ಎರಡು ವರ್ಷಗಳ ಮೊದಲು ಮರತೂರು ಎಂಬ ಶಬ್ದಕ್ಕೆ ನನ್ನ ಜೀವನದಲ್ಲಿ ಯಾವುದೇ ಪ್ರಾಮುಖ್ಯತೆಯಿರಲಿಲ್ಲ. ಆದರೆ ಮರತೂರಿಗೆ ಭೇಟಿ ನೀಡಿದ ಬಳಿಕ ಈ ಊರಿಗಿರುವ ಐತಿಹಾಸಿಕ ಪ್ರಾಮುಖ್ಯತೆಯನ್ನು ಅರಿತು, ನಮಗೆಲ್ಲಾ ಅದರ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದಿರುವ ಬಗ್ಗೆ ಖೇದವಾಯಿತು. ಬಹಳ ಪುರಾತನ ಕಾಲದಿಂದ ಕರ್ನಾಟಕದ ಹಾಗೂ ಕನ್ನಡದ ಪತಾಕೆಯನ್ನು ಎತ್ತಿ ಹಾರಿಸುತ್ತಿರುವ ಇಂತಹ ಊರುಗಳ ಬಗ್ಗೆ ಹಾಗೂ ಇಂತಹ ಊರುಗಳಲ್ಲಿ ಜನಿಸಿ ರಾಜ್ಯಕ್ಕೆ ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಿದ ಮಹಾನ್ ವ್ಯಕ್ತಿಯ ಬಗ್ಗೆ ನಮಗೆ ಅರಿವೇ ಇಲ್ಲದಿರುವುದು ಇನ್ನಷ್ಟು ಸೋಜಿಗವನ್ನುಂಟುಮಾಡಿತು.
ಮರತೂರಿನಲ್ಲಿ ಒಂದು ಸುಂದರ ಭವ್ಯ ಕಟ್ಟಡವಿದೆ. ಇದನ್ನು ’ವಿಜ್ಞಾನ ಭವನ’ ಎಂದು ಕರೆಯುತ್ತಾರೆ. ಇದನ್ನು ಇದೇ ಊರಿನಲ್ಲಿ ಜನಿಸಿರುವ ಕವಿ ವಿಜ್ಞಾನೇಶ್ವರರ ಸ್ಮರಣಾರ್ಥ ನಿರ್ಮಿಸಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಇದನ್ನು ಅಧ್ಯಯನ ಕೇಂದ್ರವನ್ನಾಗಿ ಬಳಸುತ್ತಿದೆ.
ಇಷ್ಟಕ್ಕೂ ಈ ವಿಜ್ಞಾನೇಶ್ವರ ಯಾರು? ಇವರು, ಪ್ರಸಿದ್ಧ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಗುರುಗಳಾಗಿದ್ದು, ಆಸ್ಥಾನ ಪಂಡಿತರೂ ಆಗಿದ್ದರು. ವಿಕ್ರಮಾದಿತ್ಯನ ರಾಜ್ಯಭಾರವನ್ನು ಚಾಲುಕ್ಯರ ಆಳ್ವಿಕೆಯಲ್ಲಿ ಸುವರ್ಣಾಕ್ಷರಗಳಿಂದ ಗುರುತಿಸಲ್ಪಡುತ್ತದೆ. ಇದಕ್ಕೆ ಪ್ರಮುಖ ಕಾರಣ ವಿಜ್ಞಾನೇಶ್ವರರ ಮಾರ್ಗದರ್ಶನ. ’ಮಿತಾಕ್ಷರ (ಹಿಂದೂ ನ್ಯಾಯ ಸಂಹಿತೆ)’ ಎಂಬ ಮಹಾನ್ ಗ್ರಂಥಗಳನ್ನು ಬರೆದವರೇ ಈ ವಿಜ್ಞಾನೇಶ್ವರ. ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿದ್ದ ವಿಜ್ಞಾನೇಶ್ವರರು ಬರೆದ ಈ ಗ್ರಂಥ ಇಂದಿನ ಕಾನೂನು ಶಾಸ್ತ್ರದ ಮೂಲ. ಸಾವಿರ ವರ್ಷಗಳ ಹಿಂದೆನೇ ಹಿಂದೂ ಕಾನೂನು ಗ್ರಂಥ ಬರೆದು ಅದು ದೇಶಾದ್ಯಂತ ಜಾರಿಗೊಳ್ಳುವಷ್ಟು ಪ್ರಸಿದ್ಧಿಯಾಗಿದ್ದು ಕನ್ನಡಿಗರು ಹೆಮ್ಮೆ ಪಡುವ ವಿಷಯ.
ಮರತೂರಿಗೆ ನಾನು ತೆರಳುವ ಇರಾದೆ ಇದ್ದಿದ್ದು ಅಲ್ಲಿನ ದೇವಾಲಯಗಳನ್ನು ನೋಡಲು. ಅಂತೆಯೇ ಸ್ವಲ್ಪ ಮಾಹಿತಿ ಹುಡುಕಾಡಿದಾಗ ವಿಜ್ಞಾನೇಶ್ವರರ ಬಗ್ಗೆ ತಿಳಿದುಬಂತು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಲಭ್ಯವಾಗಿರಲಿಲ್ಲ. ಈ ವರ್ಷ ಫೆಬ್ರವರಿ ತಿಂಗಳಂದು ಕನ್ನಡಪ್ರಭದಲ್ಲಿ ಶಾಲಿನಿ ರಜನೀಶ್ ಎಂಬವರು ವಿಜ್ಞಾನೇಶ್ವರರ ಬಗ್ಗೆ ವಿವರವಾಗಿ ಮಾಹಿತಿಯಿರುವ ಲೇಖನ ಬರೆದಿದ್ದಾರೆ. ಕನ್ನಡಿಗರೆಲ್ಲರೂ ಓದಲೇಬೇಕಾದ, ಸಮಗ್ರ ಮಾಹಿತಿಯಿರುವ
ಅದ್ಭುತ ಲೇಖನವಿದು.
ಮರತೂರಿನಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಬಹಳ ಪ್ರಸಿದ್ಧಿ ಪಡೆದಿರುವ ದೇವಾಲಯ. ಚಾಲುಕ್ಯ ಶೈಲಿಯ ಈ ದೇವಾಲಯದ ನಿರ್ಮಾಣ ವರ್ಷದ ಬಗ್ಗೆ ಮಾಹಿತಿ ದೊರಕಲಿಲ್ಲ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ದೇವಾಲಯ ಕಾಲಕಾಲಕ್ಕೆ ನವೀಕರಣಗೊಳ್ಳುತ್ತ ಬಂದಿದೆ. ಗೋಪುರ ಮತ್ತು ಹೊರಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿದೆ.
ಕಾಶಿ ವಿಶ್ವನಾಥ ದೇವಾಲಯದಲ್ಲಿ ಎರಡು ಶಾಸನಗಳು ದೊರಕಿವೆ. ಇವುಗಳಲ್ಲಿ ಒಂದು ವಿಜ್ಞಾನೇಶ್ವರರ ಪರಿಚಯ ನೀಡುವ ಶಾಸನವಾಗಿದೆ. ಎರಡನೇ ಶಾಸನವು ವಿಜ್ಞಾನೇಶ್ವರರ ಮಗನಾಗಿದ್ದ ಹೆಗ್ಗಡೆ ಬೀಚಿರಾಜ ಹಾಗೂ ಆತನ ಪತ್ನಿ ಚಾಮಲಾ ದೇವಿಯರು ಮರತೂರಿನಲ್ಲಿ ದೇವಾಲಯವನ್ನು ನಿರ್ಮಿಸಿದಾಗ, ಹಲವರು ಭೂದಾನ ಮಾಡಿದ ವಿವರಗಳನ್ನು ಒಳಗೊಂಡಿದೆ.
