ಬೆಟ್ಟದ ಅಂಚಿನಿಂದ ಕಾಣುವ ಈ ಕಡಲತೀರದ ಮೇಲಿನ ಚಿತ್ರದಲ್ಲಿರುವ ದೃಶ್ಯವನ್ನು ಸವಿಯಲು ಕಳೆದ ಸುಮಾರು ೨೫ ವರ್ಷಗಳಲ್ಲಿ ಅದೆಷ್ಟೋ ಸಲ ಇಲ್ಲಿಗೆ ಬಂದು ತೆರಳಿದ್ದು ಇದೆ. ಆದರೆ ಒಂದೇ ಒಂದು ಸಾರಿ ಕೆಳಗಿಳಿದು ಕಡಲತೀರಕ್ಕೆ ತೆರಳುವ ಪ್ರಯತ್ನ ದೂರವಿರಲಿ, ಆ ಯೋಚನೆಯನ್ನೂ ಮಾಡಿದ್ದಿರಲಿಲ್ಲ.
ಈ ಬಾರಿ ಬೆಟ್ಟವಿಳಿದು ತೀರಕ್ಕೇ ತೆರಳಬೇಕೆಂಬ ಇರಾದೆಯಿಂದ ಮತ್ತೊಮ್ಮೆ ಈ ಕಡಲತೀರದತ್ತ ತೆರಳಿದೆ. ಬೆಟ್ಟದ ತುದಿಯಿಂದ ಬಹಳ ದೂರವಿದ್ದಂತೆ ತೋರಿದರೂ, ಕೇವಲ ಐದಾರು ನಿಮಿಷಗಳಲ್ಲಿ ನಾವು ಕೆಳಗಿಳಿದಾಗಿತ್ತು.
ಕಡಲೊಳಗೆ ನುಗ್ಗಿರುವ ಎರಡು ಬೆಟ್ಟಗಳ ನಡುವೆ ಅಡಗಿರುವ ಸುಂದರ ಸ್ಥಳವಿದು. ಕೇವಲ ೮೦೦ ಮೀಟರ್ ಉದ್ದವಿರುವ ಈ ಕಡಲತೀರದ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.
ಈ ಭಾಗದಲ್ಲಿ ’ಬೀಚ್ ಟ್ರೆಕ್’ ಮಾಡಿದವರು, ಈ ಕಡಲತೀರವನ್ನು ದಾಟಿಹೋಗುವ ಸಾಧ್ಯತೆಯಿದೆಯೇ ವಿನ:, ಬೇರೆ ಯಾರೂ ಇಲ್ಲಿಗೆ ಬರುವ ಚಾನ್ಸ್ ಇಲ್ಲ. ಸ್ಥಳೀಯರು ಕೂಡಾ ಬೆಟ್ಟದ ಅಂಚಿನಿಂದ ಕಾಣುವ ದೃಶ್ಯವನ್ನು ಆನಂದಿಸುತ್ತಾರೆಯೇ ಹೊರತು, ಕೆಳಗಿಳಿದು ಕಡಲತೀರಕ್ಕೆ ಹೋಗುವುದಿಲ್ಲ.
ಶುಭ್ರವಾಗಿದ್ದ ತೀರದ ಒಂದು ತುದಿಯಿಂದ ಇನ್ನೊಂದು ತುದಿಗೆ ವಾಕ್ ಮಾಡಿದೆವು. ಈ ಕಡಲತೀರದ ಆಕರ್ಷಣೆಯೇ ಎರಡು ತುದಿಗಳಲ್ಲಿರುವ ಸಣ್ಣ ಬೆಟ್ಟಗಳು. ಪ್ರಕೃತಿಯೇ ಎರಡು ಕಡೆ ಗೋಡೆ ರಚಿಸಿ, ನಡುವೆ ಈ ಕಡಲತೀರವನ್ನು ಬಂಧಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟವನ್ನು ಕಲ್ಲಿಗಾಗಿ ಕೊರೆಯಲಾಗುತ್ತಿದ್ದು, ಸುಮಾರಾಗಿ ನಾಶಮಾಡಲಾಗಿದೆ. ಇಲ್ಲಿನ ಸೌಂದರ್ಯಕ್ಕೆ ಇದೊಂದು ಕಪ್ಪುಚುಕ್ಕೆ.
ಬೆಟ್ಟದ ಆ ಕಡೆ ಇರುವ ಬೀಚ್ ಸುಮಾರಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ, ಪ್ರವಾಸಿಗರ ಹಾವಳಿಯಿಲ್ಲ. ಪ್ರವಾಸಿಗರಿಲ್ಲವೆಂದ ಬಳಿಕ, ಕಸಗಳಿಲ್ಲ, ಗೌಜಿಯಿಲ್ಲ, ಗಲಾಟೆಯಿಲ್ಲ. ಕೇವಲ ನಾವು ಮತ್ತು ಕಡಲಿನಲೆಗಳ ಸದ್ದು ಮಾತ್ರ.
6 ಕಾಮೆಂಟ್‌ಗಳು:
Tumba chennagide, prakrutiye janarannu tanninda doora irisalu bayasi eradu bettagalannu ittantide..
Very nice Rajesh, beautiful photos.. I'm proud to say, I'm from this place... When i was in hometown, this place was one of my favorites to enjoy Sunset.. Thanks for exploring this place.
ಮಕ್ಕಳ ಚಿತ್ರ ನೋಡಿ ನನಗೆ "ಅಮೇರಿಕ! ಅಮೇರಿಕಾ!!" ಚಲನ ಚಿತ್ರ ಙ್ನಾಪಕ ಬಂತು!
ಸುಂದರವಾದಂತಹ ಜಾಗ.
- ಶ್ರಿಕ್
ಅಶೋಕ್, ಪ್ರಶಾಂತ್ ಹಾಗೂ ಶ್ರೀಕಾಂತ್
ಧನ್ಯವಾದ.
ಇದು ನನಗೆ ಬಹಳ ಇಷ್ಟವಾದ ಜಾಗ. ಆ ಚಿಕ್ಕ ಬೆಟ್ಟಗಳ ಮೇಲೆ ಸೀಗಲ್ಗಳು ಇನ್ನೇನು ಜಿಗಿದರೆ ಕೈಗೆ ಸಿಗಬಹುದೇನೋ ಅನ್ನುವಷ್ಟು ಎತ್ತರದಲ್ಲಿ ಹಾರುತ್ತಿರುತ್ತವೆ. ಅದ್ಭುತವಾದ ಜಾಗ!! ಇಲ್ಲಿ ಒಂದು ಟೆಂಟ್ ಹಾಕಿ ನಕ್ಷತ್ರ ಎಣಿಸಬೇಕೆನ್ನುವುದು ಬಹು ದಿನಗಳ ಆಸೆ.
ಆದರೆ ಅವು ಸೀಗಲ್ ಹಕ್ಕಿಗಳೊ ಅಥವಾ ಇನ್ಯಾವುದೋ ಬೇರೆಯ ಹಕ್ಕಿಗಳೊ ಎಂಬುವುದರ ಬಗ್ಗೆ ನನಗೆ ಅಷ್ಟು ಸರಿಯಾದ ಮಾಹಿತಿ ಇಲ್ಲ!
ಕಾಮೆಂಟ್ ಪೋಸ್ಟ್ ಮಾಡಿ