ಗೆಳೆಯ ದಿನೇಶ್ ಹೊಳ್ಳ ಬರೆಯುತ್ತಾರೆ...
ಆ ಬೆಟ್ಟವನ್ನೇರುವುದು ಹವ್ಯಾಸಿ ಚಾರಣಿಗರಿಗೊಂದು ಸವಾಲೇ ಹೌದು. ಅದರ ಎತ್ತರವೇ ಅಂತದ್ದು! ಕಡಿದಾದ ಪ್ರಪಾತವನ್ನೇರಿ ಶೃಂಗ ಭಾಗವನ್ನು ತಲುಪುವಾಗ ಎಂತವನಿಗೂ ಒಮ್ಮೆಗೆ ಚಾರಣದ ಸಹವಾಸವೇ ಬೇಡವಿತ್ತೆಂದು ಅನಿಸಿದರೆ ಅದು ಆ ಬೆಟ್ಟದ ತಪ್ಪಂತೂ ಅಲ್ಲವೇ ಅಲ್ಲ. ಶಿಶಿಲ ಸಮೀಪದ ಅಮೇದಿಕಲ್ಲು ಪರ್ವತವೇ ಅಂತದ್ದು. ಹಿಂದೆ ೩ ಬಾರಿ ಈ ಪರ್ವತವನ್ನೇರಿದ್ದರೂ ಒಮ್ಮೆ ’ಆರೋಹಣ’ದ ಅಶೋಕವರ್ಧನರ ಜತೆ ಅದನ್ನೇರುವ ಸುಯೋಗ ನನ್ನ ಪಾಲಿಗೆ ಲಭಿಸಿತ್ತು. ಎಂತಹ ಚಾರಣಿಗರಿಗೂ ಸಾಹಸಿಗ ಅಶೋಕವರ್ಧನರ ಜತೆಗೆ ಚಾರಣ ಮಾಡುವುದೆಂದರೆ ಖುಷಿ ಮತ್ತು ಕುತೂಹಲ. ಯಾಕೆಂದರೆ ಕರಾವಳಿ ಜಿಲ್ಲೆಗಳಲ್ಲಿ ಚಾರಣ ಎಂಬುದಕ್ಕೆ ಅರ್ಥ ಕೊಟ್ಟವರೇ ಅಶೋಕವರ್ಧನರು. ಅಂದು ಅಶೋಕವರ್ಧನರ ಜತೆ ಇದ್ದವರು ಸಾಮಾನ್ಯರೇನಲ್ಲ. ನಾನು ಅತೀವ ಅಭಿಮಾನ ಇಟ್ಟ ದೇವು ಹನೇಹಳ್ಳಿ , ನೀರೇನ್ ಜೈನ್, ಅಭಯಸಿಂಹ (’ಗುಬ್ಬಚ್ಚಿಗಳು’) ಮುಂತಾದ ಸಮಾನ ಮನಸ್ಕರು ಒಟ್ಟು ಸೇರಿದಾಗ ಆ ಚಾರಣದ ಸಂಭ್ರಮವನ್ನು ಹೇಗೆ ಹೇಳಲಿ? ಎಷ್ಟೋ ಚಾರಣ ಮಾಡಿಯೂ, ಚಾರಣ ಸಂಘಟಿಸಿಯೂ ಅಂದಿನ ಅಮೇದಿಕಲ್ಲು ಚಾರಣವು ನನ್ನ ನೆನಪಿನ ಚಾರಣಪುಟದಲ್ಲಿ ಅಚ್ಚಳಿಯದೇ ಉಳಿದಿದೆ.
