ಬುಧವಾರ, ಡಿಸೆಂಬರ್ 23, 2009

ಚಾರಣ ಚಿತ್ರ - ೩


ಜಲಧಾರೆಯೊಂದು ಭೋರ್ಗರೆಯುತ್ತಿರುವಾಗ ಅದರ ಅಂದವನ್ನು ಸ್ವಲ್ಪ ದೂರದಿಂದಲೇ ಸವಿಯಬೇಕು!

ಶನಿವಾರ, ಡಿಸೆಂಬರ್ 12, 2009

ಮನೆಗೆ ಬಿತ್ತು ಬೀಗ

ನಿನ್ನೆ (ಡಿಸೆಂಬರ್ ೧೦, ೨೦೦೯) ಹಳದೀಪುರದ ನಾನು ಬಹಳ ಪ್ರೀತಿಸುತ್ತಿದ್ದ ನಮ್ಮ ಮೂಲ ಮನೆಗೆ ಬೀಗ ಬಿತ್ತು. ಈ ಮನೆಯಲ್ಲಿ ವಾಸವಿದ್ದ ಚಿಕ್ಕಪ್ಪ ನವೆಂಬರ್ ೨೨, ೨೦೦೯ ರಂದು ಮೃತರಾದರು. ಆದ್ದರಿಂದ ೧೯೦೮ ರಿಂದ ೨೦೦೯ ರವರೆಗೆ ನೂರಾ ಒಂದು ವರ್ಷ ಜನರ ವಾಸವಿದ್ದ ಮನೆಗೆ ಈಗ ಬೀಗ ಜಡಿಯಲಾಗಿದೆ.

ಈ ಮನೆಯಲ್ಲಿ ೨೦೦೧ ರವರೆಗೆ ತುಂಬು ಸಂಸಾರ ವಾಸವಾಗಿತ್ತು: ಚಿಕ್ಕಪ್ಪ, ಚಿಕ್ಕಮ್ಮ ಮತ್ತು ೩ ಗಂಡು ಮಕ್ಕಳು. ೨೦೦೧ ರಲ್ಲಿ ಚಿಕ್ಕಮ್ಮ ತೀರಿಕೊಂಡರು. ಅಮ್ಮನನ್ನು ಬಹಳ ಪ್ರೀತಿಸುತ್ತಿದ್ದ ಹಿರಿಮಗ ನೀತಿನ ಅಮ್ಮ ತೀರಿಕೊಂಡ ಆ ಮನೆಯಲ್ಲಿರಲಾಗದೆ ದೂರದೂರಿಗೆ ಉದ್ಯೋಗಕ್ಕೆ ಸೇರಿಕೊಂಡ. ಎರಡನೇಯವನು ಡಿಸೆಂಬರ್ ೭, ೨೦೦೮ ರಂದು ೨೫ರ ಯುವ ವಯಸ್ಸಿನಲ್ಲಿ ತೀರಿಕೊಂಡ. ಈಗ ಚಿಕ್ಕಪ್ಪ ಅವರಿಬ್ಬರನ್ನು ಹಿಂಬಾಲಿಸಿದ್ದಾರೆ. ಮನೆಯಲ್ಲಿ ಉಳಿದವನು ಈಗ ಕೊನೆಯ ಮಗ ೨೧ ವರ್ಷ ವಯಸ್ಸಿನ ನಯನ ಮಾತ್ರ. ಈಗ ನಿತಿನ ಉದ್ಯೋಗವಿದ್ದ ಊರಿಗೆ ಹಿಂದಿರುಗಿದ. ನಯನ, ಆಡ್ಕಾರದ (ಹೊನ್ನಾವರ-ಗೇರುಸೊಪ್ಪಾ ರಸ್ತೆಯಲ್ಲಿದೆ) ತನ್ನ ತಾಯಿಯ ಮನೆ ಸೇರಿಕೊಂಡಿದ್ದಾನೆ.

ನಾವಂತೂ ಉಡುಪಿಗೆ ಬಂದು ೩೨ ವರ್ಷಗಳಾದವು. ಅದಕ್ಕೂ ಮೊದಲು ೫ ವರ್ಷ ಹಳಿಯಾಳದಲ್ಲಿದ್ದೆವು. ಆದರೂ ನನಗೆ ಹಳದೀಪುರದ ಈ ಮನೆಯೇ ಮನೆ. ನಾಲ್ಕಾರು ದಿನ ರಜೆ ಬಂತೆಂದರೆ ನಾನಿಲ್ಲಿ ಹಾಜರು. ರಜೆ ಬರುವ ಮೊದಲೇ ಚಿಕ್ಕಪ್ಪನಿಂದ ಅಪ್ಪನಿಗೆ ನನ್ನನ್ನು ಮತ್ತು ತಮ್ಮನನ್ನು ಕಳಿಸುವಂತೆ ಪತ್ರ ಬರುತ್ತಿತ್ತು. ೧೯೯೫ರ ನಂತರ ಓದು ಮತ್ತು ಉದ್ಯೋಗದ ಕಾರಣಗಳಿಂದ ಮನಬಂದಂತೆ ಹಳದೀಪುರಕ್ಕೆ ತೆರಳಲು ಆಗುತ್ತಿರಲಿಲ್ಲವಾದರೂ, ಅವಕಾಶ ಸಿಕ್ಕಾಗೆಲ್ಲಾ ಅಲ್ಲಿರುತ್ತಿದ್ದೆ.


೨೦೦೭ರ ಎಪ್ರಿಲ್ ತಿಂಗಳಲ್ಲಿ ನಡೆದ ನನ್ನ ವಿವಾಹವೇ ಈ ಮನೆಯಲ್ಲಿ ನಡೆದ ಕೊನೆಯ ಸಮಾರಂಭ. ನನ್ನ, ಅಪ್ಪನ ಮತ್ತು ಅಮ್ಮನ ಪರಿಚಯದವರೆಲ್ಲಾ ಉಡುಪಿ ಮತ್ತು ಆಸುಪಾಸಿನ ಸಮೀಪದವರಾಗಿದ್ದರೂ ಮತ್ತು ಅಮ್ಮನಿಗೆ ಉಡುಪಿಯಲ್ಲೇ ನನ್ನ ಮದುವೆ ನಡೆಯಬೇಕೆಂಬ ಆಸೆ ಇದ್ದರೂ, ನಾನು ಮಾತ್ರ ಮದುವೆ ಹಳದೀಪುರದ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿದು ಮದುವೆ ದಿಬ್ಬಣ ಅಲ್ಲಿಂದಲೇ ಹೊರಡುವಂತೆ ನೋಡಿಕೊಂಡಿದ್ದೆ. ಆಗ ಚಿಕ್ಕಪ್ಪ ತುಂಬು ಸಂಭ್ರಮದಿಂದ ಆಚೀಚೆ ಓಡಾಡಿದ್ದರು. ಅವರ ಸಂಭ್ರಮವನ್ನು ಕಂಡು ಹಳದೀಪುರವೇ ಬೆರಗಾಗಿತ್ತು. ಮದುವೆ ನಡೆಯುತ್ತಿದ್ದಲ್ಲಿಯೂ ಅದೇ ಸಂಭ್ರಮ ಮುಂದುವರಿದಿತ್ತು. ಅತಿಥಿಗಳನ್ನು ಬರಮಾಡಿಕೊಳ್ಳುವುದೇನು... ಬೀಳ್ಕೊಡುವುದೇನು... ಮದುವೆ ನಂತರದ ಎರಡು ದಿನಗಳಲ್ಲಿರುವ ಔತಣ ಸಮಾರಂಭದಲ್ಲೂ ಅದೇ ಉತ್ಸಾಹ, ಸಂತೋಷ. ಮತ್ತೆ ಯುವಕನಾಗಿದ್ದರು ಚಿಕ್ಕಪ್ಪ. ತನ್ನ ಅಣ್ಣನ ಮಗನ ಮದುವೆಗೇ ಈ ಪರಿ ಸಂಭ್ರಮಿಸುತ್ತಿರಬೇಕಾದರೆ ಇನ್ನು ತನ್ನ ೩ ಗಂಡುಮಕ್ಕಳ ವಿವಾಹದಲ್ಲಿ ಇನ್ಯಾವ ಪರಿ ಸತೋಷಪಟ್ಟಾನು ಈತ, ಎಂದು ಹಳದೀಪುರ ಆಡಿಕೊಳ್ಳುತ್ತಿತ್ತು. ಆದರೆ... ಆ ದಿನಗಳು ಬರಲೇ ಇಲ್ಲ.


ಅಪ್ಪನಿಗೆ ಇನ್ನೂ ೪ ತಮ್ಮಂದಿರಿದ್ದಾರೆ. ಇವರೆಲ್ಲರೂ ದೂರದ ಊರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಒಬ್ಬರು ವಿದೇಶದಲ್ಲಿದ್ದಾರೆ. ೧೪ನೇ ದಿವಸದ ನಂತರ ಎಲ್ಲರೂ ಹಿಂತಿರುಗಿದ ಬಳಿಕ ಮೊನ್ನೆ ಬುಧವಾರ ರಾತ್ರಿ ಮಲಗಿದಾಗ ಅದೇನೋ ಬೇಸರ. ನಾಳೆ ಮನೆಗೆ ಬೀಗ ಎಂಬ ಯೋಚನೆ. ನಿನ್ನೆ ಮುಂಜಾನೆ ನೀತಿನ ಮತ್ತು ನಯನ ಇಬ್ಬರನ್ನೂ ಹೊನ್ನಾವರದ ನ್ಯಾಯಾಲಯಕ್ಕೆ ಕರೆದೊಯ್ದು, ಇವರಿಬ್ಬರೇ ಚಿಕ್ಕಪ್ಪನ ವಾರಿಸುದಾರರು ಎಂದು ಸಾಬೀತುಪಡಿಸಲು ಅವಶ್ಯವಿದ್ದ ಕಾಗದ ಪತ್ರಗಳನ್ನೆಲ್ಲಾ ರೆಡಿ ಮಾಡಿ ನ್ಯಾಯಾಧೀಶರ ಸಹಿ ಹಾಕಿ ಮನೆಗೆ ಹಿಂತಿರುಗಿದಾಗ ಮಧ್ಯಾಹ್ನ ೩ ಗಂಟೆ.

ಅಪ್ಪ ಊಟ ಮಾಡಿ ನಮಗಾಗಿ ಕಾಯುತ್ತಿದ್ದರು. ನಾವು ೩ ಮಂದಿ ಬೇಗನೇ ಊಟ ಮುಗಿಸಿದೆವು. ಚಿಕ್ಕಪ್ಪನ ಬಲಗೈ ಬಂಟನಂತಿದ್ದ ಪಕ್ಕದ್ಮನೆ ಉದಯನದ್ದೇ ಅಡಿಗೆ. ಎಲ್ಲಾ ಕೋಣೆಗಳಿಗೂ ಒಂದೊಂದಾಗಿ ಬೀಗ ಹಾಕುವ ಪ್ರಕ್ರಿಯೆ ಶುರುವಾಯಿತು. ನನಗಂತೂ ನೋಡಲಾಗುತ್ತಿರಲಿಲ್ಲ. ನಯನ ಬಿಕ್ಕಿ ಬಿಕ್ಕಿ ಅಳುತ್ತಾ ಬೀಗ ಜಡಿಯುತ್ತಿದ್ದ. ಆತನ ಅಳು ಜೋರಾಗುತ್ತಿದ್ದಂತೆಯೇ, ಆತನನ್ನು ಬದಿಗೆ ಕುಳ್ಳಿರಿಸಿ, ಉದಯನಿಗೆ ಬೀಗ ಹಾಕಲು ಹೇಳಿದೆ. ಮೊದಲು ಮಾಳಿಗೆಗೆ ತೆರಳಿ ಅಲ್ಲಿನ ೨ ಕೋಣೆಗಳಿಗೆ ಬೀಗ ಜಡಿದು ಬಂದೆವು. ನಂತರ ಅಡಿಗೆ ಮನೆಗೆ ಮತ್ತು ಇನ್ನುಳಿದ ೨ ಕೋಣೆಗಳಿಗೆ. ನಂತರ ದೇವರ ಕೋಣೆಗೆ ತೆರಳಿ ನಾನು, ಅಪ್ಪ, ನಯನ ಮತ್ತು ನೀತಿನ ದೇವರಿಗೆ ನಮಸ್ಕರಿಸಿ ಬಂದೆವು. ದೇವರ ಕೋಣೆಯಿಂದ ಹೊರಬರುವಾಗ ದು:ಖ ತಾಳಲಾಗದೆ ಅಪ್ಪ ಗಳಗಳನೆ ಅತ್ತುಬಿಟ್ಟರು. ಉದಯ ಅವರನ್ನು ಅಪ್ಪಿ ಹಿಡಿದು ಸಮಾಧಾನಗೊಳಿಸತೊಡಗಿದ. ಯಾವುದೇ ಸನ್ನಿವೇಶದಲ್ಲೂ ಗಟ್ಟಿಗನಾದ ನನಗೂ ನಾನು ಭಾವುಕನಾಗುವುದನ್ನು ತಡೆದುಕೊಳ್ಳಲು ಅಪ್ಪ ಆ ಪರಿ ಅಳುವುದನ್ನು ನೋಡಿದಾಗ ಆಗಲಿಲ್ಲ. ಕಣ್ಣುಗಳು ತೇವಗೊಂಡರೂ ಕೂಡಲೇ ಸಾವರಿಸಿಕೊಂಡೆ. ಈ ದೇವರ ಕೋಣೆಗೇ ಲೀನಾ ಬಲಗಾಲಿಟ್ಟು ಒಳಗೆ ಬಂದದ್ದು ಆಗ ನೆನಪಾಯಿತು. ನಾವು ಮನೆಯ ಗೇಟು ದಾಟಿದ ಬಳಿಕ ದೇವರ ಕೋಣೆಗೆ ಬೀಗ ಹಾಕಿ ಬೀಗದಕೈ ತಂದುಕೊಡುವಂತೆ ಉದಯನಿಗೆ ಸೂಚಿಸಿದೆ.


