ಶುಕ್ರವಾರ, ಆಗಸ್ಟ್ 30, 2013
ಸೋಮವಾರ, ಆಗಸ್ಟ್ 26, 2013
ಉಡುಪಿಯ ಚೆಲುವ
ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಗೆಳೆಯ ಗುರುದತ್ತ ರಚಿಸಿರುವ ’ಉಡುಪಿಯ ಚೆಲುವ’. ಸಂಗೀತ ಸಂಯೋಜನೆ ಸುರೇಂದ್ರ ಶೇಟ್‍ರಿಂದ. ಉತ್ತಮ ಗುಣಮಟ್ಟದ ವಿಡಿಯೋವನ್ನು ಯುಟ್ಯೂಬ್‍ನಲ್ಲಿ ಈ ಕೊಂಡಿಯ ಮೂಲಕ ನೋಡಬಹುದು. ಈ ವಿಡಿಯೋವನ್ನು ಇಲ್ಲಿ ಹಾಕಲು ಅನುಮತಿ ನೀಡಿದ ಗುರುದತ್ತರಿಗೆ ಧನ್ಯವಾದ.
ಸೋಮವಾರ, ಆಗಸ್ಟ್ 19, 2013
ಮಾನ್ಸೂನ್ ವಾಕ್...
ಈ ಸಲ ವರುಣನ ಕೃಪೆ ಭರ್ಜರಿಯಾಗಿಯೇ ಆಗಿದ್ದು, ಎಲ್ಲಾದರೂ ಮಾನ್ಸೂನ್ ವಾಕ್‍ಗೆ ಹೋಗಿ ಬರೋಣ ಎಂದು ಈ ಹಳ್ಳಿಯೆಡೆ ಅದೊಂದು ರವಿವಾರ ಹೊರಟು ನಿಂತೆ. ಚಾರಣವನ್ನು ಬಲೂ ಇಷ್ಟಪಡುವ ಹಿರಿಯರಾದ ರಾಗಣ್ಣ ಹಾಗೂ ಮಾದಣ್ಣ ನನಗೆ ಜೊತೆಯಾದರು.
ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿಗೆ ಹೋಗುವ ಇರಾದೆ ಇತ್ತು. ಈ ಇರಾದೆಯ ಹಿಂದೆ ಇದ್ದ ಬಲವಾದ ಕಾರಣವೇನೆಂದರೆ ಈ ಹಳ್ಳಿಯಲ್ಲಿರುವ ಸುಂದರ ಜಲಧಾರೆ. ಮಳೆಗಾಲದಲ್ಲಿ ಜಲಧಾರೆಯ ಸಮೀಪ ಸುಳಿಯುವುದು ಅಸಾಧ್ಯವೆಂದು ತಿಳಿದಿದ್ದರೂ, ಸುಮ್ಮನೆ ಮನೆಯಲ್ಲಿ ಕಾಲಹರಣ ಮಾಡುವ ಬದಲು ಈ ಹಳ್ಳಿಗೆ ತೆರಳಿ ಜಲಧಾರೆಗೆ ತೆರಳುವ ಬಗ್ಗೆ ಮಾಹಿತಿಯನ್ನಾದರೂ ಪಡೆದುಕೊಂಡು ಬರೋಣವೆಂದು ಆಗಾಗ ಬೀಳುತ್ತಿದ್ದ ಮಳೆಯನ್ನು ಆನಂದಿಸುತ್ತ, ಹರಟುತ್ತ, ನಮ್ಮ ಮಾನ್ಸೂನ್ ವಾಕ್‍ನ್ನು ಆರಂಭಿಸಿದೆವು.
ಇತ್ತೀಚೆಗಷ್ಟೆ ನಿರ್ಮಿಸಲಾಗಿರುವ ಸೇತುವೆಯೊಂದನ್ನು ದಾಟಿ ಸ್ವಲ್ಪ ಮುನ್ನಡೆದ ಕೂಡಲೇ ಹಳ್ಳಿಯ ಸೌಂದರ್ಯ ಆನಾವರಣಗೊಂಡಿತು. ಮೊದಲ ನೋಟದಲ್ಲೇ ನಾವು ಮೂವ್ವರು ಕ್ಲೀನ್ ಬೌಲ್ಡ್. ಸುತ್ತಲೂ ವ್ಯಾಪಿಸಿರುವ ಬೆಟ್ಟಗಳ ಶ್ರೇಣಿ ಮತ್ತು ಅವುಗಳಿಂದ ಹರಿದು ಬರುವ ತೊರೆಗಳು, ಈ ಹಳ್ಳಿಗೆ ನೈಸರ್ಗಿಕ ಸೌಂದರ್ಯವನ್ನು ಬಳುವಳಿ ರೂಪದಲ್ಲೇ ನೀಡಿವೆ.
