ಭಾನುವಾರ, ಫೆಬ್ರವರಿ 17, 2013

ನೀಲಕಂಠೇಶ್ವರ ದೇವಾಲಯ - ಹೂಲಿ


ನೀಲಕಂಠೇಶ್ವರ ದೇವಾಲಯದ ಮೇಲೆಲ್ಲಾ ಗಿಡಗಂಟಿಗಳು ಬೆಳೆದುಬಿಟ್ಟಿವೆ. ದೇವಾಲಯದ ಗೋಪುರ ಅರ್ಧದಷ್ಟು ಕುಸಿದುಬಿದ್ದಿದೆ ಮತ್ತು ಮುಖಮಂಟಪವೂ ಶೋಚನೀಯ ಸ್ಥಿತಿಯಲ್ಲಿದೆ. ದೇವಾಲಯದ ಹೊರಗೋಡೆ ಮಾತ್ರ ಇನ್ನೂ ಸುಸ್ಥಿತಿಯಲ್ಲಿದೆ. ಈ ಏಕಕೂಟ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದೆ.


ಹದಿನೆಂಟು ಕಂಬಗಳಿದ್ದ ಮುಖಮಂಟಪದಲ್ಲಿ ಈಗ ೧೦-೧೨ ಮಾತ್ರ ಉಳಿದುಕೊಂಡಿವೆ. ಮುಖಮಂಟಪವೇ ಕುಸಿದುಬೀಳದಂತೆ ಒಂದೆರಡು ಕಂಬಗಳನ್ನು ಆಸರೆಯಾಗಿ ನೀಡಲಾಗಿದೆ. ಮುಂಭಾಗ ಮತ್ತು ಪಾರ್ಶ್ವಗಳಲ್ಲಿದ್ದ ಕಕ್ಷಾಸನವೂ ಕಳಚಿಹೋಗಿದೆ.


ನವರಂಗವು ಆಕರ್ಷಕ ಕೆತ್ತನೆಗಳುಳ್ಳ ಪಂಚಶಾಖಾ ದ್ವಾರವನ್ನು ಹೊಂದಿದೆ. ಪ್ರತಿ ಶಾಖೆಯ ತಳಭಾಗದಲ್ಲಿರುವ ಮಾನವ ರೂಪದ (೩ ಹೆಣ್ಣು ಹಾಗೂ ೨ ಗಂಡು) ಕೆತ್ತನೆಗಳು ಮನಮೋಹಕವಾಗಿವೆ.


ನವರಂಗದ ದ್ವಾರದ ಪಂಚಶಾಖೆಗಳಲ್ಲಿ ಗಮನಸೆಳೆಯುವುದು ಜೋಡಿ ನೃತ್ಯಗಾರರ ಮತ್ತು ಜೋಡಿ ನಾಗಗಳ ಕೆತ್ತನೆ. ನಾಗ ಜೋಡಿಯನ್ನು ೩ ವಿಭಿನ್ನ ರೀತಿಯಲ್ಲಿ ಕೆತ್ತಿರುವುದನ್ನು ಕಾಣಬಹುದು.


ಲಲಾಟದಲ್ಲಿರುವ ಗಜಲಕ್ಷ್ಮೀಯ ಕೆತ್ತನೆಯು ಹಾನಿಗೊಳಗಾಗಿದ್ದರೂ ನೋಡುಗರ ಮನಸೂರೆಗೊಳ್ಳುವಷ್ಟು ಅಲಂಕಾರವನ್ನು ಹೊಂದಿದೆ. ಅಂದಕೇಶ್ವರ ದೇವಾಲಯದಲ್ಲಿರುವಂತೆ ಇಲ್ಲಿಯೂ ಗಜಲಕ್ಷ್ಮೀಯ ಕೆತ್ತನೆಯಲ್ಲಿ ನಾಲ್ಕು ಆನೆಗಳನ್ನು ತೋರಿಸಲಾಗಿದೆ. ಮೇಲ್ಭಾಗದ ಸಾಲಿನಲ್ಲಿ ನೃತ್ಯಗಾತಿಯರನ್ನು ಮತ್ತು ವಾದ್ಯಗಾರರನ್ನು ಕೆತ್ತಲಾಗಿದೆ. ಅಷ್ಟದಿಕ್ಪಾಲಕರ ಪೈಕಿ ಬಲಭಾಗದಲ್ಲಿರುವ ನಾಲ್ಕು ದಿಕ್ಪಾಲಕರ ಕೆತ್ತನೆ ಮಾತ್ರ ಉಳಿದುಕೊಂಡಿದ್ದು, ಎಡಭಾಗದ ನಾಲ್ಕು ಬಿದ್ದುಹೋಗಿವೆ.


