ಕಲ್ಯಾಣಿ ಚಾಲುಕ್ಯರ ದಕ್ಷಿಣ ಭಾಗದ ನಾಡಿನ ರಾಜಧಾನಿಯಾಗಿತ್ತು ಬಳ್ಳಿಗಾವಿ. ಈ ಪುಟ್ಟ ಊರು ಚಾಲುಕ್ಯ ಮತ್ತು ಹೊಯ್ಸಳ ಕಾಲದ ಹಲವು ದೇವಾಲಯಗಳನ್ನು ಹೊಂದಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದ ಬಳ್ಳಿಗಾವಿಯನ್ನು ೧೨ನೇ ಶತಮಾನದಲ್ಲಿ 'ಪ್ರಾಚೀನ ಊರುಗಳಲ್ಲೇ ಶ್ರೇಷ್ಠ’ ಎಂದು ಕರೆಯಲಾಗುತ್ತಿತ್ತು. ಪ್ರಖ್ಯಾತ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿಯೂ ಮೆರೆದಿದ್ದ ಬಳ್ಳಿಗಾವಿಯನ್ನು ’ದಕ್ಷಿಣ ಕೇದಾರ’ವೆಂದು ಕರೆಯಲಾಗುತ್ತಿತ್ತು.
ಶಿರಾಳಕೊಪ್ಪದಿಂದ ಕೆರೆಯ ಬದಿಯಲ್ಲೇ ಬರುವಾಗ ಮೊದಲಿಗೆ ಗೋಚರಿಸುವುದು ಕೇದಾರೇಶ್ವರ ದೇವಸ್ಥಾನ. ಈ ದೇವಸ್ಥಾನದಲ್ಲಿರುವ ಲಿಂಗವನ್ನು ಚಾಲುಕ್ಯರು ಪ್ರತಿಷ್ಠಾಪಿಸಿದರೆ, ನಂತರ ಇಸವಿ ೧೦೫೯ರಲ್ಲಿ ದೇವಾಲಯವನ್ನು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿಸಿ ಪೂರ್ಣಗೊಳಿಸಿದವರು ಹೊಯ್ಸಳರು.
ಸಳ ಮಹಾರಾಜ ಹುಲಿ ಕೊಲ್ಲುವ ದೃಶ್ಯದ ಕೆತ್ತನೆ ಪ್ರಮುಖ ಗರ್ಭಗುಡಿಯ ಗೋಪುರದ ಮುಂಭಾಗದಲ್ಲಿ ರಾರಾಜಿಸುತ್ತಿದೆ. ಈ ದೇವಾಲಯದ ಮುಖಮಂಟಪ ದೇವಾಲಯಕ್ಕೆ ತಾಗಿಕೊಂಡು ಇಲ್ಲ. ಮುಖಮಂಟಪ ಮತ್ತು ದೇವಾಲಯಕ್ಕೆ ಸುಮಾರು ೧೫ ಅಡಿಗಳ ಅಂತರವಿದೆ. ಸಾಧಾರಣವಾಗಿರುವ ೧೬ ಕಂಬಗಳ ಮುಖಮಂಟಪವನ್ನು ದಾಟಿ ಬಂದರೆ ದೇವಾಲಯದ ಸುಖನಾಸಿಯೊಳಗೆ ಪ್ರವೇಶ. ಸುಖನಾಸಿಯ ಆರಂಭದಲ್ಲೇ ನಂದಿ ಆಸೀನನಾಗಿದ್ದಾನೆ. ಹೆಚ್ಚಾಗಿ ನಂದಿ ಮುಖಮಂಟಪದ ಆಸುಪಾಸಿನಲ್ಲಿ ಇರುತ್ತದಾದರೂ, ಈ ದೇವಾಲಯ ಒಂದು ಅಪವಾದ.
ಸುಖನಾಸಿಯ ನಂತರ ೪೪ ಕಂಬಗಳ ನವರಂಗ. ನಂತರ ಅಂತರಾಳ ಮತ್ತು ಪ್ರಮುಖ ಗರ್ಭಗುಡಿ. ಗರ್ಭಗುಡಿಯಲ್ಲಿ ಕೇದಾರೇಶ್ವರ ಲಿಂಗ. ಎಡಕ್ಕಿರುವ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹ ಮತ್ತು ಬಲಕ್ಕಿರುವ ಗರ್ಭಗುಡಿಯಲ್ಲಿ ಬ್ರಹ್ಮೇಶ್ವರ ಲಿಂಗವಿದೆ. ನವರಂಗದಲ್ಲಿ ೨೫ಕ್ಕೂ ಅಧಿಕ ಚಾಲುಕ್ಯ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಂಬಗಳು. ಒತ್ತೊತ್ತಾಗಿ ನಿಲ್ಲಿಸಲಾಗಿರುವ ಈ ಕಂಬಗಳ ಸಮೂಹವನ್ನು ನೋಡುವುದೇ ಚಂದ. ಈ ದೇವಾಲಯವು ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು.
ಕೇದಾರೇಶ್ವರ ದೇವಾಲಯದ ಪಕ್ಕದಲ್ಲಿರುವುದೇ ಅಲ್ಲಮ ಪ್ರಭು ದೇವಾಲಯ. ಬಳ್ಳಿಗಾವಿ ಅಲ್ಲಮ ಪ್ರಭು ಜನಿಸಿದ ಸ್ಥಳ. ಈ ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರೂ, ಪ್ರಖ್ಯಾತ ವಚನಕಾರ ಅಲ್ಲಮ ಪ್ರಭು ತನ್ನ ಹೆಚ್ಚಿನ ಸಮಯವನ್ನು ಇದೇ ಗುಡಿಯಲ್ಲಿ ಕಳೆಯುತ್ತಿದ್ದರಿಂದ ಆತನ ಹೆಸರಿಂದಲೇ ಈ ಗುಡಿಯನ್ನು ಗುರುತಿಸಲಾಗುತ್ತದೆ. ಅಲ್ಲಮ ಪ್ರಭು ದೇವಾಲಯ ಎಂದು ಕರೆಯುವ ಮೊದಲು, ಗೋಪುರರಹಿತ ತ್ರಿಕೂಟಾಚಲ ರಚನೆಯುಳ್ಳ ಈ ದೇವಾಲಯವನ್ನು ನಗರೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು ಮತ್ತು ಬಳ್ಳಿಗಾವಿಯ ಮೂಲ ದೇವಸ್ಥಾನವೂ ಇದೇ. ಪಟ್ಟದಕಲ್ಲಿನ ವ್ಯಾಪಾರಿ ಸಮುದಾಯದವರಾದ ವೀರ ಬಣಂಜರು ೧೨ನೇ ಶತಮಾನದಲ್ಲಿ ನಗರೇಶ್ವರ ದೇವಾಲಯವನ್ನು ನಿರ್ಮಿಸಿದರು ಎಂದು ಶಾಸನಗಳು ತಿಳಿಸುತ್ತವೆ. ಪುಟ್ಟದಾಗಿರುವ ಈ ದೇಗುಲ ಮುಖಮಂಟಪ, ನವರಂಗ ಮತ್ತು ೩ ಗರ್ಭಗುಡಿಗಳನ್ನು ಹೊಂದಿದೆ.
ಬಳ್ಳಿಗಾವಿ ಊರಿನ ಮಧ್ಯದಲ್ಲಿರುವುದು ತ್ರಿಪುರಾಂತಕೇಶ್ವರ ದೇವಾಲಯ. ಹೊರಗಿನಿಂದ ನೋಡಿದರೆ ಏನೂ ವಿಶೇಷವಿಲ್ಲದಂತೆ ತೋರುವ ಈ ದೇವಸ್ಥಾನ ಒಳಹೊಕ್ಕರೆ ವಿಸ್ಮಯಗಳ ರಾಶಿಯನ್ನೇ ಕಣ್ಣೆದುರಿಗೆ ಇಡುತ್ತದೆ. ಸಂಪೂರ್ಣವಾಗಿ ಕುಸಿದಿದ್ದ ಈ ದೇವಸ್ಥಾನವನ್ನು ಭಾರತೀಯ ಪುರಾತತ್ವ ಇಲಾಖೆ ಮೂಲ ರಚನೆಗೆ ತಕ್ಕಂತೆ ಪುನ: ನಿರ್ಮಿಸಿದೆ. ಹಾಗಿದ್ದರೂ ದೇವಾಲಯ ಕುಸಿದು ಬಿದ್ದಿರುವಂತೆಯೇ ತೋರುತ್ತದೆ. ಹಾಗೆಂದುಕೊಂಡೇ ದೇವಾಲಯದ ಸಮೀಪ ತೆರಳಿದ ನಮಗೆ, ಸಂಪೂರ್ಣವಾಗಿ ಕುಸಿದಿದ್ದನ್ನು ಈ ಮಟ್ಟಕ್ಕೆ ಪುನ: ನಿರ್ಮಿಸಲಾಗಿದೆ ಎಂದು ಅಲ್ಲಿನ ಉದ್ಯೋಗಿ ತಿಳಿಸಿದರು.
