ಸೋಮವಾರ, ಅಕ್ಟೋಬರ್ 09, 2006

ಮಲೆಘಟ್ಟ ಜಲಪಾತದೆಡೆ


ನಿನ್ನೆ ಆದಿತ್ಯವಾರ, ನಾನು ಮತ್ತು ಗೆಳೆಯ ಲಕ್ಷ್ಮೀನಾರಾಯಣ ಮುಂಜಾನೆ ೧೦.೩೦ಕ್ಕೆ ಜಲಪಾತದ ಬಳಿ ಬಂದೆವು. ಅಲ್ಲೇ ರಸ್ತೆ ಬದಿಯಲ್ಲಿ ನನ್ನ ಯಮಾಹ ನಿಲ್ಲಿಸಿ, ಅರಣ್ಯ ಇಲಾಖೆ ಹಾಕಿರುವ ಬೇಲಿ ಹಾರಿ ವಾಹನ ಓಡಾಡಿದ ಕುರುಹು ಇದ್ದ ಮಣ್ಣು ರಸ್ತೆಯಲ್ಲಿ ನಡೆಯುತ್ತಾ ಸಾಗಿದೆವು. ಅಲ್ಲಲ್ಲಿ ಸಣ್ಣ ಸಣ್ಣ ಜಲಪಾತಗಳು. ಇವೆಲ್ಲಾ ಮಾನವ ನಿರ್ಮಿತ ಕೃತಕ ಜಲಪಾತಗಳು.


ಸಮೀಪದಲ್ಲೊಂದು ಆಣೆಕಟ್ಟು ನಿರ್ಮಿಸುವಾಗ ಇಲ್ಲಿಂದಲೇ ಕಲ್ಲುಗಳನ್ನು ಗುಡ್ಡ ಸಿಡಿಸಿ, ಒಡೆದು ಸಾಗಿಸಿದ್ದರಿಂದ ಉಂಟಾದ ಕೊರಕಲುಗಳಲ್ಲಿ ಈಗ ಹಳ್ಳದ ನೀರು ಹರಿದು ಅಲ್ಲಲ್ಲಿ ಈ ಕೃತಕ ಜಲಪಾತಗಳು ಉಂಟಾಗಿವೆ. ಆಗ ಕಲ್ಲುಗಳನ್ನು ಸಾಗಿಸಲು ಮಾಡಿದ ರಸ್ತೆಯ ಮೇಲೆಯೇ ನಾವು ನಡೆಯುತ್ತಾ ಇದ್ದೆವು. ಈಗ ಈ ರಸ್ತೆಯ ಮಧ್ಯದಲ್ಲೇ ಸಣ್ಣ ಗಿಡಗಳನ್ನು ನೆಟ್ಟಿರುವ ಅರಣ್ಯ ಇಲಾಖೆ, ದನಗಳಿಂದ ರಕ್ಷಿಸಲು ಬೇಲಿಯನ್ನು ಹಾಕಿದೆ.


ಕೇವಲ ೧೦ ನಿಮಿಷಗಳ ನಡಿಗೆ, ಜಲಪಾತದ ಎರಡನೇ ಹಂತದ ಬಳಿ ನಾವು ಬಂದಾಗಿತ್ತು. ಇದೂ ಕೃತಕ ಜಲಧಾರೆ. ರಸ್ತೆಯಿಂದ ಕಾಣದ ಈ ಹಂತ ಸುಮಾರು ೪೫ ಅಡಿ ಎತ್ತರವಿದ್ದು ಎರಡು ಕವಲುಗಳಾಗಿ ಧುಮುಕುತ್ತದೆ. ನೋಡಲು ಅಷ್ಟೇನು ಆಕರ್ಷಕವಾಗಿ ಕಾಣದ ಎರಡನೇ ಹಂತದ ಪಾರ್ಶ್ವದಿಂದಲೇ ಮೇಲೆ ಹತ್ತಬಹುದು.


ಕಲ್ಲಿನ ಚಪ್ಪಡಿಗಳನ್ನು ಹಿಡಿದು ಅನಾಯಾಸವಾಗಿ ಮೇಲೇರಬಹುದು. ಆದರೆ ಮಳೆ ಬೀಳುತ್ತಿದ್ದರಿಂದ ಮತ್ತು ನೀರಿನ ಹರಿವು ಹೆಚ್ಚಿದ್ದರಿಂದ ನಾನು ಮತ್ತೆ ಮುಂದಕ್ಕೆ ಹೋಗುವ ಸಾಹಸ ಮಾಡಲಿಲ್ಲ. ಲಕ್ಷ್ಮೀನಾರಾಯಣ ಮುಂದಕ್ಕೆ ಹೋಗುವ ಉತ್ಸಾಹದಲ್ಲಿದ್ದ. ಆದರೆ 'ರಿಸ್ಕ್' ತಗೊಳ್ಳಲು ನಾನು ತಯಾರಿರಲಿಲ್ಲ.


