ಮಿರ್ಜಾನ ಕೋಟೆ ನಾನು ಸಣ್ಣಂದಿನಿಂದಲೂ ಭೇಟಿ ನೀಡುತ್ತಿದ್ದ ಸ್ಥಳವಾಗಿರುವುದರಿಂದ ಏನೋ ಸ್ವಲ್ಪ ಹೆಚ್ಚು ಇಷ್ಟವಾಗುವ ಸ್ಥಳ. ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಕೋಟೆಯಂತೂ ಸಣ್ಣದಾಗಿದ್ದರೂ ವಿಸ್ಮಯಕಾರಿಯಾಗಿದೆ. ನಗರದ ಶಿವಪ್ಪ ನಾಯಕನ ಕೋಟೆಗಿಂತಲೂ ಗಾತ್ರದಲ್ಲಿ ಸಣ್ಣದಿರುವ ಮಿರ್ಜಾನ ಕೋಟೆಯನ್ನು ಈಗ ಪುರಾತತ್ವ ಇಲಾಖೆ ಸ್ವಚ್ಛಗೊಳಿಸಿ, ಶಿಥಿಲಗೊಂಡಿದ್ದ ಕೋಟೆಯ ಗೋಡೆಗಳನ್ನು ಮೊದಲಿನ ರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದೆ.
ಈ ಕೋಟೆಯಲ್ಲಿ ಹಲವಾರು ಬಾವಿಗಳಿದ್ದ ನೆನಪು. ಈಗ ಕೇವಲ ೩ ಇವೆ. ಉಳಿದವುಗಳು ಏನಾದವು ಎಂದೇ ತಿಳಿಯಲಿಲ್ಲ. ೧೯೯೪ ಮೇ ತಿಂಗಳಲ್ಲಿ ಇಲ್ಲಿಗೆ ಬಂದ ಬಳಿಕ ನಂತರ ಮತ್ತೆ ಭೇಟಿ ನೀಡಿದ್ದು ೧೨ ವರ್ಷಗಳ ಬಳಿಕ ೨೦೦೬ ಮಾರ್ಚ್ ತಿಂಗಳಲ್ಲಿ.
೧೯೯೪ರ ತನಕದ ಹತ್ತಾರು ಭೇಟಿಗಳ ನೆನಪು:
ಕೋಟೆಯ ಸುತ್ತಲೂ ಇರುವ ಕಂದಕ ದಟ್ಟ ಗಿಡಗಂಟಿಗಳಿಂದ ತುಂಬಿಹೋಗಿತ್ತು. ಕೋಟೆಯೊಳಗೆ ತೆರಳಲು ಒಂದೆರಡು ಕಡೆ ಒಬ್ಬರು ನಡೆದುಹೋಗುವಷ್ಟು ಅಗಲದ ಕಾಲುದಾರಿಗಳಿದ್ದವು. ಈ ಕಾಲುದಾರಿಗಳನ್ನು ದನಗಳು ಮತ್ತು ಅವುಗಳನ್ನು ಹುಡುಕಲು ಹಳ್ಳಿಯ ಹುಡುಗರು ಬಳಸುತ್ತಿದ್ದರು. ನಿರ್ಜನ ಪ್ರದೇಶದ ಅವಶ್ಯಕತೆಯಿರುವ ಪ್ರೇಮಿಗಳು, ಅನೈತಿಕ ಚಟುವಟಿಕೆ ನಡೆಸುವವರು ಮುಂತಾದವರ 'ಅಡ್ಡಾ' ಕೂಡಾ ಆಗಿತ್ತು ಮಿರ್ಜಾನ ಕೋಟೆ. ಕೋಟೆಯೊಳಗೆ ಎಲ್ಲೆಲ್ಲೂ ಪೊದೆಗಳು, ಕುರುಚಲು ಗಿಡಗಳು ಮತ್ತು ಸಾರಾಯಿ ಬಾಟ್ಲಿಗಳ ಒಡೆದ ಚೂರುಗಳು.
ಕೋಟೆಯೊಳಗಿನ ಕಾಲುದಾರಿಗಳು ಪೊದೆಗಳ ನಡುವೆ ಅಲ್ಲಲ್ಲಿ ನುಸುಳುತ್ತಿದ್ದರಿಂದ ಕೋಟೆ ಬಹಳ ದೊಡ್ಡದಿದೆ ಎಂಬ ಭಾವನೆಯನ್ನು ಹುಟ್ಟುಹಾಕುತ್ತಿದ್ದವು. ಈಗ ಅಬ್ಬಬ್ಬಾ ಎಂದರೆ ೧೦ ನಿಮಿಷಗಳಲ್ಲಿ ಕೋಟೆಯ ಒಳಗಡೆ ಗೋಡೆಯ ಸುತ್ತಲೂ ಒಂದು ಸುತ್ತು ಹಾಕಿ ಮುಗಿಸಬಹುದು. ಆದರೆ ಆಗ ಪೊದೆ, ವೃಕ್ಷಗಳಿಂದ ತುಂಬಿದ್ದ ಕೋಟೆಯ ಒಳಾಂಗಣ ಸಣ್ಣ ರಕ್ಷಿತಾರಣ್ಯದಂತೆ ತೋರುತ್ತಿತ್ತು. 'ಕೋಟೆಗೆ ಹೋಗ್ತೀರಾ... ಹುಷಾರು' ಎಂದು ಹಿರಿಯರು ಎಚ್ಚರಿಸದೇ ಇರುತ್ತಿರಲಿಲ್ಲ. ಹಾವುಗಳು ಸ್ವೇಚ್ಛೆಯಿಂದ ಹರಿದಾಡುವ ತಾಣವಾಗಿತ್ತು. ಆದರೂ ನಮಗೆ ಕೋಟೆಯಲ್ಲಿ ಅದೇನೋ ಆಕರ್ಷಣೆ. ಕೋಟೆಯ ಶಿಥಿಲ ಬುರುಜುಗಳನ್ನು ಹತ್ತಿ, ಅನತಿ ದೂರದಲ್ಲಿ ಹರಿಯುವ ಅಘನಾಶಿನಿಯ ಸುಂದರ ದೃಶ್ಯವನ್ನು ಆನಂದಿಸಲು ಮನಸ್ಸು ಯಾವಾಗಲೂ ಹಾತೊರೆಯುತ್ತಿತ್ತು.
ಕೋಟೆಯೊಳಗಿರುವ ದೊಡ್ಡ ಬಾವಿ ಆಗಲೂ ಆಕರ್ಷಕವಾಗಿತ್ತು. ಈ ಬಾವಿ ಎಷ್ಟು ಬಲಿಗಳನ್ನು ಪಡೆದಿದೆಯೋ ಅದಕ್ಕೆ ಗೊತ್ತು. ಕೋಟೆಯೊಳಗೆ ತೆರಳಬೇಡಿ, ದೆವ್ವ, ಭೂತ... ಅತೃಪ್ತ ಆತ್ಮಗಳು ಅಲೆದಾಡುತ್ತಿರುತ್ತವೆ ಎಂದು ನಮ್ಮನ್ನು ಮಿರ್ಜಾನದ ಸಂಬಂಧಿಕರು ಹೆದರಿಸುತ್ತಿದ್ದರು. ಈ ಬಾವಿಯಲ್ಲಿ ಪ್ರಾಣ ಕಳಕೊಂಡವರಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ. ಮಿರ್ಜಾನದಲ್ಲಿ ಆತ್ಮಹತ್ಯೆ ಮಾಡಲು ಎಲ್ಲರಿಗೆ ಸಿಗುತ್ತಿದ್ದ ಬಾವಿ ಇದೇ. ಕೋಟೆಯೊಳಗೆ ಬಂದು ಬಾವಿಯೊಳಗೆ ಹಾರಿಬಿಟ್ಟರೆ ಬದುಕುವ ಚಾನ್ಸೇ ಇಲ್ಲ. ಯುವತಿಯರ ಮಾನಭಂಗ ಮಾಡಿ ಕೊಲೆಗೈದು, ಶವವನ್ನು ಈ ಬಾವಿಯೊಳಗೆ ಬಿಸಾಡಿದ ಘಟನೆಗಳೂ ನಡೆದಿವೆ. ಆಗೆಲ್ಲಾ ಕೋಟೆಯೊಳಗೆ ಕಾಲಿಟ್ಟರೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿಬಿಡಬಹುದಾಗಿದ್ದ ಪೊದೆಗಳು, ವೃಕ್ಷಗಳು ಇತ್ಯಾದಿಗಳನ್ನೊಳಗೊಂಡ ದಟ್ಟ ಕಾಡಿನ ರಚನೆಯಿತ್ತು. ಆದ್ದರಿಂದ ಆ ಕಡೆ ಹೆಚ್ಚಿನವರು ಸುಳಿಯುತ್ತಿರಲಿಲ್ಲ. ತೀರಾ ಇತ್ತೀಚೆಗೆ ಅಂದರೆ ೨೦೦೫ರಲ್ಲಿ ಹೊನ್ನಾವರದ ಹುಡುಗಿಯೊಬ್ಬಳ ಶವ ಈ ಬಾವಿಯಲ್ಲಿ ತೇಲುತ್ತಿತ್ತು.
