ಭಾನುವಾರ, ಮಾರ್ಚ್ 23, 2014

ನಾರಾಯಣ ದೇವಾಲಯ - ಹುಬ್ಬಳ್ಳಿ


ಜೀರ್ಣಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ಪುರಾತತ್ವ ಇಲಾಖೆ ದುರಸ್ತಿ ಮಾಡಿದೆ. ಸಂಪೂರ್ಣವಾಗಿ ಕುಸಿದುಬಿದ್ದಿದ್ದ ವಿಜಯನಗರ ಶೈಲಿಯ ಮುಖಮಂಟಪವನ್ನು ಪುನ: ಮೂಲ ರೂಪಕ್ಕೆ ತಕ್ಕಂತೆ ನಿರ್ಮಿಸಲಾಗಿದೆ. ಈ ದೇವಾಲಯದ ಬಗ್ಗೆ ಚಾಲುಕ್ಯರ ಸಮಯದಲ್ಲಿ ನಿರ್ಮಿಸಲಾಗಿರುವ ದೇವಾಲಯ ಎಂಬ ಮಾಹಿತಿಯಷ್ಟೇ ಲಭ್ಯವಿದೆ.


ಈ ತ್ರಿಕೂಟ ದೇವಾಲಯದ ಎಲ್ಲಾ ಶಿಖರಗಳ ತುದಿ ಕಣ್ಮರೆಯಾಗಿದ್ದು, ಈಗಿನ ಕಾಲದ ಶೈಲಿಗೆ ತಕ್ಕಂತೆ ತೇಪೆ ಹಾಕಲಾಗಿದೆ. ದೇವಾಲಯದ ಹೊರಭಾಗದಲ್ಲಿ ಭಿತ್ತಿಗಳಿಲ್ಲ.


ನವರಂಗದ ದ್ವಾರವು ಐದು ತೋಳುಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯಿದ್ದಾಳೆ. ದ್ವಾರದ ತೋಳುಗಳಲ್ಲಿ ಕ್ರಮವಾಗಿ ವಜ್ರತೋರಣ, ವಾದ್ಯಗಾರರು, ಜೋಡಿ ನೃತ್ಯಗಾರರು, ಸ್ತಂಭ ಹಾಗೂ ಬಳ್ಳಿತೋರಣ ಕೆತ್ತನೆಗಳನ್ನು ಕಾಣಬಹುದು.


ನಾಲ್ಕನೇ ತೋಳಿನಲ್ಲಿರುವ ಪೂರ್ಣಕುಂಭ ಕಲಶವನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಈ ಹೊರಚಾಚು ಕಲಶದ ಅಲಂಕಾರದ ಸುತ್ತ ಕೈಯಾಡಿಸಲು ಅನುಕೂಲವಾಗುವಂತೆ ಕೆತ್ತಲಾಗಿದೆ.


ದ್ವಾರದ ತಳಭಾಗದಲ್ಲಿ ತೋಳಿಗೊಂದರಂತೆ ಐದು ಮಾನವ ರೂಪದ ಕೆತ್ತನೆಗಳನ್ನು ಕಾಣಬಹುದು. ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಇಕ್ಕೆಲಗಳಲ್ಲಿ ತಲಾ ನಾಲ್ಕರಂತೆ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ನವರಂಗದಲ್ಲಿ ನಾಲ್ಕು ಕಂಬಗಳಿವೆ ಹಾಗೂ ಎಲ್ಲಾ ಗರ್ಭಗುಡಿಗಳು ತೆರೆದ ಅಂತರಾಳವನ್ನು ಹೊಂದಿವೆ. ಪ್ರಮುಖ ಗರ್ಭಗುಡಿಯಲ್ಲಿ ಸಾಮಾನ್ಯ ಪೀಠದ ಮೇಲೆ, ಮೂರ್ನಾಲ್ಕು ಅಡಿ ಎತ್ತರವಿರುವ ನಾರಾಯಣನ ಸುಂದರ ವಿಗ್ರಹವಿದೆ. ಮೇಲ್ಛಾವಣಿಯಲ್ಲಿ ಕಮಲದ ಕೆತ್ತನೆಯಿದೆ. ಗರ್ಭಗುಡಿಯ ದ್ವಾರವು ಅಲಂಕಾರರಹಿತ ಐದು ತೋಳುಗಳನ್ನು ಹೊಂದಿದೆ. ಲಲಾಟದಲ್ಲಿರುವ ಕೆತ್ತನೆ ನಶಿಸಿದೆ.

 

ನಾರಾಯಣನ ಇಕ್ಕೆಲಗಳಲ್ಲಿ ಶ್ರೀದೇವಿ ಹಾಗೂ ಭೂದೇವಿಯರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾರಾಯಣನ ಮೂರ್ತಿಯಿರುವ ಪೀಠ ಗರುಡ ಪೀಠವಾಗಿರದೆ, ಸಾಮಾನ್ಯ ಪೀಠವಾಗಿರುವುದು. ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ಗರುಡನನ್ನು, ಪೀಠದ ಮುಂಭಾಗದಲ್ಲಿ ಕಾಣಬಹುದು. ಈ ದೇವಾಲಯದಲ್ಲಿ, ಗರುಡನನ್ನು ನಾರಾಯಣನ ಪಾದಗಳ ಬಳಿ, ಬಲಭಾಗದಲ್ಲಿ, ಕೈ ಮುಗಿದು ಕುಳಿತಿರುವ ಭಂಗಿಯಲ್ಲಿ ಕಾಣಬಹುದು.


ನವರಂಗದ ಎಡಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ.


ನವರಂಗದ ಬಲಭಾಗದಲ್ಲಿರುವ ಗರ್ಭಗುಡಿಯಲ್ಲಿ ಗಣೇಶನ ಮೂರ್ತಿಯಿದೆ. ಉಳಿದಂತೆ ದೇವಾಲಯದಲ್ಲಿ ಸಪ್ತಮಾತೃಕೆಯರು, ಶಿವ ಪಾರ್ವತಿ (ಗಣೇಶ ಹಾಗೂ ಕಾರ್ತಿಕೇಯರೊಂದಿಗೆ), ಐದು ಕುದುರೆಗಳಿರುವ ಪೀಠದ ಮೇಲೆ ಆಸೀನನಾಗಿರುವ ದೇವ (ಯಾರೆಂದು ತಿಳಿಯಲಿಲ್ಲ) ಮತ್ತು ದೇವಿಯೊಬ್ಬಳ (ದೊರಕಿರುವ ಮಾಹಿತಿಯ ಪ್ರಕಾರ ಅದಿಶಕ್ತಿ) ಮೂರ್ತಿಗಳನ್ನು ಕಾಣಬಹುದು.


ಈ ದೇವಾಲಯದ ಎಲ್ಲಾ ವಿಗ್ರಹಗಳು ಇತ್ತೀಚಿನದಾಗಿರಬಹುದಾದ (೧೦೦ ವರ್ಷಗಳಷ್ಟು) ಸಾಧ್ಯತೆಗಳಿವೆ. ೮೦೦-೧೦೦೦ ವರ್ಷಗಳಷ್ಟು ಹಳೆಯ ವಿಗ್ರಹಗಳಲ್ಲಿ, ಗರುಡನನ್ನು ವಿಷ್ಣುವಿನ ಪಾದದ ಬಳಿ ತೋರಿಸಿರುವ ನಿದರ್ಶನ ಕಂಡುಬರುವುದಿಲ್ಲ. ಅಷ್ಟೇ ಅಲ್ಲದೆ, ಶಿವಲಿಂಗವನ್ನು ಹೊರತುಪಡಿಸಿ, ಉಳಿದವುಗಳನ್ನು ಬೇರೆಡೆಯಿಂದ ತಂದು ಇಲ್ಲಿ ಇಟ್ಟಿರಬಹುದು. ದೇವಾಲಯ ಹಳೆಯದಾದರೂ ಇಲ್ಲಿರುವ ಮೂರ್ತಿಗಳ ಬಗ್ಗೆ ಅದೇ ಮಾತನ್ನು ನಿಖರವಾಗಿ ಹೇಳುವಂತಿಲ್ಲ. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ.

ಕಾಮೆಂಟ್‌ಗಳಿಲ್ಲ: