ಏರಿಕಲ್ಲಿಗೆ ಚಾರಣ ಮಾಡುವುದರ ಸಲುವಾಗಿ ಮಾರ್ಚ್ 25ರಂದು ಮುಂಜಾನೆ 6:30ಕ್ಕೆ ಮಂಗಳೂರಿನಿಂದ ಚಾರ್ಮಾಡಿಗೆ ಹೊರಡುವುದುದೆಂದು ಆಯೋಜಕ ದಿನೇಶ್ ಹೊಳ್ಳರು ತಿಳಿಸಿದ್ದರು. ಉತ್ತರ ಕರ್ನಾಟಕದ ಊರುಗಳಿಂದ ಮಂಗಳೂರಿಗೆ ಬರುವ ಬಸ್ಸುಗಳು ಮುಂಜಾನೆ 3.30ರಿಂದ 5.30ರೊಳಗೆ ಉಡುಪಿ ಹಾದುಹೋಗುತ್ತವೆ. ಈ ಬಸ್ಸುಗಳಲ್ಲೊಂದರಲ್ಲಿ ತೆರಳುವ ಎಂದು ಮುಂಜಾನೆ 5ಕ್ಕೆ 5 ನಿಮಿಷ ಇರುವಾಗ ಉಡುಪಿ ಬಸ್ಸು ನಿಲ್ದಾಣಕ್ಕೆ ಬಂದರೆ, ಬರುವೆನೆಂದು ತಿಳಿಸಿದ್ದ ರಾಕೇಶ್ 'ಜಿರಾಫೆ' ಹೊಳ್ಳ ಎಲ್ಲೂ ಕಾಣುತ್ತಿರಲಿಲ್ಲ. ಫೋನಾಯಿಸಿದರೆ, 'ಇಲ್ಲೇ ಇದ್ದೇನೆ. ಹಿಂದೆ ತಿರುಗಿ ನೋಡಿ' ಎಂದ. ಹೊಟೇಲೊಂದರೊಳಗೆ ತಿಂಡಿ ಆರ್ಡರ್ ಮಾಡಿ ಆರಾಮವಾಗಿ ಕುಂತಿದ್ದ. ನನಗೆ 6.30ರೊಳಗೆ ಮಂಗಳೂರು ಯೂತ್ ಹಾಸ್ಟೆಲ್ ತಲುಪುವ ತವಕವಿದ್ದರೆ, ಈತನಿಗೆ ತಿನ್ನುವ ತವಕ!
5.10ಕ್ಕೆ ಕೂಡಲಸಂಗಮದಿಂದ ಬಂದ ಬಸ್ಸನ್ನೇರಿದೆವು. ಹಿಂದಿನ ದಿನ ರಾತ್ರಿ ತಡವಾಗಿ ಮಲಗಿದ್ದರಿಂದ ಈಗ ಬಸ್ಸಲ್ಲಾದರೂ ಮಲಗೋಣವೆಂದರೆ ನಿರ್ವಾಹಕರು ಬಿಟ್ಟರೆ ತಾನೆ? ಆತನಿಗೆ ಕೊಟ್ಟ ಟಿಕೇಟುಗಳಿಗೂ ಇದ್ದ ಪ್ರಯಾಣಿಕರಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಆತನದ್ದು 'ಟಿಕೀಟು 37 ಕೊಟ್ಟಿನ್ರಿ, ಮಂದಿ 38 ಅದಾರ್ರಿ' ಎಂಬುದೊಂದೇ ವರಾತ. ಎಲ್ಲರ ಟಿಕೇಟುಗಳನ್ನು ನಾಲ್ಕೈದು ಸಲ ಪರೀಕ್ಷಿಸಿದರೂ ಹೊಂದಾಣಿಕೆಯಾಗಲಿಲ್ಲ. 