ಸುಮಾರು ೭೦೦ ವರ್ಷಗಳ ಹಿಂದಿನ ದೇವಾಲಯ ಎಂಬ ಮಾಹಿತಿ ಹೊರತುಪಡಿಸಿ ದೇವಾಲಯದ ಬಗ್ಗೆ ಬೇರೆ ಯಾವ ಮಾಹಿತಿಯೂ ಲಭ್ಯವಿಲ್ಲ. ದೇವಾಲಯದ ಮುಂದೆ ವಿಶಾಲವಾದ ಕೆರೆಯಿದ್ದು ದೇವಾಲಯದ ಮುಖಮಂಟಪದಿಂದ ಅದೊಂದು ಸುಂದರ ನೋಟ.
ಭವ್ಯವಾಗಿ ನಿರ್ಮಿಸಲಾಗಿರುವ ಮುಖಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶವಿದ್ದು ಸುತ್ತಲೂ ಕಕ್ಷಾಸನವಿದೆ. ಮುಖಮಂಟಪದಲ್ಲಿ ಒಟ್ಟು ೩೨ ಕಂಬಗಳಿದ್ದು ಇವುಗಳಲ್ಲಿ ೧೬ ಕಂಬಗಳನ್ನು ಕಕ್ಷಾಸನದ ಮೇಲೆ ನಿರ್ಮಿಸಲಾಗಿದೆ.
ಮುಖಮಂಟಪದಲ್ಲಿರುವ ೨೫ ಅಂಕಣಗಳಲ್ಲಿ ವಿವಿಧ ರೀತಿಯ ತಾವರೆಗಳನ್ನು ಕಾಣಬಹುದು. ಕೆಲವು ಅಂಕಣಗಳಲ್ಲಿನ ಕೆತ್ತನೆಗಳು ನಶಿಸಿದ್ದರೂ ಹೆಚ್ಚಿನವು ಉಳಿದುಕೊಂಡಿವೆ.
ಮುಖಮಂಟಪದ ನಟ್ಟನಡುವಿನ ಅಂಕಣ ಬಹಳ ಆಕರ್ಷಕವಾಗಿದೆ. ವೃತ್ತವೊಂದರ ಒಳಗೆ ೨೫ ತಾವರೆಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಕೆಲವು ತಾವರೆಗಳು ತಮ್ಮ ಕೋಷ್ಠದಿಂದ ನಾಪತ್ತೆಯಾಗಿವೆ ಮತ್ತು ಇನ್ನೂ ಕೆಲವು ಭಾಗಶ: ಅಳಿಸಿಹೋಗಿವೆ. ಆದರೂ ಈ ರಚನೆ ಆಕರ್ಷಕವಾಗಿದ್ದು ಗಮನ ಸೆಳೆಯುತ್ತದೆ.
ಇದೊಂದು ಅದ್ಭುತ ಮತ್ತು ಸೃಜನಶೀಲ ಕೆತ್ತನೆ. ವೃತ್ತದೊಳಗೆ ಹಲವಾರು ಚೌಕಗಳು, ಆ ಚೌಕಗಳ ನಡುವೆ ಹಾಗೂ ಹೊರಗೆ ತಾವರೆಗಳು ಮತ್ತು ೨ ಚೌಕಗಳನ್ನು ಒಂದರೊಳಗೊಂದು ನುಸುಳುವ ರೀತಿಯಲ್ಲಿ ಕೆತ್ತಿರುವುದು ಇವೆಲ್ಲಾ ಶಿಲ್ಪಿಯ ನೈಪುಣ್ಯತೆಗೆ ಸಾಕ್ಷಿಯಾಗಿವೆ.
ಮುಖಮಂಟಪದ ಛಾವಣಿಯ ಹೊರಚಾಚಿದ ಭಾಗದಲ್ಲಿ ಪ್ರಾಣಿ ಪಕ್ಷಿಗಳನ್ನು ತೋರಿಸಲಾಗಿದೆ. ಸಿಂಹ, ಆನೆ ಮತ್ತು ಹಂಸಗಳ ವೈವಿಧ್ಯಮಯ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.
ನವರಂಗದ ದ್ವಾರವು ಅಷ್ಟಶಾಖೆಗಳಿಂದ ಅಲಂಕೃತಗೊಂಡಿದ್ದು ಲಲಾಟದಲ್ಲಿ ಲಕ್ಷ್ಮೀಯ ಕೆತ್ತನೆಯಿದೆ. ದ್ವಾರದ ಮೇಲ್ಗಡೆ ೬ ಸಣ್ಣ ಗೋಪುರಗಳಿವೆ. ಎಲ್ಲಾ ಶಾಖೆಗಳು ತೋರಣಗಳಿಂದ ಅಲಂಕೃತವಾಗಿವೆ.
