ಭಾನುವಾರ, ಜೂನ್ 30, 2013

ಮದುವೆಮನೆ!


ಈ ಜಲಧಾರೆ ನೋಡಿ ಹಿಂತಿರುಗುವಾಗ, ನಾನು ಉಳಿದ ಚಾರಣಿಗರಿಂದ ಸ್ವಲ್ಪ ಮುಂದೆ ಬಂದಿದ್ದರಿಂದ ಅವರಿಗಾಗಿ ಒಂದೆಡೆ ಕಾದು ನಿಂತೆ. ಅಲ್ಲಿ ಮನೆಯೊಂದರ ಬಚ್ಚಲುಮನೆ ರಸ್ತೆಗೆ ತಾಗಿಕೊಂಡೇ ಇತ್ತು. ಒಳಗಿನಿಂದ ನೀರು ನೆಲಕ್ಕಪ್ಪಳಿಸುವ ರಪರಪ ಶಬ್ದ ಕೇಳುತ್ತಿತ್ತು. ಆಚೀಚೆ ನೋಡುತ್ತಾ ನಿಂತಿರುವಾಗ, ’ನೋಡಿ ಬಂದ್ರಾ’ ಎಂಬ ಪ್ರಶ್ನೆ ಒಳಗಿನಿಂದ ತೂರಿಬಂತು. ಕುಶಲೋಪರಿಯ ನಂತರ ಬಚ್ಚಲುಮನೆಯೊಳಗಿನಿಂದಲೇ ಆ ವ್ಯಕ್ತಿ ಮಾತು ಮುಂದುವರೆಸಿ, ’ಇದೆಲ್ಲಾ ಏನೂ ಇಲ್ರೀ.. ಇನ್ನೂ ದೊಡ್‍ದೊಡ್ದು ಶಿರ್ಲು ಇವೆ. ಅವನ್ನೆಲ್ಲಾ ನೋಡ್ಬೇಕ್ ನೀವು...’ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು!


ಆ ವ್ಯಕ್ತಿ ತಿಳಿಸಿದ ಎರಡು ಜಲಧಾರೆಗಳಲ್ಲಿ ಒಂದನ್ನು ಅದಾಗಲೇ ನಾನು ನೋಡಿಯಾಗಿತ್ತು. ಇನ್ನೊಂದು ಜಲಧಾರೆಯೇ ಈ ಮದುವೆಮನೆ ಜಲಧಾರೆ. ಅಷ್ಟರಲ್ಲಿ ಉಳಿದ ಚಾರಣಿಗರು ಸಮೀಪಿಸಿದರು. ಆ ವ್ಯಕ್ತಿಯ ಸ್ನಾನ ಇನ್ನೂ ಮುಗಿದಿರಲಿಲ್ಲ. ಉಳಿದೆಲ್ಲಾ ಚಾರಣಿಗರೊಂದಿಗೆ ಒಳಗಿನಿಂದಲೇ ಮಾತನಾಡಿದ ಆತ, ಮದುವೆಮನೆ ಜಲಧಾರೆಗೆ ನೀರಿನ ಹರಿವು ಹೆಚ್ಚಿರುವಾಗ ತೆರಳಲು ಅಸಾಧ್ಯವೆಂದು ತಿಳಿಸಿದರು. ಆದರೂ ನಾವು ಪಟ್ಟು ಬಿಡದಿದ್ದಾಗ, ನಾವು ನಮ್ಮ ವಾಹನ ನಿಲ್ಲಿಸಿದ್ದಲ್ಲಿ ತನ್ನ ಅಣ್ಣನ ಮನೆಯಿರುವುದಾಗಿಯೂ, ಅವರಲ್ಲಿ ತಾನು ಹೇಳಿದೆನೆಂದು ಹೇಳಿದರೆ ಕರೆದೊಯ್ಯುವರೆಂದು ತಿಳಿಸಿದರು. ಅದಾಗಲೇ ’ನೋಡಿ ಬಂದ್ರಾ’ ಎಂಬ ಎರಡು ಶಬ್ದಗಳು ಹೊರಗೆ ಬಂದು ೧೫ ನಿಮಿಷಗಳು ಕಳೆದಿದ್ದವು. ಆ ವ್ಯಕ್ತಿಯ ಗಜಸ್ನಾನ ಮುಂದುವರೆದಿತ್ತು. ಇನ್ನೊಂದೆರಡು ನಿಮಿಷ ಕಾದರೂ, ಅವರ ಮಹಾಸ್ನಾನ ಮುಗಿಯುವ ಲಕ್ಷಣಗಳು ಗೋಚರಿಸದಿದ್ದರಿಂದ ಅವರಿಗೆ ಧನ್ಯವಾದ ಹೇಳಿ ಮುನ್ನಡೆದೆವು.


