ಸೋಮವಾರ, ಏಪ್ರಿಲ್ 02, 2007

ಅಬ್ಬಾ ಅಮೇದಿಕಲ್ಲು!


ಮಂಗಳೂರು ಯೂತ್ ಹಾಸ್ಟೆಲ್ ಆಯೋಜಿಸಿದ್ದ ಅಮೇದಿಕಲ್ಲಿನ ಚಾರಣ ನಾನು ಕೈಗೊಂಡ ಕಷ್ಟದ ಚಾರಣಗಳಲ್ಲಿ ಒಂದಾಗಿತ್ತು. ಜನವರಿ 21, 2006ರಂದು ಶಿಶಿಲ ತಲುಪಿ, ಗೋಪು ಗೋಖಲೆಯವರ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು. ನಮ್ಮ ಮಾರ್ಗದರ್ಶಿ 'ಪಿಜಿನ' ಇಲ್ಲಿ ನಮ್ಮನ್ನು ಸೇರಿಕೊಂಡ. ಅದಾಗಲೇ ಆತ ಒಂದೆರಡು ಸರಕಾರಿ ಶರಾಬು ಪ್ಯಾಕೇಟುಗಳನ್ನು ಹೊಟ್ಟೆಗಿಳಿಸಿದ್ದ. ಸರಿಯಾಗಿ ಮಧ್ಯಾಹ್ನ 2.40ಕ್ಕೆ ಚಾರಣ ಆರಂಭ.

ಮೊದಲ 90 ನಿಮಿಷಗಳ ಚಾರಣದ ಬಳಿಕ ಎಲ್ಲರೂ ಸುರಕ್ಷಿತವಾಗಿ ಅಮೇದಿಕಲ್ಲು ಪ್ರಥಮ ಬಾರಿಗೆ ಕಾಣುವ ಸ್ಥಳ ತಲುಪಿದರು. ಇದುವರೆಗೆ ಸೂರ್ಯನ ಪ್ರಖರವಾದ ಕಿರಣಗಳಿಂದ ಕಾಡು ರಕ್ಷಣೆ ಒದಗಿಸಿತ್ತು. ಕೆಲವು ಚಾರಣಿಗರು ಈಗಾಗಲೇ ಬಸವಳಿದಿದ್ದರು. ಇನ್ನು ಅಲ್ಲಲ್ಲಿ ಸಿಗುವ ಮಳೆಕಾಡುಗಳನ್ನು ದಾಟಿ ಕಷ್ಟದ ಚಡಾವು ಇರುವ ತನಕ ಸುಮಾರು 45 ನಿಮಿಷದ ಆರಾಮದ ನಡಿಗೆ.

ಮಳೆಕಾಡುಗಳನ್ನು ದಾಟಿ ಕಠಿಣ ಏರುಹಾದಿ ಶುರುವಾಗುವಲ್ಲಿ ನಾವು ಬಂದಾಗ ಸಂಜೆ 5.15ರ ಸಮಯ. ಮುಂದೆ ಹೋಗಿದ್ದ ನಮ್ಮ ಗುಂಪಿನ ಇತರ ಸದಸ್ಯರು ದೂರದಲ್ಲಿ, ಎತ್ತರದಲ್ಲಿ ಸಣ್ಣ ಸಣ್ಣ ಚುಕ್ಕಿಗಳಂತೆ ಕಾಣುತ್ತಿದ್ದರು. ನಾವು ಬಹಳ ಹಿಂದೆ ಇದ್ದೆವು. ಮಳೆಕಾಡುಗಳ ಪರಿಧಿ ದಾಟಿ ಬಂದ ನಂತರ ಎಲ್ಲೂ ಮರಗಳಿರಲಿಲ್ಲ. ಬರೀ ಒಣಹುಲ್ಲುಗಳು ಮತ್ತು ಅರ್ಧಗಂಟೆಗೊಂದರಂತೆ ಸಣ್ಣ ಒಂಟಿ ಮರಗಳು. ಅದೃಷ್ಟವಶಾತ್ ಸಂಜೆಯಾಗುತ್ತಿದ್ದರಿಂದ ಸೂರ್ಯನ ಕಿರಣಗಳಲ್ಲಿ ಪ್ರಖರತೆ ಕಡಿಮೆಯಾಗುತ್ತಿತ್ತು. ಒಂದೆರಡು ತಾಸು ಮೊದಲಾಗಿದ್ದಿದ್ದರೆ ಅಲ್ಲೇ 'ಫ್ರೈ' ಆಗಿಬಿಡುತ್ತಿದ್ದೇವೇನೋ!