'ತಲಿ ಕೆಡಾಕ್-ಹತ್ತೈತ್ರಿ' ಎನ್ನುತ್ತಾ ಮತ್ತೊಂದು ಸಲ ಪರೀಕ್ಷಿಸಲು ಮುಂದಾದಾಗ ಒಂದಿಬ್ಬರಿಂದ ಬೈಸಿಕೊಂಡೂ, ನಮ್ಮಿಂದ ತಮಾಷೆ ಮಾಡಿಸಿಕೊಂಡಿದ್ದೂ ಆಯಿತು. ಆ ಬಡಪಾಯಿಗೆ, ಎಲ್ಲಾದರೂ 'ಚೆಕ್ಕಿಂಗ್'ಗೆ ಬಂದುಬಿಟ್ಟರೆ ನೌಕರಿ ಕಳಕೊಳ್ಳುವ ಭಯ. ಮಂಗಳೂರಿಗೆ ಕೇವಲ 10ಕಿಮಿ ಇರುವಾಗಲೇ ಈ ಭೂಪನಿಗೆ ಅರಿವಾದ್ದು, ತಾನು ಇಬ್ಬರು ಮಕ್ಕಳಿಗೆ ಎರಡು ಅರ್ಧ ಟಿಕೇಟ್ ಬದಲಾಗಿ ಒಂದು ಫುಲ್ ಟಿಕೇಟ್ ಕೊಟ್ಟಿದ್ದೇನೆಂದು! ತಲೆ ಚಚ್ಚಿಕೊಳ್ಳುವ ಸರದಿ ನಮ್ಮದಾಗಿತ್ತು.
ಮೋಹನನ 'ಶಕ್ತಿ' ಟೆಂಪೊದಲ್ಲಿ ಚಾರ್ಮಾಡಿ ಘಟ್ಟದ ನಾಲ್ಕನೇ ತಿರುವಿನ ಬಳಿ ತಲುಪಿದಾಗ 10 ಗಂಟೆಯಾಗಿತ್ತು. ಇಲ್ಲಿಂದ ಏರಿಕಲ್ಲಿಗೆ ಆರೋಹಣ ಮಾಡಿ, ಅವರೋಹಣವನ್ನು ಚಾರ್ಮಾಡಿ ತಲುಪುವಂತೆ ಮಾಡುವುದೆಂದು ತೀರ್ಮಾನವಾಗಿತ್ತು. ಮೊದಲ 120 ನಿಮಿಷಗಳ ಚಾರಣ ದಟ್ಟವಾದ ಕಾಡಿನ ನಡುವೆ ಸಂಪೂರ್ಣ ಏರುಹಾದಿ. ಅಲ್ಲಲ್ಲಿ ಅನೆಗಳ ಲದ್ದಿ. ಚಾರಣ ನಿಧಾನಗತಿಯಲ್ಲಿ ಸಾಗುತ್ತಿತ್ತು. ಕಾಡಿನ ಹಾದಿಯನ್ನು ಮನಸಾರೆ ಆನಂದಿಸುತ್ತಾ ಏರಿಕಲ್ಲು ಮೊದಲ ಬಾರಿಗೆ ದೂರದಲ್ಲಿ ತನ್ನ ದರ್ಶನ ಮಾಡುವ ಸ್ಥಳ ತಲುಪಿದಾಗ ಸಮಯ 12 ಆಗಿತ್ತು. ಏರಿಕಲ್ಲಿನ ಬದಿಯಿಂದಲೇ ಸಾಗಿ ನಂತರ 'ಯು ಟರ್ನ್' ತಗೊಂಡು ತುದಿಗೆ ಸಾಗುತ್ತಿತ್ತು ಚಾರಣದ ಹಾದಿ.
