ಭಾನುವಾರ, ಡಿಸೆಂಬರ್ 18, 2011

ಲಕ್ಷ್ಮೀನರಸಿಂಹ ದೇವಾಲಯ - ಜಾವಗಲ್


ಅಗಾಧ ಗಾತ್ರದ ಸ್ವಾಗತ ಗೋಪುರ, ಹೋರಗೋಡೆಯಲ್ಲಿರುವ ಅದ್ಭುತ ಮತ್ತು ಅಸಂಖ್ಯಾತ ಕೆತ್ತನೆಗಳು ಮತ್ತು ೩ ಸುಂದರ ವಿಗ್ರಹಗಳು ಇವಿಷ್ಟು ಜಾವಗಲ್‍ನಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ವೈಶಿಷ್ಟ್ಯಗಳು. ಹಳ್ಳಿಯ ಸಂದಿಗೊಂದಿಗಳಲ್ಲಿ ಒಂದಷ್ಟು ದೂರ ಕ್ರಮಿಸಿದ ಬಳಿಕ ದೇವಾಲಯದ ಸ್ವಾಗತ ಕಮಾನು ಎದುರಾಗುತ್ತದೆ. ಇಸವಿ ೧೨೫೦ರಲ್ಲಿ ಹೊಯ್ಸಳ ದೊರೆ ವೀರ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು.


ತ್ರಿಕೂಟ ಶೈಲಿಯ ಈ ದೇವಾಲಯ ಮುಖಮಂಟಪ, ಸುಖನಾಸಿ ಮತ್ತು ನವರಂಗಗಳನ್ನು ಹೊಂದಿದೆ. ನಾಲ್ಕು ತೋಳಿನ ನವರಂಗದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದಾರೆ. ಸುಮಾರು ಆರು ಅಡಿ ಎತ್ತರವಿದ್ದು ಸುಂದರವಾಗಿ ಕೆತ್ತಲಾಗಿರುವ ಈ ದ್ವಾರಪಾಲಕರನ್ನು ’ಗರುಡ ದ್ವಾರಪಾಲಕರು’ ಎಂದು ಕರೆಯಲಾಗುತ್ತದೆಯಂತೆ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇವನ್ನು ಅಳವಡಿಸಲಾಗಿದೆಯೆಂದು ನಂಬಲಾಗಿದೆ. ನವರಂಗದ ದ್ವಾರದ ಮುಂದೆ ನರ್ತಕಿಯೊಬ್ಬಳು ತಲೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ಸ್ವಾಗತಕೋರುವ ಭಂಗಿಯಲ್ಲಿರುವ ಕೆತ್ತನೆಯನ್ನು ನೆಲದಲ್ಲಿ ಬಿಡಿಸಲಾಗಿದೆ. ಸಾಮಾನ್ಯವಾಗಿ ಕೆಳದಿ ಅರಸರ ದೇವಾಲಯಗಳಲ್ಲಿರುವ ಈ ಶೈಲಿಯನ್ನು ಇಲ್ಲಿಯೂ ಕಂಡು ಆಶ್ಚರ್ಯವಾಯಿತು.


ದೇವಾಲಯದ ೩ ಗರ್ಭಗುಡಿಗಳಿಗೂ ಒಂದೇ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಎಲ್ಲಾ ಗರ್ಭಗುಡಿಗಳಿಗೆ ಮತ್ತು ನವರಂಗಕ್ಕೆ ಗ್ರಾನೈಟ್ ಹಾಸಲಾಗಿದೆ. ಪ್ರಮುಖ ಗರ್ಭಗುಡಿಯಲ್ಲಿ ಶ್ರೀಧರ ವಿನ್ಯಾಸದ ವಿಷ್ಣುವಿನ ವಿಗ್ರಹವಿದ್ದರೆ, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ದೇವರ ಮೂರ್ತಿಗಳಿವೆ. ಎಲ್ಲಾ ೩ ವಿಗ್ರಹಗಳೂ ಬಹಳ ಸುಂದರವಾಗಿವೆ. ಪ್ರಮುಖ ದೇವರು ಶ್ರೀಧರನಾದರೂ ದೇವಾಲಯವನ್ನು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಕರೆಯಲಾಗುತ್ತದೆ. ನಾವು ತೆರಳಿದಾಗ ಲಕ್ಷ್ಮೀನರಸಿಂಹನಿಗೆ ಕ್ಷೀರಾಭಿಷೇಕ ನಡೆಯುತ್ತಿತ್ತು.


ಈ ದೇವಾಲಯದ ರಚನೆ ಹಾರ್ನಹಳ್ಳಿ, ಹೊಸಹೊಳಲು, ಸೋಮನಾಥಪುರ ಮತ್ತು ನುಗ್ಗೇಹಳ್ಳಿಯ ದೇವಾಲಯಗಳನ್ನು ಹೋಲುತ್ತದೆ. ಸೋಮನಾಥಪುರ ಮತ್ತು ನುಗ್ಗೇಹಳ್ಳಿ ದೇವಾಲಯಗಳ ಶಿಲ್ಪಿ ’ಮಲ್ಲಿತಮ್ಮ’ನೇ ಈ ದೇವಾಲಯದಲ್ಲಿಯೂ ಕೆಲಸ ಮಾಡಿದ್ದಾನೆ ಎಂದು ಇತಿಹಾಸಕಾರರ ಅಭಿಪ್ರಾಯ.


 ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಹೊರಗೋಡೆಯ ತಳಭಾಗದಿಂದ ಒಂದರ ಮೇಲೊಂದರಂತೆ ೬ ಪಟ್ಟಿಗಳಲ್ಲಿ (ಸಾಲುಗಳಲ್ಲಿ) ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳಭಾಗದಿಂದ ಮೊದಲು ಆನೆಗಳ ಸಾಲು ನಂತರ ಎರಡನೇಯದಾಗಿ ಅಶ್ವಗಳ ಸಾಲನ್ನು ಕೆತ್ತಲಾಗಿದೆ. ಮೂರನೆಯದಾಗಿ ಬಳ್ಳಿ ಸುರುಳಿಯನ್ನು ಕೆತ್ತಲಾಗಿದೆ. ನಾಲ್ಕನೇ ಸಾಲಿನಲ್ಲಿ ಪೌರಾಣಿಕ ಘಟನೆಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಐದನೇ ಸಾಲಿನಲ್ಲಿ ಮಕರ ಹಾಗೂ ಕೊನೆಯ ಪಟ್ಟಿಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ.


ತ್ರಿಕೂಟ ಶೈಲಿಯ ದೇವಾಲಯವಾದರೂ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದೆ. ದೇವಾಲಯದ ಹೊರಗೋಡೆಯಲ್ಲಿರುವ ೧೩೭ ಶಿಲ್ಪಗಳನ್ನು ನೋಡಲು ತುಂಬಾ ಸಮಯ ಬೇಕು. ಪ್ರತಿಯೊಂದು ಕೆತ್ತನೆಯೂ ಅದ್ಭುತ, ಸುಂದರ.


ಹೊಯ್ಸಳರು ನಿರ್ಮಿಸಿದ ದೇವಾಲಯಗಳ ಬಾಹ್ಯ ಸೌಂದರ್ಯ ಚೆನ್ನಾಗಿರುತ್ತದೆ. ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಸಮಯ ಹೋದದ್ದೆ ಅರಿವಾಗುವುದಿಲ್ಲ.

11 ಕಾಮೆಂಟ್‌ಗಳು:

Arun ಹೇಳಿದರು...

ತುಂಬಾ ಅದ್ಭುತವಾದ ದೇವಾಲಯ.. ಫೋಟೋಗಳು ಚೆನ್ನಾಗಿದೆ..

Teamgsquare ಹೇಳಿದರು...

Adubutha, Photos are really wonderful .

Ullas ಹೇಳಿದರು...

hoysala shilpa vaibhavavannu parichaisida nimage dhanyavaadagalu.

aganitha moulyada eee sampatthu innnadaru mundina peeLigege uLisuvalli janara mattu sarakarada Prayatna sagali yendu haraike.

Ullas ಹೇಳಿದರು...

Sundara shilpadas Udyanagalannu sristisida "mallitamma" nige Namo namaha.

Rakesh Holla ಹೇಳಿದರು...

Beautiful snaps

Lokesh ಹೇಳಿದರು...

Dear Rajesh Naika,

Please stop spoiling your beautiful photographs with the copyright watermarks. it is so painful to watch them and its a crime against them.

I am sure you can make them much smaller and place it in the bottom right most corner. or embed them digitally, if you are so paranoid about your intellectual rights.


Regards, Lokesh.

ರಾಜೇಶ್ ನಾಯ್ಕ ಹೇಳಿದರು...

ಅರುಣ್, ಧೀರಜ್ ಅಮೃತಾ, ರಾಕೇಶ್
ಧನ್ಯವಾದ.

ಉಲ್ಲಾಸ್,
ಪ್ರೋತ್ಸಾಹಕ್ಕಾಗಿ ಧನ್ಯವಾದ.

ಲೊಕೇಶ್,
ಸಲಹೆಗಾಗಿ ಧನ್ಯವಾದ.

Smiles! ಹೇಳಿದರು...

chennaagide. Javagal is my ancestor's place.

Kusum ಹೇಳಿದರು...

Tunba chennagide, devasthana hagoo nimma baravanige. Kappu-bilupu chayachitragalu puratana lokakke karedoyyuttave!

ರಾಜೇಶ್ ನಾಯ್ಕ ಹೇಳಿದರು...

ಸ್ಮೈಲ್ಸ್,
ಧನ್ಯವಾದ.

ಕುಸುಮ್,
ಧನ್ಯವಾದ. ಚಿತ್ರಗಳು ಚೆನ್ನಾಗಿ ಬಂದಿರಲಿಲ್ಲ. ಆದ್ದರಿಂದ ಅವನ್ನು ಕಪ್ಪು ಬಿಳುಪಿಗೆ ಬದಲಾಯಿಸಿ ಪ್ರಕಟಿಸಿದೆ. ಚಿತ್ರಗಳೂ ಚೆನ್ನಾಗಿ ಕಾಣುವಂತಾಯಿತು ಮತ್ತು ನೀವು ಹೇಳಿದಂತೆ ಪುರಾತನ ಲೋಕಕ್ಕೆ ಕರೆದೊಯ್ಯುವ ಅನುಭವವನ್ನೂ ನೀಡಿದಂತಾಯಿತು.

Unknown ಹೇಳಿದರು...

Hi Rajesh, would like to contact you. Please share your email id to: raghavawrites@gmail.com