ಭಾನುವಾರ, ಏಪ್ರಿಲ್ 12, 2009

ಸಿದ್ಧೇಶ್ವರ ದೇವಾಲಯ - ಹಾವೇರಿ


೨೧-೦೬-೨೦೦೮. ಹಾವೇರಿ ನಗರದ ಮಧ್ಯದಲ್ಲೇ ವಿಶಾಲ ಉದ್ಯಾನದ ನಡುವೆ ