ಭಾನುವಾರ, ನವೆಂಬರ್ 24, 2013

ಊಸರವಳ್ಳಿ...


ಮಾನ್ಸೂನ್ ವಾಕ್‍ನ ಒಂದು ತಿಂಗಳ ಬಳಿಕ ಈ ಮಳೆಗಾಲದ ಅತಿಥಿಯ ಅತಿಥಿಯಾಗಲು ಹೊರಟೆ. ಈ ಬಾರಿ ರಾಗಣ್ಣ ಮಾತ್ರ ನನಗೆ ಜೊತೆಗಾರರು. ಅಂದು ಮಾದಣ್ಣನಿಗೆ ಅದೇನೋ ಕೆಲಸ. ತನ್ನನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ಅವರು ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿದರೂ ಅದಕ್ಕೆ ಸೊಪ್ಪು ಹಾಕದೆ ನಾವಿಬ್ಬರು ಹೊರಟೇಬಿಟ್ಟೆವು. ಹಳ್ಳಿಯ ಸಜ್ಜನರೊಬ್ಬರಿಗೆ ಮೊದಲೇ ಫೋನ್ ಮೂಲಕ ತಿಳಿಸಿದ್ದರಿಂದ ನಮಗೆ ಮಾರ್ಗದರ್ಶಿಗಳಾಗಿ ಇಬ್ಬರು ರೆಡಿಯಾಗಿದ್ದರು.


ಮಳೆಯ ಆರ್ಭಟ ಕಡಿಮೆಯಾಗಿತ್ತು. ಮೋಡ ಕವಿದ ವಾತಾವರಣವಿತ್ತು. ತನ್ನ ಇರುವಿಕೆಯನ್ನು ಸೂರ್ಯ ನೆನಪಿಸುವಂತೆ ಆಗಾಗ ಬಿಸಿಲು ಬರುತ್ತಿತ್ತು. ಈ ನಡುವೆ ಆಗಾಗ ಮೂರ್ನಾಲ್ಕು ನಿಮಿಷಗಳ ಕಾಲ ತುಂತುರು ಮಳೆ ಬೀಳುತ್ತಿತ್ತು. ಈ ಮಳೆಯಂತೂ ಸುಖಾಸುಮ್ಮನೆ ನಮ್ಮನ್ನು ಒದ್ದೆಮಾಡಲು ಪ್ರೋಕ್ಷಣೆಗೈದಂತೆ ಬಂದು ಹೋಗುತ್ತಿತ್ತು. ಅಂದು ಚಾರಣವಿಡೀ ಇದೇ ರೀತಿಯ ವಾತಾವರಣ. ಬಿಸಿಲು, ಮಳೆ, ಮೋಡಗಳು ಸರದಿ ರೀತಿಯಲ್ಲಿ ಬಂದು ನಮಗೆ ’ಹ್ವಾಯ್’ ಹೇಳಿ ಹೋಗುತ್ತಿದ್ದವು.


ಮೋಡ ಮತ್ತು ಮಳೆ ಇದ್ದಾಗ ಹಳ್ಳಿ ಹೇಗೆ ಕಾಣುತ್ತದೆ ಎಂದು ಕಳೆದ ಬಾರಿ ನಾವು ನೋಡಿಯಾಗಿತ್ತು. ಈ ಬಾರಿ ಹಳ್ಳಿಯ ಲುಕ್ಕೇ ಬೇರೆ. ಮೋಡ, ಮಳೆಗಳ ನಡುವೆ ಬಿಸಿಲೂ ಬಂದು ಅಲ್ಲಿ ದೃಶ್ಯ ವೈಭವವೇ ನಮಗಾಗಿ ಕಾದಿತ್ತು. ನಮ್ಮಿಬ್ಬರ ಕ್ಯಾಮರಾಗಳು ಚಕಚಕನೆ ಕಾರ್ಯಾರಂಭಿಸಿದವು.