ನಾವು 6 ಮಂದಿ ಬಹಳ ಹಿಂದೆ ಉಳಿದುಬಿಟ್ಟಿದ್ದೆವು. ಇದೊಂದು ಬಹಳ ಕಷ್ಟಕರವಾದ ಏರುಹಾದಿಯಾಗಿತ್ತು. ಸರಿಯಾಗಿ 6.45ಕ್ಕೆ ಸೂರ್ಯ ನಿಧಾನವಾಗಿ ಬೆಟ್ಟದ ಮರೆಗೆ ಸರಿದು ಕಣ್ಮರೆಯಾದ. ಹುಲ್ಲುಗಳು ಎತ್ತರಕ್ಕೆ ಬೆಳೆದಿದ್ದರಿಂದ ನೆಲ ಕಾಣುತ್ತಿರಲಿಲ್ಲ. ಅಡಾಲ್ಫ್ ಮತ್ತು ಡ್ಯಾರಿಲ್ ಒದ್ದಾಡುತ್ತಿದ್ದರೆ ಸುಹಾಸ್, ಸಂದೀಪ್ ಮತ್ತು ನಾನು ಏದುಸಿರುಬಿಡುತ್ತಿದ್ದೆವು. ನಮ್ಮ 6 ಮಂದಿಯ ಪೈಕಿ ಅನಂತನೊಬ್ಬನೇ 'ಕೂಲ್' ಆಗಿ ಬೆಟ್ಟವೇರುತ್ತಿದ್ದ. ಸಮಯ 7 ದಾಟಿದರೂ ನಾವು ಮುಂದಿದ್ದವರಿಗಿಂತ ಇನ್ನೂ ಹಿಂದೆ ಇದ್ದೆವು. ಮೇಲೆ ಸಿಗುವ ಕೊನೆಯ ಮಳೆಕಾಡಿನ ಬಳಿ ತಂಡದ ಉಳಿದ 20 ಸದಸ್ಯರು ನಮಗಾಗಿ ಕಾಯುತ್ತಿದ್ದರು. ಡ್ಯಾರಿಲ್ 'ತಲೆ ತಿರುಗುತ್ತಿದೆ' ಎಂದಾಗ ಮತ್ತೆ ಸ್ವಲ್ಪ ಹೊತ್ತು ವಿಶ್ರಾಂತಿ. ಅಂತೂ ಸುಮಾರು 7.30ರ ಹೊತ್ತಿಗೆ ಉಳಿದವರನ್ನು ಸೇರಿಕೊಂಡೆವು.


ಆಯೋಜಕ ದಿನೇಶ್ ಹೊಳ್ಳರಲ್ಲಿ ಪವರ್-ಫುಲ್ ಆದ ಒಂದು ಟಾರ್ಚ್ ಇತ್ತು. ಅದನ್ನವರು ನಮ್ಮತ್ತ 'ಫ್ಲ್ಯಾಶ್' ಮಾಡುತ್ತ ಇದ್ದಿದ್ದರಿಂದ ನಮಗೆ ಅವರನ್ನೆಲ್ಲಾ ಸೇರಿಕೊಳ್ಳಲು ಸ್ವಲ್ಪ ಸುಲಭವಾಯಿತು. ಟಾರ್ಚ್ ತರಲು ಹೇಳಿದ್ದರೂ ಹೆಚ್ಚಿನವರು ತಂದಿರಲಿಲ್ಲ. ನಂತರ ಕಗ್ಗತ್ತಲಿನ ಕೂಪದಂತೆ ಕಾಣುತ್ತಿದ್ದ ಕೊನೆಯ ಶೋಲಾ ಕಾಡನ್ನು (ಮಳೆಕಾಡು) ಒಬ್ಬರ ಹಿಂದೊಬ್ಬರಂತೆ ಸಾಲಿನಲ್ಲಿ ಹೊಕ್ಕೆವು. ದಿನೇಶರ 'ಫ್ಲ್ಯಾಶ್' ಲೈಟೇ ಇಲ್ಲದಿದ್ದರೆ ನಮ್ಮ ಸ್ಥಿತಿ ಊಹಿಸಲಸಾಧ್ಯ. ಮುಂದೆ ಮರ ಇದ್ದರೂ ಕಾಣದಷ್ಟು ಕಗ್ಗತ್ತಲು.