ತುಳಸಿಗೂ ನಮಸ್ಕರಿಸಿ, ಗೇಟು ದಾಟಿದಾಗ ಅಲ್ಲಿ ನೆರೆದಿದ್ದ ಕೇರಿಯ ಜನರೆಲ್ಲರ ಕಣ್ಣಲ್ಲೂ ನೀರು. ಹಳದೀಪುರದವರೆಲ್ಲರ ಪಾಲಿಗೂ ನಯನ ’ಪುಟ್ಟು’ ಆಗಿದ್ದ. ಕೊಂಕಣಿಯಲ್ಲಿ ಪುಟ್ಟು ಎಂದರೆ ’ಸಣ್ಣವ’ ಎಂದು. ಇನ್ನು ಈ ಪುಟ್ಟು ಇಲ್ಲಿರುವುದಿಲ್ಲ ಎಂದು ಎಲ್ಲರಿಗೂ ವಿಷಾದ. ಅಳು ಎಲ್ಲಾ ಜೋರಾಗುತ್ತಿದ್ದಂತೆಯೇ, ಅಪ್ಪನನ್ನು ರಿಕ್ಷಾದೊಳಗೆ ಕುಳ್ಳಿರಿಸಿ, ಮನೆಯೆಡೆ ಶೂನ್ಯವಾಗಿ ದಿಟ್ಟಿಸುತ್ತಿದ್ದ ನೀತಿನನನ್ನು ರಿಕ್ಷಾದೊಳಗೆ ತಳ್ಳಿದೆ. ಅಷ್ಟರಲ್ಲಿ ಉದಯ ದೇವರ ಕೋಣೆಯ ಬೀಗದಕೈ ತಂದುಕೊಟ್ಟ. ಆ ಜಾಗ ಬಿಟ್ಟು ಕದಲಲು ಒಪ್ಪದ ನಯನನನ್ನು ಉದಯ ಧೈರ್ಯದ ಮಾತುಗಳನ್ನಾಡಿ, ಬೈದು ರಿಕ್ಷಾದೊಳಗೆ ಕುಳ್ಳಿರಿಸಿದ. ನಂತರ ನಾನು ಕುಳಿತುಕೊಂಡ ಬಳಿಕ ಆಟೋ ಹೊನ್ನಾವರ ಬಸ್ಸು ನಿಲ್ದಾಣದೆಡೆ ದೌಡಾಯಿಸಿತು. ಸಂಜೆ ೪ರ ಸಮಯವಾಗಿತ್ತು.

ಮಂಗಳವಾರ, ನವೆಂಬರ್ 17, 2009

ನೇತ್ರಾವತಿ ನದಿ ತಿರುವು ಯೋಜನೆ - ೨

ಈ ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ.ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ೩೬ ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಯ ಎರಡು ಪ್ರಮುಖ ಕಾಲುವೆಗಳ ಹರಿವು ಈ ರೀತಿ ಇದೆ.

ಒಂದನೆಯ ಕಾಲುವೆಯ ಪ್ರಕಾರ ೯೦.೭೩ ಟಿ.ಎಂ.ಸಿ ನೀರನ್ನು ಪಶ್ಚಿಮದಿಂದ ಪೂರ್ವಕ್ಕೆ ಹರಿಸಿ ಹಾಸನ, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳಿಗೆ ವಿತರಿಸುವುದು. ಸಮುದ್ರ ಮಟ್ಟದಿಂದ ೯೨೨ ಮೀಟರ್ ಎತ್ತರದಲ್ಲಿ ಕುದುರೆಮುಖದ ಗಂಗಡಿಕಲ್ಲು ಗುಡ್ಡದಿಂದ ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಎಳನೀರು ಘಾಟಿ, ದಿಡುಪೆ, ಬಂಡಾಜೆ, ಚಾರ್ಮಾಡಿ, ನೆರಿಯ, ಶಿಶಿಲ ಮೂಲಕ ಶಿರಾಡಿ ಘಾಟಿಯ ಎತ್ತಿನಹೊಳೆಯವರೆಗೆ ಬಂದು ಅತ್ತ ಸೂರಲ್ಪಿ ಬೆಟ್ಟದಿಂದ ಪ್ರಾರಂಭವಾಗುವ ಇನ್ನೊಂದು ಕಾಲುವೆ ಕುಮಾರ ಪರ್ವತ, ಬಿಸಿಲೆ ಘಾಟಿ, ಯಸಳೂರು ಅರಣ್ಯ ವಲಯದಿಂದ ಶಿರಾಡಿ ಘಾಟಿಯವರೆಗೆ ಬಂದು ಈ ಕಾಲುವೆಯನ್ನು ಸೇರುತ್ತದೆ. ಈ ಎರಡೂ ಕಾಲುವೆಗಳು ಒಟ್ಟಾಗಿ ಸಕಲೇಶಪುರದ ಕಡೆಗೆ ಹರಿಯುತ್ತದೆ. ಸಕಲೇಶಪುರದಿಂದ ೧೬ ಕಿ.ಮಿ ದೂರದಲ್ಲಿ ಈ ಕಾಲುವೆಗೆ ಹೇಮಾವತಿ ನದಿ ಅಡ್ಡವಾಗುತ್ತದೆ. ಹೇಮಾವತಿಗೆ, ನೇತ್ರಾವತಿಯ ಕಾಲುವೆ ನೀರು ಸೇರದಂತೆ ನದಿಯ ಮೇಲೆ ಸೇತುವೆ ಕಟ್ಟಿ ಬೃಹತ್ ಗಾತ್ರದ ಕೊಳವೆಗಳ ಮೂಲಕ ಹರಿಸಲಾಗುತ್ತದೆ.

ಎರಡನೇ ಕಾಲುವೆಯ ಪ್ರಕಾರ ಪಶ್ಚಿಮದಿಂದ ಉತ್ತರಕ್ಕೆ ೫೧.೭೦ ಟಿ.ಎಂ.ಸಿ ನೀರನ್ನು ಚಿತ್ರದುರ್ಗ, ತುಮಕೂರು, ದಾವಣಗೆರೆ, ಬಳ್ಳಾರಿ, ಕೋಲಾರ ಜಿಲ್ಲೆಗಳಿಗೆ ರವಾನಿಸಲಾಗುವುದು. ಸಮುದ್ರ ಮಟ್ಟದಿಂದ ೮೫೦ ಮೀಟರ್ ಎತ್ತರದಲ್ಲಿ ಕೋಲ್ಕಲ್ಲು ಬೆಟ್ಟದಿಂದ ಪ್ರಾರಂಭವಾಗುವ ಕಾಲುವೆ ಪುಷ್ಪಗಿರಿ, ದೊಡ್ಡಬೆಟ್ಟ, ಏಣಿಕಲ್ಲು ಬೆಟ್ಟಗಳನ್ನು ದಾಟಿ ನಿಶಾನೆಬೆಟ್ಟ, ಅರೆಬೆಟ್ಟ, ವೆಂಕಟಗಿರಿಯಲ್ಲಿ ಬಂದು ನಡಹಳ್ಳದಿಂದ ಪ್ರಾರಂಭವಾಗಿ ಕುದುರೆಮುಖ ಸಂಸೆಗಳೆಡೆಗೆ ಹರಿದುಬರುವ ಇನ್ನೊಂದು ಕಾಲುವೆಗೆ ಸೇರಿ ಅರಸಿನಮಕ್ಕಿ ಗುಡ್ಡದಲ್ಲಿ ಒಟ್ಟಾಗಿ ಮುಂದಕ್ಕೆ ಹರಿದು ಹೋಗುತ್ತದೆ. ಅಲ್ಲಿ ಈ ಕಾಲುವೆಗೆ ಭದ್ರಾ ನದಿಯು ಅಡ್ಡವಾಗುತ್ತದೆ. ಬಾಳೆಹೊನ್ನೂರು ಬಳಿ ಭದ್ರಾ ನದಿಗೆ ಸೇತುವೆ ಕಟ್ಟಿ ಕೊಳವೆಗಳ ಮೂಲಕ ಸಾಗಿಸಲಾಗುವುದು.

ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ.

ನೇತ್ರಾವತಿಯ ಜಲನಾಡಿಗಳಾದ ಬಂಗ್ರಬಲಿಗೆ ಜಲಪಾತ, ಬ್ರಹ್ಮರಗುಂಡಿ, ಬೊಳ್ಳೆ ಜಲಪಾತ, ಆನಡ್ಕ ಜಲಪಾತ, ದಕ್ಷಿಣ ಕನ್ನಡ ಜಿಲ್ಲೆಯ ಅತಿ ಎತ್ತರದ ಜಲಪಾತವಾದ ಬಂಡಾಜೆ ಜಲಪಾತ, ಚಾರ್ಮಾಡಿ ಘಾಟಿಯ ಕಲ್ಲಗುಂಡಿ ಜಲಪಾತ, ಬಾಂಜಾರು ಮಲೆಯ ಕಲ್ಲರ್ಬಿ ಜಲಪಾತ, ದೊಂಡೋಲೆ, ಕಪಿಲಾ, ಪಾರ್ಪಿಕಲ್ಲು, ಕೂಡಳ್ಳ ಜಲಪಾತ, ಶಿರಾಡಿಯ ಕನ್ನಿಕಾಯ ಗುಂಡಿ, ಬಿಸಿಲೆ ಘಾಟಿ ಸಮೀಪದ ಮಲ್ಲಳ್ಳಿ ಜಲಪಾತಗಳು ಮರೆಯಾಗುವ ಸಾಧ್ಯತೆ ಇದೆ.

ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ.

ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ.

ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ್ತರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು.

ಹಾಲು ಕುಡಿಯುತ್ತಿದ್ದ ಮಗುವಿನ ಕೈಯಿಂದ ಹಾಲಿನ ಲೋಟವನ್ನು ಕಿತ್ತು ಇನ್ನೊಂದು ಮಗುವಿಗೆ ಕೊಡುವಾಗ ಹಾಲಿನ ಲೋಟ ಕೆಳಗೆ ಬಿದ್ದು ಚೆಲ್ಲಿ ಹೋಗಿ ಕೊನೆಗೆ ಹಾಲು ಕೊಟ್ಟ ಹಸುವನ್ನೇ ಕೊಂದುಬಿಟ್ಟರೆ ಹೇಗಾಗುವುದೋ ಹಾಗೇ ಈ ಯೋಜನೆ. ಬಯಲುಸೀಮೆಗೆ ನೀರಿನ ಅಭಾವವಿದೆಯೆಂದು ನದಿಯನ್ನು ಅತ್ತಕಡೆ ತಿರುಗಿಸಿ, ಕೊನೆಗೆ ಬಯಲುಸೀಮೆಗೂ ನೀರಿಲ್ಲ, ಕರಾವಳಿಗೂ ನೀರಿಲ್ಲದಂತಾಗಿ, ನೇತ್ರಾವತಿ ನದಿಯನ್ನೇ ಕೊಂದು ಬಿಡುವ ಯೋಜನೆಯಿದು.