೧೯೮೭ರ ಬೇಸಗೆ ರಜೆಯಲ್ಲಿ ಕುಮಟಾದಲ್ಲಿ ಅರುಣಾಚಲನ ಮನೆಗೆ ಬಂದ ನಾವು ಎಂದಿನಂತೆ ಮಿರ್ಜಾನದ ಸಂಬಂಧಿಕರ ಮನೆಗೆ ತೆರಳಿದೆವು. ಆದರೆ ಕೋಟೆಯೊಳಗೆ ಅನೈತಿಕ ಚಟುವಟಿಕೆಗಳು ಮತ್ತು ಕೊಲೆಗಳು ಸ್ವಲ್ಪ ಹೆಚ್ಚೇ ಆಗುತ್ತಿದ್ದರಿಂದ ಮಿರ್ಜಾನದ ಸಂಬಂಧಿಕರು ನಮ್ಮನ್ನು (ನಾನು, ನನ್ನ ತಮ್ಮ ರೋಶನ್ ಮತ್ತು ಸಂಬಂಧಿ ಅರುಣಾಚಲ) ಕೋಟೆಯೆಡೆ ತೆರಳಲು ಬಿಡುತ್ತಿರಲಿಲ್ಲ. ಕೋಟೆಯ ಸಮೀಪದಲ್ಲೇ ಹಳ್ಳವೊಂದು (ಮೇಲಿನ ಚಿತ್ರ) ಹರಿಯುತ್ತದೆ. ಅಲ್ಲಿ ಸ್ನಾನಕ್ಕೆ ಯಾವಾಗಲೂ ಹೋಗುತ್ತಿದ್ದೆವು. ಹಳ್ಳದಲ್ಲಿ ಅಂಗಾತ ಮಲಗಿ ಕೋಟೆಯ ಗೋಡೆಗಳ ಸೌಂದರ್ಯವನ್ನು ವೀಕ್ಷಿಸುತ್ತಾ ಬಹಳ ಆನಂದ ಪಡುತ್ತಿದ್ದೆವು. ಅಂದು ಹಳ್ಳದಲ್ಲಿ ಸ್ನಾನ ಮಾಡುತ್ತಿರುವಾಗ ನಮ್ಮ ಸ್ವಲ್ಪ ಪರಿಚಯವಿದ್ದ ಅಲ್ಲಿನ ಹುಡುಗನೊಬ್ಬ, ಕೋಟೆಯೊಳಗೆ ತೆರಳಲು ಕಳ್ಳ ದಾರಿಯನ್ನು ಕಂಡುಹುಡುಕಿರುವೆನೆಂದು ಹೇಳಿದಾಗ ನೋಡೇ ಬಿಡೋಣವೆಂದು ಹೊರಟೆವು.