ತ್ರಿಪುರಾಂತಕೇಶ್ವರ ದೇವಾಲಯವನ್ನು ಇಸವಿ ೧೦೩೯ರಲ್ಲಿ ನಿರ್ಮಿಸಲಾಗಿತ್ತು. ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಅಡಿಪಾಯ ಈ ದೇವಾಲಯಕ್ಕಿದೆ. ೨ ದ್ವಾರಗಳಿರುವ ಈ ದೇವಸ್ಥಾನದ ಪ್ರಮುಖ ದ್ವಾರ ಯಾವುದೆಂದು ತಿಳಿದುಕೊಳ್ಳುವುದೇ ಸಮಸ್ಯೆ. ನಂತರ ನಂದಿ ಇದ್ದ ದ್ವಾರವೇ ಪ್ರಮುಖ ದ್ವಾರ ಎಂದು ತಿಳಿದುಬಂತು. ಇದೊಂದು ವಿಚಿತ್ರ ಶೈಲಿಯ ತ್ರಿಕೂಟಾಚಲ ದೇವಸ್ಥಾನ. ಎಲ್ಲಾ ತ್ರಿಕೂಟಾಚಲ ದೇವಸ್ಥಾನಗಳು ಅಂಗ್ಲ ಅಕ್ಷರಮಾಲಿಕೆಯ ’ವಿ’ ಆಕಾರದಲ್ಲಿದ್ದರೆ, ಈ ದೇವಾಲಯ ’ಎಲ್’ ಆಕಾರದಲ್ಲಿತ್ತು!
ನಂದಿ ಮುಖ ಮಾಡಿ ನಿಂತಿರುವ ಪ್ರಮುಖ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಇದರ ಬಲಕ್ಕೆ ತ್ರಿಕೂಟಾಚಲ ಶೈಲಿಗೆ ತಕ್ಕಂತೆ ಇರುವ ಗರ್ಭಗುಡಿಯಲ್ಲಿ ವಿಷ್ಣುವಿನ ವಿಗ್ರಹವಿದೆ. ತ್ರಿಕೂಟಾಚಲ ರಚನೆಯಂತೆ ಪ್ರಮುಖ ಗರ್ಭಗುಡಿಯನ್ನು ಹೊರತುಪಡಿಸಿ ಉಳಿದೆರಡು ಗರ್ಭಗುಡಿಗಳು ಎದುರುಬದುರಾಗಿರಬೇಕು.
ಆದರೆ ಈ ೩ನೇ ಗರ್ಭಗುಡಿ, ವಿಷ್ಣು ಇರುವ ಗರ್ಭಗುಡಿಗೆ ಮುಖ ಮಾಡಿರುವುದರ ಬದಲಾಗಿ ಪ್ರಮುಖ ಗರ್ಭಗುಡಿಗೆ ತಾಗಿಕೊಂಡೇ ಇದೆ ಮತ್ತು ನಂದಿ ಇರುವ ದಿಕ್ಕಿಗೇ ಮುಖಮಾಡಿಕೊಂಡು ಇದೆ!! ಇಷ್ಟೇ ಅಲ್ಲದೆ ಈ ೩ನೇ ಗರ್ಭಗುಡಿಗೆ ಬೇರೇನೆ ಆದ ನವರಂಗ ಮತ್ತು ಉಳಿದ ೨ ಗರ್ಭಗುಡಿಗಳಿಗೆ ಬೇರೇನೇ ನವರಂಗ. ಈ ದೇವಾಲಯದಲ್ಲಿ ೨ ನವರಂಗಗಳು! ಪ್ರಮುಖ ಶಿವಲಿಂಗ ಮತ್ತು ವಿಷ್ಣು ಇರುವ ಗರ್ಭಗುಡಿಗಳ ನವರಂಗವನ್ನು ನಾಟ್ಯರಂಗವೆಂದೂ, ೩ನೇ ಗರ್ಭಗುಡಿಯ ಮುಂದಿರುವ ನವರಂಗವನ್ನು ಸಭಾರಂಗವೆಂದೂ ಕರೆಯುತ್ತಾರೆ. ದೇವಾಲಯದ ಪ್ರಮುಖ ದ್ವಾರ ತೆರೆದುಕೊಳ್ಳುವುದು ನಾಟ್ಯರಂಗಕ್ಕೆ.
