ಯೋಜನೆಯೊಂದರ ಅನುಷ್ಠಾನದ ಸಲುವಾಗಿ ನಿರಾಶ್ರಿತರಾದವರಿಗಾಗಿ ನಿರ್ಮಿಸಿದ ಈ ಊರಿಗೆ, ಜಲಧಾರೆಯನ್ನೊಂದು ನೋಡಲು, ಅಗಸ್ಟ್ ತಿಂಗಳ ಅದೊಂದು ದಿನ ಮಧ್ಯಾಹ್ನ ಸುಮಾರು ೩ ಗಂಟೆಗೆ ಆಗಮಿಸಿದೆವು. ಹನಿಹನಿಯಾಗಿ ಬೀಳುತ್ತಿದ್ದ ಮಳೆಯ ನಡುವೆ ಊರಿನ ದೇವಾಲಯದ ಬಳಿ ನಮ್ಮ ವಾಹನ ನಿಲ್ಲಿಸಿದೆವು.
ಸಮೀಪದ ತಾಲೂಕು ಕೇಂದ್ರದಿಂದ ದಿನಕ್ಕೆ ಮೂರ್ನಾಲ್ಕು ಸಲ ರಾಜ್ಯ ಸಾರಿಗೆ ಬಸ್ಸು, ಈ ಊರಿಗಿರುವ ರಿಂಗ್‍ರೋಡಿನಲ್ಲಿ ಸಂಚರಿಸಿ, ಊರಿಗೂಂದು ಪ್ರದಕ್ಷಿಣೆ ಹಾಕಿ ಹೋಗುತ್ತದೆ. ಈ ರಿಂಗ್ ರೋಡಿನ ನಡುವೆಲ್ಲಾ ಒಂದಷ್ಟು ರಸ್ತೆಗಳು. ಈ ಎಲ್ಲಾ ರಸ್ತೆಗಳ ನಡುವೆ ಪ್ಲ್ಯಾನ್ ಮಾಡಿ ನಿರ್ಮಿಸಲಾಗಿರುವ ಮನೆಗಳು.
ರಸ್ತೆಯ ಉದ್ದಕ್ಕೂ ಒಬ್ಬನೇ ಒಬ್ಬ ಕಾಣಲಿಲ್ಲ. ಸ್ಮಶಾನ ಮೌನ. ನಿರ್ಜನ ರಸ್ತೆಗಳು. ನನ್ನ ಸಹಚಾರಣಿಗರು ಊಟ ಮಾಡುತ್ತಿರುವಾಗ, ರಸ್ತೆಯುದ್ದಕ್ಕೂ ನಾನೊಬ್ಬನೇ ಯಾರಾದರೂ ಸಿಗುವರೇ ಎಂದು ಸುಮಾರು ೨೦ ಮನೆಗಳನ್ನು ದಾಟಿ ರಿಂಗ್ ರೋಡ್ ಸಿಗುವವರೆಗೂ ನಡೆದೆ. ಒಂದೇ ಒಂದು ಮನೆಯ ಮುಂದೆ ಯಾವುದೇ ಚಟುವಟಿಕೆ ಕಾಣಬರಲಿಲ್ಲ.
ನಂತರ ಇನ್ನೊಂದು ರಸ್ತೆಯಲ್ಲಿ ನಡೆಯುತ್ತಾ, ಸುಮಾರು ೨೫ ಮನೆಗಳನ್ನು ದಾಟಿ ರಿಂಗ್ ರೋಡಿನ ಇನ್ನೊಂದು ತುದಿಗೆ ಬಂದು ಮುಟ್ಟಿದರೂ ಯಾರೂ ಕಾಣಲಿಲ್ಲ. ಎಲ್ಲಾ ಮನೆಗಳಲ್ಲೂ ಮೌನ. ಒಂದು ನಾಯಿ ಅಥವಾ ದನ ಕೂಡಾ ಕಾಣಬರಲಿಲ್ಲ. ನಾನು ನಡೆಯಲು ಆರಂಭಿಸಿ ಸುಮಾರು ಇಪ್ಪತ್ತೈದು ನಿಮಿಷಗಳು ಕಳೆದಿದ್ದವು. ಇಲ್ಲಿಂದ ದೂರದಲ್ಲಿ ಬೆಟ್ಟಗಳ ನಡುವೆ ಜಲಧಾರೆ ಧುಮುಕುತ್ತಿರುವುದು ನನಗೆ ಕಾಣಿಸುತ್ತಿತ್ತು.
ಆ ರಿಂಗ್ ರೋಡಿನಲ್ಲಿ ನಿಂತು, ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ, ಆ ಹನಿಹನಿ ಮಳೆಯ ಸದ್ದಿನ ನಡುವೆ ಬಹಳ ಇಂಪಾದ ಸದ್ದೊಂದು ಕೇಳಿಬಂತು. ನಮ್ಮ ರಾಜ್ಯ ಸಾರಿಗೆ ಬಸ್ಸಿನ, ಗೇರು ಬದಲಾಯಿಸುವಾಗ ಉಂಟಾಗುವ ಘರ್ಜನೆ ಸಮಾನ ಸದ್ದು, ಆ ತಲೆಚಿಟ್ಟು ಹಿಡಿಸುತ್ತಿದ್ದ ಮೌನವನ್ನು ಸೀಳಿ ಬಂದು ನನ್ನ ಕಿವಿಗಳಲ್ಲಿ ಮಾರ್ದನಿಸಿತು.
ಇನ್ನೊಂದು ನಿಮಿಷದ ಬಳಿಕ ಬಸ್ಸು ನನ್ನ ಬಳಿಯೇ ಬಂದು ನಿಂತಿತು. ಮಧ್ಯವಯಸ್ಕ ಮಹಿಳೆಯೊಬ್ಬಳು ಬಸ್ಸಿನಿಂದ ಇಳಿದಳು. ಆಕೆಯ ಬಳಿ ಜಲಧಾರೆಯ ಬಗ್ಗೆ ಕೇಳಿದೆ. ವಾಚಾಳಿಯಾಗಿದ್ದ ಆಕೆ, ಎಲ್ಲಿ ಹೋಗಬೇಕು, ಯಾವ ದಾರಿಯಾಗಿ ಬರಬೇಕು, ವಾಹನ ಎಲ್ಲಿ ನಿಲ್ಲಿಸಬೇಕು, ಎಷ್ಟು ನಡೆಯಬೇಕು, ಕವಲೊಡೆದ ದಾರಿಯಲ್ಲಿ ಯಾವ ದಾರಿಯಲ್ಲಿ ಸಾಗಬೇಕು ಮತ್ತು ಯಾಕೆ ಆ ದಾರಿಯಾಗಿ ಸಾಗಬೇಕು, ಎಷ್ಟು ದೂರ ನಡೆಯಬೇಕು, ಜಲಧಾರೆ ಎಷ್ಟು ಎತ್ತರವಿದೆ, ಇವೆಲ್ಲಾ ಮಾಹಿತಿಯನ್ನು ಒಂದೇ ಉಸಿರಿಗೆ ಹೇಳಿದಳು. ಆಕೆಯ ಪ್ರಕಾರ, ಜಲಧಾರೆಯನ್ನು ನೋಡಲು ನಾವು ಊರನ್ನು ಪ್ರವೇಶಿಸುವ ಅವಶ್ಯಕತೆಯೇ ಇಲ್ಲ. ರಿಂಗ್‍ರೋಡಿನಲ್ಲೇ ಬಂದು ಅಲ್ಲೊಂದೆಡೆ ತಿರುವು ಪಡೆದರಾಯಿತು. ಅದಾಗಲೇ ಸಮಯ ನಾಲ್ಕು ದಾಟಿದ್ದರಿಂದ ಇಂದು ತೆರಳಲು ನಿಮಗೆ ಸಾಧ್ಯವಿಲ್ಲ ಎಂದು ಆಕೆ ತಿಳಿಸಿದಳು.
