ನಿರೀಕ್ಷಿಸಿದಂತೆ ರಾಹುಲ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳುತ್ತಿದ್ದಾರೆ. ಇನ್ನು ಅವರು ಭಾರತಕ್ಕೆ ಆಡುವುದನ್ನು ನಾವೆಂದೂ ಕಾಣಲಾರೆವು. ಇನ್ನು ನನ್ನ ರಜೆಗಳೆಲ್ಲವೂ ಉಳಿಯಲಿವೆ (೨೦೧೧ರಲ್ಲಂತೂ ಸಿಕ್ಕಾಪಟ್ಟೆ ’ಲಾಸ್ ಆಫ್ ಪೇ ’ಆಗಿತ್ತು). ಕ್ರಿಕೆಟ್ ನೋಡುವುದು ಬಹಳಷ್ಟು ಕಡಿಮೆಯಾಗಲಿದೆ.
ಆದಿತ್ಯವಾರದಂದು ರಾಹುಲ್ ಬ್ಯಾಟ್ ಮಾಡುವ ಅವಕಾಶವಿದ್ದರೆ ಅಂದು ಚಾರಣ ರದ್ದು ಮಾಡಿದ್ದೂ ಇದೆ. ಶುಭಕಾರ್ಯಗಳಿಗೆ ಒಂದು ನಿಮಿಷದ ಭೇಟಿ ನೀಡಿ ಮತ್ತೆ ಓಡಿ ಬಂದು ಟಿವಿ ಮುಂದೆ ಕೂತದ್ದೂ ಇದೆ.ರಜೆ ಹಾಕಿದ್ದಂತೂ ಅದೆಷ್ಟೋ ಸಲ.
ಕ್ರಿಕೆಟ್ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದೋ ಅದೆಲ್ಲವನ್ನೂ ರಾಹುಲ್ ದ್ರಾವಿಡ್ ಸಾಧಿಸಿಯಾಗಿದೆ. ೩೬ ಶತಕಗಳು. ೧೩ ಸಾವಿರಕ್ಕೂ ಅಧಿಕ ರನ್ನುಗಳು. ಟೆಸ್ಟ್ ಮಾನ್ಯತೆ ಪಡೆದಿರುವ ಎಲ್ಲಾ ರಾಷ್ಟ್ರಗಳಲ್ಲೂ ಶತಕ ಬಾರಿಸಿರುವ ಸಾಧನೆ ಮಾಡಿರುವ ಏಕೈಕ ಆಟಗಾರ. ತನ್ನ ಸಾಧನೆ ಮತ್ತು ನಡತೆಗಾಗಿ ಎಲ್ಲಾ ಕ್ರಿಕೆಟಿಗರಿಂದಲೂ ಗೌರವಿಸಲ್ಪಡುವ ಆಟಗಾರ. ಕ್ರಿಕೆಟ್ ಬಗ್ಗೆ ಉತ್ತಮ ಚಿಂತನೆಯುಳ್ಳ ಆಟಗಾರನೆಂಬ ಮನ್ನಣೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಏನಾದರೂ ಮಾರ್ಪಾಡು ಮಾಡುವ ಅಗತ್ಯವಿದ್ದಾಗ ಐಸಿಸಿ ಮೊದಲು ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳುವುದೂ ರಾಹುಲ್ ದ್ರಾವಿಡ್‍ನಿಂದ. ಸಾಧಿಸುವುದು ಬಾಕಿ ಇದ್ದರೆ ಅದು ಆಸ್ಟ್ರೇಲಿಯಾದಲ್ಲಿ ಜಯ ಗಳಿಸುವುದು ಮತ್ತು ರನ್ನು ಗಳಿಸುವುದು. ಅದನ್ನೊಂದು ಕೊನೆಯ ಬಾರಿ ಪ್ರಯತ್ನಿಸಿ, ವೈಫಲ್ಯವನ್ನು ಒಪ್ಪಿ ವಿದಾಯದೆಡೆ ಹೆಜ್ಜೆ ಹಾಕಿದ್ದಾರೆ ದ್ರಾವಿಡ್.