ಮುಂದೆ ಅವರ ಅಣ್ಣನ ಭೇಟಿಯಾಯಿತು. ನೀರಿನ ಹರಿವು ವಿಪರೀತವಿರುವುದರಿಂದ ಹೋಗಲು ಸಾಧ್ಯವಿಲ್ಲ ಎಂದು ಅವರು ನಮಗೆ ಹೇಳಿದರೂ, ನಮ್ಮ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಹೊರಟರು. ಅರ್ಧ ಗಂಟೆಯ ನಡಿಗೆಯ ಬಳಿಕ ಎದುರಾದ ಹಳ್ಳದೆಡೆ ಒಂದೇ ನೋಟ ಬೀರಿದ ಕೂಡಲೇ ಮುಂದೆ ಹೋಗಲು ಅಸಾಧ್ಯ ಎಂದು ನಮಗೆ ಮನದಟ್ಟಾಯಿತು. ನಮ್ಮ ಮಾರ್ಗದರ್ಶಿ ಮುಗುಳ್ನಗುತ್ತಿದ್ದರು. ’ಹಳ್ಳಗುಂಟ ಕಲ್ಲು ಬಂಡೆ ಹತ್ತಿ ಇಳಿದೇ ಹೊಗಬೇಕಾಗುವುದರಿಂದ ನೀರು ಕಡಿಮೆ ಇರುವಾಗ ಮಾತ್ರ ಈ ಶಿರ್ಲು ನೋಡಲು ಸಾಧ್ಯ. ನೀವು ಮಳೆಗಾಲದ ಆರಂಭದಲ್ಲಿ ಅಥವಾ ನವೆಂಬರ್ ತಿಂಗಳಲ್ಲಿ ಬನ್ನಿ’ ಎಂದು ಅವರು ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆವು.


ಮುಂದಿನ ವರ್ಷ ಜೂನ್ ತಿಂಗಳ ಕೊನೆಯಲ್ಲೇ ಅವರಿಗೆ ಕರೆ ಮಾಡಿ ನಿಗದಿತ ದಿನದಂದು ಅವರ ಮನೆ ಮುಂದೆ ನಾವು ಹಾಜರು. ಅವರು ಕೆಲಸದಲ್ಲಿ ವ್ಯಸ್ತವಿದ್ದುದರಿಂದ ತಮ್ಮ ನೆರೆಮನೆಯ ಹುಡುಗ ಭಾಸ್ಕರ ಸಿದ್ಧಿಯನ್ನು ನಮ್ಮೊಂದಿಗೆ ಕಳುಹಿಸಿದರು. ಈ ಭಾಸ್ಕರ, ಇನ್ನೊಬ್ಬ ಮಾಮೂಲಿ ಸಿದ್ಧಿ ಹುಡುಗ ಎಂದುಕೊಂಡೆವು. ಒಂದು ವರ್ಷದ ಮೊದಲು ಮಾರ್ಗದಶಿಯಾಗಿ ಬಂದಿದ್ದ ’ಗಣಪತಿ ಸಿದ್ಧಿ’ಯ ನೆನಪಾಗಿ, ಈತ ಅವನಂತೆ ಆಗಿರದಿದ್ದರೆ ಸಾಕು ಎಂದು ಮಾತನಾಡಿಕೊಂಡೆವು.


ಸ್ವಲ್ಪ ಮುಂದೆ ಸಾಗಿ ಒಂದೆಡೆ ಎಲ್ಲರೂ ವೃತ್ತಾಕಾರದಲ್ಲಿ ನಿಂತು ಸ್ವ-ಪರಿಚಯ ಮಾಡಿಕೊಂಡೆವು. ಕನ್ನಡ - ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಹೆಚ್ಚಿನವರ ಸ್ವ-ಪರಿಚಯ ನಡೆಯಿತು. ನಂತರ ಭಾಸ್ಕರನಿಗೆ ತನ್ನ ಪರಿಚಯ ಮಾಡುವಂತೆ ಕೇಳಿಕೊಂಡೆವು. ಈ ಸಿದ್ಧಿ ಹುಡುಗರನ್ನು ಕಳೆದ ೨೫ ವರ್ಷಗಳಿಂದ ಗಮನಿಸುತ್ತಿದ್ದೇನೆ. ಪ್ರೋತ್ಸಾಹ ನೀಡಿದರೂ ಉದ್ಧಾರ ಆಗುವವರಲ್ಲ! ಇವರ ಬಗ್ಗೆ ಪ್ರತ್ಯೇಕ ಲೇಖನವನ್ನೇ ಯಾವಗಲಾದರೂ ಬರೆಯುವೆ. ಈ ಭಾಸ್ಕರ, ಹೆಚ್ಚೆಂದರೆ ಏಳನೇ ತರಗತಿಯವರೆಗೆ ಓದಿರಬಹುದು. ಮನೆಯಲ್ಲೇ ಇದ್ದು, ಕೃಷಿ-ಕೂಲಿ ಮಾಡುತ್ತಾ ಇದ್ದಾನೆ ಎಂಬ ಮಾಮೂಲಿ ಪರಿಚಯ ಹೊರಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಆಶ್ಚರ್ಯವೊಂದು ಕಾದಿತ್ತು. ’ನನ್ನ ಹೆಸರು ಭಾಸ್ಕರ ಗಜಾನನ ಸಿದ್ಧಿ. ಐ ಹ್ಯಾವ್ ಡನ್ ಬ್ಯಾಚಲರ್ಸ್ ಡಿಗ್ರೀ ಇನ್ ಫಾರ್ಮಸಿ. ಕಳೆದ ಎರಡು ವರ್ಷಗಳಿಂದ ಭಟ್ಕಳದಲ್ಲಿ ಔಷಧಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದೇನೆ. ಈಗ ರಜೆಗೆ ಮನೆಗೆ ಬಂದಿದ್ದೇನೆ’, ಎಂದು ಕನ್ನಡ - ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ನಿರರ್ಗಳವಾಗಿ, ನಿಖರವಾಗಿ, ಆತ್ಮವಿಶ್ವಾಸಭರಿತ ಧ್ವನಿಯಲ್ಲಿ ಹೇಳಿದಾಗ, ಆದ ಶಾಕ್‍ನಿಂದ ಚೇತರಿಸಿಕೊಳ್ಳಲು ನಮಗೆಲ್ಲಾ ಐದಾರು ಕ್ಷಣಗಳು ಬೇಕಾದವು. ಅದೇ ಕ್ಷಣದಿಂದ ಎಲ್ಲರೂ ಭಾಸ್ಕರನನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಟ್ಟಿತ್ತು! ಭಾಸ್ಕರ್ ಹ್ಯಾಡ್ ಮೇಡ್ ಹೀಸ್ ಪಾಯಿಂಟ್!!!