ಬೆಳಿಗ್ಗೆ ಐದು ಗಂಟೆಗೇ ಹೊರಟ ನಮ್ಮ ತಂಡ ನೆರಿಯಕ್ಕೆ ಹೋಗಿ ಅಲ್ಲಿನ ಖಾಸಗಿ ಎಸ್ಟೇಟಿನವರ ಅನುಮತಿ ಪಡೆದು ಅವರ ತೋಟದೊಳಗಿನಿಂದ ಕಾನನವ ನುಗ್ಗಿ ಅಮೇದಿಕಲ್ಲು ಶಿಖರವನ್ನೇರಿದೆವು. ಕುದುರೆಮುಖ ವನ್ಯಜೀವಿ ಪ್ರತಿಷ್ಠಾನದ ನೀರೇನ್ ಜೈನಿಗೆ ನೀರು ನಾಯಿಯನ್ನು ನೋಡಬೇಕೆಂಬ ಕುತೂಹಲ. ದಾರಿಯುದ್ದಕ್ಕೂ ನೀರು ನಾಯಿಗಳ ಇರುವಿನ ಕುರುಹು ಲಭಿಸಿತೇ ಹೊರತು ನೀರು ನಾಯಿಗಳು ಕಾಣಿಸಲೇ ಇಲ್ಲ. ಪಶ್ಚಿಮ ಘಟ್ಟದ ಬಗ್ಗೆ ಅಪಾರ ಜ್ಞಾನ ಭಂಡಾರವೇ ಆಗಿರುವ ದೇವು ಹನೇಹಳ್ಳಿಯವರಿಂದ ನೀರು ನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಅಮೇದಿಕಲ್ಲಿನ ಶೃಂಗ ಭಾಗದಿಂದ ಸ್ವಲ್ಪ ಕೆಳಗೆ ಇರುವ ದಟ್ಟ ಅರಣ್ಯದಲ್ಲಿ ನಮ್ಮ ರಾತ್ರಿಯ ವಿಶ್ರಾಂತಿ. ರಾತ್ರಿಯೂಟಕ್ಕೆ ಬೆಂಕಿ ಎಬ್ಬಿಸಿ ನೀರು ಇಟ್ಟು ಇನ್ನೇನು ಅಕ್ಕಿ ಹಾಕಬೇಕೆಂದಿರುವಾಗ ಎಲ್ಲಿತ್ತೋ ಏನೋ? ಅನಿರೀಕ್ಷಿತ ಮಳೆ ಧಾರಾಕಾರವಾಗಿ ಸುರಿಯಬೇಕೇ? ಊಟವಿಲ್ಲದಿದ್ರೂ ಪರ್ವಾಗಿಲ್ಲ, ಮಲಗೋದಾದರೆ ಹೇಗೆ? ನಮ್ಮ ಜತೆಗಿದ್ದ ಐತಾಳರು ಬಂಡೆಯೊಂದರ ಅಡಿಯಲ್ಲಿ ಒಲೆ ನಿರ್ಮಿಸಿ ಗಂಜಿ ಬೇಯಿಸಿ ನಮ್ಮ ಪಾಲಿಗೆ ಅಪರಂಜಿಯಾದರು. ಹೊಟ್ಟೆ ತುಂಬ ಗಂಜಿ ಉಂಡರೂ ಮಲಗಲಾಗದೆ ಮಳೆಯ ಅಭಿಷೇಕದಿಂದ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದೆವು. ನಾವು ಗಂಜಿಯನ್ನು ಕುಡಿದಂತೆ ಜಿಗಣೆಗಳು ನಮ್ಮ ರಕ್ತವನ್ನು ಕುಡಿದದ್ದು ಗೊತ್ತೇ ಆಗಲಿಲ್ಲ.
ಬೆಳಿಗ್ಗೆ ಐದು ಗಂಟೆಗೇ ಎದ್ದು ಅಮೇದಿಕಲ್ಲಿನ ತುದಿಭಾಗಕ್ಕೆ ಕತ್ತಲಲ್ಲೇ ಹೊರಟಿದ್ದೆವು. ಅಮೇದಿಕಲ್ಲಿನ ಶಿರಭಾಗವೆಂದರೆ ಅದೊಂದು ಬೃಹದಾಕಾರದ ಬಂಡೆ. ಸ್ವಲ್ಪ ನಿಧಾನಕ್ಕೆ ಜಾಗರೂಕರಾಗಿ ಏರಬೇಕಾಗುತ್ತದೆ. ಸ್ವಲ್ಪ ಜಾರಿದರೂ ಆಳಾವಾದ ಪ್ರಪಾತ. ನಾನು ಕತ್ತಲೆಯಲ್ಲೇ ಉಳಿದವರಿಗಿಂತ ಮೊದಲೇ ಬಂಡೆಯ ತುದಿ ಏರಿ ಹಾಯಾಗಿ ಮಲಗಿಕೊಂಡೆ. ನಾನು ಮೇಲೇರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಅವರೆಲ್ಲ ನಿಧಾನವಾಗಿ ಬಂಡೆ ಏರಿ ಬರುತ್ತಿದ್ದಾಗ ನಾನು ಮಲಗಿ ಒಂದು ಕಾಲಿನ ಮೇಲೆ ಇನ್ನೊಂದು ಕಾಲನ್ನು ಮಡಿಚಿ ಅವರು ಬರುತ್ತಿರುವುದನ್ನೇ ನೋಡುತ್ತಿದ್ದೆ. ಅವರೆಲ್ಲರೂ ಮೇಲ್ಭಾಗದ ಬಂಡೆಯ ಒಂದು ಮಗ್ಗುಲಲ್ಲಿ ನನ್ನಿಂದ ೨೦ ಅಡಿ ಅಂತರದಲ್ಲಿ ಸಾಲಾಗಿ ನಿಂತು ಏನನ್ನೋ ತದೇಕಚಿತ್ತದಿಂದ, ಗಂಭೀರದಿಂದ ನೋಡುತ್ತಿದ್ದರು. ಜತೆಗೆ ಏನೋ ಪಿಸುಪಿಸು ಮಾತನಾಡುತ್ತಿದ್ದರು. ಅವರು ಗುಟ್ಟುಗುಟ್ಟಾಗಿ ಏನು ಮಾತನಾಡುತ್ತಿದ್ದಾರೆ ಎಂದು ನಾನು ಸೂಕ್ಷ್ಮವಾಗಿ ಕೇಳಿಸಿಕೊಂಡೆ.