ನಾವೆಂದೂ ಭೇಟಿ ನೀಡದ ಕೋಟೆಯ ಯಾವುದೋ ಪಾರ್ಶ್ವದಲ್ಲಿ ಕಂದಕದಲ್ಲಿ ಹುಲುಸಾಗಿ ಬೆಳೆದಿದ್ದ ಗಿಡಗಂಟಿಗಳ ನಡುವೆ ದಾರಿಮಾಡಿಕೊಂಡು ಮುನ್ನಡೆದ ಆತನನ್ನು ಹಿಂಬಾಲಿಸಿದೆವು. ಸ್ವಲ್ಪ ಮುಂದೆ ಕೋಟೆಯ ಹೊರಗೋಡೆಯಲ್ಲಿ ಒಂದು ಸಣ್ಣ ಕಿಂಡಿ. ಕೂತುಕೊಂಡು, ಕುಕ್ಕರಗಾಲಲ್ಲಿ ಒಬ್ಬ ಪ್ರವೇಶಿಸಬಹುದಾದಷ್ಟು ದೊಡ್ಡದಿದ್ದ ಈ ಕಿಂಡಿಯೊಳಗೆ ನಿಧಾನವಾಗಿ ಪ್ರವೇಶಿಸಿದೆವು. ಬಾವಲಿಗಳಿಂದ ತುಂಬಿದ್ದ ಮಂದ ಬೆಳಕಿನ ಸುರಂಗದಂತೆ ಇದ್ದ ದಾರಿ. ಒಳ ಹೊಕ್ಕ ಕೂಡಲೇ ಬಲಕ್ಕೆ ಮೇಲೆ ತೆರಳಲು ಮೆಟ್ಟಿಲುಗಳು. ಮುಂದೆ ನೇರಕ್ಕೆ ಎರಡೇ ಹೆಜ್ಜೆ ಇಟ್ಟರೆ ಬಾವಿ! ೩ನೇ ಹೆಜ್ಜೆ ಇಟ್ಟರೆ ಸೀದಾ ಬಾವಿಯೊಳಗೆ ಬೀಳುವಂತಿತ್ತು ಅಲ್ಲಿನ ದಾರಿ. ಬಾವಿಯ ಮಧ್ಯಕ್ಕೆ ನಾವು ಬಂದಿದ್ದೆವು. ಬಾವಿಯಲ್ಲಿ ನೀರಿನ ಮಟ್ಟವನ್ನು ಈ ಮಟ್ಟಕ್ಕೆ ಕಾಯ್ದಿರಿಸಲು ಈ ಕಿಂಡಿಯನ್ನು ನಿರ್ಮಿಸಿರಬೇಕು. ಹೆಚ್ಚುವರಿ ನೀರು ಈ ಕಿಂಡಿಯಿಂದ ಹೊರಹರಿದು ಕಂದಕಕ್ಕೆ ಸೇರಿಕೊಳ್ಳುತ್ತಿತ್ತು. ಮೆಟ್ಟಿಲುಗಳನ್ನೇರಿ ಮೇಲಕ್ಕೆ ಬಂದು ಬಾವಿಯೊಳಗೆ ಇಣುಕಿ ನೋಡಿದೆವು. ಆದರೆ ಬಾವಿಯ ಗೋಡೆಯಲ್ಲಿ ದಟ್ಟವಾಗಿ ಬೆಳೆದಿದ್ದ ಪೊದೆಗಳಿಂದ ಆ ಕಿಂಡಿ ಕಾಣಿಸುತ್ತಿರಲಿಲ್ಲ.
ನಾವು ಕೋಟೆಯೊಳಗೆ ತೆರಳಿದ ವಿಷಯ ನಂತರ ಮನೆಯಲ್ಲಿ ತಿಳಿದು ನಮಗಷ್ಟು ಬೈಗುಳ. ಅದಾದ ನಂತರ ಆ ಸಂಬಂಧಿಕರ ಮನೆಗೇ ಹೋಗಬಾರದೆಂದು ನಾವು ತೀರ್ಮಾನಿಸಿದ್ದೆವು. ಆದರೆ ಕೋಟೆಗೆ ಮತ್ತೆ ಮತ್ತೆ ತೆರಳುವ ತವಕ. ಮುಂದಿನ ವರ್ಷದಿಂದ ಕೋಟೆಗೆ ನಾವು ಕುಮಟಾದಿಂದ ಬೆಳಗ್ಗೆ ತೆರಳಿ ಸಂಜೆ ಹೊತ್ತಿಗೆ ಹಿಂತಿರುಗಿ ಬರತೊಡಗಿದೆವು. ಮಿರ್ಜಾನಕ್ಕೆ ಬೇಕಾದಷ್ಟು ಬಸ್ಸುಗಳಿದ್ದರೂ, ನಾವು ದೋಣಿಯಲ್ಲಿ ಅಘನಾಶಿನಿಯನ್ನು ದಾಟಿ ಆ ಕಡೆ ಮಿರ್ಜಾನ ತಲುಪಿ ಅರ್ಧ ಗಂಟೆ ನಡೆದರೆ ಕೋಟೆ.
