ಸೋಮವಾರ, ಡಿಸೆಂಬರ್ 31, 2007

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨


ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ.

ಗಾಳಿಪಟ ತಯಾರಿಸಲು ಬೇಕಾದ ವಸ್ತುಗಳನ್ನು ತರಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹಣಕಾಸಿನ ಜವಾಬ್ದಾರಿಯನ್ನು ಸರ್ವೇಶ್ ವಹಿಸಿಕೊಂಡರೆ, ಯಾವ ಕಡೆ, ಹೇಗೆ ಮತ್ತು ಎಲ್ಲೆಲ್ಲಿ ಕಡ್ಡಿಗಳನ್ನು ಯಾವ್ಯಾವ ಕೋನ ಮತ್ತು ಆಕಾರಗಳಲ್ಲಿ ಜೋಡಿಸಬೇಕು ಮತ್ತು ಗಾಳಿಯ ರಭಸವನ್ನು ತಡೆದುಕೊಳ್ಳಲು ಎಲ್ಲೆಲ್ಲಿ ತೂತುಗಳನ್ನು ಮಾಡಬೇಕು ಎಂಬಿತ್ಯಾದಿ 'ಟೆಕ್ನಿಕಲ್' ವಿಷಯಗಳ ಜವಾಬ್ದಾರಿ ಪ್ರಶಾಂತ್ ರದ್ದು. ದಿನೇಶ್ ಹೊಳ್ಳ ಒಬ್ಬ ಚಿತ್ರ ಕಲಾವಿದರಾಗಿದ್ದು, ತಾನೇ ಕೈಯಾರೆ ಬಿಡಿಸಿ ಗಾಳಿಪಟದ ವಿನ್ಯಾಸವನ್ನು ಸಿದ್ಧಪಡಿಸುವುದರಿಂದ ಶುರುಮಾಡಿ, ಅದಕ್ಕೆ ಖುದ್ದಾಗಿ ತಕ್ಕ ಬಣ್ಣ ನೀಡಿ ಅಂತಿಮ ರೂಪ ಕೊಟ್ಟ ಮೇಲೆ ನಂತರ ಬಟ್ಟೆಯನ್ನು ತಕ್ಕ ಆಕಾರಗಳಲ್ಲಿ ತುಂಡು ಮಾಡಿ ಬಣ್ಣ ಬಳಿದು, ಹೊಲಿಸಿ ಜೋಡಿಸುವವರೆಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಂತರ ಗಿರಿಧರ್ ಕಾಮತ್ರದ್ದು 'ಸಾರ್ವಜನಿಕ ಸಂಪರ್ಕಾಧಿಕಾರಿ'ಯ ಕೆಲಸ. ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುವುದು, ಟೀಮ್ ಮಂಗಳೂರಿನ ಪರವಾಗಿ ಅವಕಾಶ ಸಿಕ್ಕಲ್ಲಿ ಒಂದೆರಡು ಮಾತನಾಡಿ ಉತ್ತಮ ಅಭಿಪ್ರಾಯ ಮೂಡಿಸುವುದು, ಗಾಳಿಪಟ ಉತ್ಸವದ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸುವುದು ಇವರ ಜವಾಬ್ದಾರಿ.


ಒಂದು ಗಾಳಿಪಟ ತಯಾರಿಸಲು ಕನಿಷ್ಟ ೫೦೦ ಗಂಟೆಗಳಷ್ಟು ಸಮಯ ಬೇಕು. ರಾತ್ರಿ ೧೧ ರಿಂದ ಬೆಳಗ್ಗಿನ ಜಾವ ೩.೦೦ ಗಂಟೆಯವರೆಗೆ ಸರ್ವೇಶ್ ಮನೆಯಲ್ಲಿ ಗಾಳಿಪಟಕ್ಕೆ ನಿಧಾನವಾಗಿ ಆಕಾರ ಮತ್ತು ಬಣ್ಣ ನೀಡುವ ಕಾರ್ಯ ನಡೆಯುತ್ತದೆ. ಸುಮಾರು ೫ ತಿಂಗಳ ಬಳಿಕ ಒಂದು ದೈತ್ಯ ಯಕ್ಷಗಾನ ಪಾತ್ರಧಾರಿಯೋ, ಕಥಕ್ಕಳಿ ನೃತ್ಯಗಾರನೋ, ಭೂತ ಪಾತ್ರಧಾರಿಯೋ, ಡ್ರಾಗನ್ ಗಾಳಿಪಟವೋ ಅಥವಾ ಇನ್ಯಾವುದೋ ದೈತ್ಯ ಗಾಳಿಪಟ ತಯಾರಾಗುತ್ತದೆ.

ನಂತರ ಪಣಂಬೂರು ಕಡಲ ತೀರಕ್ಕೆ ತೆರಳಿ ಕೆಳೆದೈದು ತಿಂಗಳಿಂದ ರಾತ್ರಿಯೆಲ್ಲ ನಿದ್ದೆಬಿಟ್ಟು ತಯಾರಿಸಿದ ಗಾಳಿಪಟ ಸರಿಯಾಗಿ ಹಾರುತ್ತೋ ಇಲ್ವೋ ಎಂದು ಪರೀಕ್ಷೆ ಮಾಡುವ ಕಾಯಕ - ಟೆಸ್ಟ್ ಫ್ಲೈಯಿಂಗ್. ಆಗ ಇವರನ್ನು ನೋಡಿ 'ಗಾಳಿಪಟ ಮರ್ಲೆರ್ಗ್ ಬೇತೆ ಬೇಲೆ ಇಜ್ಜಾ ಪಣ್ದ್' (ಗಾಳಿಪಟ ಹುಚ್ಚರಿಗೆ ಬೇರೆ ಕೆಲಸ ಇಲ್ವಾ ಅಂತ) ಎಂದು ಕೊಂಕು ಮಾತನಾಡುವವರೇ ಹೆಚ್ಚಾಗಿದ್ದರು. ಹಾಗೆ ಮಾತನಾಡಿದವರೇ ಇಂದು 'ಯಾನ್ ಲಾ ಉಲ್ಲೆ ಟೀಮ್ ಮಂಗಳೂರುಡ್' (ನಾನೂ ಇದ್ದೇನೆ ಟೀಮ್ ಮಂಗಳೂರಿನಲ್ಲಿ) ಎಂದುಕೊಂಡು ಓಡಾಡುವುದು, ಮಾಧ್ಯಮದವರ ಮುಂದೆ ಹೇಳಿಕೆ ಕೊಡುವುದು, ಫೋಟೊಗಳಿಗೆ ಪೋಸು ಕೊಡುವುದು, ಇತ್ಯಾದಿಗಳನ್ನು ಮಾಡುವುದನ್ನು ನೋಡಿದರೆ.....

ಮೊದಲೆಲ್ಲ ಸಣ್ಣ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲು ಈ ನಾಲ್ವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಂಗಳೂರಿನಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡಿಕೊಂಡಿರುವವರಲ್ಲಿ ಗಾಳಿಪಟ ಉತ್ಸವವನ್ನು ಪ್ರಾಯೋಜಿಸುವಂತೆ ವಿನಂತಿಸಿದರೆ, ಅವರು ಇವರನ್ನು ಗಂಟೆಗಟ್ಟಲೆ ಕಾಯಿಸುವುದು, ಭಿಕ್ಷೆ ಬೇಡಲು ಬಂದವರಂತೆ ಮಾತನಾಡುವುದು, ತೀರ ನಿರ್ಲಕ್ಷ್ಯದಿಂದ ನಾಳೆ ಬಾ/ ಮುಂದಿನ ವಾರ ಬಾ ಎಂದು ಹೊರಗಟ್ಟುವುದು, ಕೊನೆಗೆ ಅಪಹಾಸ್ಯ ಮಾಡಿ ಜುಜುಬಿ ಎನಿಸಿಕೊಳ್ಳುವ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ನೀಡುವುದು - ಇವೆಲ್ಲವನ್ನು ಸಹಿಸಿಕೊಂಡು ಕೊಟ್ಟಷ್ಟನ್ನು ಒಟ್ಟು ಮಾಡಿ ಕಡೆಗೆ ತಮ್ಮ ಕೈಯಿಂದಲೇ ಹಣ ಹಾಕಿ ವರ್ಷಕ್ಕೊಮ್ಮೆ ಗಾಳಿಪಟ ಉತ್ಸವವನ್ನು ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಪಣಂಬೂರಿನ ಕಡಲ ತೀರದಲ್ಲಿ ಆಯೋಜಿಸುತ್ತಿದ್ದರು. ಆಗೆಲ್ಲ ಈ ನಾಲ್ವರೊಡನೆ ಕೈ ಜೋಡಿಸಿ ಸಹಾಯ ಮಾಡಲು ಮತ್ತೊಬ್ಬನಿರಲಿಲ್ಲ. ಈ ಎಲ್ಲಾ ಪ್ರಯತ್ನಗಳು ವ್ಯರ್ಥವೆನಿಸಲಿಲ್ಲ. ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರ ಮಕ್ಕಳ/ ಯುವಕರ ಸಂಖ್ಯೆ ಹೆಚ್ಚಾಗುತ್ತಿತ್ತು. ನಿಧಾನವಾಗಿಯಾದರೂ ಸರಿ ಆದರೆ ಸರಿಯಾದ ದಿಕ್ಕಿನಲ್ಲಿ ಟೀಮ್ ಮಂಗಳೂರು ಸಾಗತೊಡಗಿತ್ತು.


ದೊರಕಿರುವ ಯಶಸ್ಸಿನೊಂದಿಗೆ ಈಗ ಟೀಮ್ ಮಂಗಳೂರಿನ ಅನಧಿಕೃತ ಸದಸ್ಯರ ಸಂಖ್ಯೆ ಹೆಚ್ಚಾಗತೊಡಗಿದೆ. ಈ ನಾಲ್ವರ ಸ್ವಲ್ಪ ಪರಿಚಯವಿದ್ದವನೂ ಈಗ ಟೀಮ್ ಮಂಗಳೂರಿನ ಸದಸ್ಯನೇ! ಮಂಗಳೂರಿನಲ್ಲೊಬ್ಬ ಹೆಸರುವಾಸಿ ಚಿತ್ರಕಾರರಿದ್ದಾರೆ. ಮೊದಲು ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣಗಳನ್ನು ನೋಡಿ 'ಇವೆಲ್ಲ ಸರಿಯಿಲ್ಲ', 'ಇವರು ಸರಿಯಾಗಿ ಅಧ್ಯಯನ ಮಾಡದೇ ಬಣ್ಣ ಬಳಿಯುತ್ತಿದ್ದಾರೆ' ಎಂಬ ಹೇಳಿಕೆಗಳನ್ನು ತಾವಾಗಿಯೇ ಕೊಡುತ್ತಿದ್ದರು. ಈಗ ಟೀಮ್ ಮಂಗಳೂರು ಹೆಸರು ಗಳಿಸಿದ ಬಳಿಕ, ಆ ಗಾಳಿಪಟಗಳ ವಿನ್ಯಾಸ ಮಾಡಿದ್ದೂ ನಾನೇ ಅವುಗಳಿಗೆ ಬಣ್ಣ ಹಚ್ಚಿದ್ದು ನಾನೇ ಎಂದುಕೊಂಡು ಓಡಾಡುತ್ತಿದ್ದಾರೆ!

ಈಗ ವಿದೇಶ ಪ್ರವಾಸದ ಗೀಳು ಈ ಅನಧಿಕೃತ ಸದಸ್ಯರಿಗೆ. ದಿನೇಶ್ ಹೊಳ್ಳರಲ್ಲಿ ಪಾಸ್ ಪೋರ್ಟ್ ಇಲ್ಲ ಎಂಬ ವಿಷಯ ಗೊತ್ತಾದ ಕೂಡಲೇ ಅವರ ಜಾಗದಲ್ಲಿ ವಿದೇಶಕ್ಕೆ ತೆರಳಲು ಪೈಪೋಟಿ! ಹಾಗೆ ಪುಕ್ಕಟೆಯಾಗಿ ಹೋದವರು ಅಲ್ಲಾದರೂ ಸರಿಯಾಗಿ ಕೆಲಸ ಮಾಡಿದರೇ? ಅದೂ ಇಲ್ಲ. ಬರೀ ಗಾಳಿಪಟದ ನೂಲು ಹಿಡಕೊಂಡು ನಿಂತರೆ ಸಾಕಿತ್ತು. ಅದೂ ಮಾಡದೆ, ತಮ್ಮನ್ನು ಸ್ವಾಗತಿಸುವ ಸಮಯದಲ್ಲಿ ಕೆನ್ನೆಗೆ ಮುತ್ತಿಕ್ಕಿ ಸ್ವಾಗತಿಸಿದ ನಾರಿಯನ್ನು ಹುಡುಕಿಕೊಂಡು ಹೋಗುವುದು, ಚೆನ್ನಾದ ಬಟ್ಟೆ ಧರಿಸಿಕೊಂಡು 'ಸನ್ ಗ್ಲಾಸ್' ಏರಿಸಿಕೊಂಡು ಒಂದು ಆಯಕಟ್ಟಿನ ಸ್ಥಳದಲ್ಲಿ ಕುರ್ಚಿ ಹಾಕಿ ವಿ.ಐ.ಪಿ ಯಂತೆ ಏನೂ ಕೆಲಸ ಮಾಡದೆ ಕೂತುಬಿಡುವಿದು, ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿರುವವರ ಚಿತ್ರ ತೆಗೆಯುತ್ತ ಅಲೆದಾಡುವುದು ಇತ್ಯಾದಿಗಳನ್ನು ಮಾಡಿ, 'ಟೀಮ್ ಮಂಗಳೂರು' ಹೆಸರಿನಲ್ಲಿ ವಿದೇಶ ಪ್ರವಾಸ ಮಾಡಿ ಬಂದು, 'ಫಾರೀನ್ ಪೋದ್ ಬತ್ತೆ' (ವಿದೇಶಕ್ಕೆ ಹೋಗಿ ಬಂದೆ) ಎಂದು ಸಿಕ್ಕವರಲ್ಲಿ ಕೊರೆದರಾಯಿತು. ಇಂತಹ ದಂಡಪಿಂಡಗಳ ಸಹವಾಸದಿಂದ ರೋಸಿಹೋಗಿರುವ ಸರ್ವೇಶ್, ಈಗ ದಿನೇಶ್ ಹೊಳ್ಳರಿಗೊಂದು ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾರೆ.


ತಂಡದ ಪ್ರಮುಖ ಸದಸ್ಯರಾಗಿರುವ ಪ್ರಶಾಂತ್ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ ಗಾಳಿಪಟ ತಯಾರಿ ಈಗ ಸ್ವಲ್ಪ ನಿಧಾನವಾಗಿ ಸಾಗುತ್ತಿದೆ. ಪ್ರತಿ ಮುಂಜಾನೆ ೧೧.೧೫ಕ್ಕೆ ಮಂಗಳೂರಿನ 'ಕಾರ್ ಸ್ಟ್ರೀಟ್' ನಲ್ಲಿರುವ ಹೊಟೇಲ್ ತಾಜ್ ಮಹಲ್ ನಲ್ಲಿ ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧಿ ಪಡೆದಿರುವ ಕಾಫಿಯನ್ನು ಹೀರುತ್ತಾ ಸರ್ವೇಶ್ ಮತ್ತು ದಿನೇಶ್ ಹೊಳ್ಳರದ್ದು ಗಾಳಿಪಟ ತಯಾರಿಯ ಹಂತದ ಬಗ್ಗೆ ಚರ್ಚೆ. ಟೀಮ್ ಮಂಗಳೂರಿನ ಎಲ್ಲಾ ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣದ ಬಗ್ಗೆ ಅಂತಿಮ ನಿರ್ಧಾರ ಇದೇ ಹೊಟೇಲ್ ತಾಜ್ ಮಹಲ್ ನ ಮೂಲೆಯ ಟೇಬಲ್ ಗಳಲ್ಲೊಂದರಲ್ಲಿ ತೆಗೆದುಕೊಳ್ಳಲಾಗುತ್ತದೆ!

ಕೊನೆಯದಾಗಿ ಗಾಳಿಪಟ ತಯಾರಿಸುವ ವಸ್ತುಗಳನ್ನು ತರಿಸುವ ಸ್ಥಳಗಳ ಬಗ್ಗೆ ಒಂದು ಮಾತು. ಕಡ್ಡಿಗಳನ್ನು ಹೊಸನಗರದಿಂದ ಸರ್ವೇಶ್ ಖುದ್ದಾಗಿ ಹೋಗಿ ತರುತ್ತಾರೆ. ಈಗ ಕೆಲವು ಕಡ್ಡಿಗಳು ಮುಂಬೈನಲ್ಲಿ 'ರೆಡಿಮೇಡ್' ಆಗಿ ಸಿಗುವುದರಿಂದ ಆಲ್ಲಿಂದಲೂ ತರಿಸಲಾಗುತ್ತದೆ. ನೂಲನ್ನು ಆಸ್ಟ್ರೇಲಿಯದಿಂದ ಮತ್ತು ಕಡ್ಡಿಗಳನ್ನು ದೃಢವಾಗಿ ಜೋಡಿಸಲು ಬಳಸಲಾಗುವ 'ಕ್ಲಿಪ್' ಗಳನ್ನು ಆಸ್ಟ್ರೇಲಿಯ ಮತ್ತು ಇಂಗ್ಲಂಡ್ ನಿಂದ ತರಿಸಲಾಗುತ್ತದೆ. ಬಟ್ಟೆಯನ್ನು ಇಂಗ್ಲಂಡ್, ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಕಡ್ಡಿ ಇರುವಲ್ಲಿ ಉನ್ನತ ಗುಣಮಟ್ಟದ ಬಟ್ಟೆಯನ್ನು ಬಳಸಬೇಕಾಗುವುದರಿಂದ ಅವನ್ನು ಇಂಗ್ಲಂಡ್ ನಿಂದಲೂ ಮತ್ತು ಕಡ್ಡಿಯಿಲ್ಲದಿರುವಲ್ಲಿ ಸ್ವಲ್ಪ ಕಡಿಮೆ ಗುಣಮಟ್ಟದ ಬಟ್ಟೆಯನ್ನು ಬಳಸಬಹುದಾದರಿಂದ ಅವನ್ನು ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಎಟ್ ಲೀಸ್ಟ್ ಬಣ್ಣವಾದರೂ ಭಾರತದ್ದು!

೨೦೦೮ ಜನವರಿ ೧೮ ಮತ್ತು ೧೯ರಂದು ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: www.indiankites.com

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧


೨೦೦೮ ಜನವರಿ ೧೯ ಮತ್ತು ೨೦ ರಂದು ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.

ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು 'ಟೀಮ್ ಮಂಗಳೂರು' ಆಯೋಜಿಸಿತ್ತು. ಜನ ಪ್ರವಾಹವೇ ಪಣಂಬೂರು ಸಮುದ್ರ ತೀರಕ್ಕೆ ಹರಿದು ಬರುತ್ತಿತ್ತು. ಇಡೀ ಮಂಗಳೂರೇ ಗಾಳಿಪಟ ಉತ್ಸವ ನೋಡಲು ಪಣಂಬೂರು ಕಡಲ ತೀರದಲ್ಲಿ ನೆರೆದಿತ್ತು.

