ಬುಧವಾರ, ಮಾರ್ಚ್ 10, 2010

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೪)


ದ್ರಾವಿಡ್ ಒಬ್ಬ ಮಹಾನ್ ಆಟಗಾರ ಎನ್ನುವುದು ನಿಜ. ಆದರೆ ನಾಯಕನಾಗಿ ಅವರು ಅಷ್ಟೇ ವೈಫಲ್ಯವನ್ನು ಕಂಡರು. ಭಾರತ ತಂಡದ ನಾಯಕನಾಗಿದ್ದಾಗ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ಯಾಕೆಂದರೆ ದ್ರಾವಿಡ್ ಯಾರೊಂದಿಗೂ ಭಾವನಾತ್ಮಕವಾಗಿ ಸಂಬಂಧ ಬೆಸೆದುಕೊಳ್ಳಲಿಲ್ಲ. ಪ್ರೊಫೆಷನಲ್ ಆಗಿ ಇದ್ದರು. ಇದು ಕೆಲವು ಆಟಗಾರರಿಗೆ ಇಷ್ಟವಾಗಲಿಲ್ಲ. ನಾಯಕನಾದವನಿಗೆ ನರಿ ಬುದ್ಧಿ ಇರಬೇಕು. ದ್ರಾವಿಡ್-ಗೆ ಎಲ್ಲಿಯ ನರಿ ಬುದ್ಧಿ? ದ್ರಾವಿಡ್ ಎಂದಿಗೂ ಯಾವ ಆಟಗಾರನನ್ನೂ ಸಪೋರ್ಟ್ ಮಾಡಿದವರಲ್ಲ. ಯಾರೇ ಆಗಲಿ ತನ್ನ ಸ್ವಂತ ಪರಿಶ್ರಮ ಮತ್ತು ಸಾಮರ್ಥ್ಯದ ಬಲದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಮತ್ತು ಒಮ್ಮೆ ತಂಡಕ್ಕೆ ಆಯ್ಕೆಯಾದ ಬಳಿಕ ನಿಷ್ಠನಾಗಿ ಆಡಬೇಕು ಎಂಬುದು ಅವರ ನಿಲುವು. ಯಾಕೆಂದರೆ ಅವರು ಅದೇ ರೀತಿಯಲ್ಲಿ ಮೇಲೆ ಬಂದಿದ್ದರು. ಈ ನಿಲುವು ಒಂದು ಕಾರ್ಪೊರೇಟ್ ಸಂಸ್ಥೆಯನ್ನು ನಡೆಸುವುದಿದ್ದರೆ ಸರಿಯಾದ ನಿಲುವು. ಒಂದು ತಂಡವನ್ನು ನಡೆಸುವುದಾದರೆ? ಆ ತಂಡದ ಎಲ್ಲರೂ ದ್ರಾವಿಡ್ ತರಹದವರೇ ಆಗಿರಬೇಕು! ಆದರೆ ಎಲ್ಲರಿಗೂ ದ್ರಾವಿಡ್-ಗಿರುವ ವೃತ್ತಿಪರತೆ ಇಲ್ಲವಲ್ಲ. ಅದಕ್ಕೇ ಹೇಳಿದ್ದು ಎಷ್ಟು ಸಾಧ್ಯವೋ ಅಷ್ಟು ದ್ರಾವಿಡ್ ಆಟವನ್ನು ಕಣ್ತುಂಬಾ ನೋಡಿಬಿಡಿ ಎಂದು.


ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ ೨೦೦೭ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದದ್ದು ಅವರ ಕ್ರಿಕೆಟ್ ಜೀವನದ ಅತ್ಯಂತ ಲೋ ಪಾಯಿಂಟ್. ಇಲ್ಲೂ ದ್ರಾವಿಡ್-ಗೆ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ತಾನು ಉತ್ತಮವಾಗಿ ಆಡಿದರೂ ಉಳಿದ ಆಟಗಾರರ ವೈಫಲ್ಯದಿಂದ ದ್ರಾವಿಡ್ ತಂಡದ ಕೆಟ್ಟ ಪ್ರದರ್ಶನಕ್ಕೆ ಹೊಣೆಯಾಗಬೇಕಾಯಿತು.

ಮೇಲೆ ಹೇಳಿದಂತೆ ದ್ರಾವಿಡ್ ಎಂದಿಗೂ ಯಾರನ್ನೂ ಬೆಂಬಲಿಸಿದವರಲ್ಲ. ಆತ ತನ್ನ ಗೆಳೆಯನೇ ಆಗಿರಲಿ, ಅಥವಾ ತನ್ನ ರಾಜ್ಯದವನೇ ಆಗಿರಲಿ, ತನ್ನ ಪರಿಚಯದವನೇ ಆಗಿರಲಿ, ಯಾರೇ ಆಗಿರಲಿ ಶಿಫಾರಸು ಎಂಬುವುದು ಎಂದಿಗೂ ದ್ರಾವಿಡ್ ಕಡೆಯಿಂದ ಬಂದಿಲ್ಲ. ವಿಷಯ ಸಿಂಪಲ್. ದ್ರಾವಿಡ್ ಎಂದೂ ಯಾರ ಶಿಫಾರಸಿನ ಮೇಲೂ ನಿರ್ಭರರಾದವರಲ್ಲ. ಸ್ವಂತ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದು ತನ್ನ ತಂಡದಲ್ಲಿ ಆಡಲು ಅರ್ಹರೆನಿಸಿದವರು. ಇದೇ ಅವರ ನಿಲುವು. ನೀವು ಆಡಲು ಅರ್ಹರಿದ್ದರೆ ನಿಮಗೆ ಸಪೋರ್ಟ್ ಯಾಕೆ?


ದ್ರಾವಿಡ್ ತನ್ನ ಆಪ್ತ ಗೆಳೆಯ ಅನಿಲ್ ಕುಂಬ್ಳೆಗೂ ಸಪೋರ್ಟ್ ಮಾಡಿದವರಲ್ಲ! ಅದೊಂದು ಸಮಯವಿತ್ತು. ಏಕದಿನ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್ ಭಾರತದ ನಂಬರ್ ವನ್ ಬೌಲರ್ ಆಗಿದ್ದರು. ಒಂದೇ ಸ್ಪಿನ್ನರ್ ಆಡುವ ಸಮಯದಲ್ಲಿ ಅನಿಲ್ ಕುಂಬ್ಳೆ ತಂಡದಿಂದ ಹೊರಗಿರಬೇಕಾಗುತ್ತಿತ್ತು. ಸ್ಪರ್ಧಾತ್ಮಕ ಕ್ರೀಡಾಳಾಗಿರುವ ಕುಂಬ್ಳೆಗೆ ಇದು ಸ್ವಲ್ಪನೂ ಇಷ್ಟವಾಗುತ್ತಿರಲಿಲ್ಲ. ಸೌರವ್ ಗಂಗೂಲಿ ನಾಯಕನಾಗಿದ್ದಾಗ ಇದು ಶುರುವಾಗಿತ್ತು. ಆಗ ಕುಂಬ್ಳೆಗೆ ತಿಳಿಹೇಳುವ ಜವಾಬ್ದಾರಿಯನ್ನು ಸೌರವ್, ದ್ರಾವಿಡ್-ಗೆ ವಹಿಸಿಕೊಡುತ್ತಿದ್ದರು. ನಂತರ ಸ್ವತ: ದ್ರಾವಿಡ್ ನಾಯಕರಾಗಿದ್ದಾಗ ಎಲ್ಲರೂ ಈಗ ಕುಂಬ್ಳೆ ಆಡಲಿದ್ದಾರೆ ಎಂದು ಊಹಿಸಿದ್ದರು. ಆದರೆ ಆಡಿದ್ದು ಮತ್ತೆ ಹರ್ಭಜನ್ ಸಿಂಗ್! ಕುಂಬ್ಳೆ ಅಂತಿಮ ಹನ್ನೊಂದರಲ್ಲಿ ಇಲ್ಲವೇ ಇಲ್ಲ. ಏಕದಿನ ಪಂದ್ಯಗಳಲ್ಲಿ ಕುಂಬ್ಳೆ ಸಾಮರ್ಥ್ಯ ಕ್ಷೀಣಿಸುತ್ತಿದ್ದ ಸಮಯವದು. ಇದರ ಅರಿವಿದ್ದ ದ್ರಾವಿಡ್ ಕುಂಬ್ಳೆಯನ್ನು ಆರಿಸಲಿಲ್ಲ. ದ್ರಾವಿಡ್ ಅದೆಷ್ಟು ಡಿಪ್ಲೊಮ್ಯಾಟಿಕ್ ಎಂದು ಇಲ್ಲೇ ಗೊತ್ತಾಗುತ್ತದೆಯಲ್ಲವೇ? ಒಂದು ಕಡೆಯಿಂದ ಕುಂಬ್ಳೆಯನ್ನು ಸಪೋರ್ಟ್ ಮಾಡಲಿಲ್ಲ, ಆದರೂ ಕುಂಬ್ಳೆಯೊಂದಿಗೆ ತನ್ನ ಸ್ನೇಹಕ್ಕೆ ಏನೇನೂ ಧಕ್ಕೆಯಾಗದಂತೆ ನೋಡಿಕೊಂಡರು.

ಇಸವಿ ೨೦೦೦ದ ಇಂಗ್ಲೀಷ್ ಕೌಂಟಿ ಸೀಸನ್ನಿನಲ್ಲಿ ’ಕೆಂಟ್’ ತಂಡದ ಪರವಾಗಿ ದ್ರಾವಿಡ್ ಆಡಿದ್ದರು. ಆಗ ಅವರ ವೃತ್ತಿಪರತೆ ಕಂಡು ಬೆರಗಾದ ಕೆಂಟ್ ಕೌಂಟಿ ಕ್ಲಬ್ಬಿನ ಅಧಿಕಾರಿಗಳು ಇನ್ನೊಂದು ವರ್ಷ ತಮ್ಮ ಪರವಾಗಿ ಆಡುವಂತೆ ಮನವಿಯನ್ನು ದ್ರಾವಿಡ್ ಮುಂದಿಟ್ಟರು. ಇಂಗ್ಲೀಷ್ ಕೌಂಟಿ ಸೀಸನ್ನಿನಲ್ಲಿ ಬಹಳ ಪಂದ್ಯಗಳನ್ನು ಆಡಬೇಕಾಗುವುದರಿಂದ ಕ್ರೀಡಾಳುವಿನ ದೇಹದ ಮೇಲೆ ಇದು ಬಹಳ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣದಿಂದ ದ್ರಾವಿಡ್ ಕೆಂಟ್ ಕೌಂಟಿಯ ಕೋರಿಕೆಯನ್ನು ತಿರಸ್ಕರಿಸಬೇಕಾಯಿತು. ನಂತರದ ವರ್ಷಗಳಲ್ಲಿ ದ್ರಾವಿಡ್ ಇತರ ಕೌಂಟಿ ತಂಡಗಳಿಂದ ಆಫರ್-ಗಳನ್ನು ತಿರಸ್ಕರಿಸಿದರು.

ಕ್ರಿಕೆಟ್ ಜಗತ್ತಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಸ್ಕಾಟ್ಲಂಡ್ ತಂಡ ಕೂಡಾ ಇಂಗ್ಲೀಷ್ ಕೌಂಟಿಯಲ್ಲಿ ಆಡುತ್ತದೆ. ತನ್ನ ಅನನುಭವಿ ಮತ್ತು ಯುವ ಆಟಗಾರರಿಗೆ ಸರಿಯಾದ ಮಾರ್ಗದರ್ಶನ ನೀಡಲು ಈ ತಂಡಕ್ಕೆ ಒಬ್ಬ ಅನುಭವಿ, ಮೇಧಾವಿ ಮತ್ತು ಪ್ರೊಫೆಷನಲ್ ಕ್ರಿಕೆಟಿಗನೊಬ್ಬನ ಅವಶ್ಯಕತೆಯಿತ್ತು. ಕೆಂಟ್ ಪರವಾಗಿ ಆಡುವಾಗ ರಾಹುಲ್ ದ್ರಾವಿಡ್ ತೋರ್ಪಡಿಸಿದ ತಂಡದ ಪರ ನಿಷ್ಠೆ ಮತ್ತು ವೃತ್ತಿಪರತೆಯಿಂದ ಅದಾಗಲೇ ಪ್ರಭಾವಿತರಾಗಿದ್ದ ಸ್ಕಾಟ್ಲಂಡ್ ತಂಡದ ಅಧಿಕಾರಿಗಳು ಬೆಂಗಳೂರಿಗೆ ಬಂದಿಳಿದರು. ತಮ್ಮ ತಂಡದ ಪರವಾಗಿ ಒಂದು ಸೀಸನ್ ಆಡುವಂತೆ ಕೋರಿದರು. ಈ ಆಫರ್ ಸ್ವಲ್ಪ ಬೇರೆ ತರಹದಾಗಿತ್ತು. ಕೆಂಟ್ ಪರ ಆಡುವಾಗ ಎಲ್ಲಾ ಪಂದ್ಯಗಳಲ್ಲೂ ದ್ರಾವಿಡ್ ಆಡಬೇಕಾಗಿತ್ತು. ಆದರೆ ಇಲ್ಲಿ ೩ ತಿಂಗಳಲ್ಲಿ ಸ್ಕಾಟ್ಲಂಡ್ ಪರವಾಗಿ ೧೧ ಪಂದ್ಯಗಳಲ್ಲಿ ಮಾತ್ರ ಆಡಿದರೆ ಸಾಕಿತ್ತು. ವಿಶ್ವದ ಅಗ್ರಮಾನ್ಯ ಆಟಗಾರನೊಬ್ಬನ ಜೊತೆಯಲ್ಲಿ ಒಂದು ಸೀಸನ್ ಕಳೆದರೆ ತಂಡದ ಆಟಗಾರರಿಗೆ ಆಗುವ ಪ್ರಯೋಜನವನ್ನು ಅರಿತ ಸ್ಕಾಟ್ಲೆಂಡ್, ಪ್ಲೇಯರ್ ಕಮ್ ಟೀಚರ್ ಆಧಾರದಲ್ಲಿ ದ್ರಾವಿಡ್-ನನ್ನು ಒಂದು ಸೀಸನ್ ಆಡುವಂತೆ ಸಹಿ ಹಾಕಿಕೊಂಡಿತು.