ಮಾರ್ಗದರ್ಶಿ ಪಿಜಿನ ದಾರಿ ಮಾಡುತ್ತ ಮುಂದೆ ಸಾಗಿದ. ತನ್ನ ಫ್ಲ್ಯಾಶ್ ಲೈಟ್ ಬೆಳಗಿಸಿ ಎಲ್ಲರನ್ನು ಮುನ್ನಡೆಯಲು ದಿನೇಶ್ ಸಹಕರಿಸುತ್ತಿದ್ದರು. ನನ್ನ ಹಿಂದೆ ದಿನೇಶ್ ಇದ್ದರೆ ಅವರ ಹಿಂದೆ ಅನಂತ ಮತ್ತು ಸಂದೀಪ್ ಇದ್ದರು. ತಿರುವೊಂದರಲ್ಲಿ ಆಧಾರಕ್ಕಾಗಿ ನಾನು ಬಂಡೆಯೊಂದನ್ನು ಮುಟ್ಟಿದಾಗ ಅದು ಸ್ಥಾನಪಲ್ಲಟಗೊಂಡು ಭಯಂಕರ ಸದ್ದಿನೊಂದಿಗೆ ಕೆಳಗುರುಳಿತು. ಕೇವಲ ಒಂದು ಕ್ಷಣದ ಮೊದಲು ಸಂದೀಪ್ ಆ ದಾರಿಯನ್ನು ದಾಟಿ ಬಂದಿದ್ದ. ಆತ ಒಂದು ಹೆಜ್ಜೆ ಹಿಂದಿದ್ದರೆ ಆ ಬಂಡೆ ಆತನಿಗೆ ಅಪ್ಪಳಿಸುತ್ತಿತ್ತು. ಮತ್ತು ನಮ್ಮ ಮುಂದೆ ಇದ್ದ ಇತರರು ಆ ಬಂಡೆಯನ್ನು ಅಧಾರಕ್ಕಾಗಿ ಬಳಸುವಾಗ ಉರುಳಿದಿದ್ದರೆ ಅದು ನಮ್ಮಲ್ಲೊಬ್ಬನ್ನಿಗೆ ಅಪ್ಪಳಿಸುತ್ತಿತ್ತು. ಎಲ್ಲರೂ ಒಂದು ಕ್ಷಣ ಸ್ತಂಭೀಭೂತರಾಗಿ ನಿಂತುಬಿಟ್ಟರು. ಸಂದೀಪನಂತೂ ಆ ಬಂಡೆ ಉರುಳಿ ಹೋದ ಕಡೆ ದಿಟ್ಟಿಸುತ್ತಾ ನಿಂತುಬಿಟ್ಟ. ಐದಾರು ಕ್ಷಣಗಳ ಬಳಿಕ ಮತ್ತೆ ಮೊದಲಿನಂತೆ ನಿಶ್ಯಬ್ದ.

ಕಣ್ಣು ಕತ್ತಲೆಗೆ ಎಡ್ಜಸ್ಟೇ ಆಗುತ್ತಿರಲಿಲ್ಲ. ಸುಮಾರು 45 ನಿಮಿಷದ ಬಳಿಕ ದಿನೇಶರಿಗೆ ನಾವು ದಾರಿ ತಪ್ಪಿದಂತೆ ಅನಿಸತೊಡಗಿತ್ತು. ನಮ್ಮನ್ನು ನಿಂತಲ್ಲೇ ನಿಲ್ಲಲು ಆದೇಶಿಸಿ, ದಿನೇಶ್ ಮುಂದೆ ಪಿಜಿನ ಇದ್ದಲ್ಲಿ ನಡೆದರು. ಆ ಪಿಜಿನ, ಕತ್ತಲಲ್ಲಿ ಅದೆಲ್ಲೋ ನಮ್ಮನ್ನು ಕರೆದೊಯ್ಯುತ್ತಿದ್ದ. ಆದರೆ ತಾನು 'ದಾರಿ ತಪ್ಪಿದೆ' ಎಂದು ಪಿಜಿನ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಅಬ್ಬಾ, ಸರಕಾರಿ ಶರಾಬಿನ ಪ್ರಭಾವವೇ! ನಾಲ್ಕನೇ ಸಲ ಅಮೇದಿಕಲ್ಲಿಗೆ ಬರುತ್ತಿರುವ ದಿನೇಶ್, ನಾವು ದಾರಿ ತಪ್ಪಿದ್ದನ್ನು ಆ ಕತ್ತಲಲ್ಲೂ ಅರಿತದ್ದು ನಮ್ಮ ಪುಣ್ಯ. ಇಲ್ಲವಾದಲ್ಲಿ ಆ ಪಿಜಿನನ ಹಿಂದೆ ಆ ಕಾಡಲ್ಲೇ ಗಿರಕಿ ಹೊಡೆಯುತ್ತಾ ಬೆಳಗಾಗುವವರೆಗೆ ಅಂಡಲೆಯುತ್ತ ಇರಬೇಕಾಗಿತ್ತು.

ಪಿಜಿನನಿಗೆ ಸ್ವಲ್ಪ ಗದರಿಸಿ ನಮ್ಮನ್ನೆಲ್ಲ ಅಲ್ಲೇ ನಿಲ್ಲಲು ಆದೇಶಿಸಿ ದಿನೇಶ್ ಒಬ್ಬರೇ ಮುಂದೆ ಕಾಡೊಳಗೆ ತನ್ನ ಫ್ಲ್ಯಾಶ್ ಲೈಟ್ ನೊಂದಿಗೆ ಮರೆಯಾದರು. ಕೆಲವರು ನಿಂತಲ್ಲೆ ನಿಂತರೆ ಮತ್ತು ಕೆಲವರು ಯಾರಿಗೆ, ಯಾವುದಕ್ಕೆ ಹಿಡಿ ಶಾಪ ಹಾಕುವುದು ಎಂದು ತಿಳಿಯದೆ ಅಲ್ಲೇ ಕೂತರು. 20 ನಿಮಿಷಗಳ ಬಳಿಕ ದಿನೇಶ್ ಬಂದು ಅವರನ್ನು ಹಿಂಬಾಲಿಸುವಂತೆ ಸೂಚಿಸಿದರು. 9.30ಕ್ಕೆ ಆ ಕತ್ತಲಿನ ಕೋಣೆಯಂತಿರುವ ಮಳೆಕಾಡಿನಿಂದ ಹೊರಬಂದಾಗ ನಿಟ್ಟುಸಿರು ಬಿಡದವರಿಲ್ಲ.

ಕತ್ತಲಲ್ಲಿ ಬೆಟ್ಟಗಳ ಆಕೃತಿಯಷ್ಟೇ ಕಾಣುತ್ತಿತ್ತೇ ಹೊರತು ಬೇರೇನೂ ಗೊತ್ತಾಗುತ್ತಿರಲಿಲ್ಲ. ಇನ್ನೂ 90 ನಿಮಿಷ ನಡೆಯುವುದಿದೆ ಎಂಬುದರ ಅರಿವು ನಮಗ್ಯಾರಿಗೂ ಇರಲಿಲ್ಲ. ಈಗ ಕಲ್ಲುಬಂಡೆಗಳನ್ನು, ಹುಲ್ಲುಗಳನ್ನು ಆಧಾರವಾಗಿ ಹಿಡಿದು ಅದೆಲ್ಲೋ ಹತ್ತುತ್ತಿದ್ದೆವು. ಕೆಳಗೆ ಕಣ್ಣು ಹಾಯಿಸಿದರೆ ಏನೂ ಕಾಣಿಸುತ್ತಿರಲಿಲ್ಲ. ನಾವು ಏರುತ್ತಿದ್ದ ಕೊರಕಲು ಸಾವಿರಾರು ಅಡಿ ಆಳವಿತ್ತು. ಆದರೆ ಅದರ ಆಳ ಕತ್ತಲಲ್ಲಿ ಕಾಣದೇ ಇದ್ದಿದ್ದರಿಂದ ಸಲೀಸಾಗಿ ಯಾವ ಹೆದರಿಕೆಯೂ ಇಲ್ಲದೆ ಹತ್ತಿಬಿಟ್ಟೆವು. ಎಲ್ಲರ ಮುಖದಲ್ಲಿ ನಿರ್ಜೀವ ಕಳೆ. ಯಾರ ಬಾಯಲ್ಲೂ ಮಾತಿಲ್ಲ. ಇದ್ದ ನೀರೆಲ್ಲ ಖಾಲಿ. ಹಸಿವು, ದಣಿವಿನಿಂದ ಎಲ್ಲರು ಕಂಗಾಲು. ಆದರೂ ಮುನ್ನಡೆಯದೆ ಬೇರೆ ವಿಧಾನವಿಲ್ಲ.

