ಶನಿವಾರ, ಆಗಸ್ಟ್ 18, 2007

ಕೊಡಗಿನ ಕೆಲವು ಬೆಡಗಿಯರು


ಅಗೋಸ್ಟ್ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ - ಕೊಡಗಿನ ನಾಲ್ಕಾರು ಜಲಧಾರೆಗಳಿಗೆ ಭೇಟಿ. ಇಲ್ಲಿ ಚಾರಣ ಇರಲಿಲ್ಲ. ಬರೀ ಪ್ರಯಾಣ. ೨೩ ಜನರ ತಂಡ ತೋಡಿಕಾನ ತಲುಪಿದಾಗ ಮುಂಜಾನೆ ೧೧ ಗಂಟೆ. ಅಲ್ಲಿಂದ ಅರ್ಧ ಗಂಟೆ ನಡೆದು, ೨ ಹಳ್ಳಗಳನ್ನು ದಾಟಿ ರಮಣೀಯವಾಗಿ ಧುಮುಕ್ಕುತ್ತಿದ್ದ ದೇವರಗುಂಡಿ ಜಲಧಾರೆಯ ಸಮೀಪ ತಲುಪಿದೆವು. ಇದೊಂದು ಸಣ್ಣ ಜಲಧಾರೆ, ೩೫ ಅಡಿ ಎತ್ತರವಿರಬಹುದು.

ತೋಡಿಕಾನಕ್ಕೆ ಮರಳಿ, ನಮ್ಮನ್ನೆಲ್ಲಾ ಹೊತ್ತು ಮೋಹನನ 'ಶಕ್ತಿ' ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಪ್ರವೇಶಿಸಿದ ಐದಾರು ಕಿಮಿ ಬಳಿಕ ಸಿಗುವ ದೇವರಕೊಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲೇ ಸುಮಾರು ೬೦ ಡಿಯಷ್ಟು ಎತ್ತರದಿಂದ ಧುಮುಕುವ ಜಲಧಾರೆಯೊಂದಿದೆ. ಇದಕ್ಕೆ ದೇವರಕೊಲ್ಲಿ ಜಲಧಾರೆ ಅಥವಾ ಅಬ್ಬಿಗೊಳ್ಳಿ ಎಂದೂ ಕರೆಯುತ್ತಾರೆ.

ಮಡಿಕೇರಿ ತಲುಪಿ ಅಬ್ಬಿ ಜಲಧಾರೆಗೆ ತೆರಳುವ ಪ್ಲ್ಯಾನ್ ಮೊದಲೇ ಇತ್ತು ಮತ್ತು ಎಲ್ಲರಿಗೂ ಅದರ ಬಗ್ಗೆ ತಿಳಿಸಲಾಗಿತ್ತು. ಮಡಿಕೇರಿಗೆ ೩ ಕಿಮಿ ಮೊದಲು ಸಿಗುವ ಬೈಪಾಸ್ ರಸ್ತೆಯಲ್ಲಿ, 'ಕಾರ್ಯಕ್ರಮದ ಆಯೋಜಕರು' ಎನಿಸಿಕೊಂಡವರು ಯಾರಿಗೂ ಮಾಹಿತಿ ನೀಡದೆ ನೇರವಾಗಿ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯತ್ತ ಚಲಿಸುವಂತೆ ಮುಂದೆ ಕೂತು ಮೋಹನನಿಗೆ ಮಾರ್ಗದರ್ಶನ ನೀಡಿದರು. ಹೆಚ್ಚಿನವರು ಅಬ್ಬಿ ಜಲಧಾರೆಯನ್ನು ನೋಡಿರಲಿಲ್ಲ. ಇದನ್ನು ಕಡೆಗಣಿಸಿ, 'ತಾವು ನೋಡಿದ್ದೇವೆ' ಎಂಬ ಮಾತ್ರಕ್ಕೆ ಆಯೋಜಕರು ಕೊನೆಯ ಕ್ಷಣದಲ್ಲಿ ಯಾರಿಗೂ ತಿಳಿಸದೆ ಅಬ್ಬಿ ಭೇಟಿಯನ್ನು ರದ್ದು ಮಾಡಿದ್ದರಿಂದ ಅವರು ಎಲ್ಲರಲ್ಲೂ ಕ್ಷಮೆ ಕೇಳಬೇಕು. ಕೊಡಗಿಗೆ ಭೇಟಿ ನೀಡಿ ಐದಾರು ಜಲಧಾರೆಗಳನ್ನು ನೋಡಿ ಬಂದೆ, ಆದರೆ ಅಬ್ಬಿ ನೋಡಲಿಲ್ಲ ಎಂದರೆ ನಗೆಪಾಟಲಾಗುವ ಪರಿಸ್ಥಿತಿ. ಆಯೋಜಕರು ಇಂತಹ ತಪ್ಪನ್ನು ಇನ್ನೆಂದು ಮಾಡದಿರಲಿ.

ಅಬ್ಬಿಯಾಲ ಜಲಧಾರೆ ನೋಡುವ ಪ್ಲ್ಯಾನ್ ಕೂಡಾ ಮೊದಲೇ ಇತ್ತು. ಈಗ ನೋಡಿದರೆ ಮೋಹನ 'ಶಕ್ತಿ'ಯನ್ನು ಮೂರ್ನಾಡು ಮಾರ್ಗವಾಗಿ ಓಡಿಸುತ್ತಿದ್ದ! ನಮಗ್ಯಾರಿಗೂ ಈ ಮೂರ್ನಾಡು ಎಲ್ಲಿ, ಅಬ್ಬಿಯಾಲಕ್ಕೆ ದಾರಿ ಎಲ್ಲಿ, ಯಾವ ದಾರಿ ಒಂದೂ ತಿಳಿಯದಾಗಿತ್ತು. ಆದರೆ ತನ್ನ ಮನದನ್ನೆಯನ್ನು ಭೇಟಿ ಮಾಡಲು ಆಗಾಗ ವಿರಾಜಪೇ ಟೆಗೆ ಎಡತಾಕುತ್ತಿದ್ದ ಸುಧೀರ್ ಕುಮಾರ್-ಗೆ ಕೊಡಗಿನ ದಾರಿಗಳು ಚಿರಪರಿಚಿತವಾಗಿದ್ದರಿಂದ ಅವರು ಕೂಡಲೇ ಅಲರ್ಟ್ ಆಗಿ, 'ಎಲ್ಲಿ ಹೋಗುತ್ತಿದ್ದೀರಿ? ಯಾಕೆ ಅಬ್ಬಿ ಇಲ್ಲ? ಈ ದಾರಿಯಲ್ಲಿ ಅಬ್ಬಿಯಾಲ ಕೂಡಾ ಸಿಗುವುದಿಲ್ಲ' ಎಂದು ಆಯೋಜಕರಿಗೆ ತಿವಿದರು. ಅಂತೂ ಕಡೆಗೆ ಮರಳಿ ಮಡಿಕೇರಿಗೆ ಬಂದು ಚೆಟ್ಟಳ್ಳಿ ಮಾರ್ಗವಾಗಿ ತೆರಳಿ ಸುಂದರ ಅಬ್ಬಿಯಾಲ ಜಲಧಾರೆಯನ್ನು ನೋಡಿದೆವು.


ಸುಮಾರು ೮೦ ಅಡಿ ಎತ್ತರದಿಂದ ೨ ಕವಲುಗಳಲ್ಲಿ ಸುಂದರವಾಗಿ ಧುಮುಕುತ್ತಿದ್ದ ಈ ಜಲಧಾರೆ ನೋಡಿ ಮನಸಾರೆ ಆನಂದಿಸಿದೆವು.

ಅಸಾಮಾನ್ಯ ಈಜು ಪಟು ಆಗಿದ್ದು, ವರ್ಷಕ್ಕೊಮ್ಮೆ ನಮ್ಮೊಂದಿಗೆ ಚಾರಣಕ್ಕೆ ಬರುವ ಮಹಾಶಯರೊಬ್ಬರು ತಾವು ಆಯೋಜಕರಲ್ಲದೆಯೂ ಆಯೋಜಕರ ಗೆಟಪ್ಪಿನಲ್ಲಿ ವರ್ತಿಸುತ್ತಾ, ಅಬ್ಬಿಯಾಲ ಜಲಧಾರೆಯನ್ನು ನೋಡುತ್ತಾ ನನ್ನಲ್ಲಿ, 'ಇದು ಫಾಲ್ಸ್ ಅಲ್ಲ! ಇದು ತೋಡು'!!!! ಎನ್ನುತ್ತಾ ತಾವು ಮತ್ತಷ್ಟು ಮೂರ್ಖರೆಂದು ಸಾಬೀತುಪಡಿಸಿದರು. ನಮ್ಮ 'ನಿಜವಾದ' ಆಯೋಜಕರು ಸುಮ್ಮನಿದ್ದು, ಇಂತಹ 'ಪೊಳ್ಳು' ಆಯೋಜಕರಿಗೆ ನಿರ್ಧಾರ ತೆಗೆದುಕೊಳ್ಳಲು ಯಾಕೆ ಬಿಡುತ್ತಿದ್ದರು ಎಂಬುದು ತಿಳಿಯಲಿಲ್ಲ. ಆದರೆ ಆ ದಿನ ರಾತ್ರಿ ತಡರಾತ್ರಿ ತನಕ ಮಲಗದೇ ಗಲಾಟೆ ಎಬ್ಬಿಸಿ ಉಳಿದವರಿಗೆ ತೊಂದರೆ ಕೊಡುತ್ತಿದ್ದ ಒಂದಿಬ್ಬರನ್ನು ಗದರಿಸುವ ಕೆಲಸವನ್ನು ಮತ್ತೆ ನಮ್ಮ 'ನಿಜವಾದ' ಆಯೋಜಕರೇ ಮಾಡಬೇಕಾಯಿತು. ಭಾಷಣ ಬಿಗಿಯುವ 'ಪೊಳ್ಳು' ಆಯೋಜಕರು ಅದಾಗಲೇ ನಿದ್ರಾವಶರಾಗಿದ್ದರು!

ಗೋಣಿಕೊಪ್ಪಲು ತಲುಪಿದಾಗ ಸಂಜೆ ೬ ರ ಸಮಯ! ಅಷ್ಟು ಬೇಗ ಯಾಕೆ ಬಂದೆವು ಎಂದು ಇನ್ನೂ ತಿಳಿಯದಾಗಿದೆ. ೮ ಗಂಟೆಗಷ್ಟು ಹೊತ್ತಿಗೆ ಬಂದರೆ ಸಾಕಿತ್ತು. ಅಬ್ಬಿ ನೋಡಿ ಬರಲು ನಮ್ಮಲ್ಲಿ ಧಾರಾಳ ಸಮಯವಿತ್ತು. ಅಥವಾ, 'ಅಬ್ಬಿ ಫಾಲ್ಸಾ, ಅದು ಫಾಲ್ಸ್ ಅಲ್ಲ. ಅದು ಕೂಡಾ ತೋಡು'!!! ಎಂದು ಆಯೋಜಕರ ನಿಲುವಿದ್ದಿತ್ತೇನೋ.... ಆ ಕಾರಣಕ್ಕಾಗಿ ಅಬ್ಬಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಿದ್ದಿರಬೇಕು!

ಮರುದಿನ ಮುಂಜಾನೆ ೬ಕ್ಕೇ ಇರ್ಪು ಜಲಧಾರೆಯತ್ತ ತೆರಳಿದೆವು. ಇರ್ಪು ಒಂದು ಸುಂದರ ಹಳ್ಳಿ. ಅದಕ್ಕೆ ಕಲಶವಿಟ್ಟಂತೆ ಸುಂದರ ರಾಮೇಶ್ವರ ದೇವಸ್ಥಾನ. ಒಬ್ಬರಿಗೆ ೧೦ ರೂಪಾಯಿ ತೆತ್ತು ೫ ನಿಮಿಷ ನಡೆದು ರುದ್ರರಮಣೀಯವಾಗಿ ಧುಮುಕುತ್ತಿದ್ದ ಇರ್ಪು ಜಲಧಾರೆಯನ್ನು ನೋಡಿ ಬೆರಗಾದೆವು. ಅಪಾರ ಜಲರಾಶಿ ಇರ್ಪುವಿನ ಉದ್ದವನ್ನೇ ಕಡಿಮೆಗೊಳಿಸಿತ್ತು! ೧೫೦ ಅಡಿಯ ಜಲಧಾರೆ ೯೦ ಅಡಿಯಷ್ಟು ಎತ್ತರವಿದ್ದಂತೆ ಕಾಣುತ್ತಾ ಕಂಗೊಳಿಸುತ್ತಿತ್ತು.

