ನವೆಂಬರ್ ೧೩, ೨೦೦೫.
ಹೊಸಗೋಡು ಜಲಪಾತ ನೋಡೋಣವೆಂದು ಉಡುಪಿಯಿಂದ ಯಮಾಹಾದಲ್ಲಿ ಹೊರಟು ಗೆಳೆಯ ಲಕ್ಷ್ಮೀನಾರಾಯಣ (ಪುತ್ತು) ನನ್ನು ಪಿಕ್ ಮಾಡಿ ದಾರಿಯಲ್ಲಿ ಹೋಟೇಲೊಂದಕ್ಕೆ ನುಗ್ಗಿದೆವು. ಇಲ್ಲಿ ನಮ್ಮ ಬೆಳಗಿನ ಉಪಹಾರ ನೆನಪಿನಲ್ಲಿರುವಂತದ್ದು. ೬೦ ರೂಪಾಯಿಯವರೆಗೆ ಬಿಲ್ ಆಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಬಿಲ್ ಆದದ್ದು ಕೇವಲ ರೂ.೨೮!! ದೇವಕಾರದ ಮಧುಕರ್ ಮನೆಯ ಊಟವನ್ನು ನೆನೆಸಿ ಪುತ್ತು ಭಾವೋದ್ವೇಗಕ್ಕೊಳಗಾದ. ಈತನಿಗೆ ಎಲ್ಲಿ ಹೋದರೂ ತಿಂದದ್ದು ಮಾತ್ರ ನೆನಪಿರುವುದು, ಪ್ರಕೃತಿ ನೋಡಿದ್ದೆಲ್ಲಾ ಅದೇ ಕ್ಷಣ ಮರೆತುಬಿಟ್ಟಿರುತ್ತಾನೆ. ಆದರೂ ಜೊತೆಗೊಬ್ಬ ಇದ್ದರೆ ಯಾವಾಗಲೂ ಒಳಿತು ಎಂಬ ಮಾತ್ರಕ್ಕೆ ಈತನನ್ನು ನಾನು ಕರೆದೊಯ್ಯುವುದು.
ಮುಂದೆ ದಾರಿಯಲ್ಲಿ ಸುಂದರ ಯುವಕನೊಬ್ಬ ಬಜಾಜ್ ಎಮ್-೮೦ ವಾಹನದಲ್ಲಿ ನಮ್ಮ ಸಮಾನಾಂತರಕ್ಕೆ ಬಂದು ನಿಧಾನಿಸಿದ. ಈತ ಜನಾರ್ಧನ, ಹೀರೇಬೈಲಿನ ಮಹಾದೇವ ನಾಯ್ಕರ ಮಗ. ಪರಸ್ಪರ ಪರಿಚಯ ಮಾಡಿಕೊಂಡು ನಂತರ ಅವರ ಮನೆಯತ್ತ ತೆರಳಿದೆವು. ಮಹಾದೇವ ನಾಯ್ಕರ ಮನೆ ಕಲಾವಿದರ ಮನೆ. ಜನಾರ್ಧನ ಒಬ್ಬ ಯಕ್ಷಗಾನ ಕಲಾವಿದ. ಸಾಲಿಗ್ರಾಮ ಮೇಳದೊಂದಿಗೆ ೨ ವರ್ಷ ತಿರುಗಾಟ ಮಾಡಿದ್ದರು. ಮಹಾದೇವ ನಾಯ್ಕರೂ ಉತ್ತಮ ಕಲಾವಿದರು. ಇಲ್ಲಿ ಕುಡಿಯಲು ಚಹಾ ಸಿಕ್ಕಿತು ನಂತರ ಎಳನೀರೂ ಸಿಕ್ಕಿತು. ’ಮುಂದಿನ ಸಲ ಮುಕ್ತಿ ಹೊಳೆ ಜಲಧಾರೆ ನೋಡ್ಲಿಕ್ಕೆ ಬನ್ನಿ, ಆಗ ನಮ್ಮ ಮನೆಗೆ ಬಂದು ಉಳ್ಕೊಳ್ಳಬೇಕು’ ಎಂದು ಜನಾರ್ಧನ ಆಗಲೇ ಅಹ್ವಾನ ನೀಡಿ, ’ಮುಂದೆ ತಿಮ್ಮಾ ಗೌಡರ ಮನೆಯಲ್ಲಿ ವಿಚಾರಿಸಿ, ಅವರ ಮನೆಯವರಲ್ಲೊಬ್ಬರು ದಾರಿ ತೋರಿಸಲು ಬರಬಹುದು’ ಎಂದು ಬೀಳ್ಕೊಟ್ಟರು.
