ನೀನು ೩೫ನೇ ವಯಸ್ಸಿನ ನಂತರ ಆಡುವುದನ್ನು ಮುಂದುವರಿಸಿದ್ದೇ ಆಸ್ಟ್ರೇಲಿಯಾದಲ್ಲಿ ನಿನಗೆ ಸಂಪೂರ್ಣವಾಗಿ ದೊರಕದ ಯಶಸ್ಸನ್ನು ಗಳಿಸಲು. ಆಸ್ಟ್ರೇಲಿಯಾವನ್ನು ಅವರದೇ ನಾಡಿನಲ್ಲಿ ಸೋಲಿಸಲು. ಇವೆರಡೂ ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣವೆಂದರೆ ನೀನೀಗ ಯುವಕನೂ ಅಲ್ಲ ಮತ್ತು ನೀನೆಂಬ ಅಭೇದ್ಯ ಗೋಡೆಗೆ ನೀನಾಗಿಯೇ ರಂಧ್ರಗಳನ್ನು ಕೊರೆಯುತ್ತಾ ಇದ್ದೀಯಾ. ಆದ್ದರಿಂದ ದಯವಿಟ್ಟು ಆಡುವುದನ್ನು ನಿಲ್ಲಿಸು. ಈಗ ಸರಿಯಾದ ಸಮಯ.
ನೀನಿನ್ನು ಸಾಧಿಸುವುದು ಏನೂ ಉಳಿದಿಲ್ಲ. ಸಾಧಿಸುವುದಿದ್ದರೆ ಅದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ರನ್ನು ಗಳಿಸುವುದು. ಅವಿನ್ನು ದೂರದ ಮಾತುಗಳು. ಸುಬ್ರಹ್ಮಣ್ಯಮ್ ಬದರೀನಾಥ್ ಕಳೆದ ನಾಲ್ಕೈದು ವರ್ಷಗಳಿಂದ ಕಾಯುತ್ತಾ ಇದ್ದಾನೆ. ಈಗ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ನಿನ್ನ ಸ್ಥಾನ ತುಂಬಿಸಲು ತಯಾರಾಗಿದ್ದಾರೆ. ಹಿಂದೆ ಸರಿಯಲು ಇದಕ್ಕಿಂತ ಉತ್ತಮ ಕಾಲ ಇನ್ನಿಲ್ಲ. ವೈಫಲ್ಯವನ್ನು ಒಪ್ಪಿಕೊಂಡು ಹಿಂದೆ ಸರಿದರೆ ಘನತೆ ಹೆಚ್ಚುವುದು.
ಎರಡು ವರ್ಷಗಳ ಮೊದಲು ನಿನ್ನ ಬ್ಯಾಟಿಂಗ್‍ನಲ್ಲಿ ಆಫ್ ಸ್ಟಂಪಿನ ಹೊರಗೆ ಹೋಗುವ ಚೆಂಡಿಗೆ ಬ್ಯಾಟನ್ನು ತಾಗಿಸುವ ಕೆಟ್ಟ ಪರಿಪಾಠ ಅದೆಲ್ಲಿಂದ ತೂರಿಬಂತೋ ದೇವರೇ ಬಲ್ಲ. ಬಹಳ ಶ್ರಮವಹಿಸಿ ನೀನು ಅದನ್ನು ಸುಧಾರಿಸಿ ಕಳೆದ ವರ್ಷ ಅತ್ಯುತ್ತಮ ನಿರ್ವಹಣೆ ನೀಡಿದೆ. ಕಳೆದ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಕೊನೆಗೊಂಡ ಕೂಡಲೇ ನೀನು ನಿವೃತ್ತಿ ಘೋಷಿಸಿದ್ದರೆ ಚೆನ್ನಾಗಿತ್ತು. ಆದರೆ ಆಸ್ಟ್ರೇಲಿಯಾದ ಕನಸೊಂದು ಬಾಕಿ ಇತ್ತಲ್ವೆ...
ಈಗ ಆ ಕನಸೂ ನನಸಾಗಲಿಲ್ಲ. ರಾಹುಲ್, ಇನ್ನು ಆಡುವುದು ವ್ಯರ್ಥ. ಸಾಧಿಸುವುದು ಏನೂ ಉಳಿದಿಲ್ಲ. ನೀನು ಇನ್ನೂ ಆಡಿ ಇನ್ನಷ್ಟು ಶತಕಗಳನ್ನು ಗಳಿಸಬಹುದು, ಇನ್ನಷ್ಟು ರನ್ನುಗಳನ್ನು ಗಳಿಸಬಹುದು. ಆದರೆ ಏನು ಪ್ರಯೋಜನ? ನೀನು ಆಸ್ಟ್ರೇಲಿಯಾದಲ್ಲಿ ರನ್ನುಗಳನ್ನು ಗಳಿಸಿದ್ದಿದ್ದರೆ ಅದಕ್ಕೊಂದು ಮಹತ್ವವಿರುತ್ತಿತ್ತು. ನಿನಗೆ ನೀನೆ ಕೆಲವೊಂದು ಅಂಶಗಳನ್ನು ಸಾಬೀತುಪಡಿಸಿದಂತಾಗುತ್ತಿತ್ತು. ನಮಗೂ ಸಂತೋಷವಾಗುತ್ತಿತ್ತು.
