ಶನಿವಾರ, ಅಕ್ಟೋಬರ್ 01, 2016

ಅಸ್ತಂಗತ


ಇಂದು ’ಅಲೆಮಾರಿಯ ಅನುಭವಗಳು’ ಆರಂಭಗೊಂಡು ಹತ್ತು ವರ್ಷಗಳಾದವು. 

ಈ ಬ್ಲಾಗಿನಿಂದ ನನ್ನ ಜೀವನದಲ್ಲಿ ಕೆಲವು ಧನಾತ್ಮಕ ಬೆಳವಣಿಗೆಗಳು ಆದವು. ’ಬರೆಯುವುದು’ ಅಂದರೆ ಹೇಗೆ ಎಂದೇ ಅರಿಯದ ನಾನು ಸಾಧಾರಣ ಮಟ್ಟಿಗೆ ಅದನ್ನು ಕಲಿತುಕೊಂಡೆ. ಹಲವಾರು ಸಮಾನ ಮನಸ್ಕರ ಪರಿಚಯವಾಯಿತು. ಪರಿಚಯ ಗೆಳೆತನವಾಗಿ ಬೆಳೆಯಿತು.

ನಿಮಗೆಲ್ಲರಿಗೆ ಗೊತ್ತಿರುವಂತೆ ನಾನು ಎಲ್ಲೂ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಮಾಹಿತಿ ಕೇಳಬಾರದು ಮತ್ತು ಮಾಹಿತಿ ನೀಡಬಾರದು ಇದು ನನ್ನ ನಿಲುವು. ಚಾರಣ ಮಾಡಿ ಗೊತ್ತಿದ್ದವರು ಸ್ಥಳಗಳನ್ನು ತಾವಾಗಿಯೇ ಹುಡುಕಿಕೊಳ್ಳಬೇಕು.

ಒಂದು ಗಮ್ಯ ಸ್ಥಾನವನ್ನು ಬಹಳ ಕಷ್ಟಪಟ್ಟು ಮತ್ತು ಅಲ್ಲಿ ಇಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡಿರುತ್ತೇವೆ. ಹಾಗಿರುವಾಗ ಆ ಮಾಹಿತಿಯನ್ನು ಅಷ್ಟು ಸುಲಭದಲ್ಲಿ ಯಾಕೆ ಎಲ್ಲೆಡೆ ಹಂಚಬೇಕು? ಇನ್ನೂ ಕೆಲವೊಮ್ಮೆ ದಾರಿ ತಪ್ಪಿ, ಗಮ್ಯ ಸ್ಥಳ ಸಿಗದೇ, ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿ, ನಂತರ ಇನ್ನೊಂದು ದಿನ ಮತ್ತೆ ತೆರಳಿ, ನಾವು ನೋಡಬೇಕಾದ ಸ್ಥಳವನ್ನು ತಲುಪುತ್ತೇವೆ. ಅಂತಹ ಚಾರಣಗಳಲ್ಲಿ ನಾವು ವ್ಯಯಿಸಿದ ಸಮಯ, ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವನ್ನೆಲ್ಲಾ ಸುಲಭದಲ್ಲಿ ಬೇರೆಯವರಿಗೆ ಹರಿವಾಣದಲ್ಲಿ ತೆಂಗಿನಕಾಯಿ ಇಟ್ಟು ದಾನ ಮಾಡಿದರೆ ನಮ್ಮ ಶ್ರಮ ಮತ್ತು ಸಮಯಕ್ಕೆ ನಾವೇ ಬೆಲೆ ನೀಡದಂತೆ.

ಚಾರಣ ಎನ್ನುವುದು ಆರಾಧನೆ ಇದ್ದ ಹಾಗೆ. ಪ್ರಕೃತಿಯ ಆರಾಧನೆ. ಅದಕ್ಕೂ ಭಾಗ್ಯ ಬೇಕು. ಇಲ್ಲಿ ಉದಾಸೀನ ಮಾಡಿದರೆ ಆ ಸಮಯ ಹೋದಂತೆ. ಅದು ಮತ್ತೆ ಬರದು. ಚಾರಣದಲ್ಲಿ ಮೌನಕ್ಕೆ ಪ್ರಾಶಸ್ತ್ಯ ದೊರಕಬೇಕು. ಆಗಲೇ ಚಾರಣದ ಸಂಪೂರ್ಣ ಚಿತ್ರಣ ಬಹಳ ವರ್ಷಗಳವರೆಗೆ ಅಚ್ಚಳಿಯದೇ ನಮ್ಮೊಡನೆ ಇರುತ್ತದೆ.

ಅದೆಷ್ಟೋ ಪರಿಸ್ಥಿತಿಗಳು ಹಾಗೂ ಸನ್ನಿವೇಶಗಳು ನಮ್ಮ ಪರವಾಗಿ ಇರಬೇಕು. ಮೊದಲನೆಯದಾಗಿ ಮನೆಯಲ್ಲಿ ಪೂರಕ ವಾತಾವರಣವಿರಬೇಕು ಮತ್ತು ಎರಡನೆಯದಾಗಿ ಚಾರಣ ಮಾಡುವಾಗ ಉತ್ತಮ ಸಂಗವಿರಬೇಕು. ಇವೆರಡು ನಮ್ಮ ಹತೋಟಿಯಲ್ಲಿರದ ವಿಷಯಗಳು. ಇವೆರಡನ್ನೂ ದೇವರು ನನಗೆ ಇದುವರೆಗೆ ಕರುಣಿಸಿದ್ದಾನೆ. 

ನಾನು ಚಾರಣದಲ್ಲಿ ಅನುಭವಿಸಿದ್ದು ಮತ್ತು ಪ್ರಯಾಣದ ಸಂದರ್ಭದಲ್ಲಿ ನೋಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸುವ ನನ್ನ ಪ್ರಯತ್ನವನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ಮತ್ತು ಗೆಳೆಯರಿಗೆ ನಾನು ಎಂದಿಗೂ ಋಣಿ.

10 ಕಾಮೆಂಟ್‌ಗಳು:

Lakshmipati ಹೇಳಿದರು...

ರಾಜೇಶ್.... ಈ ಬ್ಲಾಗ್ಗಾಗಿ ನಿಮಗೆ ಧನ್ಯವಾದಗಳು....

ಆದರೆ ನಿಮ್ಮ ಈ ಬಾರಿಯ ಬ್ಲಾಗ್ ವಿಷಯವನ್ನು ನೋಡಿದಾಗ ನನಗೊಂದು ಅನುಮಾನ ಬರುತ್ತಿದೆ..

"ಅಸ್ತಂಗತ" ವಿಷಯವನ್ನು ನೋಡಿದಾಗ ನೀವು ಈ ಬ್ಲಾಗನ್ನು ನಿಲ್ಲಿಸುತ್ತಿದ್ದೀರ ಅನಿಸುತ್ತಿದೆ.....

ನನ್ನ ಅನಿಸಿಕೆ ಸುಳ್ಳಾಗಲಿ ಎಂಬ ಆಶಯ....

ವಿ.ರಾ.ಹೆ. ಹೇಳಿದರು...

ಅಭಿನಂದನೆಗಳು. ಆದರೆ 'ಅಸ್ತಂಗತ' ಎಂಬ ತಲೆಬರಹ ಆತಂಕ ಮೂಡಿಸಿದೆ!

ನಿಮ್ಮ ಅಲೆಮಾರಿತನವನ್ನು ಮೆಚ್ಚಿಕೊಂಡೇ 'ಅಲೆಮಾರಿಯ ಅನುಭವಗಳು' ಬ್ಲಾಗನ್ನು ಎಂಟು ವರ್ಷಗಳಿಂದಲೂ ಓದಿಕೊಂಡು ಬಂದಿರುವವನು ನಾನು. ಸಿಟಿಯಲ್ಲಿ ಕೂತ ನಮಗೆ ನೀವು ಹೋದ ಜಾಗಗಳ ಜಾಡು ಹಿಡಿಯುವುದು ಕಷ್ಟವೇ ಸೈ.

ಬರೆಯುತ್ತಿರಿ ಪ್ಲೀಸ್...

Prashanth ಹೇಳಿದರು...

ಅಭಿನಂದನೆಗಳು ರಾಜೇಶ್ ಸರ್. ನಿಮ್ಮಿಂದ ಕಲಿತ್ತದ್ದು ಬಹಳಷ್ಟು, ಕಲಿಯುವುದು ಇನ್ನೂ ತುಂಬಾ ಇದೆ.

'ಅಸ್ತಂಗತ' - ಅದು ಬರೀ ಹತ್ತು ವರ್ಷದ ಬಗ್ಗೆ ಎಂದುಕೊಂಡಿದ್ದೇನೆ. ಹತ್ತು ಇಪ್ಪತ್ತಾಗಲಿ, ನಿಮ್ಮ ಅಲೆಮಾರಿತನ ಇನ್ನೂ ಹೀಗೇ ಮುಂದುವರಿಯಲಿ.

sunaath ಹೇಳಿದರು...

ನಿಮ್ಮ ಲೇಖನಗಳನ್ನು ಓದುತ್ತ ಹಾಗು ಸುಂದರವಾದ ಚಿತ್ರಗಳನ್ನು ನೋಡುತ್ತ ಆನಂದಪಟ್ಟಿದ್ದೇನೆ. ಇದು ಇನ್ನಿಷ್ಟು ಮುಂದುವರೆಯಲಿ. ಚಾರಣದ ಸ್ಥಳವಿಳಾಸವನ್ನು ಕೊಡದೆ ಇರುವ ನಿಮ್ಮ ಅಭಿಪ್ರಾಯ ಸರಿಯಾಗಿಯೇ ಇದೆ.

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,

ಅಸ್ತಂಗತ ಅಂತ ಓದಿ ತುಸು ಕಸಿವಿಸಿ, ಗಾಬರಿಯಾಯಿತು.
ಈ ಟೈಟಲ್ಲು ಚಿತ್ರದಲ್ಲಿರುವ ಮುಳುಗುಸೂರ್ಯನಿಗಾದರೆ ಸರಿ.

ನಿಮ್ಮ ಅಲೆಮಾರಿತನದ ಅನುಭವಗಳ ಹೊಳೆಯಲ್ಲಿ ನಾನು ಬದಿಯಲ್ಲಿ ಕಾಲಾಡಿಸುವ ಮೀನು. ನಿಮ್ಮ ಚಾರಣ, ಬರಹ, ಮತ್ತು ಚಿತ್ರಗಳ ಆರಾಧಕಿ ನಾನು.
ನೀವು ಬರೆದಿರುವ ವಿಷಯಗಳನ್ನೆಲ್ಲ ಒಪ್ಪುವೆ.
ಈಗ ಮುಂದಿನ ಪೋಸ್ಟಿಗೆ ಕಾಯುತ್ತಿರುವೆ.

ಪ್ರೀತಿಯಿಂದ,
ಸಿಂಧು

Srik ಹೇಳಿದರು...

ಅಸ್ತಂಗತ?!!

ಎರಡೂವರೆ ತಿಂಗಳಿಂದ ನೀವು ಈ ಬ್ಲಾಗ್ ನ್ನ ಮರೆತಿರುವುದನ್ನು ನೋಡಿದರೆ ಈ ತಲೆಬರಹ ನೋಡಿ ನಮಗಾದ ಆಘಾತ ನಿಜವೇನೋ ಎಂಬ ಆತಂಕ ಆಗುತ್ತಿದೆ.

ನಿಮ್ಮ ಆಪ್ಯವೆನ್ನಿಸುವ ಬರಹಗಳು, ಸುಂದರ ಚಿತ್ರಗಳು, ವಿಶೇಷ ಮಾಹಿತಿಗಳು ಎಲ್ಲವೂ ನಮ್ಮಂತಹ ಎಷ್ಟೋ ಜನರ ಕಣ್ಣು ತೆರೆಸಿರಲಿಕ್ಕುಂಕುಂಟು.

ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ.

ಪ್ರೀತಿಯಿಂದ,
ಶ್ರೀಕ್!

Ashok ಹೇಳಿದರು...

Charanadalli Maunakke Prashasthya.. Tumba istavada vakya.. Alemariya Alemaritana innu munduvariyali hagoo odugarigu adara savi sigutirali..

Jagadeesh Chandra ಹೇಳಿದರು...

ಶ್ರೀ ರಾಜೇಶ್ ಅವರೇ,
ಚಾರಣ ಹತ್ತಿರದಲ್ಲಿ ಇದ್ದರೆ ಅಂದುಕೊಂಡಾಗ ಇನ್ನೊಮ್ಮೆ ಹೋಗಬಹುದು. ಆದರೆ ದೂರದ ಸ್ಥಳದಲ್ಲಿ ಇದ್ದಾಗ ಇನ್ನೊಮ್ಮೆ ಹೋಗುವುದು ಬಹಳ ಕಷ್ಟ. ನಾನು ಕೆನಡಾಗೆ ಹೋದಾಗ ಮಡಿದ ಚಾರಣದ ಅನುಭವವನ್ನು ನನ್ನ "ಸುಂದರಬನ" ಎನ್ನುವ ಬ್ಲಾಗ್ನಲ್ಲಿ ಬರೆದ್ದಿದ್ದೇನೆ. ಒಮ್ಮೆ ಓದಿ ನೋಡಿ. ಇದರೊಂದಿಗೆ ನನ್ನ ಇತರ ಅನೇಕ ಬರೆಹಗಳೂ ಇವೆ.
jagadeesh Chandra

