ಗುರುವಾರ, ಮಾರ್ಚ್ 22, 2007

ಕಲ್ಯಾಣಿ ನಿಸರ್ಗ ಧಾಮದ ಸೌಂದರ್ಯ


ಹೊಸನಗರ ತಾಲೂಕಿನ ನಿಟ್ಟೂರಿನಲ್ಲೊಂದು ಪ್ರಕೃತಿ ಪ್ರೇಮಿಯೊಬ್ಬರು ನಡೆಸುವ ನಿಸರ್ಗ ಧಾಮವೊಂದಿದೆ ಎಂದು ಕೇಳಿದ್ದೆ ಹಾಗೂ ಓದಿದ್ದೆ ಕೂಡಾ. ಕಲ್ಯಾಣಿ ನಿಸರ್ಗ ಧಾಮ ಎಂಬ ಸುಂದರ ಹೆಸರು ಈ ನಿಸರ್ಗ ಧಾಮಕ್ಕೆ. ಕಳೆದ ರವಿವಾರ ಗೆಳೆಯ ರಾಕೇಶ್ ಹೊಳ್ಳನೊಂದಿಗೆ ಮಧ್ಯಾಹ್ನ 3 ಗಂಟೆಗೆ ಕಲ್ಯಾಣಿಗೆ ತಲುಪಿದ ನಮ್ಮನ್ನು ಎದುರುಗೊಂಡವರು ಶ್ರೀ ಕೃಷ್ಣಮೂರ್ತಿಯವರು. ಆತ್ಮೀಯತೆಯಿಂದ ಬರಮಾಡಿಸಿ ಮರದ ನೆರಳಿನಲ್ಲಿ ಕುರ್ಚಿ ಹಾಕಿ ಮತ್ತಷ್ಟು ಆತ್ಮೀಯತೆಯಿಂದ ಕುಶಲೋಪಚರಿ ವಿಚಾರಿಸಿಕೊಂಡರು. ಉಡುಪಿಯಿಂದ ಈ ಉರಿ ಬಿಸಿಲಿನಲ್ಲಿ ಬಂದಿದ್ದೀರಾ, ಊಟ ಮಾಡುವಿರಂತೆ, ನಂತರ ಆರಾಮಾವಾಗಿ ಕೂತು ಮಾತಾಡೋಣ ಎಂದು ಅಡಿಗೆ ಮನೆ ಎಂಬ ಕುಟೀರಕ್ಕೆ ಕರೆದೊಯ್ದರು. ’ಊಟ’ ಎಂದ ಕೂಡಲೇ ನಮಗೆ ಮತ್ತಷ್ಟು ಹಸಿವಾಗತೊಡಗಿತು. ನಿಟ್ಟೂರಿನಲ್ಲಿ ನಾಲ್ಕೈದು ಬಾಳೆಹಣ್ಣುಗಳನ್ನು ಇದೇ ಕಾರಣಕ್ಕಾಗಿ ಖರೀದಿಸಿದ್ದೆವು. ಆದರೆ ಇಲ್ಲಿ ಕೃಷ್ಣಮೂರ್ತಿಯವರು ’ಊಟ ಮಾಡುವಿರಂತೆ’ ಎಂದಾಗ ಸ್ವರ್ಗಕ್ಕೆ 3ರೇ ಗೇಣು!

ಅನಿರೀಕ್ಷಿತವಾಗಿ ಸಿಕ್ಕಿದ ಊಟವಂತೂ ಭಾರೀ ರುಚಿ. ಆಪ್ಪಟ ಮಲೆನಾಡಿನ ಮೆನು. ಹೊಟ್ಟೆ ಶುದ್ಧವಾಗುತ್ತೆ ಕುಡೀರಿ ಎಂದು ಲೋಟಗಟ್ಟಲೆ ಕೊಟ್ಟ ’ತಂಬಳಿ’ಯಂತೂ ಗ್ರೇಟ್. ಅತೀಯಾಗಿ ಶರಾಬು ಕುಡಿಯುವವರಿಗೆ ಈ ’ತಂಬಳಿ’ ಒಳ್ಳೆಯದು, ಹೊಟ್ಟೆ ಶುದ್ಧವಾಗಿಬಿಡುತ್ತೆ ಎಂದು ಕೃಷ್ಣಮೂರ್ತಿಯವರು ಹೇಳಿದಾಗ, ಎಲ್ಲರಿಗೂ ನಗು. ತನ್ನ ಪ್ರಮಾದವನ್ನು ಅರ್ಥ ಮಾಡಿಕೊಂಡ ಕೃಷ್ಣಮೂರ್ತಿಯವರು ನಾಚಿಕೊಂಡು ಕ್ಷಮೆ ಯಾಚಿಸಿ ಮತ್ತಷ್ಟು ನಗು ಬರಿಸಿದರು. ಅಲ್ಲಿ ಉಳಿದುಕೊಂಡಿದ್ದ ಬೆಂಗಳೂರಿನ 10 ಜನರ ಶ್ರೀಮಂತ ಕುಟುಂಬವೊಂದು ಭರ್ಜರಿಯಾಗೇ ಊಟ ಮಾಡಿತು. ಇನ್ನೊಂದು ಗುಂಪು ಕೊಡಚಾದ್ರಿಗೆ ಚಾರಣಕ್ಕೆ ಹೋಗಿದ್ದರೆ ಮತ್ತೊಂದು ಗುಂಪು ಕೊಲ್ಲೂರಿಗೆ ಮೂಕಾಂಬಿಕೆಯ ದರ್ಶನಕ್ಕೆ ತೆರಳಿತ್ತು.

