ಸೋಮವಾರ, ಅಕ್ಟೋಬರ್ 01, 2007

ಒಂದು ವರ್ಷ


ಗೆಳೆಯರೆ,

ಇಂದಿಗೆ ನಾನು 'ಅಲೆಮಾರಿಯ ಅನುಭವಗಳ'ನ್ನು ತಮಗೆಲ್ಲರಿಗೂ ಹೇಳಿಕೊಳ್ಳಲು ಆರಂಭಿಸಿ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ಚಾರಣ/ಪ್ರಯಾಣದ ಬಗ್ಗೆ ಬರೆದಷ್ಟನ್ನು ಕಳೆದ ೩೪ ವರ್ಷಗಳಲ್ಲಿ ಬರೆದಿರಲಿಲ್ಲ. ಅನೇಕ ಪ್ರಕೃತಿ ಪ್ರಿಯ ಗೆಳೆಯರ ಪರಿಚಯವಾಗಿದೆ. ಇಲ್ಲಿಗೆ ಭೇಟಿ ನೀಡಿ, ಏನೇ ಬರೆದರೂ ಓದಿ, ಚೆನ್ನಾಗಿದ್ದಲ್ಲಿ ಟಿಪ್ಪಣಿ ಬರೆದು ಪ್ರೋತ್ಸಾಹ ನೀಡಿದ್ದೀರಿ. ನನ್ನ ಪ್ರಮುಖ ಉದ್ದೇಶ ಚೆನ್ನಾಗಿ ಬರೆಯುವುದಕ್ಕಿಂತ, ನಮ್ಮ ಕರ್ನಾಟಕದಲ್ಲಿ ನಾನು ಭೇಟಿ ನೀಡಿದ ಸ್ಥಳಗಳ ಬಗ್ಗೆ ಪ್ರಕೃತಿ ಪ್ರಿಯರಿಗೆ ತಿಳಿಸುವುದು. ಆ ನಿಟ್ಟಿನಲ್ಲಿ ಸಾಕಷ್ಟು ಮಟ್ಟಿಗೆ ಸಫಲನಾಗಿದ್ದೇನೆ ಎಂದು ನಾನು ಭಾವಿಸಿದ್ದೇನೆ.

ಕೆಲವೊಮ್ಮೆ ಹೊಸ 'ಪೋಸ್ಟ್' ಹಾಕುವಲ್ಲಿ ತಡವಾದರೂ ತಾಳ್ಮೆಯಿಂದ ಕಾದಿದ್ದೀರಿ. ಟಿಪ್ಪಣಿ ಬರೆಯಲೂ ಏನೂ ಇಲ್ಲದಿದ್ದರೂ ಬರೆದು ಪ್ರೋತ್ಸಾಹ ನೀಡಿದವರು ಹಲವರು. ತಮ್ಮ ಬ್ಲಾಗಿನಿಂದ ಲಿಂಕ್ ಕೊಟ್ಟು ಸಹಕರಿಸಿದ್ದೀರಿ.

ಸೆಪ್ಟೆಂಬರ್ ೨೦೦೬ರಲ್ಲಿ ಗೆಳೆಯ ವೇಣು ವಿನೋದ್ ತನ್ನ ಬ್ಲಾಗ್ ಬಗ್ಗೆ ಹೇಳಿದಾಗ, ನಾನೂ ಯಾಕೆ ನನ್ನ ತಿರುಗಾಟದ ಬಗ್ಗೆ ಬರೆಯಬಾರದು ಎಂದೆನಿಸಿತು. ಕೂಸಳ್ಳಿ ಘಟನೆಯ ಬಗ್ಗೆ ಯೋಚಿಸಿದಾಗ 'ಬೇಡ'ವೆಂದೆನಿಸತೊಡಗಿತು. ಸುಮಾರು ಯೋಚಿಸಿ ಕಡೆಗೂ ಬರೆಯೋಣ ಎಂದು ನಿರ್ಧರಿಸಿ 'ಅಲೆಮಾರಿಯ ಅನುಭವಗಳು' ಶುರುಮಾಡಿದೆ. ಒಂದು ವರ್ಷ ಬ್ಲಾಗ್ ಲೋಕದಲ್ಲಿ ಉತ್ತಮ ಪ್ರಯಾಣವಾಗಿದೆ. ಹಿತೈಷಿಗಳ ಪರಿಚಯವಾಗಿದೆ. ವೇಣುಗೆ ಧನ್ಯವಾದಗಳು.