ಆಸ್ಟ್ರೇಲಿಯಾದಲ್ಲಿ ವೈಫಲ್ಯಗೊಂಡಿದ್ದು ರಾಹುಲ್ ನಿವೃತ್ತಿಗೆ ಕಾರಣವಲ್ಲ. ಅಲ್ಲಿ
ಗೆಲುವು ಕಾಣುವ ತಂಡದ ಸದಸ್ಯನಾಗಬೇಕೆಂಬ ಕನಸನ್ನು ಹೊತ್ತು ತೆರಳಿದ್ದ ದ್ರಾವಿಡ್,
ಅಕಸ್ಮಾತ್ ಭಾರತ ಆ ಸರಣಿ ಗೆದ್ದಿದ್ದರೂ ಅಥವಾ ತಾನು ಸಫಲನಾಗಿದ್ದರೂ ನಿವೃತ್ತಿ
ಘೋಷಿಸುತ್ತಿದ್ದರು. ರಾಹುಲ್‍ನಂತಹ ಶ್ರೇಷ್ಠ ಆಟಗಾರರು ತಮ್ಮ ವಿದಾಯವನ್ನು ಸರಿಯಾಗಿ
ಪ್ಲ್ಯಾನ್ ಮಾಡಿಕೊಂಡಿರುತ್ತಾರೆ.
ಹೆಚ್ಚಿನ ಆಟಗಾರರು ನಿವೃತ್ತಿಯನ್ನು ಮೊದಲೇ ಘೋಷಿಸಿ ಕೊನೆಯ ಪಂದ್ಯವನ್ನು ಆಡುತ್ತಾರೆ. ಆದರೆ ರಾಹುಲ್ ಅದಕ್ಕಾಗಿ ಕಾಯದೇ ನಿವೃತ್ತಿ ಘೋಷಿಸಿರುವುದು ಅವರ ವೃತ್ತಿಪರತೆಗೆ ಸಾಕ್ಷಿ. ನಿವೃತ್ತಿ ಘೋಷಿಸಿ ಇನ್ನೊಂದು ಪಂದ್ಯವನ್ನಾಡುವುದು ರಾಹುಲ್‍ಗೆ ದೊಡ್ಡ ವಿಷಯವೇನಲ್ಲ. ಬಿಸಿಸಿಐ ಕೂಡಾ ಕೊನೆಯ ಪಂದ್ಯವನ್ನಾಡಲು ರಾಹುಲ್‍ಗೆ ಖಂಡಿತ ಅವಕಾಶ ನೀಡುತ್ತದೆ. ಆದರೆ ಅದಕ್ಕಾಗಿ ಕಾಯದೆ ನಿವೃತ್ತಿ ಹೊಂದುತ್ತಿರುವ ರಾಹುಲ್ ನಿಜವಾಗಿಯೂ ಅಭಿನಂದನಾರ್ಹರು. ಬಿಸಿಸಿಐ ದ್ರಾವಿಡ್‍ಗೆ ಅಂತಿಮ ಪಂದ್ಯ ಆಡುವಂತೆ ಕೇಳಿಕೊಳ್ಳಬಹುದು ಮತ್ತು ದ್ರಾವಿಡ್, ಒತ್ತಾಯಕ್ಕೆ ಮಣಿದು ಒಪ್ಪಲೂಬಹುದು. ಹಾಗೆಲ್ಲಾದರೂ ಆದರೆ ಕೊನೆಯ ಬಾರಿ ದ್ರಾವಿಡ್ ಆಟ ಸವಿಯುವ ಅವಕಾಶ ನಮಗೆಲ್ಲಾ ಸಿಗಬಹುದು.
ರಾಹುಲ್ ದ್ರಾವಿಡ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ಸಂತೋಷ ಒಂದೆಡೆಯಾದರೆ, ಇನ್ನು ಅವರ ಟೆಸ್ಟ್ ಮ್ಯಾಚ್ ಆಟ ನೋಡುವ ಅವಕಾಶ ಸಿಗಲಾರದು ಎಂಬ ಬೇಜಾರು ಇನ್ನೊಂದೆಡೆ.
೧೬ ವರ್ಷ ಅದ್ಭುತ ಆಟದ ಪ್ರದರ್ಶನ ನೀಡಿ, ಆನಂದಿಸಲು ಅವಕಾಶ ನೀಡಿದ ರಾಹುಲ್‍ಗೆ ಧನ್ಯವಾದಗಳು.
4 ಕಾಮೆಂಟ್‌ಗಳು:
avaru retire agi nimma rajegalu uliyali mattu charana jastiyagali..
Dravid bagegina nimma chiranthana preethi ee post-nalloo anuraNanagonDide.
ಅಶೋಕ್, ಸುಶ್ರುತ,
ಧನ್ಯವಾದ.
Yes ,you are right.....no reason to watch test cricket anymore!!!!!!!!!
ಕಾಮೆಂಟ್ ಪೋಸ್ಟ್ ಮಾಡಿ