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ,
ಪ್ರತೀ ಬಾರಿಯೂ ಭಾರತಕ್ಕೆ ಬಂದಾಗ ತಪ್ಪದೆ ಕರೆ ಮಾಡಿ, ’ಅಲ್ಲಿ ಹೋಗಿ ಬಂದೆ...ಇಲ್ಲಿ ಹೋಗಿ ಬಂದೆ’ ಎಂದು ವರದಿ ಒಪ್ಪಿಸಿ, ತಪ್ಪಿಯೂ ’ಸ್ವಲ್ಪ ಮಾಹಿತಿ ಬೇಕಿತ್ತು’ ಎಂದು ಎಂದೂ ಕೇಳದೆ, ಪ್ರೀತಿಯಿಂದ ಸ್ವಲ್ಪ ಸಮಯ ಮಾತನಾಡುವ ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದ.

ವಿಕಾಸ್,
ಪ್ರೋತ್ಸಾಹದ ಮಾತುಗಳಿಗಾಗಿ ಧನ್ಯವಾದ. ನಿಮ್ಮ ಪ್ರೀತಿಗೆ ನಾನು ಋಣಿ. ಎಲ್ಲದಕ್ಕೂ ಕೊನೆ ಇರುತ್ತದಲ್ವೇ...? ಹಾಗೂ ಈ ಬ್ಲಾಗಿಗೂ. ಎಂಟು ವರ್ಷಗಳ ನಿರಂತರ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದ.

ಪ್ರಶಾಂತ್,
ದೇಹದಲ್ಲಿ ಶಕ್ತಿಯಿರುವವರೆಗೆ ಅಲೆಮಾರಿತನ ಮುಂದುವರಿಯುತ್ತದೆ. ಬ್ಲಾಗ್ ಮೂಲಕ ನನ್ನಿಂದ ಯಾವುದೇ ಮಾಹಿತಿಯನ್ನು ಅಪೇಕ್ಷಿಸದೆ, ಕೇವಲ ಗೆಳೆತನಕ್ಕಾಗಿ ಸಂಪರ್ಕ ಇಟ್ಟುಕೊಂಡಿರುವವರಲ್ಲಿ ನೇವೂ ಒಬ್ಬರು. ಪ್ರೀತಿ ಹಾಗೂ ಗೆಳೆತನಕ್ಕಾಗಿ ಧನ್ಯವಾದ.

ಸುನಾಥ್,
ನಿಮ್ಮ ಪ್ರೋತ್ಸಾಹಕ್ಕೆ ನಾನು ಎಂದಿಗೂ ಋಣಿ. ತಮ್ಮಂತಹ ಹಿರಿಯರನ್ನು ನಿಮ್ಮ ನಿವಾಸದಲ್ಲಿ ಭೇಟಿಯಾಗಿ ಕಳೆದ ಸಮಯ ಮರೆಯಲಾಗದ್ದು. ಪ್ರತೀ ಲೇಖನವನ್ನೂ ಮೆಚ್ಚಿ ಪ್ರೋತ್ಸಾಹಿಸಿರುವುದನ್ನು ಮರೆಯಲಾರೆ. ಧನ್ಯವಾದ.

ಸಿಂಧು,
ಬ್ಲಾಗ್‍ಲೋಕದಲ್ಲಿ ಅಪರಂಜಿಯಂತೆ ದೊರಕಿದ ಗೆಳತಿ ನೀವು. ಯಾವುದೇ ಮಾಹಿತಿಗಳಿಗಾಗಿ ಅಪೇಕ್ಷಿಸದೇ, ಕೇವಲ ಲೇಖನಗಳು ನೀಡುವ ಅನುಭವಗಳಿಗಾಗಿ ಈ ಬ್ಲಾಗನ್ನು ಇಷ್ಟಪಟ್ಟು, ನನ್ನೊಂದಿಗೆ ಗೆಳೆತನ ಬೆಳೆಸಿದವರು ನೀವು. ’ನಿಮ್ಮ ಅಲೆಮಾರಿತನದ ಅನುಭವಗಳ ಹೊಳೆಯಲ್ಲಿ ನಾನು ಬದಿಯಲ್ಲಿ ಕಾಲಾಡಿಸುವ ಮೀನು. ನಿಮ್ಮ ಚಾರಣ, ಬರಹ, ಮತ್ತು ಚಿತ್ರಗಳ ಆರಾಧಕಿ ನಾನು’. ಇದು ಬಹಳ ದೊಡ್ಡ ಮಾತು. ಬರಹ ಮತ್ತು ಸಾಹಿತ್ಯದಲ್ಲಿ ಪಳಗಿರುವ ನಿಮ್ಮಿಂದ ಈ ಮಾತು ನನಗೆ ಕಿರೀಟ ಸಮಾನ. ನಿಮ್ಮ ಅಪಾರ ಪ್ರೀತಿ ಹಾಗೂ ಕಾಳಜಿಗಾಗಿ ತುಂಬಾ ತುಂಬಾ ಧನ್ಯವಾದ.
ಮುಂದಿನ ಪೋಸ್ಟ್ ಸದ್ಯಕ್ಕಂತೂ ಬರದು. ಕ್ಷಮೆಯಿರಲಿ.

ಶ್ರೀಕಾಂತ್,
ನಿಮ್ಮೊಂದಿಗೆ ಮತ್ತು ಪ್ರಶಾಂತ್ ಜೊತೆಗೆ ಕಳೆದ ಮೂರ್ನಾಲ್ಕು ಗಂಟೆಗಳನ್ನು ಮರೆಯುವುದುಂಟೇ?. ಎಂದಿಗೂ ಇಲ್ಲ. ಅಂದು ನೀವಿಬ್ಬರೂ ತೋರಿದ ಪ್ರೀತಿ ಮತ್ತು ಆತ್ಮೀಯತೆ ಆ ಭೇಟಿಯನ್ನು ಅಜರಾಮರವನ್ನಾಗಿ ಮಾಡಿಬಿಟ್ಟಿದೆ!! ನಿಮ್ಮ ಪ್ರೋತ್ಸಾಹ ಮತ್ತು ಪ್ರೀತಿಯ ಮಾತುಗಳಿಗಾಗಿ ತುಂಬಾ ಧನ್ಯವಾದ.

ಅಶೋಕ,
ಧನ್ಯವಾದ.

Srik ಹೇಳಿದರು...

ರಾಜೇಶ್,

ನಿಮ್ಮ ಬ್ಲಾಗ್ ಅನ್ನು ನಾನು ಮೊದಲಸಲ ಓದಿದ್ದು ಮಡೆನೂರು ಬಗೆಗಿನ ಲೇಖನ ಓದಲು; ಮಾಹಿತಿ ಬೇಕಾಗಿತ್ತು ಅದಕ್ಕೆ.

ಆದರೆ ಅದಾದ ನಂತರ ಈ ಅನುಭವಗಳ ಪುಟವನ್ನು ಮಾಹಿತಿಗಾಗಿ ಅಲ್ಲದೇ ನಿಸರ್ಗದ ಕುರಿತ ನಿಮ್ಮ ಪ್ರೀತಿ ಹಾಗು ಕಾಳಜಿಯನ್ನು ನನ್ನೊಳಗೂ ಇಳಿಸಲು, ಕಲಿಯಲು ಓದುತ್ತಿರುತ್ತೇನೆ.

ನಿಮ್ಮ ಪ್ರೀತಿಯ ಮಾತುಗಳಿಗೆ ನಾನು ಚಿರಋಣಿ. ಪ್ರಶಾಂತನೊಟ್ಟಿಗೆ ನಿಮ್ಮೊಂದಿಗೆ ಕಳೆದ ಆ ಸಂಜೆ ನನ್ನ ಜೀವನದ ಒಂದು ಆಪ್ಯಾಯ ಘಳಿಗೆ. ನಿಮ್ಮೊಂದಿಗೆ ಚಾರಣಿಸುವ ನನ್ನ ಹಾಗು ಪ್ರಶಾಂತನ ಆ ಕನಸು ಬೇಗ ನೆರವೇರಲಿ ಎಂದು ಆಶಿಸುತ್ತೇನೆ.

ಇಂತಿ,
ಶ್ರೀಕ್!