10.30ಕ್ಕೆ ನಾವು ರಾತ್ರಿ ಕಳೆಯಬೇಕಾದ ನೀರಿನ ಹರಿವಿರುವ ಮಳೆಕಾಡೊಂದರ ಮೇಲ್ಭಾಗಕ್ಕೆ ಬಂದು ತಲುಪಿದೆವು. ಆದರೆ ಆ ಕಾಡಿನೊಳಗೆ ನೀರಿನ ಹರಿವು ಎಲ್ಲಿದೆ ಎಂದು ಕತ್ತಲಲ್ಲಿ ಹುಡುಕುವುದೇ ಒಂದು ಸವಾಲು. ನಮ್ಮನ್ನು ಮೇಲೆ ನಿಲ್ಲಲು ಹೇಳಿ ದಿನೇಶ್ ಇಳಿಜಾರನ್ನು ಇಳಿದು, ಪಿಜಿನನೊಂದಿಗೆ ಕಾಡು ಹೊಕ್ಕರು. ನಮಗೆ ಮೇಲಿನಿಂದ ಅವರು ಅಚೀಚೆ ನೀರು ಹುಡುಕುತ್ತಾ ಓಡಾಡುತ್ತಿರುವುದು ಅವರ ಟಾರ್ಚ್ ಬೆಳಕ ಮೂಲಕ ಗೊತ್ತಾಗುತ್ತಿತ್ತು. ಒಂದು ಕ್ಷಣ ಕಾಡಿನ ಈ ಭಾಗದಲ್ಲಿದ್ದರೆ ಮತ್ತೊಂದು ಕ್ಷಣ ಕಾಡಿನ ಮತ್ತೊಂದು ಭಾಗದಲ್ಲಿರುತ್ತಿದ್ದರು. ಪಿಜಿನ ಒಂದು ಜಾಗ ತೋರಿಸಿ ಅಲ್ಲಿ ನೆಲ ಅಗೆದು ನೀರು ಹುಡುಕುವ ಬಗ್ಗೆ ಮಾತನಾಡುತ್ತಿದ್ದ! ಅವನ ಮಾತು ಕೇಳಿ ತಲೆಕೆಟ್ಟ ದಿನೇಶ್ ತಾನೊಬ್ಬನೇ ಕಾಡೊಳಗೆ ಓಡಾಡಿ ನೀರಿದ್ದ ಸ್ಥಳ ಹುಡುಕಿ ನಮಗೆ ಕೆಳಗಿಳಿದು ಬರಲು 'ಗ್ರೀನ್ ಸಿಗ್ನಲ್' ಕೊಟ್ಟರು.

ಕೆಳಗಿಳಿದು ನೀರಿದ್ದ ಸ್ಥಳ ತಲುಪಿದಾಗ ರಾತ್ರಿ 11 ಗಂಟೆ. ಒಟ್ಟು 8 ತಾಸು 20 ನಿಮಿಷಗಳ ಚಾರಣ. ಇಲ್ಲಿ ಸುನೀಲನನ್ನು ಮೆಚ್ಚಬೇಕು. ದಿನೇಶ್ ಮುಂದೆ ತೆರಳಿದ ಬಳಿಕ 'ಫ್ಲ್ಯಾಶ್ ಲೈಟ್'ನ್ನು ತನ್ನ ಕೈಗೆ ತಗೊಂಡು, ಹಿಂದೆ ಮುಂದೆ ಓಡಾಡಿ, ಪ್ರತಿಯೊಬ್ಬರಿಗೆ ದಾರಿ ತೋರಿಸುತ್ತ ನೀರಿರುವವರೆಗೆ ಕರಕೊಂಡು ಬರುವ ಪುಣ್ಯ ಕಾರ್ಯ ಮಾಡಿದರು. ಗಂಜಿ ಮಾಡಲಿಕ್ಕೆ ಬಹಳ ಸಮಯ ತಗುಲುವುದರಿಂದ, ಉಪ್ಪಿಟ್ಟು ಮಾಡುವ ನಿರ್ಧಾರ ಮಾಡಿದೆವು. ವಿನಯ್ ಮತ್ತು ವಿಜೇಶ್ ಅರ್ಧ ಗಂಟೆಯಲ್ಲಿ ಉಪ್ಪಿಟ್ಟು ರೆಡಿ ಮಾಡಿದರು. ಗಬಗಬನೆ ಎಲ್ಲರೂ ತಿಂದ ಪರಿ ನೋಡಿದಾಗಲೇ ಹಸಿವು ಯಾವ ಪರಿ ಮನುಷ್ಯನನ್ನು ಕಂಗೆಡಿಸುತ್ತದೆ ಎಂದು ಅರಿವಾಗತೊಡಗಿತು. ಮಧ್ಯರಾತ್ರಿ 12ಕ್ಕೆ ಸದ್ದಿಲ್ಲದೆ ಎಲ್ಲರೂ ನಿದ್ರಾವಶರಾಗಿದ್ದರು. ಸದ್ದಿಲ್ಲ ಮತ್ತೇನೂ ಮಾತಿಲ್ಲ. ಮಾತಾಡಲೂ ತ್ರಾಣವಿದ್ದರೆ ತಾನೆ? ಐದೇ ನಿಮಿಷದಲ್ಲಿ ದಣಿದ ದೇಹಗಳು ನಿದ್ರೆಗೆ ಜಾರಿದ್ದವು.