ಕಾಡಿರುವಲ್ಲಿ ಕಾಡಿರಬೇಕು. ನದಿ ಸಹಜವಾಗಿ ಹರಿಯುವಲ್ಲೇ ನದಿ ಇರಬೇಕು. ಅದು ಬಿಟ್ಟು ಈ ಕಾಡು, ಈ ನದಿ ಇದೆಲ್ಲಾ ತಮ್ಮ ವೈಯುಕ್ತಿಕ ಆಸ್ತಿ ಎಂದು ಅಟ್ಟಹಾಸಗೈಯುವುದರಿಂದ ಮುಂದೆ ಆಗಲಿರುವ ಅನಾಹುತಗಳಿಗೆ ನಾವೇ ಕಾರಣವಾಗಬೇಕಾದೀತು. ಹೇಗೆ ನಮಗೆ ನದಿಗಳನ್ನು ಸೃಷ್ಟಿಸಲು ಅಸಾಧ್ಯವೋ ಅದೇ ರೀತಿ ನದಿಗಳನ್ನು ತಿರುಗಿಸಲು, ಜೋಡಿಸಲು ಅಧಿಕಾರವಿಲ್ಲ. ನಗರದ ಹೈಟೆಕ್ ಕಟ್ಟಡಗಳ ಹವಾ ನಿಯಂತ್ರಿಯ ಕೊಠಡಿಗಳಲ್ಲಿ ಕುಳಿತು ಪರಿಸರ ಉಳಿಸಿ, ಹಸಿರು ಉಳಿಸಿ, ಕಾಡು ಬೆಳೆಸಿ ಎಂಬ ಚರ್ವಿತ ಚರ್ವಣ ಘೋಷಣೆಗಳನ್ನು ಬದಿಗಿಟ್ಟು ಅರಣ್ಯ, ಪರ್ವತ, ನದಿಗಳನ್ನು ಅವುಗಳ ಯಥಾಸ್ಥಿತಿಯಲ್ಲಿ ಬಿಟ್ಟು, ಅವುಗಳ ನೆಮ್ಮದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದೇ ನೈಜ ಪರಿಸರ ಸೇವೆ.

ಪೂಜ್ಯ ಭಾವನೆಯಿಂದ ನೋಡಬೇಕಾದ ನದಿಗೆ ನಮ್ಮ ಸಿವಿಲೈಝೇಶನ್, ಮೋಡರ್ನೈಝೇಶನ್ ಎಂಬ ತ್ಯಾಜ್ಯ ವಸ್ತುಗಳನ್ನು ಎರಚಿ ಇಷ್ಟಬಂದಲ್ಲಿಗೆ ನದಿಯನ್ನು ಕೊಂಡೊಯ್ಯುತ್ತೇವೆ ಎನ್ನಲು ನೇತ್ರಾವತಿ ನದಿ ಆಟಿಕೆಯ ವಸ್ತುವಲ್ಲ. ಜನಾಭಿಪ್ರಾಯಕ್ಕೆ ಮಣಿಯದ, ಉಣ್ಣುವ ಬಟ್ಟಲಿಗೆ ವಿಷ ಮೆತ್ತುವ ಈ ಯೋಜನೆಯನ್ನು ಒಕ್ಕೊರಲಿನಿಂದ ಪ್ರತಿಭಟಿಸುವ ಅನಿವಾರ್ಯತೆ ಒದಗಿಬಂದಿದೆ.

ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ಬೇಕೇ? ಅಸಂಬದ್ಧ, ಅವ್ಯವಹಾರಿಕ, ಪರಿಸರ ವಿನಾಶಕ ಈ ಯೋಜನೆಯಿಂದ ಅನಾವಶ್ಯಕವಾಗಿ ನದಿಯೊಂದನ್ನು ನಾಶಗೈಯುವ ಅಗತ್ಯವಿದೆಯೇ? ಕಾವೇರಿ ಜಲವಿವಾದದಿಂದ ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಇನ್ನೂ ಜೀವಂತವಾಗಿರುವಾಗ ಈ ಯೋಜನೆಯಿಂದ ಕರ್ನಾಟಕದೊಳಗೇ ಜಿಲ್ಲೆ ಜಿಲ್ಲೆಗಳ ನಡುವೆ ವ್ಯಾಜ್ಯ ಹರಡಬೇಕೇ? ೧೨,೫೦೦ ಕೋಟಿ ರೂಪಾಯಿ ವ್ಯಯಮಾಡಿ ನೇತ್ರಾವತಿ ನದಿಯನ್ನು ಗಲ್ಲಿಗೇರಿಸಿ ಕೊಲ್ಲುವ ಅಗತ್ಯವಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದವರು ನಾವು-ನೀವು ಎಲ್ಲರೂ.

ದಿನೇಶ್ ಹೊಳ್ಳ.

ಭಾನುವಾರ, ನವೆಂಬರ್ 15, 2009

ನೇತ್ರಾವತಿ ನದಿ ತಿರುವು ಯೋಜನೆ - ೧

ಗೆಳೆಯ ದಿನೇಶ್ ಹೊಳ್ಳ ಬರೆದಿರುವ ಈ ಲೇಖನವನ್ನು ಯಾವುದೇ ಬದಲಾವಣೆ ಇಲ್ಲದೆ ಇಲ್ಲಿ ಹಾಕಿದ್ದೇನೆ. ಸುಮಾರು ಎರಡು ವರ್ಷಗಳ ಹಿಂದೆ ವಾರಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನವಿದು. ಒಂದು ನದಿಯನ್ನು ಕೋಟಿ ಕೋಟಿ ಖರ್ಚು ಮಾಡಿ ನಿರ್ನಾಮಗೊಳಿಸಲು ತಯಾರಿ ನಡೆದಿದೆ. ಈ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಚಾರ್ಮಾಡಿ ಮತ್ತು ಶಿರಾಡಿ ಘಟ್ಟ ಪ್ರದೇಶದ ಇಂಚಿಂಚೂ ಗೊತ್ತಿರುವ ದಿನೇಶ್ ಹೊಳ್ಳ ಈ ಲೇಖನವನ್ನು, ನೇತ್ರಾವತಿ ನದಿ ತಿರುವು ಯೋಜನೆಯನ್ನು ಸಿದ್ದಪಡಿಸಿರುವವರಂತೆ ಎಲ್ಲೋ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ನದಿಯ ಉದ್ದಗಲಕ್ಕೆ ಓಡಾಡದೇ ಬರೆದಿಲ್ಲ. ಬದಲಾಗಿ ಖುದ್ದಾಗಿ ನೇತ್ರಾವತಿಯ ಉಗಮ ಸ್ಥಾನಕ್ಕೆ ಭೇಟಿ ನೀಡಿ (ನಾವಿಬ್ಬರೇ ಈ ಸ್ಥಳಕ್ಕೆ ತೆರಳಿದ್ದೆವು), ನದಿಯ ಉದ್ದಗಲಕ್ಕೆ ಓಡಾಡಿ, ಚಾರ್ಮಾಡಿ ಮತ್ತು ಶಿರಾಡಿ ಘಟ್ಟ ಪ್ರದೇಶಗಳಲ್ಲಿರುವ ನೇತ್ರಾವತಿಯ ಉಪನದಿಗಳ ಹಾದಿಯನ್ನೂ ಹಿಂಬಾಲಿಸಿ, ಈ ಲೇಖನವನ್ನು ಬರೆದಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಈ ಲೇಖನ ಬಂದಿದೆ. ಈಗ ಡಿಸೆಂಬರ್ ೨೦೦೯ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ತುಳು ಸಮ್ಮೇಳನದ ಅಂಗವಾಗಿ ಹೊರಬರಲಿರುವ ಪುಸ್ತಕದಲ್ಲೂ ಈ ಲೇಖನ ಪ್ರಕಟಗೊಳ್ಳಲಿದೆ. ಈ ಲೇಖನವನ್ನು ಓದದೇ ಇರುವವರಿಗೆ ಅನುಕೂಲವಾಗಲೆಂದು ಇಲ್ಲಿ ಹಾಕಿರುವೆ. ಈ ಲೇಖನವನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದಗಳು.
ನೀರು ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನ. ಪ್ರಕೃತಿಯು ನಮಗೆ ಕೊಟ್ಟಿರುವ ಬೃಹತ್ ಕೊಡುಗೆಗಳಲ್ಲಿ ಈ ನೆಲದ ಜಲವು ಪ್ರಮುಖವಾದುದು. ಬೆಳಿಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಮಲಗುವ ತನಕ ಅತ್ಯಗತ್ಯವಾಗಿರುವ ನೀರು ದಿನಕ್ಕೆ ಒಬ್ಬ ವ್ಯಕ್ತಿಗೆ ೧೦೦ ಲೀಟರಿನಷ್ಟು ಅಗತ್ಯ. ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಆಧುನಿಕ ಜಗತ್ತಿನ ಯಾವುದೇ ಬೃಹತ್ ನಗರದಲ್ಲಿ ಪ್ರತಿ ದಿನ ೧,೦೫,೦೦೦ ಮಿಲಿಯನ್ ಲೀಟರ್ ನೀರು ವ್ಯಯವಾಗುತ್ತಿದೆ. ಮಾನವ ನಿರ್ಮಿತ ಈ ಆಧುನಿಕ ಸಾಮ್ರಾಜ್ಯದಲ್ಲಿ ಇಂದು ಭೂಮಿಯಲ್ಲಿ ಇಂಗುವ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ನಾವು ಬಳಸುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಾ ಬರುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾಗಬೇಕಾದರೆ ಧರೆಯ ಜೀವಧಾರೆಗಳಾದ ನದಿಗಳು ತುಂಬಿ ಹರಿಯುತ್ತಿರಬೇಕು. ನದಿಗಳೆಂದರೆ ನಾಡಿನ ಭವ್ಯ ಸಂಸ್ಕೃತಿಯನ್ನು ಬೆಳೆಸಿದ ತೊಟ್ಟಿಲುಗಳು. ನದಿಗಳೆಂದರೆ ಸಾರಸ್ಯಕರ ಐತಿಹ್ಯದ ಮೆಟ್ಟಿಲುಗಳು. ನದಿಗಳೆಂದರೆ ನಾಡಿನ ಜಲಸಂಪತ್ತಿನ ನಾಡಿಗಳು.

ಕರಾವಳಿ ಜಿಲ್ಲೆಗಳೆಂದರೆ ಒಂದು ಕಡೆ ವಿಶಾಲವಾಗಿ ಅಬ್ಬರಿಸುವ ಅರಬ್ಬಿ ಶರಧಿ. ಇನ್ನೊಂದು ಕಡೆ ವಿಶಾಲವಾಗಿ ಹರಡಿರುವ ಪಶ್ಚಿಮ ಘಟ್ಟಗಳ ಸರದಿ. ಈ ಶರಧಿಗೂ ಬೆಟ್ಟಗಳ ಸರದಿಗೂ ಒಂದು ಅವಿಚ್ಛಿನ್ನ ನೈಸರ್ಗಿಕ ಸಂಬಂಧವಿದೆ. ಪ್ರಪಂಚದ ೧೮ ಜೀವವೈವಿಧ್ಯ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳು ಮತ್ತು ಅಲ್ಲಿನ ಶೋಲಾ ಕಾಡುಗಳು ಹೊಳೆಗಳ ಹರಿವಿನ ಪಾತ್ರಧಾರಿಯಾಗಿರುತ್ತದೆ.