ಹಳ್ಳದಲ್ಲಿ ಒಂದು ಸಲ ಕಾಲಿಟ್ಟ ಬಳಿಕ ನಂತರ ಮೇಲೆ ಬರುವ ಪ್ರಮೇಯವೇ ಇಲ್ಲ. ಹಳ್ಳಗುಂಟ, ಜಾರುವ ಬಂಡೆಗಳನ್ನು ಸಾವಕಾಶವಾಗಿ ಸಂಭಾಳಿಸುತ್ತಾ, ನಿಧಾನವಾಗಿ ಮುಂದೆ ಸಾಗಿದೆವು. ಮಳೆ ಆರಂಭವಾಗಿ ಇಪ್ಪತ್ತು ದಿನಗಳಷ್ಟೇ ಆಗಿದ್ದರಿಂದ ಹಳ್ಳವಿನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ. ಕೆಲವೆಡೆ ಹಳ್ಳ ಬಹಳ ಕಿರಿದಾದ ಆಕಾರವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ನೀರಿನ ಪ್ರಮಾಣ ಸಹಜವಾಗಿ ಹೆಚ್ಚಿದ್ದರಿಂದ ದಾಟಲು ಪ್ರಯಾಸಪಡಬೇಕಾಯಿತು. ಇಕ್ಕೆಲಗಳಲ್ಲಿ ದಟ್ಟವಾದ ಕಾಡು ಮತ್ತು ಇಳಿಜಾರಿನ ಕಣಿವೆಯಿರುವುದರಿಂದ ಹಳ್ಳದಿಂದ ಮೇಲೆ ಬಂದು ನಡೆಯುವುದು ಅಸಾಧ್ಯವಾಗಿತ್ತು.


ಚಾರಣ ಶುರು ಮಾಡಿ ೧೦೦ ನಿಮಿಷಗಳು ಕಳೆದವು. ಹಳ್ಳ ಹೊಕ್ಕಿ ಒಂದು ತಾಸು ದಾಟಿಹೋಯಿತು. ’ಇಲ್ಲೇ.. ಇಲ್ಲೇ.. ಬಂತು..’ ಎನ್ನುತ್ತಾ, ಭಾಸ್ಕರ ಜಿಗಿಜಿಗಿಯುತ್ತಾ ಅನಾಯಾಸವಾಗಿ ಮುಂದೆ ಸಾಗುತ್ತಿದ್ದ. ’ಜಾರುವುದು’ ಎಂಬ ಶಬ್ದವೇ ಆತನ ನಿಘಂಟಿನಲ್ಲಿಲ್ಲವೇನೋ ಎಂಬ ಯೋಚನೆ ನನಗೆ ಬರಲಾರಂಭಿಸಿತು. ಚಾರಣದುದ್ದಕ್ಕೂ ಹನಿಹನಿ ಮಳೆ ಜಿನುಗುತ್ತಿತ್ತು. ಇಲ್ಲಿ ನಡೆದಷ್ಟು ಎಚ್ಚರಿಕೆಯಿಂದ ನಾನೆಲ್ಲೂ ನಡೆದಿಲ್ಲ. ಜಾರುವ ಬಂಡೆಗಳಿಗಿಂತ ನೀರಿನಲ್ಲೇ ಸಾಗುವುದು ಸುಲಭವೆನಿಸುತ್ತಿತ್ತು. ಆದರೆ ಅದು ಅಸಾಧ್ಯದ ಮಾತಾಗಿತ್ತು. ’ನಮ್ಮನ್ನು ಬಿಟ್ಟು ಬೇರೆ ಯಾರು ಗತಿಯಯ್ಯಾ..,’ ಎಂದು ಎಲ್ಲಾ ದಿಕ್ಕಿನಿಂದ ಆ ಬಂಡೆಗಳು, ಹಿಂದೆ ಒಬ್ಬನೇ ಬರುತ್ತಿದ್ದ ನನ್ನನ್ನು ಸುತ್ತುವರಿದು ಪಿಸುಗುಡುತ್ತಿರುವಂತೆ ಭಾಸವಾಗತೊಡಗಿತು.