ನಂತರ ಮರಳಿ ಗೋಣಿಕೊಪ್ಪಲಿಗೆ ಬಂದು ಅಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್ ಎಂಬ ರೆಸಿಡೆನ್ಶಿಯಲ್ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಅಲ್ಲಿನ ಪ್ರಾಂಶುಪಾಲರು ಮತ್ತು ಮ್ಯಾನೇಜರ್ ಉಡುಪಿಯವರೇ ಆಗಿದ್ದರಿಂದ ನಮಗೆಲ್ಲಾ ವಿಪರೀತ ಮರ್ಯಾದೆ. ಒಂದು ರೆಸಿಡೆನ್ಶಿಯಲ್ ಶಾಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಮೀಪದಿಂದ ಕಂಡೆವು. ಆದರೆ ಸಣ್ಣ ಸಣ್ಣ ಮಕ್ಕಳ ಕಳೆಗುಂದಿದ ಮುದ್ದು ಮುಖಗಳನ್ನು ನೋಡುವಾದ 'ಅಯ್ಯೋ, ಪಾಪ' ಅನ್ನಿಸದೇ ಇರಲಿಲ್ಲ.

೩ ಜಲಧಾರೆಗಳುಳ್ಳ ಹಳ್ಳಿಯಾದ ಚೇಲಾವರ ತಲುಪಿದೆವು. ಹೆಚ್ಚಿನವರು ಎಮೆಪಾರೆ ಜಲಧಾರೆ ಮಾತ್ರ ನೋಡಿ ಮರಳುತ್ತಾರೆ. ಅನತಿ ದೂರದಲ್ಲಿ ಕಬ್ಬೆ(ಬಲ್ಲಿಯಟ್ರ) ಜಲಧಾರೆ ಮತ್ತು ಹಾಲುಹೊಳೆ ಜಲಧಾರೆ ಎಂಬ ಇನ್ನೆರಡು ಜಲಧಾರೆಗಳಿರುವುದು ಕೆಲವರಿಗೆ ಮಾತ್ರ ಗೊತ್ತು. ಎಮೆಪಾರೆ ಜಲಧಾರೆಯಲ್ಲಿ ಭರ್ಜರಿ ನೀರಿತ್ತು. ೫೦ ಅಡಿ ಅಗಲವಿದ್ದು ಅಷ್ಟೇ ಎತ್ತರದಿಂದ ಧುಮುಕುವ ಇದರ ದೃಶ್ಯ ರಮಣೀಯ.

ನಂತರ ನಾನು ಉಳಿದೆರಡು ಜಲಧಾರೆಗಳನ್ನು ಹುಡುಕತೊಡಗಿದೆ. ಕೂರ್ಗ್ ಪಬ್ಲಿಕ್ ಸ್ಕೂಲ್-ನ ಪ್ರಾಂಶುಪಾಲರು, 'ಎಮೆಪಾರೆ ಜಲಧಾರೆ ನೋಡಿ ಹಾಗೆ ಮುಂದೆ ತೆರಳಿದರೆ ಕಬ್ಬೆ ಎಂಬಲ್ಲಿ ಬೆಟ್ಟ ಗುಡ್ಡಗಳ ರಮಣೀಯ ನೋಟ ಸಿಗುತ್ತದೆ' ಎಂದು ತಿಳಿಸಿದ್ದರಿಂದ, ನಮ್ಮ ಕೆಲವು ಹಿರಿತಲೆಗಳು ನಾವು ಬಂದಿದ್ದು 'ಜಲಧಾರೆಗಳನ್ನು ನೋಡಲು' ಎಂಬುದನ್ನು ಮರೆತು ಆ ಕಡೆ ನಡೆದೇಬಿಟ್ಟರು. ನನಗೆ ಉಳಿದೆರಡು ಜಲಧಾರೆಗಳನ್ನು ಹುಡುಕಬೇಕಿತ್ತು. ೧೫ ನಿಮಿಷದಲ್ಲಿ ಹುಡುಕಿಬಿಡುತ್ತಿದ್ದೆ. ಆದರೆ ನಾವು ಬಂದ ಪ್ರಮುಖ ಉದ್ದೇಶವನ್ನು 'ಹಿರಿಯರೆನಿಸಿಕೊಂಡವರೇ' ಮತ್ತು ಈ ಹಿರಿಯರೊಂದಿಗೆ 'ಆಯೋಜಕರೆನಿಸಿಕೊಂಡವರು' ಕೂಡಾ ಮರೆತು ಎಲ್ಲರನ್ನೂ ಬೆಟ್ಟ ನೋಡಲು ಕರೆದೊಯ್ದಿದ್ದು ನನಗೆ ಕಸಿವಿಸಿಯನ್ನುಂಟುಮಾಡಿತು. ನಾನು ಆಯೋಜಕನಲ್ಲದ ಕಾರಣ ಎಲ್ಲವನ್ನೂ ಸಹಿಸಿ ಸುಮ್ಮನಿದ್ದೆ.

ಬೆಟ್ಟದ ದೃಶ್ಯ ಅದ್ಭುತವಾಗಿತ್ತು ಎನ್ನಿ. ಆದರೆ ಇಲ್ಲಿ ಅನಾವಶ್ಯಕವಾಗಿ ಆ 'ಹಿರಿಯರನ್ನು' ಒಳಗೊಂಡಂತೆ ಒಂದಿಬ್ಬರು ಬೆಟ್ಟದ ತುದಿಯನ್ನು ಏರಲು ಹೋಗಿ ೩೦ ನಿಮಿಷ ವ್ಯರ್ಥಗೊಳಿಸಿದರು ನೋಡಿ ಮೈಯೆಲ್ಲ ಉರಿದುಹೋಯ್ತು. ನಾನೆಲ್ಲಾದರೂ ಆಯೋಜಕನಾಗಿದ್ದರೆ ಅವರನ್ನೆಲ್ಲಾ ಅಲ್ಲೇ ಬಿಟ್ಟು ಚೇಲಾವರಕ್ಕೆ ಹಿಂತಿರುಗಿ ಉಳಿದೆರಡು ಜಲಧಾರೆಗಳನ್ನು ಹುಡುಕುತ್ತಿದ್ದೆ. ನಾಲ್ಕೈದು ಕಿಮಿ ನಡೆದು ಚೇಲಾವರಕ್ಕೆ ಹಿಂತಿರುಗುವುದೇ ಅವರಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ತಂಡದೊಂದಿಗೆ ಹೋದಾಗ ನಮ್ಮ ವರ್ತನೆ ಮತ್ತು ವಿಪರೀತ ಉತ್ಸಾಹ ಉಳಿದವರಿಗೆ ತೊಂದರೆ ನೀಡದಂತೆ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮಲ್ಲಿರುವ ಕೆಲವು ಕಿರಿಯರಿಗೆ ಈ ವಿಷಯಗಳನ್ನು ಮನದಟ್ಟು ಮಾಡಬೇಕಾಗಿರುವ ಹಿರಿಯರೇ (ಯಾವಾಗಲೂ ಸಮಚಿತ್ತರಾಗಿರುವ) ಅಂದು ಮಾತ್ರ ಈ ರೀತಿ ಎಡಬಿಡಂಗಿಗಳಂತೆ ಬೇಜವಾಬ್ದಾರಿಯಿಂದ ವರ್ತಿಸಬಾರದಿತ್ತು.

ಕಡೆಗೆ ಎಲ್ಲೂ ನಿಲ್ಲದೇ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ತಲುಪಿ ೯.೩೦ಕ್ಕೆ ಮಂಗಳೂರಿನಲ್ಲಿದ್ದೆವು. ಕಾರ್ಯಕ್ರಮ ಉತ್ತಮವಾಗಿತ್ತು. ಇಲ್ಲಿ ಆಯೋಜಕರನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದೇನೆ. ಆದರೆ ಒಂದು ವಿಷಯದಲ್ಲಿ ಮಾತ್ರ ಅವರನ್ನು ಮೆಚ್ಚಬೇಕು. ರಾತ್ರಿ ತಂಗಲು ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೊಡಗಿಗೆ ತೆರಳಿ ಅಬ್ಬಿ ನೋಡಲಿಲ್ಲ ಎಂದು ಕೆಲವು ಯುವ ಮನಗಳಲ್ಲಿ ಮನೆ ಮಾಡಿದ್ದ ನಿರಾಸೆಯನ್ನು ಹೋಗಲಾಡಿಸಬಹುದಿತ್ತು.

ಮಂಗಳವಾರ, ಆಗಸ್ಟ್ 14, 2007

ನಾ ಮರೆಯದ ಸ್ವಾತಂತ್ರ್ಯ ದಿನಾಚರಣೆ


ಅಗೋಸ್ಟ್ ೧೩, ೨೦೦೫ರಂದು ನಾನು ಸಂಜೆ ೬ ಗಂಟೆಗೇ ಹಳದೀಪುರಕ್ಕೆ ಆಗಮಿಸಿದ್ದೆ. ನಾನು, ಗೆಳೆಯ ಲಕ್ಷ್ಮೀನಾರಾಯಣ, ಹಳದೀಪುರದ ನಮ್ಮ ಮನೆಯಲ್ಲಿರುವ ನನ್ನ ಚಿಕ್ಕಪ್ಪ ಮತ್ತು ತಮ್ಮ ನಯನ - ನಾಲ್ಕೂ ಮಂದಿ ರಾತ್ರಿ ೧೨ರ ಸುಮಾರಿಗೆ ಆಗಮಿಸಲಿರುವ ಮಂಗಳೂರು ಯೂತ್ ಹಾಸ್ಟೆಲಿನ ೨೭ ಮಂದಿ ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದೆವು. ಮುಂದಿನ ೨ ದಿನಗಳ ಕಾಲ ಕೆಲವೊಂದು ಜಲಧಾರೆಗಳು ಮತ್ತು ಬನವಾಸಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ರಾತ್ರಿ ೧೨.೩೦ ಕಳೆದರೂ ಇವರ ಪತ್ತೆಯಿಲ್ಲ. ಅಂತೂ ಕಡೆಗೆ ರಾತ್ರಿ ೧ ಗಂಟೆಗೆ ಮೋಹನನ 'ಶಕ್ತಿ' ೨೭ ಮಂದಿಯನ್ನು ಹೊತ್ತು ಹಳದೀಪುರಕ್ಕೆ ಬಂದಾಗ ನಾನು ಮತ್ತು ಲಕ್ಷ್ಮೀನಾರಾಯಣ ಮುಖ್ಯ ರಸ್ತೆಯಲ್ಲೇ ಅತಿಥಿಗಳನ್ನು ಸ್ವಾಗತಿಸಿ, ನಮ್ಮ ಮನೆಯಿರುವ ಕುದಬೈಲಕ್ಕೆ ಕರೆದೊಯ್ದೆವು. ದಣಿದು ಬಂದ ಎಲ್ಲರೂ ಹಾಸಿ ಇಟ್ಟ ಜಮಖಾನೆ ಇತ್ಯಾದಿ ನೋಡಿದ ಕೂಡಲೇ ಮಾತಿಲ್ಲದೆ ನಿದ್ರಾವಶರಾದರು.

ಮುಂಜಾನೆ ನಮ್ಮ ಮನೆಯಂಗಳದಲ್ಲೇ ಸಣ್ಣ ಸಭೆಯೊಂದನ್ನು ಏರ್ಪಡಿಸಿ ಆವತ್ತಿನ ಮತ್ತು ಮರುದಿನದ ಕಾರ್ಯಕ್ರಮಗಳ ಬಗ್ಗೆ ಸತ್ಯಜಿತ್ ಅವರು ವಿವರ ನೀಡಿ, ರಾತ್ರಿ ಉಳಿದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಿದ್ದ ರಾಜೇಶ್ ನಾಯ್ಕರ(ನಾನೇ) ಮನೆಯವರಿಗೆ ಧನ್ಯವಾದ ಹೇಳಿದರು. ನಂತರ ಹೊರಟೆವು ಬೆಣ್ಣೆ ಜಲಧಾರೆಯೆಡೆ. ಅಲ್ಲಿಂದ ಮಾಗೋಡು ಜಲಧಾರೆಗೆ. ನಂತರ ಕುಳಿ ಮಾಗೋಡು ಜಲಧಾರೆಗೆ ಭೇಟಿ ನೀಡಿ ಯಲ್ಲಾಪುರದ ಸಂಭ್ರಮ್ ಹೋಟೇಲಿನಲ್ಲಿ ರಾತ್ರಿ ೮ ಗಂಟೆಗೆ ಊಟಕ್ಕೆ ಆಗಮಿಸಿದೆವು. ಇಲ್ಲೊಬ್ಬ ತನ್ನ ಕಾರನ್ನು ತಂದು ನಮ್ಮ 'ಶಕ್ತಿ' ಗೆ ತಾಗಿಸಿಬಿಟ್ಟ. ಆದರೆ ಆತ ತಾನು ಗುದ್ದಿದ್ದೇ ಅಲ್ಲ ಎಂದು ವಾದಕ್ಕಿಳಿದಾಗ ನಾವೂ ಜೋರಾಗಿ ಮಾತನಾಡಬೇಕಾಯಿತು. ಅಲ್ಲೇ ಇದ್ದ ಪೋಲೀಸ್ ಠಾಣೆಗೂ ಹೋಯಿತು ನಮ್ಮ ಜಗಳ. ಅಳುಕುತ್ತಾ ನಾವೆಲ್ಲರೂ ಒಳಗೆ ಕಾಲಿಟ್ಟೆವು. ಆತನಂತೂ ನುರಿತ ಕ್ರಿಮಿನಲ್ ತರಹ ಮನೆಯೊಳಗೆ ಕಾಲಿಡುವಂತೆ ಒಳಬಂದ. ನಮ್ಮ ಅದೃಷ್ಟಕ್ಕೆ ಅಲ್ಲಿನ ಇನ್ಸ್-ಪೆಕ್ಟರ್ ಆತನಿಗೇ ಗದರಿಸಿ ನಮ್ಮಲ್ಲಿ ಕ್ಷಮೆ ಕೇಳುವಂತೆ ಮಾಡಿದರು. ಬೇಗನೇ ಅಲ್ಲಿಂದ ಹೊರಬಿದ್ದು ಶಿರಸಿಯೆಡೆ ಹೊರಟೆವು.

ಮಾರಿಕಾಂಬ ದೇವಸ್ಥಾನ ತಲುಪಿದಾಗ ರಾತ್ರಿ ೧೧.೧೫. ನಾನು ಮೊದಲೇ ಫೋನ್ ಮಾಡಿ ವಿನಂತಿಸಿದ್ದರಿಂದ ಅಲ್ಲಿನ ಮ್ಯಾನೇಜರ್ ನಮಗಾಗಿ ಎರಡು ಕೋಣೆಗಳನ್ನು ಖಾಲಿ ಇರಿಸಿದ್ದರು. ಮರುದಿನ ಸ್ವಾತಂತ್ರ್ಯೋತ್ಸವ. ಮುಂಜಾನೆ ಬನವಾಸಿಗೆ ತೆರಳುವಾಗ ಶಿರಸಿಯಿಂದ ಒಂದೆರಡು ಕಿಮಿ ಪ್ರಯಾಣಿಸಿದ ಕೂಡಲೇ ಮೋಹನ ತನ್ನ 'ಶಕ್ತಿ' ಗೆ ಇಂಧನ ತುಂಬಿಸಲು ಮರಳಿ ಶಿರಸಿಗೆ ತೆರಳಿದ.



ಸುಧೀರ್ ಕುಮಾರ್ ನೆನಪು ಮಾಡಿ ಮಂಗಳೂರಿನಿಂದಲೇ ರಾಷ್ಟ್ರಧ್ವಜವನ್ನು ತಂದಿದ್ದರು. ಬೇರೆ ಯಾರಿಗೂ ಈ ವಿಚಾರ ಹೊಳೆದಿರಲಿಲ್ಲ. ನಾವಲ್ಲೇ ದಾರಿಯಲ್ಲಿ ಸಣ್ಣ ಕೊಂಬೆಯೊಂದಕ್ಕೆ ರಾಷ್ಟ್ರಧ್ವಜವನ್ನು ಏರಿಸಿ, ರಾಷ್ಟ್ರಗೀತೆಯನ್ನು ಹಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆವು. ಇದು ನಾನು ಪಾಲ್ಗೊಂಡ 'ದ ಮೋಸ್ಟ್ ಮೆಮೋರೇಬಲ್' ಸ್ವಾತಂತ್ರ್ಯ ದಿನಾಚರಣೆ. ರಾಷ್ಟ್ರಗೀತೆಯನ್ನು ಹಾಡುವಾಗ ಅಲ್ಲೇ ಜಾಗಿಂಗ್ ಮಾಡುತ್ತಿದ್ದವನೊಬ್ಬ ಕೂಡಲೇ ನಮ್ಮೊಂದಿಗೆ ಸೇರಿ ತಟಸ್ಥನಾಗಿ ನಿಂತು ರಾಷ್ಟ್ರಗೀತೆ ಹಾಡಿದ. ನಮ್ಮಲ್ಲಿ ಹೆಚ್ಚಿನವರು ಆತನನ್ನು ಗಮನಿಸಿಯೇ ಇರಲಿಲ್ಲ. ಅಲ್ಲೇ ಒಬ್ಬಳು ಯುವ ಶಿಕ್ಷಕಿ ತನ್ನ ಶಾಲೆಯೆಡೆ ಓಡುತ್ತಿದ್ದಳು. ಧ್ವಜಾರೋಹಣಕ್ಕೆ ಮುಂಚಿತವಾಗಿಯೇ ಅನತಿ ದೂರದಲ್ಲಿದ್ದ ಶಾಲೆಗೆ ಆಕೆ ತಲುಪಬೇಕಿತ್ತು. ಅವಸರದಲ್ಲಿ ಓಡುತ್ತಿದ್ದರೂ, ನಾವು ರಾಷ್ಟ್ರಗೀತೆ ಹಾಡಲು ಶುರುಮಾಡಿದ ಕೂಡಲೇ ಅಲ್ಲೇ ಮಿಸುಕಾಡದೆ ನಿಂತು, ರಾಷ್ಟ್ರಗೀತೆ ಮುಗಿದ ಬಳಿಕ ಮತ್ತೆ ಓಡಲು ಶುರುಮಾಡಿದಳು. ರಾಷ್ಟ್ರಗೀತೆಗೆ ಆಕೆ ನೀಡಿದ ಗೌರವ ಮತ್ತು ಮಾನ್ಯತೆ ನಾನೆಂದೂ ಮರೆಯುವಂತಿಲ್ಲ.


ಇನ್ನೂ ಮೋಹನ ಬಂದಿರಲಿಲ್ಲ. ಹಾಗೇ ಬನವಾಸಿಯೆಡೆ ನಡೆಯಲಾರಂಭಿಸಿದೆವು. ರಾಷ್ಟ್ರಧ್ವಜ ಹಿಡಿದ ಸುನಿಲ್ ಮುಂದಕ್ಕೆ ನಡೆಯುತ್ತಿದ್ದ. ನಮ್ಮ ತಂಡದಲ್ಲಿದ್ದ ಫೋಟೋಗ್ರಾಫರುಗಳು ಮುಂದೆ ಹಿಂದೆ ಓಡಾಡುತ್ತ ಫೋಟೊ ತೆಗೆಯುತ್ತಿದ್ದರು. ಒಂದೈದು ನಿಮಿಷದಲ್ಲಿ 'ಶಕ್ತಿ' ಆಗಮಿಸಿತು. ಬನವಾಸಿ ತಲುಪಿದಾಗ ಅಲ್ಲಿ ದೇವಸ್ಥಾನದ ಸಮಿತಿಯವರು ಧ್ವಜಾರೋಹಣ ಮಾಡಲು ತಯಾರಿ ನಡೆಸುತ್ತಿದ್ದರು. ಮತ್ತೊಮ್ಮೆ ಆಚರಿಸಿದೆವು ಸ್ವಾತಂತ್ರ್ಯೋತ್ಸವವನ್ನು!

ನಂತರ ಗುಡ್ನಾಪುರದ ಕೆರೆ, ಶಿವಗಂಗಾ ಜಲಧಾರೆ ಮತ್ತು ಕೊನೆಗೆ ಉಂಚಳ್ಳಿ ಜಲಧಾರೆ ನೋಡಿ ಮರಳಿದೆವು ಗೂಡಿಗೆ.

೨೦೦೫ರ ಸ್ವಾತಂತ್ರ್ಯೋತ್ಸವವನ್ನು ನಾನಂತೂ ಎಂದಿಗೂ ಮರೆಯಲಾರೆ ಅಂತೆಯೇ ಆ ೨ ದಿನಗಳ ಪ್ರವಾಸವನ್ನು ಕೂಡಾ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು ಈ ಅಲೆಮಾರಿಯ ಕಡೆಯಿಂದ.

ಶುಕ್ರವಾರ, ಆಗಸ್ಟ್ 10, 2007

ಗೋಕಾಕ, ಗೊಡಚಿನಮಲ್ಕಿ ಮತ್ತು ಕಪಿಲತೀರ್ಥ ಜಲಧಾರೆಗಳು


ಎರಡನೇ ದಿನ ನಾವು ಹೊರಟದ್ದು ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳನ್ನು ನೋಡಲು. ಬಾಗಲಕೋಟೆಯಿಂದ ಗದ್ದನಕೇರಿ, ಕಲಾದಗಿ, ಲೋಕಾಪುರ ಮಾರ್ಗವಾಗಿ ಯರಗಟ್ಟಿಗೆ ಬಸ್ಸೊಂದರಲ್ಲಿ ಬಂದೆವು. ಯರಗಟ್ಟಿಯಿಂದ ಟೆಂಪೋದಲ್ಲಿ ಗೋಕಾಕಕ್ಕೆ ಪಯಣ. ಗೋಕಾಕ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಿತ್ತು.

ನೀರಿನ ಪ್ರಮಾಣ ಕಡಿಮೆ ಇದ್ದಾಗ ಜಲಪಾತವೊಂದರ ಎತ್ತರ ಅರಿವಾಗುವುದು. ಸುಮಾರು ೪೦೦ ಅಡಿಯಷ್ಟು ಎತ್ತರವಿದ್ದು, ೭೦೦ ಅಡಿಯಷ್ಟು ಅಗಲವಿರುವ ಗೋಕಾಕ ಜಲಪಾತದಲ್ಲಿ ನೀರಿನ ಹರಿವು, ಮೇಲ್ಭಾಗದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡ್ಕಲ್ ಅಣೆಕಟ್ಟಿನಿಂದ ಹೊರಬಿಡುವ ನೀರಿನ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಆಗಿನ್ನೂ ಆಣೆಕಟ್ಟು ತುಂಬಿರಲಿಲ್ಲವಾದ್ದರಿಂದ ಸಹಜವಾಗಿಯೇ ನೀರಿನ ಪ್ರಮಾಣ ಕಡಿಮೆಯಿತ್ತು. ಜಲಪಾತದ ತಳದಲ್ಲಿ ಸಣ್ಣ ಗುಹೆಯಂತಹ ಜಾಗವಿದ್ದು, ಸ್ಥಳೀಯರು ಅಲ್ಲಿವರೆಗೆ ಇಳಿದು ಕೂತ್ಕೊಂಡಿರುವುದು ಕಾಣುತ್ತಿತ್ತು. ಸಣ್ಣ ಚುಕ್ಕಿಗಳಂತೆ ಕಾಣುತ್ತಿದ್ದ ಅವರು, ಅಲ್ಲೇನು ಮಾಡುತ್ತಿದ್ದರು ಎಂದು ಸರಿಯಾಗಿ ಕಾಣುತ್ತಿರಲಿಲ್ಲ. ಸಮಾನ ಅಂತರದಲ್ಲಿ ೩ ಕವಲುಗಳಲ್ಲಿ ನೀರು ಕೆಳಗೆ ಧುಮುಕುತ್ತಿತ್ತು. ಆ ದೃಶ್ಯವೇ ಅಷ್ಟು ಸುಂದರವಾಗಿ ಕಾಣುತ್ತಿರಬೇಕಾದರೆ, ಆಣೆಕಟ್ಟಿನಿಂದ ನೀರು ಬಿಟ್ಟಾಗ ಕಾಣುವ ದೃಶ್ಯ ಇನ್ನಷ್ಟು ರಮಣೀಯವಾಗಿರಬಹುದೆಂದು ಗ್ರಹಿಸಿದೆ. ಜಲಪಾತದ ಸ್ವಲ್ಪ ಮೇಲೆ ಬ್ರಿಟಿಷರು ನಿರ್ಮಿಸಿದ ಕಾಲುಸೇತುವೆಯೊಂದಿದೆ.