ನಾಟ್ಯರಂಗದಿಂದ ಸಭಾರಂಗಕ್ಕೆ ಬರಲು ದ್ವಾರವಿದೆ. ಈ ದ್ವಾರದಲ್ಲಿ ಸುಂದರವಾಗಿ ಕೆತ್ತಲಾಗಿರುವ ’ದ್ವಾರಪಾಲಕಿ’ಯರಿದ್ದಾರೆ. ದ್ವಾರಪಾಲಕಿಯರ ಬದಿಯಲ್ಲಿರುವ ಕಿಟಕಿಗಳ ಮೇಲೆ ಕೆತ್ತನೆ ಅದ್ಭುತ. ನಾಟ್ಯರಂಗದಿಂದ ೨ ಗರ್ಭಗುಡಿಗಳಿಗೆ ಮತ್ತು ಸಭಾರಂಗಕ್ಕೆ ತೆರೆದುಕೊಳ್ಳುವ ದ್ವಾರಗಳು ೫ ತೋಳಿನವು. ಪ್ರತಿ ತೋಳಿನಲ್ಲೂ ಉನ್ನತ ಮಟ್ಟದ ಕೆತ್ತನೆ ಕೆಲಸ.
ಇದೊಂದು ಮೂಲತ: ದ್ವಿಕೂಟ ರಚನೆಯಾಗಿದ್ದು, ೩ನೇ ಗರ್ಭಗುಡಿಯನ್ನು ನಂತರ ಸೇರಿಸಲಾಗಿದೆ ಎಂಬ ಮಾತೂ ಇದೆ. ದೇವಾಲಯದ ವಿಚಿತ್ರ ತ್ರಿಕೂಟ ರಚನೆಯನ್ನು ಗಮನಿಸಿದರೆ ಈ ವಾದವನ್ನು ತಳ್ಳಿಹಾಕುವಂತಿಲ್ಲ. ಸಾಮಾನ್ಯವಾಗಿ ತ್ರಿಕೂಟ ರಚನೆಯಲ್ಲಿ ಒಂದೇ ನವರಂಗವಿರುತ್ತದೆ ಮತ್ತು ೩ ಗರ್ಭಗುಡಿಗಳು ಈ ನವರಂಗಕ್ಕೇ ತೆರೆದುಕೊಳ್ಳುತ್ತವೆ. ಇಲ್ಲಿ ೨ ಗರ್ಭಗುಡಿಗಳು ಮಾತ್ರ ನವರಂಗಕ್ಕೆ ತೆರೆದುಕೊಳ್ಳುತ್ತವೆ. ನಂತರ ನಿರ್ಮಿಸಲಾದ ೩ನೇ ಗರ್ಭಗುಡಿಗೆ ಬೇರ್‍ಏನೆ ನವರಂಗವನ್ನು ನಿರ್ಮಿಸಿರುವಂತೆ ಕಾಣಬರುತ್ತದೆ ಮತ್ತು ದ್ವಿಕೂಟ ದೇವಾಲಯದ ಎರಡನೇ ದ್ವಾರವನ್ನು ಈ ನವರಂಗಕ್ಕೆ ತೆರೆದುಕೊಳ್ಳುವಂತೆ ಮಾಡಲಾಗಿದೆ. ಮೇಲ್ನೋಟಕ್ಕೆ ಈ ವಾದವೇ ಸರಿ ಎಂದು ಕಾಣಬಹುದು. ಆದರೆ ಏನೇ ಇರಲಿ, ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಇರುವವರಿಗೆ ಬಳ್ಳಿಗಾವಿಯ ತ್ರಿಪುರಾಂತಕೇಶ್ವರ ದೇವಾಲಯ ಒಂದು ಸೋಜಿಗ.
