ಬುಧವಾರ, ಜುಲೈ 17, 2013

ರಾಮೇಶ್ವರ ದೇವಾಲಯ - ಕೂಡ್ಲಿ


ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾಗುವ ಸ್ಥಳವೇ ಕೂಡ್ಲಿ ಅಥವಾ ಕೂಡಲಿ. ಶೃಂಗೇರಿಯ ಜಗದ್ಗುರು ನರಸಿಂಹ ಭಾರತಿ ಸ್ವಾಮಿಗಳು ೧೬ನೇ ಶತಮಾನದಲ್ಲಿ ಇಲ್ಲೊಂದು ಮಠವನ್ನು ಸ್ಥಾಪಿಸಿದ್ದರು. ತದನಂತರ ಸಂತೆಬೆನ್ನೂರಿನ ಪಾಳೇಗಾರರು ಮತ್ತು ಕೆಳದಿಯ ನಾಯಕರು ಸ್ಥಳವನ್ನು ದಾನವನ್ನಾಗಿ ನೀಡಿ ಮಠದ ಬೆಳವಣಿಗೆಗೆ ಸಹಾಯ ಮಾಡಿದರು ಎಂಬ ಮಾಹಿತಿ ದಾಖಲಾಗಿದೆ. ಬಹಳ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ಸ್ಥಳವು ಕದಂಬರು, ಬದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿದೆ. ಇಲ್ಲಿ ರಾಮೇಶ್ವರ, ಬ್ರಹ್ಮೇಶ್ವರ ಮತ್ತು ಚಿಂತಾಮಣಿ ನರಸಿಂಹ ದೇವಾಲಯಗಳಿವೆ. ತುಂಗಾ ಮತ್ತು ಭದ್ರಾ ನದಿಗಳು ಸಂಗಮಿಸುವಲ್ಲಿ ನದಿಯಲ್ಲೇ ಸಂಗಮೇಶ್ವರನ ಸಣ್ಣ ಗುಡಿಯಿದೆ.


ರಾಮೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ದೊಡ್ಡ ಪಾಣಿಪೀಠದ ಮೇಲೆ ಸಣ್ಣ ಶಿವಲಿಂಗವಿದೆ. ಗರ್ಭಗುಡಿಯ ದ್ವಾರವು ಅಲಂಕಾರರಹಿತ ೫ ತೋಳುಗಳನ್ನು ಹೊಂದಿದ್ದು ಕೆಳಗಡೆ ಶಿವಲಿಂಗವನ್ನು ಕೆತ್ತಲಾಗಿರುವುದು ವಿಶೇಷ. ದ್ವಾರದ ಕೆಳಭಾಗದಲ್ಲಿ ಈ ರೀತಿ ಶಿವಲಿಂಗಗಳು ಕಾಣಬರುವುದು ಬಹಳ ಅಪರೂಪ. ದ್ವಾರದ ಮೇಲ್ಭಾಗದಲ್ಲಿರುವ ಗಜಲಕ್ಷ್ಮೀಯ ಕೆತ್ತನೆಯೂ ಸ್ವಲ್ಪ ವಿಚಿತ್ರವಾಗಿದೆ. ಆನೆಗಳು ಕುಳಿತುಕೊಂಡ ಸ್ಥಿತಿಯಲ್ಲಿದ್ದು ಗಜಲಕ್ಷ್ಮೀಯ ಮುಖ ಮಾತ್ರ ದೊಡ್ಡದಾಗಿ ಕಾಣುವಂತೆ ಕೆತ್ತಲಾಗಿದೆ.


ಅಂತರಾಳದ ದ್ವಾರವು ಹೊಯ್ಸಳ ಶಿಲ್ಪಕಲಾ ವೈಭವದಿಂದ ಪರಿಪೂರ್ಣವಾಗಿ ಅಲಂಕೃತಗೊಂಡಿದೆ. ದ್ವಾರದ ಮೇಲೆ ಅಡ್ಡಪಟ್ಟಿಯಲ್ಲಿ ಐದು ಸಣ್ಣ ಗೋಪುರಗಳು, ಇವುಗಳ ಕೆಳಗೆ ಗಜಲಕ್ಷ್ಮೀಯ ಕೆತ್ತನೆ, ದ್ವಾರದ ಇಕ್ಕೆಲಗಳಲ್ಲಿ ಸುಂದರ ಜಾಲಂಧ್ರಗಳು, ತೋಳುಗಳಲ್ಲಿರುವ ಲತಾತೋರಣಗಳು ಮತ್ತು ತಳಭಾಗದಲ್ಲಿರುವ ಶಿವನ ಶಿಲ್ಪ (ಇದು ಶಿವನೇ ಇರಬಹುದೆಂದು ಊಹೆ) ಇವೆಲ್ಲವೂ ಅಂತರಾಳದ ದ್ವಾರಕ್ಕೆ ಉತ್ತಮ ಅಲಂಕಾರದ ರೂಪವನ್ನು ನೀಡಿವೆ.