ನವರಂಗದ ನಡುವೆ ಒಂದೆರಡು ಇಂಚು ಎತ್ತರದಲ್ಲಿ ನಿರ್ಮಿಸಲಾಗಿರುವ ರಂಗಮಂಟಪದ ಸುತ್ತಲೂ ನಾಲ್ಕು ಬೋಳುಕಂಬಗಳಿವೆ. ಈ ಕಂಬಗಳಿಗೆ ಆಕರ್ಷಕ ರೂಪವನ್ನು ನೀಡಲಾಗಿದೆಯಾದರೂ ಯಾವುದೇ ಶೃಂಗಾರವನ್ನು ಮಾಡಲಾಗಿಲ್ಲ. ಈ ರಂಗಮಂಟಪದ ನಡುವೆಯೂ ನಿಧಿಶೋಧನೆಗಾಗಿ ಅಗೆಯಲಾಗಿದ್ದು ಈಗ ಕಲ್ಲುಗಳನ್ನು ಜೋಡಿಸಿ ಇಡಲಾಗಿದೆ. ನವರಂಗದಲ್ಲಿ ಎಂಟು ದೇವಕೋಷ್ಠಗಳಿವೆಯಾದರೂ ಎಲ್ಲವೂ ಖಾಲಿಯಿವೆ.


ಗರ್ಭಗುಡಿಯು ಕೂಡಾ ಪಂಚಶಾಖಾ ದ್ವಾರವನ್ನು ಹೊಂದಿದ್ದು ಲಲಾಟದಲ್ಲಿ ಕಿಂಚಿತ್ತೂ ಹಾನಿಗೊಳಗಾಗದ ಗಜಲಕ್ಷ್ಮೀಯನ್ನು ಹೊಂದಿದೆ. ಎಲ್ಲಾ ರೀತಿಯಲ್ಲೂ ಗರ್ಭಗುಡಿಯ ದ್ವಾರವು ನವರಂಗದ ದ್ವಾರವನ್ನೇ ಹೋಲುತ್ತದೆ. ಆದರೆ ಬಹಳ ಮೊದಲು ಬಳಿದ ಸುಣ್ಣದ ಪ್ರಭಾವದಿಂದ ಈ ದ್ವಾರವು ಕಳಾಹೀನವಾಗಿ ಕಾಣುತ್ತಿದೆ. ತಳಭಾಗದಲ್ಲಿರುವ ಮಾನವರೂಪದ ಕೆತ್ತನೆಗಳಂತೂ ತಮ್ಮ ಅಂದಚಂದವನ್ನೇ ಕಳಕೊಂಡಿವೆ.


ಶಾಖೆಗಳ ಕೆತ್ತನೆಗಳಿಂದ ಸುಣ್ಣವನ್ನು ತೆಗೆಯಲಾಗಿದ್ದು ಅವುಗಳ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ವಿವಿಧ ವಾದ್ಯಗಳನ್ನು ನುಡಿಸುವ ವಾದ್ಯಗಾರರ ಕೆತ್ತನೆ ಮತ್ತು ಜೋಡಿ ನೃತ್ಯಗಾರರ ಕೆತ್ತನೆ ಆಕರ್ಷಕವಾಗಿದ್ದು ಗಮನಸೆಳೆಯುತ್ತದೆ.


ಇಲ್ಲಿ ಶಿವಲಿಂಗವಿದ್ದರೂ ಪೂಜೆ ನಡೆಯುವುದಿಲ್ಲ. ನಂದಿಯ ಸುಳಿವಿಲ್ಲ. ಗರ್ಭಗುಡಿಯ ಮೇಲಿರುವ ಕದಂಬನಗರ ಶೈಲಿಯ ಗೋಪುರ ಅರ್ಧದಷ್ಟು ಕುಸಿದುಬಿದ್ದಿದೆ. ಇಷ್ಟನ್ನಾದರೂ ಉಳಿಸಿಕೊಳ್ಳುವ ಸಂಕಲ್ಪವನ್ನು ಪ್ರಾಚ್ಯ ವಸ್ತು ಇಲಾಖೆ ಮಾಡಿರುವುದು ಸಂತೋಷದ ಸುದ್ದಿ. ನನ್ನ ಮೊದಲ ಭೇಟಿಗೆ ಹೋಲಿಸಿದರೆ ಎರಡನೇ ಭೇಟಿಯ ಸಮಯದಲ್ಲಿ ದೇವಾಲಯದ ಪರಿಸರದಲ್ಲಿ ಮುಳ್ಳುಗಳ ಸಂಖ್ಯೆ ಕಡಿಮೆಯಿತ್ತು!

3 ಕಾಮೆಂಟ್‌ಗಳು:

Teamgsquare ಹೇಳಿದರು...

Superb pictures .

Ashok ಹೇಳಿದರು...

Nice one...

ರಾಜೇಶ್ ನಾಯ್ಕ ಹೇಳಿದರು...

ಧೀರಜ್ ಅಮೃತಾ, ಅಶೋಕ್
ಧನ್ಯವಾದ.