ಜನವರಿ ೨೩,೨೦೦೫ರಂದು ನಡೆದ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಟೀಮ್ ಮಂಗಳೂರಿನ ಸದಸ್ಯರ ಕನಸು ನನಸಾದ ದಿನ. ಇದು ಟೀಮ್ ಮಂಗಳೂರಿಗೆ ಒಂದು ದೊಡ್ಡ ಮಟ್ಟದ ಯಶಸ್ಸು ಕಂಡ ದಿನವಾಗಿತ್ತು. ಉತ್ಸವದ ಸಂಪೂರ್ಣ ಪ್ರಾಯೋಜಕತೆಯನ್ನು ಮಂಗಳೂರು ತೈಲಾಗಾರ(ಎಮ್.ಆರ್.ಪಿ.ಎಲ್)ದ ಪೋಷಕ ಸಂಸ್ಠೆಯಾಗಿರುವ ಓ.ಎನ್.ಜಿ.ಸಿ ವಹಿಸಿಕೊಂಡಿತ್ತು. ಮಿಡಿಯಾ ಪ್ರಾಯೋಜಕತೆಯ ಜವಾಬ್ದಾರಿಯನ್ನು ವಿಜಯ ಕರ್ನಾಟಕ ವಹಿಸಿಕೊಂಡಿದ್ದರಿಂದ ಉತ್ಸವದ ಪ್ರಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಗಾಳಿಪಟ ಉತ್ಸವ ವೀಕ್ಷಿಸಲು ಸುಮಾರು ಒಂದು ಲಕ್ಷದಷ್ಟು ಜನಸಮೂಹ ಸೇರಿತ್ತು. ಫ್ರಾನ್ಸ್, ಇಸ್ರೇಲ್, ಆಸ್ಟ್ರೇಲಿಯ, ಮಲೇಶ್ಯ, ಇಂಡೋನೇಶ್ಯ, ಇಂಗ್ಲಂಡ್, ಜಪಾನ್ ಮತ್ತು ಟರ್ಕಿ ದೇಶಗಳಿಂದ ಗಾಳಿಪಟಗಾರರು ಬಂದಿದ್ದರು.


ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ ನಂತರ ಟೀಮ್ ಮಂಗಳೂರಿನ ಅದೃಷ್ಟ ಬದಲಾಯಿತು. ಬೇರೆ ದೇಶಗಳಿಂದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಹ್ವಾನಗಳು ಬರಲಾರಂಭಿಸಿದವು. ಎಪ್ರಿಲ್ ೨೦೦೫ರಲ್ಲಿ ಫ್ರಾನ್ಸ್ ನ ಬರ್ಕ್ ಸುರ್ ಮರ್ ಎಂಬಲ್ಲಿ ನಡೆದ ಗಾಳಿಪಟ ಉತ್ಸವದಿಂದ ಪ್ರಾರಂಭಗೊಂಡು ೫ ಬಾರಿ ಟೀಮ್ ಮಂಗಳೂರು ವಿದೇಶ ಪ್ರಯಾಣ ಮಾಡಿ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದೆ. ಸೌದಿ ಅರೇಬಿಯ, ಟರ್ಕಿ, ಜಪಾನ್ ಮತ್ತು ಇಂಡೋನೇಶ್ಯಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಿಗೆ ತೆರಳಲು ಟೀಮ್ ಮಂಗಳೂರಿಗೆ ನಾನಾ ಕಾರಣಗಳಿಂದ ಸಾಧ್ಯವಾಗಲಿಲ್ಲ.


ಭಾಗವಹಿಸಲು ತೆರಳಿದ ಎಲ್ಲಾ ಕಡೆಗಳಲ್ಲೂ ಭಾರತದ ಜನಪದ ಕಲೆಗಳಿಗೆ, ಪೌರಾಣಿಕ ಪಾತ್ರಗಳಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದೈತ್ಯ ಗಾತ್ರದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿಸಿ ವಿದೇಶಿಯರನ್ನು ದಂಗುಬಡಿಸಿ, ಪ್ರಶಂಸೆ ಪಡೆದು ಹೆಮ್ಮೆಯಿಂದ ಬೀಗುತ್ತ ಮರಳಿ ಬಂದಿದೆ ಟೀಮ್ ಮಂಗಳೂರು. ೨೦೦೫ರಲ್ಲಿ ಇಂಗ್ಲಂಡ್ ನಲ್ಲಿ ನಡೆದ ೨ ಗಾಳಿಪಟ ಉತ್ಸವಗಳಲ್ಲಿ 'ಬೆಸ್ಟ್ ಟೀಮ್' ಪ್ರಶಸ್ತಿಯನ್ನು ಗಳಿಸಿದ್ದು ಟೀಮ್ ಮಂಗಳೂರಿನ ಸಾಧನೆ. ಭಾರತದಿಂದ ಅಹ್ವಾನಿಸಲ್ಪಟ್ಟ ಏಕೈಕ ತಂಡವೆಂಬ ಹೆಗ್ಗಳಿಕೆ ಬೇರೆ. ೨೦೦೨ರ ಗುಜರಾತ್ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 'ಟೀಮ್ ಮಂಗಳೂರು' ತನ್ನ ೩೬ ಅಡಿ ಉದ್ದದ ಕಥಕ್ಕಳಿ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿತು. ಲಿಮ್ಕಾ ಸಾಧನೆಗಳ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಲಾಗಿದೆ. ಇಂಗ್ಲಂಡ್ ನ ಗಾಳಿಪಟ ಮಾಸ ಪತ್ರಿಕೆಯಾಗಿರುವ 'ದಿ ಕೈಟ್ ಫ್ಲೈಯರ್' ತನ್ನ ಜುಲೈ ೨೦೦೫ರ ಸಂಚಿಕೆಯ ಮುಖಪುಟದಲ್ಲಿ ಟೀಮ್ ಮಂಗಳೂರಿನ ಗಾಳಿಪಟಗಳನ್ನು ಮುದ್ರಿಸಿತ್ತು.

ಅಂದ ಹಾಗೆ ಏನಿದು 'ಟೀಮ್ ಮಂಗಳೂರು'?

ಗಾಳಿಪಟಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ತಯಾರಿಸಿ ಹಾರಿಸುವ ಹವ್ಯಾಸವಿರುವ ಸಮಾನ ಮನಸ್ಕರ ಒಂದು ಸಣ್ಣ ತಂಡ 'ಟೀಮ್ ಮಂಗಳೂರು'. ಗಾಳಿಪಟ ಹಾರಿಸುವುದನ್ನು ಒಂದು ಹವ್ಯಾಸವಾಗಿ ಜನರಲ್ಲಿ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಯುವ ಜನಾಂಗದಲ್ಲಿ ಬೆಳೆಸಬೇಕು ಎಂಬ ಪ್ರಮುಖ ಉದ್ದೇಶದಿಂದ ೧೯೯೮ ರಲ್ಲಿ 'ಟೀಮ್ ಮಂಗಳೂರು' ಅಸ್ತಿತ್ವಕ್ಕೆ ಬಂತು. ಇದರೊಂದಿಗೆ ಯುವ ಜನಾಂಗದಲ್ಲಿ ಪ್ರಕೃತಿಯ ಪ್ರತಿ ಪ್ರೀತಿ ಹಾಗೂ ಗೌರವ ಬೆಳೆಸುವುದು ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ತನ್ನ ಗಾಳಿಪಟಗಳ ಮೂಲಕ ಜಗತ್ತಿನೆಲ್ಲೆಡೆ ಸಾರುವುದು ಇವು ಇತರ ಉದ್ದೇಶಗಳಾಗಿವೆ.


ಈಗ ಟೀಮ್ ಮಂಗಳೂರಿನ ಮುಂದೆ ಇರುವ ಸವಾಲೆಂದರೆ ಪ್ರತಿ ವರ್ಷ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸುವುದು. ೨೦೦೬ರಲ್ಲಿ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ೨೦೦೭ರಲ್ಲಿ ಜನವರಿಯಲ್ಲಿ ನಡೆದ 'ಬೀಚ್ ಉತ್ಸವ' ದಲ್ಲಿ ಟೀಮ್ ಮಂಗಳೂರು ತನ್ನ ಗಾಳಿಪಟಗಳನ್ನು ಹಾರಿಸಿದ್ದಲ್ಲದೇ ಬೇರೆ ದೇಶಗಳ ಗಾಳಿಪಟಗಾರರನ್ನೂ ಪಾಲ್ಗೊಳ್ಳಲು ತಾನಾಗಿಯೇ ಆಹ್ವಾನಿಸಿದ್ದರಿಂದ ಅದೇ ಒಂದು ಗಾಳಿಪಟ ಉತ್ಸವವಾಗಿಹೋಯಿತು. ೨೦೦೮ರಲ್ಲಿ ಜನವರಿ ೧೯ ಮತ್ತು ೨೦ ರಂದು ಮತ್ತೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಪ್ರತಿ ವರ್ಷ ಗಾಳಿಪಟ ಉತ್ಸವ ಮಾಡಲು ಪಡಬೇಕಾದ ಪರದಾಟ, ಇದ್ದ ತೊಡಕುಗಳು, ಪ್ರೋತ್ಸಾಹದ ಕೊರತೆ, ಪ್ರಾಯೋಜಕರ ಕೊರತೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಜನರ ನಿರುತ್ಸಾಹ ಮತ್ತು ನಿರ್ಲಕ್ಶ್ಯ ಟೀಮ್ ಮಂಗಳೂರಿಗೆ ನಿರಾಸೆಯನ್ನುಂಟು ಮಾಡುತ್ತಿದ್ದವು. ಆದರೂ ಕೂಡಾ ಛಲಬಿಡದೆ ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆ ಮತ್ತು ಒಂದು ಸಣ್ಣ ಗಾಳಿಪಟ ಉತ್ಸವವನ್ನು ಪಣಂಬೂರು ಕಡಲ ತೀರದಲ್ಲಿ ಸ್ವಂತ ಖರ್ಚಿನಲ್ಲಿ ಟೀಮ್ ಮಂಗಳೂರು ಮಾಡುತ್ತಿತ್ತು.