ಕರಾವಳಿಯ ಪ್ರಮುಖ ನದಿಗಳಲ್ಲಿ ನೇತ್ರಾವತಿ ನದಿಯು ಪ್ರಧಾನವಾಗಿದೆ. ನೇತ್ರಾವತಿ ನದಿಯನ್ನೇ ಆಶ್ರಯಿಸಿ ಬದುಕು ಸಾಗಿಸುವ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಿಗೆ, ಗ್ರಾಮೀಣ ಹಾಗೂ ನಗರವಾಸಿಗಳಿಗೆ ಇದು ಜೀವನದಿ. ಈ ನದಿಯಲ್ಲಿ ಜಿಲ್ಲೆಯ ಜನರ ಉಸಿರಾಟವಿದೆ. ೧೪೮ ಕಿ.ಮಿ. ಉದ್ದ ಹಾಗೂ ೪೨೫೬.೮೦ ಚದರ ಕಿ.ಮಿ. ವ್ಯಾಪ್ತಿಯಷ್ಟು ಜಲಾನಯನ ಪ್ರದೇಶ ಹೊಂದಿರುವ ನೇತ್ರಾವತಿ ನದಿಯು ಸಮುದ್ರ ಮಟ್ಟದಿಂದ ೧೬೮೯ ಮೀಟರ್ ಎತ್ತರದ ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಅರಣ್ಯ ವಲಯದ ಸಂಸೆ ಎಂಬಲ್ಲಿ ಉಗಮವಾಗುತ್ತದೆ. ಇದರ ಪ್ರಮುಖ ಉಪನದಿ ಕುಮಾರಧಾರ ಹೊಳೆ ಸುಬ್ರಹ್ಮಣ್ಯ ಸಮೀಪದ ೧೨೩೦ ಮೀಟರ್ ಎತ್ತರದ ಕುಮಾರ ಪರ್ವತದಲ್ಲಿ ಉಗಮವಾಗಿ ಉಪ್ಪಿನಂಗಡಿಯಲ್ಲಿ ಇವೆರಡು ಸಂಗಮವಾಗಿ ಮಂಗಳೂರಿನಲ್ಲಿ ಸಾಗರ ಸಂಗಮವಾಗುತ್ತದೆ. ಈ ಎರಡು ಪ್ರಮುಖ ನದಿಗಳಿಗೆ ಎಂಟು ಉಪನದಿಗಳಿವೆ. ಈ ಎಲ್ಲಾ ಉಪನದಿಗಳು ಪಶ್ಚಿಮ ಘಟ್ಟದ ಹಲವು ಮೂಲೆಗಳಲ್ಲಿ ಉಗಮಿಸಿ ನೇತ್ರಾವತಿಯನ್ನು ಸೇರುತ್ತದೆ.

ಈ ಎಲ್ಲಾ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ.

೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ.
೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು.
೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ.
೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ.
೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ.
೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ.
೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ.
೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ.
೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ.

ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳುವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ.

ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ.

ಇಂತಹ ಪೂರಕ ವಾತಾವರಣದಲ್ಲಿ ಹರಿಯುತ್ತಿರುವ ನೇತ್ರಾವತಿಗೆ ಇಂದು ನಿಸರ್ಗ ದುರಂತವನ್ನು ಆಹ್ವಾನಿಸುವಂತಹ ಕರಾಳ ಛಾಯೆಯೊಂದು ಆವರಿಸುತ್ತಿದೆ. ನೇತ್ರಾವತಿಯನ್ನು ಅದರ ಮೂಲ ಸ್ಥಾನದಿಂದಲೇ ಪೂರ್ವಾಭಿಮುಖವಾಗಿ ತಿರುಗಿಸಿ ಬಯಲುಸೀಮೆಗೆ ನೀರು ಹರಿಸುವ ಅಸಂಬದ್ಧ ಯೋಜನೆಯೊಂದು ಸರಕಾರದ ಮುಂದೆ ಇದೆ.

ರೈಲ್ವೇ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ೧೨,೫೦೦ ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಯಿಂದಾಗಿ ಅತ್ತ ಬಯಲುಸೀಮೆಗೂ ನೀರು ಹರಿಯದೆ ಇತ್ತ ಕರಾವಳಿ ಪ್ರದೇಶಕ್ಕೂ ನೀರಿಲ್ಲದೆ ನೇತ್ರಾವತಿ ನದಿಯ ಅಸ್ಥಿತ್ವಕ್ಕೆ ಧಕ್ಕೆ ತರುವ ಯೋಜನೆ ಇದಾಗಿದೆ.

ಭೂಮಿಯ ಮೇಲಿನ ಅರಣ್ಯ, ನದಿ, ಪರ್ವತ, ವನ್ಯಜೀವಿಗಳನ್ನು ಅವುಗಳಷ್ಟಕ್ಕೇ ಅವನ್ನು ನೆಮ್ಮದಿಯಾಗಿರುವಂತೆ ಬಿಡಬೇಕೇ ಹೊರತು ಮಾನವ ಹಸ್ತಕ್ಷೇಪದಿಂದ ಅವಿವೇಕ ನಿರ್ಣಯಗಳನ್ನು ಕೈಗೊಂಡು ಅವುಗಳ ಸ್ವೇಚ್ಛಾಚಾರಕ್ಕೆ ಭಂಗ ಬಂದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಬಹುದು. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ.

ಹಿಂದೆ ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ನೇತ್ರಾವತಿ ಈಗ ಮಳೆಗಾಲದ ಕೊನೆಯಲ್ಲೇ ಬಡಕಲಾಗುತ್ತಿದೆ. ಹೂಳು ತುಂಬಿ ಆಳವನ್ನು ಕಳಕೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ಈ ಪರಿಸರ ವಿನಾಶಕ ಯೋಜನೆಯಿಂದ ನೇತ್ರಾವತಿ ನದಿಯೇ ಇಲ್ಲದಂತಾಗಬಹುದು. ಈ ನೆಲದ ಜಲವನ್ನು ಸದುಪಯೋಗ ಪಡೆಯಲು ಸರ್ವರೂ ಅರ್ಹರು ನಿಜ. ಆದರೆ ನದಿಯನ್ನು ತಿರುಗಿಸಿ ನದಿಯೇ ಅಳಿದುಹೋದರೆ ನಾವು ರಾಜ್ಯದ ಒಂದು ನದಿಯನ್ನೇ ಕಳೆದುಕೊಳ್ಳಬೇಕಾಗಬಹುದು. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ.

ಮುಗಿಲೆತ್ತರಕ್ಕೆ ನಿಂತ ಪರ್ವತ, ಅಲ್ಲೊಂದಷ್ಟು ಅರಣ್ಯ, ಅರಣ್ಯದಿಂದ ಉಗಮಿಸುವ ನದಿ, ಈ ನದಿ ವಿಶಾಲವಾಗಿ ಹರಡಿ ಹರಿದು ಸಾಗರ ಸೇರುವುದು ಇದು ನಿಸರ್ಗ ನಿಯಮ. ಇದರ ಹಕ್ಕು ಸ್ವಾಮ್ಯವನ್ನು ಪಡೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ನಿಸರ್ಗ ನಿಯಮವನ್ನು ಮುರಿದು ನಮ್ಮ ಹಕ್ಕು, ಅಧಿಕಾರವನ್ನು ನದಿಯ ಮೇಲೆ ದಬ್ಬಾಳಿಸಿದರೆ ಅದರ ಹಿಂದೆ ಒಂದು ಘೋರ ದುರಂತವಿದೆ ಎಂದೇ ಅರ್ಥ.

ಮುಂದುವರಿದಿದೆ ಭಾಗ ೨ರಲ್ಲಿ

ಗುರುವಾರ, ನವೆಂಬರ್ 12, 2009

ಚಾರಣ ಚಿತ್ರ - ೨


ಮೆಘಾನೆಯ ದಾರಿಯಲ್ಲಿ ...

ಭಾನುವಾರ, ಅಕ್ಟೋಬರ್ 04, 2009

ಕರ್ನಾಟಕ ಪ್ರೀಮಿಯರ್ ಲೀಗ್

ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ ಬೆಂಗಳೂರು, ಮೈಸೂರು ಮತ್ತು ಧಾರವಾಡ ಲೀಗ್ ಗಳಲ್ಲಿ ಆಡುತ್ತಾ ಇದ್ದ ಹಲವಾರು ಪ್ರತಿಭಾವಂತ ಆಟಗಾರರ ಪರಿಚಯವಂತೂ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಆಯಿತು. ದೇಶದಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಪ್ರಯೋಗ ಮಾಡಿ ರಿಸ್ಕ್ ತೆಗೆದುಕೊಂಡು ಯಶಸ್ವಿ ಆಗಿದ್ದಕ್ಕೆ ಕೆ.ಎಸ್.ಸಿ.ಎಗೆ ಅಭಿನಂದನೆಗಳು. ಉಳಿದ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಕೆಪಿಎಲ್-ನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಈಗ ಪ್ರತಿ ರಾಜ್ಯದಲ್ಲೂ ಇದೇ ತರಹದ ಲೀಗ್-ಗಳು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ.

ಕ್ಷೇತ್ರರಕ್ಷಣೆ ವಿಭಾಗ ಬಿಟ್ಟರೆ ಬೌಲಿಂಗ್ ಮತ್ತು ಬ್ಯಾಟಿಂಗ್ ಉನ್ನತ ಮಟ್ಟದ್ದಾಗಿತ್ತು. ಲೀಗ್ ಆಟಗಾರರು ಎಂದು ಎಷ್ಟೋ ಜನರು (ಪ್ರಮುಖ ಕ್ರಿಕೆಟಿಗರು ಮತ್ತು ಜರ್ನಲಿಸ್ಟುಗಳು) ಈ ಕೂಟದ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ನನಗಂತೂ ಇದೊಂತರ ಹಬ್ಬ ಇದ್ದಂಗಾಯಿತು. ಎಷ್ಟೋ ಪ್ರತಿಭಾವಂತ ಲೀಗ್ ಆಟಗಾರರ ಹೆಸರು ಮಾತ್ರ ಕೇಳಿದ್ದೆ. ಈಗ ಅವರ ಆಟವನ್ನೂ ನೋಡಿದಂತಾಯಿತು. ರಾಜ್ಯವನ್ನು ಪ್ರತಿನಿಧಿಸಿದ್ದ ಆಟಗಾರರ ಆಟದ ಶೈಲಿಯನ್ನೂ ನೋಡಿದಂತಾಯಿತು.

ಬೆಂಗಳೂರಿನಲ್ಲಿ ನಡೆದ ಪಂದ್ಯಗಳಿಗೆ (ಒಂದೆರಡು ದಿನಗಳನ್ನು ಹೊರತುಪಡಿಸಿ) ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಆದರೆ ರಣಜಿ ಪಂದ್ಯ ನೋಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದು ಗಮನಾರ್ಹ. ಮೈಸೂರಿನಲ್ಲಿ ನಡೆದ ಎಲ್ಲಾ ೬ ಪಂದ್ಯಗಳೂ ಹೌಸ್ ಫುಲ್. ಮುಂದಿನ ವರ್ಷಗಳಲ್ಲಿ ಕೆ.ಎಸ್.ಸಿ.ಎ ಪಂದ್ಯಗಳನ್ನು ರಾಜ್ಯದ ಉಳಿದ ಭಾಗಗಳಲ್ಲೂ ನಡೆಸಬೇಕು. ಆಗ ಜನರಲ್ಲಿ ಆಸಕ್ತಿ ಹೆಚ್ಚಿ ಕೆಪಿಎಲ್ ಇನ್ನಷ್ಟು ಯಶಸ್ಸನ್ನು ಗಳಿಸಬಹುದು. ಫ್ರಾಂಚೈಸಿಗಳಿಂದ ಮತ್ತು ಪ್ರಾಯೋಜಕರಿಂದ ಹರಿದು ಬಂದ ಹಣವನ್ನು ರಾಜ್ಯದೆಲ್ಲೆಡೆ ಕ್ರೀಡಾಂಗಣಗಳನ್ನು ನಿರ್ಮಿಸಲು ವ್ಯಯಿಸಿ ಕೆಪಿಎಲ್ ಪಂದ್ಯಗಳನ್ನು ಆಯಾ ತಂಡಗಳ ಹೋಮ್ ಬೇಸ್-ನಲ್ಲಿ ಆಡಿಸಿದರೆ ಯಶಸ್ಸು ಖಚಿತ. ಬರೀ ಬೆಂಗಳೂರು-ಮೈಸೂರಿನಲ್ಲಿ ಪಂದ್ಯಗಳನ್ನು ಆಡಿಸಿದರೆ ಆಸಕ್ತಿ ಕ್ರಮೇಣ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.