ತಿಂಗಳ ಹಿಂದೆ ಬಂದಾಗ ಆಗಷ್ಟೇ ನಾಟಿ ಮಾಡಿದ ಸ್ಥಿತಿಯಲ್ಲಿದ್ದ ಭತ್ತದ ಸಸಿಗಳು, ಈಗ ಸ್ವಲ್ಪ ಎತ್ತರಕ್ಕೆ ಬೆಳೆದು ನಿಂತು ಗದ್ದೆಗಳಿಗೆ ಹಚ್ಚ ಹಸಿರು ರಂಗನ್ನು ಬಳಿದಿದ್ದವು. ಅಂದು ಸಂಪೂರ್ಣ ನಸುಗಪ್ಪು ಬಣ್ಣ ಬಳಿದಂತೆ ತೋರುತ್ತಿದ್ದ ಅಂಬರ, ಇಂದು ನಸುಗಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಿಗೆ ತನ್ನ ಮೈಯುದ್ದಕ್ಕೂ ಸಮಾನ ರೀತಿಯಲ್ಲಿ ಸ್ಥಾನಮಾನ ನೀಡಿತ್ತು. ಹಳ್ಳಿ ತನ್ನ ಮಂಜಿನ ಪರದೆಯನ್ನು ಕಳಚಿಹಾಕಿತ್ತು. ಆಗಸದೆತ್ತರದಲ್ಲಿ ಅಟ್ಟಹಾಸಗೈದು ಮಳೆ ಸುರಿಸುತ್ತಿದ್ದ ಕರಿಮೋಡಗಳನ್ನು, ಧರೆಗಿಳಿದಂತೆ ತೋರುತ್ತಿದ್ದ ಬಿಳಿಮೋಡಗಳು ಸ್ಥಾನಪಲ್ಲಟಗೊಳಿಸಿದ್ದವು. ಹಳ್ಳಿಯನ್ನು ಸುತ್ತುವರಿದಿರುವ ಬೆಟ್ಟಗುಡ್ಡಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದವು.

 
ಹಿಂದಿನ ದಿನದವರೆಗೂ ಬೀಳುತ್ತಿದ್ದ ಮಳೆ, ನಮ್ಮ ಅದೃಷ್ಟಕ್ಕೆ ಅಂದೇ ಕಡಿಮೆಯಾಗಿತ್ತು. ಎಲ್ಲಾ ರೀತಿಯಲ್ಲಿ ವಾತಾವರಣ ಚಾರಣಯೋಗ್ಯವಾಗಿತ್ತು. ಹಳ್ಳಿಯೊಳಗೆ ಸುಮಾರು ದೂರ ನಡೆದ ಬಳಿಕ ಜಲಧಾರೆ ಗೋಚರಿಸಿತು. ನೀರಿನ ಮಟ್ಟ ಕಡಿಮೆಯಾಗಿರುವುದನ್ನು ಅಷ್ಟು ದೂರದಿಂದಲೇ ಗಮನಿಸಬಹುದಾಗಿತ್ತು. ಇನ್ನು ಮಾದಣ್ಣನ ಪ್ರತಿಭಟನೆಗೆ ತಲೆಬಾಗಿ, ಎರಡು ವಾರಗಳ ಬಳಿಕ ಬರುವ ನಿರ್ಧಾರ ಮಾಡಿದ್ದರೆ ಅಲ್ಲಿ ಜಲವೇ ಇರದ ಸಾಧ್ಯತೆಯಿತ್ತು!


