗೆ ಅಂಟಿಸಿದೆ. ಈ ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ದ್ವಾರಗಳನ್ನು ಮತ್ತು ೫೨ ಕಂಬಗಳನ್ನು ಹೊಂದಿದೆ. ಎಲ್ಲಾ ೩ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳ ಮತ್ತು ಸಾಮಾನ್ಯ ನವರಂಗ. ಗೋಪುರಗಳೆಲ್ಲಾ ಬಿದ್ದುಹೋಗಿವೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಶಿವಲಿಂಗವಿದೆ ಮತ್ತು ನಂದಿಯ ಮೂರ್ತಿ ಎಲ್ಲೂ ಇರಲಿಲ್ಲ.
ಅಲ್ಲಿಂದ ಮುಂದೆ ಸಿಗುವುದು ಮಹಾಂತಯ್ಯನ ತೋಟದಲ್ಲಿರುವ ದೇವಾಲಯ. ಈ ದೇವಾಲಯದ ಹೆಸರೇ ’ಮಹಾಂತಯ್ಯನ ಗುಡಿ’. ಅಷ್ಟೇನು ವಿಶೇಷವಿಲ್ಲದಿರುವ ಸಣ್ಣ ದೇವಾಲಯವಿದು. ಗರ್ಭಗುಡಿಯಲ್ಲಿ ನಂದಿಯ ಮೂರ್ತಿಯಿದೆ. ಬಾಳೇಶ್ವರ ಮತ್ತು ಗೊಲ್ಲಾಳೇಶ್ವರ ದೇವಾಲಯಗಳ ಬಗ್ಗೆ ನೇಮಿನಾಥ ಮಾಹಿತಿ ನೀಡಿದರೂ ಅಲ್ಲಿಗೆ ಮತ್ತು ಜುಮ್ಮಾ ಮಸೀದಿಗೆ ತೆರಳುವಷ್ಟು ಸಮಯ ನನ್ನಲ್ಲಿರಲಿಲ್ಲ. ಲಕ್ಷ್ಮೇಶ್ವರಕ್ಕೆ ಈ ಭೇಟಿ ಅಪೂರ್ಣವಾಗಿಯೇ ಉಳಿಯಿತು.