೩೦-೧೨-೨೦೦೮. ಗದಗ ಜಿಲ್ಲೆ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯದ್ದು. ಜಿಲ್ಲೆಯ ತುಂಬಾ ಇರುವ ಪ್ರಾಚೀನ ದೇವಾಲಯಗಳು ಜಿಲ್ಲೆಯ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. ಕಲ್ಯಾಣಿ ಚಾಳುಕ್ಯರು, ಯಾದವರು ಮತ್ತು ಕಳಚೂರ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ವೈಭವವಾಗಿ ಮೆರೆದ ಸ್ಥಳ ಡಂಬಳ, ಈಗೊಂದು ಸಣ್ಣ ಹಳ್ಳಿ. ಇಲ್ಲಿ ಪುರಾತತ್ವ ಇಲಾಖೆ ೨ ದೇವಾಲಯಗಳನ್ನು ಚೆನ್ನಾಗಿ ಕಾಪಾಡಿಕೊಂಡಿದೆ.
ದೊಡ್ಡಬಸಪ್ಪ ದೇವಾಲಯ ತನ್ನದೇ ಆದ ವಿಶಿಷ್ಟ ವಾಸ್ತುಶೈಲಿಯನ್ನು ಹೊಂದಿದೆ. ವೃತ್ತ ಮಾದರಿಯ ದ್ರಾವಿಡ ವಿಮಾನ ಶೈಲಿಯ ಈ ಏಕಕೂಟ ದೇವಸ್ಥಾನ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಶಿವಲಿಂಗ ಸುಮಾರು ೫ ಅಡಿ ಎತ್ತರವಿದೆ. ಮುಖಮಂಟಪದಲ್ಲಿ ನಂದಿಯ ದೊಡ್ಡ ಮೂರ್ತಿಯಿದೆ. ಇಲ್ಲಿನ ನಂದಿ ದೊಡ್ಡ ಆಕಾರದ್ದಾಗಿರುವುದರಿಂದ ಈ ದೇವಾಲಯಕ್ಕೆ ’ದೊಡ್ಡಬಸಪ್ಪ ದೇವಾಲಯ’ ಎಂದು ಹೆಸರು. ಮುಖಮಂಟಪದಿಂದ ನವರಂಗಕ್ಕೆ ಪ್ರವೇಶಿಸುವ ದ್ವಾರದ ಸಮೀಪವೆ ಇನ್ನೊಂದು ನಂದಿಯ ಮೂರ್ತಿಯನ್ನಿಡಲಾಗಿದೆ. ಇದು ಸಣ್ಣದಾಗಿದ್ದು ಎಲ್ಲಿಯೋ ದೊರಕಿದ್ದನ್ನು ಇಲ್ಲಿ ತಂದಿರಿಸಲಾಗಿದ್ದಿರಬಹುದು.
ಗರ್ಭಗುಡಿಯ ದ್ವಾರ ೭ ತೋಳಿನದ್ದಾಗಿದೆ. ನವರಂಗದಲ್ಲಿ ಸುಂದರ ಪ್ರಭಾವಳಿ ಕೆತ್ತನೆಯಿರುವ ನಾಲ್ಕು ಕಂಬಗಳಿವೆ. ದೇವಾಲಯದ ನವರಂಗಕ್ಕೆ ೨ ದ್ವಾರಗಳಿವೆ. ವಿಶೇಷವೆಂದರೆ ಪ್ರಮುಖ ದ್ವಾರಕ್ಕಿಂತ (ನಂದಿ ಇರುವ), ಇನ್ನೊಂದು ದ್ವಾರವೇ ಸುಂದರವಾಗಿದೆ. ನಂದಿ ಇರುವ ದ್ವಾರವನ್ನು ದೇವಾಲಯದೊಳಗೆ ಪ್ರವೇಶಿಸಲು ಬಳಸಲಾಗುತ್ತಿತ್ತೇನೋ. ಆದರೆ ಈಗ ಈ ಇನ್ನೊಂದು ದ್ವಾರವನ್ನು ಅನುಕೂಲತೆಯ ಆಧಾರದಲ್ಲಿ ದೇವಾಲಯದ ಮುಖ್ಯ ದ್ವಾರವನ್ನಾಗಿ ಬಳಸಲಾಗುತ್ತಿದೆ. ಎರಡೂ ದ್ವಾರಗಳು ೭ ತೋಳಿನದಾಗಿದ್ದು ಸುಂದರ ಕೆತ್ತನೆಗಳನ್ನು ಹೊಂದಿವೆ. ಎರಡನೇ ದ್ವಾರಕ್ಕಿರುವ ಮಂಟಪ ಬಹಳ ಸುಂದರವಾಗಿದ್ದು ಇಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ದ್ವಾರಕ್ಕಿರುವ ೨ ಕಂಬಗಳ ಕೆತ್ತನೆಯಂತೂ ಅತ್ಯಾಕರ್ಷಕ.
ನಕ್ಷತ್ರಾಕಾರದ ವಿನ್ಯಾಸ, ವೃತ್ತಾಕಾರದ ಗರ್ಭಗುಡಿ ಹಾಗೂ ವೃತ್ತಾಕಾರದ ಗೋಪುರಗಳ ವಿನ್ಯಾಸ ಬಹಳ ಅಪರೂಪದ್ದು. ನೋಡಲೂ ಅಷ್ಟೇ ಚಂದ. ವೃತ್ತಾಕಾರವಾಗಿ ಗರ್ಭಗುಡಿಯ ಹೊರಭಾಗವನ್ನು ನಿರ್ಮಿಸಲಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಕಂಬಗಳನ್ನು ಬಳಸಲಾಗಿದೆ. ೨೪ ಕಂಬಗಳನ್ನು ಒತ್ತೊತ್ತಾಗಿ ನಿಲ್ಲಿಸಿರುವುದರಿಂದ ಕಂಬಗಳ ನಡುವೆ ಜಾಗ ಕಡಿಮೆ. ಉಳಿದೆಲ್ಲಾ ದೇವಾಲಯಗಳಲ್ಲಿ ೨ ಕಂಬಗಳ ನಡುವಿನ ಜಾಗದಲ್ಲಿ ಕೆತ್ತನೆ ಕಾರ್ಯ ಮಾಡಲು ಅನುಕೂಲವಿರುತ್ತದೆ. ಆದರೆ ಇಲ್ಲಿ ಕಂಬಗಳನ್ನು ಒತ್ತೊತ್ತಾಗಿ ನಿಲ್ಲಿಸಲಾಗಿರುವುದರಿಂದ ಕೆತ್ತನೆಗೆ ಸ್ಥಳಾವಕಾಶ ಕಡಿಮೆ. ಆದರೂ ಅಷ್ಟೇ ಸಣ್ಣ ಜಾಗದಲ್ಲಿ ಕರಾರುವಕ್ಕಾಗಿ ಸುಂದರ ಕೆತ್ತನೆಗಳನ್ನು ಮಾಡಲಾಗಿದೆ. ಈ ಕೆತ್ತನೆಗಳನ್ನು ನೋಡುತ್ತಾ ಗರ್ಭಗುಡಿಗೆ ಹೊರಗಿನಿಂದ ಸುತ್ತು ಹಾಕುವುದೇ ಸಂತೋಷದ ಅನುಭವ. ಗೋಪುರದಲ್ಲಿ ಕೆಲವೆಡೆ ಕೆತ್ತನೆಗಳು ಬಿದ್ದುಹೋಗಿದ್ದು ಹಿಂಭಾಗದ ಕಲ್ಲು ಮಾತ್ರ ಕಾಣುತ್ತಿದೆ.
ದೊಡ್ಡಬಸಪ್ಪ ದೇವಾಲಯದಲ್ಲಿ ಬಳಸಲಾಗಿರುವ ನಕ್ಷತ್ರ ಮಾದರಿಯ ಶೈಲಿ, ನಂತರ ಮುಂದೆ ಹೊಯ್ಸಳ ಆಳ್ವಿಕೆ ಸಮಯದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳಿಗೆ ಸ್ಫೂರ್ತಿ ಎಂದು ನಂಬಲಾಗಿದೆ. ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಸುಮಾರು ಇಸವಿ ೧೧೨೪ರಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಜ್ಜಯ್ಯ ನಾಯಕ ಎಂಬವನು ಈ ದೇವಾಲಯವನ್ನು ನಿರ್ಮಿಸಿದ್ದರಿಂದ ಇದನ್ನು ಮೊದಲು ಅಜ್ಜಮೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು.
ದೊಡ್ಡಬಸಪ್ಪ ದೇವಾಲಯದ ಎದುರಿಗೇ ಸೋಮೇಶ್ವರನ ಗುಡಿಯಿದೆ. ಈ ದೇವಾಲಯ ೨೪ ಕಂಬಗಳ ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ನಂದಿ ನವರಂಗದ ನಟ್ಟನಡುವೆ ಆಸೀನನಾಗಿದ್ದಾನೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಹಾಗೂ ಮೇಲ್ಗಡೆ ಜಾಲಂಧ್ರಗಳ ರಚನೆಯಿದೆ ಮತ್ತು ಗರ್ಭಗೃಹದ ದ್ವಾರ ೭ ತೋಳಿನದ್ದಾಗಿದೆ.
3 ಕಾಮೆಂಟ್ಗಳು:
Wow..! Really its looks great...
Wonderful temple ..
ಉತ್ತರ ಕರ್ನಾಟಕದ ಪ್ರಾಚೀನ ದೇವಾಲಯಗಳ ನಿಮ್ಮ ವರ್ಣನೆ ನನ್ನನ್ನು ಅಲ್ಲಿಗೆ ಹೋಗಲು ಪ್ರೇರೇಪಿಸುತ್ತಿದೆ!!
ರಾಕೇಶ್, ಅರವಿಂದ್
ಪ್ರೋತ್ಸಾಹಕ್ಕೆ ಥ್ಯಾಂಕ್ಸ್.
ಕಾಮೆಂಟ್ ಪೋಸ್ಟ್ ಮಾಡಿ