ಎರಡೂ ಕಡೆಗಳಿಂದ ಕಣಿವೆಯ ಅಗಾಧ ವೃಕ್ಷಗಳು, ಹಳ್ಳದ ಉದ್ದಗಲಕ್ಕೂ ಹರಿದಾಡಿರುವ ಅವುಗಳ ಬೇರುಗಳು ಹಾಗೂ ಎಲ್ಲಾ ಗಾತ್ರಗಳ ಬಂಡೆಗಳು ಹಳ್ಳಗುಂಟದ ಈ ಚಾರಣ ಹಾದಿಗೆ ಸುಂದರ ರೂಪ ಮತ್ತು ವೈಶಿಷ್ಟ್ಯತೆಯನ್ನು ನೀಡಿದ್ದವು. ಚಾರಣದ ಹಾದಿ ಬಹಳ ಚೆನ್ನಾಗಿದ್ದರೂ, ನಿರಂತರವಾಗಿ ಬೀಳುತ್ತಿದ್ದ ಮಳೆ ಮತ್ತು ಜಾರುವ ಹಾದಿ ನನಗೆ ಕ್ಯಾಮರಾಗಳನ್ನು ಹೆಚ್ಚು ಬಳಸಲು ಅವಕಾಶ ನೀಡಲಿಲ್ಲ. ಸುಮಾರು ೨ ತಾಸುಗಳ ಬಳಿಕ, ತಿರುವೊಂದರಲ್ಲಿ ಮದುವೆಮನೆ ಜಲಧಾರೆಯ ದರ್ಶನವಾಯಿತು.


ವಿಶಾಲ ಪ್ರದೇಶದಲ್ಲಿ ಬಹಳ ಎತ್ತರಕ್ಕೆ ಹಬ್ಬಿ ನಿಂತಿರುವ ಕಲ್ಲಿನ ಮೇಲ್ಮೈಯಿಂದ ಎರಡು ದೊಡ್ಡ ಹಂತಗಳಲ್ಲಿ ಹಳ್ಳ ಧುಮುಕುತ್ತದೆ. ಮೊದಲ ಹಂತ ಸುಮಾರು ೮೦ ಅಡಿಗಳಷ್ಟು ಎತ್ತರವಿದ್ದು ಸುಮಾರು ಅಗಲವಾಗಿಯೂ ಇದೆ. ಮದುವೆಮನೆ ಜಲಧಾರೆಯ ಆಕರ್ಷಣೆಯೇ ಈ ಮೊದಲ ಹಂತ. ನೇರವಾಗಿ ಮೇಲೇರಿದ ಭಾಸ್ಕರ ಅದಾಗಲೇ ಈ ಹಂತವನ್ನು ಸಮೀಪಿಸಿದ್ದ. ವಿಶಾಲ ಬಂಡೆಯ ಮೇಲ್ಮೈಯಲ್ಲಿ ಈತನನ್ನು ಹುಡುಕುವುದೇ ದೊಡ್ಡ ಸವಾಲಾಗಿತ್ತು. ಆತ ಮೇಲೇರಿದ ವೇಗ ಮತ್ತು ರೀತಿಯನ್ನು ಕಂಡು ದಂಗಾದೆವು. ನಾವು ಯಾರೂ ಒಂದನೇ ಹಂತದೆಡೆ ತೆರಳುವ ಸಾಹಸಕ್ಕೆ ಮುಂದಾಗಲಿಲ್ಲ.


ಎರಡನೇ ಹಂತದ ಬಳಿಯಲ್ಲೇ ಕುಳಿತು ಸುಮಾರು ಹೊತ್ತು ಆನಂದಿಸಿದೆವು. ಅದೊಂದು ವಿಹಂಗಮ ದೃಶ್ಯ. ಎತ್ತರೆತ್ತರಕ್ಕೆ ಬೆಳೆದು ನಿಂತಿರುವ ವೃಕ್ಷಗಳಿಂದ ಸುತ್ತುವರಿದಿರುವ ವಿಶಾಲ ಕಲ್ಲಿನ ಮೇಲ್ಮೈ. ಇದರ ಬಲ ಪಾರ್ಶ್ವದ ತುದಿಯಿಂದ ಬೀಳುತ್ತಿರುವ ಮೊದಲ ಹಂತ, ನಂತರ ಸ್ವಲ್ಪ ದೂರ ಎಡಕ್ಕೆ ಕ್ರಮಿಸಿ ಎರಡನೇ ಹಂತವಾಗಿ ಎಡ ಪಾರ್ಶ್ವದಿಂದ ಬೀಳುತ್ತದೆ. ಒಟ್ಟಾರೆ ಸುಮಾರು ೧೩೦ ಅಡಿ ಆಗಬಹುದು.