ಆಗಷ್ಟೇ ನಾಟಿ ಕೆಲಸ ಮುಕ್ತಾಯಗೊಂಡಿದ್ದರಿಂದ ಗದ್ದೆ ತುಂಬಾ ಭತ್ತದ ಸಣ್ಣ ಸಣ್ಣ ಸಸಿಗಳು. ಒಂದೆರಡು ಕಡೆ ಗದ್ದೆ ಉಳುವ ಕಾರ್ಯ ಇನ್ನೂ ನಡೆದಿತ್ತು. ಹಳ್ಳಿಯ ತುಂಬಾ ಹರಿಯುವ ನೀರಿನ ಜುಳುಜುಳು ನಿನಾದ. ಎಲ್ಲಾ ದಿಕ್ಕುಗಳಿಂದಲೂ ಸಣ್ಣ ಸಣ್ಣ ತೊರೆಗಳು ಹರಿದು ಬರುವುದನ್ನು ಕಾಣಬಹುದು.
ಒಂದೆಡೆ ಹಳ್ಳಿಗರು ಪ್ರಾಕಾರ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು. ಅವರಲ್ಲಿ ಮಾತಿಗಿಳಿದಾಗ ಆ ಹಳ್ಳಿಯಲ್ಲಿ ಒಟ್ಟು ಮೂರು ಜಲಧಾರೆಗಳಿರುವುದು ತಿಳಿದುಬಂತು. ನಮಗೆ ನಿಧಿ ಸಿಕ್ಕಷ್ಟು ಸಂತೋಷವಾಯಿತು. ಹಳ್ಳಿಗರ ಪ್ರಕಾರ ಒಂದು ಜಲಧಾರೆಗೆ(ಚಿತ್ರದಲ್ಲಿರುವ) ಈಗ ತೆರಳಬಹುದಾಗಿತ್ತು. ಆದರೆ ಅಂದು ನಾವು ಕೇವಲ ಮಾನ್ಸೂನ್ ವಾಕ್ ಮಾಡುವ ಮೂಡ್‍ನಲ್ಲಿದ್ದು, ಕಠಿಣ ಚಾರಣ ಮಾಡುವ ಯಾವುದೇ ಇರಾದೆ ನಮಗಿರಲಿಲ್ಲ.
ಹಳ್ಳಿಯ ಸೊಬಗು, ಪ್ರಕೃತಿಯ ಅಂದ, ತಂಪನೆ ಗಾಳಿ ಇವನ್ನೆಲ್ಲಾ ಆಸ್ವಾದಿಸುತ್ತ ಮುನ್ನಡೆದೆವು. ಮತ್ತೆ ಧೋ ಎಂದು ಮಳೆ ಸುರಿಯಲು ಆರಂಭಿಸಿತು. ಮಾನ್ಸೂನ್ ವಾಕ್‍ನ ಖರೆ ಮಜಾ ಬರತೊಡಗಿತು. ರಭಸವಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಿಂತು, ನಮ್ಮನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರೆದಿದ್ದ ಪ್ರಕೃತಿಯ ಅಂದ ಚಂದ ನೋಡಿ ಆನಂದಿಸುವ ಸುಖ ಅನುಭವಿಸಿದವನೇ ಬಲ್ಲ. ರಾಗಣ್ಣನಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ಈ ಮಾನ್ಸೂನ್ ವಾಕ್ ಮಾಡಿ ಈಗ ೩ ವಾರಗಳಾದರೂ ಅವರಿನ್ನೂ ಆ ಗುಂಗಿನಿಂದ ಹೊರಬಂದಿಲ್ಲ.
ಸದ್ಯದಲ್ಲೇ ಆ ಮಳೆಗಾಲದ ಅತಿಥಿಯನ್ನು ಸಂದರ್ಶಿಸಲು ಈ ಹಳ್ಳಿಯೆಡೆ ಮತ್ತೊಮ್ಮೆ ಹೆಜ್ಜೆ ಹಾಕುವುದು ಅನಿವಾರ್ಯ. ರಾಗಣ್ಣ-ಮಾದಣ್ಣ ತುದಿಗಾಲಲ್ಲಿ ನಿಂತಿದ್ದಾರೆ. ನಾನೇ ವೈಯುಕ್ತಿಕ ಕಾರಣಗಳಿಂದ ಹಿಂದೇಟು ಹಾಕುತ್ತಿದ್ದೇನೆ. ಆದರೆ ಈ ಮಳೆಗಾಲ ಮುಗಿಯುವ ಮೊದಲು ತೆರಳುವುದಂತೂ ಖಂಡಿತ.