ತಿಮ್ಮಾ ಗೌಡರ ಮನೆ ತಲುಪಿದಾಗ ಅವರ ಮಗ ಗಣಪತಿ ಪುತ್ತುವನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ. ಪುತ್ತು ಹಳದೀಪುರದವನೆಂದು ಹೇಳಿದ ಕೂಡಲೇ ಗಣಪತಿಯ ಮುಖದಲ್ಲಿ ದೊಡ್ಡ ನಗು. ಪುತ್ತು ರಾಷ್ಟ್ರೀಯ ಮಟ್ಟದ ಕ್ವಾಲಿಫೈಡ್ ವಾಲಿಬಾಲ್ ರೆಫ್ರೀ. ಕರ್ನಾಟಕ, ಗೋವಾಗಳಲ್ಲೆಲ್ಲಾ ವಾಲಿಬಾಲ್ ಪಂದ್ಯಾವಳಿಗಳಲ್ಲಿ ರೆಫ್ರೀಯಾಗಿ ಹೋಗುತ್ತಾನೆ. ಹಳದೀಪುರದಲ್ಲಿ ವ್ಯಾಸಂಗ ಮಾಡಿದ್ದ ಗಣಪತಿ, ಸ್ಥಳೀಯ ವಾಲಿಬಾಲ್ ಪಂದ್ಯಾಟಗಳಲ್ಲಿ ಪುತ್ತುವನ್ನು ನೋಡಿದ್ದ. ಹೀಗಾಗಿ ಆ ಒಂದು ಮುಹೂರ್ತದಲ್ಲಿ ಇಬ್ಬರು ಆಗಂತುಕರು ಗೆಳೆಯರಾದರು. ಈ ಹಳ್ಳಿಯಲ್ಲೂ ತನ್ನನ್ನು ಗುರುತಿಸಿದರಲ್ಲಾ ಎಂದು ಪುತ್ತುವಿಗೆ ಖುಷಿಯೋ ಖುಷಿ. ಬೈಕನ್ನು ಗಣಪತಿಯ ಮನೆಯಲ್ಲೇ ಇರಿಸಿ ಜಲಧಾರೆಯತ್ತ ಹೊರಟೆವು. ಅದಾಗಲೇ ಇಬ್ಬರು ಹೊಸ ಗೆಳೆಯರು ಮಾತುಕತೆಯಲ್ಲಿ ತೊಡಗಿಯಾಗಿತ್ತು.
ಮುಂದೆ ಶಾಲೆಯ ಬಳಿಯೇ ಗಣಪತಿಯ ಸಂಬಂಧಿ ಹನ್ಮಂತ ನಮಗೆ ಜೊತೆಯಾದ. ಸುಮಾರು ೪೦೦ ಅಡಿ ಎತ್ತರದಿಂದ ೯ ಹಂತಗಳಲ್ಲಿ ಧುಮುಕುವ ಜಲಧಾರೆಯ ದೃಶ್ಯ ನೋಡಿ ಇನ್ನಷ್ಟು ವೇಗವಾಗಿ ನಡೆಯತೊಡಗಿದೆವು.
ಜಲಧಾರೆಯ ಮೊದಲ ೩ ಹಂತಗಳಿಗೆ ಮರಗಿಡಗಳು ಚೆನ್ನಾದ ಚಪ್ಪರ ಹಾಕಿವೆ. ಎಂದಿನಂತೆ ನಾನು ನಿಧಾನ ಬರತೊಡಗಿದಾಗ ಇನ್ನು ಮುಂದಕ್ಕೆ ಹೋಗುವುದು ಕಷ್ಟಕರ ಎಂದು ಹನ್ಮಂತ ವಟಗುಟ್ಟತೊಡಗಿದ. ಹಾಗೆ ೬ನೇ ಹಂತ ತಲುಪಿದಾಗ ಹನ್ಮಂತ ಮತ್ತದೇ ಮಾತನ್ನು ಪುನರಾವರ್ತಿಸಿದರೂ ನಾನದನ್ನು ಕಡೆಗಣಿಸಿದೆ.