ಆಗುಂಬೆಯ ಸಂಜೆಯೂ ...... 'ಹ್ಹಿ ಹ್ಹಿ'ಯು ನಿಂದ ಆರಂಭಿಸಿ ಹೀಗೊಂದು ಊರಿನವರೆಗೆ ಪ್ರತಿಯೊಂದನ್ನೂ ಓದಿದವರು ಹಲವರು. ಆಯ್ದು ಓದಿದವರು ಕೆಲವರು. ಎಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ.

ಜೂನ್ ೧, ೨೦೦೩ರ ಮಡೆನೂರು ಪ್ರಯಾಣದಿಂದ ಶುರುಮಾಡಿ ಮೊನ್ನೆ ಸೆಪ್ಟೆಂಬರ್ ೮, ೨೦೦೭ರ ನಾಗಝರಿ ಜಲಪಾತಕ್ಕೆ ಚಾರಣದವರೆಗೆ ಭೇಟಿ ನೀಡಿದ ತಾಣಗಳು ಅದೆಷ್ಟೋ. ಇನ್ನೂ ಎಷ್ಟೋ ನೋಡಬೇಕಿದೆ. ಈ ನಾಲ್ಕು ವರ್ಷಗಳು ನಿಸ್ಸಂದೇಹವಾಗಿ ನನ್ನ ಜೀವನದ ಉತ್ತಮ ವರ್ಷಗಳು. ಸತತ ೭ ವಾರ ಪ್ರತಿ ವಾರಾಂತ್ಯದಲ್ಲಿ ಅಲೆದಾಡಿದ್ದಿದೆ. ಸತತ ೪ ವಾರಾಂತ್ಯ ಎಲ್ಲೂ ಹೋಗದೇ ನಿಷ್ಕ್ರಿಯವಾಗಿದ್ದೂ ಇದೆ. ಆದರೆ ಪ್ರಕೃತಿಯೊಂದಿಗೆ ಈ ನಾಲ್ಕು ವರ್ಷಗಳಲ್ಲಿ ನಾನು ಕಳೆದ ಸಮಯವಿದೆಯಲ್ಲಾ, ಅಪರಿಚಿತ ಸ್ಥಳಗಳಿಗೆ ತೆರಳಿದಾಗ ಪರಿಚಯವಾದ ಜನರ ಸ್ನೇಹವಿದೆಯಲ್ಲಾ, ಇವು ಮಾತ್ರ ಅವಿಸ್ಮರಣೀಯ. ಇನ್ನೂ ಹೆಚ್ಚು ಅವಿಸ್ಮರಣೀಯ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯಲು ಕಾತುರನಾಗಿದ್ದೇನೆ.

ಕರ್ನಾಟಕ ಕ್ರಿಕೆಟ್ ನನಗೆ ಪ್ರಿಯವಾದ ವಿಷಯವಾಗಿರುವುದರಿಂದ ಆಗಾಗ 'ಚಾರಣ/ಪ್ರಯಾಣ'ದ ಹೊರತಾಗಿ ಕ್ರಿಕೆಟ್ ವಿಷಯದ ಬಗ್ಗೆಯೂ ಬರೆದಿದ್ದೇನೆ. ಬರೆಯುತ್ತೇನೆ ಕೂಡಾ. 'ಅಲೆಮಾರಿಯ ಅನುಭವಗಳು' ಇಲ್ಲಿಗೆ ಚಾರಣದ ಬಗ್ಗೆ ಮಾತ್ರ ಓದಲು ಬರುವವರಿಗೆ ಕ್ರಿಕೆಟ್ ಲೇಖನ ನೋಡಿ ನಿರಾಸೆಯಾಗಬಹುದು. ಕ್ಷಮೆಯಿರಲಿ.

ಮೇಲೆ ಹಾಕಿದ ಚಿತ್ರ ಶರಾವತಿ ಕಣಿವೆಯದ್ದು. ಜೋಗದಿಂದ ಹೊನ್ನಾವರದೆಡೆ ತೆರಳುವಾಗ ಈ ದೃಶ್ಯ ಸಿಗುವುದು. ೧೯೯೫ರಲ್ಲಿ ಜೋಗಕ್ಕೆ ಮೊದಲ ಬಾರಿಗೆ ಹೋದಾಗ, ಆಗಿನ್ನೂ ಗೇರುಸೊಪ್ಪಾದಲ್ಲಿ ಆಣೆಕಟ್ಟು ನಿರ್ಮಾಣಗೊಂಡಿರಲಿಲ್ಲ. ಆಗ ಇಲ್ಲಿ ಕಾಣುವ ದೃಶ್ಯ ಬೇರೇನೇ ಇತ್ತು. ಅತಿ ಆಳದಲ್ಲಿ, ಎರಡು ಗುಡ್ಡಗಳ ತಳದಲ್ಲಿ ಸಣ್ಣ ಗೆರೆಯಂತೆ ಶರಾವತಿ ಹರಿಯುತ್ತಿದ್ದಳು. ಆಗ ನನ್ನ ಬಳಿ ಕ್ಯಾಮರಾ ಇರಲಿಲ್ಲವಾದ್ದರಿಂದ, ಆ ದೃಶ್ಯದ ನೆನಪು ಮಾತ್ರ ಉಳಿದಿದೆ. ಅಣೆಕಟ್ಟು ನಿರ್ಮಾಣದ ಬಳಿಕ, ಈಗ ಶರಾವತಿ ಎರಡೂ ಗುಡ್ಡಗಳ ಅರ್ಧಕ್ಕಿಂತಲೂ ಮೇಲಕ್ಕೆ ಏರಿ ವಿಶಾಲವಾದ ಜಲಸಾಗರದಂತೆ ನಿಂತಿದ್ದಾಳೆ.

13 ಕಾಮೆಂಟ್‌ಗಳು:

Mahantesh ಹೇಳಿದರು...

Rajesh,
nimma blognalli jalapathada bagge charanhada bagge,oduv mazane bere..chikka,putt,hiri-kiri annade ella karnatakada jalpathgalannu parichiyisiddara..dhanyawadagalu...

onde vashra poorna maadiddakke abhinandanegaLu

Aravind GJ ಹೇಳಿದರು...

ನಿಮ್ಮ ಬ್ಲಾಗ್ ನಿಂದಾಗಿಯೇ ನಾನು ಹಲವಾರು ಜಾಗಗಳ ಪರಿಚಯವಾದದ್ದು ಹಾಗೂ ಕೆಲವೊಂದಕ್ಕೆ ಬೇಟಿಕೊಟ್ಟಿದ್ದು. ಹೀಗೆ ಚೆನ್ನಾಗಿ ಮುಂದುವರೆಸಿ.

Srikanth - ಶ್ರೀಕಾಂತ ಹೇಳಿದರು...

ನನಗೆ ನಿಮ್ಮ ಬ್ಲಾಗ್ ಯಾವತ್ತು ಶುರು ಮಾಡಿದ್ದು ಅಂತ ಗೊತ್ತಿಲ್ಲ. ತಡವಾದರೂ ಚಿಂತೆಯಿಲ್ಲ; ನನ್ನ ಕಡೆಯಿಂದ ನಿಮ್ಮ ಬ್ಲಾಗ್-ಗೆ ಹುಟ್ಟುಹಬ್ಬದ ಶುಭಾಷಯಗಳು.

ನನ್ನಂತೆ ನನಗೆ ತಿಳಿದಿರುವರೇ ಅನೇಕರು ನಿಮ್ಮ ಬ್ಲಾಗ್ ನೋಡಿ "ಎಲ್ಲೆಲ್ಲಿಗ್ ಹೋಗ್ತಾರಪ್ಪಾ ಈ ರಾಜೇಶ್ ನಾಯ್ಕ್; ಎಲ್ಲಿ ಸಿಗತ್ತೋ ಈ ಜಾಗಗಳೆಲ್ಲಾ" ಎಂದು ಹಲವಾರು ಬಾರಿ ಹೇಳಿದ್ದಾರೆ. ಈ ಪ್ರಶ್ನೆಯ ಉತ್ತರ ನಾನೂ ತಿಳಿಯಬೇಕಿದೆ. ಸಾಧ್ಯವಾದಾಗ ನಿಮ್ಮನ್ನೊಮ್ಮೆ ಭೇಟಿ ಮಾಡೇ ಕೇಳಬೇಕೆಂದುಕೊಂಡಿದ್ದೆ. ಆದರೆ ಇಲ್ಲಿಯೇ ಕೇಳಿಬಿಟ್ಟೆ.

ಶರಾವತಿ ಕಣಿವೆಯ ಚಿತ್ರ ತೆಗೆಯಲಾಗಲಿಲ್ಲ ಎಂದು ಬೇಸರ ಬೇಡ. ನಾನು ಚಾರಣಕ್ಕೆ ಹೋದಾಗ ಎಷ್ಟೋ ಬಾರಿ ಫೋಟೋ ತೆಗೆಯುವಾಗ "ಈ ಕ್ಯಾಮರಾ ಎಷ್ಟು ತಾನೆ ಸೆರೆಹಿಡಿಯಬಲ್ಲದು? ಕಣ್ಣಲ್ಲಿ ನೋಡಿದ ಅನುಭವ ಫೋಟೋ ನೋಡಿದರೆ ಆಗುವುದೇ?" ಎಂದು ಅಂದುಕೊಂಡಿದ್ದಿದೆ. ಆದರೂ ಏನೋ ಫೋಟೋ ತೆಗೆಯುವ ಹುಚ್ಚು ನೋಡಿ; ತೆಗೆಯುತ್ತೇನೆ. ಆದರೆ ನನ್ನ ಮನಸ್ಸಿನಲ್ಲಿರುವ ಚಿತ್ರದ ನೂರನೇ ಒಂದು ಭಾಗವೂ ಕ್ಯಾಮರಾ ಚಿತ್ರದಲ್ಲಿರುವುದಿಲ್ಲ.

ನೀವು ಕಾಡು ಸುತ್ತುವುದರ ಜೊತೆಗೆ ಬ್ಲಾಗಿನ ಮೂಲಕ ನಮ್ಮನ್ನೂ ಕಾಡು ಸುತ್ತಿಸುತ್ತಿರಿ. ನಿಮಗೂ, ನಿಮ್ಮ ಬ್ಲಾಗಿಗೂ ಶುಭವಾಗಲಿ.

ಅನಂತ ಹೇಳಿದರು...

ಹುಟ್ಟುಹಬ್ಬದ ಶುಭಾಶಯಗಾಳು.. ನಿಮಗಲ್ಲ, ನಿಮ್ಮ ಚೆಂದದ ಬ್ಲಾಗಿಗೆ... ;) ಇನ್ನೂ ನೂರ್ಕಾಲ ಹೀಗೆ ಮುಂದುವರಿಯಲಿ... :)

VENU VINOD ಹೇಳಿದರು...

oLLeya prayathna rajESh... munduvarisi....anniversery shubhashaya

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,

ಶುಭಾಶಯಗಳು.
ವೇಣುವಿಗೆ ಮೊದಲ ಧನ್ಯವಾದ. ಅಲೆಮಾರಿಯ ಅನುಭವಗಳನ್ನ ಅಕ್ಷ್ರರಕ್ಕಿಳಿಸಲು initiate ಮಾಡಿದ್ದಕ್ಕೆ.

ನಿಮಗೆ, ನಾನು ಪ್ರತಿ ಬರಹದ ಕಾಮೆಂಟಿನಲ್ಲೂ ನನ್ನ ಖುಷಿಯನ್ನು, ಕೃತಜ್ಞತೆಯನ್ನು ಸೂಚಿಸುತ್ತಲೇ ಬಂದಿದ್ದೀನಿ. ಈಗ ಮತ್ತೊಮ್ಮೆ ಒಟ್ಟಿಗೆ ಧನ್ಯವಾದಗಳು.

ಕರ್ನಾಟಕದ ನಿಸರ್ಗದ ರಮಣೀಯತೆಯನ್ನು, ಅದನ್ನು ಹುಡುಕಿಕೊಂಡು ಹೋಗಿ ಸವಿಯುವುದನ್ನು ಸರಳವಾಗಿ ಪ್ರೀತಿಯಿಂದ ಬರೆದಿದ್ದೀರ.
ಕನ್ನಡಕ್ಕಾಗಿ ಕೈಯೆತ್ತಿದರೆ ಕಲ್ಪವೃಕ್ಷವಾಗುತ್ತೆ ಅಂದಲ್ಲಿ ನೀವು ಕರ್ನಾಟಕದ ಸೊಬಗನ್ನು ಹಲವರಿಗೆ ಉಣಬಡಿಸಿದ್ದೀರಿ. ಅಲೆಮಾರಿತನದಲ್ಲೊಂದು ದೈವಿಕತೆಯ ಮಿನುಗು ಮಿಂಚಿಸಿ, ಗಿರಿಸದೃಶರೇ ಆಗಿದ್ದೀರಿ. ನಿಮ್ಮ ಈ ಆಸಕ್ತಿ ಯಾವಾಗಲೂ ಧಾರೆಯಾಗಿರಲಿ, ನಮಗೆ ನಮ್ಮದೇ ಊರಿನ ನೂರಾರು ಅಂದಚಂದಗಳು ಚೆಲುವಾಗಿ ತೆರೆದುಕೊಳ್ಳಲಿ..

ಒಳ್ಳೆಯದಾಗಲಿ,

ಪ್ರೀತಿಯಿಂದ
ಸಿಂಧು

Sushrutha Dodderi ಹೇಳಿದರು...

ರಾಜೇಶ್,

ಮೊನ್ನೆ ಮೊನ್ನೆ ಸಿಂಧು ಅಕ್ಕ ಸಿಕ್ಕಿದ್ದಾಗ 'ಆ ರಾಜೇಶ್ ಅದೇನು ಓಡಾಡ್ತಾನೋ ಮಾರಾಯಾ..!' ಅಂತ ಮಾತಾಡಿಕೊಂಡಿದ್ವಿ. ನಿಮ್ಮ ಜೊತೆ ಅಲೆದಾಡುತ್ತ ಆಡುತ್ತ ವರ್ಷದಷ್ಟುದ್ದದ ದಾರಿ ಸವೆದದ್ದು ಗೊತ್ತೇ ಆಗಲಿಲ್ಲ ನೋಡಿ.. ಎಷ್ಟು ಊರುಗಳಿಗೆ ಕರೆದೊಯ್ದಿರಿ, ಏನೇನು ಕಥೆ ಹೇಳಿದಿರಿ, ಯಾವ್ಯಾವ ಜಲಪಾತದ ನೀರು ಸೋಕಿಸಿದಿರಿ, ಸುಸ್ತೇ ಆಗದಂತೆ ಬೆಟ್ಟ ಹತ್ತಿಸಿದಿರಿ, ಕಾಡಕಂಪ ನೆರಳಲ್ಲಿ ಹೊಸಬಣ್ಣದ ಹೆಸರಿಲ್ಲದ ಹೂವು ತೋರಿಸಿದಿರಿ... ಥ್ಯಾಂಕ್ಸ್ ಫಾರ್ ಆಲ್ ದಟ್.