ದ್ರಾವಿಡ್ ಆಗಷ್ಟೇ ವಿವಾಹಿತರಾಗಿದ್ದರು. ಮಧುಚಂದ್ರಕ್ಕೆ ಎಲ್ಲಾದರೂ ತೆರಳಬೇಕಿತ್ತು. ಆದರೆ ಎರಡನೇ ಹೆಂಡತಿಯಾದ ಕ್ರಿಕೆಟನ್ನು ಸಂಪೂರ್ಣವಾಗಿ ಬದಿಗಿಡಲೂ ಮನಸ್ಸು ಒಪ್ಪಲಿಲ್ಲ. ಇತ್ತ ಮಧುಚಂದ್ರವೂ ಆಯಿತು ಅತ್ತ ಸ್ಕಾಟ್ಲಂಡ್ ಪರ ಆಡುತ್ತಾ ತನ್ನ ೨ನೇ ಹೆಂಡತಿಯೊಂದಿಗೆ ಟಚ್ಚಲ್ಲಿ ಇದ್ದಂತೆಯೂ ಆಯಿತು! ಈ ಸರಣಿಯ ಮೊದಲ ಭಾಗದಲ್ಲಿ ಹೇಳಿದಂತೆ ದ್ರಾವಿಡ್ ಯಶಸ್ಸಿಗೆ ಇಂತಹ ಪ್ಲ್ಯಾನಿಂಗ್-ಗಳೇ ಕಾರಣ. ಎಲ್ಲೆಡೆಯೂ ಪ್ಲ್ಯಾನಿಂಗ್. ಮಧುಚಂದ್ರದಲ್ಲೂ!

ದ್ರಾವಿಡ್ ಕೆಂಟ್ ಪರವಾಗಿ ಆಡುತ್ತಿರುವಾಗ ಒಂದು ಪಂದ್ಯದ ಬಗ್ಗೆ ಇಲ್ಲಿ ಹೇಳಬೇಕು. ಆ ಪಂದ್ಯ ಶೇನ್ ವಾರ್ನ್ ನೇತೃತ್ವದ ಹ್ಯಾಂಪ್-ಷಯರ್ ತಂಡದ ವಿರುದ್ಧ ನಡೆದಿತ್ತು. ಕೆಂಟ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಹ್ಯಾಂಪ್-ಷಯರ್ ತನ್ನ ಮೊದಲ ಇನ್ನಿಂಗ್ಸನ್ನು ೩೨೦ಕ್ಕೆ ಕೊನೆಗೊಳಿಸಿತು. ನಂತರ ಶೇನ್ ವಾರ್ನ್ ದಾಳಿಗೆ ತರೆಗೆಲೆಗಳಂತೆ ಕೆಂಟ್ ಬ್ಯಾಟ್ಸ್-ಮನ್ನುಗಳು ಉದುರಲಾರಂಭಿಸಿದರು. ಕೆಂಟ್ ೨೫೨ಕ್ಕೆ ಆಲ್ ಔಟ್ ಆದರೂ ದ್ರಾವಿಡ್ ೧೩೭ ಓಟಗಳನ್ನು ಗಳಿಸಿದರು. ದ್ವಿತೀಯ ಇನ್ನಿಂಗ್ಸಿನಲ್ಲಿ ಅಲ್ಪ ಮೊತ್ತಕ್ಕೆ ಔಟಾದ ಹ್ಯಾಂಪ್-ಷಯರ್, ಪಂದ್ಯ ಗೆಲ್ಲಲು ಕೆಂಟ್-ಗೆ ೨೦೫ ರನ್ನುಗಳ ಟಾರ್ಗೆಟ್ ನೀಡಿತು. ಮತ್ತೆ ಸುಂದರ ಆಟ ಪ್ರದರ್ಶಿಸಿದ ದ್ರಾವಿಡ್ ೭೩ ರನ್ನುಗಳನ್ನು ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ವಿಜಯದ ಗುರಿಯತ್ತ ಒಯ್ದರು. ಶೇನ್ ವಾರ್ನ್ ಮತ್ತು ರಾಹುಲ್ ದ್ರಾವಿಡ್ ಇಬ್ಬರೂ ದಿಗ್ಗಜರು. ಮೇಲುಗೈ ಸಾಧಿಸಲು ಇಬ್ಬರದ್ದೂ ಹಠ. ಶೇನ್ ವಾರ್ನ್ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲಾ ಪ್ರಯೋಗಗಳನ್ನೂ ದ್ರಾವಿಡ್ ಮೇಲೆ ಪರೀಕ್ಷಿಸಿದರೂ ಅವರಿಗೆ ಸಫಲತೆ ಸಿಗಲಿಲ್ಲ. ಕೊನೆಗೂ ದ್ರಾವಿಡ್ ಕೈ ಮೇಲಾಯಿತು. ಇಬ್ಬರು ದಿಗ್ಗಜರ ಸೆಣಸಾಟವನ್ನು ಅಂದು ಇತ್ತಂಡಗಳ ಎಲ್ಲಾ ಆಟಗಾರರು ಮತ್ತು ಪ್ರೇಕ್ಷಕರು ಮನಸಾರೆ ಆನಂದಿಸಿದರು.


ದ್ರಾವಿಡ್ ಕೆಂಟ್ ಕೌಂಟಿ ಕ್ಲಬ್ಬಿಗಾಗಿ ಆಡುತ್ತಿರುವಾಗ ಕೆಂಟ್ ತಂಡದ ಕೋಚ್ ಆಗಿದ್ದವರು ಜಾನ್ ರೈಟ್. ಅವರ ಕೋಚಿಂಗ್ ವಿಧಾನಗಳಿಂದ ತುಂಬಾ ಪ್ರಭಾವಿತರಾದ ದ್ರಾವಿಡ್, ನಂತರ ಭಾರತದ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ತಂಡಕ್ಕೆ ಕೋಚ್ ಒಬ್ಬನ ಹುಡುಕಾಟದಲ್ಲಿದ್ದಾಗ ಜಾನ್ ರೈಟ್ ಹೆಸರನ್ನು ಸೂಚಿಸಿದರು. ನಂತರ ಜಾನ್ ರೈಟ್ ಮತ್ತು ಸೌರವ್ ಗಂಗೂಲಿ ಜೊತೆಯಾಟ ಒಂದು ಉತ್ತಮ ಕೋಚ್-ಕ್ಯಾಪ್ಟನ್ ಜೊತೆಯಾಟಗಳಲ್ಲಿ ಒಂದಾದದ್ದು ಇತಿಹಾಸ. ದ್ರಾವಿಡ್ ಬಗ್ಗೆ ಜಾನ್ ರೈಟ್ ಚುಟುಕಾಗಿ ಒಮ್ಮೆ ಹೀಗೆ ಹೇಳಿದ್ದರು - "When Rahul does well, India do well , Tendulkar is Tendulkar but in all conditions Rahul Dravid is the man". ಕ್ರಿಕಿನ್ಫೋ ಬರಹಗಾರ ಸಿದ್ಧಾರ್ಥ್ ವೈದ್ಯನಾಥನ್, ೨೦೦೬ರಲ್ಲಿ ದ್ರಾವಿಡ್ ಜಮೈಕಾದಲ್ಲಿ ಆಡಿದ ೨ ಅದ್ಭುತ ಇನ್ನಿಂಗ್ಸ್-ಗಳ ಬಗ್ಗೆ ಇಲ್ಲಿ ಬರೆದಿದ್ದಾರೆ.


ಹೇಗೆ ಆಡಬೇಕೆಂದು ದ್ರಾವಿಡ್-ನಿಂದ ಯುವ ಆಟಗಾರರು ಕೇಳಿಸಿಕೊಳ್ಳಬೇಕಾಗಿಲ್ಲ. ಅವರು ಆಡುವ ರೀತಿಯನ್ನು ಗಮನಿಸಿದರೂ ಸಾಕು, ತುಂಬಾ ಕಲಿಯಬಹುದು. ೨೦೦೬-೦೭ ರಣಜಿ ಋತುವಿನಲ್ಲಿ ಮುಂಬೈ ವಿರುದ್ಧ ಕರ್ನಾಟಕ ಮುಂಬೈನಲ್ಲಿ ಆಡುತ್ತಿತ್ತು. ದ್ರಾವಿಡ್ ದ್ವಿಶತಕದ ಬಾರಿಯನ್ನು ಆಡಿ ಕರ್ನಾಟಕವನ್ನು ಸೋಲಿನಿಂದ ಪಾರು ಮಾಡಿದರು. ಆಗ ಮುಂಬೈ ನಾಯಕ ವಾಸಿಂ ಜಾಫರ್ ಹೇಳಿದ್ದು, "ದ್ರಾವಿಡ್-ನನ್ನು ಆದಷ್ಟು ಬೇಗ ಔಟ್ ಮಾಡಲು ನಾವು ಪ್ರಯತ್ನಿಸಬೇಕು. ಅದರಲ್ಲಿ ನಾವು ವಿಫಲರಾದರೆ ಅದರ ಲಾಭವನ್ನಾದರೂ ಪಡೆದುಕೊಳ್ಳೋಣ. ಆತ ಆಡುವ ರೀತಿಯನ್ನು ಗಮನಿಸಿ, ನಮಗೆಲ್ಲಾ ಕಲಿಯಲು ತುಂಬಾ ಇದೆ. ಆತನ ಆಟವನ್ನು ಜಸ್ಟ್ ಎಂಜಾಯ್ ಮಾಡಿ, ಸಾಧ್ಯವಾದಷ್ಟನ್ನು ಕಲಿಯಿರಿ ಎಂದು ನಮ್ಮ ತಂಡದ ಯುವಕರಿಗೆ ನಾನು ಹೇಳುತ್ತಿದ್ದೆ".


ಕ್ರಿಕೆಟಿಗರಲ್ಲಿ ಎರಡು ಗುಂಪುಗಳಿವೆ. ನಿರ್ಲಿಪ್ತ ಭಾವನೆಯೊಂದಿಗೆ ಭಾರತಕ್ಕಾಗಿ ಆಡುವುದು ಮತ್ತು ದೇಶಪ್ರೇಮದಿಂದ ಭಾರತಕ್ಕಾಗಿ ಆಡುವುದು ಇವೆರಡು ಬೇರೆ ವಿಷಯಗಳು. ದ್ರಾವಿಡ್ ಎರಡನೇ ಗುಂಪಿಗೆ ಒಳಪಟ್ಟವರು. ಭಾರತ ಪಂದ್ಯಗಳನ್ನು ಸೋತಾಗ ಅವರ ಮುಖದಲ್ಲಿ ನಿರಾಸೆ, ದು:ಖ ಎದ್ದು ಕಾಣುತ್ತದೆ. ತನ್ನ ದೇಶ ಪಂದ್ಯ ಸೋತಿತಲ್ಲಾ ಎಂಬಾ ವಿಷಾದದ ಛಾಯೆ ಅವರ ಹಾವಭಾವದಲ್ಲಿ ಕಾಣಬಹುದು. ಸಚಿನ್ ಮತ್ತು ಲಕ್ಷ್ಮಣ್ ಕೂಡಾ ಇದೇ ಗುಂಪಿಗೆ ಸೇರಿದವರು.

ದ್ರಾವಿಡ್ ಎಂದೂ ಅನಾವಶ್ಯಕವಾಗಿ ಅಥವಾ ಕಾಟಾಚಾರಕ್ಕಾಗಿ ಯಾವುದೇ ಹೇಳಿಕೆಯನ್ನು ಕೊಟ್ಟವರಲ್ಲ. ಕ್ರಿಕೆಟಿಗನೊಬ್ಬನಿಗೆ ಭಾರತಕ್ಕೆ ಆಡುವ ಎಲ್ಲಾ ಅರ್ಹತೆ ಇದ್ದರೆ ಮಾತ್ರ ದ್ರಾವಿಡ್ ಆ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸುಮ್ಮಸುಮ್ಮನೆ ಹೇಳಿಕೆ ನೀಡುವುದಿಲ್ಲ. ವಿಜಯ್ ಭಾರದ್ವಾಜ್ ಮತ್ತು ದ್ರಾವಿಡ್ ಒಟ್ಟಿಗೆ ಆಡಿದವರು. ವಿಜಯ್ ಆಟವನ್ನು ದ್ರಾವಿಡ್ ಹತ್ತಿರದಿಂದ ಬಲ್ಲವರಾಗಿದ್ದರು. ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವಿಜಯ್ ಭಾರದ್ವಜ್ ರನ್ನುಗಳನ್ನು ಸೂರೆಗೊಳ್ಳುತ್ತಿರುವಾಗ ಎಲ್ಲರೂ ಈತ ಇನ್ನು ಸದ್ಯಕ್ಕೆ ಭಾರತಕ್ಕೆ ಆಡಲಿದ್ದಾನೆ ಎಂದು ಭವಿಷ್ಯವಾಣಿ ನುಡಿದುಬಿಟ್ಟಿದ್ದರು. ಆದರೆ ವಿಜಯ್ ಭಾರದ್ವಾಜ್-ಗೆ ಭಾರತಕ್ಕೆ ಆಡಲು ಅರ್ಹತೆ ಇದೆ ಎಂದು ಎಲ್ಲೂ ದ್ರಾವಿಡ್ ಮಾತ್ರ ಹೇಳಲಿಲ್ಲ. ಏಕೆಂದರೆ ದ್ರಾವಿಡ್ ಗೆ ಗೊತ್ತಿತ್ತು - ವಿಜಯ್ ಫುಟ್ ವರ್ಕ್ ತುಂಬಾ ಸಡಿಲವಾಗಿದೆ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವಿಜಯ್ ಮುಗ್ಗರಿಸಲಿದ್ದಾರೆ ಎಂದು. ಹಾಗೇ ಆಯಿತು ಕೂಡಾ. ಇನ್ನೊಂದು ಉದಾಹರಣೆ ವಿನಯ್ ಕುಮಾರ್. ವಿನಯ್ ಒಬ್ಬ ಉತ್ತಮ ಕ್ರಿಕೆಟಿಗ. ಯಾವಗಲೂ ತಂಡಕ್ಕೆ ೧೦೦% ಕೊಡುಗೆ ನೀಡುವ ಹಾರ್ಡ್ ವರ್ಕರ್. ಆದರೆ ಅವರ ಬೌಲಿಂಗ್ ವೇಗ ಅಂತರಾಷ್ಟ್ರೀಯ ಮಟ್ಟಕ್ಕೆ ಸಾಲದು. ಇದರ ಅರಿವಿರುವ ದ್ರಾವಿಡ್ ವಿನಯ್ ಭಾರತಕ್ಕೆ ಆಡಲು ಯೋಗ್ಯ ಎಂದು ಹೇಳಿಲ್ಲ. ಆದರೆ ಅವರೊಬ್ಬ ಪ್ರಾಮಾಣಿಕ ಮತ್ತು ಕಮಿಟೆಡ್ ಕ್ರಿಕೆಟಿಗ ಎಂದು ಹಲವು ಬಾರಿ ಹೇಳಿದ್ದಾರೆ. ವಿನಯ್ ಯಾಕೆ ಭಾರತ ತಂಡಕ್ಕೆ ಆಯ್ಕೆ ಆಗುತ್ತಿಲ್ಲ ಎಂದು ಎಲ್ಲಾ ಕನ್ನಡಿಗರು ತೆಲೆಕೆಡಿಸಿಕೊಳ್ಳುತ್ತಿದ್ದರೆ ಉತ್ತರ ಅವರ ಬೌಲಿಂಗಿನಲ್ಲೇ ಇದೆ. ಆ ವೇಗ ಸಾಲದು.

ಮನೀಷ್ ಪಾಂಡೆ ಮತ್ತು ಅಭಿಮನ್ಯು ಮಿಥುನ್ ಬಗ್ಗೆ ದ್ರಾವಿಡ್ ಒಳ್ಳೆಯ ಮಾತುಗಳನ್ನಾಡಿದ್ದಾರೆಂದರೆ ಅವರಿಬ್ಬರ ಅರ್ಹತೆ ಅದ್ಯಾವ ಮಟ್ಟದಲ್ಲಿದೆ ಎಂದು ಊಹಿಸಬಹುದು. ಮನೀಷ್ ಸಂಯಮವನ್ನು ಕಳಕೊಳ್ಳದೆ ತನ್ನ ಆಟದತ್ತ ಇರುವ ಗಮನವನ್ನು ಬೇರೆಡೆ ಹೋಗಕೊಡದೆ ಉತ್ತಮ ಪ್ರದರ್ಶನ ನೀಡಿದರೆ ಆತ ಭಾರತಕ್ಕೆ ಆಡಲು ಅರ್ಹ ಎನ್ನುವುದು ದ್ರಾವಿಡ್ ಮಾತು. ಹಾಗೇಯೆ ಮಿಥುನ್ ತನ್ನ ವೇಗ ಮತ್ತು ಫಿಟ್ನೆಸ್ ಇವೆರಡನ್ನೂ ಕಳಕೊಳ್ಳದೆ ಇನ್ನೆರಡು ಸೀಸನ್ ಉತ್ತಮ ಪ್ರದರ್ಶನ ನೀಡಿ ತನ್ನ ಬೌಲಿಂಗನ್ನು ಇನ್ನಷ್ಟು ಸುಧಾರಿಸಿಕೊಂಡರೆ ಭಾರತಕ್ಕೆ ಆಡುವ ಎಲ್ಲಾ ಅರ್ಹತೆ ಅವರಲ್ಲಿದೆ ಎಂಬುದು ದ್ರಾವಿಡ್ ಮಾತು. ಈ ಇಬ್ಬರೂ ಈ ಬಾರಿ ರಣಜಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂದಿನ ಸೀಸನ್ನಿನಲ್ಲಿ ಮಿಥುನನಿಗೆ ಬ್ಯಾಟ್ಸುಮನ್ನುಗಳು ಮತ್ತು ಪಾಂಡೆಗೆ ಬೌಲರುಗಳು ತಂತ್ರಗಳೊಂದಿಗೆ ತಯಾರಾಗಿರುತ್ತಾರೆ. ಆಗ ಅವರ ನಿರ್ವಹಣೆ ಹೇಗಿರುತ್ತದೆ ಎಂದು ಕಾದು ನೋಡಬೇಕು. ಆಯ್ಕೆಗಾರರು ಅನಾವಶ್ಯಕವಾಗಿ ಮಿಥುನನನ್ನು ಭಾರತಕ್ಕೆ ಆಡಿಸಿದರು. ಆತ ಇನ್ನೂ ಅಪೂರ್ಣ ಬೌಲರ್.

ಕ್ರಿಕೆಟಿಗನೊಬ್ಬನಿಗೆ ದೇಶೀಯ ಪಂದ್ಯಾವಳಿಗಳಲ್ಲಿ ಮೂರ್ನಾಲ್ಕು ಸೀಸನ್ ಆಡಲು ಬಿಡಬೇಕು. ಒಂದೇ ಸೀಸನ್ನಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೂಡಲೇ ಆಕಾಶಕ್ಕೆ ಏರಿಸಬಾರದು. ವೈಫಲ್ಯವನ್ನು ನಿಭಾಯಿಸಿ ಮತ್ತೆ ಸಫಲನಾಗುವವರೆಗೆ ಕಾದು ನಂತರ ಆಯ್ಕೆಗೆ ಪರಿಗಣಿಸಬೇಕು. ದ್ರಾವಿಡ್ ೬ ಸೀಸನ್ ದೇಶೀಯ ಪಂದ್ಯಾವಳಿಗಳಲ್ಲಿ ಆಡಿದ ಬಳಿಕ ಭಾರತಕ್ಕೆ ಆಡಿದವರು. ಅವರಿಗೆ ಅದರ ಬೆಲೆ ಗೊತ್ತು. ಒಂದನೇ ಕ್ಲಾಸಿನ ಬಳಿಕ ಎರಡನೇ ಕ್ಲಾಸು ಮುಗಿಸಿ ನೇರವಾಗಿ ಏಳು ನಂತರ ಹತ್ತನೇ ಕ್ಲಾಸಿಗೆ ಬರಲಾಗುವುದಿಲ್ಲ. ಹಾಗೆ ಬಂದವರು ಸಫಲರಾಗದೆ ಹಾಗೇ ಬೇಗನೆ ಮರೆಯಾಗುತ್ತಾರೆ. ಆದರೆ ಹಂತಹಂತವಾಗಿ ಒಂದೊಂದೇ ಮೆಟ್ಟಿಲು ಏರುತ್ತಾ ಹೆಚ್ಚೆಚ್ಚು ಕಲಿಯುತ್ತಾ ಇಂಪ್ರೂವ್ ಆಗುತ್ತಾ ಬಂದವರು ಸಫಲರಾಗುವ ಎಲ್ಲಾ ಚಾನ್ಸ್ ಇರುತ್ತದೆ.


’ಏಕಾಗ್ರತೆ’ ಎಂಬ ಶಬ್ದವನ್ನು ಮನಸಲ್ಲಿ ಮತ್ತು ಎದೆಯಲ್ಲಿ ಮುದ್ರಿಸಿಯೇ ರಾಹುಲ್ ದ್ರಾವಿಡ್ ಜನ್ಮ ತಾಳಿದ್ದರು ಎಂದೆನಿಸುತ್ತದೆ. ತಾನು ಎಲ್ಲಿಗೆ ಹೋಗಿ ಮುಟ್ಟಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತು ಆ ಗುರಿಯತ್ತ ಓಡುವುದು ಸುಲಭದ ಮಾತಲ್ಲ. ಎಷ್ಟು ಏಕಾಗ್ರತೆ ಇದ್ದರೂ ಕಡಿಮೆಯೇ. ೧೮-೨೩ ಈ ವಯಸ್ಸಿನಲ್ಲಿ ಉಳಿದ ವಿಷಯಗಳೆಡೆ ಆಕರ್ಷಿತರಾಗುವುದು ಸಹಜ. ಆದರೆ ಏಕಾಗ್ರತೆಯನ್ನು ಕಳೆದುಕೊಳ್ಳದೆ ಕಠಿಣ ಪರಿಶ್ರಮದಿಂದ ತನ್ನ ಜೀವನದ ಗುರಿಯನ್ನು ಮುಟ್ಟಿರುವ ಅಪೂರ್ವ ಕ್ರೀಡಾಳು ದ್ರಾವಿಡ್.


ತುಂಬಾ ಆಯಿತು ದ್ರಾವಿಡ್ ಬಗ್ಗೆ ಬರೆದದ್ದು. ಇನ್ನೂ ಬೇಕಾದಷ್ಟು ಬರೆಯಬಹುದು. ಇಲ್ಲಿವರೆಗೆ ಓದಿರುವ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ಇಷ್ಟು ಸಾಕು. ದ್ರಾವಿಡ್ ಆಡುವಷ್ಟು ದಿನಗಳವರೆಗೆ ಸ್ಟೈಲ್, ಟೆಕ್ನಿಕ್, ಎಲೆಗನ್ಸ್ ಇತ್ಯಾದಿಗಳ ರಸದೌತಣ ಮುಂದುವರೆಯಲಿದೆ. ಈಗಾಗಲೇ ದ್ರಾವಿಡ್-ಗೆ ೩೭ರ ಹರೆಯ. ಆದರೂ ಇನ್ನು ೨-೩ ವರ್ಷ ಕಾಲ ಆಡುವ ದೈಹಿಕ ಸಾಮರ್ಥ್ಯ ಅವರಲ್ಲಿದೆ. ಶ್ರೇಷ್ಠರು ತಾವಿನ್ನೂ ಶ್ರೇಷ್ಠ ಪ್ರದರ್ಶನ ನೀಡುತ್ತಿರುವಾಗಲೇ ’ಇನ್ನು ಸಾಕು’ ಎಂದು ನಿಲ್ಲಿಸಿಬಿಡುತ್ತಾರೆ. ಆನಂತರ ಆ ಸ್ಟೈಲ್, ಟೆಕ್ನಿಕ್ ಮತ್ತು ಎಲೆಗನ್ಸ್ ಇವೆಲ್ಲಾ ರಾಹುಲ್ ದ್ರಾವಿಡ್-ನೊಂದಿಗೆ ಕ್ರಿಕೆಟ್ ಮೈದಾನದಿಂದ ಕಣ್ಮರೆಯಾಗಲಿವೆ. ಆಗ ಟೆಸ್ಟ್ ಕ್ರಿಕೆಟ್ ನನಗಂತೂ ಸ್ವಲ್ಪ ಮಟ್ಟಿಗಾದರೂ ನೀರಸವೆನಿಸಲಿದೆ.

ಭಾಗ ಮೂರು.

ಭಾನುವಾರ, ಮಾರ್ಚ್ 07, 2010

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)


ದ್ರಾವಿಡ್ ಒಂದು ನಶಿಸುತ್ತಿರುವ ಸಂತತಿಗೆ ಸೇರಿರುವ ಕಲಾತ್ಮಕ ಬ್ಯಾಟ್ಸ್-ಮನ್. ಇನ್ನು ಹೆಚ್ಚು ಕಾಲ ದ್ರಾವಿಡ್ ಆಡಲಾರರು. ಆದ್ದರಿಂದ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟವನ್ನು ಆದಷ್ಟು ನೋಡಿಬಿಡುವುದು ಲೇಸು. ಎಂತಹ ವಿಪರ್ಯಾಸ ನೋಡಿ. ತನ್ನ ಕ್ರಿಕೆಟ್ ಜೀವನದ ಕೊನೆಯ ಘಟ್ಟದಲ್ಲಿರುವ ದ್ರಾವಿಡ್ ನಂತಹ ಆಟಗಾರನ ಆಟವನ್ನು ಆದಷ್ಟು ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಭಾರತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ (ಈ ಮಾತು ಸಚಿನ್ ಮತ್ತು ಲಕ್ಷ್ಮಣ್ ರಿಗೂ ಅನ್ವಯಿಸುತ್ತದೆ). ಕ್ಲಾಸಿಕ್ ಡಿಫೆನ್ಸ್, ಕಾಪಿಬುಕ್ ಶಾಟ್ಸ್ ಮತ್ತು ಎಕ್ಸಲೆಂಟ್ ಟೆಕ್ನಿಕ್ ಎಂದು ದ್ರಾವಿಡ್ ಆಟವನ್ನು ಚುಟುಕಾಗಿ ಬಣ್ಣಿಸಬಹುದು. ಹಳೆಯ ತಲೆಮಾರಿನ ಸಂಪ್ರದಾಯಿಕ ಆಟ ಮತ್ತು ಹೊಸ ತಲೆಮಾರಿನ ಇನ್ನೋವೇಷನ್ ಎರಡನ್ನೂ ದ್ರಾವಿಡ್ ಆಟದಲ್ಲಿ ಕಾಣಬಹುದು. ಹೊಸ ತಲೆಮಾರಿನ ಆಟಗಾರರಿಗೆ ಡಿಫೆನ್ಸ್ ಎಂದರೆ ಏನೆಂದೇ ಗೊತ್ತಿಲ್ಲ. ಏಕೆಂದರೆ ಕಾಲಕ್ಕೆ ತಕ್ಕಂತೆ ಆಟ ಬದಲಾಗಿದೆ. ಟೆಸ್ಟ್ ಪಂದ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ (ಹಾಗಾಗಬಾರದು, ಆಗದಿರಲಿ ಎಂಬುವುದು ನನ್ನ ಆಶಯ). ಇನ್ನೊಮ್ಮೆ ದ್ರಾವಿಡ್-ನಂತಹ ’ಗೋಡೆ’ ಖ್ಯಾತಿಯ ಆಟಗಾರ ಹುಟ್ಟಿಬರುವುದು ಅಸಾಧ್ಯ.