ನಂತರ ಬಸ್ಸೊಂದರಲ್ಲಿ ಗೊಡಚಿನಮಲ್ಕಿಗೆ ತೆರಳಿದೆವು. ಗೊಡಚಿನಮಲ್ಕಿ ಗೋಕಾಕ್ ತಾಲೂಕಿನಲ್ಲಿದೆ. ಹಳ್ಳಿಯಿಂದ ೩ಕಿಮಿ ಉತ್ತಮ ಸ್ಥಿತಿಯಲ್ಲಿರುವ ಟಾರು ರಸ್ತೆಯಲ್ಲಿ ನಡೆದು, ನಂತರ ಇನ್ನೊಂದು ೫ ನಿಮಿಷ ಗದ್ದೆ, ಬಯಲುಗಳ ನಡುವೆ ನಡೆದರೆ ಮಾರ್ಕಾಂಡೇಯ ನದಿ ನಿರ್ಮಿಸುವ ಗೊಡಚಿನಮಲ್ಕಿ ಜಲಪಾತವನ್ನು ತಲುಪಬಹುದು. ಇಲ್ಲೂ ಅಣೆಕಟ್ಟಿನ ಕಾಟ. ನಾವು ತೆರಳಿದ ವರ್ಷವೇ ಮೇಲ್ಭಾಗದಲ್ಲಿ ಬರುವ ಶಿರೂರು ಎಂಬ ಹಳ್ಳಿಯಲ್ಲಿ ಮಾರ್ಕಾಂಡೇಯ ನದಿಗೆ ಅಣೆಕಟ್ಟನ್ನು ಕಟ್ಟಲಾಗಿತ್ತು. ನೀರಿನ ಹರಿವು ಕಡಿಮೆ ಇದ್ದರೂ, ಈ ಸ್ಥಳ ಬಹಳ ಸುಂದರವಾಗಿದೆ. ಎತ್ತರ ೫೦ ಅಡಿಯಷ್ಟು ಮಾತ್ರ ಇದ್ದರೂ, ಸುಮಾರು ೧೨೦ಅಡಿಯಷ್ಟು ಅಗಲವಿದೆ ಗೊಡಚಿನಮಲ್ಕಿ ಜಲಪಾತ. ಕಪ್ಪು ಕಲ್ಲುಗಳ ಮೇಲೆ ಹರಿದುಬಂದು ರಭಸದಿಂದ ಧುಮುಕುವ ಚಿತ್ರವನ್ನು ಕಲ್ಪಿಸಿಕೊಂಡೇ ಪುಳಕಿತನಾದೆ. ಈಗ ಒಂದು ಬದಿಯಲ್ಲಿ ಮಾತ್ರ ಸ್ವಲ್ಪ ನೀರು ಹರಿಯುತ್ತಿದ್ದರೂ ಸೌಂದರ್ಯಕ್ಕೇನೂ ಕಡಿಮೆಯಿರಲಿಲ್ಲ. ಮಾರ್ಕಾಂಡೇಯ ನದಿ ಹಾಗೇ ಮುಂದಕ್ಕೆ ಹರಿದು ಸಿಂಗಾಪುರ ಎಂಬಲ್ಲಿ ಘಟಪ್ರಭಾ ನದಿಯನ್ನು ಸೇರುತ್ತದೆ.

ಬಾಗಲಕೋಟೆಗೆ ಮರಳಿದ ನಾವು ನಂತರ ಪೇಟೆಯೊಳಗೆ ತೆರಳಿದೆವು. ಹೊಸದಾಗಿ ನಿರ್ಮಿಸಲಾಗಿದ್ದ ರಸ್ತೆಯಲ್ಲಿ ಸುತ್ತು ಬಳಸಿ ಬಸ್ಸು ನಿಲ್ದಾಣ ಮತ್ತು ಪೇಟೆಗೆ ತೆರಳಿದ್ರೆ ೧೨ಕಿಮಿ. ಮುಳುಗಡೆಯಾಗಲಿರುವ ರಸ್ತೆಯಲ್ಲಿ ತೆರಳಿದರೆ ೩ಕಿಮಿ. ಇನ್ನೂ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ತುಂಬಿರಲಿಲ್ಲವಾದ್ದರಿಂದ, ಮುಳುಗಡೆಯಾಗಲಿರುವ ಮನೆ, ರಸ್ತೆ, ದೇವಳಗಳು ಇನ್ನೂ ಬಳಕೆಯಾಗತೊಡಗಿದ್ದವು. ಒಂದೆಡೆ ರಸ್ತೆ ಅರ್ಧ ಕಿಮಿ ದೂರದವರೆಗೂ ೨ಅಡಿಯಷ್ಟು ನೀರಿನಲ್ಲಿ ಮುಳುಗಿದ್ದರೂ, ಜನರು ಆ ರಸ್ತೆಯನ್ನು ಬಳಸುತ್ತಿದ್ದರು. ಸೈಕಲ್ಲು, ಕಾರು, ಟೆಂಪೋ, ರಿಕ್ಷಾ, ಬೈಕು...ಎಲ್ಲಾ ಆ ರಸ್ತೆಯಲ್ಲಿ ಓಡಾಡತೊಡಗಿದ್ದವು. ರಸ್ತೆ ದಾಟಿ ನಂತರ ಇರುವ ದೇವಳವೊಂದರಲ್ಲಿ, ದೇವರ ಮೂರ್ತಿ ಇನ್ನೂ ಇತ್ತು ಮತ್ತು ಭಜನೆ ನಡೆಯುತ್ತಿತ್ತು. ಆ ದೇವಸ್ಥಾನ ಅರ್ಧ ಮುಳುಗಡೆಯಾಗಲಿದ್ದು, ಕೊನೆ ಕ್ಷಣದವರೆಗೆ ಕಾದು ನಂತರ ಅಲ್ಲಿಂದ ದೇವರನ್ನು ಹೊಸದಾಗಿ ಕಟ್ಟಲಾಗಿರುವ ದೇವಸ್ಥಾನಕ್ಕೆ ಕೊಂಡೊಯ್ಯುವ ಇರಾದೆ. ಹಾಗೆ ಕೆಲವೊಂದು ಮನೆಗಳನ್ನು ಜನರು ಇನ್ನೂ ಬಿಟ್ಟು ಹೋಗಿರಲಿಲ್ಲ. ಹೊಸದಾಗಿ ನಿರ್ಮಿಸಲಾಗಿರುವ ಬಾಗಲಕೋಟೆಯಲ್ಲಿ, ಇವರಿಗೆಲ್ಲಾ ವಸತಿ ಸೌಕರ್ಯವನ್ನು ಕೊಡಲಾಗಿದ್ದರೂ ಕೊನೆ ಕ್ಷಣದವರೆಗೂ ತಮ್ಮ ಮನೆಯಲ್ಲೇ ಇರುವಂತಹ ತುಡಿತ. ಹೆಚ್ಚೆಂದರೆ ಇನ್ನೊಂದು ತಿಂಗಳು ಅವರಲ್ಲಿರಬಹುದಿತ್ತು. ಅಷ್ಟರಲ್ಲಿ ನೀರು ಮೇಲೆ ಬರುವುದಿತ್ತು.

ಎರಡು ದಿನ ನನ್ನೊಂದಿಗೆ ಅಡ್ಡಾಡಿ ಪೂರ್ತಿ ಸುಸ್ತು ಹೊಡೆಸಿಕೊಂಡ ಅನಿಲ, ೩ನೇ ದಿನ ಬೆಳಗ್ಗೆ ಸ್ವಲ್ಪ ಉದಾಸೀನ ಮಾಡತೊಡಗಿದಾಗ 'ನಾನೊಬ್ಬನೇ ಹೋಗುತ್ತೇನೆ' ಎಂದೆ. ಆ ದಿನ ಇಳಕಲ್ ಸಮೀಪವಿರುವ ಕಪಿಲತೀರ್ಥ ಜಲಧಾರೆಯನ್ನು ನೋಡಲು ಹೊರಟಿದ್ದೆ. ಬಸ್ಸು ನಿಲ್ದಾಣಕ್ಕೆ ನನ್ನನ್ನು ಬಿಟ್ಟು 'ಫೋನ್ ಮಾಡು, ಸಂಜಿಗೆ' ಎಂದು ಅನಿಲ ಮನೆಗೆ ಹಿಂತಿರುಗಿದ. ಅಮೀನಗಡ, ಹುನಗುಂದ ಮಾರ್ಗವಾಗಿ ೯೦ ನಿಮಿಷದಲ್ಲಿ ಬಸ್ಸು ಇಳಕಲ್ ತಲುಪಿತು. ಕೆಸರು ತುಂಬಿ ರಾಡಿಯಾಗಿದ್ದ ಊರು. ಎಲ್ಲೂ ಒಂದು ಸರಿಯಾಗಿರುವ ರಸ್ತೆ ಕಾಣಬರಲಿಲ್ಲ. ಬಸ್ಸು ನಿಲ್ದಾಣದಲ್ಲಿ, ಜಲಧಾರೆಯಿದ್ದ ಊರಾದ ಕಬ್ಬರಗಿಗೆ ಬಸ್ ಇದೆಯಾ, ಎಂದು ಕೇಳಿದ್ರೆ 'ಇಲ್ರಿ' ಎಂಬ ಉತ್ತರ.

ಇಳಕಲ್ ನಿಂದ ೧೭ ಕಿಮಿ ದೂರದಲ್ಲಿದೆ ಕಬ್ಬರಗಿ. ಇಲ್ಲಿಂದ ಇನ್ನೆರಡು ಕಿಮಿ ತೆರಳಿ ೧೫ ನಿಮಿಷ ನಡೆದರೆ ಕಪಿಲತೀರ್ಥ ಎಂಬ ಸಣ್ಣ ಜಲಧಾರೆ. ಇಳಕಲ್, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ ಮತ್ತು ಕಬ್ಬರಗಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿದೆ. ಕಬ್ಬರಗಿಗೆ ಹೋಗಿ ಬರಲು ರಿಕ್ಷಾವೊಂದರಲ್ಲಿ ಕೇಳಿದಾಗ ೪೦೦ ಎಂದ. ಚೌಕಾಶಿ ಮಾಡಿದಾಗ ೩೫೦ಕ್ಕೆ ಒಪ್ಪಿದ. 'ನಿಮ್ಗೆ ಕಬ್ಬರ್ಗಿ ಒಳಗ ಎಲ್ಲೋಗ್ಬೇಕ್ರಿ ಸರ', ಎಂದು ಆಟೋ ಚಾಲಕ ಕೇಳಿದಾಗ, 'ನೀರ್ ಬೀಳ್ತದಲ್ಲ, ಅಲ್ಗೆ' ಎಂದೆ. 'ಓ ಕಪಿಲೆಪ್ಪ!' ಎಂದ. 'ಈಗ ನೀರ್ ಇರೋದ ಡೌಟರೀ ಸರ.. ಮಳಿ ಒಂದೆರಡ್ ದಿನಾ ಮಸ್ತ್ ಹೊಡೀತಂದ್ರ ಚಲೋ ನೀರ್ ಇರ್ತದ ನೋಡ್ರಿ' ಎಂದು ನನ್ನಲ್ಲಿ ಕೊರೆಯುತ್ತಾ ಹುಲಗೇರಿ ಮತ್ತು ಕಾಟಾಪುರ ದಾಟಿ ಕಬ್ಬರಗಿ ತಲುಪಿಸಿದ. ಇಲ್ಲಿಂದ ಮಣ್ಣಿನ ರಸ್ತೆಯಲ್ಲಿ ಮತ್ತೆರಡು ಕಿಮಿ ಓಡಿಸಿ ಸಣ್ಣ ಬೆಟ್ಟದ ಬುಡಕ್ಕೆ ತಂದು ನಿಲ್ಲಿಸಿದ. ರಿಕ್ಷಾದಿಂದ ಇಳಿದದ್ದೇ ತಡ, ೫ ಹೆಣ್ಣುಮಕ್ಕಳು ತಲೆ ಮೇಲೆ ಒಣಕಟ್ಟಿಗೆ ಹೊರೆ ಹೊತ್ತು ಪ್ರತ್ಯಕ್ಷ. 'ಅಯ್, ಪೋಟೋ ತೆಗೆಯಾಕತ್ತಾರ' ಎಂದು ಮುಸಿಮುಸಿ ನಗುತ್ತಾ ಹಳ್ಳಿಯೆಡೆ ಮುನ್ನಡೆದರು.