ಮುಂದೆ ೫ನೇ ಹಂತವನ್ನು ತಲುಪಿದೆವು. ಇದು ೫೦ ಅಡಿ ಅಂತರದಲ್ಲಿ ೨ ಧಾರೆಗಳಾಗಿ ಧುಮುಕುತ್ತಿತ್ತು. ಹನ್ಮಂತನ ವಿರೋಧದ ನಡುವೆಯೂ ಮುಂದುವರಿಸಿದೆವು. ಇಲ್ಲಿ ನಡೆದದ್ದೇ ದಾರಿ. ಕಲ್ಲಿನ ಮೇಲ್ಮೈಯಲ್ಲಿ ಬೆಳೆದಿರುವ ಹುಲ್ಲುಗಳನ್ನು ಆಧಾರವಾಗಿ ಬಳಸಿ ಎಚ್ಚರಿಕೆಯಿಂದ ಮುಂದುವರಿದರಾಯಿತು. ೫ನೇ ಹಂತದ ಮೇಲೆ ತಲುಪಿದಾಗ ಇನ್ನು ಮುಂದಕ್ಕೆ ಹೋಗುವುದು ನಮ್ಮಿಂದ ಸಾಧ್ಯವೇ ಇಲ್ಲ ಎಂದು ಹನ್ಮಂತ ಕೂತುಬಿಟ್ಟ. ಪುತ್ತುವಿಗೆ ಬೆಳಗ್ಗೆ ತಿಂದದ್ದು ಮತ್ತು ಕುಡಿದ ಎಳನೀರೆಲ್ಲಾ ಕರಗಿ ಹೋಗಿರಬೇಕು. ಮೇಲೆ ಹತ್ತಿ ಹತ್ತಿ ಸಾಕಾದ ಆತನೂ ಹನ್ಮಂತನ ಮಾತಿಗೆ ಒಪ್ಪಿಗೆ ಸೂಚಿಸಿದ! ಇನ್ನೂ ಮೇಲಕ್ಕೆ ಹೋಗಲೇಬೇಕೆಂದು ನಾನು ಪಟ್ಟು ಹಿಡಿದೆ. (ನಂತರ ಹನ್ಮಂತನ ಮನೆಯಲ್ಲಿ ವಿಶ್ರಮಿಸುವಾಗ ಮೇಲೆ ಹೋಗುವುದು ಬೇಡವೆಂದು ತಾನೇಕೆ ಪದೇ ಪದೇ ಹೇಳುತ್ತಿದ್ದೆ ಎಂದು ಹನ್ಮಂತ ತಿಳಿಸಿದ. ನನ್ನ ೯೫ ಕೆ.ಜಿ. ಧಡೂತಿ ದೇಹವನ್ನು ನೋಡಿ ಆತನಿಗೆ ಅನುಮಾನವಿತ್ತಂತೆ ಈತನಿಂದಾಗದು ಎಂದು).
ಸುಂದರವಾಗಿರುವ ನಾಲ್ಕನೇ ಹಂತದ ಸನಿಹ ತಲುಪಬೇಕಾದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಕೇವಲ ೩ ಅಡಿ ಅಗಲವಿರುವ ಬಂಡೆಯ ಹಾದಿಯಲ್ಲಿ ೫೦ ಅಡಿಗಳಷ್ಟು ದೂರ ನಡೆದುಕೊಂಡು ಹೋಗಬೇಕು. ಈ ಹಾದಿಯ ಎರಡೂ ಬದಿಯಲ್ಲಿ ನೀರು ಹರಿಯುತ್ತದೆ. ನಿಧಾನವಾಗಿ ಈ ತೊಡಕನ್ನು ದಾಟಿ ಮುಂದುವರಿದೆ. ಜಲಧಾರೆಯ ಎರಡನೇ ಹಂತದ ಬಳಿಕ ನೀರಿನ ಹರಿವು ಇಬ್ಭಾಗವಾಗುತ್ತದೆ. ಒಂದು ಭಾಗ ಜಲಧಾರೆಯ ೩ನೇ ಹಂತವನ್ನು ನಿರ್ಮಿಸಿದರೆ ಮತ್ತೊಂದು ಭಾಗ ನಾಲ್ಕನೇ ಹಂತವನ್ನು ನಿರ್ಮಿಸುತ್ತದೆ. ಜಲಧಾರೆಯ ೫ನೇ ಹಂತದ ಮೊದಲು ೨ ಭಾಗಗಳು ಮತ್ತೆ ಒಂದುಗೂಡುತ್ತವೆ.