೩೭ರ ಹರೆಯದಲ್ಲೂ ಯುವಕರಿಗೆ ಸವಾಲೆನಿಸುವ ಫಿಟ್ನೆಸ್ ದ್ರಾವಿಡ್ ಹೊಂದಿದ್ದಾರೆ. ೧೪ ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು (ರಣಜಿ ಪಂದ್ಯಗಳನ್ನೂ ಸೇರಿಸಿದರೆ ೨೦ ವರ್ಷ) ಆಡಿ ಇನ್ನೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರುವ ಆಟಗಾರ ದ್ರಾವಿಡ್. ಸ್ಲಿಪ್ ನಲ್ಲಿ ಈಗಲೂ ದ್ರಾವಿಡ್ ಭಾರತದ ಟಾಪ್ ಫೀಲ್ಡರ್. ಕ್ಯಾಚುಗಳ ದ್ವಿಶತಕಕ್ಕೆ ಇನ್ನು ೭ ಕ್ಯಾಚುಗಳ ಅವಶ್ಯಕತೆಯಿದೆ (ಮೇಲಿನ ಚಿತ್ರ ದ್ರಾವಿಡ್ ವಿಶ್ವದಾಖಲೆ ಕ್ಯಾಚ್ ನಂಬರ್ ೧೮೨ ನ್ನು ಹಿಡಿದ ಬಳಿಕ ಸಂಭ್ರಮಿಸುತ್ತಿರುವುದು). ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಪಂದ್ಯಗಳು ಇವೆರಡರಲ್ಲೂ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಕಲೆಹಾಕಿರುವ ಆಟಗಾರನಿಗೆ ಸಲ್ಲಬೇಕಾದ ಗೌರವ ಇನ್ನೂ ಸಿಗುತ್ತಿಲ್ಲ ಎಂಬುವುದೇ ದು:ಖದ ಸಂಗತಿ.

ದ್ರಾವಿಡ್ ಆಟದಲ್ಲಿದ್ದ ಒಂದೇ ಕೊರತೆ ಎಂದರೆ ತುಂಬಾ ಸಂಪ್ರದಾಯಿಕ ಆಟ. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಲ್ಪ ಇನ್ನೋವೇಷನ್ ಮತ್ತು ಹೊಸತನವನ್ನು ತನ್ನ ಆಟದಲ್ಲಿ ದ್ರಾವಿಡ್ ಅಳವಡಿಸಿಕೊಂಡರೂ ತುಂಬಾ ಸಂಪ್ರದಾಯಿಕ ಆಟ ಏಕದಿನ ಪಂದ್ಯಗಳಲ್ಲಿ ಅವರಿಗೆ ಸ್ವಲ್ಪ ತೊಂದರೆ ನೀಡಿತು ಎನ್ನಬಹುದು. ೧೯೯೭ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳು ಬಹಳ ಬದಲಾವಣೆಗಳನ್ನು ಕಂಡವು. ಮೊದಲು ೫೦ ಓವರುಗಳಲ್ಲಿ ೨೦೦-೨೩೦ ರನ್ನುಗಳನ್ನು ಗಳಿಸುವುದು ಗುರಿಯಾಗಿರುತ್ತಿತ್ತು. ಆದರೆ ೧೯೯೭ ವಿಶ್ವಕಪ್ ಬಳಿಕ ಇದು ೨೩೦-೨೬೦ಕ್ಕೇರಿತು. ೨೦೦೩ರ ವಿಶ್ವಕಪ್ ಬಳಿಕವಂತೂ ೩೦೦ರ ಆಸುಪಾಸಿಗೆ. ಈಗಂತೂ ೩೫೦ ದಾಟಲೇಬೇಕು. ಹೀಗಿರುವಾಗ ತುಂಬಾ ಕಲಾತ್ಮಕ ಮತ್ತು ಸಂಪ್ರದಾಯಿಕ ಛಾಪಿನ ಆಟಗಾರರಾದ ದ್ರಾವಿಡ್-ಗೆ ಹೊಸ ಶತಮಾನದಲ್ಲಿ ಏಕದಿನ ಪಂದ್ಯಗಳಿಗೆ ಹೊಂದಿಕೊಳ್ಳಲು ಕಷ್ಟಗಳು ಎದುರಾದವು ಎನ್ನಬಹುದು.

ಒಂದು ಪ್ರಕಾರದ ಚೆಂಡಿಗೆ ಇಂತಹದೇ ಶಾಟ್ ಆಡಬೇಕು ಎನ್ನುವುದು ದ್ರಾವಿಡ್ ನಿಲುವು. ಇದೇ ಅವರಿಗೆ ಏಕದಿನ ಪಂದ್ಯಗಳಲ್ಲಿ ತೊಂದರೆಗಳನ್ನು ನೀಡತೊಡಗಿತು. ಅಷ್ಟಕ್ಕೂ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಹಳ ಕಳಪೆ ಆಟಗಾರನಂತೂ ಅಲ್ಲವೇ ಅಲ್ಲ. ಕೀಪಿಂಗ್ ಮಾಡುತ್ತಾ, ಬ್ಯಾಟಿಂಗ್ ಕೂಡಾ ಚೆನ್ನಾಗಿಯೇ ಮಾಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎನ್ನಬಹುದು. ಆದರೆ ಇಂತಹ ಚೆಂಡನ್ನು ಇಂತಹದೇ ರೀತಿಯಲ್ಲಿ ಆಡಬೇಕು ಎಂಬ ಜಿಗುಟುತನದಿಂದ ದ್ರಾವಿಡ್ ಹೊರಬರಲು ಬಹಳ ಸಮಯ ತೆಗೆದುಕೊಂಡರು. ಸಣ್ಣ ವಯಸ್ಸಿನಿಂದ ಅದೇ ರೀತಿಯಲ್ಲಿ ಆಡಿ, ಆಡುವ ಶೈಲಿಯನ್ನು ಹಾಗೇ ಬೆಳೆಸಿಕೊಂಡಿರುವಾಗ ಅದರಿಂದ ಹೊರಗೆ ಬರುವುದು ಸ್ವಲ್ಪ ಕಷ್ಟಾನೇ! ಆದರೂ ದ್ರಾವಿಡ್ ತಮ್ಮ ಆಟವನ್ನು ಏಕದಿನ ಪಂದ್ಯಗಳಿಗೆ ಹೊಂದುವಂತೆ ಬದಲಾಯಿಸಿಕೊಂಡರು. ಕಳೆದ ವರ್ಷ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಅವರು ನೀಡಿರುವ ನಿರ್ವಹಣೆ ಈ ಮಾತಿಗೆ ಸಾಕ್ಷಿ.


ದ್ರಾವಿಡ್ ಆಡುವ ಶೈಲಿಯನ್ನು ಗಮನಿಸಿ. ಆಡುವ ಎಲ್ಲಾ ಹೊಡೆತಗಳು ಅವು ಅಕ್ರಮಣಕಾರಿಯಾಗಿರಲಿ ಅಥವಾ ರಕ್ಷಣಾತ್ಮಕವಾಗಿರಲಿ ಅವರಾಡುವ ರೀತಿಗಿಂತ ಚೆನ್ನಾಗಿ ಆಡಲು ಸಾಧ್ಯವಿಲ್ಲದಂತೆ ಆಡುತ್ತಾರೆ. ಯಾವುದೇ ಹೊಡೆತ ನೋಡಲು ಅಸಹ್ಯ ಹುಟ್ಟಿಸುವುದಿಲ್ಲ. ಅವರಾಡುವ ಕವರ್ ಡ್ರೈವ್ ನನ್ನ ಫೇವರಿಟ್. ಚೆಂಡು ಪುಟಿದೇಳುವ ಜಾಗದ ಪಕ್ಕದಲ್ಲೇ ತನ್ನ ಎಡಗಾಲನ್ನು ಇರಿಸಿ ಬಲಗಾಲನ್ನು ಕ್ರೀಸಿನೊಳಗೇ ಇಟ್ಟು ಚೆಂಡನ್ನು ಕವರ್ಸ್ ಕಡೆ ಬಾರಿಸುವ ಶೈಲಿ ಅತ್ಯಂತ ಮನಮೋಹಕ.


ದ್ರಾವಿಡ್ ಕವರ್ ಡ್ರೈವ್ ಚೆನ್ನಾಗಿ ಮಾಡುತ್ತಾರೆ ಎಂಬುದರ ಅರಿವಿದ್ದ ರಿಕಿ ಪಾಂಟಿಂಗ್ ಅದೊಂದು ಟೆಸ್ಟ್ ಪಂದ್ಯದಲ್ಲಿ ಶಾರ್ಟ್ ಕವರ್ಸ್ ನಲ್ಲಿ ಇಬ್ಬರು ಕ್ಷೇತ್ರರಕ್ಷಕರನ್ನು ನಿಲ್ಲಿಸಿದ್ದರು. ದ್ರಾವಿಡ್-ಗೆ ಶೇನ್ ವಾರ್ನ್ ಮತ್ತು ಪಾಂಟಿಂಗ್ ಬಲೆಯನ್ನು ಬೀಸಿದ್ದರು. ಚೆಂಡನ್ನು ಗಾಳಿಯಲ್ಲಿ ತೇಲಿ ಬಿಟ್ಟರೆ ದ್ರಾವಿಡ್ ಮತ್ತದೇ ಕ್ಲಾಸಿಕ್ ಕವರ್ ಡ್ರೈವ್ ಆಡುತ್ತಾರೆ. ಹಾಗೆ ಡ್ರೈವ್ ಮಾಡುವಾಗ ಚೆಂಡು ಆರಂಭದಲ್ಲಿ ಸ್ವಲ್ಪ ದೂರ ಗಾಳಿಯಲ್ಲಿ ಹಾರುವ ಕಾರಣ ಅಲ್ಲೇ ಕ್ಯಾಚ್ ಮಾಡಲು ಕವರ್ಸ್ ಬದಲು ಶಾರ್ಟ್ ಕವರ್ಸ್-ನಲ್ಲಿ ಫೀಲ್ಡರುಗಳು. ಅದು ಕೂಡಾ ಇಬ್ಬರು. ಈ ಇಬ್ಬರೂ ಕ್ಷೇತ್ರರಕ್ಷಕರು ಪರಸ್ಪರ ಎಷ್ಟು ಸಮೀಪ ನಿಂತಿದ್ದರೆಂದರೆ ಸ್ವಲ್ಪ ಬಗ್ಗಿದರೆ ಇಬ್ಬರೂ ಕೈಕುಲುಕಬಹುದಾಗಿತ್ತು! ವಾರ್ನ್ ಎಸೆದ ಮೊದಲೆರಡು ಚೆಂಡುಗಳಿಗೆ ಕವರ್ಸ್ ಮೂಲಕ ಬಾರಿಸುವ ಅವಕಾಶವಿದ್ದರೂ ದ್ರಾವಿಡ್ ಬಾರಿಸಲಿಲ್ಲ. ಆದರೆ ೩ನೇ ಚೆಂಡು? ದ್ರಾವಿಡ್-ಗೆ ಬೇಕಾದ ಕೋನದಲ್ಲೇ ಚೆಂಡು ತೇಲಿ ಬಂತು. ಕ್ಷಣಾರ್ಧದಲ್ಲಿ ಎಡಗಾಲು ಮುಂದಿಟ್ಟು ಕವರ್ ಡ್ರೈವ್ ಆಡಿದರು. ಚೆಂಡು ಬ್ಯಾಟಿನಿಂದ ಹೊಡೆತ ತಿಂದ ಬಳಿಕ ಗಾಳಿಯಲ್ಲಿ ಹಾರಲೇ ಇಲ್ಲ. ನೆಲದಲ್ಲೇ ಚಲಿಸಲು ಆರಂಭಿಸಿ ಸಮೀಪದಲ್ಲೇ ನಿಂತಿದ್ದ ಶಾರ್ಟ್ ಕವರ್ಸ್ ಫೀಲ್ಡರುಗಳನ್ನು ವಂಚಿಸಿ ಅವರಿಬ್ಬರ ನಡುವಿನಿಂದಲೇ ದಾಟಿ ಬೌಂಡರಿಯಾಚೆ ತೆರಳಿತು. ಸ್ವಲ್ಪ ಬಾಗಿದರೆ ಪರಸ್ಪರ ಕೈಕುಲುಕುವಷ್ಟು ಸಮೀಪ ನಿಂತುಕೊಂಡಿದ್ದ ಆ ಇಬ್ಬರು ಕ್ಷೇತ್ರರಕ್ಷಕರ ನಡುವಿನಿಂದ ಚೆಂಡನ್ನು ದಾಟಿಸಿದರೆಂದರೆ ಅದೆಂತಹ ’ಪ್ಲೇಸ್-ಮೆಂಟ್’ ಆಗಿರಬಹುದೆಂದು ಊಹಿಸಬಹುದು. ದಂಗಾದ ಶೇನ್ ವಾರ್ನ್ ಸೊಂಟದ ಮೇಲೆ ಕೈಯಿಟ್ಟುಕೊಂಡರೆ, ಪಾಂಟಿಂಗ್ ಗಲ್ಲದ ಮೇಲೆ ಕೈಯಿಟ್ಟುಕೊಂಡರು. ಮೊದಲೆರಡು ಚೆಂಡುಗಳಿಗೆ ಕವರ್ಸ್ ಮೂಲಕ ಬಾರಿಸುವ ಅವಕಾಶವಿದ್ದರೂ ಚೆಂಡು ಸ್ವಲ್ಪ ಗಾಳಿಯಲ್ಲಿ ಹಾರುವ ಚಾನ್ಸ್ ಇದ್ದಿದ್ದರಿಂದ ದ್ರಾವಿಡ್ ಅವನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ ೩ನೇ ಚೆಂಡಿನ ಲೆಂತಿನಲ್ಲಿ ವಾರ್ನ್ ಸ್ವಲ್ಪ ಪ್ರಮಾದವೆಸಗಿದ್ದನ್ನು ಕ್ಷಣಾರ್ಧದಲ್ಲಿ ತಿಳಿದುಕೊಂಡ ದ್ರಾವಿಡ್, ಅದ್ಭುತವಾಗಿ ಅದನ್ನು ಕವರ್ ಡ್ರೈವ್ ಮಾಡಿದರು. ಇದು ಕೇವಲ ಒಂದು ಉದಾಹರಣೆ. ದ್ರಾವಿಡ್-ನ ಈ ಆಟವನ್ನು ಶಿಳ್ಳೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾ ನಾನೊಬ್ಬನೇ ಆನಂದಿಸಿದಾಗ ಮನೆಯವರಿಗೆ ಅಚ್ಚರಿ, ಅಂಥದ್ದೇನಾಯಿತಪ್ಪಾ ಎಂದು!