ನಂತರ ಆಟೋ ಚಾಲಕನೇ ಮುನ್ನಡೆದು ನನಗೆ ದಾರಿ ತೋರಿಸಿ ಜಲಧಾರೆಯಿದ್ದ ಕಣಿವೆಯೆಡೆ ಕರೆತಂದ. ಒಂದು ಹನಿ ನೀರಿರಲಿಲ್ಲ! ಒಂದೆರಡು ದಿನದ ಹಿಂದೆ ನೀರು ಹರಿದುಹೋಗಿದ್ದ ಕುರುಹುಗಳಿದ್ದವು. ಜಾಗ ಚೆನ್ನಾಗಿತ್ತು. ನೀರು ಧುಮುಕುತ್ತಿದ್ದರೆ ಆ ಸ್ಥಳ ಇನ್ನಷ್ಟು ಚೆನ್ನಾಗಿ ಕಾಣುತ್ತಿತ್ತು. ಕಣಿವೆಯಿಂದ ಮೇಲೆ ಬಂದು ರಿಕ್ಷಾದೆಡೆ ನಡೆಯುತ್ತಿರುವಾಗ ಅನಿಲನ ಫೋನು, ಸುರಕ್ಷಿತವಾಗಿದ್ದೆನೋ ಇಲ್ವೋ ಎಂದು ತಿಳಿದುಕೊಳ್ಳಲು.


ಕಬ್ಬರಗಿ ಹಳ್ಳಿಯಲ್ಲಿ ಒಂದೆಡೆ ಹತ್ತಾರು ಮಂದಿ ಕುಳಿತಿದ್ದರು. ರಿಕ್ಷಾದಲ್ಲಿ ಕುಳಿತೇ ಅವರ ಫೋಟೊ ತೆಗೆಯುವಾಗ ಅವರಲ್ಲೊಬ್ಬ, 'ಯಾರ್ರಿ ಅದ, ಫೋಟೊ ಯಾಕ್ರಿ ಹೊಡಿಯಾಕತ್ತೀರಿ' ಎಂದ. ನನ್ನ ರಿಕ್ಷ ಚಾಲಕ, 'ದೂರದಿಂದ ಬಂದಾರ್ರಿ, ಕಪಿಲೆಪ್ಪ ನೋಡಾಕ, ಹಂಗೆ ಹಳ್ಳಿ ಫೋಟೊ ಹೊಡೀತಾರಂತ....' ಎಂದಾಗ, 'ಓ ಹಂಗೇನ, ತಡ್ರಿ ಮತ್ತ...ನಾವು ಸರಿ ಕುಂತ್ಕೊತೀವಿ' ಎನ್ನುತ್ತ ಶಿಸ್ತಾಗಿ ಕೂತು ಪೋಸು ಕೊಟ್ಟರು. ನಂತರ ರಿಕ್ಷಾ ಚಾಲಕನ ವಿನಂತಿ ಆತನದ್ದೊಂದು ಫೋಟೊ ತೆಗೆಯಬೇಕೆಂದು ಅದೂ ಕೂಡಾ ಆತನ ರಿಕ್ಷಾದೊಂದಿಗೆ ಅದು ಕೂಡಾ ಆತ ಹೇಳುವ ಸ್ಥಳದಲ್ಲಿ! ಒಪ್ಪಿದಾಗ, ಒಂದೆಡೆ ಸೂರ್ಯಕಾಂತಿಗಳಿದ್ದ ಹೊಲದ ಬದಿಯಲ್ಲಿ ರಿಕ್ಷಾ ನಿಲ್ಲಿಸಿ ಫೋಟೊ ತೆಗೆಸಿಕೊಂಡು, ವಿಳಾಸ ನೀಡಿ ಕಳಿಸಿಕೊಡುವಂತೆ ವಿನಂತಿಸಿದ.

ಸಂಜೆ ೬ ಗಂಟೆಗೆ ಬಾಗಲಕೋಟೆಯಿಂದ ಉಡುಪಿಗೆ ನನಗೆ ಬಸ್ಸಿತ್ತು. ಇಳಕಲ್ ನಿಂದ ಹಿಂತಿರುಗಿದಾಗ ೪.೩೦ ಆಗಿತ್ತು. ೩ ದಿನಗಳ ಪ್ರವಾಸ ಮುಗಿಸಿ, ಬಹಳ ಸ್ಥಳಗಳನ್ನು ತೋರಿಸಿದ ಅನಿಲನಿಗೊಂದು ಥ್ಯಾಂಕ್ಸ್ ಹೇಳಿ ಮರಳಿದೆ ಉಡುಪಿಗೆ.

ಮಂಗಳವಾರ, ಆಗಸ್ಟ್ 07, 2007

ಬಾಗಲಕೋಟೆಯ ಸುತ್ತ ಮುತ್ತ


ಬಾಗಲಕೋಟೆಯಿಂದ ಗೆಳೆಯ ಅನಿಲ್ ಢಗೆ 'ಬಾಲೇ, ಒಂದೆರಡು ದಿನ ಇದ್ದೋಗ್ವಿಯಂತೆ', ಎಂದು ಬಹಳ ದಿನದಿಂದ ಕರೆಯುತ್ತಿದ್ದ. ಅಲ್ಲಿವರೆಗೆ ಬಂದು ಸುಮ್ನೆ ಮನೆಯಲ್ಲಿ ಕೂತ್ಕೊಳ್ಳುದು ನನ್ನಿಂದ ಆಗದು, ಅಲ್ಲಿಲ್ಲಿ ಅಡ್ದಾಡಬೇಕು ಎಂದು ನಾನಂದಾಗ, 'ದುನಿಯಾ ತೋರಿಸ್ತೀನಿ ಮಗನ, ದುನಿಯಾ. ನೀ ಬಾ ಮೊದ್ಲ' ಎಂದು ಕೊಚ್ಚಿಕೊಂಡ. ೨೦೦೪ರ ಜೂನ್ ತಿಂಗಳ ಅದೊಂದು ಶುಕ್ರವಾರ ಮುಂಜಾನೆ ೫ಕ್ಕೆ ಬಾಗಲಕೋಟೆಯ ನವನಗರದಲ್ಲಿಳಿದು ಈ ದುನಿಯಾ ತೋರಿಸುವವನಿಗೆ ಫೋನಾಯಿಸಿದರೆ, 'ಯಾರ, ಯಾರ' ಎಂದು ತೊದಲತೊಡಗಿದ. ಒಂದೆರಡು ಝಾಡಿಸಿದೊಡನೇ 'ಯಾವಾಗ್ ಬಂದಿಲೇ, ಬಂದೆ ತಡಿ', ಎನ್ನುತ್ತಾ ೫ ನಿಮಿಷದಲ್ಲಿ ಹಾಜರಾದ.

ಆ ದಿನ ನಾವು ಭೇಟಿ ನೀಡಬೇಕೆಂದಿದ್ದು ಬದಾಮಿ, ಬನಶಂಕರಿ, ಮಹಾಕೂಟ, ಹುಲಿಗೆಮ್ಮನಕೊಳ್ಳ, ಪಟ್ಟದಕಲ್ಲು, ಸಿದ್ಧನಕೊಳ್ಳ ಮತ್ತು ಐಹೊಳೆಗೆ. ಇವುಗಳಲ್ಲಿ ಬದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳನ್ನು ಬಿಟ್ಟರೆ ಉಳಿದ ಸ್ಥಳಗಳ ಬಗ್ಗೆ ಅನಿಲನೇ ನನಗೆ ತಿಳಿಸಿದ್ದು. ಬದಾಮಿಗೆ ೫ಕಿಮಿ ದೂರವಿರುವಾಗ ನಮ್ಮ ಬೈಕಿನ ಟಯರ್ ಪಂಕ್ಚರ್! ಒಂದು ನರಪಿಳ್ಳೆಯೂ ಕಾಣಿಸುತ್ತಿರಲಿಲ್ಲ. ಅನಿಲ್ ಫುಲ್ ಮೂಡ್ ಆಫ್. 'ಆನಿ ಕುಂತಂಗೆ ಕುಂತಿ, ಪಂಕ್ಚರ್ ಆಗದೇ ಇನ್ನೇನ' ಎಂದು ನನಗೇ ಬಯ್ಯತೊಡಗಿದ್ದ. ಟಯರ್ ಕಳಚಲು ಪ್ರಯತ್ನ ಮಾಡತೊಡಗಿದೆವು. ನಮ್ಮಿಂದೆಲ್ಲಿ ಅದು ಸಾಧ್ಯ? ಅರ್ಧ ಗಂಟೆ ಕಳೆದಿರಬಹುದು, ಒಂದು ಗೂಡ್ಸ್ ರಿಕ್ಷಾ ನಮ್ಮತ್ತ ಬರತೊಡಗಿತು. ಅದನ್ನು ನಿಲ್ಲಿಸಿ, ಬೈಕನ್ನು ಅದರ ಹಿಂದೆ ಏರಿಸಿ, ನಾವೂ ಏರಿ, ಬದಾಮಿಯತ್ತ ಹೊರಟೆವು.


ಬದಾಮಿ ಕೊಳಕು ಊರು. ಗುಹಾದೇವಸ್ಥಾನಗಳು ಇರುವ ಪ್ರಾಂಗಣ ಬಿಟ್ಟರೆ ಉಳಿದೆಲ್ಲಾ ಕಡೆ ಅಸಹ್ಯ. ಇಲ್ಲಿರುವ ಮಂಗಗಳು ಬಹಳ 'ನೊಟೋರಿಯಸ್'. ಕೈಯಲಿದ್ದನ್ನು ಕಸಿದುಕೊಳ್ಳುವುದು, ವಾಹನದೊಳಗೆ ನೂರಿ ಬ್ಯಾಗ್ ಇತ್ಯಾದಿಗಳನ್ನು ಲಪಟಾಯಿಸುವುದು, ಇತ್ಯಾದಿಗಳಲ್ಲಿ ಇವುಗಳು ಪರಿಣಿತ. ಈ ಗುಹಾದೇವಸ್ಥಾನಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಒಂದಕ್ಕಿಂತ ಒಂದು ಚೆನ್ನಾಗಿರುವ ಗುಹಾದೇವಸ್ಥಾನಗಳು. ಇದೊಂದು ದೊಡ್ಡ ಕೆಂಪುಬಣ್ಣದ ಬಹೂ ದೂರದವರೆಗೂ ಹಬ್ಬಿರುವ ಬೆಟ್ಟ. ಈ ಬೆಟ್ಟದ ಒಂದು ಪಾರ್ಶ್ವದಲ್ಲಿ ಈ ದೇವಸ್ಥಾನಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲಕ್ಕೆ ತೆರಳಲು ಮೆಟ್ಟಿಲುಗಳಿವೆ. ಈಗ ಅಲ್ಲೊಂದು ಗೇಟನ್ನು ಹಾಕಿ ಬೀಗ ಜಡಿಯಲಾಗಿದೆ. ಕೆಲವು ವರ್ಷಗಳ ಹಿಂದೆ ವಿದೇಶಿ ಮಹಿಳೆಯೊಬ್ಬಳನ್ನು, ಬೆಟ್ಟದ ಮೇಲೆ ಅತ್ಯಾಚಾರಗೈದು ಕೊಲೆ ಮಾಡಲಾಗಿದ್ದರಿಂದ, ಈ ಮುನ್ನೆಚ್ಚರಿಕೆಯ ಕ್ರಮ. ಮೇಲೊಂದು ತುಪಾಕಿಯಿದ್ದು, ಅದನ್ನು ನೋಡುವ ಇರಾದೆ ಇದ್ದ ನನಗೆ, ಬೀಗ ಜಡಿದದ್ದನ್ನು ನೋಡಿ ನಿರಾಸೆ. ಮೇಲೆ ಹೋಗಲೇಬೇಕೆಂಬ ಇಚ್ಛೆ ಇದ್ದಲ್ಲಿ, ಗುಹಾದೇವಸ್ಥಾನಗಳು ಇರುವ ಪ್ರಾಂಗಣದಿಂದ ಹೊರಬಂದು, ಬೆಟ್ಟದ ಬುಡದಲ್ಲೇ ಸ್ವಲ್ಪ ದೂರ ನಡೆದು ನಂತರ ಯಾವುದೇ ಶಿಖರ ಏರುವಂತೆ ಒಂದೆರಡು ತಾಸು ನಡೆದು ಮೇಲೆ ತುಪಾಕಿ ಇದ್ದಲ್ಲಿ ತಲುಪಬಹುದು. ಆದರೆ ನನ್ನಲ್ಲಿ ಅಷ್ಟು ಸಮಯವಿರಲಿಲ್ಲ.