ಹನ್ಮಂತ ನಮ್ಮನ್ನು ಆತನ ಮನೆಗೆ ಕರೆದೊಯ್ದ. ಮನೆಯಂಗಳದಲ್ಲೇ ಇದ್ದ ಗಿಡದಿಂದ ನಿಂಬೆ ಹಣ್ಣನ್ನು ಕಿತ್ತು ಅದರಿಂದ ಪಾನಕ ಮಾಡಿ ನಮಗೆ ಕೊಡಲಾಯಿತು. ಎಷ್ಟು ತಾಜಾವಾಗಿತ್ತೆಂದರೆ ಲೋಟದ ತುದಿಯಲ್ಲಿ ಪಾನಕ ಹನಿಗಳು ಮೇಲಕ್ಕೆ ಪುಟಿಯುತ್ತಿದ್ದವು. ಗಣಪತಿ ತೆಂಗಿನ ಮರವೊಂದನ್ನು ಏರಿ ಸೀಯಾಳ ಕೊಯ್ದು ಎಳನೀರು ಕುಡಿಸಿದ. ಲೀಟರ್ ಗಟ್ಟಲೆ ನೀರಿದ್ದವೇನೋ ಆ ಸೀಯಾಳಗಳಲ್ಲಿ. ಎಷ್ಟು ಕುಡಿದರೂ ಮುಗಿಯುತ್ತಿರಲಿಲ್ಲ. ಹನ್ಮಂತನ ಮಗಳು ರಕ್ಷಿತಾಳ ರಂಗು ಮತ್ತು ರೂಪ ಕಂಡು ಪುತ್ತುವಿಗೆ ಫುಲ್ಲು ಡೌಟು - ಆಕೆ ನಿಜವಾಗಿಯೂ ಹನ್ಮಂತನ ಮಗಳು ಹೌದೋ ಅಲ್ಲವೋ ಎಂದು!
ನಂತರ ಗಣಪತಿಯ ಮನೆಯಲ್ಲಿ ಆತ ಮತ್ತೆ ಸೀಯಾಳ ಬೀಳಿಸಿ ಕುಡಿಸಿದ! ದಿನವೆಂದರೆ ಹೀಗಿರಬೇಕು ನೋಡಿ! ಸೀಯಾಳದ ಮೇಲೆ ಸೀಯಾಳ. ತಾಜಾ ಲಿಂಬೆ ಪಾನಕ. ವ್ಹಾ! ಹಿರೇಬೈಲು ತಲುಪಿದಾಗ ಮಹಾದೇವ ನಾಯ್ಕರು ಮನೆಯ ದಣಪೆ(ಗೇಟು)ಯ ಬಳಿಯೇ ನಿಂತಿದ್ದರು. ಅಲ್ಲಿ ಬೈಕು ನಿಲ್ಲಿಸಿದಾಗ ಮತ್ತೆ ಅವರು ಬಿಟ್ಟಾರೆಯೇ. ಪುನ: ಒಳಗೆ ಕರೆದು ಮತ್ತೊಂದು ಬಾರಿ ಚಹಾ ಕುಡಿಸಿದರು. ಸ್ವಲ್ಪ ಹೊತ್ತು ಮಾತನಾಡಿ, ಮುಕ್ತಿ ಹೊಳೆ ಜಲಧಾರೆ ನೋಡಲು ಶೀಘ್ರವೇ ಬರಲಿದ್ದೇವೆಂದು ತಿಳಿಸಿ ಹೊರಟೆವು.