ಶುಕ್ರವಾರ, ಆಗಸ್ಟ್ 16, 2013
ಪಥ ಸಂಚಲನ
ನಿನ್ನೆ ನಾನು ಪ್ರಯಾಣಿಸುತ್ತಿದ್ದ ಬಸ್ಸು ಅಂಕೋಲಾ ಬಸ್ಸು ನಿಲ್ದಾಣದಿಂದ ಹೊರಗೆ ಬರಬೇಕೆನ್ನುವಷ್ಟರಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಶಾಲೆಗಳ ಮಕ್ಕಳ ಈ ಪಥಸಂಚಲನದಿಂದ ಸ್ವಲ್ಪ ಹೊತ್ತು ಅಲ್ಲೇ ಕಾಯಬೇಕಾಗಿ ಬಂತು. ಶಾಲಾದಿನಗಳಲ್ಲಿ ಉಡುಪಿಯ ’ಅಜ್ಜರಕಾಡು’ ಮೈದಾನಕ್ಕೆ ನಾನು ಕೂಡಾ ಹೀಗೆ ಹೋಗುತ್ತಿದ್ದುದು ಬಹಳ ನೆನಪಾಯಿತು. ಬಸ್ಸಿನೊಳಗಿನಿಂದಲೇ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.
ಶುಕ್ರವಾರ, ಆಗಸ್ಟ್ 09, 2013
ಕಲ್ಪನಾ ಮರ!
ಅದೊಂದು ದಿನ ರಮೇಶ್ ಕಾಮತ್, ಕೊಡೆಕಲ್ಲು - ಬಾರೆಕಲ್ಲು - ಜೇನುಕಲ್ಲು ಹೋಗಿ ಬಂದೆ ಎಂದು ಹೇಳಿದಾಗ, ’ಕಾರು ಎಲ್ಲಿ ನಿಲ್ಲಿಸಿದ್ರಿ?’ ಎಂದು ಕೇಳಿದೆ. ’ಕಲ್ಪನಾ ಮರ’ ಎಂದುಬಿಟ್ಟರು! ಆ ಉತ್ತರ ಕೇಳಿ ನಗು ಬಂದುಬಿಟ್ಟಿತು. ಯಾವಾಗಲೂ ಕಲ್ಪನಾ ಮರದ ಬಳಿಯೇ ಕಾರು ನಿಲ್ಲಿಸುವುದು ಎಂದು ಮತ್ತೆ ಐದಾರು ಬಾರಿ ಕಲ್ಪನಾ ಮರ ಕಲ್ಪನಾ ಮರ ಎಂದು ಹೇಳಿದರು. ನನಗಂತೂ ನಗು ತಡೆಯಲಾಗುತ್ತಿರಲಿಲ್ಲ. ನಟಿ ಕಲ್ಪನಾಳ ಚಿತ್ರೀಕರಣ ಈ ಮರದ ಬಳಿ ನಡೆದದ್ದು ನಮಗೆಲ್ಲ ತಿಳಿದಿದ್ದರೂ ನಾವೆಲ್ಲ ಈ ಮರವನ್ನು ’ಒಂಟಿ ಮರ’ ಎಂದೇ ಸಂಬೋಧಿಸುತ್ತಿದ್ದೆವು. ರಮೇಶ್ ಕಾಮತರ ಕೃಪೆಯಿಂದ ಆ ಕ್ಷಣದಿಂದ ಅದು ಕಲ್ಪನಾ ಮರವಾಗಿಬಿಟ್ಟಿತು! ೧೯೭೭ರಲ್ಲಿ ನಿರ್ಮಾಣಗೊಂಡ ಬಯಲು ದಾರಿ ಚಲನಚಿತ್ರದ ’ಬಾನಲ್ಲೂ ನೀನೆ’ ಹಾಡಿನ ಒಂದು ದೃಶ್ಯದಲ್ಲಿ ಈ ಮರದ ಕೆಳಗೆ, ನಟಿ ಕಲ್ಪನಾರವರ ಚಿತ್ರೀಕರಣ ನಡೆದಿತ್ತು. ಆದ್ದರಿಂದ ಇದು ಕಲ್ಪನಾ ಮರ! ಹಾಡಿನ ವಿಡಿಯೋದಲ್ಲಿ(೩:೩೮) ಎರಡು ಮರಗಳಿರುವುದನ್ನು ಕಾಣಬಹುದು. ರಸ್ತೆಯಿಂದ ದೂರವಿರುವ ಮರ ಈಗ ಕಣ್ಮರೆಯಾಗಿದೆ. ಕಲ್ಪನಾ ೧೯೭೯ರಲ್ಲಿ ಮರೆಯಾದರೂ, ಈ ಕಲ್ಪನಾ ಮರ ಇನ್ನೂ ಉಳಿದಿದೆ.
ಗುರುವಾರ, ಆಗಸ್ಟ್ 01, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)