ಈಗ:
೧೨ ವರ್ಷಗಳ ನಂತರ ತೆರಳಿದಾಗ ನಂಬಲಿಕ್ಕೆ ಅಸಾಧ್ಯವಾದಷ್ಟು ಮಟ್ಟಿಗೆ ಮಿರ್ಜಾನ ಕೋಟೆ ಬದಲಾಗಿತ್ತು. ಕಂದಕ ಸ್ವಚ್ಛ. ಕೋಟೆಯೂ ಸ್ವಚ್ಛ. ಆಗ ನಾವು ಕಿಂಡಿಯಿಂದ ಒಳಗೆ ನುಗ್ಗಿದ ಬಾವಿಯ ಕುರುಹೇ ಇಲ್ಲ. ಈಗಿರುವ ೩ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಬಿದ್ದುಹೋಗಿದ್ದ ಕೋಟೆಯ ಗೋಡೆಗಳನ್ನು ಪುನ: ನಿರ್ಮಿಸಲಾಗಿದೆ. ಬುರುಜುಗಳು ಹಾಗೇ ಇದ್ದವು. ಅಘನಾಶಿನಿ ಅನತಿ ದೂರದಲ್ಲಿ ಮೊದಲಿನಂತೇ ಸುಂದರ ದೃಶ್ಯವನ್ನು ಕಣ್ಣಿಗೆ ನೀಡುತ್ತಾ ಹರಿಯುತ್ತಿದ್ದಾಳೆ. ಕೋಟೆಯ ಒಳಗೆ ಈಗ ಒಂದೇ ಮರವಿದೆ. ಉಳಿದೆಲ್ಲವನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಮೊದಲು ಬುರುಜನ್ನು ಏರಿದರೆ ಮಾತ್ರ ಕಾಣಿಸುತ್ತಿದ್ದ ಅಘನಾಶಿನಿ ಈಗ ಕೋಟೆಯೊಳಗಿನಿಂದಲೇ ಗೋಚರಿಸುತ್ತಾಳೆ. ಪುರಾತತ್ವ ಇಲಾಖೆ ಈಗ ಉತ್ಖನನ ನಡೆಸಿದ್ದು, ಸಿಕ್ಕಿರುವ ಕೆಲವು ದೇವರ ವಿಗ್ರಹಗಳನ್ನು ಕೋಟೆಯೊಳಗಿರುವ ಮರದಡಿ ಇರಿಸಲಾಗಿದೆ. ದರ್ಬಾರ್-ಹಾಲ್-ನ ನೆಲಗಟ್ಟು ಅದರ ಸಂಪೂರ್ಣ ರಚನೆಯನ್ನು ಕಣ್ಣ ಮುಂದಿಡುತ್ತದೆ. ಆಂಗ್ಲ ಅಕ್ಷರ ಮಾಲಿಕೆಯ 'ಯು' ಆಕಾರದಲ್ಲಿರುವ ದರ್ಬಾರ್ ಹಾಲ್, ಇಕ್ಕೆಲಗಳಲ್ಲಿ ಆಸನಗಳ ರಚನೆಯನ್ನು ಹೊಂದಿದ್ದು, ನಡುವಿನಲ್ಲಿ ದರ್ಬಾರ್ ನಡೆಸುವವರು ಕುಳಿತುಕೊಳ್ಳಲು ಯೋಗ್ಯ ಎತ್ತರದ ಮುಂಗಟ್ಟು ಇರುವ ರಚನೆ ಹೊಂದಿದೆ.