ಹಳ್ಳ ಉಕ್ಕಿ ಹರಿಯುವಾಗ ಮದುವೆಮನೆ, ’ಮದುವೆಯ ಮನೆ’ಯಷ್ಟೇ ಸಿಂಗಾರಗೊಂಡು, ಎಲ್ಲಾ ಪಾರ್ಶ್ವಗಳಿಂದಲೂ ಮೈದುಂಬಿ, ಧುಮ್ಮಿಕ್ಕಿ ಭೋರ್ಗರೆಯುವ ಚಿತ್ರಣವನ್ನು ಕಲ್ಪಿಸಿಕೊಂಡೆವು. ಆದರೆ, ಹಳ್ಳ ಬಿಟ್ಟು ಬೇರೆ ದಾರಿಯಿರದ ಕಾರಣ ಮದುವೆಮನೆಯ ಆ ಸೊಗಸು ನೋಡಲು ಮಾನವರಿಗೆ ಅಸಾಧ್ಯ. ಮದುವೆಮನೆಯ ಆ ಕಲರವ, ಸಂಭ್ರಮದಲ್ಲಿ ಪಾಲ್ಗೊಳ್ಳಲು, ಕಾಡಿಗೆ ಹಾಗೂ ಕಾಡಿನ ಪ್ರಾಣಿಗಳಿಗೆ ಮಾತ್ರ ಆಮಂತ್ರಣ!

ಬುಧವಾರ, ಜೂನ್ 26, 2013

ಶುಕ್ರವಾರ, ಜೂನ್ 21, 2013

ಜಗ್!


ರಸ್ತೆಯ ಬದಿಯಲ್ಲೇ ಸಣ್ಣ ಕಮರಿಗೆ ಧುಮುಕುವ ಜಲಧಾರೆಯಿದು. ’ಜಗ್’ನಿಂದ ಬೀಳುವ ನೀರನ್ನು ಹೋಲುವ ಕಾರಣ ಇದಕ್ಕೆ ಜಗ್ ಜಲಧಾರೆ ಎಂದು ಹೆಸರು! ಅವಕ್ಕಾಗಬೇಡಿ. ನಿಜವಾಗಿ ಹೇಳಬೇಕಾದರೆ ಇದೊಂದು ಅನಾಮಧೇಯ ಜಲಧಾರೆ. ಇದಕ್ಕೂ ಒಂದು ಹೆಸರು ಇರಲಿ ಎಂದು, ಗೆಳೆಯ ದಿನೇಶ್ ಹೊಳ್ಳ ಜಗ್‍ನಿಂದ ಬೀಳುವ ನೀರಿನ ನೆನಪಾಗಿ ಇಟ್ಟ ಹೆಸರು ’ಜಗ್ ಜಲಪಾತ’.


ರಸ್ತೆಯ ಪಾರ್ಶ್ವದಲ್ಲಿರುವ ಸಣ್ಣ ತೆರೆದ ಜಾಗದ ಅಂಚಿಗೆ ಹೋಗಿ ಕಮರಿಯೊಳಗೆ ಇಣುಕಿದರೆ ಮಾತ್ರ ಈ ಜಲಧಾರೆ ದರ್ಶನ ನೀಡುತ್ತದೆ. ಸಣ್ಣ ವಾಹನಗಳಲ್ಲಿ ತೆರಳಿದರೆ ರಸ್ತೆಯಿಂದ ಜಲಧಾರೆ ಕಾಣುವುದಿಲ್ಲ.


ಇದೊಂದು ಅದ್ಭುತ ಜಲಧಾರೆಯೇನಲ್ಲ. ಆದರೆ ಚಂದಕ್ಕೇನೂ ಕೊರತೆಯಿಲ್ಲ. ಇದರ ಜಗ್ ಆಕಾರವೇ ಇದರ ಹೆಗ್ಗಳಿಕೆ.

ಭಾನುವಾರ, ಜೂನ್ 16, 2013

ಚಟ್ಟೇಶ್ವರ ದೇವಾಲಯ - ಚಟಚಟ್ಟಿಹಳ್ಳಿ


ಇನ್ನೊಂದು ಹತ್ತು-ಹದಿನೈದು ವರ್ಷಗಳ ನಂತರ ’ಇಲ್ಲಿ ದೇವಾಲಯವಿತ್ತು’ ಎಂದು ಹೇಳುವ ದುರ್ಗತಿ ಬರಬಹುದು ಚಟಚಟ್ಟಿಹಳ್ಳಿಯ ಚಟ್ಟೇಶ್ವರ ದೇವಾಲಯಕ್ಕೆ. ದೇವಾಲಯ ಪಾಳು ಬೀಳುತ್ತಿದೆ. ಮುಖಮಂಟಪ ಶಿಥಿಲಗೊಂಡಿದ್ದು, ಕುಸಿಯುತ್ತಿದೆ. ಗಿಡಗಂಟಿಗಳು ನಿಧಾನವಾಗಿ ಹೊರಗೋಡೆಯನ್ನೇರುತ್ತಿವೆ. ಮಾಡಿನ ಮೇಲೂ ಗಿಡಗಂಟಿಗಳು ರಾರಾಜಿಸಲು ಆರಂಭಿಸಿವೆ.