ನಿರೀಕ್ಷಿಸಿದಂತೆ ನಡೆದದ್ದು:೧. ಪ್ರಾವಿಡೆಂಟ್ ಬೆಂಗಳೂರು ಪ್ರಶಸ್ತಿ ಗೆದ್ದಿದ್ದು
೨. ಅರುಣ್ ಕುಮಾರ್ ಭರ್ಜರಿ ಬ್ಯಾಟಿಂಗ್
೩. ರಾಬಿನ್ ಉತ್ತಪ್ಪ ಭರ್ಜರಿ ವೈಫಲ್ಯ
೪. ಸ್ಟೀವ್ ಲಾಝರಸ್ ಮತ್ತು ಸುನಿಲ್ ಕುಮಾರ್ ಜೈನ್ ಪ್ರತಿಭಾ ಪ್ರದರ್ಶನ
೫. ಆನಂದ್ ಕಟ್ಟಿ ಉತ್ತಮ ಬೌಲಿಂಗ್

ನಿರೀಕ್ಷಿಸಿರಲಿಲ್ಲ:೧. ಭರತ್ ಚಿಪ್ಲಿ, ದೇವರಾಜ್ ಪಾಟೀಲ್ ಮತ್ತು ಎಸ್.ಎಲ್.ಅಕ್ಷಯ್ ವೈಫಲ್ಯ
೨. ಬೆಳಗಾವಿ ಫೈನಲ್ ತಲುಪಿದ್ದು
೩. ಸುಧೀಂದ್ರ ಶಿಂದೆಗೆ ಬಿಜಾಪುರ ಬುಲ್ಸ್ ನಾಯಕತ್ವ
೪. ಮಿಥುನ್ ಬೀರಾಲ ಯಶಸ್ಸು
೫. ಮಧುಸೂದನ್, ರಾಮಲಿಂಗ ಪಾಟೀಲ್, ವೆಂಕಟೇಶ್ ಮತ್ತು ಸರ್ಫರಾಝ್ ಅಶ್ರಫ್ ಉತ್ತಮ ಬೌಲಿಂಗ್ ಪ್ರದರ್ಶನ

ಬೆಟ್ ಕಟ್ಟಿ ಗೆದ್ದದ್ದು:
ಮಂಗಳೂರು ಯುನೈಟೆಡ್, ದಾವಣಗೆರೆ ಡೈಮಂಡ್ಸ್ ಮತ್ತು ಮಲ್ನಾಡ್ ತಂಡಗಳು ಕೊನೆಯ ೩ ಸ್ಥಾನ ಗಳಿಸುತ್ತವೆ ಎಂದು

ನಾನು ಇಂಗು ತಿಂದ ಮಂಗನಾದ್ದು:ಡೇವಿಡ್ ಜಾನ್ಸನ್ ಮತ್ತು ಮನ್ಸೂರ್ ಅಲಿ ಖಾನ್ ಇವರಿಬ್ಬರ ಹೆಸರನ್ನು ಆಟಗಾರರ ಲಿಸ್ಟಿನಲ್ಲಿ ಕಂಡಾಗ ಕೆಟ್ಟದಾಗಿ ನಕ್ಕು ಬಿಟ್ಟಿದ್ದೆ. ಜಾನ್ಸನ್ ಅದಾಗಲೇ ನಿವೃತ್ತಿ ಘೋಷಿಸಿಯಾಗಿತ್ತು ಮತ್ತು ಮನ್ಸೂರ್ ಎಂಟು ವರ್ಷಗಳ ಹಿಂದೆನೇ ರಾಜ್ಯ ತಂಡದಿಂದ ಹೊರಬಿದ್ದು ಪ್ರಸಕ್ತ ಬೆಂಗಳೂರು ಲೀಗಿನಲ್ಲಿ ಕೆನರಾ ಬ್ಯಾಂಕ್ ಪರವಾಗಿ ಆಡುತ್ತಾ ಮತ್ತು ಕೋಚಿಂಗ್ ಮಾಡುತ್ತಾ ಇದ್ದರು. ಇವರನ್ನು ಆಡಿಸಿದ ತಂಡಗಳು ಉದ್ಧಾರ ಆದ ಹಾಗೆ ಎಂದು ತಿಳಿದಿದ್ದೆ. ಆದರೆ ಅವರಿಬ್ಬರೂ ಪ್ರೂವ್ಡ್ ಮಿ ರಾಂಗ್. ಜಾನ್ಸನ್ ಅದ್ಭುತ ಬೌಲಿಂಗ್ ಮಾಡಿ ತನ್ನ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತೆಯೇ ಮನ್ಸೂರ್ ಕೂಡಾ ತೆನ್ನೆಲ್ಲಾ ಅನುಭವವನ್ನು ಬಳಸಿ ಉತ್ತಮ ಬೌಲಿಂಗ್ ಮಾಡಿದರು. ಇವರ ’ಸ್ಲೋ ಬಾಲ್’ ದಾಂಡಿಗರನ್ನು ಪೇಚಿಗೆ ಸಿಲುಕಿಸುವುದನ್ನು ನೋಡುವುದೇ ಒಂದು ಆನಂದ.

ಕೆಟ್ಟ ಜಾಹೀರಾತು:ಶಾಮನೂರು ದಾವಣಗೆರೆ ಡೈಮಂಡ್ಸ್

ಅವಶ್ಯಕತೆಯಿರಲಿಲ್ಲ:ಬ್ರಾಂಡ್ ಅಂಬಾಸಿಡರ್-ಗಳದ್ದು

ಅಚ್ಚರಿ ಮೂಡಿಸಿದ್ದು:
೧. ರಾಂಗ್ಸೆನ್ ಜೊನಾಥನ್ ಬ್ಯಾಟಿಂಗ್ (ಕೆಪಿಎಲ್ ಉತ್ತಮ ಪ್ರದರ್ಶನದಿಂದ ಕರ್ನಾಟಕ ೨೦-೨೦ ತಂಡಕ್ಕೆ ತದನಂತರ ಆಯ್ಕೆಯಾದರು)
೨. ನಿಖಿಲ್ ಹಲ್ದೀಪುರ್ ಕೆಪಿಎಲ್-ನಲ್ಲಿ ಆಡಿದ್ದು
೩. ಬಾಲಚಂದ್ರ ಅಖಿಲ್ ಮತ್ತು ದೀಪಕ್ ಚೌಗುಲೆ ಉತ್ತಮ ನಾಯಕತ್ವ
೪. ವಿನಯ್ ಕುಮಾರ್ ಬ್ಯಾಟಿಂಗಿನಲ್ಲಿ ಮಿಂಚಿದ್ದು
೫. ಸುಧೀರ್ ರಾವ್ ಮತ್ತು ಅನಿರುದ್ಧ ಜೋಶಿ ಉತ್ತಮ ಬ್ಯಾಟಿಂಗ್ ಪ್ರದರ್ಶನ.

ನಿರಾಸೆ ಮಾಡಿದ್ದು:
೧. ಶಾಮ್ ಪೊನ್ನಪ್ಪ ಮತ್ತು ಕೆ.ಎಸ್.ಟಿ.ಸಾಯಿ ಇನ್ನಷ್ಟು ರನ್ನು ಗಳಿಸಲಿಲ್ಲವೆಂದು
೨. ಮಂಗಳೂರು ಯುನೈಟೆಡ್ ಜನಾರ್ಧನ ತಿಂಗಳಾಯನನ್ನು ಒಂದೂ ಪಂದ್ಯದಲ್ಲೂ ಆಡಿಸದೇ ಇದ್ದದ್ದು.
೩. ಧಾರವಾಡ-ಹುಬ್ಬಳ್ಳಿ ಹೆಸರಿನಲ್ಲಿ ತಂಡ ಇರದೇ ಇದ್ದಿದ್ದು! ಇಲ್ಲಿರುವ ಅತ್ಯಂತ ಉತ್ತಮ ಆಟಗಾರರಿಗೆ ಅವಕಾಶ ಸಿಕ್ಕರೆ ಒಳ್ಳೆಯದಿತ್ತು. ದಾವಣಗೆರೆ ಡೈಮಂಡ್ಸ್ ತಾನು ಧಾರವಾಡದ ತಂಡ ಕೂಡಾ ಎನ್ನುತ್ತದಾದರೂ ಹಾಗನಿಸುವುದಿಲ್ಲ.

ಕೆಪಿಎಲ್-ನ ಕೆಟ್ಟ ಗಳಿಗೆ:ಸುಧೀಂದ್ರ ಶಿಂದೆಯಿಂದ ಮಿಥುನ್ ಬೀರಾಲನಿಗೆ ಕಪಾಳ ಮೋಕ್ಷ

ದಶಮಾನದ ಕಮ್ ಬ್ಯಾಕ್:ಮಿಥುನ್ ಬೀರಾಲ. ೨೦೦೧ರಲ್ಲಿ ರಾಜ್ಯಕ್ಕೆ ಕೊನೆಯ ಬಾರಿ ಆಡಿದ್ದ ಮಿಥುನ್, ಕೆಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಜ್ಯ ೨೦-೨೦ ತಂಡದಲ್ಲಿ ಸ್ಥಾನ ಪಡೆದರು. ಅಂತೂ ಕೊನೆಗೆ ಪ್ರಥಮ ಬಾರಿಗೆ ಉತ್ತಮ ಪ್ರದರ್ಶನದ ಆಧಾರದ ಮೇಲೆ ಕರ್ನಾಟಕಕ್ಕೆ ಆಯ್ಕೆಯಾದರು.

ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೆ:
ಮನ್ಸೂರ್ ಅಲಿ ಖಾನ್ ಈಗಲಾದರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊನೆಯ ಸ್ಥಾನದಿಂದ ಭಡ್ತಿ ಪಡೆದಿದ್ದಾರೋ ಎಂದು! ಇಲ್ಲ. ಮತ್ತದೇ ನಂಬರ್ ೧೧ ಸ್ಥಾನದಲ್ಲಿ ಜೇನುಗೂಡಿನಂತಹ ಗಡ್ಡ ಬಿಟ್ಟು ತನ್ನದೇ ಯುನೀಕ್ ಸ್ಟೈಲ್-ನಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದರು.

ತುಂಬಾನೇ ಇಷ್ಟವಾದದ್ದು:
ನಮ್ಮ ಮನಸಲ್ಲೂ ಕ್ರಿಕೆಟ್ ನಮ್ಮ ಕನಸಲ್ಲೂ ನಮ್ಮ ಕೆಪಿಎಲ್ ಕೆಪಿಎಲ್
ನಮ್ಮ ಉತ್ಸಾಹಕ್ಕೆಂದು ನಮ್ಮ ಉಲ್ಲಾಸ ನಮ್ಮ ಕೆಪಿಎಲ್ ನಮ್ಮ ಕೆಪಿಎಲ್
ಆಚರಿಸುತಾ ಆಡುವಾ ಕರುನಾಡೆಲ್ಲಾ ಈ ಉತ್ಸವ
ಕೂಡಿ ಆಡಿ ಜಗವಾ
ಗೆಲ್ಲೋಣ....(ಕೆಪಿಎಲ್)
ಗೆಲ್ಲೋಣ.....(ಕೆಪಿಎಲ್)