ದೇವಾಲಯದ ಹಿಂಭಾಗದಲ್ಲಿ ಪುರಾತನ ಪುಷ್ಕರಿಣಿಯಿದೆ. ಅಗಲ ಕಿರಿದಾಗಿದ್ದು ಆಳವಿರುವ ಪುಷ್ಕರಿಣಿಯ ಮೆಟ್ಟಿಲುಗಳ ರಚನೆ ಆಕರ್ಷಕವಾಗಿದೆ. ನಿಧಾನವಾಗಿ ಶಿಥಿಲಗೊಳ್ಳುತ್ತಿರುವ ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಕರ್ನಾಟಕ ಸರಕಾರ ೨೦೧೨ರ ಕೊನೆಯಲ್ಲಿ ೫೦ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಕಾಶಿ ವಿಶ್ವನಾಥ ದೇವಾಲಯದ ಪಡಸಾಲೆಗೆ ತಾಗಿಕೊಂಡೇ ಶಂಕರಲಿಂಗ ದೇವಾಲಯವಿದೆ. ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಈ ದೇವಾಲಯ ಹೊಂದಿದೆ.
ಗರ್ಭಗುಡಿಯ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರು ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಎತ್ತರದ ಪಾಣಿಪೀಠದಲ್ಲಿ ಶಿವಲಿಂಗವನ್ನು ಕಾಣಬಹುದು.
ದೇವಾಲಯದ ಮುಖಮಂಟಪದ ಬಳಿ ಗಣೇಶನ ದೊಡ್ಡ ಮೂರ್ತಿಯಿದೆ. ಹಾಗೇನೆ ನವರಂಗದ ದ್ವಾರದ ಒಂದು ಮೂಲೆಯಲ್ಲಿ ಗಣೇಶನ ಸಣ್ಣ ಮೂರ್ತಿಯನ್ನು ಇರಿಸಲಾಗಿದೆ.
ಇವೆರಡು ದೇವಾಲಯಗಳನ್ನು ದಾಟಿ ಮುನ್ನಡೆದಾಗ ಅನತಿ ದೂರದಲ್ಲಿ ದೇವಾಲಯದಂತೆ ತೋರುವ ರಚನೆಯೊಂದು ಕಾಣಬಂತು. ನೋಡೋಣವೆಂದು ಸಮೀಪ ತೆರಳಿದರೆ, ಅದು ಒಂದಾನೊಂದು ಕಾಲದಲ್ಲಿ ಭವ್ಯವಾಗಿ ಮೆರೆದಿದ್ದ ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ!
ಈ ದೇವಾಲಯದ ಶೋಚನೀಯ ಪರಿಸ್ಥಿತಿ ಕಂಡು ನಾನು ಕಣ್ಣೀರಿಡುವುದೊಂದು ಬಾಕಿಯಿತ್ತು. ದೇವಾಲಯದ ಹೊರಗೋಡೆಯೆಲ್ಲಾ ಕುಸಿದುಬಿದ್ದು ಕಲ್ಲಿನ ರಾಶಿಯಾಗಿ ಮಾರ್ಪಾಡಾಗಿದೆ. ತ್ರಿಕೂಟಾಚಲದ ಕುರುಹಾಗಿ ಎರಡು ಗೋಪುರದ ಅವಶೇಷಗಳನ್ನು ಕಾಣಬಹುದು. ಇನ್ನೊಂದು ಗೋಪುರ ಎಂದೋ ಮಾಯವಾಗಿದೆ.
ದೇವಾಲಯವನ್ನು ಪ್ರವೇಶಿಸಬೇಕಾದರೆ ಕೊಟ್ಟಿಗೆಯೊಂದನ್ನು ಹಾದುಹೋಗಲೇಬೇಕು. ಪ್ರಮುಖ ದ್ವಾರದ ಮುಂಭಾಗದಲ್ಲಿ ಕಂಬ ಊರಿ, ಶೀಟು ಹಾಕಿಸಿ, ಎತ್ತುಗಳನ್ನು ಕಟ್ಟಿಹಾಕಲಾಗಿತ್ತು. ಈ ಎತ್ತುಗಳನ್ನು ದಾಟಿ ಮುಂದೆ ಹೋಗುವುದೇ ಒಂದು ಹರಸಾಹಸದ ಕೆಲಸವೆನಿಸಿತು.
