ಹತ್ತು ಹಾಗೂ ಹನ್ನೊಂದನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಊರು ಸೂಡಿ. ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ (೧೦೭೬-೧೧೨೬) ನಾಣ್ಯಗಳನ್ನು ನಿರ್ಮಿಸುವ ಪ್ರಮುಖ ಟಂಕಸಾಲೆ ಸೂಡಿಯಲ್ಲೇ ಇತ್ತು. ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಮತ್ತು ಸೇವುಣ ಯಾದವರ ಕಾಲದ (ಇಸವಿ ೧೦೧೦ರಿಂದ ೧೨೦೨ರವರೆಗೆ ದಿನಾಂಕಗಳಿರುವ) ೧೬ ಶಾಸನಗಳು ಇಲ್ಲಿ ದೊರಕಿವೆ. ಆಗಿನ ಕಾಲದಲ್ಲಿ ಸೂಡಿಯನ್ನು ’ಸೂಂಡಿ’ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಶಿವ ದೇವಾಲಯ ಮತ್ತು ಮಲ್ಲಿಕಾರ್ಜುನ ದೇವಾಲಯ.
ಮಲ್ಲಿಕಾರ್ಜುನ ದೇವಾಲಯವನ್ನು ಕಾಡುತ್ತಿರುವ ಸಮಸ್ಯೆ ಒತ್ತುವರಿಯದ್ದು. ತೀರಾ ಇತ್ತೀಚೆಗಷ್ಟೆ ಈ ಎರಡು ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಪ್ರಾಚ್ಯ ವಸ್ತು ಇಲಾಖೆ ಸೂಕ್ತ ಸಮಯದಲ್ಲೇ ಎಚ್ಚೆತ್ತುಕೊಂಡಿದೆ ಎನ್ನಬಹುದು. ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಒಂದು ಪಾರ್ಶ್ವದಲ್ಲಿ ಸಮೀಪದವರೆಗೆ ಮನೆಗಳಿದ್ದು ಎತ್ತರವಾದ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯ ಮತ್ತು ದೇವಾಲಯದ ನಡುವಿನ ಅಂತರದಲ್ಲಿ ಒಬ್ಬ ವ್ಯಕ್ತಿ ನುಸುಳಬಹುದಾದ ಅಂತರ ಮಾತ್ರ ಇದೆ. ಉಳಿದ ಮೂರು ಪಾರ್ಶ್ವಗಳಲ್ಲಿ ರಸ್ತೆಗಳಿವೆ.
ಹನ್ನೆರಡು ಕಂಬಗಳ ಆಕರ್ಷಕ ಮುಖಮಂಟಪ, ನವರಂಗ ಮತ್ತು ೩ ಗರ್ಭಗುಡಿಗಳನ್ನು ಹೊಂದಿರುವ ಮಲ್ಲಿಕಾರ್ಜುನ ದೇವಾಲಯವನ್ನು ೧೧ನೇ ಶತಮಾನದ ಸುಮಾರಿಗೆ ನಿರ್ಮಿಸಲಾಗಿರಬಹುದು ಎಂಬ ಅಭಿಪ್ರಾಯವಿದೆ. ನಿಖರವಾಗಿ ನಿರ್ಮಾಣದ ವರ್ಷವನ್ನು ತಿಳಿಸುವ ಶಾಸನ ಲಭ್ಯವಾಗಿಲ್ಲ. ನವರಂಗದ ದ್ವಾರಕ್ಕೆ ಕೆಂಪುಬಣ್ಣ ಬಳಿಯಲಾಗಿರುವುದರಿಂದ ಕೆತ್ತನೆಗಳು ಇದ್ದೂ ಇಲ್ಲದಂತೆ. ಪಂಚಶಾಖಾ ದ್ವಾರದಲ್ಲಿ ವಜ್ರ ತೋರಣ, ವಾದ್ಯಗಾರರು, ನೃತ್ಯಗಾರರು, ಸ್ತಂಭ ಮತ್ತು ಬಳ್ಳಿಯ ಕೆತ್ತನೆಗಳನ್ನು ಕಾಣಬಹುದು. ಲಲಾಟದಲ್ಲಿ ಗಜಲಕ್ಷ್ಮೀಯ ಹೊರಚಾಚು ಕೆತ್ತನೆಯಿದೆ.