ಗುಹಾದೇವಸ್ಥಾನಗಳ ಎದುರಿಗೇ ಅಗಸ್ತ್ಯ ತೀರ್ಥವೆಂಬ ವಿಶಾಲ ಕೆರೆ ಇದೆ. ಅದರ ತಟದಲ್ಲೊಂದು ದೇವಸ್ಥಾನ. ಚೆನ್ನಾಗಿ ಮಳೆ ಬಿದ್ದಾಗ, ಗುಹಾದೇವಸ್ಥಾನಗಳಿರುವ ಬೆಟ್ಟದ ಮೇಲೆ ಬೀಳುವ ಮಳೆನೀರು ಕೆಳಗೆ ಹರಿದು ಈ ಕೆರೆಯನ್ನು ಸೇರುವಾಗ ಜಲಪಾತವೊಂದನ್ನು ನಿರ್ಮಿಸುತ್ತದೆ. ಎರಡು ಕವಲುಗಳಲ್ಲಿ ಬೆಟ್ಟದ ತುದಿಯಿಂದ ೫೦-೭೦ ಅಡಿಯಷ್ಟು ಕೆಳಗೆ ಧುಮುಕುವ ಈ ಜಲಧಾರೆಗೆ 'ಅಕ್ಕ - ತಂಗಿ' ಎಂದು ಹೆಸರು.

ಬದಾಮಿಯ ಬಗ್ಗೆ ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬೇಕಿದ್ದಲ್ಲಿ ಮಹಾಂತೇಶ್ ಬ್ಲಾಗಿಗೆ ಭೇಟಿ ನೀಡಬಹುದು.

ಬದಾಮಿಯಿಂದ ಮುಂದೆ ೫ ಕಿಮಿ ದೂರದಲ್ಲಿದೆ ಚೋಳಚಿಗುಡ್ಡ ಎಂಬ ಸ್ಥಳ. ಇಲ್ಲಿರುವ ಬನಶಂಕರಿ ದೇವಸ್ಥಾನ ನೋಡಿದಾಗ ಅಚ್ಚರಿಯಾಯಿತು. ಮಾರ್ವೆಲಸ್ ದೇವಸ್ಥಾನ. ಜನಜಂಗುಳಿಯೇ ಅಲ್ಲಿ ನೆರೆದಿತ್ತು. ಕಷ್ಟಪಟ್ಟು ದೇವಳದೊಳಗೆ ನುಗ್ಗಿ, ದೇವಿಯ ದರ್ಶನ ಪಡೆದು ಹೊರಬರುವಷ್ಟರಲ್ಲಿ ಸಾಕಾಗಿಹೋಗಿತ್ತು. ಈ ದೇವಸ್ಥಾನದ ಎಷ್ಟು ಪ್ರಸಿದ್ಧಿ ಪಡೆದಿದೆಯೆಂದರೆ, ಈಗ ಚೋಳಚಿಗುಡ್ಡ ಎಂದರೆ ಯಾರಿಗೂ ತಿಳಿಯದು. ಊರಿನ ಹೆಸರೇ ಬನಶಂಕರಿ ಎಂದಾಗಿದೆ. ಇಲ್ಲಿರುವ ಪುಷ್ಕರಿಣಿ ವಿಶಾಲವಾಗಿದ್ದು, ನೀರು ಮಾತ್ರ ಇಲ್ಲ. ಹಿಂದೆ ಸುತ್ತಮುತ್ತಲ ಹಳ್ಳಿಗಳಿಗೆ ನೀರಿನ ಸೆಲೆಯಾಗಿದ್ದ ಈ ಪುಷ್ಕರಿಣಿ ಇಂದು ನೀರಿಲ್ಲದೆ ಭಣಗುಡುತ್ತಿದೆ.

ದೇವಸ್ಥಾನದಿಂದ ಹೊರಗೆ ಬಂದ ಕೂಡಲೇ ಅಲ್ಲಿ ರೊಟ್ಟಿ ಮಾರುತ್ತಿದ್ದ ಮುದುಕಿಯರು ನಮಗೆ ರೊಟ್ಟಿ ಕೊಳ್ಳುವಂತೆ ದುಂಬಾಲುಬಿದ್ದರು. ಅವರವರಲ್ಲೇ ಜಗಳವಾಡುತ್ತಾ, ಬಯ್ಯುತ್ತಾ, ಕಚ್ಚಾಡುತ್ತಾ, 'ಇಲ್ ತಗೊರ್ರಿ, ನನ್ನಲ್ಲಿ ತಗೊರ್ರಿ' ಎಂದು ಬೊಬ್ಬಿಡುತ್ತಿದ್ದರು. ನನಗಂತೂ ಹಸಿವಾಗತೊಡಗಿತ್ತು. ನನ್ನ ಮುಖದ ಮುಂದೆ ಹತ್ತಿಪ್ಪತ್ತು ರೊಟ್ಟಿಗಳು, ಆರೇಳು ಕೈಗಳು, ಯಾರಲ್ಲಿ ಕೊಳ್ಳುವುದೆಂಬುದೇ ಸಮಸ್ಯೆಯಾಗಿತ್ತು. ಅಂತೂ ಕಡೆಗೆ ಅನಿಲ ಅವರನ್ನೆಲ್ಲಾ ಜೋರಾಗಿ ಗದರಿಸಿ, ನಮ್ಮನ್ನು ಮೊದಲು ಮಾತನಾಡಿಸಿದವಳಲ್ಲಿ ೬ ರೊಟ್ಟಿ ಮತ್ತಷ್ಟು ಶೇಂಗಾ ಚಟ್ಣಿ ಖರೀದಿಸಿ, 'ಲಪುಟ್ (ಕಿಲಾಡಿ) ಮುದ್ಕ್ಯಾರು' ಎನ್ನುತ್ತಾ ಬಂದ.

ನಂತರ ಪಟ್ಟದಕಲ್ಲಿನ ಹಾದಿಯಲ್ಲಿ ತೆರಳಿದೆವು. ದಾರಿಯಲ್ಲೇ ಸಿಗುವ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದೆವು. ಬಹಳ ಪ್ರಶಾಂತವಾದ ಸ್ಥಳ. ಅಲ್ಲಲ್ಲಿ ಮರಗಿಡಗಳು. ವಿರಮಿಸಲು ಹೇಳಿ ಮಾಡಿಸಿದಂತಹ ಸ್ಥಳ. ಬನಶಂಕರಿ - ಪಟ್ಟದಕಲ್ಲು ರಸ್ತೆಯಲ್ಲಿ, ಶಿವಯೋಗಿ ಮಂದಿರದ ಬಳಿಕ ಕವಲೊಡೆಯುವ ರಸ್ತೆಯಲ್ಲಿ ೨ಕಿಮಿ ತೆರಳಿದರೆ ಮಹಾಕೂಟ. ಬನಶಂಕರಿಯಲ್ಲಿ ಬಿಸಿಲಿನ ಝಳದಿಂದ ಪಾರಾದರೆ ಸಾಕಪ್ಪಾ ಎಂದೆನಿಸುತ್ತಿದ್ದರೆ ಇಲ್ಲಿ, ಇಲ್ಲೇ ಇದ್ದುಬಿಡೋಣ ಎನ್ನುವಷ್ಟು ತಂಪಾಗಿತ್ತು. ಸುತ್ತು ಸ್ವಲ್ಪ ಕಾಡಿನಂತಿದ್ದು, ಮಹಾಕೂಟ ಪ್ರಶಾಂತವಾದ ಸ್ಥಳದಲ್ಲಿದೆ. ಪೂಜೆ ನಡೆಯುವ ದೇವಸ್ಥಾನದ ಎಡಕ್ಕೆ ಸಣ್ಣದೊಂದು ಪುಷ್ಕರಿಣಿ. ಅಲ್ಲಿ ಬನಶಂಕರಿಯ ಪುಷ್ಕರಿಣಿಯಲ್ಲಿ ಹನಿ ನೀರಿಲ್ಲದಿದ್ದರೂ, ಇಲ್ಲಿ ಮಾತ್ರ ಹೇರಳ ನೀರು. ಅದಾಗಲೇ ನಾಲ್ಕಾರು ಮಂದಿ ಸ್ನಾನ ಮಾಡತೊಡಗಿದ್ದರು. ಸುತ್ತಲೂ ಹಳೇ ಕಾಲದ ದೇವಳಗಳು ಮತ್ತು ದೇವ ದೇವಿಯರ ಮೂರ್ತಿಗಳು. ಮಹಾಕೂಟ ನನಗೆ ಬಹಳ ಹಿಡಿಸಿತು. ಅಲ್ಲೇ ಸಮೀಪದಲ್ಲಿ ಹಳೇ ಮಹಾಕೂಟವೆಂಬ ಸ್ಥಳವೊಂದಿದೆ ಎಂದು ಉಡುಪಿಗೆ ಮರಳಿದ ಬಳಿಕ ನನಗೆ ತಿಳಿದುಬಂತು.

ಮರಳಿ ಮುಖ್ಯ ರಸ್ತೆಗೆ ಬಂದು ಪಟ್ಟದಕಲ್ಲಿನೆಡೆ ಅನಿಲ ಬೈಕನ್ನು ಓಡಿಸಿದ. 'ಪಟ್ಟದಕಲ್ಲು - ೪' ಎಂಬ ದೂರಸೂಚಿ ಇರುವಲ್ಲಿ ಮಣ್ಣಿನ ರಸ್ತೆಯೊಂದು ಕವಲೊಡೆದಿತ್ತು. ಅದು ೩ಕಿಮಿ ದೂರವಿರುವ ಹುಲಿಗೆಮ್ಮನಕೊಳ್ಳಕ್ಕೆ ಹೋಗುವ ದಾರಿಯಾಗಿತ್ತು. ಅಲ್ಲಿ ಬೈಕು ನಿಲ್ಲಿಸಿದ ಅನಿಲ, 'ಇಲ್ಲೊಂದು ಮಸ್ತ್ ಪ್ಲೇಸ್ ಐತಿ, ಹೋಗೋಣೆನ್?' ಎಂದು ನನ್ನಲ್ಲಿ ಕೇಳಿದ. ಅಲ್ಲೊಬ್ಬಳು ಬಸ್ಸಿಗಾಗಿ ಕಾಯುತ್ತಿದ್ದಳು. ಆಕೆಯಲ್ಲಿ 'ಅಲ್ಲೇನೈತಿ' ಎಂದು ಕೇಳಿದಾಗ, 'ಏ ಹೋಗ್ ಬರ್ರಿ, ಗುಡ್ದದ್ ಮಧ್ಯಾ ಗುಹೆ ಐತ್ರಿ, ದೇವಿ ಅದಾಳ್ರಿ, ನೀರ್ ಬೀಳ್ತೈತ್ರಿ', ಎಂದಳು. ನನ್ನ ಕಿವಿಗೆ 'ನೀರ್ ಬೀಳ್ತೈತ್ರಿ' ಎಂದು ಕೇಳಿದ್ದೇ ತಡ, 'ನಡೀಪ್ಪಾ ಮಾರಾಯ' ಎಂದು, ಅನಿಲನಲ್ಲಿ ಬೈಕನ್ನು ಹುಲಿಗೆಮ್ಮನಕೊಳ್ಳದೆಡೆ ಚಲಾಯಿಸುವಂತೆ ಅವಸರ ಮಾಡತೊಡಗಿದೆ.


