ಮಂಗಳವಾರ, ಸೆಪ್ಟೆಂಬರ್ 18, 2012

ಸಿದ್ಧೇಶ್ವರ ದೇವಾಲಯ - ಕಲ್ಲೂರ


ಕಲ್ಲೂರಿನಲ್ಲಿ ಅನತಿ ದೂರದಲ್ಲೇ ಕಾಣುತ್ತಿದ್ದ ಬಿಳಿ-ನಸುಗೆಂಪು ಬಣ್ಣಗಳ ಬೆಟ್ಟಗಳ ಸಾಲಿನತ್ತ ದಾರಿ ಸಾಗುತ್ತಿತ್ತು. ಈ ಕಣಿವೆಯಲ್ಲಿ ಬೆಟ್ಟಗಳ ನೋಟವೇ ಚಂದ. ಬೆಟ್ಟದ ಬುಡದಲ್ಲೇ ಅಪಾರ ಸಂಖ್ಯೆಯ ವೃಕ್ಷಗಳ ನಡುವೆ ಸಿದ್ಧೇಶ್ವರ ನೆಲೆಗೊಂಡಿದ್ದಾನೆ. ದೇವಾಲಯವು ಸಂಪೂರ್ಣವಾಗಿ ಆಧುನೀಕರಣಗೊಂಡಿದ್ದು ಗ್ರಾನೈಟ್ ಹಾಸಿತ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯನ್ನು ಹೊಂದಿದೆ. ಚಾಲುಕ್ಯ ಕಾಲದ, ಚನ್ನಬಸವೇಶ್ವರರು ನಿರ್ಮಿಸಿದ ದೇವಾಲಯವಿದೆಂದು ನಂಬಲಾಗಿದೆ. ಕೆಂಪು, ಹಸಿರು, ಬಿಳಿ, ಹಳದಿ ಹೀಗೆ ಸಿಕ್ಕ ಎಲ್ಲಾ ಬಣ್ಣಗಳಿಂದ ದೇವಾಲಯವನ್ನು ’ಅಲಂಕರಿಸಲಾಗಿದೆ’.


ಬಹಳ ಪ್ರಶಾಂತ ವಾತಾವರಣವನ್ನು ಹೊಂದಿರುವ ಈ ಸ್ಥಳವು ಏಕಾಂತ ಬಯಸುವವರಿಗೆ ಪ್ರಶಸ್ತ ಸ್ಥಳ. ಬಹಳಷ್ಟು ಮುನಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ ಎಂದೂ ನಂಬಲಾಗಿದೆ. ’ಕಲ್ಯಾಣ ಬಸಪ್ಪನ ಕಲ್ಲು’ ಎಂಬ ಹೆಸರಿನ ಕಲ್ಲೊಂದು ಇಲ್ಲಿದೆ. ನಮ್ಮ ಮನದಾಸೆಯನ್ನು ಮನದಲ್ಲೇ ನೆನೆಸಿ ಈ ಕಲ್ಲನ್ನು ಎತ್ತಲು ಪ್ರಯತ್ನಿಸಬೇಕು. ಮನದಾಸೆ ಪೂರೈಸುವುದಾದರೆ ನಮ್ಮಿಂದ ಆ ಕಲ್ಲನ್ನು ಎತ್ತಲು ಸಾಧ್ಯ. ಇಲ್ಲವಾದರೆ ಎತ್ತಲು ಆಗುವುದಿಲ್ಲ. ಇದನ್ನೆಲ್ಲಾ ನಂಬದಿದ್ದರೂ ಪ್ರಯತ್ನಿಸೋಣವೆಂದು ಆ ಕಡೆ ಹೆಜ್ಜೆ ಹಾಕಿದರೆ ಅಲ್ಲಿ ಅದಾಗಲೇ ಜನರು ತುಂಬಿಹೋಗಿದ್ದರು. ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳು, ಅವರ ಮಾಸ್ತರರು, ಅಕ್ಕವ್ರು, ಇತರ ಪ್ರವಾಸಿಗರು ಹೀಗೆ ಬಹಳಷ್ಟು ಜನರು ಅಲ್ಲಿದ್ದರಿಂದ ಅಲ್ಲಿಂದ ದೂರಸರಿದೆ.


ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದ ಸಾಧುವೊಬ್ಬರು (ನಾವು ಅಲ್ಲಿಂದ ಹಿಂತಿರುಗುವವರೆಗೂ ಇವರು ಪ್ರದಕ್ಷಿಣೆ ಹಾಕುತ್ತಲೇ ಇದ್ದರು) ’ಮ್ಯಾಲ್ ಹೋಗಿ ಕಾಲ್ ತೊಳ್ಕೊಂಡ್ ಬಂದು ದ್ಯಾವ್ರ ದರ್ಶನ ಮಾಡ್ರಿ’ ಎಂದಾಗ, ಈ ’ಮ್ಯಾಲ’ ಎಂದರೆ ಎಲ್ಲಿ ಎಂದು ತಿಳಿಯದಾಯಿತು. ಬೆಟ್ಟದ ಮೇಲೋ, ಬಲಕ್ಕೋ, ಎಡಕ್ಕೋ ಎಂದು ಆಚೀಚೆ ನೋಡುತ್ತಿರಬೇಕಾದರೆ ದೇವಾಲಯದ ಹಿಂಭಾಗದಲ್ಲಿ ಎಡಕ್ಕೆ ಮೆಟ್ಟಿಲುಗಳು ಕಾಣಿಸಿದವು.


ಮೆಟ್ಟಿಲುಗಳನ್ನು ಸಮೀಪಿಸಿದಂತೆ ರಭಸವಾಗಿ ನೀರು ಬೀಳುವ ಶಬ್ದ. ಶಬ್ದ ಮಾತ್ರ ಎಲ್ಲಿಂದ ಹೊರಹೊಮ್ಮುತ್ತಿತ್ತು ಎಂದು ಗೊತ್ತಾಗುತ್ತಿರಲಿಲ್ಲ. ಸುಮಾರು ಹದಿನೈದು ಮೆಟ್ಟಿಲುಗಳನ್ನು ಹತ್ತಿದ ಬಳಿಕ ಸಣ್ಣ ಕಮಾನು. ಈಗ ನೀರು ಬೀಳುವ ಶಬ್ದ ಇನ್ನೂ ಜೋರಾಗಿ ಬಹಳ ಸಮೀಪ ಇದ್ದಂತೆ ಕೇಳುತ್ತಿದ್ದರೂ, ಕಾಣುತ್ತಿರಲಿಲ್ಲ. ಬಲಭಾಗದಲ್ಲಿ ನೋಡಿದರೆ ಬೆಟ್ಟ ಕೊರೆದು ಬೃಹದಾಕಾರದ ಗುಹೆಯೊಂದು ಸ್ವಾಭಾವಿಕವಾಗಿ ನಿರ್ಮಿತಗೊಂಡಿದೆ. ಮೇಲಕ್ಕೆ ದೊಡ್ಡ ಗೋಡೆಯಂತೆ ಎತ್ತರಕ್ಕೆ ನಿಂತಿರುವ ಬೆಟ್ಟ. ಕಮಾನಿನ ನಂತರ ಇನ್ನೊಂದೈದು ಮೆಟ್ಟಿಲುಗಳು. ಬೆಟ್ಟದ ಬುಡಕ್ಕೇ ಬಂದು ನಿಂತದ್ದಾಯಿತು. ಮುಂದೆನೇ ಸಣ್ಣ ಗುಹೆಯಾಕಾರದ ರಚನೆ. ಆ ಗುಹೆಯೊಳಗಿನಿಂದ ನೀರು ಹರಿದು ಬರುತ್ತಿತ್ತು. ನೀರು ಬೀಳುವ ಶಬ್ದ ಮಾತ್ರ ಇನ್ನೂ ಜೋರಾಗಿ ಕೇಳುತ್ತಿತ್ತು. ನೀರು ಹರಿದುಬರುವಲ್ಲಿ ಸ್ವಲ್ಪ ಇಣುಕಿ ನೋಡಿದರೆ ವಿಸ್ಮಯ!


ಅಲ್ಲೊಂದು ದಪ್ಪನೆಯ ಬೇರು ಬೆಟ್ಟದ ನಡುವನ್ನೇ ಸೀಳಿ ಕೆಳಗಿಳಿದುಬಂದಿದೆ. ಈ ಬೇರು ಇಳಿದುಬಂದಿರುವ ರಂಧ್ರದಿಂದಲೇ ನೀರು ರಭಸದಿಂದ ಹೊರಹೊಮ್ಮುತ್ತ ಸುಮಾರು ೧೦ ಅಡಿ ಎತ್ತರದಿಂದ ಬೀಳುತ್ತಾ ದೊಡ್ಡ ಶಬ್ದವನ್ನು ಮಾಡುತ್ತಿತ್ತು. ಮೇಲಕ್ಕಂತೂ ಮೈಲುಗಟ್ಟಲೆ ಹಬ್ಬಿಕೊಂಡಿರುವ ಬೋಳು ಬೆಟ್ಟ. ಆ ನೀರಿನ ಮೂಲವೇ ಒಂದು ವಿಚಿತ್ರ (ನಂತರ ಆ ಸಾಧುವಿನ ಬಳಿ ಕೇಳಿದರೆ ’ಸಿದ್ಧೇಶ್ವರನ ಮಹಿಮೆ’ ಎಂದರು). ನೀರಂತೂ ಅದೆಷ್ಟು ತಂಪಾಗಿತ್ತೆಂದರೆ ನಂಬುವುದು ಅಸಾಧ್ಯ. ಆ ಬಿಸಿಲ ನಾಡಿನಲ್ಲಿ ಇದೊಂದು ವಿಸ್ಮಯವೇ ಸರಿ. ನೋಡಿದಷ್ಟೂ ನಂಬಲಾಗುತ್ತಿರಲಿಲ್ಲ. ಇದನ್ನು ಬಿಟ್ಟು ಅಲ್ಲಿ ಜನರು ಕಲ್ಲು ಎತ್ತಲು ಮುಗಿಬಿದ್ದಿದ್ದಾರಲ್ಲ ಎಂದೆನಿಸತೊಡಗಿತ್ತು. ಒಳ್ಳೆಯದೇ ಆಯಿತು. ಅರ್ಧ ಗಂಟೆಯಷ್ಟು ಅತ್ಯುತ್ತಮ ಸಮಯವನ್ನು ಪ್ರಕೃತಿಯ ಈ ವಿಸ್ಮಯವನ್ನು ನೋಡುತ್ತಾ ಕಳೆದೆ. ಇನ್ನೂ ವಿಚಿತ್ರವೆಂದರೆ ನಾನಲ್ಲಿರುವಷ್ಟು ಸಮಯ ಒಬ್ಬನೇ ಒಬ್ಬ ಅಲ್ಲಿಗೆ ಬರದೇ ಇದ್ದದ್ದು! ಎಲ್ಲರೂ ದೇವಾಲಯಕ್ಕೆ ಬರುವುದು, ಕಲ್ಲೆತ್ತುವುದು, ಹೋಗುವುದು ಇಷ್ಟನ್ನೇ ಮಾಡುತ್ತಿದ್ದರು.