ಮನೆಯೊಂದರ ಹಿಂದಿರುವ ಎರಡು ಗದ್ದೆಗಳನ್ನು ದಾಟಿದ ಬಳಿಕ ಕಾಡು ನಮ್ಮನ್ನು ಬರಮಾಡಿತು. ಹದವಾದ ಏರುಹಾದಿಯಲ್ಲಿ ಸುಮಾರು ಒಂದು ತಾಸು ನಡೆದೆವು. ಕಾಡಿನೊಳಗಿನ ಕಾಲುದಾರಿ ಹಲವೆಡೆ ಮಾಯವಾಗಿತ್ತು. ಕಳೆದೆರಡು ವರ್ಷಗಳಿಂದ ಕಾಡು ಉತ್ಪತ್ತಿ ಸಂಗ್ರಹಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಈಗ ಕೇವಲ ಒಂದಿಬ್ಬರು ಮಾತ್ರ ಉಳಿದಿದ್ದಾರೆ ಎಂದು ತಿಳಿದುಬಂತು. ಹಾಗಾಗಿ ಕಾಡಿನೊಳಗೆ ಹೋಗುವವರೂ ಕಡಿಮೆಯಾಗಿದ್ದು, ಕಾಲುದಾರಿಯನ್ನು ಕ್ರಮೇಣ ಕಾಡು ಆವರಿಸಿಕೊಳ್ಳುತ್ತಿದೆ. ಈ ಕಾಡುತ್ಪತ್ತಿ ಸಂಗ್ರಹಿಸುವ ಕೆಲಸದಲ್ಲಿ ಶ್ರಮ ಹೆಚ್ಚು ಆದಾಯ ಕಡಿಮೆ ಎಂದು ಹಳ್ಳಿಗರ ಅಭಿಪ್ರಾಯ. ದಿನಗೂಲಿಯೇ ೪೦೦ ರೂಪಾಯಿಗಳಷ್ಟು ಸಿಗುವಾಗ ಮತ್ತು ರವಿವಾರಗಳಂದು ಸ್ವ ಸಹಾಯ ಸಂಘಗಳ ಚಟುವಟಿಕೆಗಳಲ್ಲಿ ಬ್ಯುಸಿ ಇರುವಾಗ ಎಲ್ಲಿಯ ಕಾಡು, ಎಲ್ಲಿಯ ಕಾಡುತ್ಪತ್ತಿ? ಏನೇ ಇರಲಿ, ಈ ರೀತಿಯ ಬದಲಾವಣೆ ಕಾಡಿಗೆ ಒಳ್ಳೆಯದೇ ತಾನೆ ಎಂದುಕೊಂಡು ನಾವು ಹರ್ಷಗೊಂಡೆವು.


ಸರಿಸುಮಾರು ಒಂದು ತಾಸಿನ ಬಳಿಕ ನಮ್ಮ ಮಾರ್ಗದರ್ಶಿ, ’ಇನ್ನು ನೇರ ಹತ್ಬೇಕು, ಸ್ವಲ್ಪ ಕಷ್ಟ ಆಗ್ಬಹುದು’ ಎಂದಾಗ, ಮುಂದೆ ನೋಡಿದರೆ ದಾರಿಯೇ ಇಲ್ಲ! ಮಾರ್ಗದರ್ಶಿಗಳಿಬ್ಬರು ದಾರಿಗಡ್ಡವಾಗಿ ಬೆಳೆದಿದ್ದ ಕುರುಚಲು ಗಿಡಗಳನ್ನು ಕಚಕಚನೆ ಕೊಯ್ಯುತ್ತ ದಾರಿಮಾಡಿಕೊಂಡು ಮುನ್ನಡೆದರು. ಹೆಚ್ಚಿನೆಡೆ ಆಧಾರಕ್ಕಾಗಿ ಹಿಡಿಯಲು ಈ ಗಿಡಗಳೇ ಗತಿ. ಇಂತಹ ನಾಲ್ಕಾರು ಗಿಡಗಳನ್ನು ಒಂದು ಬಾರಿ ಹಿಡಿದೇ ಹೆಜ್ಜೆಯಿಡಬೇಕು. ಒಂದನ್ನೇ ಹಿಡಿದರೆ ಅದು ಕಿತ್ತುಬಂದು ನಾವು ಬಿದ್ದುಬಿಡುವುದು ನಿಶ್ಚಿತವಾಗಿತ್ತು. ಸತತ ಮಳೆಯಿಂದಾಗಿ ಒದ್ದೆಗೊಂಡಿದ್ದ ಮಣ್ಣಿನಲ್ಲಿ ಕಾಲೂರಲು ಕೂಡಾ ಆಧಾರದ ಅವಶ್ಯಕತೆಯಿತ್ತು. ಸುಮಾರಾಗಿ ದೊಡ್ಡದಿರುವ ಕಲ್ಲು-ಬಂಡೆಗಳಿಗೆ ಕಾಲನ್ನು ಆಧಾರವಾಗಿಟ್ಟು ಮೇಲೇರೋಣವೆಂದರೆ ಅವು ಎಲ್ಲವೂ ಸಡಿಲ ಮಣ್ಣಿನ ಕಾರಣ ಅಲುಗಾಡುತ್ತಿದ್ದವು.