ಮರುದಿನ ಮುಂಜಾನೆ 8.15ಕ್ಕೆ ಹೊರಟು 45 ನಿಮಿಷಗಳಲ್ಲಿ ಅಮೇದಿಕಲ್ಲಿನ ತುದಿಯಲ್ಲಿದ್ದೆವು. ಶಿಖರದ ತುದಿ ತಲುಪಿದಾಗ ಮುನ್ನಾ ದಿನ ರಾತ್ರಿ ಅಷ್ಟೆಲ್ಲ ಒದ್ದಾಡಿ ಬಂದದ್ದು ಸಾರ್ಥಕವೆನಿಸತೊಡಗಿತು. ಕಾಣುತ್ತಿದ್ದ ದೃಶ್ಯ ರಮಣೀಯ. ಚಾರ್ಮಾಡಿ ಮತ್ತು ಶಿರಾಡಿ ಶ್ರೇಣಿಯ ಎತ್ತರದ ಶಿಖರದ ಮೇಲೆ ಈಗ ನಾವು ನಿಂತಿದ್ದೆವು. ಸುತ್ತಲೂ ಕಣ್ಣುಹಾಯಿಸಿದರೆ ಗುಡ್ಡಗಳು, ಬೆಟ್ಟಗಳು, ಕಣಿವೆಗಳು, ಮಳೆಕಾಡುಗಳು ಅಹಾ, ನೋಟವೆಂದರೆ ಇದು. ಗಡಾಯಿಕಲ್ಲಿನಿಂದ (ಜಮಲಾಬಾದ್) ಶುರುಮಾಡಿದರೆ ನಂತರ ಕುದುರೆಮುಖ, ಮೇರು ಪರ್ವತ, ಹಿರಿಮರಿಗುಪ್ಪೆ, ಕೃಷ್ಣಗಿರಿ, ದುರ್ಗದಬೆಟ್ಟ, ಏರಿಕಲ್ಲು, ಕುಂಭಕಲ್ಲು, ಬಾರೆಕಲ್ಲು, ಮಿಂಚುಕಲ್ಲು, ಮುಳ್ಳಯ್ಯನಗಿರಿ, ದತ್ತಪೀಠ, ಜೇನುಕಲ್ಲು (ಭೈರಾಪುರದ ಸಮೀಪವಿರುವಂತದ್ದು, ಚಾರ್ಮಾಡಿಯದ್ದಲ್ಲ), ಎತ್ತಿನಭುಜ, ಕುಮಾರ ಪರ್ವತ ಮತ್ತು ನಿಶಾನಿ ಗುಡ್ಡದವರೆಗೆ ನೋಟವೇ ನೋಟ. 10 ಗಂಟೆಗೆ ಕೆಳಗಿಳಿಯಲು ಶುರುಮಾಡಿದೆವು.

ಮೊದಮೊದಲು ಕಡಿದಾದ ಇಳಿಜಾರು. ಈ ದಾರಿ ನಿನ್ನೆ ರಾತ್ರಿ ನಾವು ಹತ್ತಿದ ಕೊರಕಲಿನ ಪಕ್ಕದಲ್ಲೇ ಇತ್ತು. ಆ ಕೊರಕಲಿನ ಆಳ ನೋಡಿ ಕೆಲವರು ನಿನ್ನೆ ನಾವೆಲ್ಲ ಅಲ್ಲಿಂದಲೇ ಮೇಲೇರಿದ್ದು ಎಂದು ನಂಬಲು ಸಿದ್ಧರಿರಲಿಲ್ಲ. ಹಗಲಲ್ಲಾದರೆ ಯಾರೂ ಅಲ್ಲಿಂದ ಮೇಲೇರುವ ಸಾಹಸ ಮಾಡುತ್ತಿರಲಿಲ್ಲ. ನಂತರ ನಿನ್ನೆ ದಾರಿ ತಪ್ಪಿದ ಮಳೆಕಾಡಿನ ಒಳಗೆ ಹೊಕ್ಕಾಗ ಸ್ವಲ್ಪ ಆರಾಮವೆನಿಸಿತು. ಸೂರ್ಯನ ಬಿಸಿಯಿಂದ ಸ್ವಲ್ಪ ಎಸ್ಕೇಪ್. ಅದಾದ ನಂತರ ಮತ್ತೆ ಬಿಸಿಲು ಮತ್ತು ಇಳಿಜಾರಿನ ದಾರಿ. ನಿನ್ನೆ ಒದ್ದಾಡಿ ಮೇಲೆ ಬಂದರೆ, ಈಗ ಜಾರಿ, ಬಿದ್ದು ಕೆಳಗಿಳಿಯುವ ಸಂಕಟ. ನಿನ್ನೆ ಸೂರ್ಯನ ಬಿಸಿಲಿನಲ್ಲಿ ತೀಕ್ಷ್ಣತೆಯಿರಲಿಲ್ಲ, ಆದರೆ ಈಗ 'ಮಕ್ಳಾ, ನಿನ್ನೆ ಸ್ವಲ್ಪದರಲ್ಲೆ ತಪ್ಪಿಸ್ಕೊಂಡ್ರಿ, ಈಗ ನೋಡ್ತೀನಿ ಹೆಂಗೆ ತಪ್ಪಿಸ್ಕೊಳ್ತ್ರಿ' ಎಂದು ಸೂರ್ಯ ನಮ್ಮನ್ನು ಕೆಣಕುತ್ತಿರುವಂತೆ ಭಾಸವಾಗುತ್ತಿತ್ತು. ಮುಂದಿನ 100 ನಿಮಿಷ ನೀರು ಸಿಗುವ ಚಾನ್ಸಿರಲಿಲ್ಲ. ಉದ್ದುದ್ದಕ್ಕೆ ಬೆಳೆದಿದ್ದ ಒಣಹುಲ್ಲುಗಳನ್ನು ಆಧಾರವಾಗಿಟ್ಟುಕೊಂಡು, ಕೆಳಗಿಳಿಯತೊಡಗಿದೆವು. ನೀರಿರುವಲ್ಲಿ ತಲುಪಿದ ಕೂಡಲೇ ಕೆಲವರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದರು.


ಅಡಾಲ್ಫ್ ಮತ್ತು ಹರ್ಷ ಕೆಳಗಿಳಿದು ಬರಲು ಬಹಳ ಕಷ್ಟಪಡುತ್ತಿದ್ದರು. ತ್ರಾಸಿ ದಿನೇಶ್ ಅವರಿಬ್ಬರ ಬ್ಯಾಗುಗಳನ್ನು ತನ್ನ ಹೆಗಲೇರಿಸಿಕೊಂಡು ಅವರನ್ನು ನಿಧಾನವಾಗಿ ಕೆಳಗೆ ಕರಕೊಂಡು ಬರುತ್ತಿದ್ದರು. ನೀರಿನ ಸ್ಪಾಟ್ ಗಿಂತ ಇನ್ನೂ ಅರ್ಧ ಗಂಟೆ ಹಿಂದಿರುವಾಗಲೇ ಅಡಾಲ್ಫ್ 'ತನ್ನಿಂದ ಆಗದು' ಎಂದು ಕುಳಿತುಬಿಟ್ಟಾಗ, ತ್ರಾಸಿ ದಿನೇಶ್ ಕೆಳಗಿಳಿದು ಬಂದು ನೀರು ತುಂಬಿಸಿಕೊಂಡು, ಮತ್ತೆ ಅಡಾಲ್ಫ್ ಇದ್ದಲ್ಲಿ ಆ ಉರಿ ಬಿಸಿಲಿನಲ್ಲಿ ಮೇಲೇರಿ ಅವರಿಗೆ ನೀರು ಕೊಟ್ಟು ಸಾವಕಾಶವಾಗಿ ಕೆಳಗೆ ಕರಕೊಂಡು ಬಂದರು. ಮುಂದೆ ತೆರಳಿದ್ದ ನಮಗೆ ಇದೆಲ್ಲದರ ಅರಿವಿರಲಿಲ್ಲ. ಅಂದು ತ್ರಾಸಿ ದಿನೇಶ್ ಇರದಿದ್ದರೆ ಅಡಾಲ್ಫ್ ಮತ್ತು ಹರ್ಷ ಕೆಳಗಿಳಿದು ಬರುವುದು ಕಷ್ಟವಿತ್ತು.

ಈ ತ್ರಾಸಿ ದಿನೇಶ್ ಕುಂದಾಪುರ ಸಮೀಪದ ತ್ರಾಸಿಯವರು. ಸಣ್ಣ ಮಟ್ಟದ ಉದ್ಯೋಗವಿದ್ದು, ಚಾರಣದ ವಿಪರೀತ ಚಟ ಇದ್ದಿದ್ದರಿಂದ 110ಕಿಮಿ ಪ್ರಯಾಣಿಸಿ ತ್ರಾಸಿಯಿಂದ ಮಂಗಳೂರಿಗೆ ಚಾರಣ ಮಾಡಲೋಸುಗ ಬರುತ್ತಿದ್ದರು. ಹಿಂದೆ ಮಂಗಳೂರು ಯೂತ್ ಹಾಸ್ಟೆಲ್ ಸಕ್ರಿಯ ಸದಸ್ಯರಾಗಿದ್ದು, ಈಗ ಗಲ್ಫ್ ನಲ್ಲಿ ವಾಸವಾಗಿರುವ ಅಡಾಲ್ಫ್, ಊರಿಗೆ ಬಂದವರು ಚಾರಣಕ್ಕೆಂದು ಬಂದಿದ್ದರು. ತ್ರಾಸಿ ದಿನೇಶ್ ಮಾಡಿದ ನಿಸ್ವಾರ್ಥ ಸಹಾಯದಿಂದ ಬಹಳ ಪ್ರಭಾವಿತರಾದ ಅಡಾಲ್ಫ್, ಆತನನ್ನು ಗಲ್ಫ್ ಗೆ ಕರೆಯಿಸಿ ಉತ್ತಮ ಉದ್ಯೋಗವೊಂದನ್ನು ಕೊಡಿಸಿದರು. ಈಗ ತ್ರಾಸಿ ದಿನೇಶನಿಗೆ ಗಲ್ಫ್ ನಲ್ಲಿ ಉತ್ತಮ ಉದ್ಯೋಗ, ಕೈ ತುಂಬಾ ಸಂಬಳ. ಅಮೇದಿಕಲ್ಲು ಚಾರಣ ಆತನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತು.

ನಾವು ಕೆಳಗೆ ತಲುಪಿದಾಗ ಸಮಯ 3.45. ನಂತರ ಗೋಖಲೆಯವರ ಮನೆಯಲ್ಲಿ ಊಟ ಮುಗಿಸಿ, 8.15ಕ್ಕೆ ಮಂಗಳೂರಿನಲ್ಲಿ. ದಾರಿ ತಪ್ಪದಿದ್ದರೆ ಶಿಶಿಲದಿಂದ 6 ತಾಸುಗಳಲ್ಲಿ ಅಮೇದಿಕಲ್ಲಿನ ಮೇಲೆ ತಲುಪಬಹುದು. ನೆರಿಯಾದಿಂದ ಚಾರಣದ ಹಾದಿ ಒಂದೆರಡು ಗಂಟೆಗಳಷ್ಟು ಸಮೀಪವಾಗುತ್ತದೆ. ಆದರೆ ಅಲ್ಲಿನ ಎಸ್ಟೇಟ್ ಮಾಲೀಕರು ತಮ್ಮ(?) ಎಸ್ಟೇಟ್ ಮೂಲಕ ಯಾರನ್ನೂ ಬಿಡುವುದಿಲ್ಲ. ನಾನು ಕೈಗೊಂಡ ಚಾರಣಗಳಲ್ಲಿ ಅಮೇದಿಕಲ್ಲಿನ ಚಾರಣ ಸ್ಮರಣೀಯ. ಆ ನೆನಪುಗಳು ಯಾವಾಗಲು ಉಳಿಯುವಂತವು.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nanna hesaru siddu 9845269976

ರಾಜೇಶ್ ನಾಯ್ಕ ಹೇಳಿದರು...

ಸಿದ್ದುರವರೆ,

ನೀವು ಖಂಡಿತವಾಗಿಯೂ ನಮ್ಮನ್ನು ಸೇರಿಕೊಳ್ಳಬಹುದು. ಈ ತಿಂಗಳ ೨೦ರಂದು ಒಂದು ಚಾರಣ ಇದೆ. ಶಿಶಿಲ ಸಮೀಪದ ಶಿಂಗಾಣಿಬೆಟ್ಟಕ್ಕೆ. ಆಸಕ್ತಿಯಿದ್ದಲ್ಲಿ ತಾವು ನಮ್ಮನ್ನು ಸೇರಿಕೊಳ್ಳಬಹುದು.