ಪ್ರಮುಖ ದ್ವಾರದ ಪರಿಸ್ಥಿತಿ ಇನ್ನೂ ಶೋಚನೀಯ. ಮೇಲಿನ ಚಿತ್ರವೇ ಎಲ್ಲವನ್ನೂ ಹೇಳುತ್ತದೆ. ಪ್ರಮುಖ ದ್ವಾರದ ಹೊರಗಡೆ ಬಲಕ್ಕೆ ಕೊಟ್ಟಿಗೆಯಿದ್ದರೆ, ಎಡಕ್ಕೆ ಮನೆಯೊಂದರ ಗೋಡೆ. ದಾರಿ ಅಲ್ಲಿಗೇ ಕೊನೆ. ದೇವಾಲಯದ ಹೊರಗೋಡೆಗೇ ಮನೆಯ ಗೋಡೆಯನ್ನು ತಾಗಿಸಿ, ಮನೆಯೊಳಗಿನ ಕೋಣೆಯೊಂದನ್ನು ರಚಿಸಿಬಿಟ್ಟಿದ್ದಾರೆ! ಇನ್ನು ದ್ವಾರದ ಮೇಲಿರಬೇಕಾಗಿದ್ದ ಅಡ್ಡಪಟ್ಟಿ, ದ್ವಾರದ ಮುಂಭಾಗದಲ್ಲಿ ಕೆಳಗಡೆ ಅಡ್ಡಕ್ಕೆ ಮಲಗಿಕೊಂಡಿತ್ತು. ದ್ವಾರದ ಮೇಲೆ ರಾರಾಜಿಸಬೇಕಾಗಿದ್ದ ಗಜಲಕ್ಷ್ಮೀ, ಕೆಳಗೆ ಮಣ್ಣು ಮೆತ್ತುತ್ತಿದ್ದಳು.
ದೇವಾಲಯದೊಳಗೆ ಎಲ್ಲೆಡೆ ಕತ್ತಲು. ಪ್ರಮುಖ ಗರ್ಭಗುಡಿಯ ಛಾವಣಿ ಒಡೆದಿರುವುದರಿಂದ ಅಲ್ಲಿ ಬೆಳಕು ತೂರಿಬರುತ್ತಿತ್ತು. ಪ್ರಮುಖ ಗರ್ಭಗುಡಿ ಪ್ರತ್ಯೇಕ ಅಂತರಾಳವನ್ನು ಹಾಗೂ ಉಳಿದೆರಡು ಗರ್ಭಗುಡಿಗಳು ತೆರೆದ ಅಂತರಾಳವನ್ನು ಹೊಂದಿವೆ. ಎಲ್ಲಾ ಗರ್ಭಗುಡಿಗಳಿಗೆ ಒಂದೇ ನವರಂಗವಿದೆ. ಇಷ್ಟೇ ಅಲ್ಲದೆ ಈಗಲೂ ಎಲ್ಲಾ ಮೂರು ಗರ್ಭಗುಡಿಗಳಲ್ಲಿ ಶಿವಲಿಂಗಗಳಿವೆ.
ನವರಂಗದ ತುಂಬಾ ಸಾಮಾನು ಸರಂಜಾಮುಗಳು ತುಂಬಿಹೋಗಿವೆ. ನವರಂಗವನ್ನು ಹಳ್ಳಿಗರು ಗೋದಾಮಿನಂತೆ ಬಳಸುತ್ತಿದ್ದಾರೆ. ನಡುವೆ ಅಲ್ಲಲ್ಲಿ ಅತಿಯಾದ ಭಕ್ತಿಯಿಂದ ಬಣ್ಣ ಹಚ್ಚಲಾದ ನಾಗನ ಕಲ್ಲುಗಳನ್ನು ಕಾಣಬಹುದು.
ಪ್ರಮುಖ ಗರ್ಭಗುಡಿಯ ಅಂತರಾಳದ ದ್ವಾರದ ಪಾರ್ಶ್ವದಲ್ಲಿ ಗಣೇಶನ ಮೂರ್ತಿಯಿದೆ. ಗರ್ಭಗುಡಿಯು ಪಂಚಶಾಖೆಗಳನ್ನು ಹೊಂದಿದ್ದು ಮೇಲ್ಗಡೆ ಗಜಲಕ್ಷ್ಮೀಯನ್ನು ಹೊಂದಿದೆ.
ಎರಡನೇ ಗರ್ಭಗುಡಿಯಲ್ಲಿಯೂ ಸುಂದರ ಶಿವಲಿಂಗವಿದೆ. ಪಂಚಶಾಖೆಯ ದ್ವಾರವು ದ್ವಾರಪಾಲಕರನ್ನು ಹಾಗೂ ಗಜಲಕ್ಷ್ಮೀಯನ್ನು ಹೊಂದಿದೆ.
ಮೂರನೇ ಗರ್ಭಗುಡಿಯ ಬಳಿ ಸ್ವಲ್ಪವೂ ಬೆಳಕಿರಲಿಲ್ಲ. ಕ್ಯಾಮರಾದ ಬೆಳಕಿನಲ್ಲಿ ಅದ್ಯಾವುದೋ ಪ್ರಾಣಿ ಕಂಡಂತಾಗಿ ಹೌಹಾರಿದೆ. ನಾನು ಚಿತ್ರವನ್ನು ಪರಿಶೀಲಿಸಬೇಕೆನ್ನುವಷ್ಟರಲ್ಲಿ, ನಾಯಿಯೊಂದು ತಲೆತಗ್ಗಿಸಿಕೊಂಡು ನನ್ನನ್ನು ದಾಟಿ ದೇವಾಲಯದ ಹೊರನಡೆಯಿತು! ದೇವಾಲಯದ ಶೋಚನೀಯ ಪರಿಸ್ಥಿತಿಗೆ ತಿಲಕವಿಟ್ಟಂತಾಗಿತ್ತು.
ಮರತೂರಿನಲ್ಲಿ ಇನ್ನೂ ಹಲವಾರು ದೇವಾಲಯಗಳಿವೆ. ಆದರೆ ಅವೆಲ್ಲವೂ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಸಮಯದ ಅಭಾವವಿದ್ದುದರಿಂದ ಅವೆಲ್ಲವನ್ನು ನೋಡಲು ನನಗಾಗಲಿಲ್ಲ. ಇಲ್ಲೊಂದು ಕೋಟೆಯೂ ಇದೆ. ಕೋಟೆಯೊಳಗೆ ತೆರಳಲು ಸರಿಯಾದ ದಾರಿಯಿಲ್ಲ. ಗಿಡಗಂಟಿಗಳು ಎಲ್ಲೆಡೆ ಹಬ್ಬಿಕೊಂಡಿದ್ದವು. ಈ ಸಣ್ಣ ಕೋಟೆಯ ಬುರುಜುಗಳು ಕುಸಿಯುತ್ತಿವೆ, ಗೋಡೆಗಳ ಕಲ್ಲುಗಳು ಮರೆಯಾಗುತ್ತಿವೆ, ಕುರುಚಲು ಗಿಡಗಳು ಕೋಟೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಿವೆ. ಇಲ್ಲಿರುವ ದೇವಾಲಯಗಳಂತೆ, ಈ ಕೋಟೆಗೂ ಕಾಯಕಲ್ಪದ ಅವಶ್ಯಕತೆಯಿದೆ.
ಮರತೂರನ್ನು ನಾವು ಮರೆಯಬಾರದು. ಚಾಲುಕ್ಯರ ಕಾಲದಲ್ಲಿ ಮೆರೆದಿದ್ದ ಊರಾಗಿತ್ತು ಈ ಮರತೂರು. ೩೦೦ ದೇವಾಲಯಗಳು, ೩೦೦ ಬಾವಿಗಳ ಊರಾಗಿತ್ತು ಈ ಮರತೂರು. ವಿಜ್ಞಾನೇಶ್ವರರ ಹುಟ್ಟೂರು ಇದಾಗಿರುವುದು, ಊರಿಗೆ ಇನ್ನಷ್ಟು ಹೆಮ್ಮೆಯ ವಿಷಯ. ಆದರೆ ಇಂದು ಎಲ್ಲರೂ ಮರೆತಿರುವ ಊರಾಗಿದೆ ಈ ಮರತೂರು. ಕಾಶಿ ವಿಶ್ವನಾಥ ದೇವಾಲಯವನ್ನು ಮಾತ್ರ ಚೆನ್ನಾಗಿಟ್ಟುಕೊಂಡರೆ ಸಾಲದು. ಊರಲ್ಲಿರುವ ಇನ್ನೂ ಹಲವಾರು ದೇವಾಲಯಗಳನ್ನು ಚೆನ್ನಾಗಿ ಕಾಪಾಡಿಕೊಂಡರೆ ಊರಿಗೊಂದು ಶೋಭೆ.