ನಾಲ್ಕೈದು ಕಡೆ ಬಹಳ ಕಷ್ಟವಾಯಿತು. ಅತ್ತ ಇತ್ತ ಏನಾದರೂ ಆಧಾರಕ್ಕೆ ಹಿಡಿದುಕೊಳ್ಳೋಣವೆಂದರೆ ಅಲ್ಲಿ ಮುಳ್ಳಿನ ಗಿಡಗಳದ್ದೇ ಸಾಮ್ರಾಜ್ಯ. ಕಾಲೂರಲು ಆಧಾರವಾಗಿ ಸಣ್ಣಪುಟ್ಟ ಕಲ್ಲುಗಳೂ ಇರಲಿಲ್ಲ. ಒಂದು ಕಾಲು ಎತ್ತಿದರೆ ಇನ್ನೊಂದು ಕಾಲು ಜಾರುತ್ತಿತ್ತು. ಒಂದೆರಡು ಕಡೆ ಕಾಲು ಜಾರಿ, ನಾಲ್ಕಾರು ಅಡಿ ಕೆಳಗೆವರೆಗೂ ಜಾರಿಕೊಂಡೇ ಬರಬೇಕಾಯಿತು. ಆಯತಪ್ಪಿದರೆ ನಮ್ಮ ಎಡಭಾಗದಲ್ಲಿ ಕಣಿವೆಯ ಆಳಕ್ಕೆ ಬೀಳುತ್ತಿದ್ದ ಹಳ್ಳಕ್ಕೆ ನಾವು ಬೀಳುವ ಅಪಾಯವಿತ್ತು. ಹೀಗಿರುವಾಗ ಬೇರೆ ದಾರಿ ಇಲ್ಲದೆ ಮುಳ್ಳಿನ ಗಿಡದಿಂದ ಕೈ ಚುಚ್ಚಿಸಿಕೊಂಡೇ ಮುನ್ನಡೆಯಬೇಕಾಯಿತು. ಇದು ಬಹಳ ಸವಾಲಿನ ಏರುದಾರಿಯಾಗಿತ್ತು. ಚಾರಣಿಗನೊಬ್ಬನಿಗೆ ಈ ೪೫ ನಿಮಿಷಗಳ ಏರುಹಾದಿಯಲ್ಲಿ ಸಹಾಯಕವಾಗಿ ಏನೂ ಇರಲಿಲ್ಲ. ಎಲ್ಲವೂ ಸವಾಲಾಗಿಯೇ ಇತ್ತು. ಆದರೆ ಆ ರೋಚಕ ಅನುಭವ ಮಾತ್ರ ಮರೆಯಲಾಗದಂತದ್ದು.

 

ಚಾರಣ ಶುರುಮಾಡಿದ ಸುಮಾರು ೨ ತಾಸಿನ ಬಳಿಕ ನಮ್ಮ ಮಾರ್ಗದರ್ಶಿಗಳು ಸರಿಯಾಗಿ ಜಲಧಾರೆಯ ಪಾರ್ಶ್ವಕ್ಕೆ ನಮ್ಮನ್ನು ಮುಟ್ಟಿಸಿದರು. ಅದೇನು ಸೌಂದರ್ಯ, ಅದೇನು ಬಿನ್ನಾಣ. ಗಾಳಿಯ ರಭಸ ಮತ್ತು ಬೀಸುವ ದಿಕ್ಕಿಗನುಗುಣವಾಗಿ ತನ್ನ ರೂಪವನ್ನು ಬದಲಿಸುವ ವಯ್ಯಾರಗಿತ್ತಿ. ಮೋಡ, ಮಳೆ, ಬಿಸಿಲಿಗನುಗುಣವಾಗಿ ಬಣ್ಣ ಬದಲಿಸುವ ಊಸರವಳ್ಳಿ. ಕ್ಲಿಕ್ಕಿಸಿದ ಅಷ್ಟೂ ಚಿತ್ರಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ತನ್ನನ್ನು ತಾನು ಪ್ರದರ್ಶಿಸಿದ ರೂಪದರ್ಶಿ. ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಓಲಾಡುತ್ತ, ಮತ್ತೊಮ್ಮೆ ಮೈಯುಬ್ಬಿಸಿಕೊಂಡು, ಮಗದೊಮ್ಮೆ ಕಲ್ಲಿನ ಮೇಲ್ಮೈಗಂಟಿಕೊಂಡೇ, ಆಗಾಗ ಅಡ್ಡಾದಿಡ್ಡಿಯಾಗಿ, ಹೀಗೆ ಹಲವು ರೂಪಗಳಲ್ಲಿ ಧುಮುಕಿ ನಮಗೆ ಚಾರಣಾನಂದ ನೀಡಿದ ಈ ಜಲಕನ್ಯೆಗೆ ಅದೆಷ್ಟು ಕೃತಜ್ಞತೆ ಹೇಳಿದರೂ ಕಡಿಮೆ.


ಆಗಾಗ ಮೋಡಗಳ ಮರೆಯಿಂದ ಹೊರಬರುತ್ತಿದ್ದ ಸೂರ್ಯ ತನ್ನ ಪ್ರಖರ ಕಿರಣಗಳನ್ನು ಜಲಧಾರೆಯ ಮೇಲೆ ಹರಿಬಿಡುತ್ತಿರುವಾಗ ’ಲೈಟ್ಸ್ ಆನ್’ ಆದ ಅನುಭವವಾಗುತ್ತಿತ್ತು. ಸೂರ್ಯನ ಕಿರಣಗಳಲ್ಲಿ ಮೀಯುತ್ತಿರುವ ಜಲಧಾರೆ ಇನ್ನಷ್ಟು ಪ್ರಜ್ವಲವಾಗಿ ಕಾಣುತ್ತಿತ್ತು. ೧೩೦ ಅಡಿ ಎತ್ತರದ ವಜ್ರವೇ ಧುಮುಕುತ್ತಿದೆ ಎಂಬ ಭಾವನೆ ಬರುವಷ್ಟು ಹೊಳಪನ್ನು ಜಲಧಾರೆ ಹೊರಸೂಸುತ್ತಿತ್ತು. ಕ್ಷಣಾರ್ಧದಲ್ಲಿ ರವಿ ಮಾಯವಾಗಿ ಮತ್ತೆ ಮೋಡಗಳು ಬಂದು ’ಲೈಟ್ಸ್ ಆಫ್’. ಈ ವಿಶಿಷ್ಟ ಜಲಧಾರೆಯ ಅತಿಥಿಯಾಗಿ ೪೫ ನಿಮಿಷಗಳಲ್ಲಿ ವರ್ಣಿಸಲಾಗದಷ್ಟು ಸೌಂದರ್ಯದ ಹೊಳಹುಗಳನ್ನು ಕಣ್ಣಾರೆ ಕಂಡು ಬಂದ ಭಾಗ್ಯ ನಮ್ಮದು.


ದೂರದಲ್ಲಿ ಕಾರ್ಮೋಡದ ದೊಡ್ಡ ಗುಚ್ಛವೊಂದು ಹಳ್ಳಿಯೆಡೆ ತೇಲಿಬರುವುದನ್ನು ಗಮನಿಸುತ್ತಿದ್ದ ನಮ್ಮ ಮಾರ್ಗದರ್ಶಿಗಳು - ಮಳೆ ಬರುವ ಸಾಧ್ಯತೆಯಿದ್ದು, ಕಡಿದಾದ ಇಳಿಜಾರನ್ನು ಮಳೆ ಬರುವ ಮೊದಲೇ ಇಳಿದುಬಿಟ್ಟರೆ ಲೇಸು - ಎಂದು ಎಚ್ಚರಿಸಿದಾಗಲೇ ನಾವಿಬ್ಬರು ಆ ಸ್ವಪ್ನಲೋಕದಿಂದ ಹೊರಬಂದದ್ದು. ಅಲ್ಲಿ ಕಳೆದ ೪೫ ನಿಮಿಷಗಳು ಒಂದು ಅದ್ಭುತ ಲೋಕಕ್ಕೆ ತೆರಳಿ ತೇಲಾಡಿ ಬಂದ ಅನುಭವ.

 

ಕೆಳಗಿಳಿಯಲು ಆರಂಭಿಸಿದ ಕೂಡಲೇ ಬಿರುಸಾಗಿ ಮಳೆ ಹೊಯ್ಯಲು ಆರಂಭಿಸಿತು. ಎರಡೇ ನಿಮಿಷದಲ್ಲಿ ಮಳೆ ಮಾಯ. ಮಳೆ ಬೀಳುತ್ತಾ ಇದ್ದಿದ್ದರೆ ಕೆಳಗಿಳಿಯುವುದು ಬಹಳ ಕಷ್ಟವಾಗುತ್ತಿತ್ತು. ಆಶ್ಚರ್ಯದ ಮಾತೆಂದರೆ ಮೇಲೇರಿದಕ್ಕಿಂತ ಸಲೀಸಾಗಿ ಕೆಳಗಿಳಿದು ಬಂದೆವು. ಹಳ್ಳಿಯನ್ನು ತಲುಪಿದ ಕೂಡಲೇ ನಮ್ಮ ಮಾರ್ಗದರ್ಶಿಗಳಿಗೆ ಧನ್ಯವಾದ ಹೇಳಿ, ಅಲ್ಲೊಂದೆಡೆ ಕುಳಿತು ಊಟ ಮಾಡಿದೆವು. ಸಮಯ ಅದಾಗಲೇ ೩ ದಾಟಿತ್ತು. ಅಲ್ಲಿ ಸುಮಾರು ಒಂದು ತಾಸು ಚಾರಣವನ್ನು ಮೆಲುಕು ಹಾಕುತ್ತ, ಹರಟುತ್ತ ಕುಳಿತೆವು. ನಂತರ ನಿಧಾನವಾಗಿ ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು.

  

ಮುಂಗೈ ಮತ್ತು ಬೆರಳುಗಳೊಳಗೆ ಸೇರಿಕೊಂಡಿದ್ದ ಮುಳ್ಳಿನ ೩ ಚೂರುಗಳು ತಮ್ಮ ಇರುವಿಕೆಯನ್ನು ಸಾರುತ್ತ ನೋವನ್ನುಂಟುಮಾಡುತ್ತಿದ್ದವು. ಅವುಗಳನ್ನು ಹೊರತೆಗೆಯುವ ಕೆಲಸ ಡಾ.ಲೀನಾ ಅವರದ್ದಾಗಿತ್ತು. ಅವುಗಳನ್ನು ತೆಗೆಯಬೇಕಾದರೆ ಬಹಳ ನೋವುಂಟಾಯಿತು. ನಾನು ಹಲ್ಲುಗಳನ್ನು ಅವುಡುಗಚ್ಚಿ ಕುಳಿತ ಪರಿ ನೋಡಿ, "ಸುಮ್ನೆ ಯಾಕೆ ಕಾಡು, ಫಾಲ್ಸು.... ಯಾಕೆ ಜೀವಕ್ಕೆ ಕಷ್ಟ ಮಾಡ್ಕೊಳ್ತೀರಿ... " ಎಂದು ಗೊಣಗುತ್ತ ಮುಳ್ಳಿನ ಚೂರುಗಳನ್ನು ತೆಗೆದಳೆನ್ನಿ. ಚಾರಣದ ಸುಖದ ಮುಂದೆ ಈ ಮುಳ್ಳಿನ ನೋವು ಯಾವ ಲೆಕ್ಕ? ಆಕೆ ಹೇಳುವುದನ್ನು ನಿಲ್ಲಿಸುವುದಿಲ್ಲ. ನಾನು ಚಾರಣವನ್ನು ನಿಲ್ಲಿಸುವುದಿಲ್ಲ, ಸದ್ಯದ ಮಟ್ಟಿಗೆ.

7 ಕಾಮೆಂಟ್‌ಗಳು:

Aravind GJ ಹೇಳಿದರು...

ವಾವ್!! ಎಂಥ ಸೊಗಸಾದ ಜಲಪಾತ!!

Lakshmipati ಹೇಳಿದರು...

ಮತ್ತಸ್ಟು ಮೊಗೆದಸ್ಟು ...... ಮತ್ತೊಂದು ಜಲದಾರೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮೀಪತಿ

Srik ಹೇಳಿದರು...

Ah! Fabulous account of an extraordinary falls.

Fantastic!

sunaath ಹೇಳಿದರು...

ಜಲಪಾತದ ಹಾಗು ನಿಸರ್ಗದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿರುವಿರಿ. ಧನ್ಯವಾದಗಳು.

HP Nayak ಹೇಳಿದರು...

ರಾಜೇಶ್ ನಾಯ್ಕ ಅವರೆ, ನಿಮ್ಮ ಪ್ರಯಾಣದ ಅನುಭವಗಳು ಸೊಗಸಾಗಿವೆ. ಪ್ರಯಾಣದ ಭಾವಚಿತ್ರಗಳಂತೂ ಮನಮೋಹಕವಾಗಿವೆ. ಬಹಳ ದಿನದಿಂದ ನಿಮ್ಮ ಬ್ಲೋಗನ್ನು ಓದುತಿದ್ದೇನೆ. ತಾವು ಯಾಕೆ ತಮ್ಮ ಪ್ರಯಾಣದ ಅನುಭವಗಳಲ್ಲಿ ಸ್ಥಳದ ಮತ್ತು ದಾರಿಯ ವಿವರಗಳನ್ನು ತಿಳಿಸುವುದಿಲ್ಲ? ನೀವು ಈ ವಿವರಗಳನ್ನು ತಿಳಿಸಿದರೆ ನಮ್ಮಂತವರಿಗೆ ಈ ಜಾಗಗಳನ್ನೂ ತಲುಪಲು ತುಂಬಾ ಸಹಾಯವಾಗುತ್ತದೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಲಕ್ಷ್ಮೀಪತಿ, ಶ್ರೀಕಾಂತ್, ಸುನಾಥ್
ಧನ್ಯವಾದ.

ಹರಿಪ್ರಸಾದ್,
ಮಾಹಿತಿ ನಾನು ಎಲ್ಲೂ ನೀಡುವುದಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಪ್ರಕೃತಿಯನ್ನು ಪ್ರೀತಿಸದಿರುವವರಿಗೆ ಈ ಮಾಹಿತಿ ಸಿಗಬಾರದು ಎನ್ನುವುದು ಒಂದನೇ ಕಾರಣ. ಈ ಸ್ಥಳಗಳನ್ನು ಬಹಳ ಕಷ್ಟಪಟ್ಟು ನಾನು ಹುಡುಕಿರುತ್ತೇನೆ. ಆ ಮಾಹಿತಿಯನ್ನು ಅಷ್ಟು ಸುಲಭದಲ್ಲಿ ಉಳಿದವರೊಂದಿಗೆ ಹಂಚಿಕೊಳ್ಳಲು ನನಗಿಷ್ಟವಿಲ್ಲ. ಎಲ್ಲರೂ ಕಷ್ಟಪಟ್ಟು ಮಾಹಿತಿ (ಸ್ಥಳಗಳ ಬಗ್ಗೆ) ಪಡೆದುಕೊಳ್ಳಬೇಕು. ಕಷ್ಟದಲ್ಲಿ ಸಿಕ್ಕ ವಸ್ತುವಿನ ಮಹತ್ವ ಆಗ ಆ ವ್ಯಕ್ತಿಗೆ ಅರಿವಾಗುತ್ತದೆ. ಇದು ಎರಡನೇ ಕಾರಣ. ಧನ್ಯವಾದ.

prasca ಹೇಳಿದರು...

ಹುಡುಕುವುದಷ್ಟೇ ಅಲ್ಲ ಅದನ್ನು ಬರಹದಲ್ಲಿ ಹಿಡಿದಿಡುವ ನಿಮ್ಮ ಶೈಲಿ ಅದ್ಭುತ.