ನವರಂಗದ ದ್ವಾರದ ಪಾರ್ಶ್ವಗಳಲ್ಲಿರುವ ಸ್ತಂಭಗಳ ತಳಭಾಗದಲ್ಲಿ ಚಾಮರಧಾರಿಯರನ್ನು ಬಹಳ ಸುಂದರವಾಗಿ ತೋರಿಸಲಾಗಿದೆ.
ನವರಂಗದಲ್ಲಿ ನಾಲ್ಕು ಕಂಬಗಳಿವೆ ಮತ್ತು ನಾಲ್ಕು ದೇವಕೋಷ್ಠಗಳಿವೆ. ಎಲ್ಲಾ ದೇವಕೋಷ್ಠಗಳು ಖಾಲಿಯಾಗಿವೆ. ಅಂತರಾಳದ ದ್ವಾರವು ಅಲಂಕಾರರಹಿತ ಸಪ್ತಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಲಕ್ಷ್ಮೀಯನ್ನು ಹೊಂದಿದೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಆರು ಕೆತ್ತನೆಗಳಿದ್ದು ಅವೇನೆಂದು ತಿಳಿಯಲಿಲ್ಲ.
ಗರ್ಭಗುಡಿಯ ದ್ವಾರ ಸಂಪೂರ್ಣವಾಗಿ ಅಲಂಕಾರರಹಿತವಾಗಿದೆ! ಲಲಾಟವೂ ಖಾಲಿ. ಗರ್ಭಗುಡಿಯೂ ಖಾಲಿ. ಗರ್ಭಗುಡಿಯಲ್ಲಿ ೯ ಅಂಕಣಗಳಿದ್ದು ಪ್ರತಿಯೊಂದರಲ್ಲೂ ತಾವರೆಗಳನ್ನು ಕೆತ್ತಲಾಗಿದೆ.
ಬಹಳ ಹಿಂದೆ ನಿಧಿಶೋಧಕರು ಶಿವಲಿಂಗವನ್ನು ಕಿತ್ತೆಸೆದು ಗರ್ಭಗುಡಿಯನ್ನು ಅಗೆದುಹಾಕಿದ್ದರು. ಅಂದಿನಿಂದ ಇಂದಿನವರೆಗೆ ಶಿವಲಿಂಗವು ದೇವಾಲಯದ ಹೊರಗೆ ಅನಾಥವಾಗಿ ಬಿದ್ದುಕೊಂಡಿದೆ. ನಂದಿಯ ಮೂರ್ತಿಯನ್ನು ತೆಗೆಯಲಾಗಿದ್ದು ಅದನ್ನು ಕೂಡ ಹಾನಿಗೊಂಡಿರುವ ಶಿವಲಿಂಗದ ಸಮೀಪದಲ್ಲೇ ಕಾಣಬಹುದು.
ಕಕ್ಷಾಸನದ ಹೊರಗೋಡೆಯಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ. ಪ್ರತಿ ಸ್ತಂಭದ ಮೇಲೆ ಪುಟ್ಟ ಗೋಪುರವನ್ನು ರಚಿಸಲಾಗಿದೆ. ಈ ಸ್ತಂಭಗಳ ನಡುವೆ ಏಕತೋರಣವಿದ್ದರೆ, ಗೋಪುರಗಳ ನಡುವೆ ವಿವಿಧ ಕೆತ್ತನೆಗಳಿವೆ.
ಈ ಕೆತ್ತನೆಗಳಲ್ಲಿ ಸಿಂಹ, ಗಣೇಶ, ವಾದ್ಯಗಾರರು, ನೃತ್ಯಗಾರರು, ಆನೆ, ವಾನರ, ಮಾರ್ಜಾಲ, ಶ್ವಾನ, ಅಶ್ವ ಇತ್ಯಾದಿಗಳನ್ನು ಕಾಣಬಹುದು.
ದೇವಾಲಯದ ಹೊರಗೋಡೆಯಲ್ಲಿ ದಿಕ್ಕಿಗೊಂದರಂತೆ ಗೋಪುರ ಹೊಂದಿರುವ ೩ ಖಾಲಿ ದೇವಕೋಷ್ಠಗಳಿವೆ. ಇವುಗಳಲ್ಲಿ ಒಂದರ ಗೋಪುರದಲ್ಲಿ ಈ ಕೆಳಗಿನ ಕೆತ್ತನೆಯಿತ್ತು.
ಕರಿಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿರುವುದರಿಂದ ದೇವಾಲಯವನ್ನು ’ಕಪ್ಪುಗೋಡು ಕಪಿಲೇಶ್ವರ ದೇವಾಲಯ’ವೆಂದೂ ಕರೆಯುತ್ತಾರೆ. ನಾನು ಚಿತ್ರ ತೆಗೆಯುತ್ತಿರಬೇಕಾದರೆ ಓಮ್ನಿಯೊಂದು ದೇವಾಲಯದ ಬಳಿ ಬಂತು. ಅದರ ಚಾಲಕ ಸ್ಥಾನದಲ್ಲಿದ್ದ ಯುವ ವ್ಯಕ್ತಿ ಇಳಿದು ಬಂದು ನನ್ನ ಬಗ್ಗೆ ಮಾಹಿತಿ ಕೇಳತೊಡಗಿದ. ಆತನ ಪ್ರಶ್ನೆಗಳಿಂದ ಆಶ್ಚರ್ಯಚಕಿತನಾದರೂ ಸಭ್ಯನಂತೆ ತೋರುತ್ತಿದ್ದ ಕಾರಣ ತಾಳ್ಮೆಯಿಂದ ಉತ್ತರ ನೀಡಿದೆ.
ಆತ ಅದೇ ಊರಿನ ವ್ಯಕ್ತಿಯಾಗಿದ್ದು ದೇವಾಲಯದ ಟ್ರಸ್ಟಿನ ಮುಖ್ಯಸ್ಥನೂ ಹೌದು. ಪಾಳು ಬಿದ್ದ ದೇವಾಲಯವನ್ನು ಈ ಮಟ್ಟಕ್ಕೆ ದುರಸ್ತಿ ಮಾಡಿದರೂ ಊರಿನ ಕೆಲವರು ದೇವಾಲಯಕ್ಕೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಲು ಮುಂದಾಗಿರುವುದನ್ನು ಅವರು ತಿಳಿಸಿದರು. ದೇವಾಲಯಕ್ಕೆ ಬರಬೇಕಾದರೆ ಹಾಕಲಾಗಿದ್ದ ಬೇಲಿಯನ್ನು ಕಿತ್ತೊಗೆಯಲಾಗಿದ್ದನ್ನು ನಾನು ಗಮನಿಸಿದ್ದೆ. ಅದೇ ವಿಷಯದ ಬಗ್ಗೆ ಮಾತನಾಡಿದ ಅವರು ದೇವಾಲಯದ ಅಭಿವೃದ್ಧಿಗೆ ಎಂದು ಊರವರು ಸೇರಿ ನಿರ್ಧಾರಮಾಡಿದ ಸ್ಥಳದಲ್ಲೇ ಬೇಲಿಯನ್ನೂ ಹಾಕಲಾಗಿತ್ತು. ಆದರೆ ಅದೇ ಬೇಲಿಯನ್ನು ಅತಿಕ್ರಮಣ ಮಾಡುವ ಹುನ್ನಾರದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ಈ ವಿಷಯದ ಬಗ್ಗೆ ತಾನು ಪೋಲೀಸರಲ್ಲಿ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ. ಬೇಲಿ ಕಿತ್ತೊಗೆದ ವ್ಯಕ್ತಿಗಳೇನಾದರೂ ತಮ್ಮನ್ನು ಚಿತ್ರಗಳನ್ನು ತೆಗೆದು ಬರಲು ಕಳಿಸಿದರೋ ಎಂಬ ಸಂಶಯವುಂಟಾಗಿ ವಿಚಾರಿಸಲು ಬಂದೆ ಎಂದು ಹೇಳಿ ಕ್ಷಮೆಯಾಚಿಸಿ ತೆರಳಿದರು.
ಈ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಮುಖ್ಯಮಂತ್ರಿ ಇವರಿಗೆಲ್ಲಾ ಪತ್ರ ಬರೆದು ಭೇಟಿಯೂ ಆಗಿದ್ದಾರೆ. ತಾಲೂಕು ಕೇಂದ್ರಕ್ಕೆ ಬಹಳ ಸಮೀಪವಿರುವ ಮತ್ತು ಪ್ರಮುಖ ರಸ್ತೆಯಿಂದ ಸ್ವಲ್ಪವೇ ಒಳಗಿರುವ ಈ ಪ್ರಶಾಂತ ಸ್ಥಳದಲ್ಲಿರುವ ಸುಂದರ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬೇಕು ಎಂಬ ಇರಾದೆ ಅವರದ್ದು. ಅವರ ಇರಾದೆ ಸರಿಯಾಗಿಯೇ ಇದೆ. ಆದರೆ ಪ್ರವಾಸಿ ಸ್ಥಳವಾದ ನಂತರದ ಪರಿಣಾಮ ಅವರ ಕೈಯಲ್ಲಿಲ್ಲ ಅಲ್ವೇ?
ಮಾಹಿತಿ: ಜಿ ಆರ್ ಸತ್ಯನಾರಾಯಣ