ಅಷ್ಟರಲ್ಲಿ ನನ್ನ ಸಹಚಾರಣಿಗರು ನನ್ನನ್ನು ಹುಡುಕುತ್ತಾ ಅಲ್ಲಿ ಬಂದರು. ಅವರಿಗೂ ಈ ಊರಲ್ಲಿ ಜನವಸತಿ ಇದೆಯೇ ಎಂಬ ಸಂಶಯ ಕಾಡಲಾರಂಭಿಸಿತ್ತು. ಈ ಬಗ್ಗೆ ಆ ಮಹಿಳೆಯನ್ನು ಕೇಳಿದರೆ ಆಕೆ ನಕ್ಕು, ಆ ಮೌನದ ಹಿಂದಿರುವ ಕಾರಣವನ್ನು ತಿಳಿಸಿದಳು. ಪುನರ್ವಸತಿಗೆಂದು ನಿಗದಿಪಡಿಸಿದ ಸ್ಥಳ ಅದೇಕೋ ಬಹಳಷ್ಟು ನಿರಾಶ್ರಿತರಿಗೆ ಇಷ್ಟವಾಗಲಿಲ್ಲ. ಕೆಲವರು ಇಲ್ಲಿಗೆ ಬರಲೊಪ್ಪದೆ ಬೇರೆಡೆ ತೆರಳಿದರೆ, ಹೆಚ್ಚಿನವರು ಸ್ವಲ್ಪ ಸಮಯ ಇಲ್ಲಿ ವಾಸಿಸಿ, ತಮ್ಮ ಹೆಸರಿಗೆ ಪಡೆದ ಮನೆಯನ್ನು ಹಾಗೇ ಬಿಟ್ಟು, ಬೇರೆಡೆ ನೆಲೆಸಿದ್ದಾರೆ. ಈ ಊರಿನಲ್ಲಿ ಈ ನಿರಾಶ್ರಿತರ ಕಾಲೊನಿ ನಿರ್ಮಾಣಗೊಳ್ಳುವ ಮೊದಲಿನಿಂದಲೂ ವಾಸಿಸುತ್ತಿರುವ ಜನರೂ ಇದ್ದಾರೆ. ಅವರ ಮನೆಗಳೆಲ್ಲಾ ರಿಂಗ್‍ರೋಡಿನ ಹೊರಗೆ ಇವೆ. ರಿಂಗ್‍ರೋಡಿನ ವರ್ತುಲದೊಳಗೆ ನಿರಾಶ್ರಿತರು, ಹೊರಗೆ ಮೂಲವಾಸಿಗಳು.
ಮುಂದಿನ ವರ್ಷ ಮತ್ತೆ ಅಗಸ್ಟ್ ತಿಂಗಳ ಅದೊಂದು ದಿನ ಮುಂಜಾನೆಯೇ ಈ ಊರಿನತ್ತ ಹೊರಟೆವು. ಈ ಬಾರಿ ಮುಖ್ಯ ರಸ್ತೆಯಿಂದ ನೇರವಾಗಿ ರಿಂಗ್‍ರೋಡಿಗೇ ತಿರುಗಿದೆವು. ಒಂದೆರಡು ಕಿಮಿ ದೂರ ಸಾಗಿದೊಡನೇ ದೂರದಲ್ಲಿ ಜಲಧಾರೆ ಕಾಣಿಸಿತು, ಹಾಗೇ ಮುಂದುವರಿದು ಆ ಮಹಿಳೆ ನೀಡಿದ ಕರಾರುವಾಕ್ ಮಾಹಿತಿಯ ಪ್ರಕಾರ ವಾಹನವನ್ನು ಒಂದೆಡೆ ನಿಲ್ಲಿಸಿ ಚಾರಣ ಆರಂಭಿಸಿದೆವು.
ಬಯಲುಪ್ರದೇಶದ ನಡುವೆ ನಮ್ಮ ಚಾರಣ ಸಾಗಿತ್ತು. ನಮ್ಮ ಬಲಕ್ಕೆ ಬೆಟ್ಟಗಳ ತಪ್ಪಲಿನವರೆಗೂ ಹಸಿರು ಗದ್ದೆಗಳ ಸುಂದರ ನೋಟ. ಜಲಧಾರೆ ನಿರ್ಮಿಸುವ ಹಳ್ಳದ ಬಳಿಯೇ ರಸ್ತೆ ಕೊನೆಗೊಳ್ಳುತ್ತದೆ. ಹಳ್ಳದ ಆ ಕಡೆ ದೇವಾಲಯವೊಂದಿದೆ. ಅಲ್ಲಿಂದ ಹಳ್ಳಗುಂಟ ಸ್ವಲ್ಪ ಮುನ್ನಡೆದು ನಂತರ ಸಿಗುವ ಕಾಲುಹಾದಿಯಲ್ಲಿ ೨೦ ನಿಮಿಷ ನಡೆದರೆ ಜಲಧಾರೆಯ ಮುಂದೆನೇ ದಾರಿ ಕೊನೆಗೊಳ್ಳುತ್ತದೆ.