೨೦೦೯ರ ಸೆಪ್ಟೆಂಬರ್ ತಿಂಗಳಲ್ಲಿ ಬಿದ್ದ ಭಾರಿ ಮಳೆಗೆ ಗೋಪುರ ಹಾನಿಗೊಂಡಿದ್ದು ಒಂದು ಪಾರ್ಶ್ವ ಕುಸಿದಿದೆ. ಪರಿಣಾಮ ದೇವಾಲಯದ ಗೋಡೆಗಳಿಗೆ ಅಳವಡಿಸಲಾಗಿರುವ ಕಲ್ಲುಗಳು ಸಡಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಕಳೆದ ಹತ್ತು ವರ್ಷಗಳಿಂದ ದೇವಾಲಯದ ದುರಸ್ತಿಗೆ ಮನವಿ ಸಲ್ಲಿಸಿದರೂ ಏನೂ ಪರಿಣಾಮವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಒಟ್ಟಾರೆ ಚಟ್ಟೇಶ್ವರನ ಭವಿಷ್ಯ ಆಶಾದಾಯಕವಾಗಿ ಕಾಣುತ್ತಿಲ್ಲ.


ದೇವಾಲಯದ ಮುಂಭಾಗದಲ್ಲೇ ಇರುವ ಬಿಲ್ವ ಪತ್ರೆ ಮರವೊಂದು ಹೆಮ್ಮರವಾಗಿ ಬೆಳೆದಿದ್ದು, ಮುಖಮಂಟಪವನ್ನೇ ಕಬಳಿಸುತ್ತಿದೆ! ಈ ಮರದ ಗೆಲ್ಲುಗಳು ಮುಖಮಂಟಪದ ಮೇಲ್ಭಾಗವನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಊರವರು ದೇವಾಲಯದ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ದೇವಾಲಯದ ಒಳಗೂ ಸ್ವಚ್ಛತೆಯ ಕೊರತೆ. ಎಲ್ಲಾ ಕಡೆ ಧೂಳು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತಿದ್ದರೂ ದೇವಾಲಯವನ್ನು ಸ್ವಚ್ಚವಾಗಿರಿಸಲು ಅಸಡ್ಡೆ. 


೧೧ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ತ್ರಿಕೂಟ ದೇವಾಲಯದ ಎಲ್ಲಾ ೩ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಉಳಿದೆರಡು ಗರ್ಭಗುಡಿಗಳಲ್ಲಿ ಹರಿಹರ ಮತ್ತು ೬ ಅಡಿ ಎತ್ತರವಿರುವ ಸೂರ್ಯನಾರಾಯಣ ದೇವರ ಮೂರ್ತಿಗಳಿವೆ. ಪ್ರಮುಖ ಗರ್ಭಗುಡಿಯ ದ್ವಾರದ ಮೇಲೆ ಇರುವ ಗಜಲಕ್ಷ್ಮೀಯ ಕೆತ್ತನೆ ಮತ್ತು ಕೆಳಗೆ ಇಕ್ಕೆಲಗಳಲ್ಲಿರುವ ದ್ವಾರಪಾಲಕರ ಕೆತ್ತನೆ ಅಳಿಸಿಹೋಗುತ್ತಿವೆ.


ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿಲ್ಲ. ಎರಡು ಕಂಬಗಳ ಹೊರಚಾಚು ಮುಖಮಂಟಪದಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆಯಿದೆ. ದೇವಾಲಯದ ಉಳಿದೆರಡು ಗರ್ಭಗುಡಿಗಳಿಗೂ ಗೋಪುರವಿದ್ದು ಅವು ಬಹಳ ಹಿಂದೆನೇ ಬಿದ್ದುಹೋಗಿವೆ ಎನ್ನಲಾಗುತ್ತದೆ. ಹೊಯ್ಸಳರ ದಂಡನಾಯಕನಾಗಿದ್ದ ಕೇತುಮಲ್ಲನು, ರಾಜ ವಿಷ್ಣುವರ್ಧನ ಹಾಗೂ ಪಟ್ಟದರಾಣಿ ಶಾಂತಲೆಯ ಬಗ್ಗೆ ಇದ್ದಂತಹ ಅಪಾರ ಗೌರವ ಹಾಗೂ ಅಭಿಮಾನದಿಂದ ರಾಜ ರಾಣಿಯರ ನೆನಪಿಗಾಗಿ ಈ ದೇವಾಲಯವನ್ನು ಚೆಟ್ಟಯ್ಯ ಪೆರುಮಾಳ್ ಎಂಬವನಿಂದ ಕಟ್ಟಿಸಿದನು ಎಂದು ಹೇಳುವ ಐತಿಹಾಸಿಕ ದಾಖಲೆ ಚಟ್ಟೇಶ್ವರ ದೇವಾಲಯದಲ್ಲಿರುವ ಶಾಸನದಲ್ಲಿ ಲಭ್ಯವಾಗಿದೆ.