ನಂತರ ಭೇಟಿಯಾಯಿತು ಮಂಜಣ್ಣನವರದು. ಇವರೊಂದು ಭಲೇ ಯೋಗ ಪಟು. ಅಲ್ಲಲ್ಲಿ ಯೋಗ ಶಿಬಿರಗಳನ್ನು ನಡೆಸಿ ಹೆಸರು ಗಳಿಸಿದವರು. ದೊಡ್ಡ ಪ್ರಕೃತಿ ಪ್ರೇಮಿ ಹಾಗೇನೇ ಪ್ರಮುಖ ಸ್ಥಳಗಳಲ್ಲಿ ಉತ್ತಮ ಕನೆಕ್ಷನ್ ಉಳ್ಳ ದೊಡ್ಡ ಕುಳ ಕೂಡಾ. ತನ್ನದೇ ಸ್ವಂತ ಜಾಗದಲ್ಲಿ ಕುಟೀರಗಳನ್ನು ನಿರ್ಮಿಸಿ, ಶಾಂತ ಸ್ಥಳದಲ್ಲಿ ಒಂದೆರಡು ದಿನಗಳನ್ನು ಕಳೆದು ಹೋಗುವವರ ಸಲುವಾಗಿ ರೂಪುಗೊಂಡ ಕಲ್ಯಾಣಿ ನಿಸರ್ಗ ಧಾಮದ ರೂವಾರಿ ಈ ಮಂಜಣ್ಣ. ಉತ್ತಮ ಮಾತುಗಾರ. ಪರಿಸರದ ಬಗ್ಗೆ ವಿಪರೀತ ಕಾಳಜಿ. ಕಲ್ಯಾಣಿ ನಿಸರ್ಗ ಧಾಮವನ್ನು ಇನ್ನಷ್ಟು ವಿಸ್ತರಿಸಬೇಕು, ಮತ್ತಷ್ಟು ಸೌಕರ್ಯಗಳನ್ನು ಬರುವವರಿಗೆ ನೀಡಬೇಕು ಎಂದು ಸುಮಾರು ಅರ್ಧ ಗಂಟೆ ಹರಟಿದರು.

ಶಿವಮೊಗ್ಗ ಯೂತ್ ಹಾಸ್ಟೆಲ್ ಜತೆಗೆ ನಿಕಟ ಸಂಪರ್ಕ ಹೊಂದಿರುವ ಮಂಜಣ್ಣ, 3-4 ದಿನಗಳ ಚಾರಣದ ದಾರಿಗಳನ್ನು ಸಿದ್ಧಪಡಿಸಿ ಅದನ್ನು ಕಾರ್ಯರೂಪಕ್ಕೆ ತರುವ ಹಂತದಲ್ಲಿದ್ದಾರೆ. ಇದರಲ್ಲಿ ’ಪಂಚ ಜಲಪಾತ ದರ್ಶನ’ ಎಂಬ 4 ದಿನಗಳ ಚಾರಣದ ಯೋಜನೆ ನನಗೆ ಬಹಳ ಹಿಡಿಸಿತು. ಜೋಗದಿಂದ ಶುರು ಮಾಡಿ, ದಬ್ಬೆ ಮುಗಿಸಿ, ಬೆಳ್ಳಿಗುಂಡಿ ಹಾದಿಯಾಗಿ, ಅರಶಿನಗುಂಡಿಯಲ್ಲಿಳಿದು ನಂತರ ಹಿಡ್ಲುಮನೆಯಲ್ಲಿ ಮುಕ್ತಾಯಗೊಳಿಸುವುದು. ಈ ಐದೂ ಜಲಪಾತಗಳನ್ನು ನಾನು ನೋಡಿದ್ದರೂ ಚಾರಣದ ಹಾದಿ ವಿಶಿಷ್ಟವಾಗಿರುವುದರಿಂದ ಆಸಕ್ತಿ ಹುಟ್ಟಿತು.