ತ್ರಿಪುರಾಂತಕೇಶ್ವರ ದೇವಾಲಯದ, ಪ್ರಮುಖ ಗರ್ಭಗುಡಿಯ ಅಂತರಾಳಕ್ಕೆ ತೆರೆದುಕೊಳ್ಳುವ ದ್ವಾರದ ಮೇಲೆ ಅತ್ಯದ್ಭುತ ಕೆತ್ತನೆ ಮತ್ತು ನಾಟ್ಯರಂಗದಲ್ಲಿ ೪ ಬೃಹತ್ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣುವ ಕಂಬಗಳಿವೆ. ನಾಲ್ಕು ಕಂಬಗಳಲ್ಲೂ ಪ್ರಭಾವಳಿಯಂತೆ ಬೇರೆ ಬೇರೆ ಕೆತ್ತನೆಗಳು. ಒಂದರಲ್ಲಿ ವಿಷ್ಣುವಿನ ಅವತಾರಗಳಿಗೆ ಸಂಬಂಧಿಸಿದ ಕೆತ್ತನೆಗಳು, ಇನ್ನೊಂದರಲ್ಲಿ ಶ್ರೀ ಕೃಷ್ಣನ ವಿವಿಧ ಲೀಲೆಗಳು, ಮತ್ತೊಂದರಲ್ಲಿ ಶಿವ, ಪಾರ್ವತಿ ಮತ್ತು ಷಣ್ಮುಖರ ಕೆತ್ತನೆಗಳು ಹಾಗೂ ಕೊನೆಯದರಲ್ಲಿ ಜೈನ ತೀರ್ಥಂಕರರ ಕೆತ್ತನೆಗಳು. ಈ ನಾಟ್ಯರಂಗದಲ್ಲೇ ಹೊಯ್ಸಳ ದೊರೆ ಬಿಟ್ಟಿದೇವ ತನ್ನ ಪ್ರಮುಖ ರಾಣಿ ಶಾಂತಲಾದೇವಿಯನ್ನು ಪ್ರಥಮ ಬಾರಿಗೆ ನೋಡಿದ್ದು!
ಅದೊಂದು ದಿನ ಬೇಲೂರಿಗೆ ಹಿಂತಿರುಗುತ್ತಿದ್ದ ಬಿಟ್ಟಿದೇವ, ಬಳ್ಳಿಗಾವಿಯಲ್ಲಿ ತಂಗಿದ್ದನು. ಮುಂಜಾನೆ ತ್ರಿಪುರಾಂತಕೇಶ್ವರ ದೇವಾಲಯದಿಂದ ಕೇಳಿಬರುತ್ತಿದ್ದ ತಾಳ, ರಾಗಗಳ ಸದ್ದಿಗೆ ದೇವಸ್ಥಾನದ ಕಡೆಗೆ ಬಂದ ಬಿಟ್ಟಿದೇವ ನಾಟ್ಯರಂಗದಲ್ಲಿ ನೃತ್ಯ ಮಾಡುತ್ತಿದ್ದ ಶಾಂತಲಾದೇವಿಯನ್ನು ಕಂಡು ಅವಳಲ್ಲಿ ಮೋಹಿತನಾದ. ಶಾಂತಲಾದೇವಿ ಬಳ್ಳಿಗಾವಿಯ ನಿವಾಸಿಯಾಗಿದ್ದಳು ಮತ್ತು ಆಕೆ ಒಬ್ಬ ಜೈನ ಧರ್ಮೀಯಳಾಗಿದ್ದಳು. ಬಿಟ್ಟಿದೇವ ಹಿಂದೂ ಧರ್ಮೀಯನಾಗಿದ್ದ. ತನ್ನನ್ನು ವರಿಸಬೇಕಾದರೆ ಜೈನ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಶಾಂತಲಾದೇವಿ ಬಿಟ್ಟಿದೇವನಲ್ಲಿ ಹೇಳಿದಾಗ, ಬಿಟ್ಟಿದೇವ ವಿಷ್ಣುವರ್ಧನನಾದ ಮತ್ತು ಶಾಂತಲಾದೇವಿ ಹೊಯ್ಸಳ ರಾಜ್ಯದ ಪ್ರಮುಖ ರಾಣಿಯಾದಳು.