ದಾರಿ ನೇರವಾಗಿ ಹುಲಿಗೆಮ್ಮ ದೇವಿಯ ಕೊಳ್ಳಕ್ಕೆ ಬಂದು ಕೊನೆಗೊಂಡಿತ್ತು. ಒಂದೇ ನಿಮಿಷ ನಡೆದು ಎಡಕ್ಕೆ ಮುಖ ಮಾಡಿದರೆ.... ಆಹಾ! ಎಂತಹ ಅದ್ಭುತ ಸ್ಥಳ. ಸುಮಾರು ೨೦೦ಅಡಿ ಎತ್ತರದಿಂದ ಇಳಿಯುತ್ತಿರುವ ಮನತಣಿಸುವ ಜಲಧಾರೆ. ಮತ್ತದೇ ಕೆಂಪು ರಂಗಿನ ಬೆಟ್ಟ. ಮೇಲಿನಿಂದ ಕೆಲವು ಬಿಳಿಲುಗಳು ಜಲಧಾರೆಯ ಕೆಳಗಿನವರೆಗೂ ನೇತಾಡುತ್ತಿವೆ. ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದರೂ, ಅಲ್ಲಿನ ಪರಿಸರಕ್ಕೆ ಪೂರಕವಾಗಿತ್ತು ಈ ಜಲಧಾರೆ. ಮಳೆಯಿದ್ದಾಗ ನೋಡಿದರೆ ಇನ್ನೂ ಚೆನ್ನಾಗಿರುತ್ತೆ. ಗುಡ್ಡದ ಕಲ್ಲಿನ ಮೇಲ್ಮೈಯನ್ನೇ ಕೊರೆದು ಹುಲಿಗೆಮ್ಮ ದೇವಿಯ ಮಂದಿರಕ್ಕೆ ಜಾಗವನ್ನು ನಿರ್ಮಿಸಲಾಗಿದೆ (ಪ್ರಾಕೃತಿಕ ಇರಬಹುದು). ಮುಂದೆ ಜಲಧಾರೆ, ಅದರ ಹಿಂದೆ ಗುಹೆ. ಆ ಗುಹೆಯಂತಹ ಸ್ಥಳದಲ್ಲಿ ನಿಂತರೆ, ಜಲಧಾರೆಯನ್ನು ಹಿಂದಿನಿಂದ ನೋಡುವ ಅಪೂರ್ವ ಅನುಭವ. ಮುಖದ ಮೇಲೆ ಜಲಧಾರೆಯ ಹನಿ ಹನಿ ನೀರಿನ ಪ್ರೋಕ್ಷಣೆ. ಈ ಗುಹೆಯೊಳಗೆ ಹುಲಿಗೆಮ್ಮದೇವಿಯ ಮಂದಿರ, ಶಿವಲಿಂಗ, ಒಂದೆರಡು ಸಣ್ಣ ದೇವಳಗಳು, ಅಡಿಗೆಮನೆ ಇಷ್ಟು ಇವೆ. ಒಂದು ಸಲಕ್ಕೆ ೨೫೦ ಜನರು ರಾತ್ರಿ ಕಳೆಯುವಷ್ಟು ವಿಶಾಲವಾಗಿದೆ ಇಲ್ಲಿನ ಜಗುಲಿ. ಜಲಪಾತದ ಮುಂದೆ ಹಳ್ಳದ ನೀರು ಸಣ್ಣ ತೋಪಿನೊಳಗೆ ಹರಿಯುತ್ತದೆ. ಈ ತೋಪಿನಲ್ಲಿ ಹಕ್ಕಿಗಳ ಚಿಲಿಪಿಲಿಯ ನಡುವೆ ಸ್ವಲ್ಪ ಸಮಯ ಕಳೆದೆವು. ನನಗಂತೂ ಹುಲಿಗೆಮ್ಮನಕೊಳ್ಳ ಅನಿರೀಕ್ಷಿತವಾಗಿ ಸಿಕ್ಕ ನಿಧಿ. ಅಲ್ಲಿ ಕಳೆದ ೩೦ ನಿಮಿಷ ಆಗಾಗ ನೆನಪಾಗುತ್ತಿರುತ್ತದೆ.


ಪಟ್ಟದಕಲ್ಲಿನ ದೇವಸ್ಥಾನ ಪ್ರಾಂಗಣ ಮನಸೂರೆಗೊಳ್ಳುವಂತದ್ದು. ೭ನೇ ಮತ್ತು ೮ನೇ ಶತಮಾನದಲ್ಲಿ ಚಾಳುಕ್ಯರ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿರುವ ಈ ದೇವಸ್ಥಾನಗಳು ಅದ್ಭುತವಾಗಿವೆ. ಇಲ್ಲಿರುವ ಜೈನ ಬಸದಿಯೊಂದನ್ನು ಸೇರಿಸಿ ೧೦ ದೇವಳಗಳಿವೆ. ವಿಜಯಾದಿತ್ಯ ಸತ್ಯಾಶ್ರಯನೆಂಬ ಚಾಳುಕ್ಯ ರಾಜನು ಕಟ್ಟಿಸಿದ ಸಂಗಮೇಶ್ವರ ದೇವಸ್ಥಾನ ಇಲ್ಲಿರುವ ದೇವಸ್ಥಾನಗಳಲ್ಲಿ ಅತಿ ಹಳೆಯದ್ದು. ಆಕರ್ಷಕವಾಗಿದ್ದು ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ದೇವಸ್ಥಾನವೆಂದರೆ ವಿರೂಪಾಕ್ಷ ದೇವಸ್ಥಾನ. ಈ ದೇವಸ್ಥಾನವನ್ನು ರಾಣಿ ಲೋಕಮಹಾದೇವಿಯು ತನ್ನ ಗಂಡ ಎರಡನೇ ವಿಕ್ರಮಾದಿತ್ಯ, ಪಲ್ಲವರ ವಿರುದ್ಧ ಜಯಗಳಿಸಿದ ನೆನಪಿಗಾಗಿ ಕಟ್ಟಿಸಿದ್ದಳು. ಹೆಚ್ಚಿನ ವಿವರ ಇಲ್ಲಿದೆ.

ಪಟ್ಟದಕಲ್ಲಿನಿಂದ ಐಹೊಳೆಗೆ ತೆರಳುವ ಹಾದಿಯಲ್ಲಿ ಬಲಕ್ಕೆ ಒಂದು ಬೆಟ್ಟದ ಮೇಲಿದೆ ಸಿದ್ಧನಕೊಳ್ಳ. ಮೇಲಿನವರೆಗೂ ಚಪ್ಪಡಿಕಲ್ಲು ಹಾಸಿದ ರಸ್ತೆ ಇದೆ. ಇಲ್ಲಿದೆ ಒಂದು ಸಣ್ಣದಾದರೂ, ಪ್ರಶಾಂತ ಕಣಿವೆ ಮತ್ತೆ ಸಣ್ಣ ತೊರೆ. ಆಯಾಸ ಪರಿಹಾರ ಮಾಡಲು ಮತ್ತೊಂದು ಸ್ಥಳ. ಮಳೆ ಬಿದ್ದಾಗ ಮಾತ್ರ ೨೦ ಅಡಿಯಷ್ಟು ಎತ್ತರವಿರುವ ಜಲಧಾರೆಯಲ್ಲಿ ನೀರು ಧುಮುಕುತ್ತಿರುತ್ತದೆ. ನಂತರ ಐಹೊಳೆಗೆ ಪಯಣ. ದಾರಿಯುದ್ದಕ್ಕೂ ಸೂರ್ಯನೆಡೆ ಮುಖ ಮಾಡಿ ನಿಂತಿರುವ ಸೂರ್ಯಕಾಂತಿಗಳ ಸುಂದರ ನೋಟ.


ಐಹೊಳೆಯಲ್ಲಿ ೧೨೫ಕ್ಕೂ ಹೆಚ್ಚಿನ ದೇವಳಗಳಿವೆಯೆಂದು ಹೇಳಲಾಗುತ್ತಿದ್ದರೂ, ಇವುಗಳಲ್ಲಿ ಹೆಚ್ಚಿನವು ನಶಿಸಿಹೋಗಿವೆ. ಸುಂದರವಾಗಿ, ಆಕರ್ಷಕವಾಗಿ ಕಾಣುವಂತದ್ದು ಇಲ್ಲಿರುವ ದುರ್ಗಾ ದೇವಸ್ಥಾನ. ಈ ದೇವಸ್ಥಾನವನ್ನು ಚಾಳುಕ್ಯ ದೊರೆ ಎರಡನೇ ಪುಲಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬವನು ನಿರ್ಮಿಸಿದ್ದ ಎಂದು ಹೇಳಲಾಗುತ್ತದೆ. ಚಾಳುಕ್ಯರು ಐಹೊಳೆಯಲ್ಲಿ ಮೊದಲು ದೇವಸ್ಥಾನಗಳನ್ನು ಕಟ್ಟಿಸಿದ್ದರು. ನಂತರ ಪಟ್ಟದಕಲ್ಲಿನ ದೇವಸ್ಥಾನಗಳನ್ನು ಕಟ್ಟಿಸಿದರು. ಐಹೊಳೆಯಲ್ಲಿರುವ ದೇವಸ್ಥಾನಗಳ ಶೈಲಿಯನ್ನು 'ಹಳೇ ಚಾಳುಕ್ಯ ಶೈಲಿ' ಎನ್ನಲಾಗುತ್ತದೆ. ಹೆಚ್ಚಿನ ವಿವರ ಇಲ್ಲಿದೆ.

ಇದೇ ಲೇಖನವನ್ನು ಸಂಪದದಲ್ಲಿ ಹಾಕಿದಾಗ, ಸಂಪದ ಓದುಗರಾದ ಹಂಸಾನಂದಿ ಮತ್ತು ಕಾರ್ತಿಕ್, ಐಹೊಳೆಯ ಈ ದೇವಸ್ಥಾನದ ಬಗ್ಗೆ ನನ್ನ ಲೇಖನದಲ್ಲಿ ಟಿಪ್ಪಣಿ ಬರೆದು ನಾನು ಮೇಲೆ ಬರೆದ ಒಂದೆರಡು ತಪ್ಪು ಮಾಹಿತಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.

ಹಿಂತಿರುಗುವಾಗ ಒಂದೆಡೆ ಎಡಕ್ಕೆ ತಿರುವು ಪಡೆದು ಬಾಗಲಕೋಟ ಪಟ್ಟಣದೊಳಗೆ ತೆರಳುವ ಬದಲಾಗಿ ಅನಿಲ ನೇರ ಮುಂದಕ್ಕೆ ಬೈಕನ್ನು ಓಡಿಸಿದ. ಒಂದೆರಡು ಕಿಮಿ ತೆರಳಿದ ಕೂಡಲೇ ಆಲಮಟ್ಟಿ ಹಿನ್ನೀರಿನಲ್ಲಿ ನಾವು ತೆರಳುತ್ತಿದ್ದ ರಸ್ತೆ ಮುಳುಗಿತ್ತು. ಇದು ಹಳೇ ಬಾಗಲಕೋಟ. ಆ ರಸ್ತೆ ನೇರವಾಗಿ ಬಾಗಲಕೋಟ ಬಸ್ಸು ನಿಲ್ದಾಣಕ್ಕೆ ತೆರಳುವ ರಸ್ತೆಯಾಗಿತ್ತು. ಈಗ ಸುತ್ತು ಬಳಸಿ ಹೊಸ ರಸ್ತೆಯನ್ನು ಮಾಡಲಾಗಿದೆ. ಮುಂದೆ ನೋಡಿದರೆ ವಿಶಾಲ ಜಲರಾಶಿ. 'ಸಿಟಿಯೊಳಗೆ ಅಷ್ಟೇನು ಮುಳುಗಡೆಯಾಗಿಲ್ಲವಲ್ಲ' ಎಂದು ನಾನು ಕೇಳಲು, 'ನಾಳೆ ತೋರಿಸ್ತಿನಿ' ಎಂದು ಅನಿಲ ಬೈಕನ್ನು ಮನೆಯೆಡೆ ದೌಡಾಯಿಸಿದ. ಆ ದಿನದ ಮಟ್ಟಿಗೆ ಆತ ನನಗೆ 'ದುನಿಯಾ' ತೋರಿಸಿದನೆನ್ನಿ.

ಸೋಮವಾರ, ಆಗಸ್ಟ್ 06, 2007

ಚಾರಣ ಭತ್ತೆ

ಮೊನ್ನೆ ಶನಿವಾರ ಜೂನ್ ೪ರಂದು ಬೆಂಗಳೂರಿನಲ್ಲಿ ನಮ್ಮ ಕಂಪೆನಿದ್ದು ಕ್ವಾರ್ಟರ್ಲಿ ಮೀಟಿಂಗು. ಕಳೆದ ವರ್ಷದ ಲಾಭ ಹಂಚಿಕೊಳ್ಳುವ ಬಗ್ಗೆ ನಿರ್ಧಾರ ಮತ್ತು ಈ ವರ್ಷದ ಮೊದಲ ಕ್ವಾರ್ಟರ್-ನ ನಿರ್ವಹಣೆಯ ಬಗ್ಗೆ ಮಾತುಕತೆ. ಇದರೊಂದಿಗೆ ಒಂದೆರಡು ಕಡೆ ಸಂಸ್ಥೆಯ ಶಾಖೆಗಳನ್ನು ತೆರೆಯುವ (ಸದ್ಯಕ್ಕೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಇದೆ) ಬಗ್ಗೆ ಹಾಗೂ ಇನ್ನೂ ಇತ್ಯಾದಿ ಮಾತುಗಳ ಬಗ್ಗೆ ಶನಿವಾರ ದಿನವಿಡೀ ಮಣಿಪಾಲ್ ಸೆಂಟರ್-ನ ನಮ್ಮ ಹೆಡ್ ಆಫೀಸಿನಲ್ಲಿ ಮೀಟಿಂಗು.

