ಈ ದೇವಾಲಯದ ಇರುವಿನ ಬಗ್ಗೆ ನನಗೆ ಅರಿವಿರಲಿಲ್ಲ. ಬಾಗೂರನ್ನು ದಾಟಿ ಮುಂದಿನ ಊರಿನೆಡೆ ತೆರಳುವಾಗ ಹೊಲಗಳ ನಡುವೆ ತೆಂಗಿನತೋಟದ ಮಧ್ಯೆ ಈ ದೇವಾಲಯ ಕಂಡಿತು. ವಾಹನ ನಿಲ್ಲಿಸಿ ಮೂರ್ನಾಲ್ಕು ಗದ್ದೆಗಳನ್ನು ದಾಟಿ ತೆಂಗಿನತೋಟ ತಲುಪಿದೆ. ದೇವಾಲಯ ಪಾಳುಬಿದ್ದಿಲ್ಲ ಆದರೆ ಜೀರ್ಣಾವಸ್ಥೆಗೆ ತಲುಪಿದೆ. ದಿನಾಲೂ ಪೂಜೆ ಸಲ್ಲಿಸುವ ಕುರುಹುಗಳು ಕಂಡವು. ದೇವಾಲಯದ ದ್ವಾರಕ್ಕೆ ಬೀಗ ಹಾಕಲಾಗಿತ್ತು.
ದ್ವಾರದ ಬಳಿಯಲ್ಲೇ ಸುಮಾರು ೮-೧೦ ಅಡಿ ಎತ್ತರದ ಶಾಸನವೊಂದನ್ನು ಇರಿಸಲಾಗಿದೆ. ಈ ದೇವಾಲಯದ ಬಗ್ಗೆ ಎಲ್ಲೂ ಮಾಹಿತಿ ದೊರಕದ ಕಾರಣ ಆ ಶಾಸನದಲ್ಲಿ ಅದೇನು ಮಾಹಿತಿ ಇದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.
ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಪರಿಸರವನ್ನು ಸ್ವಚ್ಚವಾಗಿ ಇರಿಸಿಕೊಳ್ಳಲಾಗಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳ ನಡುವೆ ನಂದಿಯ ದೊಡ್ಡ ಸುಂದರ ಮೂರ್ತಿಯಿದೆ. ಗರ್ಭಗುಡಿಯ ದ್ವಾರವು ತ್ರಿಶಾಖಾ ದ್ವಾರದಂತೆ ತೋರುತ್ತಿದ್ದು, ಪ್ರತೀ ಶಾಖೆಯು ಆಕರ್ಷಕ ಅಲಂಕಾರಿಕಾ ಬಳ್ಳಿ ಕೆತ್ತನೆಯನ್ನು ಹೊಂದಿದೆ. ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಒಳಗಡೆ ಆಕರ್ಷಕವಾಗಿ ಕಾಣುವ ಶಿವಲಿಂಗವಿದೆ.
ದೇವಾಲಯದ ಒಂದು ಪಾರ್ಶ್ವದ ಹೊರಗೋಡೆ ಸಂಪೂರ್ಣವಾಗಿ ಕುಸಿದಿದೆ. ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ.
ಶಿಖರದ ಕಲ್ಲಿನ ಹೊರಕವಚ ಮಾಯವಾಗಿದೆ. ಶಿಖರವು ಮೂರು ಸ್ತರಗಳನ್ನು ಹೊಂದಿದ್ದು, ತುದಿಯಲ್ಲಿ ಕಲಶವಿದ್ದ ಕುರುಹುಗಳು ಕಂಡುಬರುತ್ತವೆ.
ದೇವಾಲಯವು ಪ್ರಶಾಂತ ಪರಿಸರದಲ್ಲಿದ್ದು, ಸ್ವಲ್ಪ ದಣಿದಿದ್ದ ನನಗೆ ವಿಶ್ರಮಿಸಲು ಅನುಕೂಲವಾಯಿತು. ಊರ ಹೊರಗೆ ಇರುವುದರಿಂದ, ಕುರಿ ಕಾಯಿಸುವವರು ತಮ್ಮ ಕುರಿಗಳನ್ನು ಮೇಯಲು ಬಿಟ್ಟು ವಿಶ್ರಮಿಸುವ ಸ್ಥಳವೂ ಇದಾಗಿದೆ.
ಅನತಿ ದೂರದಲ್ಲಿದೆ ಗದ್ದೆ ರಾಮೇಶ್ವರ ದೇವಸ್ಥಾನ. ಇದಕ್ಕೂ ಬೀಗ ಜಡಿಯಲಾಗಿತ್ತು. ನಂದಿ ಮತ್ತು ಶಿವಲಿಂಗ ಸುಂದರವಾಗಿವೆ. ದೇವಾಲಯಕ್ಕೆ ಸುಣ್ಣ ಬಳಿಯಲಾಗಿತ್ತು.