ಸಭಾರಂಗದಲ್ಲೂ ಮತ್ತವೇ ಚಾಲುಕ್ಯ ಶೈಲಿಯ ೪ ಕಂಬಗಳಿವೆ. ಛಾವಣಿಯಲ್ಲಿ ಬೆರಗುಗೊಳಿಸುವ ಕೆತ್ತನೆ ಇದೆ. ದೇವಾಲಯದ ಹೊರಗೋಡೆಯಲ್ಲಿ ವಿವಿಧ ಕೆತ್ತನೆಗಳಿವೆ. ರಾಮಾಯಣದ ದೃಶ್ಯಗಳನ್ನು ಬಿಂಬಿಸುವ ಕೆತ್ತನೆಗಳಿವೆ. ದರ್ಪಣ ಸುಂದರಿಯರಿದ್ದಾರೆ. ದತ್ತು ಕೊಡುವ ಪದ್ಧತಿಯನ್ನು ಬಿಂಬಿಸುವ ’ದತ್ತು ಕಲ್ಲು’ ಇದೆ.
ವಿವಿಧ ಭಂಗಿಗಳಲ್ಲಿ ಮಿಥುನ ಶಿಲ್ಪಗಳಿವೆ. ಚಕ್ರಾಸನ(!?!?)ವೆಂಬ ಆಸನದ ಅಪರೂಪದ ಕೆತ್ತನೆಯೂ ಇದೆ. ಆ ಕಾಲದಲ್ಲಿ ಹೆಂಗಸರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಬಿಂಬಿಸುವ ಕೆತ್ತನೆಯಿದೆ.
ತ್ರಿಪುರಾಂತಕೇಶ್ವರ ದೇವಾಲಯದ ಎದುರಿಗೇ ಸಭಾಮಂಟಪವಿದೆ. ಅಲ್ಲಿಂದ ಸ್ವಲ್ಪ ಮುಂದೆ ವೀರಭದ್ರಸ್ವಾಮಿ ದೇವಸ್ಥಾನವಿದೆ. ಇದು ಇತ್ತೀಚೆಗಿನ ದೇವಸ್ಥಾನ. ಆದರೆ, ಇಲ್ಲಿ ಹಸಿರು ಬಣ್ಣದ ಶಿವಲಿಂಗವೊಂದಿದೆ. ಈ ಶಿವಲಿಂಗ, ಪಚ್ಚೆ ನೀಲಕಂಠೇಶ್ವರ ದೇವಾಲಯದಲ್ಲಿತ್ತು. ಯಾರೋ ಅದನ್ನು ಕದ್ದೊಯ್ಯುತ್ತಿರುವಾಗ ಸಿಕ್ಕುಬಿದ್ದು, ಈಗ ಅದನ್ನು ಊರಿನ ದೇವಸ್ಥಾನದಲ್ಲಿ ಜೋಪಾನವಾಗಿ ಇಡಲಾಗಿದೆ.
ತ್ರಿಪುರಾಂತಕೇಶ್ವರ ದೇವಾಲಯದಿಂದ ಸ್ವಲ್ಪ ಮುಂದೆ ಭೇರುಂಡೇಶ್ವರ ಸ್ತಂಭ ಅಥವಾ ವಿಜಯ ಸ್ತಂಭ ಇರುವುದು. ೩ ಮೀಟರ್ ಎತ್ತರದ ಪೀಠದ ಮೇಲೆ ಇರುವ ಈ ಸ್ತಂಭ ೯.೭೫ ಮೀಟರ್ ಎತ್ತರವಿದೆ. ಇದನ್ನು ಚಾಲುಕ್ಯ ದೊರೆ ತ್ರಿಲೋಕಮಲ್ಲನ ದಂಡನಾಯಕನಾಗಿದ್ದ ಚಾವುಂಡರಾಯ ಅರಸನು ತನ್ನ ವಿಜಯದ ಸ್ಮರಣಾರ್ಥ ನಿರ್ಮಿಸಿದ್ದಾನೆ.
ಮಾಹಿತಿ: ಸೌಮ್ಯ ಎಸ್.ವಿ, ಶ್ರೀಕಂಠ ಹೊಸನಗರ ಮತ್ತು ಪ್ರಾಚ್ಯ ವಸ್ತು ಇಲಾಖೆ.
8 ಕಾಮೆಂಟ್‌ಗಳು:
Hello Rajesh,
Thanks for this lovely BLOG. Your writings are simple and clearly narrated. Also you are incredibly lucky to have the chance and the will to travel to all these wonderful places.
Keep it up sir.