ಇಲ್ಲಿ ಪ್ರತಿ ವರ್ಷವೂ ಹೊಸ್ತಿಲ ಹುಣ್ಣಿಮೆಯ ನಂತರದ ಮಂಗಳವಾರ ರಥೋತ್ಸವ ಜರುಗುತ್ತದೆ. ರಥೋತ್ಸವದ ಮುನ್ನಾ ದಿನ ಅಂದರೆ ಸೋಮವಾರ ದೊಡ್ಡ ಹಣತೆಯಲ್ಲಿ ದೀಪ ಬೆಳಗಿಸಿ ದೇವಾಲಯದ ಹಿಂದೆ ಬೆಟ್ಟದ ಮೇಲೆ ಇರಿಸಲಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಆ ದಿನ ಉಪವಾಸವಿದ್ದು, ಈ ದೀಪದ ದರ್ಶನವಾದ ಬಳಿಕ ಊಟ ಮಾಡುತ್ತಾರೆ. ದೇವಾಲಯದ ಗರ್ಭಗುಡಿಯಲ್ಲಿ ಬಸವೇಶ್ವರನ ಮುಖವಾಡವನ್ನು ಶಿವಲಿಂಗಕ್ಕೆ ತೊಡಿಸಲಾಗಿದ್ದು, ನಾಗನ ಹೆಡೆಯ ಆಸರೆಯನ್ನೂ ಲಿಂಗಕ್ಕೆ ನೀಡಲಾಗಿದೆ. ಇಲ್ಲಿ ಗರ್ಭಗುಡಿಯ ಒಳಗೆ ತೆರಳಿ ಶಿವಲಿಂಗವನ್ನು ಮುಟ್ಟಿ ನಮಸ್ಕರಿಸಬಹುದು.


ಸಿದ್ಧೇಶ್ವರ ದೇವಾಲಯದ ಇನ್ನೊಂದು ವಿಶೇಷವೆಂದರೆ ಇಲ್ಲಿನ ಅರ್ಚಕ ಶಿಸ್ತಾಗಿ ಪ್ಯಾಂಟು ಮತ್ತು ಅಂಗಿ ಧರಿಸಿ ಆಚೀಚೆ ಓಡಾಡಿಕೊಂಡಿರುತ್ತಾನೆ. ಹೊರಗಿನಿಂದ ನಮಸ್ಕರಿಸಿ ತೆರಳುವವರಿಗೆ ಆತ ಏನನ್ನೂ ಕೊಡುವುದಿಲ್ಲ. ಗರ್ಭಗುಡಿಯ ಒಳಗೆ ಯಾರಾದರೂ ತೆರಳಿದರೆ ಛಂಗನೆ ಎಲ್ಲಿಂದಲೋ ಪ್ರತ್ಯಕ್ಷನಾಗುತ್ತಾನೆ. ತೀರ್ಥದ ರೂಪದಲ್ಲಿ ಪಂಚಾಮೃತ ಮತ್ತು ಅಲ್ಲೇ ಗಂಧವನ್ನು ಕೆರೆದು ನೀಡುತ್ತಾನೆ. ಉಳಿದ ದೇವಾಲಯಗಳಂತೆ ಗಂಧವನ್ನು ಮೊದಲೇ ಕೆರೆದು ಬಟ್ಟಲಿನಲ್ಲಿ ಸಂಗ್ರಹಿಸಿ ಇಡುವುದಿಲ್ಲ.

3 ಕಾಮೆಂಟ್‌ಗಳು:

Ashok ಹೇಳಿದರು...

TumbA chennagide.. nIrina ugama AscaryavAgide. BhaktarigO, prakRutipriyarigO olleya sthala.

Srik ಹೇಳಿದರು...

Fantastic!

ರಾಜೇಶ್ ನಾಯ್ಕ ಹೇಳಿದರು...

ಅಶೋಕ್, ಶ್ರೀಕಾಂತ್
ಧನ್ಯವಾದ.