ಆದರೆ ನೀನು ಆಸ್ಟ್ರೇಲಿಯಾದಲ್ಲಿ ಸಾಧಿಸಿದ್ದೇನು? ಬೌಲ್ಡ್. ಬೌಲ್ಡ್! ಬೌಲ್ಡ್!! ಬೌಲ್ಡ್!!! ಬೌಲ್ಡ್!!!! ಬೌಲ್ಡ್!!!!!. ಮೊದಲ ಬೌಲ್ಡ್ ಬಿಟ್ಟರೆ ಉಳಿದವುಗಳು ನೀನು ಔಟಾಗುವ ಚೆಂಡುಗಳಾ..? ಹದಿನೈದು ವರ್ಷಗಳಿಂದ ನಿನ್ನ ಪ್ರತಿಯೊಂದು ಇನ್ನಿಂಗ್ಸ್ ನೋಡಿದ್ದೇನೆ. ಆದರೆ ಹೇಗೆ ಆಡಬೇಕು ಎಂದು ತೋಚದೆ ಮೊದಲನೇ ಸರಣಿ ಆಡುವ ಆಟಗಾರನಂತೆ ಆಡಿದ್ದು ಇದೇ ಮೊದಲ ಬಾರಿ. ಮೊದಲೆಲ್ಲಾ ನೀನು ಬೌಲ್ಡ್ ಆಗಿ ಔಟಾದಾಗ ಅದು ಹೇಗೆ ಸಾಧ್ಯ ಎಂದು ಮತ್ತೆ ಮತ್ತೆ ನೋಡಿ ದೃಢೀಕರಿಸಿದರೆ ಈವತ್ತು, ನೀನು ಮತ್ತೆ ಬೌಲ್ಡ್ ಹೇಗೆ ಆಗಲಿಲ್ಲ... ಎಂದು ನೋಡುವ ಕಾಲ ಬಂದಿದೆ.
ಮೇಲೆ ಹೇಳಿದಂತೆ ಆಫ್ ಸ್ಟಂಪಿನ ಬಹಳ ಹೊರಗೆ ಇದ್ದ ಚೆಂಡುಗಳನ್ನು ಕೆಣಕುವ ಕೆಟ್ಟ ಚಾಳಿಯನ್ನು ಸರಿಪಡಿಸಿಕೊಂಡ ಬಳಿಕ, ಈಗ ಬ್ಯಾಟ್ ಮತ್ತು ಪ್ಯಾಡ್ ನಡುವೆ ಆನೆ ನುಗ್ಗುವಷ್ಟು ಜಾಗ ಬಿಡುವ ಕೆಟ್ಟ ಚಾಳಿ ಎಲ್ಲಿಂದ ಬೆಳೆಸಿಕೊಂಡೆ? ಮೊನ್ನೆ ಇಂಗ್ಲಂಡಿನಲ್ಲಿ ಆ ಅಭ್ಯಾಸವಿರಲಿಲ್ಲವಲ್ಲ. ನಿನ್ನ ರಕ್ಷಣಾತ್ಮಾಕ ಆಟದಲ್ಲಿ ಹುಳುಕುಗಳಿರಲಿಲ್ಲವಲ್ಲ. ಈಗ ಅವೆಲ್ಲಾ ಎಲ್ಲಿಂದ ಬಂದವು.
ಈ ಹೊಸ ಕೆಟ್ಟ ಚಾಳಿಯನ್ನು ಸರಿಪಡಿಸಿಕೊಳ್ಳುವಷ್ಟು ಸಮಯ ಈಗ ಇಲ್ಲ. ಪಾಂಟಿಂಗ್ ನಿನಗಿಂತ ಕೇವಲ ೯೯ ರನ್ನುಗಳಷ್ಟು ಹಿಂದೆ ಇದ್ದಾನೆ. ನೀನು ಈ ರನ್ನುಗಳ ಬೆಗ್ಗೆ ಹೆಚ್ಚು ತಲೆಕೆಡಿಸಿಕೊಂಡವನಲ್ಲ. ಆದರೂ ಒಂದು ಮಾತು - ಹಾಳಾಗಿ ಹೋಗ್ಲಿ ಆ ರನ್ನುಗಳು.