ನಿಸರ್ಗ ಧಾಮದೊಳಗೆ ಮರದ ಮೇಲೊಂದು ಸುಂದರ ಮಚಾನ್ ಇದೆ, ಪಕ್ಕದಲ್ಲೇ ಮಲ್ಲಕಂಭ, ರೋಪ್ ಲ್ಯಾಡರ್, ರೋಪ್ ಕ್ಲೈಂಬಿಂಗ್ ಮತ್ತು ಇನ್ನೂ ಇತರ ಟೈಮ್ ಪಾಸ್ ಮಾಡಲು ಬೇಕಾಗುವ ಎಲ್ಲಾ ವಿಧಾನಗಳಿವೆ. ಜೋಕಾಲಿಯೂ ಇದೆ. ಹತ್ತು ನಿಮಿಷ ನಡೆದರೆ ಲಿಂಗನಮಕ್ಕಿ ಹಿನ್ನೀರಿನ ಪ್ರಶಾಂತ ತಟ. ದೋಣಿಯಲ್ಲಿ ಕುಳಿತು 3ಕಿಮಿ ಪ್ರಯಾಣಿಸಿ ಕುಕ್ಕನಗುಡ್ಡಕ್ಕೊಂದು ಸುತ್ತು ಹಾಕಿ ಬರಬಹುದು. 2-3 ದಿನಗಳನ್ನು ಏಕಾಂತದಲ್ಲಿ, ಗೌಜಿ ಗಲಾಟೆಯಿಂದ ದೂರ ಕಳೆಯುವುದಿದ್ದಲ್ಲಿ ಕಲ್ಯಾಣಿ ಒಂದು ಸೂಕ್ತ ಸ್ಥಳ. ಈ ಬಾರಿ ವೇಗವಾಗಿ ಹೋಗಿ ಅಷ್ಟೆ ವೇಗವಾಗಿ ಹಿಂತಿರುಗುದೆವು. ಮುಂದಿನ ಬಾರಿ ವೇಗವಾಗಿ ಹೋಗಿ ನಿಧಾನವಾಗಿಯೇ ಹಿಂತಿರುಗುವುದು.

3 ವಾರಗಳ ಹಿಂದೆ ಕಾರ್ಗಲ್ ಸಮೀಪದ ಹುಕ್ಕಲು ಎಂಬಲ್ಲಿಗೆ ಭೇಟಿ ನೀಡಿದ್ದೆ. ತಲಕಳಲೆ ಹಿನ್ನೀರಿನ ದಂಡೆಯಲ್ಲಿರುವ ಹುಕ್ಕಲಿನಲ್ಲಿ ಸ್ಥಳೀಯರೆ ಒಂದೆರಡು ಕುಟೀರಗಳನ್ನು ಹಾಕಿ ಬಂದವರಿಗೆ ಉಳಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ ಕಲ್ಯಾಣಿಯಲ್ಲಿರುವಂತಹ ಅದ್ಭುತ ವ್ಯವಸ್ಥೆ ಹುಕ್ಕಲಿನಲ್ಲಿಲ್ಲ. ಹುಕ್ಕಲಿನ ಈ ವ್ಯವಸ್ಥೆಗಳನ್ನು ನೋಡಿಕೊಳ್ಳುವ ನರಹರಿಯವರಿಗೊಂದು ದೂರವಾಣಿ ಕರೆ ಮಾಡಿ ಮುಂಚಿತವಾಗಿ ತಿಳಿಸಿದರೆ ಊಟ, ಉಪಹಾರ ಇತ್ಯಾದಿಗಳೊಂದಿಗೆ ರಾಜ ಮರ್ಯಾದೆ ಸಿಗುವುದು ಖರೆ. ಒಂದೆರಡು ದಿನ ಉಳಕೊಂಡು 10ಕಿಮಿ ದೂರವಿರುವ ದಬ್ಬೆ ಜಲಪಾತಕ್ಕೆ ಚಾರಣ ಮಾಡಿ, ಅಲ್ಲೇ ಕಾಡಿನಲ್ಲಿ ತಿರುಗಾಡಿ, ಹಿನ್ನೀರಿನ ಅಗಾಧತೆಯನ್ನು ನೋಡುತ್ತ ಕಾಲಹರಣ ಮಾಡುವುದಾದರೆ ಹುಕ್ಕಲು ಇಸ್ ಎ ನೈಸ್ ಪ್ಲೇಸ್.