ನವರಂಗದಲ್ಲಿ ಸುಂದರ ಅಲಂಕಾರಿಕ ಕೆತ್ತನೆಗಳುಳ್ಳ ನಾಲ್ಕು ಕಂಬಗಳಿವೆ. ಎಲ್ಲಾ ಗರ್ಭಗುಡಿಗಳಿಗೆ ಇಲ್ಲಿಂದಲೇ ಪ್ರವೇಶ. ಪ್ರಮುಖ ಗರ್ಭಗುಡಿಗೆ ತೆರೆದ ಅಂತರಾಳವಿದ್ದು ಉಳಿದೆರಡು ಗರ್ಭಗುಡಿಗಳಿಗೆ ಅಂತರಾಳಗಳಿಲ್ಲ. ಅಂತರಾಳ ಆರಂಭವಾಗುವಲ್ಲಿ ಎರಡು ಕಂಬಗಳಿದ್ದು ಮೇಲ್ಗಡೆ ಅತ್ಯಾಕರ್ಷಕ ಮತ್ತು ವಿಶಿಷ್ಟ ಮಕರತೋರಣವಿದೆ.
ಇದರಲ್ಲಿ ತ್ರಿಮೂರ್ತಿಗಳನ್ನು ತೋರಿಸಲಾಗಿದ್ದು, ಬ್ರಹ್ಮ ಮತ್ತು ವಿಷ್ಣು ಮಕರಗಳ ಮೇಲೆ ಆಸೀನರಾಗಿರುವಂತೆ ಮತ್ತು ಶಿವನನ್ನು ತಾಂಡವನೃತ್ಯ ಮಾಡುತ್ತಿರುವಂತೆ ತೋರಿಸಲಾಗಿದೆ. ಶಿವನ ಅಕ್ಕ ಪಕ್ಕದಲ್ಲಿ ಇರುವವರು ಬ್ರಹ್ಮ ಹಾಗೂ ವಿಷ್ಣುವೋ ಅಥವಾ ಮಕರಗಳ ಮೇಲಿದ್ದವರು ಬ್ರಹ್ಮ ಮತ್ತು ವಿಷ್ಣು ಆಗಿದ್ದಿರಬಹುದೋ? ಹೆಚ್ಚಾಗಿ ಮಕರಗಳ ಮೇಲೆ ಯಕ್ಷ-ಯಕ್ಷಿಯರನ್ನೂ ಹಾಗೂ ಶಿವನ ಅಕ್ಕಪಕ್ಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ಕೆತ್ತನೆಯಿರುತ್ತದೆ. ಕೆತ್ತನೆ ಬಹಳ ಮೇಲೆ ಇದ್ದ ಕಾರಣ ಮತ್ತು ಕತ್ತಲೆಯ ಕಾರಣದಿಂದ ನನ್ನ ಸಾಧಾರಣ ಕ್ಯಾಮರಾದಿಂದ ಚಿತ್ರ ಸರಿಯಾಗಿ ಬರಲಿಲ್ಲ. ಚಿತ್ರ ಸರಿಯಾಗಿ ಬಂದಿದ್ದರೆ ಸ್ಪಷ್ಟ ನಿರ್ಣಯಕ್ಕೆ ಬರಬಹುದಿತ್ತು. ಉತ್ತರ ಕರ್ನಾಟಕದ ದೇವಾಲಯಗಳಲ್ಲಿ ವಿದ್ಯುತ್ತಿನದ್ದೇ ಒಂದು ದೊಡ್ಡ ಸಮಸ್ಯೆ. ಟಾರ್ಚ್ ಒಯ್ಯಬೇಕು ಎಂದು ಎಷ್ಟು ನೆನಪು ಮಾಡಿಕೊಂಡರೂ ಕೊನೆ ಕ್ಷಣದಲ್ಲಿ ನೆನಪು ಹಾರಿಬಿಡುತ್ತೇನೆ.
ಪ್ರಮುಖ ಗರ್ಭಗುಡಿಯು ಪಂಚಶಾಖಾ ದ್ವಾರವನ್ನು ಹೊಂದಿದ್ದು ಎಲ್ಲಾ ಶಾಖೆಗಳು ಸುಂದರ ಕೆತ್ತನೆಗಳಿಂದ ಅಲಂಕೃತಗೊಂಡಿವೆ. ಆದರೆ ಇಲ್ಲೂ ಬಣ್ಣ ಬಳಿದು ಕೆತ್ತನೆಗಳ ಅಂದಗೆಡವಲಾಗಿದೆ. ಲಲಾಟದಲ್ಲಿರುವ ಗಜಲಕ್ಷ್ಮೀಯ ಮತ್ತು ಅಷ್ಟದಿಕ್ಪಾಲಕರ ಕೆತ್ತನೆಗಳೂ ತಮ್ಮ ನೈಜರೂಪವನ್ನು ಶಾಶ್ವತವಾಗಿ ಕಳೆದುಕೊಂಡಿವೆ.
ಉತ್ತರದಲ್ಲಿರುವ ಗರ್ಭಗುಡಿಯಲ್ಲಿ ನಿಂತುಕೊಂಡಿರುವ ಭಂಗಿಯಲ್ಲಿ ಉಮಾಮಹೇಶ್ವರನ ಸುಂದರ ಶಿಲ್ಪವಿದೆ. ಧೂಳಿನ ಪರಿಸರವಾಗಿರುವುದರಿಂದ ಮೂರ್ತಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಮಹೇಶ್ವರ ತನ್ನ ಕೈಯನ್ನು ಉಮೆಯ ಹೆಗಲ ಮೇಲೆ ಇಟ್ಟಿರುವಂತೆ ಮತ್ತು ಆಕೆ ತನ್ನ ಕೈಯನ್ನು ಅತನ ಸೊಂಟವನ್ನು ಬಳಸಿ ಹಿಡಿದುಕೊಂಡಿರುವಂತೆ ಕೆತ್ತಲಾಗಿರುವ ಶಿಲ್ಪದ ಮೋಹಕ ನೋಟಕ್ಕೆ ಮನಸೋತೆ. ಶಿವನ ಪಕ್ಕದಲ್ಲಿ ನಂದಿಯನ್ನು ಮತ್ತು ಉಮೆಯ ಪಕ್ಕದಲ್ಲಿ ಗಣೇಶನನ್ನು ತೋರಿಸಲಾಗಿದೆ.
ದಕ್ಷಿಣದಲ್ಲಿರುವ ಗರ್ಭಗುಡಿಯಲ್ಲಿ ಆಶ್ಚರ್ಯವೊಂದು ಕಾದಿತ್ತು. ಕ್ಯಾಮರಾ ಫ್ಲ್ಯಾಷ್ನ ಬೆಳಕಿನಲ್ಲಿ ಯಾರೋ ಮಲಗಿಕೊಂಡಿರುವಂತೆ ಭಾಸವಾಯಿತು. ಚಕಿತಗೊಂಡು ಕ್ಯಾಮರಾದ ಚಿತ್ರವನ್ನು ನೋಡಿದರೆ ಆಭರಣಗಳಿಂದ ಅಲಂಕರಿಸಲ್ಪಟ್ಟಿರುವ ಅನಂತಪದ್ಮನಾಭ! ಇನ್ನೊಂದು ಶಿವಲಿಂಗವನ್ನು ನಿರೀಕ್ಷಿಸಿದ್ದ ನನಗೆ ಈ ಮೂರ್ತಿಯನ್ನು ಕಂಡು ಸಂತೋಷ ಮತ್ತು ಸೋಜಿಗ ಎರಡೂ ಉಂಟಾದವು. ಹೊಳಪಿನ ಕರಿಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಮತ್ತು ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ. ಈ ಮೂರ್ತಿಯಲ್ಲಿ ಶ್ರೀದೇವಿ, ಭೂದೇವಿ, ಗರುಡ ಮತ್ತು ಬ್ರಹ್ಮರನ್ನೂ ಕಾಣಬಹುದು.
ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ
4 ಕಾಮೆಂಟ್ಗಳು:
Wow , nice pictures and last shot is amazing .
Oh! My God! What a grand treasure and what a great victory over trespassing!
Thanks to you for this wonderful post, Rajesh :)
Nice temple.. Rare sculpture of Umamaheshwara style.....
ಧೀರಜ್ ಅಮೃತಾ, ಶ್ರೀಕಾಂತ್, ಅಶೋಕ್
ಧನ್ಯವಾದ.
ಕಾಮೆಂಟ್ ಪೋಸ್ಟ್ ಮಾಡಿ