ಕಾಸರಗೋಡಿನ ಉಪ್ಪಂಗಳದ ವೇಣು ಶರ್ಮಾ ನಮ್ಮ ಸಿ.ಇ.ಓ. ಭಲೇ ಚತುರ ಮಾತುಗಾರ. ೨೪ ಗಂಟೆ 'ಸ್ಟ್ರ್ಯಾಟೆಜಿ', 'ಬ್ರಾಂಡು', 'ಪ್ರಾಡಕ್ಟು', 'ಕನ್ಸಲ್ಟೇಶನ್ನು', 'ಪ್ರೆಸೆಂಟೇಶನ್' ಇತ್ಯಾದಿಗಳಲ್ಲೇ ಮುಳುಗಿರುವವರು. ಮಂಗಳೂರಿಗೆ ಬಂದಾಗ, ಕೆಲವು ಹೊಸ ಕ್ಲೈಂಟುಗಳ ಬಳಿ ಇವರನ್ನು ಪರಿಚಯ ಮಾಡಲೋಸುಗ ಅಥವಾ ಕ್ಲೈಂಟುಗಳನ್ನು ಮರುಳು ಮಾಡುವುದಿದ್ದಲ್ಲಿ ನಾನು ವೇಣುರನ್ನು ಕರೆದೊಯ್ಯುವುದು ಇದ್ದೇ ಇರುತ್ತೆ. ಆಗ ಇವರ 'ಶರ್ಮಾ' ಎಂಬ ಹೆಸರಿನ ಹಿಂದೆ ಎಲ್ಲರಿಗೂ ಕುತೂಹಲ ಹುಟ್ಟಿ, 'ನೀವು.....'? ಎಂದು ಕೇಳುವುದೂ ಸ್ವಾಭಾವಿಕ. ಅವರು ಹಾಗೆ ಕೇಳಿದಾಗ, ನಮ್ಮ ಸಿ.ಇ.ಓ, 'ನಾನು ಕಾಶ್ಮೀರಿ ಬ್ರಾಹ್ಮಣ, ಅಲ್ಲಿಂದ ...... ನಂತರ ಸಾಂಗ್ಲಿಗೆ ಬಂದು..... ನಂತರ ಕೆಲವರು ತಮಿಳುನಾಡಿಗೆ ಹೋದರೆ.....ಉಳಿದವರು ಕಾಸರಗೋಡಿನಲ್ಲಿ ಉಳಿದರು' ಎಂದು ಕಥೆ ಮುಗಿಯುವಷ್ಟರಲ್ಲಿ ನಾನು ನಾಲ್ಕಾರು ಬಾರಿ ಆಕಳಿಸಿಯಾಗಿರುತ್ತದೆ. ಆರು ತಿಂಗಳಿಗೊಮ್ಮೆ ನನ್ನಲ್ಲಿ, 'ಟ್ರೆಕ್ಕಿಂಗ್ ಹೇಗೆ ನಡೆಯುತ್ತಿದೆ..' ಎಂದು ಕೇಳುತ್ತಾರೆ ಅದು ಕೂಡಾ ಮಾತನಾಡಲು ಎಷ್ಟು ತಲೆ ಕೆರೆದುಕೊಂಡರು ಬೇರೇನೂ ಇಲ್ಲದಿರುವಾಗ!

ಕಳೆದ ವರ್ಷ ನಾನು ಸಾಧಿಸಿದ್ದು ಟಾರ್ಗೆಟ್-ನ ೭೮% ಮಾತ್ರ. ಈ ವರ್ಷದ ಮೊದಲ ಕ್ವಾರ್ಟರ್-ನಲ್ಲಿ ಸಾಧಿಸಿದ್ದು ೭೦% ಮಾತ್ರ. ಆದರೂ ಏನಾದರೂ ಸಬೂಬು ಕೊಟ್ಟು ಪಾರಾದೆ ಎನ್ನಿ. 'ನಿಮ್ಮ ಟ್ರೆಕ್ಕಿಂಗು ಹೆಚ್ಚಾಗ್ತಾ ಇದೆ ಅನ್ಸುತ್ತೆ, ಅದ್ಕೆ ಬಿಸಿನೆಸ್ಸು ನಿರೀಕ್ಷಿತ ಮಟ್ಟಕ್ಕೆ ಆಗ್ತಾ ಇಲ್ಲ' ಎಂದು ವೇಣು ಶರ್ಮಾ ಉವಾಚ. ಆದರೂ ಮೀಟಿಂಗಿನ ಕಡೆಗೆ ಅಜೆಂಡಾದಲ್ಲಿ 'ಸಲಹೆ-ಸೂಚನೆ' ಎಂಬಲ್ಲಿಗೆ ಬಂದಾಗ, ಮೊದಲೇ ನಾನು ಚಾರಣ ಅತಿಯಾಗಿ ಮಾಡುವುದರಿಂದ ಬಿಸಿನೆಸ್ಸು ಅಷ್ಟಾಗಿ ಆಗುತ್ತಿಲ್ಲ ಎಂದು ನನ್ನ ಚಾರಣ ಹವ್ಯಾಸದೆಡೆ ಕೆಂಗೆಣ್ಣು ಬೀರಿದ್ದ ಶರ್ಮಾರಲ್ಲಿ ನಾನು, 'ಶರ್ಮಾ, ಮಂಗಳೂರಿನಲ್ಲಿ ನನಗೆ 'ಟ್ರೆಕ್ಕಿಂಗ್ ಅಲ್ಲೊವನ್ಸ್' ಎಂಬ ಭತ್ತೆಯನ್ನು ಪ್ರಾರಂಭಿಸುವ ಯೋಚನೆ ಇದೆ' ಎಂದಾಗ, ಅವರು ಕುರ್ಚಿಯಿಂದ ಬೀಳುವುದೊಂದು ಬಾಕಿ!

ನಗಬೇಕೋ, ಗದರಿಸಬೇಕೋ ಎಂದು ತಿಳಿಯದೆ, ಉಳಿದವರೊಂದಿಗೆ ತಾನೂ ನಗುತ್ತಾ 'ರಾಜೇಶ್, ವೇರಿಯೇಬಲ್ ಕಾಸ್ಟ್ ಆದಷ್ಟು ಕಡಿಮೆ ಇಟ್ಕೊಳ್ಳಬೇಕು .... ' ಎಂದು ಭಾಷಣ ಶುರುವಿಟ್ಟರು. ಆದರೂ ನಾನು 'ಚಾರಣ ಒಂದು ಉತ್ತಮ ಹವ್ಯಾಸ, ಆರೋಗ್ಯಕ್ಕೆ ಉತ್ತಮ, ಪರಿಸರದ ಬಗ್ಗೆ ಮಾಹಿತಿ ತಿಳಿಯುತ್ತೆ...... ನಾವದನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ನಾನು ಟ್ರೆಕ್ಕಿಂಗ್ ಅಲ್ಲೊವನ್ಸ್ ಯೋಚನೆ ಹಾಕಿಕೊಂಡಿದ್ದು' ಎಂದು ಸಮಜಾಯಿಷಿ ನೀಡತೊಡಗಿದೆ. ಆದರೂ ಅವರು ಒಪ್ಪಲಿಲ್ಲ. ನಿಮ್ಮ ಉತ್ತಮ ಹವ್ಯಾಸದಿಂದ ಬಿಸಿನೆಸ್ ಆಗುತ್ತಿಲ್ಲ ಎಂಬ ವಾದ ಮುಂದಿಟ್ಟು ಮೀಟಿಂಗು ಮುಗಿಸಿದರು. ಮುಂದಿನ ಮೀಟಿಂಗಿನಲ್ಲಿ ಮತ್ತೆ ಈ ವಿಷಯ ಎತ್ತಲಿದ್ದೇನೆ.

ಹಾಗೆ ನೋಡಿದರೆ 'ಚಾರಣ ಭತ್ತೆ' ಎಂದು ಒಂದಷ್ಟು ಹಣ ತಗೊಂಡು, ವೋಚರ್ ಪುಸ್ತಕದಲ್ಲಿ ಆಟೋ ಚಾರ್ಜೋ ಅಥ್ವಾ ಬಸ್ಸು ಚಾರ್ಜೋ ಎಂದು ಹಾಕಿದರೆ ಯಾವನಿಗೆ ತಿಳಿಯುತ್ತೆ? ಆದರೆ ಅದು ಸಲ್ಲದು. ಕಂಪನಿ ದಾಖಲೆಗಳಲ್ಲಿ 'ಚಾರಣ ಭತ್ತೆ' ಎಂದೇ ದಾಖಲಾಗಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲಿರುವುದು....

ಬುಧವಾರ, ಆಗಸ್ಟ್ 01, 2007

ಜೋಗದಲ್ಲಿ 'ಜೋಗ'ದ ಹೊರತಾಗಿ


ಜೋಗದಲ್ಲಿ 'ಜೋಗ ಜಲಪಾತ' ಪ್ರಮುಖ ಆಕರ್ಷಣೆ. ಅಲ್ಲೇ ಆಸುಪಾಸಿನಲ್ಲಿ ಮಳೆಗಾಲದ ಅತಿಥಿಗಳಂತೆ ನಾಲ್ಕಾರು ಇತರ ಜಲಧಾರೆಗಳಿದ್ದು, ತಮ್ಮದೇ ಆದ ಸೌಂದರ್ಯ ಇವುಗಳಿಗಿದ್ದರೂ ಯಾರೂ ಅವಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ. ಅಂತಹ ೪ ಜಲಧಾರೆಗಳ ಚಿತ್ರ ಇಲ್ಲಿವೆ. ಮೇಲಿರುವುದು ಜೋಗದ ಪ್ರಮುಖ ಜಲಧಾರೆಗಿಂತ ಸ್ವಲ್ಪವೇ ಮುಂದೆ ಕಣಿವೆಗೆ ಧುಮುಕುವ ಸುಂದರ ಜಲಧಾರೆ. ವೀಕ್ಷಣಾ ಸ್ಥಳದಿಂದ ಇದು ಸುಲಭದಲ್ಲೇ ಕಾಣುತ್ತದೆ. ಸುಮಾರು ೬೦೦ ಅಡಿ ಎತ್ತರವಿದ್ದು, ಮೇಲಿನ ೧೦೦-೧೫೦ ಅಡಿ ಮಾತ್ರ ಕಾಣುತ್ತದೆ. ಹಾಗೇ ಸ್ವಲ್ಪ ಮುಂದಕ್ಕೆ ನಡೆದುಕೊಂಡು ಹೋದರೆ ಮರಗಿಡಗಳ ಮರೆಯಲ್ಲಿ ಸುಮಾರು ೨೫೦ ಅಡಿ ಆಳದವರೆಗೆ ಅಸ್ಪಷ್ಟವಾಗಿ ಗೋಚರಿಸುತ್ತದೆ.


ಕಣಿವೆಯಲ್ಲಿ ಮತ್ತೂ ಸ್ವಲ್ಪ ಮುಂದೆ ಈ ಜಲಧಾರೆ ಗೋಚರಿಸುವುದು.


ಈ ಜಲಧಾರೆ ಮಂದಗಮನೆಯಂತೆ ಬಳುಕುತ್ತಾ ವೈಯ್ಯಾರದಿಂದ ಸುಮಾರು ೫೦೦ ಅಡಿ ಎತ್ತರದಿಂದ ಕಣಿವೆಯ ಮೇಲ್ಮೈಯನ್ನು ಸವರುತ್ತಾ ನಿಧಾನವಾಗಿ ಕಣಿವೆಯ ಆಳಕ್ಕೆ ಜಾರುತ್ತದೆ. ಮಹಾತ್ಮಾ ಗಾಂಧಿ ವಿದ್ಯುದಾಗರದಿಂದ ಈ ಜಲಧಾರೆಯ ನೋಟ ಲಭ್ಯ.


ಈ ಜಲಧಾರೆಯ ನೋಟ ಕೂಡಾ ಮಹಾತ್ಮಾ ಗಾಂಧಿ ವಿದ್ಯುದಾಗರದ ಸಮೀಪದಿಂದ ಲಭ್ಯ. ರಾಜಾರೋಷವಾಗಿ ಧುಮುಕುವ ಇದರ ರೌದ್ರಾವತಾರ ದೂರದಿಂದಲೇ ಚಂದ.