Thanks
SP
ರಾಜೇಶ್ ನಾಯ್ಕರೇ,
ನಿಮ್ಮ ಲೇಖನಗಳು ಅತ್ಯಂತ ಸರಳವಾಗಿಯೂ,ಮಾಹಿತಿಪೂರ್ಣವಾಗಿಯೂ ಇರುತ್ತವೆ. ನಿಮ್ಮ ತಿರುಗಾಟದ ಹುಚ್ಚಿಗೆ ಜಯವಾಗಲಿ. ಹೀಗೇ ಇನ್ನೂ ಬರೆಯುತ್ತಾ ಇರಿ. ನಾವು ನಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಲು ರೆಡಿಯಾಗಿದ್ದೇವೆ. ಕರ್ನಾಟಕದ ಮೂಲೆ ಮೂಲೆಯನ್ನೂ ಸುತ್ತಿ, ನಮಗೆಲ್ಲಾ ಅದ್ಭುತ ಜಾಗಗಳ ಪರಿಚಯ ಮಾಡಿಕೊಡುತ್ತಿರುವ ನಿಮ್ಮ ಪ್ರಯತ್ನ ಅತ್ಯಂತ ಪ್ರಶಂಸಾರ್ಹವಾದದ್ದು.
ಧನ್ಯವಾದಗಳು
ಮಧು
ವಾವ್! ಅದ್ಭುತವಾಗಿ ಬರೆದಿದ್ದೀರಿ ರಾಜೇಶ್. ಈ ದೇಗುಲ ನಾನು ನೋಡಿದ್ದೇನೆ. ಇದು ಇಕ್ಕೇರಿ ಬಳಿ ಇದೆಯಲ್ಲಾ, ಅದೇ ದೇವಾಲಯವೇ?
ರಾಜೇಶ ನಾಯ್ಕರೇ, ನಿಮ್ಮ ಮೊದಲಿನ ಯಾವುದೋ ಒಂದು ಲೇಖನಕ್ಕೆ ಯಾರೋ ಒಬ್ಬರು ನಿಮಗೆ ಇವೆಲ್ಲಾ ಲೇಖನ ಸೇರಿಸಿ ಒಂದು ಪುಸ್ತಕವಾಗಿ ಪ್ರಕಟಿಸಿರಿ ಅಂತ ಬರದಿದ್ರು. ನನಗ ಅನಸ್ತದ ಅವರು ಹೇಳಿದ್ದು ಸರಿಯಂತ. ಎಂತೆಂಥ ಊರಿನಾಗ ಹೋಗಿರಿ ಏನ ಮಸ್ತ ಗುಡಿ ಜಲಪಾತ ಎಲ್ಲಾ ನೋಡಿ ಬಂದೀರಿ ಖರೆನ ಅವನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡ್ರಿ. ನೀವೀಗ ಹೆಂಗ ಹಂಗ ಅವನ್ನೀಲ್ಲ ಸೇರಿಸಿ ಒಂದಿಷ್ಟು ಫೋಟೊ ಹಾಕಿ ಪುಸ್ತಕ ಮಾಡಬಹುದು ಅನ್ನೋದು ನನ್ನ ಅನಿಸಿಕೆ.
ಇನ್ನ ಈ ಬೆಳ್ಳಿಗಾವಿ ಅಂತ ಹೆಸರು ನೋಡಿದಕೂಡ್ಲೆ ಬೆಳಗಾವಿ ಬಗ್ಗೆ ಏನೊ ಬರೆದಾರ ಅಂತಾ ಮಾಡಿದ್ದೆ. ನೀವು ನೋಡಿದ ದೇವಸ್ಥಾನ, ಅದರ ಚೆಲುವು ಅದರ ಬಗ್ಗೆ ನಿಮ್ಮ ವಿವರಣೆ ಎಲ್ಲಾ ಸೊಗಸಾಗಿವೆ. ಇಷ್ಟು ವಿವರವಾಗಿ ನಮ್ಮ ದೇಶದ ಅರ್ಕಿಯಲಜಿಯವರು ಕೂಡ ಹೇಳ್ತಾರಿಲ್ಲೊ ಗೊತ್ತಿಲ್ಲ. ಇನ್ನು ಇಂತಹ ಅಪರೂಪದ ಸ್ಥಳಗಳ ಬಗ್ಗೆ ಪರಿಚಯಿಸುತ್ತಿರಿ. ಮತ್ತ ಪುಸ್ತಕದ ಬಗ್ಗೆ ಇನ್ನೊಮ್ಮೆ ವಿಚಾರ ಮಾಡ್ರಿ, ನೀವು ಒಪ್ಪಿದ್ರ ನನ್ನಿಂದೇನಾದ್ರೂ ಸಹಾಯ ಬೇಕದ್ರ ತಿಳಿಸ್ರಿ. ಧನ್ಯವಾದಗಳೊಂದಿಗೆ-ಸಂಜೀವ ಕುಲಕರ್ಣಿ
ಪ್ರಿಯ ರಾಜೇಶ್,
ನಮಸ್ಕಾರ. ಹೇಗಿದ್ದೀರಿ?
ನಿಮಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
ಈ ದೇವಾಲಯ ನಾನು ನೋಡಿಲ್ಲ. ನೋಡಲು ಹೋದಾಗ ದೇವಾಲಯದ ಬಗ್ಗೆ ತಿಳಿದುಕೊಳ್ಳಲು ಒಬ್ಬ ಗೈಡಿನ ಮೊರೆ ಹೋಗುವುದರ ಬದಲು ನಿಮ್ಮ ಲೇಖನವನ್ನೇ ಜೊತೆಗಿಟ್ಟುಕೊಂಡು ಹೋಗಬಹುದು! ಅಷ್ಟೊಂದು ಮಾಹಿತಿಯಿದೆ ಈ ಲೇಖನದಲ್ಲಿ!
ಸವಿಸ್ತಾರವಾದ ಸುಂದರ ಲೇಖನ!
ಎಸ್ ಪಿ ಯವರೆ,
ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ಬರ್ತಾ ಇರಿ ಇಲ್ಲಿಗೆ.
ಮಧು,
ಬರೆಯೋಣ. ತಿರುಗಾಟ ಜಾರಿಯಲ್ಲಿರುವವರೆಗೆ ಬರೆಯುವುದು ಜಾರಿಯಲ್ಲಿರುವುದು.
ಕಿರಣ್,
ಬಳ್ಳಿಗಾವಿ ಇಕ್ಕೇರಿಯಿಂದ ಸುಮಾರು ದೂರದಲ್ಲಿದೆ.
ಸಂಜೀವ್,
ಸಲಹೆಗೆ ಥ್ಯಾಂಕ್ಸ್. ಆದರೆ ಪುಸ್ತಕ ಬರೆಯುವ ಸಾಹಸ ಮಾಡುವುದು ಬೇಡವೆಂದೆನಿಸುತ್ತದೆ. ನಾನು ಬರೆಯುವುದು ನನಗೆ ಚೆನ್ನ. ಕನ್ನಡ ಭಾಷೆಯ ಮೇಲೆ ಹಿಡಿತ ನನಗಿಲ್ಲ ಎಂಬ ಅರಿವು ನನಗಿರುವಾಗ ಪುಸ್ತಕ ಬರೆಯಲು ಹೊರಡುವುದು ದುಸ್ಸಾಹಸ ಮಾಡಿದಂತಾಗುತ್ತದೆ. ಕೇವಲ ತಿರುಗಾಡಿದ್ದೇನೆ ಮತ್ತು ಬಹಳಷ್ಟು ಸ್ಥಳಗಳನ್ನು ನೋಡಿದ್ದೇನೆ ಎಂಬ ಮಾತ್ರಕ್ಕೆ ಪುಸ್ತಕ ಬರೆಯಲು ನಾನು ಅರ್ಹನಾಗುವುದಿಲ್ಲ. ಕನ್ನಡ ಭಾಷೆಯ ಮೇಲೆ ಒಳ್ಳೆಯ ಹಿಡಿತ ಇರಬೇಕಾಗುತ್ತದೆ. ಆ ಹಿಡಿತ ನನಗಿಲ್ಲ ಎಂಬುದು ನನಗೇ ಗೊತ್ತಿರುವಾಗ ಪುಸ್ತಕ ಬರೆಯುವ ಸಾಹಸ ಬೇಡ ಎಂಬುದು ನನ್ನ ಅಭಿಪ್ರಾಯ. ನಿಮ್ಮ ಪ್ರೀತಿಗೆ ಥ್ಯಾಂಕ್ಸ್.
ಶ್ರೀಕಾಂತ್,
ಆದರೂ ನಿಮಗೆ ಗೈಡ್ ಬೇಕು! ಎಲ್ಲ ಮಾಹಿತಿಗಳು ಇಲ್ಲಿಲ್ಲ.
ಕಾಮೆಂಟ್ ಪೋಸ್ಟ್ ಮಾಡಿ