ದ್ರಾವಿಡ್ ಆಡುವ ಶಾಟ್ಸ್-ಗಳನ್ನು ಗಮನಿಸಿ. ಎಲ್ಲದರಲ್ಲೂ ಕ್ಲಾಸ್ ಅಡಗಿದೆ. ಎಲೆಗನ್ಸ್ ತುಂಬಿ ತುಳುಕುತ್ತಿದೆ. ಎಡಗಾಲು ಅಷ್ಟೇ ಮುಂದಕ್ಕೆ ಅಥವಾ ಹಿಂದಕ್ಕೆ ಹೋಗಬೇಕು, ಬ್ಯಾಟ್ ಇಷ್ಟೇ ಕೋನದಲ್ಲಿ ಬಂದು ಚೆಂಡನ್ನು ಸಂಧಿಸಬೇಕು, ಬಲಗಾಲು ಇಂತಹ ಜಾಗದಲ್ಲೇ ಇರಬೇಕು, ಮಣಿಗಂಟು ಇಷ್ಟೇ ತಿರುಗಬೇಕು, ಇತ್ಯಾದಿ.. ಇತ್ಯಾದಿ. ಆದರೆ ಇಷ್ಟೇ ಅಂತರದಲ್ಲಿ ಹೆಜ್ಜೆಗಳನ್ನು ಇಟ್ಟು ಓಡಬೇಕು ಎಂದು ಅದ್ಯಾರು ದ್ರಾವಿಡ್-ಗೆ ಹೇಳಿಕೊಟ್ಟರೋ ಏನೋ? ಅವರು ಓಡುವಾಗ ಇಡುವ ಹೆಜ್ಜೆಗಳು ತುಂಬಾ ಸಣ್ಣವು. ರನ್ನುಗಳಿಗಾಗಿ ಓಡುವುದಿರಲಿ ಅಥವಾ ಕ್ಷೇತ್ರರಕ್ಷಣೆ ಮಾಡುವಾಗ ಓಡುವುದಿರಲಿ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟೇ ಓಡುತ್ತಾರೆ. ಓಡುವ ವೇಗ ಬದಲಾಗಬಹುದು ಆದರೆ ಹೆಜ್ಜೆಗಳ ನಡುವಿನ ಅಂತರ ಮಾತ್ರ ಎಂದೆಂದಿಗೂ ಅದೇ! ಜಿಗುಟುತನದ ಪರಮಾವಧಿ. ಕೆಳಗಿನ ಚಿತ್ರ ದ್ರಾವಿಡ್ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ (೧೯೯೬) ಆಡಿದ ಸ್ಕ್ವೇರ್ ಡ್ರೈವ್.


ವಿಕೆಟ್ಟಿನೆಡೆ ಅವರು ನಡೆದು ಬರುವ ಶೈಲಿ, ಗಾರ್ಡ್ ತೆಗೆದುಕೊಳ್ಳುವ ರೀತಿ, ಸ್ಟಾನ್ಸ್ ತೆಗೆದುಕೊಳ್ಳುವ ಅಂದ, ಚೆಂಡನ್ನು ಆಡಿದ ಬಳಿಕ ಅಥವಾ ಆಡದೆ ಹಿಂದೆ ಕೀಪರ್ ಕಡೆಗೆ ಬಿಟ್ಟಾಗ ಅವರ ಫಾಲೋಥ್ರೂ ಹಾಗೂ ಫುಟ್-ವರ್ಕ್ ಎಲ್ಲವೂ ಪರಿಪೂರ್ಣ. ಶಾರ್ಟ್ (ಬೌನ್ಸರ್) ಚೆಂಡುಗಳನ್ನು ಅವರಾಡುವ ರೀತಿಯೇ ಅದ್ಭುತ. ಶಾರ್ಟ್ ಚೆಂಡುಗಳನ್ನು ಪುಲ್ ಮಾಡಿದಾಗ ಚೆಂಡು ನೆಲದಲ್ಲೇ ಚಲಿಸುವುದು ಮಾತ್ರ ಅದ್ಭುತಗಳಲ್ಲೇ ಅದ್ಭುತ! ಶಾರ್ಟ್ ಚೆಂಡುಗಳಿಗೆ ಭಾರತ ಕಂಡ ಶ್ರೇಷ್ಠ ಆಟಗಾರ ರಾಹುಲ್ ದ್ರಾವಿಡ್. ಟೆಕ್ನಿಕ್ ಕಣ್ರೀ ಟೆಕ್ನಿಕ್ಕು. ಅದಕ್ಕೆ ತಾನೆ, ಆಯ್ಕೆಗಾರರು ಮತ್ತೆ ದ್ರಾವಿಡ್-ನನ್ನು ಏಕದಿನ ತಂಡಕ್ಕೆ ಆಯ್ಕೆಮಾಡಿದ್ದು. ಶಾರ್ಟ್-ಪಿಚ್ ಚೆಂಡುಗಳಿಗೆ ಆಡಲು ತಂಡದ ಯುವ ಆಟಗಾರರು ಹೆಣಗಾಡುತ್ತಿದ್ದಾಗ ತಂಡ ಪಂದ್ಯಗಳನ್ನು ಸೋಲಲು ಆರಂಭಿಸಿತು. ಆಗ ಮತ್ತೆ ಆಯ್ಕೆಯಾದದ್ದು ಟೆಕ್ನಿಕಲ್ಲಿ ಪರ್-ಫೆಕ್ಟ್ ಆಗಿರುವ ರಾಹುಲ್ ದ್ರಾವಿಡ್.


ನಾನು ’ದ್ರಾವಿಡ್ ಟೆಕ್ನಿಕ್’ ಬಗ್ಗೆ ಇಷ್ಟೆಲ್ಲಾ ಹೇಳುವುದು ಯಾಕೆಂದರೆ, ನಮಗೆ ಅದರ ಪ್ರಾಮುಖ್ಯತೆ ಗೊತ್ತಿಲ್ಲ. ಈ ಟೆಕ್ನಿಕ್ ಇಲ್ಲದಿದ್ದರೆ ಒಂದುವರೆ ದಶಕಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದು ಅಸಾಧ್ಯ. ’ಟೆಕ್ನಿಕ್’ನಲ್ಲಿ ತಪ್ಪುಗಳಿದ್ದರೆ ಬೌಲರುಗಳು ಸುಲಭದಲ್ಲೇ ಅದನ್ನು ಕಂಡುಹುಡುಕಿಬಿಡುತ್ತಾರೆ. ದ್ರಾವಿಡ್-ನಂತೆಯೇ ಅದ್ಭುತ ಆಟಗಾರರಾಗಿರುವ ಸಚಿನ್ ಎಲ್.ಬಿ.ಡಬ್ಲ್ಯು ಆಗುವ ಪರಿ ನೋಡಿ, ಲಕ್ಷ್ಮಣ್ ಬೌಲ್ಡ್ ಆಗುವ ಪರಿ ಮತ್ತು ಸ್ಲಿಪ್ಸ್-ನಲ್ಲಿ ಕ್ಯಾಚ್ ಕೊಡುವ ರೀತಿ ನೋಡಿ, ಗಂಗೂಲಿ ಶಾರ್ಟ್ ಚೆಂಡುಗಳಿಗೆ ಔಟ್ ಆಗುವ ಪರಿ ನೋಡಿ. ಆದರೆ ದ್ರಾವಿಡ್-ನನ್ನು ಔಟ್ ಮಾಡಲು ಇಂತಹದೇ ಚೆಂಡು ಹಾಕಬೇಕು ಎಂಬ ನಿಯಮವೇ ಇಲ್ಲ. ಅವರೆಲ್ಲಾದರೂ ಔಟ್ ಆದರೆ ಅದು ಅದ್ಭುತವಾದ ಚೆಂಡು ಆಗಿರಬೇಕು.


ಜಗತ್ತಿನೆಲ್ಲೆಡೆ ದ್ರಾವಿಡ್ ಅದೆಷ್ಟೋ ಶ್ರೇಷ್ಠ ಬಾರಿಗಳನ್ನು ಆಡಿದ್ದಾರೆ. ಎಲ್ಲವನ್ನೂ ಬಣ್ಣಿಸುತ್ತಾ ಕೂತರೆ ಪೇಜುಗಟ್ಟಲೆ ಬರೆಯಬೇಕಾಗಬಹುದು. ಇವುಗಳಲ್ಲಿ ಪ್ರಮುಖವಾದುದು ೨೦೦೧ ರ ಆಸ್ಟ್ರೇಲಿಯಾ ವಿರುದ್ಧ ಕೊಲ್ಕತ್ತಾದಲ್ಲಿ ಲಕ್ಷ್ಮಣ್ ಜೊತೆಗಿನ ೩೭೬ ಓಟಗಳ ಜೊತೆಯಾಟ. ಒಂದೇ ಒಂದು ತಪ್ಪೆಸಗದೆ, ಟೆಕ್ನಿಕ್ ಎಂದರೇನು ಎಂದು ಪ್ರದರ್ಶನಕ್ಕಿಟ್ಟ ಸೂಪರ್ ಬ್ಯಾಟಿಂಗ್ ಪ್ರದರ್ಶನ. ನಂತರ ೨೦೦೪ರಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್-ನಲ್ಲಿ ಮೊದಲ ಬಾರಿಯಲ್ಲಿ ದ್ವಿಶತಕದ ಆಟ. ಮತ್ತು ದ್ವಿತೀಯ ಬಾರಿಯಲ್ಲಿ ತಂಡವನ್ನು ಗೆಲುವಿನ ಹಾದಿಗೆ ಕರೆದೊಯ್ದ ಅರ್ಧ ಶತಕದ ಬಾರಿ. ತನ್ನ ’ಟೀಮ್ ಕ್ಯಾಪ್’ಗೆ ಮುತ್ತಿಕ್ಕುತ್ತಾ ತಂಡವನ್ನು ಹುರಿದುಂಬಿಸುತ್ತಿದ್ದ ಪ್ರೇಕ್ಷಕರೆಡೆ ಅದೇ ಟೀಮ್ ಕ್ಯಾಪನ್ನು ತೋರಿಸುತ್ತಾ ವಿಜಯದ ಓಟವನ್ನು ಓಡಿದ್ದು ಎಂದೂ ಮರೆಯಲಾಗದ ದೃಶ್ಯ. ನಿಜವಾದ ದೇಶಪ್ರೇಮದ ಪ್ರದರ್ಶನ. ತಂಡ ಗೆದ್ದಾಗ ಧರ್ಮಕ್ಕೆ ಸಂಬಂಧಿಸಿದ ಸಂಕೇತಗಳನ್ನು ಮಾಡುವ ಮತಾಂಧರಿಗೆ ಇದೊಂದು ಉತ್ತಮ ಪಾಠ. ೨೦೦೯ರಲ್ಲಿ ಅಹ್ಮದಾಬಾದಿನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ನಾಲ್ಕು ಹುದ್ದರಿಗಳು ೩೨ಕ್ಕೇ ಉರುಳಿ ಬಿದ್ದಾಗ ಶತಕದ ಬಾರಿ ಆಡಿದ್ದು ದ್ರಾವಿಡ್ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದಕ್ಕೆ ಇನ್ನೊಂದು ನಿದರ್ಶನ. ಪಾಕಿಸ್ತಾನದಲ್ಲಿ ಸರಣಿ ಗೆಲ್ಲಲು ಸಹಾಯಕವಾದ ೨೮೩ ರನ್ನುಗಳ ಅಮೋಘ ಬಾರಿಯನ್ನು ಮರೆಯಲು ಸಾಧ್ಯವೇ? ಟೆಸ್ಟ್ ಜೀವನದಲ್ಲಿ ಇದುವರೆಗೆ ಗಳಿಸಿರುವ ೨೯ ಶತಕಗಳಲ್ಲಿ ೬ ದ್ವಿಶತಕಗಳು.