ಕೆಪಿಎಲ್ ಕ್ಷಣ:ಫೈನಲ್ ಪಂದ್ಯ. ಮೊದಲ ಆರು ಓವರ್-ಗಳ ಒಳಗೆ ಸ್ಪಿನ್ನರ್ ಆನಂದ್ ಕಟ್ಟಿ ಆರಂಭಿಕ ಆಟಗಾರ ಮನಿಷ್ ಪಾಂಡೆಗೆ ಬೌಲಿಂಗ್ ಮಾಡುತ್ತಿದ್ದಾರೆ. ೩೭ ರ ಹರೆಯದ ಹಿರಿಯ ಅನುಭವಿ ಆಟಗಾರನಿಂದ ೨೦ರ ಹರೆಯದ ಯುವ ಪ್ರತಿಭಾವಂತ ಆಟಗಾರನಿಗೆ ಬೌಲಿಂಗ್. ಹಿರಿಯನಿಗೆ ತಾನೇನೂ ಕಮ್ಮಿಯಿಲ್ಲ ಎಂದು ತೋರಿಸುವ ಛಲ. ಕಿರಿಯನಿಗೆ ತನ್ನ ಐಪಿಎಲ್ ಮತ್ತು ಕೆಪಿಎಲ್ ಚಮತ್ಕಾರಗಳನ್ನು ಮುಂದುವರೆಸಿ ಹಿರಿಯನ ಬೌಲಿಂಗನ್ನು ಚಿಂದಿಗೊಳಿಸುವ ತವಕ. ಕಟ್ಟಿ ಎಸೆದ ಚೆಂಡು ಗಾಳಿಯಲ್ಲಿ ತೇಲಿಬಂದಂತೆ ಅನಿಸಿ ಮನಿಷ್ ಎಡಗಾಲನ್ನು ಮುಂದಿಟ್ಟು ಡ್ರೈವ್ ಮಾಡಲು ಕಮಿಟ್ ಆಗಿಬಿಟ್ಟರು. ಡ್ರೈವ್ ಶಾಟ್ ಆಡಬೇಕಾದರೆ ಚೆಂಡು ಪುಟಿದೇಳುವೆಡೆ ಎಡಗಾಲು ಮತ್ತು ಬ್ಯಾಟ್ ಇರಬೇಕು. ಇಲ್ಲಿ ಮನೀಷ್ ಎಡಗಾಲು ಮತ್ತು ಬ್ಯಾಟ್ ಎರಡೂ ಇದ್ದವು ಆದರೆ ಚೆಂಡೇ ಇರಲಿಲ್ಲ! ಮನೀಷ್ ಒಬ್ಬ ಫ್ರಂಟ್ ಫೂಟ್ ಆಟಗಾರ ಎಂಬ ಅರಿವು ಇದ್ದ ಆನಂದ್ ಕಟ್ಟಿ, ಚೆಂಡನ್ನು ಸ್ವಲ್ಪ ಮಾತ್ರ ಗಾಳಿಯಲ್ಲಿ ತೇಲಿಬಿಟ್ಟಿದ್ದರು ಮತ್ತು ಚೆಂಡಿನ ರಿಲೀಸ್ ಕೂಡಾ ಕ್ಷಣಮಾತ್ರ ತಡವಾಗಿ ಮಾಡಿದ್ದರು. ಹಾಗಾಗಿ ಚೆಂಡಿನ ಲೆಂತ್ ಅರಿಯುವಲ್ಲಿ ಮನೀಷ್ ಸಂಪೂರ್ಣ ವಿಫಲರಾದರು. ಸಂಪೂರ್ಣವಾಗಿ ಫ್ಲೈಟ್ ಮಾಡಲಾಗಿದೆ ಎಂದು ಡ್ರೈವ್ ಮಾಡಲು ಮುಂದೆ ಬಂದರೆ ಅಲ್ಲಿ ಚೆಂಡೇ ಇಲ್ಲ. ಶಾಟ್ ಆಡಲು ಕಮಿಟ್ ಆದ ಮನಿಷ್, ಡ್ರೈವ್ ಮಾಡಲು ಆಗದೆ ಬ್ಯಾಟನ್ನು ಹಾಗೆ ಮುಂದೆ ಬೀಸಿದರು. ಒಂದೆರಡು ಅಡಿ ಮೊದಲೇ ಪುಟಿದೆದ್ದ ಚೆಂಡು ತಡವಾಗಿ ಆಗಮಿಸಿ ಗಾಳಿಯಲ್ಲಿ ಹ್ಯಾಂಗ್ ಆಗಿದ್ದ ಬ್ಯಾಟಿನ ಅಂಚಿಗೆ ಬಡಿದು ಮಿಡ್ ವಿಕೆಟ್ ನಲ್ಲಿ ಸುಲಭದ ಕ್ಯಾಚ್. ಈ ವಿಕೆಟನ್ನು ಕಟ್ಟಿ ತುಂಬಾ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದರು. ಯಾಕೆಂದರೆ ಈ ವಿಕೆಟನ್ನು ಅವರು ಗಳಿಸಿದ್ದರು. ತಲೆ ತಗ್ಗಿಸಿ ಅಲ್ಲಿಂದ ಡಗ್ ಔಟ್ ಕಡೆ ನಡೆದರು ಮನೀಷ್. ಮನೀಷ್ ಬಕ್ರಾ ಆದ ಪರಿ ನೋಡಿ ಬಿದ್ದು ಬಿದ್ದು ನಕ್ಕು ಆ ಕ್ಷಣವನ್ನು ಬಹಳ ಎಂಜಾಯ್ ಮಾಡಿದೆ.

ಭಾನುವಾರ, ಸೆಪ್ಟೆಂಬರ್ 13, 2009

ಲಕ್ಷ್ಮೇಶ್ವರದ ದೇವಾಲಯಗಳು


೨೦-೦೧-೨೦೦೯.

ಒಂದು ದೇವಸ್ಥಾನ ಮತ್ತು ೨ ಬಸದಿಗಳನ್ನು ನೋಡಿ ಬರೋಣವೆಂದು ಲಕ್ಷ್ಮೇಶ್ವರಕ್ಕೆ ತೆರಳಿದರೆ ಅಲ್ಲಿ ಇನ್ನೂ ೩ ದೇವಾಲಯಗಳು ಮತ್ತು ಒಂದು ಆಕರ್ಷಕ ಮಸೀದಿಯಿರುವ ಬಗ್ಗೆ ತಿಳಿಯಿತು. ಒಂದು ಕಡೆಯಿಂದ ಮತ್ತೊಂದೆಡೆ ನಡೆದೇ ತೆರಳಬೇಕಾಗಿತ್ತು. ಆ ಉರಿ ಬಿಸಿಲಿನಲ್ಲಿ ಸುಮಾರು ಒಂದು ತಾಸು ಅಲ್ಲಿ ಇಲ್ಲಿ ನಡೆದು ಹೋಗಬೇಕಾದರೆ ಸಾಕು ಸಾಕಾಯಿತು. ಸೋಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಮಹಾಂತಯ್ಯನ ಗುಡಿ, ಅನಂತನಾಥ ಬಸದಿ ಮತ್ತು ಶಾಂತಿನಾಥ ಬಸದಿಗಳನ್ನು ನೋಡುವಷ್ಟರಲ್ಲಿಯೇ ಸಮಯ ಕಳೆದುಹೋಯಿತು. ಬಾಳೇಶ್ವರ ದೇವಾಲಯ, ಗೊಲ್ಲಾಳೇಶ್ವರ ದೇವಾಲಯ ಮತ್ತು ಇಸವಿ ೧೬೧೭ರಲ್ಲಿ ನಿರ್ಮಾಣಗೊಂಡಿರುವ ಜುಮ್ಮಾ ಮಸೀದಿಗಳನ್ನು ನೋಡಲು ಆಗಲಿಲ್ಲ.


ಹಿಂದೆ ’ಪುಲಿಗೆರೆ’ ಎಂದು ಕರೆಯಲಾಗುತ್ತಿದ್ದ ಊರು ಇಂದು ಲಕ್ಷ್ಮೇಶ್ವರ ಎಂದು ಬದಲಾಗಿದೆ. ಚಾಲುಕ್ಯ ಆಡಳಿತ ಕಾಲದಲ್ಲಿ ಲಕ್ಷ್ಮೇಶ್ವರ ಪ್ರಖ್ಯಾತ ಜೈನ ಧಾರ್ಮಿಕ ಕೇಂದ್ರವಾಗಿತ್ತು. ಆದಿಕವಿ ಪಂಪ ಪುಲಿಗೆರೆಯಲ್ಲಿ ಕಾವ್ಯರಚನೆ ಮಾಡಿದ್ದನೆಂದು ಶಾಸನಗಳಿಂದ ಮತ್ತು ಆತನ ಕಾವ್ಯಗಳಿಂದಲೇ ತಿಳಿದುಬರುತ್ತವೆ. ಚಾಲುಕ್ಯರಲ್ಲದೇ ಈ ನಾಡನ್ನು ರಾಷ್ಟ್ರಕೂಟರು ಮತ್ತು ಕದಂಬರು ಕೂಡಾ ಆಳಿದ್ದಾರೆ.


ಲಕ್ಷ್ಮೇಶ್ವರದಲ್ಲಿ ಪ್ರಸಿದ್ಧಿ ಪಡೆದಿರುವ ದೇವಾಲಯವೆಂದರೆ ಸೋಮೇಶ್ವರ ದೇವಾಲಯ. ಈ ದೇವಾಲಯವನ್ನು ೧೧ನೇ ಶತಮಾನದ ಕೊನೆಯಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರನನ್ನು ಕವಿಗಳಾದ ಹರಿಹರ ಮತ್ತು ರಾಘವಾಂಕ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸೂರ್ಯನ ಪ್ರಥಮ ಕಿರಣ ಗರ್ಭಗುಡಿಯಲ್ಲಿರುವ ಸೋಮೇಶ್ವರನ ಮೇಲೆ ಬೀಳುವಂತೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜೈನರ ಪ್ರಕಾರ ಇದು ಮೊದಲು ಜೈನ ಬಸದಿಯಾಗಿದ್ದು ನಂತರ ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ. ಆದರೆ ದೇವಾಲಯದ ರಚನೆಯನ್ನು ಮತ್ತು ಶಿಲ್ಪಕಲೆಯ ವೈಭವತೆಯನ್ನು ಗಮನಿಸಿದರೆ ಈ ಮಾತನ್ನು ನಂಬುವುದು ಬಹಳ ಕಷ್ಟ.


೩೨ ಕಂಬಗಳುಳ್ಳ ಮುಖಮಂಟಪ, ೪ ಕಂಬಗಳುಳ್ಳ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ಸೋಮೇಶ್ವರ ದೇವಾಲಯ ಏಕಕೂಟವಾಗಿದ್ದು ವಿಶಾಲವಾಗಿದೆ. ಅಂತರಾಳ ಮತ್ತು ಗರ್ಭಗುಡಿಗಳಲ್ಲಿ ನೆಲಕ್ಕೆ ಮಾರ್ಬಲ್ ಹಾಸುವ ಮೂಲಕ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಗರ್ಭಗುಡಿಯಲ್ಲಿ ಶಿವ ಮತ್ತು ಪಾರ್ವತಿಯರು ನಂದಿಯನ್ನೇರಿ ಕುಳಿತಿರುವ ಸುಂದರ ಕರಿಕಲ್ಲಿನ ಮೂರ್ತಿಯಿರುವುದು ಇಲ್ಲಿನ ವೈಶಿಷ್ಟ್ಯ. ಮುಂದಿನಿಂದ ನೋಡಿದರೆ ಪಾರ್ವತಿ ಶಿವನ ಹಿಂದೆ ಕುಳಿತಿರುವುದು ಕಾಣಬರುವುದಿಲ್ಲ. ಆಕೆ ಕಾಣಲೆಂದು ಮೂರ್ತಿಯ ಹಿಂದೆ ಕನ್ನಡಿಯೊಂದನ್ನು ಇರಿಸಲಾಗಿದೆ. ಈ ಮೂರ್ತಿ ಬಹಳ ಸುಂದರವಾಗಿದೆ. ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮತ್ತು ಅದಕ್ಕೆ ಮುಖ ಮಾಡಿ ನಂದಿಯಿದ್ದರೆ, ಇಲ್ಲಿ ಮಾತ್ರ ನಂದಿಯನ್ನೇರಿ ಲೋಕಸಂಚಾರಕ್ಕೆ ಹೊರಟಿರುವ ಭಂಗಿಯಲ್ಲಿ ಶಿವ ಮತ್ತು ಪಾರ್ವತಿ!


ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ಪ್ರವೇಶ ದ್ವಾರಗಳನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸೋಮೇಶ್ವರನಿಗಾಗಿ ನಾಟ್ಯಸೇವೆಗಳು ಇದೇ ಮುಖಮಂಟಪದಲ್ಲಿ(ಸಭಾಮಂಟಪ) ನಡೆಯುತ್ತಿದ್ದವು. ನವರಂಗಕ್ಕೂ ೩ ದ್ವಾರಗಳಿವೆ. ಇಕ್ಕೆಲಗಳಲ್ಲಿರುವ ಎರಡು ದ್ವಾರಗಳು ತಲಾ ೪ ಕಂಬಗಳುಳ್ಳ ಸುಂದರ ಕೆತ್ತನೆಗಳನ್ನೊಳಗೊಂಡಿರುವ ಮುಖಮಂಟಪಗಳನ್ನು ಹೊಂದಿವೆ.


ದೇವಾಲಯದ ಗರ್ಭಗುಡಿಯ ಮತ್ತು ಗೋಪುರದ ಹೊರಭಾಗದಲ್ಲಿರುವ ಚಾಲುಕ್ಯ ಶಿಲ್ಪಗಳು ಉತ್ತಮವಾಗಿವೆ. ಅಲ್ಲಲ್ಲಿ ಸಣ್ಣ ತೇಪೆ ಸಾರಿಸಿ ಪುರಾತತ್ವ ಇಲಾಖೆ ಮೂಲ ರೂಪ ಕಾದುಕೊಳ್ಳುವ ಪ್ರಯತ್ನ ಮಾಡಿದೆ.


ದೇವಾಲಯದ ಹಿಂಭಾಗದಲ್ಲಿ ಅದ್ಭುತವಾದ ಪುಷ್ಕರಿಣಿಯೊಂದಿದೆ. ಆಯತಾಕಾರದ ವಿಶಿಷ್ಟ ಮಾದರಿಯ ಪುಷ್ಕರಿಣಿಯಿದು. ಎರಡು ವರ್ಷದ ಹಿಂದಿನವರೆಗೂ ಈ ಪುಷ್ಕರಿಣಿ ಕಸಕಡ್ಡಿಗಳಿಂದ ತುಂಬಿಹೋಗಿ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಇಲ್ಲೊಂದು ಪುಷ್ಕರಿಣಿಯಿದೆ ಎಂದರೆ ನಂಬಲೂ ಅಸಾಧ್ಯವಾದ ಮಟ್ಟಿಗೆ ಸ್ಥಳೀಯರು ಇದನ್ನೊಂದು ಕಸದ ತೊಟ್ಟಿಯನ್ನಾಗಿ ಪರಿವರ್ತಿಸಿಕೊಂಡಿದ್ದರು. ಈಗ ಪುರಾತತ್ವ ಇಲಾಖೆ ಬಹಳಷ್ಟು ಶ್ರಮವಹಿಸಿ ಹಂತಹಂತವಾಗಿ ಪುಷ್ಕರಿಣಿಯನ್ನು ಸ್ವಚ್ಛಗೊಳಿಸಿ ಮೂಲರೂಪಕ್ಕೆ ತಂದಿದೆ. ಈಗ ಪುಷ್ಕರಿಣಿ ಸ್ವಚ್ಛ ನೀರಿನಿಂದ ನಳನಳಿಸುತ್ತಿದೆ.


ಸೋಮೇಶ್ವರ ದೇವಾಲಯದ ನಂತರ ಅನಂತನಾಥ ಬಸದಿ. ಇದಕ್ಕೆ ಯಾವಾಗಲೂ ಬೀಗ ಜಡಿದಿರುತ್ತದೆ. ಅಲ್ಲೇ ಬದಿಯಲ್ಲಿ ಸಂದಿಗೊಂದಿಗಳಲ್ಲಿ ಸ್ವಲ್ಪ ದೂರ ನಡೆದು ಮನೆಯೊಂದರಿಂದ ಬೀಗ ಕೇಳಿ ಪಡಕೊಂಡು ನಾವಾಗಿಯೇ ಪ್ರಾಂಗಣದ ಮತ್ತು ಬಸದಿಯ ಬೀಗಗಳನ್ನು ತೆಗೆದು ವೀಕ್ಷಿಸಬೇಕು. ಇದೊಂದು ತ್ರಿಕೂಟ ಶೈಲಿಯ ಬಸದಿ.


ನಂತರದ ಸರದಿ ಶಾಂತಿನಾಥ ಬಸದಿಯದ್ದು. ಈ ತೀರ್ಥಂಕರರ ಲಾಂಛನ ಶಂಖವಾಗಿರುವುದರಿಂದ ಈ ಬಸದಿಯನ್ನು ಶಂಖ ಬಸದಿಯೆಂದೂ ಕರೆಯಲಾಗುತ್ತದೆ. ಇದು ಬಹಳ ಪುರಾತನ ಬಸದಿಯೆಂದು ಇತಿಹಾಸಕಾರರ ಅಭಿಪ್ರಾಯ. ಸುಮಾರು ೬ ಅಡಿ ಎತ್ತರದ ಅಧಿಷ್ಠಾನದ ಮೇಲೆ ಈ ಬಸದಿಯನ್ನು ನಿರ್ಮಿಸಲಾಗಿದೆ. ೧೬ ಕಂಬಗಳುಳ್ಳ ಚೌಕಾಕಾರದ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಈ ಬಸದಿ ಹೊಂದಿದೆ. ಈ ಬಸದಿಯಲ್ಲಿ ೩ ವಿಶೇಷಗಳಿವೆ.


ಒಂದನೇಯದು ಇಲ್ಲಿರುವ ಬಹಳ ಅಪರೂಪದ ’ಸಹಸ್ರಕೂಟ ಜಿನಬಿಂಬ’ ಮೂರ್ತಿ. ಸುಮಾರು ೫-೬ ಅಡಿ ಎತ್ತರವಿರುವ ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿ ಅಪ್ರತಿಮವಾಗಿದೆ. ಸಾವಿರ ತೀರ್ಥಂಕರರನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವುದರಿಂದ ಹಾಗೆ ಹೆಸರು. ಇದೊಂದು ಬಹಳ ಅಪರೂಪದ ಮೂರ್ತಿ. ಭಾರತದಲ್ಲಿ ಬೇರೆಲ್ಲೂ ಈ ತರಹದ ಮೂರ್ತಿ ಇಲ್ಲ. ಊರಿನ ಹೊಲವೊಂದರಲ್ಲಿ ದೊರಕಿದ ಈ ಮೂರ್ತಿಯನ್ನು ಬಸದಿಯ ಮುಖಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.


ಶಾಂತಿನಾಥ ಬಸದಿಯಲ್ಲಿರುವ ಎರಡನೇ ವಿಶೇಷವೆಂದರೆ ೫ ತೀರ್ಥಂಕರರಿರುವ ’ಪಂಚ ಪರಮೇಷ್ಠಿ’ ಮೂರ್ತಿ. ಕರಿಕಲ್ಲಿನಲ್ಲಿ ಕೆತ್ತಲಾಗಿರುವ ಈ ಮೂರ್ತಿಯಲ್ಲಿ ಇಬ್ಬರು ತೀರ್ಥಂಕರರನ್ನು ಕುಳಿತುಕೊಂಡಿರುವಂತೆ ಮತ್ತು ೩ ತೀರ್ಥಂಕರರನ್ನು ನಿಂತಿರುವ ಶೈಲಿಯಲ್ಲಿ ಸುಂದರವಾಗಿ ಕೆತ್ತಲಾಗಿದೆ.


ಮೂರನೇ ವಿಶೇಷವೆಂದರೆ ಮುಖಮಂಟಪದ ಹೊರಗೋಡೆಗಳಲ್ಲಿರುವ ಮಿಥುನ ಶಿಲ್ಪಗಳು. ಬಸದಿಗಳಲ್ಲಿ ಮಿಥುನ ಶಿಲ್ಪಗಳಿರುವುದು ವಿರಳ. ಬಸದಿಯ ಎದುರಿಗೆ ದೀಪಸ್ತಂಭವಿದೆ. ಈ ಶಂಖ ಬಸದಿಯಲ್ಲೇ ಕುಳಿತು ಪಂಪ ತನ್ನ ಪ್ರಸಿದ್ಧ ಕಾವ್ಯ ’ಆದಿ ಪುರಾಣ’ವನ್ನು ರಚಿಸಿದನೆಂದು ಹೇಳಲಾಗುತ್ತದೆ.


ಸ್ಥಳೀಯ ಜೈನ ಸಮುದಾಯದವರೇ ಈ ಎರಡೂ ಬಸದಿಗಳ ರಕ್ಷಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಂದು ಸಮುದಾಯ ಅನಂತನಾಥ ಬಸದಿಯನ್ನು ನೋಡಿಕೊಂಡರೆ ಇನ್ನೊಂದು ಸಮುದಾಯ ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುತ್ತದೆ. ಈಗಲೂ ಸುತ್ತಮುತ್ತಲಿನ ಹೊಲಗಳಲ್ಲಿ ಭಗ್ನಗೊಂಡಿರುವ ಮೂರ್ತಿಗಳು ಸಿಗುತ್ತಿರುತ್ತವೆ. ಅಂತಹ ವಿಗ್ರಹಗಳನ್ನು ’ಫೋಟೋ ತೆಗೆಯಬಾರದು’ ಎಂಬ ಷರತ್ತಿನೊಂದಿಗೆ ಬಸದಿ ನೋಡಿಕೊಳ್ಳುವ ಯುವಕ ನನಗೆ ತೋರಿಸಿದ. ಬಸದಿಯ ಹಿಂದೆಯೇ ೨೪ ತೀರ್ಥಂಕರರ ಪೀಠವೊಂದು ದೊರಕಿದೆ. ಪೀಠದ ಮೇಲಿನ ತೀರ್ಥಂಕರರ ಮೂರ್ತಿಗಳು ನಾಪತ್ತೆ.


ಶಾಂತಿನಾಥ ಬಸದಿಯನ್ನು ನೋಡಿಕೊಳ್ಳುವ ಯುವಕನ ಹೆಸರು ನೇಮಿನಾಥ! ಈ ನೇಮಿನಾಥ ನನಗೆ ಲಕ್ಷ್ಮೇಶ್ವರದಲ್ಲಿರುವ ಇನ್ನುಳಿದ ದೇವಾಲಯಗಳ ಬಗ್ಗೆ ಅತ್ಯುತ್ಸಾಹದಿಂದ ಮಾಹಿತಿ ನೀಡತೊಡಗಿದ. ಸೋಮೇಶ್ವರ ದೇವಾಲಯ ಮತ್ತು ೨ ಬಸದಿಗಳನ್ನು ನೋಡುವ ಇರಾದೆ ಇದ್ದ ನನಗೆ ಈಗ ಲಕ್ಷ್ಮೇಶ್ವರದಲ್ಲೇ ನೋಡಲು ಇನ್ನಷ್ಟು ಸ್ಥಳಗಳಿವೆ ಎಂಬ ಮಾಹಿತಿ ದೊರಕಿತು. ಅದಾಗಲೇ ನಡೆದು ನಡೆದು ಸುಸ್ತಾಗಿದ್ದೆ. ಆದರೂ ಇನ್ನೆರಡು ದೇವಾಲಯಗಳನ್ನಾದರೂ ನೋಡೋಣವೆಂದು ಲಕ್ಷ್ಮಣೇಶ್ವರ ದೇವಾಲಯದೆಡೆ ಹೆಜ್ಜೆ ಹಾಕಿದೆ. ನೇಮಿನಾಥ ನನ್ನೊಡನೆ ಮಾರ್ಗದರ್ಶಿಯಾಗಿ ಬರಲು ಒಪ್ಪಿಕೊಂಡ. ಊರಿನಲ್ಲೊಂದು ೪೦೦ ವರ್ಷ ಹಳೇಯ ಮಸೀದಿಯಿರುವುದಾಗಿಯೂ ಅಲ್ಲಿನ ವಿಶೇಷವೆಂದರೆ ಕಲ್ಲಿನ ಸರಪಳಿಗಳು ಎಂದು ನೇಮಿನಾಥ ವಿವರಿಸತೊಡಗಿದ.


ಹಳೇ ಲಕ್ಷ್ಮೇಶ್ವರದಲ್ಲಿರುವುದು ಲಕ್ಷ್ಮಣೇಶ್ವರ ದೇವಾಲಯ. ಈ ದೇವಾಲಯವನ್ನು ’ಲಕ್ಷ್ಮಿಲಿಂಗನ ದೇವಾಲಯ’ವೆಂದೂ ಕರೆಯುತ್ತಾರೆ. ಈ ದೇವಾಲಯ ತ್ರಿಕೂಟಾಚಲ ಶೈಲಿಯಲ್ಲಿದ್ದು ಉತ್ತಮ ಶಿಲ್ಪಕಲೆಯನ್ನು ಹೊಂದಿದೆ. ಹೆಚ್ಚಿನೆಡೆ ಕೆತ್ತನೆಗಳು ನಶಿಸಿಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಲ್ಲಿ ಸಿಕ್ಕಿರುವ ಕೆತ್ತನೆಗಳ ತುಂಡುಗಳನ್ನು ದೇವಾಲಯದ ಹೊರಗೋಡೆಗೆ ಅಂಟಿಸಿದೆ. ಈ ದೇವಾಲಯದ ಮುಖಮಂಟಪ ವಿಶಾಲವಾಗಿದ್ದು ೩ ದ್ವಾರಗಳನ್ನು ಮತ್ತು ೫೨ ಕಂಬಗಳನ್ನು ಹೊಂದಿದೆ. ಎಲ್ಲಾ ೩ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳ ಮತ್ತು ಸಾಮಾನ್ಯ ನವರಂಗ. ಗೋಪುರಗಳೆಲ್ಲಾ ಬಿದ್ದುಹೋಗಿವೆ. ಗರ್ಭಗುಡಿಯಲ್ಲಿ ಪೀಠದ ಮೇಲೆ ಶಿವಲಿಂಗವಿದೆ ಮತ್ತು ನಂದಿಯ ಮೂರ್ತಿ ಎಲ್ಲೂ ಇರಲಿಲ್ಲ.