ದ್ವಾರದ ತಳಭಾಗದಲ್ಲಿ ಇಕ್ಕೆಲಗಳಲ್ಲಿರುವ ಕೆತ್ತನೆಯಲ್ಲಿ ಬೇತಾಳ ಮತ್ತು ಡಮರುಗವನ್ನು ತೋರಿಸಿರುವುದನ್ನು ಕಾಣಬಹುದು. ಶಿವನ ಇಕ್ಕೆಲಗಳಲ್ಲಿರುವ ಪರಿಚಾರಿಕೆಯರು ಯಾರೆಂದು ಗೊತ್ತಾಗಲಿಲ್ಲ. ಅಂತರಾಳದ ದ್ವಾರದ ಮುಂದೆಯೇ ನಂದಿಯ ಮೂರ್ತಿ ಇದೆ ಮತ್ತು ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಗಣೇಶನ ಮತ್ತು ದೇವಿಯೊಬ್ಬಳ ಮೂರ್ತಿಯಿದೆ.


ನವರಂಗದಲ್ಲಿ ೯ ಅಂಕಣಗಳಿವೆ. ನವರಂಗದ ಮಧ್ಯಭಾಗದಲ್ಲಿ ನಾಲ್ಕು ಸುಂದರ ಕಂಬಗಳ ನಡುವೆ ಸ್ವಲ್ಪ ಎತ್ತರವಾದ ವೇದಿಕೆಯನ್ನು ಸಭಾಮಂಟಪ ಎಂದು ಕರೆಯಲಾಗುತ್ತದೆ. ಈ ಸಭಾಮಂಟಪದಲ್ಲಿರುವ ಅಂಕಣವು ಉಳಿದವುಗಳಿಗಿಂತ ಭಿನ್ನವಾಗಿದೆ. ಈ ಅಂಕಣವನ್ನು ೯ ಭಾಗಗಳನ್ನಾಗಿ ವಿಂಗಡಿಸಿ ಹೊರಗಿನ ೮ ಭಾಗಗಳಲ್ಲಿ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳಲ್ಲಿ ತೋರಿಸಲಾಗಿದೆ. ಮಧ್ಯಭಾಗದಲ್ಲಿ ಈಶ್ವರನ ತಾಂಡವೇಶ್ವರ ರೂಪವನ್ನು ತೋರಿಸಲಾಗಿದೆ. ಈ ಕೆತ್ತನೆಗಳು ಸುಂದರವಾಗಿದ್ದರೂ ಕಾಲನ ದಾಳಿಗೆ ಸಿಕ್ಕಿ ಈಗ ಮಸುಕಾಗಿ ಕಾಣುತ್ತಿವೆ.


ದೇವಾಲಯವು ೩ ದಿಕ್ಕುಗಳಿಂದ ದ್ವಾರಗಳನ್ನು ಹೊಂದಿದೆ. ಎಲ್ಲಾ ೩ ದ್ವಾರಗಳು ಮುಖಮಂಟಪವನ್ನು ಹೊಂದಿದ್ದು ಈ ಮುಖಮಂಟಪಗಳು ನವರಂಗಕ್ಕೆ ತಾಗಿಕೊಂಡೇ ಇವೆ. ಎಲ್ಲಾ ಮುಖಮಂಟಪಗಳು ತಲಾ ನಾಲ್ಕು ಕಂಬಗಳನ್ನು ಹೊಂದಿದ್ದು ಕಲ್ಲಿನ ಆಸನಗಳನ್ನೂ ಹೊಂದಿವೆ. ಕುಸಿದುಬಿದ್ದಿದ್ದ ಹೊರಗೋಡೆಯನ್ನು ಪ್ರಾಚ್ಯ ವಸ್ತು ಇಲಾಖೆ ಪುನ: ರಚಿಸಿದೆ. ಹೊರಗೋಡೆಯಲ್ಲಿ ಯಾವುದೇ ಭಿತ್ತಿಗಳಿಲ್ಲ. ಪೂರ್ವದಲ್ಲಿರುವ ಪ್ರಮುಖ ದ್ವಾರದ ಇಕ್ಕೆಲಗಳಲ್ಲಿ ಎರಡು ಆನೆಗಳ ಕೆತ್ತನೆಯಿದೆ.


ಶಿಖರವು ಮೂರು ತಾಳಗಳನ್ನು ಹೊಂದಿದ್ದು ಪದ್ಮದ ಮೇಲೆ ಸುಂದರ ಕಲಶವಿದೆ. ಶಿಖರದ ಮುಂಭಾಗದಲ್ಲಿ ಶಿಖರ ಲಾಂಛನ ಫಲಕವೂ ಉಳಿದುಕೊಂಡಿದೆ. ಇಲ್ಲಿರುವ ಹೊಯ್ಸಳ ಲಾಂಛನವನ್ನು ಆಕರ್ಷಕವಾಗಿ ಕೆತ್ತಲಾಗಿಲ್ಲವಾದರೂ, ಅಪರೂಪದ ವೈಶಿಷ್ಟ್ಯವನ್ನು ಹೊಂದಿರುವುದು ಗಮನಾರ್ಹ. ಸಿಂಹದ ಬಾಲ ಸುರುಳಿ ಸುತ್ತುವಲ್ಲಿ ಮಹಿಷಾಸುರಮರ್ದಿನಿಯ ಅಸ್ಪಷ್ಟ ಕೆತ್ತನೆಯಿರುವುದನ್ನು ಕಾಣಬಹುದು. ಹೊಯ್ಸಳ ಸಾಮ್ರಾಜ್ಯದಲ್ಲಿ ದುಷ್ಟರ ಸಂಹಾರವೇ ಪ್ರಮುಖ ಧ್ಯೇಯವಾಗಿರುವುದನ್ನು ಲಾಂಛನದಲ್ಲಿ ಮಹಿಷಾಸುರಮರ್ದಿನಿಯ ಕೆತ್ತನೆಯ ಮೂಲಕ ತೋರಿಸಲಾಗಿದೆ. ಹಿಂಭಾಗದಿಂದ ಗಮನಿಸಿದರೆ ಅಲ್ಲೊಂದು ಪದ್ಮವಿರುವುದು ಕಂಡಬರುತ್ತದೆ. ಪದ್ಮ ಮತ್ತು ಮಹಿಷಮರ್ದಿನಿ ಎರಡೂ ಇರುವುದು ಬಹಳ ಅಪರೂಪ. ಎಲ್ಲೂ ಇರಲಾರದು.


ದೊರಕಿರುವ ಕೆಲವು ವೀರಗಲ್ಲುಗಳನ್ನು ಪ್ರಾಂಗಣದಲ್ಲೇ ಇರಿಸಲಾಗಿದೆ.


ಸಮೀಪದಲ್ಲೇ ಬ್ರಹ್ಮೇಶ್ವರನ ಸನ್ನಿಧಿಯಿದೆ. ಇದಕ್ಕೆ ಆದಿಭೈರವ ದೇವರು ಎಂದೂ ಕರೆಯುತ್ತಾರೆ. ಸಂಪೂರ್ಣವಾಗಿ ಶಿಥಿಲಗೊಂಡಿರುವ ದೇವಾಲಯ. ಮಂಟಪದೊಳಗೆ ಶಿವಲಿಂಗ ಮತ್ತು ಹೊರಗೆ ನಂದಿ ಮಾತ್ರ ಇದೆ. ಶಿವಲಿಂಗ ನುಣುಪಾಗಿ ಸುಂದರವಾಗಿದೆ.


ರಾಮೇಶ್ವರ ದೇವಾಲಯದ ದಕ್ಷಿಣಕ್ಕೆ ಚಿಂತಾಮಣಿ ನರಸಿಂಹ ದೇವಾಲಯವಿದೆ. ಸುಖನಾಸಿ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವಂತೆ ತೋರುವ ದೇವಾಲಯಕ್ಕೆ ಸುಣ್ಣ ಬಳಿಯಲಾಗಿದೆ. ಇಲ್ಲಿ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಮತ್ತು ಮಂಟಪಗಳನ್ನು ಕೆತ್ತಲಾಗಿದೆ. ಬೀಗ ಹಾಕಲಾಗಿದ್ದರಿಂದ ಹೊರಗಿನಿಂದಲೇ ನೋಡಿ ತೃಪ್ತಿಪಡಬೇಕಾಯಿತು.


ಇಲ್ಲಿರುವ ನರಸಿಂಹ ಮೂರ್ತಿಯ ಬಲಗೈಯಲ್ಲಿ ಸಣ್ಣ ಪಾತ್ರೆಯನ್ನು ಹಿಡಿದಿರುವಂತೆ ತೋರಿಸಲಾಗಿದ್ದು, ಎಡಗೈಯನ್ನು ತೊಡೆಯ ಮೇಲಿರಿಸಲಾಗಿದೆ. ಇದೊಂದು ಅಪರೂಪದ ಮೂರ್ತಿಯಾಗಿದ್ದು, ಹೊಯ್ಸಳ ಆಳ್ವಿಕೆಯ ಕಾಲಕ್ಕಿಂತಲೂ ಮೊದಲಿನಿಂದಲೇ ಇದ್ದಿರಬೇಕೆಂದು ಇತಿಹಾಸಕಾರರ ಅಭಿಪ್ರಾಯ.


ದೇವಾಲಯದ ಮುಂದೆ ಎರಡು ನಂದಿ, ಒಂದು ಶಿವಲಿಂಗ ಮತ್ತು ಕೆತ್ತನೆಯಿರುವ ಕಲ್ಲೊಂದನ್ನು ಇರಿಸಲಾಗಿದೆ. ಎರಡೂ ನಂದಿಗಳ ಮೈತುಂಬಾ ಬಾಳೆಹಣ್ಣುಗಳನ್ನು ಇರಿಸಲಾಗಿದ್ದವು!

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

rajesh ji,

amaizing .
thank you


ven

hong kong

ರಾಜೇಶ್ ನಾಯ್ಕ ಹೇಳಿದರು...

ವೆನ್(ven),
ಧನ್ಯವಾದ(Thank you).