ಪ್ರತಿ ವರ್ಷ ಜನವರಿಯಲ್ಲಿ ಗುಜರಾತಿನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲು ಟೀಮ್ ಮಂಗಳೂರು ತೆರಳುತ್ತಿತ್ತು. ಯಕ್ಷಗಾನ ಪಾತ್ರಧಾರಿಯ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು. ಹೈದರಾಬಾದ್ ನಲ್ಲಿ ನಡೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮತ್ತದೇ ಗಾಳಿಪಟಗಳನ್ನು ಹಾರಿಸಿ ಮತ್ತಷ್ಟು ಪ್ರಶಂಸೆಗಳ ಸುರಿಮಳೆ. ಈ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬೇರೆ ದೇಶಗಳ ಗಾಳಿಪಟಗಾರರು ಟೀಮ್ ಮಂಗಳೂರಿನ 'ಹ್ಯಾಂಡ್ ಮೇಡ್' ಗಾಳಿಪಟಗಳಿಂದ ಆಕರ್ಷಿತರಾದರು. ತಮ್ಮ ದೇಶಗಳಿಗೆ ಹಿಂತಿರುಗಿದ ಬಳಿಕ ಅಲ್ಲಿನ ಗಾಳಿಪಟ ಉತ್ಸವ ಆಯೋಜಕರಿಗೆ ಟೀಮ್ ಮಂಗಳೂರಿನ ಬಗ್ಗೆ ಮಾಹಿತಿ ನೀಡಿ ಅಹ್ವಾನಿಸುವಂತೆ ಶಿಫಾರಸು ಮಾಡತೊಡಗಿದಾಗ ಟೀಮ್ ಮಂಗಳೂರಿನ ಖ್ಯಾತಿ ವಿದೇಶಗಳಲ್ಲಿ ಹರಡತೊಡಗಿತು.

ಮೊದಲೆಲ್ಲ ಎಲ್ಲಿ ಗುಜರಾತ್-ಹೈದರಾಬಾದ್ ನಿಂದ ಅಹ್ವಾನ ಬರುದಿಲ್ಲವೋ ಎಂದು ಆತಂಕಗೊಳಗಾಗುತ್ತಿದ್ದ ಸರ್ವೇಶ್, ಈಗ ಎಲ್ಲಿ ಫ್ರಾನ್ಸ್-ಇಂಗ್ಲಂಡ್ ಗಳಿಂದ ಆಹ್ವಾನ ಬರುದಿಲ್ಲವೋ ಎಂಬ ಆತಂಕಗೊಳಗಾಗುತ್ತಾರೆ!

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: http://www.indiankites.com/

ಶುಕ್ರವಾರ, ಡಿಸೆಂಬರ್ 28, 2007

೨೦೦೭-೦೮ ರಣಜಿ ಋತುವಿನಲ್ಲಿ ಕರ್ನಾಟಕ

ಕರ್ನಾಟಕ ೨೦೦೭-೦೮ ಋತುವಿನ ರಣಜಿ ಋತುವನ್ನು ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಮುಗಿಸಿತು. ರತ್ನಗಿರಿಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಇನ್ನಿಂಗ್ಸ್ ಮತ್ತು ೧೨೯ ರನ್ನುಗಳಿಂದ ಸೋಲಿಸಿ ೧೬ ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಡಬೇಕಾಯಿತು. ಆಡಿದ ೭ ಪಂದ್ಯಗಳಲ್ಲಿ ೨ ವಿಜಯ, ೪ ಡ್ರಾ ಮತ್ತು ಒಂದು ಸೋಲು ಕರ್ನಾಟಕದ ಸಾಧನೆ.

ಮೈಸೂರಿನಲ್ಲಿ ನಡೆದ ಸೌರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ನಾಯಕ ಯೆರೆ ಗೌಡರ ಮೂರ್ಖತನದ ಆಟದಿಂದ ಗೆಲ್ಲಬಹುದಾದ ಪಂದ್ಯವನ್ನು ಸೋತ ಕರ್ನಾಟಕ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆಯನ್ನು ಅಂದೇ ಕಳೆದುಕೊಂಡಿತ್ತು. ಗೆಲ್ಲಲು ೫ ಎಸೆತಗಳಲ್ಲಿ ೭ ಓಟಗಳ ಅವಶ್ಯಕತೆ ಇರುವಾಗ ಒಂಟಿ ಓಟ ತೆಗೆದು ಕೊನೆಯ ಆಟಗಾರ ಅಪ್ಪಣ್ಣ ಮುಂದಿನ ಎಸೆತ ಎದುರಿಸುವಂತೆ ಮಾಡಿದರಲ್ಲ ಯೆರೆ ಗೌಡ! ಅಪ್ಪಣ್ಣ ಆ ಎಸೆತದಲ್ಲೇ ನೆಗೆದುಬಿದ್ದರು. ಅವರೊಂದಿಗೆ ಕರ್ನಾಟಕವೂ ನೆಗೆದುಬಿತ್ತು. ಯೆರೆ ಗೌಡರಿಗೆ ಶಾಪ ಹಾಕಿದವರೆಷ್ಟೋ... ನನ್ನನ್ನೂ ಸೇರಿಸಿ! ಇಷ್ಟೊಂದು ಅನುಭವವಿರುವ ಯೆರೆ ಗೌಡ ಸ್ವಲ್ಪ ತಲೆ ಖರ್ಚು ಮಾಡಿ ಅಡಿದ್ದಿದ್ದರೆ ಕರ್ನಾಟಕ ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಗೆದ್ದು ಈಗ ಅಂಕಪಟ್ಟಿಯಲ್ಲಿ ೨೧ ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿ ಉತ್ತರ ಪ್ರದೇಶದ ವಿರುದ್ಧ ಬೆಂಗಳೂರಿನಲ್ಲಿ ಸೆಮಿಫೈನಲ್ ಆಡುವ ಅವಕಾಶವಿತ್ತು.

ಈ ಋತುವಿನಲ್ಲಿ ಕರ್ನಾಟಕದ ವೈಫಲ್ಯಕ್ಕೆ ಪ್ರಮುಖ ಕಾರಣ, ಆರಂಭಿಕ ಜೊತೆಯಾಟದ ವೈಫಲ್ಯ ಮತ್ತು ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣನ ವೈಫಲ್ಯ. ರಾಬಿನ್ ಉತ್ತಪ್ಪ ಕಳೆದ ಋತುವಿನ ಮ್ಯಾಜಿಕ್ ಮತ್ತೆ ತೋರಿಸಲು ವಿಫಲರಾದರು. ೫ ಪಂದ್ಯಗಳನ್ನಾಡಿದ ರಾಬಿನ್ ಗಳಿಸಿದ್ದು ೨೭ರ ಸರಾಸರಿಯಲ್ಲಿ ೧೮೮ ಓಟಗಳನ್ನು ಮಾತ್ರ.

ಕಳೆದ ಋತುವಿನ ಸೆಮಿಫೈನಲ್ ಪಂದ್ಯದಲ್ಲಿ ರಣಜಿಗೆ ಪಾದಾರ್ಪಣ ಮಾಡಿದ್ದ ಮೈಸೂರಿನ ಕೆ ಬಿ ಪವನ್ ಈ ಋತುವಿನಲ್ಲಿ ಭರ್ಜರಿ ಬ್ಯಾಟಿಂಗ್ ತೋರ್ಪಡಿಸಿದರು. ರಾಹುಲ್ ದ್ರಾವಿಡ್ ಜೊತೆ ಮೊದಲೆರಡು ಪಂದ್ಯಗಳಲ್ಲಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಪವನ್, ಆ ಮಹಾನ್ ಆಟಗಾರನ ಜೊತೆ ಆಡಿ ಕಲಿತಿರುವುದನ್ನು ಮುಂದಿನ ಪಂದ್ಯಗಳಲ್ಲಿ ಬಳಸಿಕೊಂಡರು. ೨ ಶತಕ ಮತ್ತು ೨ ಶತಕಾರ್ಧಗಳನ್ನು ಒಳಗೊಂಡು ೪೨ರ ಸರಾಸರಿಯಲ್ಲಿ ೪೧೮ ಓಟಗಳನ್ನು ಪವನ್ ಗಳಿಸಿದರು. ಯಾವುದೇ ಸಂಶಯವಿಲ್ಲದೇ ಕೆ.ಬಿ.ಪವನ್ ೨೦೦೭-೦೮ ಋತುವಿನ 'ಶೋಧ' ಎನ್ನಬಹುದು.

ಯೆರೆ ಗೌಡ ಮತ್ತೊಮ್ಮೆ ಬಾಲಂಗೋಚಿಗಳನ್ನು ಒಂದೆಡೆ ಇರಿಸಿ ಇನ್ನಿಂಗ್ಸ್ ಆಡುವ ತನ್ನ ಅಪೂರ್ವ ಕಲೆಯನ್ನು ತೋರ್ಪಡಿಸಿದರು. ರಾಜಸ್ಥಾನದ ವಿರುದ್ಧ ಕೊನೆಯ ಹುದ್ದರಿಗೆ ಅಯ್ಯಪ್ಪನೊಂದಿಗೆ ಶತಕದ ಜೊತೆಯಾಟ ಮಾಡಿದ್ದು ಯೆರೆ ಗೌಡರ ಜಿಗುಟುತನಕ್ಕೆ ಸಾಕ್ಷಿ. ಮಹಾರಾಷ್ಟ್ರದ ವಿರುದ್ಧವೂ ಸಮಯೋಚಿತ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದೆಡೆ ಕೊಂಡೊಯ್ಯುವಲ್ಲಿ ಯೆರೆ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಮುಖ ಪಂದ್ಯವೊಂದರಲ್ಲಿ ಯೆರೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗುತ್ತಿತ್ತು. ಏನೇ ಆದರೂ ಸೌರಾಷ್ಟ್ರದ ವಿರುದ್ಧದ ಪಂದ್ಯವನ್ನು ನನಗಂತೂ ಮರೆಯಲಾಗದು. ಯೆರೆಯ ಮೂರ್ಖತನ ಕರ್ನಾಟಕಕ್ಕೆ ಬಲು ದುಬಾರಿಯಾಯಿತು. ೬೨ರ ಸರಾಸರಿಯಲ್ಲಿ ೨ ಶತಕಗಳೊಂದಿಗೆ ೩೭೧ ಓಟಗಳು ಗೌಡರ ಸಾಧನೆ.

ಮಹಾರಾಷ್ಟ್ರದ ವಿರುದ್ಧ ಒಂದು ಪಂದ್ಯದಲ್ಲಿ ಆಡಿದ ದೇವರಾಜ್ ಪಾಟೀಲ್ ವಿಫಲರಾದ ಕಾರಣ, ತಿಲಕ್ ನಾಯ್ಡು ಮತ್ತೆ ಮುಂದಿನ ಋತುವಿಗೆ ತನ್ನ ಸ್ಥಾನವನ್ನು ಭದ್ರಗೊಳಿಸಿರಬಹುದು. ತಿಲಕ್ ಸಾಧಾರಣ ಪ್ರದರ್ಶನ ನೀಡಿದರು. ಒಂದು ಶತಕ ಮತ್ತು ಒಂದು ಶತಕಾರ್ಧದೊಂದಿಗೆ ೪೭ರ ಸರಾಸರಿಯಲ್ಲಿ ೩೨೬ ತಿಲಕ್ ಸಾಧನೆ. ಕಳೆದ ೧೦ ವರ್ಷಗಳಿಂದ ಆಡುತ್ತಿರುವ ತಿಲಕ್ ಕರ್ನಾಟಕಕ್ಕೆ ಬಲೂ ಅವಶ್ಯವಿರುವಾಗ ಕೆಲವು ಸಮಯೋಚಿತ ಆಟ ಆಡುವುದರಲ್ಲಿ ಈಗಲೂ ವಿಫಲರಾಗುತ್ತಿದ್ದಾರೆ. ಋತುವಿನ ಆರಂಭದಲ್ಲೇ ಒಂದು ಶತಕ ಬಾರಿಸಿದರೆ ತನ್ನ ಜವಾಬ್ದಾರಿ ಮುಗಿಯಿತು ಎಂಬ ಧೋರಣೆಯಿದ್ದರೆ ತಿಲಕ್ ತಂಡದಲ್ಲಿದ್ದು ಪ್ರಯೋಜನವಿಲ್ಲ. ಆದರೆ ತಿಲಕ್ ನಾಯ್ಡುಗೆ ಗಾಡ್ ಫಾದರ್ ಸಪೋರ್ಟ್ ಇದೆ. ಮತ್ತೆ ಮುಂದಿನ ಋತುವಿನಲ್ಲಿ ತಿಲಕ್ ವಿಕೆಟ್ ಕೀಪರ್ ಆಗಿ ಬರಲಿದ್ದಾರೆ.

ಕಳೆದ ಋತುವಿನ 'ಶೋಧ' ಆಗಿದ್ದ ಚಂದ್ರಶೇಖರ್ ರಘು ಈ ಬಾರಿ ನಿರಾಸೆಗೊಳಿಸಿದರು. ಒಂದೆರಡು ಉತ್ತಮ ಇನ್ನಿಂಗ್ಸ್-ಗಳನ್ನು ಬಿಟ್ಟರೆ ಇವರಿಂದ ನಿರೀಕ್ಷಿತ ಮಟ್ಟದಲ್ಲಿ ರನ್ನುಗಳು ಹರಿದುಬರಲಿಲ್ಲ. ೪ ಶತಕಾರ್ಧಗಳೊಂದಿಗೆ ೪೫ರ ಸರಾಸರಿಯಲ್ಲಿ ೩೫೯ ಓಟಗಳು ರಘು ಸಾಧನೆ. ಉಳಿದಂತೆ ಎರಡೇ ಪಂದ್ಯಗಳನ್ನಾಡಿದ ಭರತ್ ಚಿಪ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತನ್ನನ್ನು ಕಡೆಗಣಿಸಿದ್ದಕ್ಕಾಗಿ ಸರಿಯಾದ ಉತ್ತರ ನೀಡಿದ್ದಾರೆ. ಮಹಾರಾಷ್ಟ್ರದ ವಿರುದ್ಧ ಬಿರುಸಿನ ಆಟ ಪ್ರದರ್ಶಿಸಿ ಶತಕದ ಬಾರಿ ಆಡಿದ ಭರತ್, ತಂಡದಲ್ಲಿ ಸ್ಥಿರವಾದ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಮುಂದಿನ ಋತುವಿನಲ್ಲಾದರೂ ಅಯ್ಕೆಗಾರರು ಭರತ್ ಚಿಪ್ಲಿಯನ್ನು ಎಲ್ಲಾ ಪಂದ್ಯಗಳಲ್ಲಿ ಆಡಿಸಲಿ. ಸುಧೀಂದ್ರ ಶಿಂದೆ ಆಡಿದ ಒಂದೆರಡು ಪಂದ್ಯಗಳಲ್ಲಿ ನಿರಾಸೆ ಮಾಡಲಿಲ್ಲ. ಅಮಿತ್ ವರ್ಮಾ ಮತ್ತು ದೇವರಾಜ್ ಪಾಟೀಲ್ ಸಿಕ್ಕಿದ ಒಂದೇ ಅವಕಾಶದ ಸದುಪಯೋಗ ಮಾಡಿಕೊಳ್ಳಲು ವಿಫಲರಾದರು.

ಬೌಲಿಂಗ್ ವಿಭಾಗದಲ್ಲಿ ದಾವಣಗೆರೆಯ ವಿನಯ್ ಕುಮಾರ್ ಮಹಾರಾಷ್ಟ್ರದ ವಿರುದ್ಧ ಹ್ಯಾಟ್ರಿಕ್ ಸಾಧನೆಯೊಂದಿಗೆ ೪೦ ಹುದ್ದರಿಗಳನ್ನು ಕೇವಲ ೧೮.೫೨ ಸರಾಸರಿಯಲ್ಲಿ ಕಿತ್ತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಋತುವಿನಲ್ಲಿ ಗಾಯಾಳಾಗಿ ತಂಡದಿಂದ ಹೊರಗಿದ್ದ ಎನ್.ಎಸ್.ಸಿ.ಅಯ್ಯಪ್ಪ ಈ ಬಾರಿ ಉತ್ತಮ ಪ್ರದರ್ಶನ ನೀಡಿದರು. ೨೪ ರ ಸರಾಸರಿಯಲ್ಲಿ ೨೫ ಹುದ್ದರಿಗಳನ್ನು ಗಳಿಸಿದ್ದು ಇವರ ಸಾಧನೆ. ವಯಸ್ಸಾದಂತೆ ಸುನಿಲ್ ಜೋಶಿ ಇನ್ನಷ್ಟು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ೧೯.೮೮ ಸರಾಸರಿಯಲ್ಲಿ ೩೪ ಹುದ್ದರಿಗಳು ಜೋಶಿ ಸಾಧನೆ.

ಕಳೆದ ಋತುವಿನಲ್ಲಿ ಬಹಳ ಉತ್ತಮ ಬೌಲಿಂಗ್ ಮಾಡಿದ್ದ ಅಪ್ಪಣ್ಣ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ೫ ಹುದ್ದರಿ ಇವರ ಸಾಧನೆ. ಹಾಗೇನೆ ಬಾಲಚಂದ್ರ ಅಖಿಲ್ ಕೂಡಾ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ಅಖಿಲ್ ಗಳಿಸಿದ್ದು ಒಂದೇ ಹುದ್ದರಿ ಮತ್ತು ಗಳಿಸಿದ್ದು ೧೫೭ ಓಟಗಳನ್ನು. ಕೊನೆಯ ಎರಡು ಪಂದ್ಯಗಳಿಗೆ ಇವರನ್ನು ಕೈ ಬಿಟ್ಟದ್ದು ಮುಂದಿನ ಋತುವಿನ ತಂಡದ ಆಯ್ಕೆಯ ಬಗ್ಗೆ ಮುನ್ಸೂಚನೆ ಎನ್ನಬಹುದು.

ಕೊನೆಯದಾಗಿ 'ತಗಡು'ಗಳ ಬಗ್ಗೆ ಒಂದಷ್ಟು. ಧರ್ಮಪೂಜೆಯನ್ನು ಅತಿಯಾಗಿ ಮಾಡುತ್ತಾ, ಧರ್ಮಪ್ರಚಾರಕನಂತೆ ವರ್ತಿಸುತ್ತಾ ತನ್ನ ಆಟದ ಮೇಲೆ ಗಮನ ಕಳಕೊಂಡು ಸತತ ವೈಫಲ್ಯ ಕಾಣುತ್ತಿದ್ದರೂ, ಸತತವಾಗಿ ನೀಡಿದ ಅವಕಾಶಗಳನ್ನು ಬಳಸಿಕೊಳ್ಳದೆ ಕಡೆಗೆ ನಿರ್ದಯವಾಗಿ ತಂಡದಿಂದ ಕಿತ್ತೊಗೆಯಲ್ಪಟ್ಟದ್ದು ಬ್ಯಾರಿಂಗ್ಟನ್ ರೋಲಂಡ್ ಅವರ ದುರಾದೃಷ್ಟ. ದೆಹಲಿ ವಿರುದ್ಧದ ಪಂದ್ಯಕ್ಕೆ ಅರ್ಹತೆಯುಳ್ಳ ರಿಯಾನ್ ನಿನಾನ್ ಬದಲು ತಂಡಕ್ಕೆ ಉದಿತ್ ಪಟೇಲನನ್ನು ಆಯ್ಕೆ ಮಾಡಿದ್ದು ಕೆ.ಎಸ್.ಸಿ.ಎ ಯಲ್ಲಿ ಪ್ರಕ್ಷ್ಯುಬ್ಧ ವಾತಾವರಣವನ್ನು ಏರ್ಪಡಿಸಿತ್ತು. ಬೃಜೇಶ್ ಪಟೇಲ್ ತನ್ನ ಮಗನನ್ನು ಆಯ್ಕೆ ಮಾಡಿಸಲು ಸಫಲರಾದರೆ, ನರಸಿಂಹರಾಜ ಒಡೆಯರ್ 'ಅನ್ಯಾಯ' ಎಂದು ಚೀರಾಡುತ್ತಿದ್ದರು. ಕಡೆಗೂ ಉದಿತ್ ಅವರನ್ನು ಅಂತಿಮ ಹನ್ನೊಂದರಲ್ಲಿ ಆಡಿಸಲಿಲ್ಲ. ಅತ್ತ ಸ್ಟುವರ್ಟ್ ಬಿನ್ನಿಗೆ ತನ್ನ ನಿಜವಾದ ಅರ್ಹತೆ ಏನೆಂಬುದು ಕೊನೆಗೂ ಅರಿವಾಗಿರಬಹುದು. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿ ಕರ್ನಾಟಕ ತಂಡಕ್ಕೆ ಪುಣ್ಯ ಮಾಡಿದ ಈ ಅಸಾಮಿಯನ್ನು, ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಒಂದು ಪಂದ್ಯದಲ್ಲೂ ಆಡಿಸಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಕಸ ಗುಡಿಸುವ ಅರ್ಹತೆ ಇಲ್ಲದಿದ್ದರೂ ಬರೀ 'ರೋಜರ್ ಬಿನ್ನಿ ಮಗ' ಎಂಬ ಆಧಾರದಲ್ಲೇ ಕರ್ನಾಟಕ ತಂಡದ ಅಂತಿಮ ಹನ್ನೊಂದರಲ್ಲಿ ಆಡಿಬಿಡುತ್ತಿದ್ದ. ಈ ಅನಿಷ್ಟ ಅತ್ತ ತೊಲಗಿದ್ದು ಕನ್ನಡಿಗರ ಪುಣ್ಯ. ಒಬ್ಬ ಉದಿತ್ ಕೂಡಾ ಆ ಕಡೆ ಹೋಗಿಬಿಡುತ್ತಿದ್ದರೆ ಉಳಿದ ಪ್ರತಿಭಾವಂತ ಯುವ ಕ್ರಿಕೆಟಿಗರು ನಿಟ್ಟುಸಿರು ಬಿಡುತ್ತಿದ್ದರು. ರಿಯಾನ್ ನಿನಾನ್ ಅಂತೂ 'ಎವ್ರಿಡೇ ಈಸ್ ಕ್ರಿಸ್ಮಸ್' ಎಂದು ಹಬ್ಬ ಆಚರಿಸುತ್ತಿದ್ದರೇನೊ!

ಬುಧವಾರ, ಡಿಸೆಂಬರ್ 26, 2007

ಜಲಧಾರೆಯೊಂದರ ಮರಣ

ಅರವಿಂದ್ ಅವರ ಬ್ಲಾಗ್-ನಲ್ಲಿ ಈ 'ಪೋಸ್ಟ್' ಓದಿಬಿಡಿ.

ಭಾನುವಾರ, ಡಿಸೆಂಬರ್ 09, 2007

ಕರ್ನಾಟಕ ಕ್ರಿಕೆಟ್ ೮ - ಮುಲೆವಾ ಧಾರ್ಮಿಚಂದ್


ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.

೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ.

ನಂತರ ತಂಡದಿಂದ ಹೊರಬಿದ್ದ ಧಾರ್ಮಿ ಮತ್ತೆ ಆಯ್ಕೆಯಾಗಲಿಲ್ಲ. ಕರ್ನಾಟಕ ಕಿರಿಯರ ತಂಡಗಳಲ್ಲಿ ಆಡಿ ವಿಕೆಟ್-ಗಳನ್ನು ಸೂರೆಗೊಳ್ಳುವುದನ್ನು ಮುಂದುವರೆಸಿದರು. ಅಯ್ಕೆಗಾರರು ಎರಡನೇ ಅವಕಾಶವನ್ನು ಮಾತ್ರ ನೀಡಲಿಲ್ಲ. ನಿಧಾನವಾಗಿ ಕಿರಿಯರ ತಂಡದಿಂದಲೂ ಧಾರ್ಮಿಚಂದ್ ಅವರನ್ನು ದೂರವಿಡಲಾಯಿತು. ಇಲ್ಲೇನಾಯಿತು ಎಂದು ನನಗೆ ತಿಳಿಯದು. ಆದರೆ ಕ್ರಿಕೆಟ್ ವಲಯದಲ್ಲಿರವ ಗೆಳೆಯರ ಪ್ರಕಾರ, ಧಾರ್ಮಿಚಂದ್-ಗಿಂತ ಕಡಿಮೆ ಅರ್ಹತೆಯಿರುವ ಕೆಲವು ಆಟಗಾರರಿಗೆ ಶಿಫಾರಸಿನ ಮೂಲಕ ಕರ್ನಾಟಕ ಕಿರಿಯರ ತಂಡಕ್ಕೆ ಆಯ್ಕೆ ಮಾಡಲಾಯಿತು. ಧಾರ್ಮಿಯನ್ನು ಹೊರಗಿಡಲಾಯಿತು. ರಣಜಿ ತಂಡಕ್ಕೆ ಆಡುವ ಅವಕಾಶ ಸಿಕ್ಕಿದಾಗ ವೈಫಲ್ಯ ಕಂಡು ಮತ್ತೆ ಆಯ್ಕೆಯಾಗುವ ತವಕದಲ್ಲಿದ್ದ ಧಾರ್ಮಿಗೆ ಕಿರಿಯರ ತಂಡದಿಂದ ಕೈಬಿಟ್ಟದ್ದು ಎಷ್ಟು ದೊಡ್ಡ 'ಶಾಕ್' ಕೊಟ್ಟಿತೆಂದರೆ, ಅವರು ಕ್ರಿಕೆಟ್ ಆಡುವುದನ್ನೇ ಬಿಟ್ಟುಬಿಟ್ಟರೆ!

ಯೆರೆ ಗೌಡ ಕೂಡಾ ಇಂತಹದೇ ಸನ್ನಿವೇಶ ಎದುರಾದಾಗ, ಎದೆಗುಂದದೆ ಕರ್ನಾಟಕಕ್ಕೆ ನಮಸ್ಕಾರ ಹೇಳಿ ರೈಲ್ವೇಸ್ ಪರವಾಗಿ ಆಡುವ ನಿರ್ಧಾರ ಮಾಡಿ ಯಶಸ್ಸನ್ನು ಕಂಡರು. ಆದರೆ ಧಾರ್ಮಿ ನೊಂದು ಕ್ರಿಕೆಟ್ ಬಿಟ್ಟೇಬಿಟ್ಟರು. ಆಯ್ಕೆ ಪ್ರಕ್ರಿಯೆಯಲ್ಲಿ ಮನೆ ಮಾಡಿರುವ ರಾಜಕೀಯ, ಶಿಫಾರಸು ಹೀಗೆ ಇನ್ನೆಷ್ಟು ಪ್ರತಿಭೆಗಳನ್ನು ನಾಶ ಮಾಡಿದೆಯೋ ಲೆಕ್ಕವಿಲ್ಲ. ಮನನೊಂದ ಧಾರ್ಮಿ, ನಂತರ ಸಿಂಗಾಪುರ್ ಕ್ರಿಕೆಟ್ ಸಂಸ್ಥೆ ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಕೋಚ್/ಪ್ಲೇಯರ್ ಗಳನ್ನು ಹುಡುಕುತ್ತಿರುವಾಗ, ಸಂದರ್ಶನಕ್ಕೆ ಹಾಜರಾಗಿ ಆಯ್ಕೆಯಾದರು. ಹೀಗೆ ಆಯ್ಕೆಯಾದ ಧಾರ್ಮಿಚಂದ್ ಅವರನ್ನು ಸಿಂಗಾಪುರ ಕ್ರಿಕೆಟ್ ಸಂಸ್ಥೆ ಕೋಚಿಂಗ್-ನಲ್ಲಿ ಹೆಚ್ಚಿನ ತರಬೇತಿಗಾಗಿ ಆಸ್ಟ್ರೇಲಿಯಾಗೆ ಕಳಿಸಿತು. ತನ್ನ ೨೦ನೇ ವಯಸ್ಸಿನಲ್ಲೇ ಧಾರ್ಮಿಚಂದ್, ಸಿಂಗಾಪುರ ಕ್ರಿಕೆಟ್ ತಂಡದ ಕೋಚ್! ಹಣ ಮತ್ತು ಹೆಸರು ಎರಡೂ ಸಿಕ್ಕವು ಧಾರ್ಮಿಚಂದ್-ಗೆ, ಆದರೆ ಕರ್ನಾಟಕಕ್ಕೆ ಕೇವಲ ನಷ್ಟ ಮಾತ್ರ.

ಬುಧವಾರ, ಡಿಸೆಂಬರ್ 05, 2007

ನಾ ಕಂಡಂತೆ 'ಕುಡ್ಲ ಕಲಾವಳಿ'


೨೨೭ ಕಲಾವಿದರು; ಐದು ಸಾವಿರಕ್ಕೂ ಅಧಿಕ ಕಲಾಕೃತಿಗಳು; ೪ ಲಕ್ಷ ರೂಪಾಯಿಗಳಷ್ಟು ಮೌಲ್ಯದ ಕಲಾಕೃತಿಗಳ ಮಾರಾಟ; ಕರಾವಳಿ ಪ್ರದೇಶವಲ್ಲದೇ ಬಾಗಲಕೋಟ, ಬದಾಮಿ, ಗುಲ್ಬರ್ಗ, ಮೂಡಿಗೆರೆ, ಬೆಂಗಳೂರು, ಮುಂಬೈ ಇಲ್ಲಿಂದಲೂ ಕಲಾವಿದರ ಆಗಮನ ಇವಿಷ್ಟು ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಡ್ಲ ಕಲಾವಳಿಯ ಬಹಳ ಸಂಕ್ಷಿಪ್ತ ವಿವರ.