ದ್ರಾವಿಡ್ ಒಬ್ಬ ಶ್ರೇಷ್ಠ ಕ್ರಿಕೆಟಿಗ. ಜಗತ್ತಿನ ಶ್ರೇಷ್ಠ ಬೌಲರುಗಳನ್ನು ಎದುರಿಸಿ ಅಪ್ರತಿಮ ಆಟಿವನ್ನು ಅದೆಷ್ಟೋ ಬಾರಿ ಆಡಿ ಭಾರತದ ಆಧಾರ ಸ್ತಂಭವಾಗಿ ನಿಂತಿದ್ದಾರೆ. ಗ್ಲೆನ್ ಮೆಕ್-ಗ್ರಾತ್ ಬಿಟ್ಟರೆ ಉಳಿದೆಲ್ಲಾ ಬೌಲರುಗಳನ್ನು ಸಮರ್ಥನಾಗಿ ನಿಭಾಯಿಸಿದ್ದಾರೆ. ’ಪಿಜಿನ್ ಬೌಲಿಂಗ್ ಮಾಡುವಾಗ ಮಾತ್ರ ನನ್ನ ಆಫ್ ಸ್ಟಂಪ್ ಎಲ್ಲಿದೆ ಎಂದು ತಿಳಿದುಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು’ ಎಂದು ಖುದ್ದಾಗಿ ದ್ರಾವಿಡ್ ಒಪ್ಪಿಕೊಂಡಿದ್ದಾರೆ. ’ವಾಲ್’ ಎಂಬ ಹೆಸರಿಟ್ಟ ಪುಣ್ಯಾತ್ಮರು ಯಾರೋ ಏನೋ. ಆದರೆ ಸರಿಯಾದ ಹೆಸರನ್ನೇ ಇಟ್ಟಿದ್ದಾರೆ. ದ್ರಾವಿಡ್ ಎಂಬ ಗೋಡೆಯಲ್ಲಿ ಛೇದವಾದರೆ ಭಾರತ ತಂಡದ ಹೆಬ್ಬಾಗಿಲಿನೊಳಗೆ ವೈರಿಗಳು ಒಂದು ಕಾಲಿಟ್ಟಂತೆ.


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದ್ರಾವಿಡ್-ಗಿರುವ ’ಗೋಡೆ’ ಹೆಸರಿಗೆ ತಕ್ಕಂತೆ ಗೋಡೆಯೊಂದನ್ನು ರಚಿಸಲಾಗಿದೆ. ಆ ಲೇಟ್ ಕಟ್, ಆ ಕವರ್ ಡ್ರೈವ್, ಆ ಆನ್ ಡ್ರೈವ್, ಆ ಬ್ಯಾಕ್ ಫೂಟ್ ಡಿಫೆನ್ಸ್, ಆ ಫ್ಲಿಕ್ ಇವೆಲ್ಲವನ್ನೂ ಕಲ್ಲಿನಲ್ಲಿ ಕೆತ್ತಿದರೆ ಪ್ರಾಚೀನ ದೇವಾಲಯಗಳ ಶಿಲಾಬಾಲಿಕೆಯರೂ ನಾಚಿಕೊಳ್ಳಬೇಕು. ಭಾರತದಲ್ಲಿ ಕ್ರಿಕೆಟ್ ಆಟಕ್ಕೊಂದು ದೇವಾಲಯವಿದ್ದರೆ, ಗರ್ಭಗುಡಿಯಲ್ಲಿ ಸಚಿನ್ ಮೂರ್ತಿಯಿದ್ದರೆ, ದೇವಾಲಯದ ಹೊರಗೋಡೆಯಲ್ಲಿ ದ್ರಾವಿಡ್ ಆಟದ ಭಂಗಿ ಇರುವ ಕೆತ್ತನೆಗಳೇ ತುಂಬಿರಬೇಕು. ಅಂತಹ ಅದ್ಭುತ ಶೈಲಿ ಹೊಂದಿದ್ದಾರೆ ರಾಹುಲ್ ದ್ರಾವಿಡ್.

ಭಾಗ ಎರಡು. ಭಾಗ ನಾಲ್ಕು.

ಬುಧವಾರ, ಮಾರ್ಚ್ 03, 2010

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೨)


ಯಾವುದೇ ಸನ್ನಿವೇಶವಿರಲಿ ಭಾವೋದ್ವೇಗಕ್ಕೆ ಒಳಗಾಗದ ಆಟಗಾರ ದ್ರಾವಿಡ್. ವಿಷಯ ಏನೇ ಇರಲಿ, ದ್ರಾವಿಡ್ ಎಂದೂ ಭಾವನಾತ್ಮಕವಾಗಿ ಯೋಚಿಸಲಾರರು. ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು ಭಾವನೆಗಳಿಗೆ ಅಲ್ಲ. ಪಾಕಿಸ್ತಾನದಲ್ಲಿ ದ್ವಿಶತಕ ಪೂರೈಸಲು ಸಚಿನ್ ತೆಂಡೂಲ್ಕರ್-ಗೆ ೬ ರನ್ನುಗಳ ಅವಶ್ಯಕತೆಯಿದ್ದಾಗ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು ಈ ಮಾತಿಗೆ ಒಂದು ನಿದರ್ಶನ. ಆಸ್ಟ್ರೇಲಿಯಾದಲ್ಲಿ ’ಮಂಕಿಗೇಟ್’ ಹಗರಣದಲ್ಲಿ ಹರ್ಭಜನ್ ಸಿಂಗಿಗೆ ಸಪೋರ್ಟ್ ಮಾಡದೇ ಇದ್ದಿದ್ದು ಇನ್ನೊಂದು ನಿದರ್ಶನ. ಆ ವಿಷಯ ಬಂದಾಗ ಹರ್ಭಜನ್ ಈಗಲೂ ’ನನಗೆ ಸಚಿನ್ ಭಾಯಿ, ಅನಿಲ್ ಭಾಯಿ, ಸೌರವ್ ಭಾಯಿ, ಲಕ್ಷ್ಮಣ್ ಭಾಯಿ ತುಂಬಾ ಸಹಾಯ ಮಾಡಿದರು...’ ಎನ್ನುತ್ತಾನೆಯೇ ಹೊರತು ತಪ್ಪಿಯೂ ರಾಹುಲ್ ದ್ರಾವಿಡ್ ಹೆಸರೆತ್ತುವುದಿಲ್ಲ!

ಸೌರವ್ ಗಾಂಗೂಲಿ ನಾಯಕತ್ವದಲ್ಲಿ ಭಾರತ ಜಿಂಬಾಬ್ವೆ ಪ್ರವಾಸದಲ್ಲಿತ್ತು. ರಾಹುಲ್ ದ್ರಾವಿಡ್ ಉಪನಾಯಕರಾಗಿದ್ದರು. ಕೋಚ್ ಗ್ರೆಗೊರಿ ಚಾಪೆಲ್ ಮತ್ತು ಸೌರವ್ ಗಾಂಗೂಲಿ ನಡುವಿನ ವಿರಸ ತಾರಕಕ್ಕೇರಿದಾಗ ಸೌರವ್, ತಾನು ಈಗಲೇ ತಂಡವನ್ನು ತ್ಯಜಿಸಿ ಭಾರತಕ್ಕೆ ಹಿಂದಿರುಗುವೆನೆಂದಾಗ ವಿಷಯದ ಗಾಂಭೀರ್ಯತೆಯನ್ನು ಅರಿತ ದ್ರಾವಿಡ್, ಗಾಂಗೂಲಿಯನ್ನು ಹಾಗೆ ಮಾಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರವಾಸದ ನಡುವಿನಲ್ಲಿಯೇ ತಂಡವನ್ನು ಬಿಟ್ಟು ತೆರಳುವುದು ಭಾರತದ ನಾಯಕನಿಗೆ ಶೋಭೆ ತರುವ ವಿಷಯವಲ್ಲ ಎನ್ನುವುದು ದ್ರಾವಿಡ್ ನಿಲುವಾಗಿತ್ತು. ಭಾರತ ತಂಡದ ನಾಯಕನಾಗಿರುವವನು ಹೀಗೆ ಮಾಡಲೇಬಾರದು ಎನ್ನುವುದು ದ್ರಾವಿಡ್ ನಿಲುವಾಗಿತ್ತೇ ವಿನ: ಸೌರವ್ ಹಾಗೆ ಮಾಡಬಾರದು ಎನ್ನುವುದಲ್ಲ. ನೆನಪಿರಲಿ, ಎಲ್ಲಾದರೂ ಸೌರವ್ ಹಿಂತಿರುಗಿದ್ದಿದ್ದರೆ ಆ ಪ್ರವಾಸದಲ್ಲಿ ಮುಂದೆ ದ್ರಾವಿಡ್ ನಾಯಕನಾಗುತ್ತಿದ್ದರು ಆದರೆ ಜಗತ್ತಿನೆಲ್ಲೆಡೆ ’ಭಾರತ ತಂಡದ ನಾಯಕ ತಂಡವನ್ನು ಬಿಟ್ಟು ಹಿಂತಿರುಗಿದ’ ಎಂದೇ ಪ್ರಚಾರವಾಗುತ್ತಿತ್ತು. ಭಾರೀ ದೇಶಪ್ರೇಮಿಯಾಗಿರುವ ದ್ರಾವಿಡ್, ಅಂತಹ ಕೀಳು ಪ್ರಚಾರ ದೇಶದ ಕ್ರಿಕೆಟ್ ತಂಡದ ನಾಯಕನ ಹೆಸರಿಗೆ ಅಂಟಿಕೊಳ್ಳದಂತೆ ನೋಡಿಕೊಂಡರು.


ವಿವಾದಗಳಿಂದ ದ್ರಾವಿಡ್ ಯಾವತ್ತೂ ದೂರ. ಜಗತ್ತೇ ಆತನ ಬಗ್ಗೆ ಮಾತನಾಡುತ್ತಾ, ವಾದ ವಿವಾದ ಮಾಡುತ್ತಾ ಇದ್ದರೂ ದ್ರಾವಿಡ್ ಏನನ್ನೂ ಮಾತನಾಡುವುದಿಲ್ಲ. ಇಂಗ್ಲಂಡ್-ನಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ನಾಯಕತ್ವ ಬೇಡ ಎಂದು ದ್ರಾವಿಡ್ ನಿರ್ಧರಿಸಿದಾಗ ಭಾರತವೇ ಅಚ್ಚರಿಗೊಂಡಿತು. ಎಲ್ಲಾ ಕಡೆಯೂ ಅದೇ ಮಾತು. ಏನಾಗಿರಬಹುದು? ದ್ರಾವಿಡ್ ಇಂತಹ ನಿರ್ಧಾರ ಏಕೆ ತಗೊಂಡರು? ಊಹಾಪೋಹಗಳು. ಆದರೆ ಸ್ವತ: ದ್ರಾವಿಡ್ ಏನನ್ನೂ ಹೇಳಲಿಲ್ಲ. ಎಲ್ಲೆಡೆ ಇದೇ ಬಗ್ಗೆ ಚರ್ಚೆಯಾಗುತ್ತಿರಬೇಕಾದರೆ ದ್ರಾವಿಡ್ ಕೇರಳದಲ್ಲಿ ಸಂಸಾರ ಸಮೇತ ವಿಹರಿಸುತ್ತಿದ್ದರು!

ಪಾಕಿಸ್ತಾನದಲ್ಲಿ ಸಚಿನ್ ೧೯೪ರಲ್ಲಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿದಾಗಲೂ ಎಲ್ಲೆಡೆ ಇದೇ ಚರ್ಚೆ. ಸ್ವತ: ಸಚಿನ್, ’ನನಗೆ ಆಶ್ಚರ್ಯವಾಯಿತು. ಇನ್ನೊಂದು ಸ್ವಲ್ಪ ಹೊತ್ತು ತಡೆದು ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಾರೆಂದು ನಾನು ತಿಳಿದಿದ್ದೆ’ ಎಂದು ಪೆದ್ದು ಪೆದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಅಸಹನೆಯಿಂದ ಮಾತನಾಡಿದರು. ಆದರೆ ದ್ರಾವಿಡ್ ಏನನ್ನೂ ಹೇಳಲಿಲ್ಲ. ತಂಡದ ಒಳಗೆ ನಡೆಯುವ ವಿಷಯಗಳು ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಎಂಬುವುದು ದ್ರಾವಿಡ್ ನಿಲುವು. ಅದರಂತೆಯೇ ಅವರು ನಡೆದುಕೊಂಡರು. ಸಚಿನ್ ಜೊತೆ ಖುದ್ದಾಗಿ ಮಾತನಾಡಿ, ಡಿಕ್ಲೇರ್ ಮಾಡಿದ್ದು ಏಕೆ ಎಂಬುದನ್ನು ಮನದಟ್ಟುವಂತೆ ವಿವರಿಸಿ ವಿಷಯವನ್ನು ಅಲ್ಲಿಗೇ ಕೊನೆಗೊಳಿಸಿದರು. ನಂತರ ದ್ರಾವಿಡ್ ಹೇಳಿದ್ದು ’ತಂಡದ ಒಳಗೆ ಏನು ನಡೆದಿದೆ ಎಂಬ ವಿಷಯ ಹೊರಗೆ ಬರಬಾರದು. ಈ ವಿಷಯದ ಬಗ್ಗೆ ಸಚಿನ್ ಜೊತೆ ಮಾತನಾಡಿದ್ದೇನೆ. ಈ ವಿಷಯ ಇಲ್ಲಿಗೇ ಮುಗಿಯಿತು". ಸುದ್ದಿ ಚಾನೆಲ್ಲುಗಳಿಗೆ ಬೇಕಾದ ಮನುಷ್ಯನೇ ಅಲ್ಲ ಈ ದ್ರಾವಿಡ್! ಏನಾದರೂ ಗಾಸಿಪ್ ಸಿಗುತ್ತಾ ಎಂದು ಕೆದಕಿದವರು, ನೇರ ಸರಳ ಉತ್ತರ ಕೇಳಿ ಮೈ ಕೈ ಪರಚಿಕೊಳ್ಳುತ್ತಾ ಹಿಂತಿರುಗಿದರು.