ಅಲ್ಲಿಂದ ಮುಂದೆ ಸಿಗುವುದು ಮಹಾಂತಯ್ಯನ ತೋಟದಲ್ಲಿರುವ ದೇವಾಲಯ. ಈ ದೇವಾಲಯದ ಹೆಸರೇ ’ಮಹಾಂತಯ್ಯನ ಗುಡಿ’. ಅಷ್ಟೇನು ವಿಶೇಷವಿಲ್ಲದಿರುವ ಸಣ್ಣ ದೇವಾಲಯವಿದು. ಗರ್ಭಗುಡಿಯಲ್ಲಿ ನಂದಿಯ ಮೂರ್ತಿಯಿದೆ. ಬಾಳೇಶ್ವರ ಮತ್ತು ಗೊಲ್ಲಾಳೇಶ್ವರ ದೇವಾಲಯಗಳ ಬಗ್ಗೆ ನೇಮಿನಾಥ ಮಾಹಿತಿ ನೀಡಿದರೂ ಅಲ್ಲಿಗೆ ಮತ್ತು ಜುಮ್ಮಾ ಮಸೀದಿಗೆ ತೆರಳುವಷ್ಟು ಸಮಯ ನನ್ನಲ್ಲಿರಲಿಲ್ಲ. ಲಕ್ಷ್ಮೇಶ್ವರಕ್ಕೆ ಈ ಭೇಟಿ ಅಪೂರ್ಣವಾಗಿಯೇ ಉಳಿಯಿತು.

ಶುಕ್ರವಾರ, ಸೆಪ್ಟೆಂಬರ್ 11, 2009

ಬುಧವಾರ, ಸೆಪ್ಟೆಂಬರ್ 09, 2009

ಅಕ್ಷರ ಅವಾಂತರ ೬ - ಶಿರಸಿ ಹಳೆ ಬಸ್ಸು ನಿಲ್ದಾಣದಲ್ಲಿ


ಜಿಲ್ಲಾಧಿಕಾರಿಗಳು ಇಂತಹ ಆದೇಶವನ್ನೂ ಹೊರಡಿಸುತ್ತಾರೋ!

ಶುಕ್ರವಾರ, ಸೆಪ್ಟೆಂಬರ್ 04, 2009

ಭೀಮೇಶ್ವರ ದೇವಾಲಯ - ನೀಲಗುಂದ


೦೯-೦೩-೨೦೦೮.

ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ ದೃಶ್ಯದ ಎಳ್ಳಷ್ಟು ಕಲ್ಪನೆಯೂ ನಮಗಿರಲಿಲ್ಲ. ಬೆಟ್ಟದ ಬದಿಯಲ್ಲೇ ರಸ್ತೆ ಇತ್ತು. ಸಣ್ಣ ದಿಬ್ಬವೊಂದನ್ನೇರಿದ ಕೂಡಲೇ ಕೆರೆಯ ತಟದಲ್ಲಿ ಅನತಿ ದೂರದಲ್ಲಿ ರಾರಾಜಿಸುತ್ತಿದ್ದ ಭೀಮೇಶ್ವರ ದೇವಾಲಯದ ಬಲೂ ಸುಂದರ ದೃಶ್ಯ.


ಅಮೃತ ಕೆರೆ ಎಂದು ಈ ಕೆರೆಯನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗಷ್ಟೆ ಪುರಾತತ್ವ ಇಲಾಖೆ ಭೀಮೇಶ್ವರ ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದಿದ್ದು ಸುತ್ತಲೂ ಚಪ್ಪಡಿ ಕಲ್ಲು ಹಾಸುವ ಕಾರ್ಯ ನಡೆಯುತ್ತಿದೆ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿಗೆ ಸಾಕಷ್ಟು ಜನರು ಆಗಮಿಸುತ್ತಾರೆ.


ಕೆರೆಯೊಳಗೆ ಚಾಚಿರುವ ಸಣ್ಣ ದಿಬ್ಬದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕಲ್ಯಾಣಿ ಚಾಳುಕ್ಯರಿಂದ ನಿರ್ಮಿತಗೊಂಡು ಹೊಯ್ಸಳರಿಂದ ಅಭಿವೃದ್ಧಿಗೊಂಡ ದೇವಾಲಯ ಎನ್ನಲಾಗುತ್ತಿದೆ. ಈ ತ್ರಿಕೂಟಾಚಲ ದೇವಾಲಯದ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದ್ದು, ಸುಂದರ ಕೆತ್ತನೆಯಿರುವ ಈ ಗೋಪುರದ ರಚನೆ ಪಕ್ಕಾ ಹೊಯ್ಸಳ ಶೈಲಿಯಲ್ಲಿದೆ. ದೇವಾಲಯ ಕೆರೆಗೆ ಮುಖ ಮಾಡಿ ಇದೆ ಮತ್ತು ಕೆರೆಗೆ ಇಳಿಯಲು ನಾಲ್ಕಾರು ಮೆಟ್ಟಿಲುಗಳಿವೆ.


ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿರುವ ದೇವಾಲಯಕ್ಕೆ ಪ್ರವೇಶ ಮುಖಮಂಟಪದ ಎರಡೂ ಪಾರ್ಶ್ವಗಳಿಂದ ಇದೆ. ಮುಖಮಂಟಪಕ್ಕೆ ತಾಗಿಕೊಂಡೇ ಖಾಲಿ ಗರ್ಭಗುಡಿಯೊಂದಿದೆ. ಕೆಲವೊಂದು ದೇವಾಲಯಗಳಲ್ಲಿ ಈ ರೀತಿ ನಿರ್ಮಾಣವಿರುತ್ತದೆ. ಮುಖಮಂಟಪದಲ್ಲೇ ಗರ್ಭಗುಡಿಯೊಂದಿರುತ್ತದೆ ಮತ್ತು ಈ ಗರ್ಭಗುಡಿ ಸೂರ್ಯನಾರಾಯಣ ದೇವರದ್ದಾಗಿದ್ದು ಪ್ರಮುಖ ಗರ್ಭಗುಡಿಗೆ ಮುಖ ಮಾಡಿ ಇರುತ್ತದೆ.


ನಂದಿ ಮೂರ್ತಿ ನವರಂಗದಲ್ಲಿದೆ ಮತ್ತು ಅದು ಮೂಲ ನಂದಿಯ ವಿಗ್ರಹದಂತೇ ಕಾಣದೇ, ಎಲ್ಲಿಂದಲೋ ತಂದು ಇರಿಸಲಾಗಿರುವಂತೆ ತೋರುತ್ತಿತ್ತು. ನವರಂಗದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳ ರಚನೆ ಸುಂದರವಾಗಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಂದರ ಶಿವಲಿಂಗವಿದೆ. ಅಂತರಾಳದ ದ್ವಾರ ೫ ತೋಳಿನದಾಗಿದ್ದು ಅಭೂತಪೂರ್ವ ಕೆತ್ತನೆಯನ್ನು ಹೊಂದಿದ್ದು ಬಹಳ ವಿಶಿಷ್ಟವಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆಯಿರುವ ಜಾಲಂಧ್ರಗಳು, ನಂತರ ಇನ್ನೂ ಸುಂದರ ಕೆತ್ತನೆಯಿರುವ ಕಲ್ಲಿನ ಕಂಬಗಳು. ಕೆಳಗೆ ದ್ವಾರಪಾಲಕರಂತೆ ದೇವ ದೇವಿಯರ ಕೆತ್ತನೆ.


ಇಷ್ಟೇ ಅಲ್ಲದೆ ಅಂತರಾಳದ ದ್ವಾರದ ಮೇಲೆಯೂ ಅದ್ಭುತ ಕೆತ್ತನೆ ಕೆಲಸವಿತ್ತು. ಈ ಕೆತ್ತನೆಗಳು ಯಾವುದೋ ಮಹತ್ವದ ಪೌರಾಣಿಕ ಘಟನೆಯನ್ನು ಬಿಂಬಿಸುತ್ತಿರಬೇಕು...ಆದರೆ ವಿವರಿಸಲು ಅಲ್ಲಿ ಯಾರೂ ಇರಲಿಲ್ಲ.


ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಕವಾಟಗಳಿವೆ. ಒಂದರಲ್ಲಿ ಗಣೇಶನ ವಿಗ್ರಹವಿದ್ದರೆ ಮತ್ತೊಂದರಲ್ಲಿರುವ ವಿಗ್ರಹ ಯಾವುದೆಂದು ಗೊತ್ತಾಗಲಿಲ್ಲ. ನವರಂಗದಲ್ಲಿ ನಾಲ್ಕು ಸುಂದರ ಕಲ್ಲಿನ ಕಂಬಗಳಿವೆ. ಸಮೀಪದಲ್ಲೆಲ್ಲೋ ದೊರಕಿರುವ ಸುಂದರ ಮತ್ತು ವಿಶಿಷ್ಟ ವಿಗ್ರಹವೊಂದನ್ನು ಅಲ್ಲೇ ಇರಿಸಲಾಗಿದೆ. ಉಳಿದೆರದು ಗರ್ಭಗುಡಿಗಳೊಳಗೆ ಇಣುಕಿದರೆ ಖಾಲಿ ಖಾಲಿ.


ದೇವಾಲಯ ನಿರೀಕ್ಷಿಸಿದ್ದಕ್ಕಿಂತ ಎಷ್ಟೋ ಚೆನ್ನಾಗಿತ್ತು. ಆ ಪರಿಸರವನ್ನಂತೂ ಮರೆಯಲಸಾಧ್ಯ.

ಮಾಹಿತಿ: ಬಿ.ರಾಮಪ್ರಸಾದ ಗಾಂಧಿ

ಮಂಗಳವಾರ, ಆಗಸ್ಟ್ 25, 2009

ಗಣೇಶ ಬಂದು ಹೋದ


ಕಳೆದ ೬ ವರ್ಷಗಳಲ್ಲಿ ಗಣೇಶ ಚತುರ್ಥಿಗೆ ಮನೆಗೆ ತೆರಳಲಾಗಿರಲಿಲ್ಲ. ಪ್ರತಿ ಸಲ ಏನಾದರೊಂದು ತೊಡಕುಗಳಿದ್ದವು (ಅಥವಾ ನನಗೇ ಮನಸ್ಸಿರಲಿಲ್ಲವೋ). ಆದರೆ ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ ಎಂಬಂತೆ ಈ ಬಾರಿಯೂ ತೊಡಕುಗಳಿದ್ದರೂ ಹಳದೀಪುರದೆಡೆ ಪ್ರಯಾಣಿಸಿದೆ. ಯಾವಾಗಲೂ ನಮ್ಮ ಮನೆಯಲ್ಲಿ ಚೌತಿ ಎರಡು ದಿವಸ. ಆದರೆ ಪರಿವಾರದಲ್ಲಿ ಮರಣವೊಂದು ಸಂಭವಿಸಿದ್ದರಿಂದ ಈ ಬಾರಿ ಚೌತಿ ಒಂದೇ ದಿನ. ಇನ್ನು ಮುಂದೆ ಚೌತಿಗೆ ಮನೆಯಲ್ಲಿ ಹಾಜರಿರಲೇಬೇಕು. ಗಣೇಶನನ್ನು ಮನೆಗೆ ಸ್ವಾಗತಿಸಿ ನಂತರ ಬೀಳ್ಕೊಡುವವರೆಗಿನ ಕೆಲವು ಚಿತ್ರಗಳು ಇಲ್ಲಿವೆ.