ಕುಡ್ಲ ಕಲಾವಳಿಯ ಮೊದಲ ದಿನ ಮುಂಜಾನೆ ೯.೩೦ಕ್ಕೆ ಉದ್ಘಾಟನ ಸಮಯಕ್ಕೆ ಸರಿಯಾಗಿ ಪತ್ನಿಯೊಡನೆ ಕದ್ರಿ ಪಾರ್ಕ್ ತಲುಪಿದಾಗ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲಿ ಕಲಾವಿದರ ಪರದಾಟ, ಒದ್ದಾಟ ತಮ್ಮ ತಮ್ಮ ಚಿತ್ರಗಳನ್ನು ಸರಿಯಾಗಿ ಪ್ರದರ್ಶನಕ್ಕೆ ಇಡಲೋಸುಗ. ಒಂಥರಾ ವ್ಯಥೆಯಾಯಿತು. ಉರಿ ಬಿಸಿಲಿನಿಂದ ರಕ್ಷಣೆಯಿಲ್ಲದೆ ಆಚೀಚೆ ಒಡಾಡುತ್ತಿದ್ದರು ಕೆಲವರು. ಇನ್ನು ಕೆಲವರು ತಮ್ಮ ತಮ್ಮ ಚಿತ್ರಗಳನ್ನು ತೂಗುಹಾಕಿ ಬಿಸಿಲಿನಲ್ಲೇ ಕೂತಿದ್ದರು. ಕೆಲವರಿಗೆ ಮರಗಳ ನೆರಳಿನ ರಕ್ಷಣೆಯಿತ್ತು. ಕೆಲವರಿಗೆ ಆ ಭಾಗ್ಯವಿರಲಿಲ್ಲ. ಕಲಾಕೃತಿಗಳ ರಾಶಿ. ಯಾವುದನ್ನು ನೋಡುವುದೆಂದು ಗೊತ್ತಾಗುತ್ತಿರಲಿಲ್ಲ. ಆಗಲೇ 'ಫಳ್' ಎಂಬ ಸದ್ದು. ಸದ್ದು ಬಂದೆಡೆ ನೋಡಿದರೆ, ಗ್ಲಾಸ್ ಫ್ರೇಮ್ ಹಾಕಿದ ಕಲಾಕೃತಿಯೊಂದು ಕೆಳಗೆ ಬಿದ್ದು, ಫ್ರೇಮ್ ನುಚ್ಚುನೂರು. ಆ ಕಲಾವಿದನೆಡೆ ನೋಡದೇ ಮುನ್ನಡೆದೆ. ನೋಡಿದರೆ ಆತನ ಮುಖದಲ್ಲಿ ಆ ಕ್ಷಣದಲ್ಲಿ ಇರಬಹುದಾದ ನೋವನ್ನು ಸಹಿಸಲು ನನಗಾಗದು ಎಂಬ ಭಯ.


ಅಲ್ಲೇನೂ ಸರಿಯಾಗಿದ್ದಂತೆ ಕಾಣುತ್ತಿರಲಿಲ್ಲ. ಕೇವಲ ಕಲಾವಿದರು ಮಾತ್ರ ಆಚೀಚೆ ಓಡಾಡುತ್ತಿದ್ದರು. 'ಸ್ಟಾಲ್'ಗಳು ಎಲ್ಲಿವೆ ಎಂದು ಪತ್ನಿ ನನ್ನಲ್ಲಿ ಕೇಳುತ್ತಿದ್ದಳು, ನಾನು ಹುಡುಕುತ್ತಿದ್ದೆ. ಅಲ್ಲಿ 'ಸ್ಟಾಲ್'ಗಳೇ ಇರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೆ ಬಿಳಿ ಬಟ್ಟೆಯನ್ನು ಕಟ್ಟಲಾಗಿತ್ತು. ಅದಕ್ಕೆ ತಮ್ಮ ತಮ್ಮ ಕಲಾಕೃತಿಗಳನ್ನು ಜೋತುಹಾಕಿ , ಉದ್ದಕ್ಕೆ ಊಟಕ್ಕೆ ಕುಳಿತಂತೆ ಪಂಕ್ತಿಯಲ್ಲಿ ಕಲಾವಿದರು. ನೋಡಿ ಏನೇನೂ ಸಂತೋಷವಾಗಲಿಲ್ಲ. ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಈ ರಸ್ತೆಯಲ್ಲಿ ೨ ದಿನಗಳ ಕಾಲ ವಾಹನ ಸಂಚಾರವನ್ನು ನಿಲ್ಲಿಸಲಾಗಿದ್ದರೂ, ವಾಹನಗಳು ಮಾತ್ರ ಓಡಾಡುತ್ತಲೇ ಇದ್ದವು. ಮಧ್ಯಾಹ್ನದ ಬಳಿಕ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ದಿನೇಶ್ ಹೊಳ್ಳ ಯಾವಾಗಲೂ ತಯಾರಿಯನ್ನು ಕೂಲಂಕುಷವಾಗಿ ಮಾಡುವ ಮನುಷ್ಯ. ಇಲ್ಲಿ ಅವರಿಗೆ ಯಾರೋ ಕೈ ಕೊಟ್ಟಿರಬೇಕು ಎಂದು ಯೋಚಿಸುತ್ತಾ ಮುನ್ನಡೆಯುತ್ತಿದ್ದೆ.


ಅಲ್ಲಿ ಒಂದೆಡೆ ಸಣ್ಣ ಗುಂಪು. ಅವರೆಲ್ಲಾ ನಿಂತ ಸ್ಟೈಲ್ ನೋಡಿಯೇ ತಿಳಿಯಿತು. ಹುಡುಗಿಯ ಹೆಸರನ್ನು ಹೋಲುವ ಕಲಾನಾಮವಿರುವ ಒಬ್ಬ ಕಲಾಕಾರ, 'ರೂ.೧೦೦' ಎಂಬ ಬೋರ್ಡ್ ತಗುಲಿಸಿ, ಅಲ್ಲಿ ಆಸೀನನಾಗಿ ರೂ.೧೦೦ ಕೊಟ್ಟು ತಮ್ಮ ಕಾರ್ಟೂನ್ (ಕ್ಯಾರಿಕೇಚರ್) ಬಿಡಿಸಿಕೊಳ್ಳುವ ಇಚ್ಛೆಯಿದ್ದವರಿಗೆ ಬಿಡಿಸಿಕೊಡುವುದರಲ್ಲಿ ಮಗ್ನನಾಗಿದ್ದಾನೆ ಎಂದು. ಉಳಿದ ಕಲಾಕಾರರು ಪರದಾಡುತ್ತಿದ್ದರೆ, ಈತನಿಗೆ ಅದ್ಯಾವ ಪ್ರಾಬ್ಲೆಮ್ಮೂ ಇಲ್ಲ. ಯಾರ ಕಲಾಕೃತಿಗಳು ಮಾರಾಟವಾದವೋ ನಾನರಿಯೆ ಆದರೆ ಈತನ ಕಿಸೆ ತುಂಬ ೧೦೦ರ ನೋಟುಗಳು. ಈತನೊಬ್ಬ ಉತ್ತಮ ಕಲಾವಿದ. ಯಾರದ್ದೇ ಆಗಲಿ, ನಾಲ್ಕೈದು ನಿಮಿಷಗಳಲ್ಲೇ ಕ್ಯಾರಿಕೇಚರ್ ಬಿಡಿಸಿ ಬಿಡುತ್ತಾರೆ. ವರ್ಣಶರಧಿಯಂತಹ ಮಾರಾಟಕ್ಕೆ ಆಸ್ಪದವಿರದಂತಹ, ಕೇವಲ ತಮ್ಮ ಕಲೆಯನ್ನು ಪ್ರದರ್ಶಿಸುವ ಮಂಚದಲ್ಲೂ 'ರೂ.೧೦೦' ಎಂಬ ಬೋರ್ಡ್ ತಗುಲಿಸಿ ಬಂದವರಲ್ಲಿ ಹಣ ಕೀಳಲು ಆರಂಭಿಸಿದಾಗ ದಿನೇಶ್ ಆಕ್ಷೇಪ ವ್ಯಕ್ತಪಡಿಸಲು, 'ಹ್ಹೆ ಹ್ಹೆ ನನಗೆ ಗೊತ್ತೇ ಇರಲಿಲ್ಲ...' ಎಂದು ಪೆಚ್ಚು ಪೆಚ್ಚಾಗಿ ಮೂರ್ಖ ನಗು ತೋರ್ಪಡಿಸಿದ ಆಸಾಮಿ ಈತ. ಇಲ್ಲಿ, ಕುಡ್ಲ ಕಲಾವಳಿಯಲ್ಲಿ ಅವರಿಗೆ ವರ್ಣಶರಧಿಯಲ್ಲಿದ್ದಂತಹ ನಿರ್ಬಂಧನೆಯಿರಲಿಲ್ಲ. ಜನ ಅವರನ್ನು ಮುತ್ತುತ್ತಾ ಇದ್ದರು. ಇವರು ಬಿಡಿಸುತ್ತಾ ಇದ್ದರು. ಕಿಸೆ ತುಂಬುತ್ತಾ ಇತ್ತು. ಪಕ್ಕದಲ್ಲೊಂದು ಚೀಲವಿತ್ತು. ಮರುದಿನ ಸಂಜೆಯಾಗುವಷ್ಟರಲ್ಲಿ ಅದೂ ತುಂಬಿತ್ತೇನೋ! ಮಂಗಳೂರಿನಲ್ಲೊಂದು ಜೋಕು. ಯಾವುದೇ ವೈಯುಕ್ತಿಕ ಸಭೆ ಸಮಾರಂಭಗಳಿಗೆ ಈತನನ್ನು ಆಮಂತ್ರಿಸಬಾರದು ಎಂದು. ಎಲ್ಲಾದರೂ ಆಮಂತ್ರಿಸಿದರೆ, ಅಲ್ಲೇ ಮೂಲೆಯಲ್ಲಿ 'ರೂ.೧೦೦' ಎಂದು ಬೋರ್ಡ್ ತಗುಲಿಸಿ ಈ ಮಹಾಶಯ ಆಸೀನನಾಗಿಬಿಟ್ಟರೆ?!