ಸಚಿನ್ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ಹೇಳಿಕೆಗೆ ಎಲ್ಲಾದರೂ ದ್ರಾವಿಡ್, "ಇಂತಿಷ್ಟು ಓವರುಗಳು ಮುಗಿದ ಬಳಿಕ ಡಿಕ್ಲೇರ್ ಮಾಡಲಿದ್ದೇವೆ ಎಂದು ೨ ಬಾರಿ ಸಚಿನ್-ಗೆ ಸಂದೇಶವನ್ನು ಕಳುಹಿಸಿದ್ದೆವು. ಆದರೂ ಅವರು ಆಟದ ವೇಗವನ್ನು ಹೆಚ್ಚಿಸದೆ ಇದ್ದ ಕಾರಣ ಅನಿವಾರ್ಯವಾಗಿ ಡಿಕ್ಲೇರ್ ಮಾಡಲಾಯಿತು" ಎಂದು ಇದ್ದ ವಿಷಯವನ್ನು ಇದ್ದ ಹಾಗೆ ಹೇಳಿ ತಪ್ಪನ್ನೆಲ್ಲಾ ಸಚಿನ್ ಮೇಲೇಯೇ ಹಾಕಿಬಿಡಬಹುದಿತ್ತು. ಹಾಗೆ ಮಾಡಿದರೆ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿತ್ತಲ್ಲವೆ? ಆದರೆ ದ್ರಾವಿಡ್ ಹಾಗೆ ಮಾಡದೇ, ಸಚಿನ್ ಜೊತೆ ಖುದ್ದಾಗಿ ಮಾತನಾಡಿ ವಿಷಯವನ್ನು ತಿಳಿಗೊಳಿಸಿದರು. ಗಾಸಿಪ್-ಗಾಗಿ ಕಾಯುವ ಸುದ್ದಿ ಮಾಧ್ಯಮಗಳು ಏನನ್ನೂ ಪ್ರಚಾರ ಮಾಡಿ ಯಾವ ರೀತಿಯಲ್ಲಿ ಬೇಕಾದರೂ ಸುದ್ದಿಯನ್ನು ತಿರುಚಿ ಬಿಡುತ್ತವೆ ಎಂದು ಅರಿವಿರುವ ದ್ರಾವಿಡ್ ಇಂತಹ ವಿಷಯಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ.

ಏಕದಿನ ತಂಡದಿಂದ ದ್ರಾವಿಡ್-ನನ್ನು ಕೈಬಿಟ್ಟಾಗ ಮತ್ತದೇ ರೀತಿಯಲ್ಲಿ ಎಲ್ಲೆಡೆ ಸುದ್ದಿ. ಆದರೆ ದ್ರಾವಿಡ್ ಎಂದಿನಂತೆ ಮೌನಕ್ಕೆ ಶರಣಾದರು. ತನ್ನ ಸ್ವಾಧೀನದಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತಿಸಿ ಯೋಚಿಸಿ ಫಲವಿಲ್ಲ ಎಂಬುವುದು ದ್ರಾವಿಡ್ ಚೆನ್ನಾಗಿ ಅರಿತಿದ್ದಾರೆ. ಕಳೆದ ವರ್ಷ ಭಾರತ ತಂಡ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಪ್ರವಾಸ ಕೈಗೊಂಡಾಗ ಏಕದಿನ ಪಂದ್ಯಗಳಿಗೆ ಮತ್ತೆ ದ್ರಾವಿಡ್ ಆಯ್ಕೆ ಮಾಡಲಾಯಿತು. ತಂಡದಲ್ಲಿದ್ದ ಯುವ ಆಟಗಾರರು ವಿದೇಶದಲ್ಲಿ ಸತತ ವೈಫಲ್ಯ ಕಾಣುತ್ತಿದ್ದರಿಂದ ಒಬ್ಬ ಅನುಭವಿ ಮತ್ತು ಟೆಕ್ನಿಕಲ್ಲಿ ಸಾಲಿಡ್ ಆಟಗಾರ ಬೇಕಾಗಿತ್ತು. ದ್ರಾವಿಡ್ ಬಿಟ್ಟು ಬೇರೆ ಯಾರು ತಾನೆ ಆಯ್ಕೆಯಾಗಲು ಸಾಧ್ಯ? ಸಮರ್ಥವಾಗಿ ಮತ್ತು ಚೆನ್ನಾಗಿಯೇ ದ್ರಾವಿಡ್ ಆಡಿದರು. ತಂಡ ಗೆದ್ದಿತು. ಭಾರತಕ್ಕೆ ಹಿಂದಿರುಗಿದ ಕೂಡಲೇ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಗೆ ದ್ರಾವಿಡ್ ತಂಡದಲ್ಲಿಲ್ಲ! ಈಗ ಏನಿದ್ದರೂ ಭಾರತದ ಬ್ಯಾಟಿಂಗ್ ಪಿಚ್ಚುಗಳಲ್ಲಿ ನಡೆಯುವ ಪಂದ್ಯಗಳು. ನಮ್ಮ ಯುವ ಆಟಗಾರರು ಯಾವುದೇ ತೊಂದರೆ ಇಲ್ಲದೇ ಸಲೀಸಾಗಿ ಆಡಬಲ್ಲರು ಎಂದು ಆಯ್ಕೆಗಾರರು ದ್ರಾವಿಡ್-ನನ್ನು ಕೈಬಿಟ್ಟರು. ತಂಡ ಸರಣಿ ಸೋತಿತು! ವಿದೇಶದಲ್ಲಿ ಬೇಕಿದ್ದಾಗ ತನ್ನನ್ನು ಬಳಸಿ, ಈಗ ಕೈಬಿಟ್ಟಿದ್ದಕ್ಕೆ ದ್ರಾವಿಡ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಟಿಪಿಕಲ್ ದ್ರಾವಿಡ್.

ರಾಯಲ್ ಚಾಲೆಂಜರ್ಸ್ ತಂಡವನ್ನು ಮೊದಲ ಐಪಿಎಲ್ ಸೀಸನ್ನಿನಲ್ಲಿ ದ್ರಾವಿಡ್ ಮುಂದಾಳತ್ವ ವಹಿಸಿಕೊಂಡಿದ್ದರು. ತಂಡ ೭ನೇ ಸ್ಥಾನ ಪಡೆದು ನೀರಸ ಪ್ರದರ್ಶನ ನೀಡಿತು. ೨೦-೨೦ ಪಂದ್ಯಕ್ಕೆ ದ್ರಾವಿಡ್ ಆಟ ಹೊಂದುವುದಿಲ್ಲ ಎಂಬುವುದು ಒಪ್ಪಿಕೊಳ್ಳಬೇಕಾದ ಮಾತೇ. ಆದರೆ ಮೊದಲ ಸೀಸನ್ನಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಹೆಚ್ಚು ರನ್ನು ಗಳಿಸಿದ ಆಟಗಾರರಲ್ಲಿ ದ್ರಾವಿಡ್ ಕೂಡಾ ಒಬ್ಬರು. ಸಹ ಆಟಗಾರರ ವೈಫಲ್ಯದಿಂದ ತಂಡ ವೈಫಲ್ಯ ಕಂಡಿತು. ತನ್ನ ತಂಡದ ನೀರಸ ಪ್ರದರ್ಶನದಿಂದ ತೀವ್ರ ಮುಖಭಂಗಗೊಂಡ ವಿಜಯ್ ಮಲ್ಯ ಅನಗತ್ಯ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಕೆಲವು ಸ್ಯಾಂಪಲ್ಲುಗಳು - ’ತಂಡದ ನಾಯಕನಾಗಿ ದ್ರಾವಿಡ್ ಉತ್ತಮ ಪ್ರದರ್ಶನ ನೀಡಲಿಲ್ಲ’, ’ಟೆಸ್ಟ್ ಟೀಮನ್ನು ೨೦-೨೦ ಪಂದ್ಯಾವಳಿಗೆ ಆಯ್ಕೆ ಮಾಡಿದ್ದು ನಾನಲ್ಲ, ಬದಲಾಗಿ ನಾಯಕನಾಗಿದ್ದವನು’, ’ಮಿಸ್ಬಾ ಉಲ್-ಹಕ್ ನನ್ನು ಖರೀದಿಸಬೇಕೆಂದು ಪಟ್ಟು ಹಿಡಿದವನೇ ನಾನು, ಇಲ್ಲವಾದಲ್ಲಿ ಅವನೂ ಸಿಗುತ್ತಿರಲಿಲ್ಲ’, ’ಎರಡನೇ ಐಪಿಎಲ್ ಸೀಸನ್ನಿನಲ್ಲಿ ದ್ರಾವಿಡ್ ನಾಯಕನಾಗಿರುವುದಿಲ್ಲ’.

ತಂಡದ ಹೀನಾಯ ಪ್ರದರ್ಶನಕ್ಕೆ ದ್ರಾವಿಡ್ ಮಾತ್ರ ಹೊಣೆ ಎಂಬ ಮಾತುಗಳು ರಾಯಲ್ ಚಾಲೆಂಜರ್ಸ್ ಮ್ಯಾನೇಜ್-ಮೆಂಟ್ ನಿಂದ ಬರಲಾರಂಭಿಸಿದವು. ಆದರೆ ದ್ರಾವಿಡ್ ಏನೂ ಮಾತನಾಡಲಿಲ್ಲ. ಅವಮಾನವನ್ನು ಮೌನವಾಗಿಯೇ ಸಹಿಸಿಕೊಂಡರು. ಅದಲ್ಲದೇ ಆಗ ದ್ರಾವಿಡ್ ತನ್ನ ಕ್ರಿಕೆಟ್ ಜೀವನದ ಕೆಟ್ಟ ಫಾರ್ಮ್ ನಿಂದ ಆಗಷ್ಟೇ ಹೊರಬರಲಾರಂಭಿಸಿದ್ದರು. ತನ್ನ ಫಾರ್ಮನ್ನು ಮರಳಿ ಪಡೆಯುವತ್ತ ತನ್ನೆಲ್ಲಾ ಗಮನವನ್ನು ದ್ರಾವಿಡ್ ಕೇಂದ್ರೀಕರಿಸಿದ್ದರೆ ವಿನ: ಮಲ್ಯನ ಮಳ್ಳು ಮಾತುಗಳೆಡೆಯಲ್ಲ. ಮಲ್ಯ ಮತ್ತು ರಾಯಲ್ ಚಾಲೆಂಜರ್ಸ್ ಅಧಿಕಾರಿಗಳ ಯಾವ ಹೇಳಿಕೆಗೂ ದ್ರಾವಿಡ್ ಮರುತ್ತರ ನೀಡಲಿಲ್ಲ ಮತ್ತು ತಂಡದ ನಾಯಕತ್ವದ ಬಗ್ಗೆ ತನ್ನ ಅಭಿಪ್ರಾಯವನ್ನೂ ನೀಡಲಿಲ್ಲ. ಅವರು ಹೇಳಿದ್ದು ಮತ್ತದೇ ನೇರ ಸರಳ ಮಾತು - ’ರಾಯಲ್ ಚಾಲೆಂಜರ್ಸ್ ತಂಡದೊಂದಿಗೆ ನಾನು ೩ ವರ್ಷಗಳ ಗುತ್ತಿಗೆಗೆ ಸಹಿ ಮಾಡಿದ್ದೇನೆ. ಇನ್ನೆರಡು ವರ್ಷಗಳ ಕಾಲ ತಂಡಕ್ಕೆ ನನ್ನ ಸೇವೆಯನ್ನು ಸಲ್ಲಿಸುವತ್ತ ನಾನು ಬದ್ಧನಾಗಿದ್ದೇನೆ’. ನಂತರ ಎರಡನೇ ಐಪಿಎಲ್ ಸೀಸನ್ ದಕ್ಷಿಣ ಆಫ್ರಿಕಾದಲ್ಲಿ ನಡೆದಾಗ ಅಲ್ಲಿನ ಪಿಚ್-ಗಳಿಗೆ ಹೊಂದುವ ಆಟ ಪ್ರದರ್ಶಿಸಿ ಅದ್ಭುತ ಪ್ರದರ್ಶನವನ್ನು ದ್ರಾವಿಡ್ ನೀಡಿ ಎಲ್ಲರ ಅವಮಾನಭರಿತ ಮಾತುಗಳಿಗೆ ತಕ್ಕ ಉತ್ತರವನ್ನು ತನ್ನ ಆಟದ ಮೂಲಕ ನೀಡಿದರು.