ಚಟ್ಟೇಶ್ವರ ದೇವಾಲಯವನ್ನು ಪುರಾತತ್ವ ಇಲಾಖೆಯ ಆದಷ್ಟು ಬೇಗ ತನ್ನ ಸುಪರ್ದಿಗೆ ತೆಗೆದುಕೊಂಡರೆ ದೇವಾಲಯಕ್ಕೆ ಉಳಿಗಾಲ. ಇಲ್ಲವಾದಲ್ಲಿ ೯೦೦ ವರ್ಷಗಳಷ್ಟು ಕಾಲ ಉಳಿದ ಇತಿಹಾಸ ನಿಧಾನವಾಗಿ ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. (ಈ ಲೇಖನ ೨೦೧೦ ಜನವರಿಯಲ್ಲಿ ಬರೆದದ್ದು. ಈಗ ಪ್ರಸ್ತುತ ದೇವಾಲಯವನ್ನು ದುರಸ್ತಿ ಮಾಡಲಾಗಿದೆ. ವಿವರಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು).

ಗುರುವಾರ, ಜೂನ್ 13, 2013

ಹಣಕುಣಿ ಕೋಟೆ


ರಾಜಮಹಾರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜಧಾನಿಯಿಂದ ಹೊರವಲಯದಲ್ಲಿರುವ ಕೆಲವು ಊರುಗಳಲ್ಲಿ ಸಣ್ಣ ಕೋಟೆಗಳನ್ನು ಕಟ್ಟಿಸುತ್ತಿದ್ದರು. ಈ ಕೋಟೆಗಳಿಂದ ರಾಜ್ಯಭಾರ ನಡೆಯುತ್ತಿರಲಿಲ್ಲ. ಇವುಗಳನ್ನು ಮದ್ದುಗುಂಡುಗಳ ದಾಸ್ತಾನು ಕೇಂದ್ರಗಳನ್ನಾಗಿ ಅಥವಾ ಬೊಕ್ಕಸದ ಕೇಂದ್ರವಾಗಿ ಅಥವಾ ಸೈನಿಕರ ತರಬೇತಿ ಕೇಂದ್ರವಾಗಿ ಮತ್ತಿತರ ಪ್ರಮುಖ ’ಇಲಾಖೆ’ಗಳ ಕೇಂದ್ರವಾಗಿ ಬಳಸಲಾಗುತ್ತಿತ್ತು.


ಇಂತಹ ಕೋಟೆಗಳಲ್ಲೊಂದು ಈ ಹಣಕುಣಿ ಕೋಟೆ. ನಾಲ್ಕಾರು ಬುರುಜುಗಳನ್ನು ಹೊಂದಿರುವ ತೀರಾ ಸಾಧಾರಣ ಕೋಟೆ ಇದು. ಈ ಸ್ಥಳ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿಲ್ಲ. ತಾಲೂಕು ಕೇಂದ್ರದಿಂದ ಕೇವಲ ಐದು ಕಿಮಿ ದೂರದಲ್ಲಿದ್ದು, ಇನ್ನೂ ಸುದೃಢವಾಗಿರುವ ಕೋಟೆಯನ್ನು ಸ್ವಲ್ಪ ಅಭಿವೃದ್ಧಿಗೊಳಿಸಿ, ಸ್ವಚ್ಛಗೊಳಿಸಿದರೆ ಇತಿಹಾಸದ ಸಣ್ಣ ತುಣುಕೊಂದನ್ನು ಜೀವಂತವಾಗಿರಿಸಬಹುದು.


೧೭ನೇ ಶತಮಾನದ ಆರಂಭದಲ್ಲಿ ರಾಜಾ ರಾಮಚಂದ್ರ ಜಾಧವನಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಆಗ ಹಣಕಾಸು ಅಥವಾ ಬೊಕ್ಕಸದ ಕೇಂದ್ರವಾಗಿ ಬಳಸಲ್ಪಡುತ್ತಿತ್ತು. ಇದೇ ಕಾರಣದಿಂದ ’ಹಣ’ಕುಣಿ ಎಂಬ ಹೆಸರು ಬಂದಿರಬಹುದೇ?


ಕೋಟೆಯನ್ನು ಪ್ರವೇಶಿಸಿದ ಕೂಡಲೇ ವಿಶಾಲವಾದ ತೆರೆದ ಸ್ಥಳ. ಈ ತೆರೆದ ಸ್ಥಳವನ್ನು ಹೊರತುಪಡಿಸಿ ಕೋಟೆಯ ಉಳಿದೆಲ್ಲಾ ಭಾಗಗಳಲ್ಲಿ ಗಿಡಗಂಟಿಗಳು ವ್ಯಾಪಕವಾಗಿ ಹಬ್ಬಿಬಿಟ್ಟಿವೆ. ಮುಂದಿನ ಹೆಜ್ಜೆ ಇಡುವಲ್ಲಿ ಏನಿದೆ ಎಂದೂ ಗೊತ್ತಾಗದಷ್ಟು ದಟ್ಟವಾಗಿ ಬೆಳೆದಿವೆ.


ಕೋಟೆಯ ಸುತ್ತಲೂ ಇರುವ ಕಂದಕ ಕಿರಿದಾದರೂ ಆಳವಾಗಿದೆ. ಕಂದಕದಲ್ಲೂ ಹುಲುಸಾಗಿ ಗಿಡಗಂಟಿಗಳು ಬೆಳೆದಿವೆ. ಊರಿನ ಕೊನೆಯಲ್ಲಿರುವ ಕೋಟೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಹೆಚ್ಚಿನ ಕೋಟೆಗಳಲ್ಲಿ, ಕೋಟೆಯ ಕಲ್ಲುಗಳನ್ನು ಊರವರು ಮನೆಯೆಡೆ ಸಾಗಿಸಿರುವುದನ್ನು ಕಾಣಬಹುದು. ಆದರೆ ಇಲ್ಲಿ ಅಂತಹದ್ದೇನೂ ಕಂಡುಬರಲಿಲ್ಲ.