ಸ್ನಾನದ ಮನೆಯ ನೆಲವನ್ನು ನೀರು ಹರಿಯಲು ಸುಲಭವಾಗುವಂತೆ ಇಳಿಜಾರಾಗಿ ಮಾಡಲಾಗಿರುವುದು ಗಮನಿಸಬೇಕಾದ್ದು. ಸ್ನಾನದ ಮನೆಯಿಂದ ನೀರು ಹರಿದುಹೋಗಲು ಮಾಡಿರುವ ವ್ಯವಸ್ಥೆಯೂ ಸುಂದರವಾಗಿದೆ. ಅಲ್ಲೊಂದು ನೆಲಮಾಳಿಗೆಯಿತ್ತು. ಒಂದೆರಡು ಹೊಂಡಗಳಿದ್ದವು. ಇರುವ ೩ ಬಾವಿಗಳಲ್ಲಿ ೨ ದೊಡ್ಡದಿದ್ದರೆ ಒಂದು ಸಣ್ಣದಿದೆ. ಬಾವಿಗಳ ರಚನೆ ಮೆಚ್ಚಲೇಬೇಕು. ಇರುವ ಒಂದು ಗೋಪುರದಲ್ಲಿ ಧ್ವಜಸ್ತಂಭವನ್ನು ನಿರ್ಮಿಸಿ ಮಿರ್ಜಾನ ಗ್ರಾಮ ಪಂಚಾಯತ್ ಧ್ವಜ ಗೋಪುರವನ್ನಾಗಿ ಪರಿವರ್ತಿಸಿಕೊಂಡಿದೆ.
ಪುರಾತತ್ವ ಇಲಾಖೆಯ ಅಂತರ್ಜಾಲ ತಾಣದಿಂದ ತಿಳಿದುಬಂದದ್ದು:
ಮಿರ್ಜಾನ ಕೋಟೆಯನ್ನು ಇಸವಿ ೧೬೦೮ - ೧೬೪೦ ರ ನಡುವೆ ನಿರ್ಮಿಸಲಾಗಿದೆ. ಇಸವಿ ೨೦೦೦ದಿಂದ ಇಲ್ಲಿ ಉತ್ಖನನವನ್ನು ಆರಂಭಿಸಲಾಗಿದೆ. ದರ್ಬಾರ್ ಹಾಲ್ ಕೋಟೆಯ ನಡುವೆ ಕಂಡುಬಂತು. ದರ್ಬಾರ್ ಹಾಲ್-ನ ಪಕ್ಕದಲ್ಲೇ ವೃತ್ತಾಕಾರದ ನೀರು ಶೇಖರಿಸುವ ಹೊಂಡವೊಂದು ಕಂಡುಬಂದಿದೆ. ಇದರ ಬಳಿಯಲ್ಲೇ ಇನ್ನೊಂದು ನೀರು ಶೇಖರಿಸುವ ಹೊಂಡ ಸಿಕ್ಕಿದ್ದು ಮತ್ತು ಇಲ್ಲಿಂದ ನೀರನ್ನು ಸಾಗಿಸಲು ಮಾಡಿರುವ ಸಣ್ಣ ಸಣ್ಣ ಮೋರಿಗಳ ರಚನೆಯೂ ಸಿಕ್ಕಿದೆ. ಪೋರ್ಚುಗೀಸ್ ವೈಸ್-ರಾಯ್ ೧೬೫೨ರಲ್ಲಿ ಬಿಡುಗಡೆ ಮಾಡಿರುವ ಚಿನ್ನದ ನಾಣ್ಯವೊಂದು ಇಲ್ಲಿ ದೊರಕಿದೆ. ಉತ್ಖನನ ಮಾಡುವಾಗ ದೊರಕಿರುವ ಉಳಿದ ವಸ್ತುಗಳೆಂದರೆ ತುಪಾಕಿಗೆ ಬಳಸುವ ಸಿಡಿಗುಂಡು, ಚೈನಾ ಶೈಲಿಯ ಪಾತ್ರೆಗಳು ಮತ್ತು ಮುಸ್ಲಿಮ್ ಬರಹಗಳು.