6 ಕಾಮೆಂಟ್‌ಗಳು:

VENU VINOD ಹೇಳಿದರು...

ವಾವ್ಹ್ ರಾಜೇಶ್,
ಪರವಾಗಿಲ್ಲ ಬಹಳ ಒಳ್ಳೆಯ ಸ್ಥಳವನ್ನೇ ನೋಡಿದ್ದೀರಿ. ಓದ್ತಾ ಹೋದಾಗ ಖುಷಿ ಆಯ್ತು. ಈ ಸ್ಥಳದ ಬಗ್ಗೆ ಹಿಂದೆ ಕೇಳಿದ್ದೆ. ಆದ್ರೆ ನೀವು ಕೊಟ್ಟ ವಿವರಗಳು ಅಮೂಲ್ಯ. ಚಿತ್ರಗಳೂ ಸುಂದರ.

ಸಿಂಧು sindhu ಹೇಳಿದರು...

kalyanI mattu hukkalu eradoo kadeya - dooravani details - kottare sahaayavaguttade.
Thanks for sharing the experience.

ರಾಜೇಶ್ ನಾಯ್ಕ ಹೇಳಿದರು...

ವೇಣು,
ಧನ್ಯವಾದಗಳು. ಸಾಧ್ಯವಾದಲ್ಲಿ ಕಲ್ಯಾಣಿಗೆ ಭೇಟಿ ನೀಡಿರಿ. ಚೆನ್ನಾಗಿರುವ ಸ್ಥಳ. ಸಿಗುವ ರಾಜೋಪಚಾರದಿಂದ ಒಂದೆರಡು ದಿನ ಹೆಚ್ಚೇ ಉಳಿಯಲು ಮನಸ್ಸಾದರೆ ಆಶ್ಚರ್ಯವಿಲ್ಲ!

ಸಿಂಧು,
ಕಲ್ಯಾಣಿ ದೂರವಾಣಿ: ಕೃಷ್ಣಮೂರ್ತಿ - 9449265804 ಮತ್ತು ಮಂಜಣ್ಣ - 9449100850.

ಹುಕ್ಕಲು ದೂರವಾಣಿ: ನರಹರಿ - (08186)240543

Sushrutha Dodderi ಹೇಳಿದರು...

ತುಂಬಾ informative ಆಗಿದೆ. ಲಹರಿಯೊಂದಿಗೆ ಬೆರೆತ ಒಳ್ಳೆಯ ಪ್ರವಾಸ ಬರಹ

ಸಿಂಧು sindhu ಹೇಳಿದರು...

ಧನ್ಯವಾದಗಳು ರಾಜೇಶ್,

ನಿನ್ನೆ ಗಡಿಬಿಡಿಯಲ್ಲಿದ್ದೆ.. ಪ್ರವಾಸಕಥನವನ್ನು ಆಕರ್ಶಕವಾಗಿ ಮತ್ತು ಉಪಯುಕ್ತ ವಿವರಗಳೊಂದಿಗೆ ಬರೆಯುವುದು ಅಪರೂಪ. ಚೆನ್ನಾಗಿ ಬರೆದಿದ್ದೀರ.. ಯಾವಾಗ ಹೋದೇನೋ ಎಂದೆನ್ನಿಸಿದೆ..

ರಾಜೇಶ್ ನಾಯ್ಕ ಹೇಳಿದರು...

ಸುಶ್ರುತ,
ಒಳ್ಳೆಯ ಮಾತುಗಳಿಗೆ ಧನ್ಯವಾದಗಳು. ಆಗಾಗ ಬರುತ್ತಾ ಇರಿ ಇಲ್ಲಿಗೆ.

ಸಿಂಧು,
ಬಿಡುವು ಸಿಕ್ಕಾಗ ಕಲ್ಯಾಣಿಗೆ ಭೇಟಿ ನೀಡಿರಿ. ನಿಮಗೆ ಆ ಸ್ಥಳ ಇಷ್ಟವಾಗಬಹುದು.