ನಿಮ್ಮೀ ಅಲೆದಾಟ ಹೀಗೇ ಮುಂದುವರಿಯಲಿ. ಹೀಗೆ ತೆರೆದುಕೊಳ್ಳುವ ಮೂಲಕ ಕನ್ನಡ ರಾಜ್ಯ ಮತ್ತಷ್ಟು ವಿಸ್ತೃತಗೊಳ್ಳಲಿ. ಶುಭಾಷಯಗಳು.

Srik ಹೇಳಿದರು...

wow! Aagle varsha agoyta...!

I think I started here quiet late, but I have updated myself with all the posts, once I started hooked to this blog. Alemariya AnubhavagaLu has inspired me to expedite the plans of roaming around our beautiful Karnataka. The rich diversity found in this state is definitely unique, Malenadu is so different from KaravaLi...North Karnataka is so different from Bayalu seeme...and Bengalooru is definitely different from all these places. Different in the outlook, different in the dialect of the language, different in the attire of people, the local culture, festivals... Everything is such a variety that one needs patience to understand each of them.. And each place has a different outlook in each season. So, a visit is not complete unless you are aware of the place in each season of Spring, Autumn and monsoon!

In view of all these, namma "Alemari"'s efforts are certainly appreciable. Thanks for everything. Its great knowing you.

ರಾಜೇಶ್ ನಾಯ್ಕ ಹೇಳಿದರು...

ಟಿಪ್ಪಣಿ ಬರೆದು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ವಂದನೆಗಳು.

ರಾಜೇಶ್ ನಾಯ್ಕ ಹೇಳಿದರು...

ಮಹಾಂತೇಶ್, ಅರವಿಂದ್
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಶ್ರೀಕಾಂತ್,
ಒಂದು ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮಕ್ಕೆ ಬಂದುಬಿಡಿ, ಭೇಟಿಯಾಗೋಣ. ಹೇಗೂ ಉಡುಪಿಯಲ್ಲೇ ಇದ್ದೀರಾ, ಭೇಟಿ ಸುಲಭ.

ಅನಂತ, ವೇಣು
ಧನ್ಯವಾದಗಳು.

ಸಿಂಧು, ಸುಶ್ರುತ
ನಿಮ್ಮಿಬ್ಬರ ಪ್ರೀತಿಯ ಮಾತುಗಳಿಗೆ ನನ್ನಲ್ಲಿ ಉತ್ತರವಿಲ್ಲದಂತಾಗಿದೆ. ಧನ್ಯವಾದಗಳು.

ಶ್ರೀಕಾಂತ್,
ಧನ್ಯವಾದಗಳು.

ಅನಾಮಧೇಯ ಹೇಳಿದರು...

congrats.... illige bandiddu payanigana karuNe (link) ninda

ಅನಾಮಧೇಯ ಹೇಳಿದರು...

ನಾಗಝರಿ ಬಗ್ಗೆ ಎಲ್ಲಿ ಬರ್ದಿದೀರ ? ನಿಮ್ ಬ್ಲಾಗ್ ಬಿಟ್ಟು ಹೊಗಕ್ಕೆ ಮನ್ಸೆ ಆಗಲ್ಲ

ಅನಾಮಧೇಯ ಹೇಳಿದರು...

ಪ್ರಸನ್ನ,
ನಾಗಝರಿ ಜಲಧಾರೆ ಬಗ್ಗೆ ಇನ್ನೂ ಬರೆದಿಲ್ಲ.