ಕಾಡಿನ ಹಾದಿ ಮುಗಿದ ಬಳಿಕ ನಂತರದ ಹಾದಿ ಸುಂದರವಾಗಿತ್ತು. ದೂರದಲ್ಲಿ ಕಾಣುವ ಬಾರೆಕಲ್ಲು ಮತ್ತು ಕೊಡೆಕಲ್ಲು, ವಿರುದ್ಧ ದಿಕ್ಕಿನಲ್ಲಿರುವ ಅಮೇದಿಕಲ್ಲು ಮತ್ತು ಮಿಂಚುಕಲ್ಲು ಇತ್ಯಾದಿಗಳ ಸೌಂದರ್ಯವನ್ನು ಆಸ್ವಾದಿಸುತ್ತಾ, ನಡುನಡುವೆ ಸಿಗುವ ಸಣ್ಣ ಶೋಲಾ ಕಾಡುಗಳಲ್ಲಿ ವಿಶ್ರಾಂತಿ ಪಡೆಯುತ್ತಾ, 'ಯು ಟರ್ನ್' ತಗೊಳ್ಳುವಲ್ಲಿ ಬಂದೆವು. ಇಲ್ಲಿದ್ದ ಚಡಾವು ಸುಮಾರು 110 ಡಿಗ್ರಿ ಕೋನದಾಗಿದ್ದು ಕಠಿಣವಾಗಿತ್ತು. ಎಷ್ಟೇ ಹತ್ತಿದರೂ ಮುಗಿಯುತ್ತಿರಲಿಲ್ಲ. ಈ ಏರುಹಾದಿಗೆ ಹಿಡಿಶಾಪ ಹಾಕುತ್ತಾ ಮೇಲೇರಿದೆವು. ಅಲ್ಲಲ್ಲಿ ಇದ್ದ ಸಣ್ಣ ಸಣ್ಣ ಪೊದೆಗಳನ್ನು ಆಧಾರವಾಗಿ ಬಳಸಿ ಮೇಲೆ ತಲುಪಿದಾಗ ದೂರದಲ್ಲಿ ಮತ್ತೊಂದು ಆಕಾರದಲ್ಲಿ ಏರಿಕಲ್ಲಿನ ದರ್ಶನ. ಹಾಗೆ ಮುನ್ನಡೆದು ಏರಿಕಲ್ಲಿನ ಬುಡ ತಲುಪಿದಾಗ ಸಮಯ ಮಧ್ಯಾಹ್ನ 2.
ಏರಿಕಲ್ಲಿನ ಮೇಲೆ ಹೋಗುವುದು ಕಷ್ಟಸಾಧ್ಯ. ಸರಿಯಾದ ದಾರಿಯಿಲ್ಲ. ಏರಿಕಲ್ಲಿನ ಬುಡದಲ್ಲೇ ಕುಳಿತು ವಿಶ್ರಾಂತಿ ಪಡೆಯುತ್ತ ಅರ್ಧ ಗಂಟೆ ಕಳೆದೆವು. ಚಾರ್ಮಾಡಿ ಘಟ್ಟದ ದೃಶ್ಯ ಸುಂದರವಾಗಿತ್ತು. ಹಾಗೆನೇ ಮತ್ತೊಂದು ಬದಿಯಲ್ಲಿ ಕಾಣುತ್ತಿತ್ತು ಚಾರ್ಮಾಡಿ ಮೂಲಕ ಹಾದುಹೋಗುವ ರಸ್ತೆ ಮತ್ತು ನೇತ್ರಾವತಿ ನದಿಯ ಹರಿವು. ಎಲ್ಲಾ ಪ್ರಮುಖ ಬೆಟ್ಟಗುಡ್ಡಗಳು 'ನಾನು ಇಲ್ಲಿದ್ದೇನೆ', 'ತಾನು ಇಲ್ಲಿದ್ದೇನೆ' ಎಂಬಂತೆ ಕಾಣುತ್ತಿದ್ದವು. ಆಗಾಗ ಬೀಸುವ ತಂಗಾಳಿ ಹಿತವಾಗಿತ್ತು. ಏರಿಕಲ್ಲು ಚಾರ್ಮಾಡಿ ಶ್ರೇಣಿಯ ಮೊದಲ ಶಿಖರ. ನಂತರವೇ ಬಾರೆಕಲ್ಲು, ಕೊಡೆಕಲ್ಲು, ದೊಡ್ಡೇರಿಬೆಟ್ಟ, ದುರ್ಗದಬೆಟ್ಟ, ಅಮೇದಿಕಲ್ಲು, ಜೇನುಕಲ್ಲುಗುಡ್ಡ ಇತ್ಯಾದಿಗಳು ಬರುತ್ತವೆ.
