ಪಂಕಜನಹಳ್ಳಿಯ ಮಲ್ಲಿಕಾರ್ಜುನ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ನಿರಾಭರಣ ಸುಂದರಿಯಂತೆ. ಯಾವುದೇ ಕೆತ್ತನೆಯಿಲ್ಲದಿದ್ದರೂ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವ ವಿಶಿಷ್ಟ ದೇವಾಲಯ. ದೀಪಸ್ತಂಭ, ಮಹಾದ್ವಾರ, ಪ್ರಾಕಾರ, ಗೋಪುರವುಳ್ಳ ನಂದಿ ಮಂಟಪ, ಮುಖಮಂಟಪ, ವಿಶಾಲ ಸುಖನಾಸಿ, ನವರಂಗ, ಪ್ರದಕ್ಷಿಣಾ ಪಥ, ಅಂತರಾಳ ಮತ್ತು ಗರ್ಭಗುಡಿ ಇವೆಲ್ಲವನ್ನು ಒಳಗೊಂಡಿರುವ ಪ್ರಾಚೀನ ದೇವಾಲಯ ಬಹಳ ಅಪರೂಪವಾಗಿ ಕಾಣಬರುತ್ತದೆ.
ಮಹಾದ್ವಾರದ ಮುಂದೆ ೪೦ ಅಡಿ ಎತ್ತರದ ಆಕರ್ಷಕ ದೀಪಸ್ತಂಭವಿದೆ. ಇದರ ಮೇಲೆ ದೀಪ ಇಡಲು ಸಣ್ಣ ಮಂಟಪವನ್ನು ರಚಿಸಲಾಗಿದೆ. ಮಹಾದ್ವಾರವು ಸುಮಾರು ೧೫ ಅಡಿ ಎತ್ತರವಿದ್ದು ಸುಂದರ ದ್ವಾರ ಮತ್ತು ಕಂಬಗಳನ್ನು ಹೊಂದಿದ್ದು, ಇದರ ಬಾಗಿಲುಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಮುಖಮಂಟಪ ಮತ್ತು ಮಹಾದ್ವಾರದ ನಡುವಿರುವ ನಂದಿಮಂಟಪದಲ್ಲಿ ಆಕರ್ಷಕ ನಂದಿಯ ಮೂರ್ತಿ ಇದೆ.
ಮುಖಮಂಟಪವೂ ವಿಶಾಲವಾಗಿದ್ದು ೧೨ ಕಂಬಗಳನ್ನು ಹೊಂದಿದೆ. ಛಾವಣಿ ದುರ್ಬಲಗೊಂಡಿರುವ ಕಾರಣ ಅಲ್ಲಲ್ಲಿ ಕೆಲವು ಹೆಚ್ಚುವರಿ ಕಂಬಗಳನ್ನು ಆಸರೆಯಾಗಿ ನೀಡಲಾಗಿದೆ. ವಿಶಾಲವಾಗಿರುವ ಸುಖನಾಸಿಯನ್ನು ದಾಟಿದರೆ ಸಿಗುವ ನವರಂಗದಲ್ಲಿ ಅಸ್ಪಷ್ಟ ಕೆತ್ತನೆಗಳಿರುವ ನಾಲ್ಕು ಕಂಬಗಳಿವೆ. ಸಣ್ಣ ಗಾತ್ರದ ನಂದಿಯನ್ನು ನವರಂಗದಲ್ಲಿರಿಸಲಾಗಿದೆ.
ಇಲ್ಲಿ ಪ್ರದಕ್ಷಿಣೆ ಹಾಕುವುದೇ ರೋಮಾಂಚಕ ಅನುಭವ. ಒಂದು ಸಣ್ಣ ಕಿಂಡಿಯಿಂದ ಒಳಬರುವ ಮಂದ ಬೆಳಕೇ ಇಲ್ಲಿ ಆಸರೆ. ಆ ಮಂದ ಬೆಳಕಿಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳುವಷ್ಟರಲ್ಲಿ ಅಲ್ಲಲ್ಲಿ ತಡಕಾಡುತ್ತಾ ಪ್ರದಕ್ಷಿಣೆ ಮುಗಿಸಿಯಾಗಿರುತ್ತದೆ.
ಶಿವಲಿಂಗಕ್ಕೆ ಮಲ್ಲಿಕಾರ್ಜುನನ ಆಕರ್ಷಕ ಮುಖವಾಡವನ್ನು ತೊಡಿಸಲಾಗಿತ್ತು. ಇಲ್ಲಿರುವ ಶಿವಲಿಂಗವನ್ನು ೧೦೧ ಲಿಂಗಗಳನ್ನು ಪ್ರತಿನಿಧಿಸುವ ೧೦೧ ಕಲ್ಲುಗಳನ್ನು ಒಟ್ಟುಗೂಡಿಸಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಸೀಮೆಯಲ್ಲಿ ಇಂದಿಗೂ ಬಹಳ ಪ್ರಸಿದ್ಧಿಯನ್ನು ಪಡೆದಿರುವ ದೇವಾಲಯ ಇದಾಗಿದೆ.
ಮಲ್ಲಿಕಾರ್ಜುನ ದೇವಾಲಯದ ಪಾರ್ಶ್ವದಲ್ಲೇ ಪಾರ್ವತಿ ದೇವಾಲಯವಿದೆ. ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದ್ದು, ಗರ್ಭಗುಡಿಯಲ್ಲಿರುವ ಪಾರ್ವತಿಯ ಮೂರ್ತಿ ಸುಂದರವಾಗಿದೆ. ಗರ್ಭಗುಡಿಯ ಮೇಲೆ ಸುಂದರ ಗೋಪುರವೂ ಇದೆ.
ಪಂಕಜನಹಳ್ಳಿಯ ಈ ದೇವಾಲಯಗಳ ನಿರ್ಮಾತೃ ಯಾರು ಮತ್ತು ಯಾವಾಗ ನಿರ್ಮಾಣಗೊಂಡವು ಎಂಬ ಮಾಹಿತಿ ದೊರಕಲಿಲ್ಲ. ತಮ್ಮಲ್ಲಿ ಯಾರಿಗಾದರೂ ಈ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿಬಿಡಿ.