ಈ ಸಲ ವರುಣನ ಕೃಪೆ ಭರ್ಜರಿಯಾಗಿಯೇ ಆಗಿದ್ದು, ಎಲ್ಲಾದರೂ ಮಾನ್ಸೂನ್ ವಾಕ್‍ಗೆ ಹೋಗಿ ಬರೋಣ ಎಂದು ಈ ಹಳ್ಳಿಯೆಡೆ ಅದೊಂದು ರವಿವಾರ ಹೊರಟು ನಿಂತೆ. ಚಾರಣವನ್ನು ಬಲೂ ಇಷ್ಟಪಡುವ ಹಿರಿಯರಾದ ರಾಗಣ್ಣ ಹಾಗೂ ಮಾದಣ್ಣ ನನಗೆ ಜೊತೆಯಾದರು.
ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿಗೆ ಹೋಗುವ ಇರಾದೆ ಇತ್ತು. ಈ ಇರಾದೆಯ ಹಿಂದೆ ಇದ್ದ ಬಲವಾದ ಕಾರಣವೇನೆಂದರೆ ಈ ಹಳ್ಳಿಯಲ್ಲಿರುವ ಸುಂದರ ಜಲಧಾರೆ. ಮಳೆಗಾಲದಲ್ಲಿ ಜಲಧಾರೆಯ ಸಮೀಪ ಸುಳಿಯುವುದು ಅಸಾಧ್ಯವೆಂದು ತಿಳಿದಿದ್ದರೂ, ಸುಮ್ಮನೆ ಮನೆಯಲ್ಲಿ ಕಾಲಹರಣ ಮಾಡುವ ಬದಲು ಈ ಹಳ್ಳಿಗೆ ತೆರಳಿ ಜಲಧಾರೆಗೆ ತೆರಳುವ ಬಗ್ಗೆ ಮಾಹಿತಿಯನ್ನಾದರೂ ಪಡೆದುಕೊಂಡು ಬರೋಣವೆಂದು ಆಗಾಗ ಬೀಳುತ್ತಿದ್ದ ಮಳೆಯನ್ನು ಆನಂದಿಸುತ್ತ, ಹರಟುತ್ತ, ನಮ್ಮ ಮಾನ್ಸೂನ್ ವಾಕ್‍ನ್ನು ಆರಂಭಿಸಿದೆವು.
ಇತ್ತೀಚೆಗಷ್ಟೆ ನಿರ್ಮಿಸಲಾಗಿರುವ ಸೇತುವೆಯೊಂದನ್ನು ದಾಟಿ ಸ್ವಲ್ಪ ಮುನ್ನಡೆದ ಕೂಡಲೇ ಹಳ್ಳಿಯ ಸೌಂದರ್ಯ ಆನಾವರಣಗೊಂಡಿತು. ಮೊದಲ ನೋಟದಲ್ಲೇ ನಾವು ಮೂವ್ವರು ಕ್ಲೀನ್ ಬೌಲ್ಡ್. ಸುತ್ತಲೂ ವ್ಯಾಪಿಸಿರುವ ಬೆಟ್ಟಗಳ ಶ್ರೇಣಿ ಮತ್ತು ಅವುಗಳಿಂದ ಹರಿದು ಬರುವ ತೊರೆಗಳು, ಈ ಹಳ್ಳಿಗೆ ನೈಸರ್ಗಿಕ ಸೌಂದರ್ಯವನ್ನು ಬಳುವಳಿ ರೂಪದಲ್ಲೇ ನೀಡಿವೆ.
ಆಗಷ್ಟೇ ನಾಟಿ ಕೆಲಸ ಮುಕ್ತಾಯಗೊಂಡಿದ್ದರಿಂದ ಗದ್ದೆ ತುಂಬಾ ಭತ್ತದ ಸಣ್ಣ ಸಣ್ಣ ಸಸಿಗಳು. ಒಂದೆರಡು ಕಡೆ ಗದ್ದೆ ಉಳುವ ಕಾರ್ಯ ಇನ್ನೂ ನಡೆದಿತ್ತು. ಹಳ್ಳಿಯ ತುಂಬಾ ಹರಿಯುವ ನೀರಿನ ಜುಳುಜುಳು ನಿನಾದ. ಎಲ್ಲಾ ದಿಕ್ಕುಗಳಿಂದಲೂ ಸಣ್ಣ ಸಣ್ಣ ತೊರೆಗಳು ಹರಿದು ಬರುವುದನ್ನು ಕಾಣಬಹುದು.
ಒಂದೆಡೆ ಹಳ್ಳಿಗರು ಪ್ರಾಕಾರ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದರು. ಅವರಲ್ಲಿ ಮಾತಿಗಿಳಿದಾಗ ಆ ಹಳ್ಳಿಯಲ್ಲಿ ಒಟ್ಟು ಮೂರು ಜಲಧಾರೆಗಳಿರುವುದು ತಿಳಿದುಬಂತು. ನಮಗೆ ನಿಧಿ ಸಿಕ್ಕಷ್ಟು ಸಂತೋಷವಾಯಿತು. ಹಳ್ಳಿಗರ ಪ್ರಕಾರ ಒಂದು ಜಲಧಾರೆಗೆ(ಚಿತ್ರದಲ್ಲಿರುವ) ಈಗ ತೆರಳಬಹುದಾಗಿತ್ತು. ಆದರೆ ಅಂದು ನಾವು ಕೇವಲ ಮಾನ್ಸೂನ್ ವಾಕ್ ಮಾಡುವ ಮೂಡ್‍ನಲ್ಲಿದ್ದು, ಕಠಿಣ ಚಾರಣ ಮಾಡುವ ಯಾವುದೇ ಇರಾದೆ ನಮಗಿರಲಿಲ್ಲ.
ಹಳ್ಳಿಯ ಸೊಬಗು, ಪ್ರಕೃತಿಯ ಅಂದ, ತಂಪನೆ ಗಾಳಿ ಇವನ್ನೆಲ್ಲಾ ಆಸ್ವಾದಿಸುತ್ತ ಮುನ್ನಡೆದೆವು. ಮತ್ತೆ ಧೋ ಎಂದು ಮಳೆ ಸುರಿಯಲು ಆರಂಭಿಸಿತು. ಮಾನ್ಸೂನ್ ವಾಕ್‍ನ ಖರೆ ಮಜಾ ಬರತೊಡಗಿತು. ರಭಸವಾಗಿ ಸುರಿಯುತ್ತಿದ್ದ ಮಳೆಯಲ್ಲೇ ನಿಂತು, ನಮ್ಮನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರೆದಿದ್ದ ಪ್ರಕೃತಿಯ ಅಂದ ಚಂದ ನೋಡಿ ಆನಂದಿಸುವ ಸುಖ ಅನುಭವಿಸಿದವನೇ ಬಲ್ಲ. ರಾಗಣ್ಣನಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ಈ ಮಾನ್ಸೂನ್ ವಾಕ್ ಮಾಡಿ ಈಗ ೩ ವಾರಗಳಾದರೂ ಅವರಿನ್ನೂ ಆ ಗುಂಗಿನಿಂದ ಹೊರಬಂದಿಲ್ಲ.
ಸದ್ಯದಲ್ಲೇ ಆ ಮಳೆಗಾಲದ ಅತಿಥಿಯನ್ನು ಸಂದರ್ಶಿಸಲು ಈ ಹಳ್ಳಿಯೆಡೆ ಮತ್ತೊಮ್ಮೆ ಹೆಜ್ಜೆ ಹಾಕುವುದು ಅನಿವಾರ್ಯ. ರಾಗಣ್ಣ-ಮಾದಣ್ಣ ತುದಿಗಾಲಲ್ಲಿ ನಿಂತಿದ್ದಾರೆ. ನಾನೇ ವೈಯುಕ್ತಿಕ ಕಾರಣಗಳಿಂದ ಹಿಂದೇಟು ಹಾಕುತ್ತಿದ್ದೇನೆ. ಆದರೆ ಈ ಮಳೆಗಾಲ ಮುಗಿಯುವ ಮೊದಲು ತೆರಳುವುದಂತೂ ಖಂಡಿತ.
6 ಕಾಮೆಂಟ್‌ಗಳು:
ಪ್ರೀತಿಯ ರಾಜೇಶ್,
ಇದು ೧೦೦% ಅನ್ಯಾಯ.
ಈ ಸಲ ನಿಮ್ಗೆ ಸಿಕ್ಕಾಪಟ್ಟೆ ಕಾಲ್ನೋವು ಬರತ್ತೆ ನೋಡಿ.
ಪ್ರೀತಿಯಿಂದ, ಸಿಂಧು
ಸೊಗಸಾದ ವಾಕ್!! ಮಳೆಗಾಲದ ಅತಿಥಿಯನ್ನು ನೋಡಲು ನಾನು ನಿಮ್ಮ ಜೊತೆ ಅತಿಥಿಯಾಗಿ ಬರಬಹುದೇ!!
amazing place and beautiful pictures!!
ಸಖತ್ ಅನುಭವ..
ಇಂತಹ ಹಳ್ಳಿಯಲ್ಲಿ ಒಂದು ಗದ್ದೆ ಇದ್ದರೆ ಬೇರೇನು ಬೇಕು ಈ ಜಗದಲ್ಲಿ....
ಸಿಂಧು,
ಅನ್ಯಾಯ ಸರಿಪಡಿಸುವ ಅವಕಾಶ ಕೊಡಿ ಸಿಂಧು. ಬಂದ್ಬಿಡಿ ಈ ಕಡೆ. ಒಂದು ರೌಂಡ್ ಇದೇ ಊರಿಗೆ ಹೋಗಿ ಬರೋಣ.
ಅರವಿಂದ್,
ಧನ್ಯವಾದ. ಖಂಡಿತ ಬರಬಹುದು.
ಸಿದ್ಧೇಶ್ವರ್,
ಧನ್ಯವಾದ.
ವೇಣು,
ಸರಿ ಹೇಳಿದ್ರಿ ನೋಡಿ!
idu yava ooru??
ಕಾಮೆಂಟ್ ಪೋಸ್ಟ್ ಮಾಡಿ