ಸರಿಯಾಗಿ 3 ಗಂಟೆಗೆ ಚಾರ್ಮಾಡಿ ದಾರಿಯಲ್ಲಿ ಏರಿಕಲ್ಲಿನಿಂದ ಅವರೋಹಣ ಪ್ರಾರಂಭ. ಸುಮಾರು 45 ನಿಮಿಷಗಳ ಬಳಿಕ ಮತ್ತೆ ಕಾಡಿನ ದಾರಿ ಆರಂಭ. ಇಲ್ಲಿಂದಲೇ ಏರಿಕಲ್ಲನ್ನು ಕೊನೆಯ ಬಾರಿಗೆ ನೋಡಬಹುದು. ಮತ್ತೊಂದು ಆಕಾರದಲ್ಲಿ ಏರಿಕಲ್ಲು ಇಲ್ಲಿಂದ ಕಾಣುತ್ತಿತ್ತು. ನಂತರ ಕಾಡು ಹೊಕ್ಕ ನಾವು ಮುಂದಿನ 3 ತಾಸು ಕಾಡಿನಿಂದ ಹೊರಗೆ ಬರಲಿಲ್ಲ. ಪೂರ್ಣವಾಗಿ ಇಳಿಜಾರಿನ ದಾರಿಯಾಗಿದ್ದು ದಟ್ಟವಾದ ಕಾಡಿನ ನಡುವೆ ಮಾರ್ಗದರ್ಶಿ ಇಸುಬು ನಮ್ಮನ್ನು ಕರೆದೊಯ್ಯುತ್ತಿದ್ದ. ಅದಾಗಲೇ ಕತ್ತಲಾಗುತ್ತಿತ್ತು. ಚಂದ್ರನ ಬೆಳಕು ಸ್ವಲ್ಪ ಇದ್ದಿದ್ದರಿಂದ ದಾರಿ ಅಸ್ಪಷ್ಟವಾಗಿಯಾದರೂ ಕಾಣುತ್ತಿತ್ತು. ಸಹಚಾರಣಿಗರೊಬ್ಬರಿಗೆ 'ಕ್ರ್ಯಾಂಪ್ಸ್' ಬಂದು ಸ್ವಲ್ಪ ತೊಂದರೆಯಾಗಿದ್ದರಿಂದ ಮತ್ತು ಕತ್ತಲಾಗುತ್ತಿದ್ದರಿಂದ ಚಾರ್ಮಾಡಿ ಸಮೀಪಿಸುತ್ತಿದ್ದಂತೆ ಚಾರಣದ ವೇಗ ನಿಧಾನಗತಿಯಲ್ಲಿ ಸಾಗುತ್ತಿತ್ತು.
ಮಾರ್ಗದರ್ಶಿ ಇಸುಬುನ ಪ್ರಕಾರ ಕತ್ತಲಾಗುತ್ತಿರುವಾಗ ನಾವಿನ್ನೂ ಆನೆಗಳು ಓಡಾಡುವ ಸ್ಥಳದಲ್ಲೇ ಇದ್ದೆವು ಮತ್ತು ಅದು ಕರಡಿಗಳು ಅಲೆದಾಡುವ ಸ್ಥಳ ಕೂಡಾ. ಆತನ ಎಲ್ಲಾ ಮಾತುಗಳನ್ನು ನಂಬುವಂತೆ ಇಲ್ಲ. ಕತ್ತಲಲ್ಲೂ ಕಾಳಿಂಗಸರ್ಪ ನೋಡಿದ ಮಹಾನುಭಾವ ಈ ಇಸುಬು! ಈ ಇಸುಬುನ ಕಾಡಿನ ಅನುಭವಗಳು ಸಕತ್ತಾಗಿವೆ. ಮುಂದೆ ಯಾವಾಗಾದರೂ ಅವುಗಳ ಬಗ್ಗೆ ಬರೆಯುವೆ. ಚಾರ್ಮಾಡಿ ತಲುಪಿದಾಗ ರಾತ್ರಿ 8.15. ಮಂಗಳೂರು ತಲುಪಿ, ಸಿಂದಗಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಲ್ಲಿ ಉಡುಪಿ ತಲುಪಿ ಮನೆಗೆ ಎಂಟ್ರಿ ಹೊಡೆದಾಗ ಸರಿಯಾಗಿ ಮಧ್ಯರಾತ್ರಿ 12.