ಆಗ ಒಬ್ಬರು ’ಕಡವೆ, ಕಡವೆ!’ ಎಂದೂ ಇನ್ನೊಬ್ಬರು ’ಇಲ್ಲಾ ಕರಡಿ, ಕರಡಿ’ ಎಂದೂ ಮತ್ತೊಬ್ಬರು ’ಎರಡು ಕರಡಿಗಳು ಹತ್ತಿರ ಹತ್ತಿರ ಇವೆ’ ಎಂದೂ ಹೇಳುತ್ತಿದ್ದರು. ಆ ಕತ್ತಲೆಯಲ್ಲಿ ಅವರಿಗೆ ಯಾವ ಕರಡಿ, ಯಾವ ಕಡವೆಯಾದರೂ ಹೇಗೆ ಕಾಣಲು ಸಾಧ್ಯ ಎಂದು ನಾನು ಕುತೂಹಲದಿಂದ ಮಲಗಿದ್ದಲಿಂದಲೇ ಸ್ವಲ್ಪ ಮಗ್ಗಲು ಬದಲಿಸಿ ಕಳಗೆ ನೋಡಲಾರಂಭಿಸಿದೆ. ಕರಡಿ, ಕಡವೆ ಬಿಡಿ, ಕತ್ತಲೆ ಬಿಟ್ಟು ಬೇರೆ ಏನೂ ಕಾಣಿಸಲಿಲ್ಲ. ನಾನು ಅಲುಗಾಡಿದ ತಕ್ಷಣವೇ ಅವರು ’ಶ್... ಹೊರಟಿತು... ಹೊರಟಿತು...!’ ಅನ್ನುತ್ತಿದ್ದರು. ಮತ್ತೆ ಮಾತೇ ಇಲ್ಲ. ನಾನು ಅವರನ್ನು ನೋಡುತ್ತಲೇ ಇದ್ದೆ. ಅವರು ಸ್ತಬ್ಧವಾದಾಗ ನಾನು ಎದ್ದು ಕುಳಿತೆ. ಆಗ ದೇವು ಹನೇಹಳ್ಳಿಯವರು ’ಹೊಳ್ಳಾ... ಹೊಳ್ಳಾ...’ ಎಂದು ಕರೆಯುತ್ತಿದ್ದಾಗ ನಾನು ’ಓ’ ಅಂದಾಗ ಅವರು ’ಕೈಯೆತ್ತಿ... ಕಾಲೆತ್ತಿ’ ಎನ್ನುತ್ತಿದ್ದರು. ಅರೆ... ಇವರೇನು ಬೆಳಗ್ಗಿನ ವ್ಯಾಯಾಮ ಹೇಳಿಕೊಡುತ್ತಿದ್ದಾರೋ? ಎಂದು ನಾನು ಎದ್ದು ನಿಂತಾಗ ಅವರೆಲ್ಲರೂ ಒಮ್ಮೆಲೇ ’ಹೋ... ಹೋ...’ ಎಂದು ನಗಲಾರಾಂಭಿಸಿದರು.
ಅಷ್ಟು ಹೊತ್ತು ಅವರು ಕುತೂಹಲದಿಂದ ಯಾವ ಕರಡಿಯನ್ನು ನೋಡುತ್ತಿದ್ದರೋ ಅದು ನಾನೇ ಆಗಿದ್ದೆ. ನನ್ನನ್ನೇ ಕರಡಿಯೆಂದು ಭಾವಿಸಿ ಅವರು ಮೌನವಾಗಿ ವೀಕ್ಷಿಸುತ್ತಿದ್ದರು. ಕತ್ತಲೆಯಿದ್ದರೂ ಕಲ್ಲಿನ ಮೇಲೆ ನಾನು ಮಲಗಿ ಕಾಲಿನ ಮೇಲೆ ಕಾಲಿಟ್ಟು ಆಗಾಗ ಕಾಲನ್ನು ಸ್ವಲ್ಪ ಅಲುಗಾಡಿಸುತ್ತಿದ್ದುದು ಅವರಿಗೆ ಏನೋ ಅಸ್ಪಷ್ಟವಾಗಿ ಒಂದು ಜೀವಂತ ವಸ್ತುವಿನಂತೆ ಕಾಣಿಸುತ್ತಿತ್ತು. ಅಂದು ಚಾರಣದ ಕೊನೆಯವರೆಗೂ ನನ್ನನ್ನು ಎಲ್ಲರೂ ’ಕರಡಿ ಹೊಳ್ಳ’ ಎಂದು ತಮಾಷೆ ಮಾಡುತ್ತಿದ್ದರು. ಇಂದಿಗೂ ಅಮೇದಿಕಲ್ಲು ಎಂದಾಕ್ಷಣ ಮತ್ತೆ ಮತ್ತೆ ಅದೇ ’ಕರಡಿ’ ನೆನಪುಗಳು.