ವಿಶಾಲವಾದ ಕಲ್ಲಿನ ಗೋಡೆಯ ಒಂದು ಬದಿಯಲ್ಲಿ ಭೋರ್ಗರೆಯುವ ಜಲಧಾರೆಯ ನಯನ ಮನೋಹರ ದೃಶ್ಯವನ್ನು ಆನಂದಿಸುವ ಭಾಗ್ಯ ನಮ್ಮದಾಗಿತ್ತು. ಕಾಡಿನ ನಡುವೆ ಸಣ್ಣ ತೆರೆದ ಸ್ಥಳದಲ್ಲಿ ಸುಮಾರು ೫೦ ಅಡಿ ಎತ್ತರದ ಜಲಧಾರೆಯನ್ನು ನಿರ್ಮಿಸಿ ಧುಮ್ಮಿಕ್ಕಿದ ಕೂಡಲೇ, ಹಳ್ಳವು ತಿರುವು ಪಡೆದು ಘಟ್ಟದ ಕೆಳಗೆ ಧಾವಿಸುತ್ತದೆ.
ನೀರು ಬೀಳುವಲ್ಲಿ ಗುಂಡಿಯಿರದ ಕಾರಣ ಯಾವುದೇ ಅಡೆತಡೆಯಿಲ್ಲದೆ ನೀರು ಬೀಳುವಲ್ಲಿ ತೆರಳಬಹುದು. ಹಳ್ಳಗುಂಟ ಸ್ವಲ್ಪ ಕೆಳಗೆ ಬಂದರೆ ಅಲ್ಲಿ ಜಲಕ್ರೀಡೆಯಾಡಲು ಸೂಕ್ತ ಕೊಳಗಳಿವೆ. ಮಳೆಗಾಲದಲ್ಲೇ ಇಲ್ಲಿ ಬಂದರೆ ಚೆನ್ನ.
ಕಲ್ಲಿನ ಗೋಡೆಯ ಇನ್ನೊಂದು ತುದಿಯಿಂದ ಮೇಲಕ್ಕೆ ಹತ್ತಿ ಹೋಗಬಹುದು. ನಮಗೆ ಸಮಯದ ಅಭಾವವಿದ್ದುದರಿಂದ ನಾವು ಮುಂದೆ ತೆರಳುವ ಯೋಚನೆ ಮಾಡಲಿಲ್ಲ. ಜಲಧಾರೆಯ ಮೇಲೆ ತೆರಳಿದರೆ ಇನ್ನೂ ಹಲವು ಹಂತಗಳಿವೆ. ಈಗ ನಾವು ನೋಡುತ್ತಿರುವುದು ಜಲಧಾರೆಯ ಕೆಳಗಿನ ಹಂತ. ನಮಗೆ ರಿಂಗ್‍ರೋಡಿನಿಂದ ಕಂಡುಬಂದದ್ದು ಇದರ ಮೇಲಿನ ಹಂತಗಳು. ಮೇಲೆ ಹತ್ತಿದ ಬಳಿಕ ನಂತರ ಇನ್ನೆಷ್ಟು ಮುಂದಕ್ಕೆ ತೆರಳಬಹುದು ಹಾಗೂ ರಸ್ತೆಯಿಂದ ಕಾಣುವ ಹಂತಗಳನ್ನು ನೋಡಲು ಸಾಧ್ಯವೇ ಎನ್ನುವುದು ಊಹೆಗೆ ಬಿಟ್ಟ ವಿಷಯ. ಆದರೆ ಈ ಜಲಧಾರೆಗೆ ಇನ್ನೊಂದು ಭೇಟಿ ನೀಡಲು ಈ ಒಂದು ನೆವ ಸಾಕು.