ಚಾರಣದಲ್ಲಿ ಕಾಲಿಗೆ ಅಂಟಿಕೊಳ್ಳುವ ಇಂಬಳದಂತೆ ದ್ರಾವಿಡ್ ಕ್ರೀಸಿಗೆ ಅಂಟಿಕೊಳ್ಳುತ್ತಾರೆ. ದ್ರಾವಿಡ್ ಒಮ್ಮೆ ಕ್ರೀಸಿಗೆ ಅಂಟಿಕೊಂಡರೆ ನಂತರ ಅವರನ್ನು ಅಲ್ಲಿಂದ ಅಲುಗಾಡಿಸುವುದೇ ಕಷ್ಟ. ಅವರಾಡುವ ರಕ್ಷಣಾತ್ಮಕ ಆಟ ಉನ್ನತ ಮಟ್ಟದ್ದು. ಅವರು ಡಿಫೆಂಡ್ ಮಾಡುವ ರೀತಿಯನ್ನು ನೋಡುವುದೇ ಅಂದ. ಈ ಕಲೆ ಎಲ್ಲರಿಗೂ ಸಲ್ಲುವುದಿಲ್ಲ. ಕಠಿಣ ಪರಿಶ್ರಮ ಮತ್ತು ಅಭ್ಯಾಸದೊಂದಿಗೆ ದ್ರಾವಿಡ್ ತನ್ನ ’ಡಿಫೆನ್ಸ್’ನ್ನು ಸ್ಟ್ರಾಂಗ್ ಮಾಡಿಕೊಂಡಿದ್ದಾರೆ. ಉತ್ತಮ ರಕ್ಷಣಾತ್ಮಕ ಆಟ ಇರುವ ಆಟಗಾರರನ್ನು ಔಟ್ ಮಾಡಲು ಬೌಲರುಗಳು ತುಂಬಾ ಕಷ್ಟಪಡಬೇಕಾಗುತ್ತದೆ. ಎಂತಹ ಚೆಂಡಿಗೂ ಇಂತಹ ಆಟಗಾರರ ಬಳಿ ಉತ್ತರವಿರುತ್ತದೆ. ಹೆಚ್ಚಿನ ಆಟಗಾರರು ರಕ್ಷಣಾತ್ಮಕ ಆಟ ಆಡಿದರೆ ಚೆಂಡು ನಿಧಾನವಾಗಿ ತೆವಳುತ್ತಾ ೧೦-೧೫ ಗಜಗಳಷ್ಟಾದರೂ ಮುಂದೆ ಹೋಗುತ್ತದೆ. ಆದರೆ ದ್ರಾವಿಡ್ ಡಿಫೆಂಡ್ ಮಾಡಿದರೆ ಚೆಂಡು ಬ್ಯಾಟಿನ ಸಮೀಪದಲ್ಲೇ ನಿಲ್ಲುವ ’ಸಿಲ್ಲಿ ಪಾಯಿಂಟ್’ ಮತ್ತು ’ಫಾರ್ವರ್ಡ್ ಶಾರ್ಟ್ ಲೆಗ್’ ಕ್ಷೇತ್ರರಕ್ಷಕರ ಬಳಿಯೂ ಸಾಗುವುದಿಲ್ಲ. ಸಿಲ್ಲಿ ಪಾಯಿಂಟ್ ಮತ್ತು ಫಾರ್ವರ್ಡ್ ಶಾರ್ಟ್ ಲೆಗ್ ಫೀಲ್ಡರುಗಳು ಇಷ್ಟು ಸಮೀಪ ನಿಂತರೂ ಚೆಂಡು ನಮ್ಮ ಬಳಿ ಬರದಂತೆ ಈತ ಆಡುತ್ತಾನಲ್ಲ ಎಂದು ಹುಬ್ಬೇರಿಸಬೇಕು! ಅಂತಹ ರಕ್ಷಣಾತ್ಮಕ ಆಟವನ್ನು ದ್ರಾವಿಡ್ ಆಡುತ್ತಾರೆ. ಹೆಚ್ಚಿನ ಆಟಗಾರರು ಡಿಫೆಂಡ್ ಮಾಡಿದಾಗ ಚೆಂಡು ಬೌಲರ್ ಸಮೀಪಕ್ಕೆ ಅಥವಾ ಪಾಯಿಂಟ್ ಮತ್ತು ಕವರ್ಸ್ ತನಕ ಸಾಗುತ್ತದೆ ಆದರೆ ದ್ರಾವಿಡ್ ಡಿಫೆಂಡ್ ಮಾಡಿದಾಗ ಚೆಂಡು ಅಲ್ಲೇ ದ್ರಾವಿಡ್ ಕಾಲ ಬುಡದಲ್ಲೇ ಇರುತ್ತದಲ್ಲದೆ ಅವರ ನೆರಳನ್ನೂ ದಾಟುವುದಿಲ್ಲ ಎಂದರೆ ದ್ರಾವಿಡ್ ಡಿಫೆನ್ಸ್ ಯಾವ ತರಹ ಇದೆ ಎಂದು ಊಹಿಸಬಹುದು.


ಎದುರಾಳಿ ತಂಡಗಳು ದ್ರಾವಿಡ್-ನನ್ನು ಔಟ್ ಮಾಡುವ ತಂತ್ರದ ಬಗ್ಗೆ ಹೆಚ್ಚು ಕಾಲ ವ್ಯಯಿಸುತ್ತಾರೆ. ಸಚಿನ್ ಫ್ಲ್ಯಾಷಿನೆಸ್, ಲಕ್ಷ್ಮಣ್ ಟೈಮಿಂಗ್ ಮತ್ತು ಸೌರವ್ ಅಗ್ರೆಸ್ಸಿವ್-ನೆಸ್ ನಡುವೆ ಕೂಲ್ ದ್ರಾವಿಡ್ ಆಟ ಕಣ್ಣ ಮುಂದೆ ಬರುವುದಿಲ್ಲ. ಆದರೆ ಎಲ್ಲರಿಗಿಂತಲೂ ಪ್ರಮುಖ ಬಾರಿಯನ್ನು ದ್ರಾವಿಡ್ ಆಡಿರುತ್ತಾರೆ. ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೆ ’ಡೋಂಟ್ ಲೆಟ್ ದ್ರಾವಿಡ್ ಗೆಟ್ ರನ್ಸ್’ ಎಂದು ಇಂಝಮಾಮುಲ್ ಹಕ್, ನಾಸಿರ್ ಹುಸೇನ್, ರಿಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಕ್ಕಾರರಂತಹ ದಿಗ್ಗಜರು ಹೇಳಿರುವುದು ಗಮನಾರ್ಹ. ವಿದೇಶದಲ್ಲೂ ಎಲ್ಲರಿಗಿಂತಲೂ ಉತ್ತಮ ಪ್ರದರ್ಶನ ನೀಡಿರುವುದೂ ದ್ರಾವಿಡ್.

ದ್ರಾವಿಡ್ ಎಂದೂ ತಂಡದ ನಾಯಕನಿಗಾಗಿ ಆಡಿದವರಲ್ಲ. ಅವರು ತಂಡಕ್ಕಾಗಿ, ದೇಶಕ್ಕಾಗಿ ಆಡಿದವರು. ತನಗಿಷ್ಟವಿಲ್ಲದಿದ್ದರೂ ತಂಡಕ್ಕಾಗಿ ೭೪ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಕಾರ್ಯ ನಿರ್ವಹಿಸಿದರು. ನಾಯಕ ಯಾರೇ ಇರಲಿ, ತನ್ನ ದೇಶದ ತಂಡವನ್ನು ಗೆಲ್ಲಿಸಬೇಕು ಎಂಬುವುದಷ್ಟೇ ದ್ರಾವಿಡ್ ಗುರಿಯಾಗಿರುತ್ತಿತ್ತು. ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಾಯಕರಾಗಿದ್ದಾಗ, ರಾಹುಲ್ ದ್ರಾವಿಡ್ ಅವರಿಬ್ಬರಿಗೆ ತನ್ನ ಸಂಪೂರ್ಣ ಬೆಂಬಲವನ್ನು ಅದ್ಭುತವಾಗಿ ಆಟವನ್ನಾಡುತ್ತಾ ನೀಡಿದರು. ’ತಾನು ನಾಯಕನಾಗಿಲ್ಲ’ ಅಥವಾ ’ಗೆದ್ದರೆ ಶ್ರೇಯ ತನಗೆ ಸಲ್ಲುವುದಿಲ್ಲ’ ಎಂಬ ಕ್ಷುಲ್ಲಕ ಮನೋಭಾವದೊಂದಿಗೆ ಎಂದೂ ಆಡಲಿಲ್ಲ. ಆದರೆ ದ್ರಾವಿಡ್ ನಾಯಕರಾದಾಗ ಈ ಇಬ್ಬರು ಹಿರಿಯ ಆಟಗಾರರು ದ್ರಾವಿಡ್ ತಮಗೆ ನೀಡಿದ್ದ ಬೆಂಬಲವನ್ನು ಮರೆತಂತೆ ಆಡಿದರು. ಉತ್ತಮ ಬ್ಯಾಟಿಂಗ್ ಮಾಡಿ ದ್ರಾವಿಡ್-ಗೆ ನೆರವಾದ ನಿದರ್ಶನಗಳು ಬಹಳ ಕಡಿಮೆ. ನಾಯಕನಾದವನಿಗೆ ತಂಡದಲ್ಲಿರುವ ಉಳಿದ ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾ ಸಪೋರ್ಟ್ ಮಾಡಬೇಕು. ದ್ರಾವಿಡ್ ಮಾಡಿದರು. ಆದರೆ ಅವರು ನಾಯಕನಾದಾಗ ಉಳಿದ ಹಿರಿಯ ಆಟಗಾರರು ಮುಗ್ಗರಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಭಾರತದ ಸಫಲ ನಾಯಕನೆಂದು ಸೌರವ್ ಗಂಗೂಲಿ ಹೆಸರು ಗಳಿಸಿರಬಹುದು. ಆದರೆ ಆ ಸಫಲತೆಯ ಹಿಂದೆ ರಾಹುಲ್ ದ್ರಾವಿಡ್ ಕೊಡುಗೆ ತುಂಬಾ ಇದೆ. ’ದ್ರಾವಿಡ್-ಗೆ ರನ್ನು ಗಳಿಸಲು ಆಸ್ಪದ ಕೊಡಬಾರದು. ಕುಂಬ್ಳೆಗೆ ವಿಕೆಟ್ ಕೊಡಬಾರದು’ ಎಂಬ ಸರಳ ಪ್ಲ್ಯಾನ್-ನೊಂದಿಗೆ ಎದುರಾಳಿ ತಂಡಗಳು ಅಂಕಣಕ್ಕಿಳಿಯುತ್ತಿದ್ದವು. ಆದರೆ ಆ ಪ್ಲ್ಯಾನ್ ಯಶಸ್ವಿಯಾದದ್ದೇ ಅಪರೂಪಕ್ಕೆ ಎಲ್ಲಾದರೂ ಒಮ್ಮೆ.

ತಾನು ಯಾವ ಹೊಡೆತಗಳನ್ನು ಸರಿಯಾಗಿ ಆಡಬಲ್ಲೆನೋ ಆ ಹೊಡೆತಗಳನ್ನು ಮಾತ್ರ ದ್ರಾವಿಡ್ ಆಡುತ್ತಾರೆ. ಅವರೊಬ್ಬ ಪರ್ಫೆಕ್ಷನಿಸ್ಟ್. ಯಾವುದಾದರೂ ಹೊಡೆತವನ್ನು ಸರಿಯಾಗಿ ಅಭ್ಯಾಸ ಮಾಡಿಲ್ಲವೋ ಅದನ್ನು ಅವರು ಪ್ರಯತ್ನಿಸುವುದೂ ಇಲ್ಲ. ತಾನು ಯಾವುದರಲ್ಲಿ ಅತ್ಯುತ್ತಮನೋ ಅದನ್ನು ಮಾತ್ರ ದ್ರಾವಿಡ್ ಮಾಡುತ್ತಾರೆ. ಈ ಮಾತು ಅವರು ಕನ್ನಡ ಮಾತನಾಡುವುದಕ್ಕೂ ಅನ್ವಯಿಸುತ್ತದೆ. ದ್ರಾವಿಡ್ ಕನ್ನಡ ಬಲ್ಲವರು. ಆದರೆ ನಿರರ್ಗಳವಾಗಿ ಮಾತನಾಡಲಾರರು. ಆದ್ದರಿಂದ ಕನ್ನಡ ಮಾತನಾಡಲು ಅವರು ಪ್ರಯತ್ನಿಸುವುದಿಲ್ಲದಿರಬಹುದು. ದ್ರಾವಿಡ್, ನನಗೆ ಗೊತ್ತಿರುವ ಪ್ರಕಾರ ಹಿಂದಿ, ಇಂಗ್ಲೀಷ್ ಮತ್ತು ಮರಾಠಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಿದರೂ ದ್ರಾವಿಡ್ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂಬ ಅಸಮಾಧಾನ ಕೆಲವು ಕನ್ನಡಿಗರಿಗಿದೆ. ದ್ರಾವಿಡ್ ಒಬ್ಬ ಕನ್ನಡಿಗ ಅಂದವರು ಯಾರು? ದ್ರಾವಿಡ್ ಒಬ್ಬ ಮರಾಠಿಗ. ಆತನ ಹೆತ್ತವರು ನೆಲೆ ನಿಂತದ್ದು ಬೆಂಗಳೂರಿನಲ್ಲಿ. ಹಾಗಾಗಿ ದ್ರಾವಿಡ್ ಕರ್ನಾಟಕಕ್ಕೆ ಆಡುತ್ತಿರುವುದು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೊದಲು ರಾಜ್ಯ ತಂಡಕ್ಕೆ ನಿಷ್ಠನಾಗಿ ಫುಲ್ ಟೈಮ್ ಸೇವೆ ಸಲ್ಲಿಸಿದ್ದಾರೆ. ನಂತರವೂ ಅವಕಾಶ ಸಿಕ್ಕಾಗೆಲ್ಲಾ ರಾಜ್ಯ ತಂಡಕ್ಕೆ ಆಡಿದ್ದಾರೆ. ಈ ಪ್ರಸಕ್ತ ಋತುವಿನಲ್ಲಿ (೨೦೦೯-೧೦) ರಾಜ್ಯ ತಂಡದ ಯುವ ಆಟಗಾರರನ್ನು ಅವರು ಪ್ರೇರೇಪಿಸಿ ತಂಡವನ್ನು ಮುನ್ನಡೆಸಿದ ರೀತಿ ಪ್ರಶಂಸನೀಯ. ನಟ ಮುತ್ತುರಾಜ್ ತೀರಿಕೊಂಡಾಗ ಕಪ್ಪು ಪಟ್ಟಿ ಧರಿಸಿಕೊಂಡು ಆಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ’ಆತ ಕನ್ನಡ ಮಾತನಾಡುವುದಿಲ್ಲ’ ಎಂದು ಹುಳುಕು ಹುಡುಕುವುದು ಯಾಕೆ? ದ್ರಾವಿಡ್ ಒಬ್ಬ ಕ್ರಿಕೆಟಿಗ. ಕ್ರಿಕೆಟ್ ಆಡುವುದು ಆತನ ಕೆಲಸ ಮತ್ತು ಅದನ್ನು ಆತ ಶ್ರದ್ಧೆಯಿಂದ ಮಾಡುತ್ತಿದ್ದಾನಲ್ಲವೇ?

ಭಾಗ ಒಂದು. ಭಾಗ ಮೂರು.