ಇನ್ನೂ ಮುಂದಕ್ಕೆ ಹೋದಾಗ ಅಲ್ಲಿ ಮರಳು ಶಿಲ್ಪ ಪ್ರದರ್ಶನ. ನಂತರ ಮತ್ತಷ್ಟು ಕಲಾಕೃತಿಗಳು. ಸರಿಯಾದ ವ್ಯವಸ್ಥೆಯಿರಲಿಲ್ಲ. ಪ್ರದರ್ಶನದ ಒಂದು ದಿಕ್ಕಿನಲ್ಲಂತೂ ಬಿಸಿಲಿನಿಂದ ಪಾರಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಅವ್ಯವಸ್ಥೆಯ ಪರಿ ಕಂಡು ಕೆಲವು ಕಲಾವಿದರು ಭಾಗವಹಿಸದೇ ಹಿಂತಿರುಗಿದರು ಎಂದು ನಂತರ ದಿನೇಶ್ ಹೊಳ್ಳ ತಿಳಿಸಿದರು. ನಂತರ ಕದ್ರಿ ಪಾರ್ಕಿನ ಒಳಗೆ ತೆರಳಿದೆ. ಇಲ್ಲೂ ಮತ್ತಷ್ಟು ಕಲಾವಿದರು ಮತ್ತು ಕಲಾಕೃತಿಗಳು. ಅವನ್ನೆಲ್ಲಾ ನೋಡುತ್ತಾ ಸಭಾಂಗಣದತ್ತ ತೆರಳಿ ಆಸೀನನಾದೆ. ಕರ್ನಾಟಕ ಬ್ಯಾಂಕಿನ ಚೇರ್ಮನ್ ಅದೇನೋ ಮಾತನಾಡುತ್ತಿದ್ದರು. ಇತ್ತೀಚೆಗೆ ಸಿಕ್ಕಸಿಕ್ಕಲ್ಲಿ ರಿಬ್ಬನ್ ಕಟ್ ಮಾಡಲು ಇವರು ತೆರಳುವುದು ಕಡಿಮೆಯಾಗಿದೆ. ಮೊದಲೆಲ್ಲಾ ಸಣ್ಣ ಅಂಗಡಿ/ಗ್ಯಾರೇಜು ಉದ್ಘಾಟನೆಗೂ ಇವರು ತೆರಳಲು ತಯಾರು, ಆ ಅಂಗಡಿ/ಗ್ಯಾರೇಜಿನ ಖಾತೆ ಕರ್ನಾಟಕ ಬ್ಯಾಂಕಿನಲ್ಲಿದ್ದರೆ!

ಸ್ವಲ್ಪ ಸಮಯದ ಬಳಿಕ ದಿನೇಶ್ ಹೊಳ್ಳ ನನ್ನ ಬಳಿ ಬಂದು ಕುಳಿತರು. 'ಎಲ್ಲಾ ಗೊಂದಲ' ಎಂಬ ಅವರ ಎರಡೇ ಮಾತುಗಳಲ್ಲಿ ಬಹಳ ಅರ್ಥವಿತ್ತು. ಇಂತಹ ಪ್ರದರ್ಶನವನ್ನು ಆಯೋಜಿಸುವಾಗ ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಎಲ್ಲರು ಸರಿಯಾಗಿ ನಿರ್ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ದಿನೇಶ್ ಮತ್ತು ಇನ್ನು ೪ ಜನರನ್ನು ಬಿಟ್ಟರೆ ಉಳಿದವರೆಲ್ಲಾ ಬರೀ ಮಾತುಗಾರರು. ಸತತವಾಗಿ ೪ ದಿನ ರಾತ್ರಿಯಿಡೀ ಕೆಲಸ ಮಾಡಿದ ದಿನೇಶ್, ನನ್ನಲ್ಲಿ ಮಾತನಾಡುತ್ತಾ ಅಲ್ಲೇ ನಿದ್ರಾವಶರಾಗಿಬಿಟ್ಟಿದ್ದರು. 'ಅಡವಿಯ ನಡುವೆ' ಮತ್ತು 'ವರ್ಣಶರಧಿ' ಎಂಬ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದೇ ದಿನೇಶರಿಗೆ ಮುಳುವಾಗಿಹೋಯಿತು. ಆಯಾ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬರು, ಹೇಗೂ ದಿನೇಶರಿಗೆ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವವಿದೆಯಲ್ಲ ಎಂದು, ತಮ್ಮ ತಮ್ಮ ಕೆಲಸಗಳನ್ನು ಸ್ವಲ್ಪ ಸ್ವಲ್ಪ ಮಾಡಿ ನಿಧಾನವಾಗಿ ಜಾಗ ಖಾಲಿ ಮಾಡಿದರು. ಕೊನೆಗೆ ಉಳಿದದ್ದು ದಿನೇಶ್ ಸೇರಿದಂತೆ ೫ ಮಂದಿ. ೫ ಮಂದಿ ಎಷ್ಟು ತಾನೆ ಮಾಡಿಯಾರು?


ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಬುದ್ಧಿವಂತರು (ಕರಾವಳಿಯ ಜನತೆ) ಪ್ರದರ್ಶನಕ್ಕೆ ಆಗಮಿಸಲಿಲ್ಲ. ಎರಡನೇ ದಿನ ಅಂದರೆ ಆದಿತ್ಯವಾರ ಸಂಜೆ ಹೊತ್ತಿಗೆ ಸುಮಾರು ಜನ ಸೇರಿದ್ದರು. ಇಲ್ಲಿ ಉದಯವಾಣಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಕರಾವಳಿಯ ಪ್ರಮುಖ ದಿನಪತ್ರಿಕೆಯಾಗಿ, ಕುಡ್ಲ ಕಲಾವಳಿಯ ಬಗ್ಗೆ ಸಮಗ್ರ ಸುದ್ದಿಯನ್ನು ಪ್ರಕಟಿಸಿ, ಜನರಿಗೆ ಮಾಹಿತಿ ತಲುಪಿಸಲು ಉದಯವಾಣಿ ಆಸಕ್ತಿ ತೋರಿಸಲಿಲ್ಲ. ಮಾಧ್ಯಮ ಪ್ರಾಯೋಜಕರಾಗುವಂತೆ ವಿನಂತಿಸಿದರೆ, ಸರಿಯಾದ ಉತ್ತರ ನೀಡದೆ ಕೊನೇ ಕ್ಷಣದವರೆಗೆ ನಿರ್ಧಾರ ತಗೊಳ್ಳದೆ, ಕುಡ್ಲ ಕಲಾವಳಿಯ ಆಯೋಜಕರನ್ನು ಕಾಡಿಸಿ, ಕೊನೆಗೆ 'ಬೊಡ್ಚಿ' ಎಂದು ನಿರಾಕರಿಸಿದ ಪತ್ರಿಕೆ ಈ ಉದಯವಾಣಿ. ಮಾಧ್ಯಮ ಪ್ರಾಯೋಜಕರಾಗದಿದ್ದರೂ ಪರವಾಗಿಲ್ಲ, ನಾಲ್ಕೈದು ದಿನ ಮೊದಲಿನಿಂದಲೇ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿದ್ದರೆ ಕೆಲವು ಬಡ ಕಲಾವಿದರಿಗೆ ಪ್ರಯೋಜನವಾದರೂ ಆಗುತ್ತಿತ್ತು. ಅದನ್ನೂ ಮಾಡಲಿಲ್ಲ ಉದಯವಾಣಿ. ಒಳಗಿನ ಪುಟದಲ್ಲೆಲ್ಲೋ ಸಂಕ್ಷಿಪ್ತವಾಗಿ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿ, 'ರಿಕ್ಷಾ ಪಲ್ಟಿ' ಮತ್ತು 'ಮನೆಯಾಕೆಯ ತಾಳಿ ಕೆಲಸದಾಕೆಯ ಕೊರಳಿನಲ್ಲಿ' ಎಂಬ ಸುದ್ದಿಗಳನ್ನು ದಪ್ಪಕ್ಷರಗಳಲ್ಲಿ ಪ್ರಕಟಿಸಿ ತನ್ನ ಲೆವೆಲ್ ಏನು ಎಂಬುದನ್ನು ಉದಯವಾಣಿ ತೋರ್ಪಡಿಸಿತು. ಸ್ವಂತ ನಿಲುವಿಲ್ಲದ (ಸಂಪಾದಕೀಯ) ಪತ್ರಿಕೆಯಿಂದ ಮತ್ತೇನನ್ನು ತಾನೆ ನಿರೀಕ್ಷಿಸಬಹುದು?

"ಪ್ರಥಮ ಪ್ರಯತ್ನ. ಬಹಳ ವಿಷಯಗಳು ತಿಳಿದವು. ಪ್ರಶಂಸೆಯ ಮಾತುಗಳಿದ್ದರೂ, ಸಹಜವಾಗಿಯೇ ದೂರುಗಳೇ ಹೆಚ್ಚಿದ್ದವು. ಯಾರು ಮಾತನಾಡುತ್ತಾರೆ ಮತ್ತು ಯಾರು ಕೆಲಸ ಮಾಡುತ್ತಾರೆ ಎಂದು ಈಗ ಚೆನ್ನಾಗಿ ತಿಳಿದಿದೆ. ಮುಂದಿನ ಸಲ ಮತ್ತೆ ಕುಡ್ಲ ಕಲಾವಳಿ ಮಾಡಬೇಕು .... ಯಾವ ದೂರಿಗೂ ಆಸ್ಪದವಿಲ್ಲದಂತೆ" ಎಂಬುದು ದಿನೇಶ್ ಹೊಳ್ಳರ ಮಾತು.