ಮಾಹಿತಿ: ಕಣಜ

ಭಾನುವಾರ, ಜೂನ್ 09, 2013

ಇಲ್ಲೊಂದು ಕಡಲತೀರ...


೨೦೦೭ರಲ್ಲಿ ಮೊದಲ ಬಾರಿ ಈ ಸ್ಥಳಕ್ಕೆ ಬಂದಾಗ ಅಲ್ಲೊಂದು ತಾತ್ಕಾಲಿಕ ಸಣ್ಣ ಗುಡಿಸಲು (ಹಟ್ಟಿ) ಇತ್ತು. ಅದರೊಳಗೆ ಕುಳಿತು ಈ ಕಡಲತೀರವನ್ನು ಆನಂದಿಸಿದ ನೆನಪು ಎಂದಿಗೂ ಮಾಸದು.



ತದನಂತರ ಈ ಕಡಲತೀರಕ್ಕೆ ಹಲವಾರು ಭೇಟಿ ನೀಡಿದ್ದು ಆಗಿದೆ. ಇನ್ನು ಮುಂದೆಯೂ ಭೇಟಿ ನೀಡಲಿದ್ದೇನೆ. ಮೊದಲ ಬಾರಿ ಭೇಟಿ ನೀಡಿದಾಗ ಆದ ಸಂತೋಷ ಪ್ರತಿ ಸಲವೂ ಪುನರಾವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿಗೆ ಯಾರೂ ಬರದಿರುವುದು!


ಉಡುಪಿಗೆ ನನ್ನ ಗೆಳೆಯರು ಬಂದಾಗ ಅವರು ಕಡಲತೀರದ ಭೇಟಿಗೆ ಉತ್ಸುಕರಾಗಿರುವುದು ಸ್ವಾಭಾವಿಕ. ಆಗ ಅವರಲ್ಲಿ ನನ್ನ ಪ್ರಶ್ನೆ - ’ಜನರಿರುವ ಬೀಚ್ ಬೇಕೋ ಅಥವಾ ನಿರ್ಜನ ಬೀಚ್ ಬೇಕೋ’ ಎಂದು. ಇದುವರೆಗೂ ಯಾರೂ ’ಜನರಿರುವ ಬೀಚ್’ ಎಂದು ಹೇಳೇ ಇಲ್ಲ! ಹಾಗಾಗಿ ಈ ಸ್ಥಳಕ್ಕೆ ಹಲವು ಭೇಟಿ ನೀಡಿದ್ದಾಗಿದೆ. ನನ್ನೊಂದಿಗೆ ಬಂದ ಎಲ್ಲಾ ಗೆಳೆಯರೂ ಈ ಸ್ಥಳವನ್ನು ಬಹಳ ಆನಂದಿಸಿದ್ದಾರೆ ಕೂಡಾ (ಹಾಗಂತ ನಾನು ತಿಳಿದುಕೊಂಡಿದ್ದೇನೆ).


ಕರಾವಳಿಯಲ್ಲಿ ಪಶ್ಚಿಮಕ್ಕೆ ಎಲ್ಲಿ ಹೋದರೂ ಕಡಲತೀರ ಸಿಗುವುದಾದರೂ, ಸರಿಯಾದ ರಸ್ತೆ, ಸ್ವಚ್ಛ ಪರಿಸರ, ನಿರ್ಮಲ ವಾತಾವರಣ ಹಾಗೂ ಸದ್ದುಗದ್ದಲವಿಲ್ಲದ ಕಡಲತೀರ ಸಿಗುವುದು ವಿರಳ.


ಕಳೆದೊಂದು ದಶಕದಲ್ಲಿ ಅಂತಹ ಕೆಲವು ಕಡಲತೀರಗಳು ಈಗ ಪ್ರಸಿದ್ಧಿ ಪಡೆದು ಪ್ರವಾಸಿ ಸ್ಥಳಗಳಾಗಿವೆ. ಆದರೆ ಈ ಕಡಲತೀರ ಇನ್ನೂ ಪ್ರವಾಸಿಗರ ನಕ್ಷೆಯಲ್ಲಿ ಗುರುತಿಸಲ್ಪಟ್ಟಿಲ್ಲ.



ಇನ್ನೂ ಹಲವಾರು ಇಂತಹ ಕಡಲತೀರಗಳಿವೆ. ಅವಿನ್ನೂ ಸ್ವಚ್ಛವಾಗಿವೆ, ಜನರ ಸದ್ದುಗದ್ದಲದಿಂದ ದೂರವಿವೆ. ಹಾಗೇ ಇದ್ದರೆ ಚೆನ್ನ.

ಮಾಹಿತಿ: ನಿಶಾಂತ್ ಭಾರದ್ವಜ್