ಆಸ್ಟ್ರೇಲಿಯಾದಲ್ಲಿ ರನ್ನು ಗಳಿಸುವ ಟೆಕ್ನಿಕ್ ನಿನ್ನಲ್ಲಿತ್ತು. ಭಾರತಕ್ಕೆ ನಿನ್ನ ಅನುಭವದ ಅವಶ್ಯಕತೆಯಿತ್ತು. ಯಾರೂ ರನ್ನು ಗಳಿಸದಿದ್ದರೂ ನೀನು ಗಳಿಸಬೇಕಿತ್ತು. ಆ ರನ್ನುಗಳಿಗೆ ಅಪಾರ ಮಹತ್ವವಿರುತ್ತಿತ್ತು. ನಿನ್ನಿಂದ ಆ ನಿರೀಕ್ಷೆಯೂ ಇತ್ತು. ಆದರೆ ನಿರೀಕ್ಷೆಗೂ ಮೀರಿ ನೀನು ವಿಫಲನಾದೆ.
ಆಸ್ಟ್ರೇಲಿಯಾ ಬಿಟ್ಟು ಇತರ ದೇಶಗಳಲ್ಲಿ ನಿನಗಿಂತ ಕಡಿಮೆ ಅರ್ಹತೆಯುಳ್ಳ ಆಟಗಾರರೂ ರನ್ನು ಗಳಿಸಬಹುದು. ಇಂಗ್ಲಂಡ್‍ನಲ್ಲಿ ನಿನ್ನ ಅವಶ್ಯಕತೆಯಿದ್ದರೂ ಭಾರತ ಇನ್ನು ಅಲ್ಲಿಗೆ ತೆರಳುವುದು ನಾಲ್ಕು ವರ್ಷಗಳ ಬಳಿಕ. ಈ ನಾಲ್ಕು ವರ್ಷಗಳಲ್ಲಿ ಅಲ್ಲಿ ಯಶಸ್ವಿಯಾಗುವಂತೆ ನೀನೆ ನಿನ್ನ ಮಾರ್ಗದರ್ಶನದಲ್ಲಿ ನಮ್ಮ ಯುವ ಆಟಗಾರರನ್ನು ಪಳಗಿಸು. ನಿನಗಿಂತ ಕಡಿಮೆ ಅರ್ಹತೆಯುಳ್ಳ ಆಟಗಾರರು ರನ್ನು ಗಳಿಸುವಲ್ಲಿ ನಿನಗೇನು ಕೆಲಸ? ನೀನು ಆಸ್ಟ್ರೇಲಿಯಾದಲ್ಲಿ ರನ್ನು ಗಳಿಸಬೇಕಿತ್ತು, ರಾಹುಲ್. ನಿನ್ನ ನಿಜವಾದ ಸಾಮರ್ಥ್ಯ ಅಲ್ಲಿ ಬಳಕೆಯಾಗಬೇಕಿತ್ತು.
ಬೇರೆಡೆ (ಭಾರತವನ್ನು ಸೇರಿಸಿ) ಇನ್ನು ನೀನು ಗಳಿಸುವ ರನ್ನುಗಳಿಗೆ ಮಹತ್ವವಿರುವುದಿಲ್ಲ. ಮಹತ್ವವಿಲ್ಲದ ರನ್ನುಗಳ ಅವಶ್ಯಕತೆ ನಿನಗಿಲ್ಲ.
ನಿನ್ನ ನಿವೃತ್ತಿ ಘೋಷಣೆಯನ್ನು ಎದುರು ನೋಡುತ್ತಿದ್ದೇನೆ.....
ನಿನ್ನ ಅಭಿಮಾನಿ.
2 ಕಾಮೆಂಟ್‌ಗಳು:
ರಾಹುಲನಿಗೆ ಅತ್ಯಂತ ಸಮರ್ಪಕವಾದ ಉಪದೇಶ. ನಮ್ಮ ಎಲ್ಲ ಹಿರಿಯ ಆಟಗಾರರಿಗೂ ಈ ಸಲಹೆಯನ್ನು ಕೊಡಬಹುದು!
ನಿಮ್ಮ ಸಲಹೆಯು ಸರಿ ಇದೆ ರಾಹುಲ್ ದ್ರಾವಿಡ್ ಅವರ ವ್ಯಫಲ್ಯ ಬೇಸರ ತಂದಿರುವುದಂತು ಸತ್ಯ...
ಕಾಮೆಂಟ್ ಪೋಸ್ಟ್ ಮಾಡಿ