ಮೊದಲನೇ ಹಂತವನ್ನು ಇಲ್ಲಿಂದಲೇ ನೋಡಿ ತೃಪ್ತಿಪಟ್ಟೆ. ಸುಮಾರು ೨೫೦ ಅಡಿಗಳಷ್ಟು ಎತ್ತರವಿರುವ ಮೊದಲನೇ ಹಂತ ನೋಡಲು ಆಕರ್ಷಕವಾಗಿದ್ದು, ಕೊನೆಯ ಸುಮಾರು ೧೦೦ ಅಡಿಗಳಷ್ಟು ಎತ್ತರವನ್ನು ಗಿಡಮರಗಳು ಮರೆಮಾಡಿವೆ. ಮೊದಲನೇ ಹಂತದ ಮೇಲೇರಿ, ಹಳ್ಳಗುಂಟ ದಾರಿ ಮಾಡಿಕೊಂಡು ಸಾಗಿದರೆ ೧೫-೨೦ ನಿಮಿಷಗಳಲ್ಲಿ ಮುಖ್ಯ ಜಲಪಾತದ ಬುಡವನ್ನು ತಲುಪಬಹುದು. ಈ ಹಳ್ಳಕ್ಕೆ 'ವಾಂಟೆ ಹಳ್ಳ' ಎಂದು ಹೆಸರು.


ನೇರವಾಗಿ ಬೀಳುವ ಮುಖ್ಯ ಹಂತದ ಚೆಲುವು ನನಗೆ ಬಹಳ ಹಿಡಿಸಿತು. ಎರಡನೇ ಹಂತದ ಮುಂದೆ ಕುಳಿತರೆ ಅದೊಂದು ಅದ್ಭುತ ಅನುಭವ. ಎತ್ತರದ ಗುಡ್ಡ, ಅಗಲವಾಗಿದ್ದು ಆಳವಿಲ್ಲದ ಹಳ್ಳ, ಎರಡು ಪಾರ್ಶ್ವಗಳಲ್ಲಿ ಘಟ್ಟದ ಇಳಿಜಾರು ಮತ್ತು ಮುಂದೆ ೪೫ ಅಡಿಗಳಷ್ಟು ಎತ್ತರದಿಂದ ಧುಮುಕುತ್ತಿರುವ ಜಲಪಾತ. ಸ್ವಲ್ಪ ಕತ್ತೆತ್ತಿ ನೋಡಿದರೆ ಮೊದಲನೇ ಹಂತದ ತುದಿಭಾಗದ ದರ್ಶನ. ಸುಮಾರು ೩೦ ನಿಮಿಷ ಅಲ್ಲಿ ಕುಳಿತು, ನಿಸರ್ಗದ ಸೌಂದರ್ಯವನ್ನು ಮನಸಾರೆ ಸವಿದು ಹಿಂತಿರುಗಿದೆವು.

4 ಕಾಮೆಂಟ್‌ಗಳು:

VENU VINOD ಹೇಳಿದರು...

ರಾಜೇಶ್, ಈ ಜಲಪಾತಕ್ಕೆ ನಮ್ಮನ್ನ ಯಾವಾಗ ಕರೆದೊಯ್ಯುತ್ತೀರಿ?

ರಾಜೇಶ್ ನಾಯ್ಕ ಹೇಳಿದರು...

ವೇಣು, ನೀವು 'ಹೂಂ' ಅನ್ನಿ.... ನಾನು ರೆಡಿ.

Uday ಹೇಳಿದರು...

ಕಳೆದ ಮಾಸದಲ್ಲಿ ಜೋಗ ಜಲಪಾತಕ್ಕೆ ಹೋಗುವಾಗ ಇದನ್ನು ನೋಡಿದ್ದೆ ಆದರೆ ಹೆಸರು ಗೊತ್ತಿರಲಿಲ್ಲಾ. ತುಂಬಾ ಧನ್ಯವಾದಗಳು ಹೆಸರು ತಿಳಿಸಿದ್ದಕ್ಕೆ. :)

ರಾಜೇಶ್ ನಾಯ್ಕ ಹೇಳಿದರು...

ಉದಯ್,
ಧನ್ಯವಾದಗಳು. ಬರ್ತಾ ಇರಿ ಇಲ್ಲಿಗೆ.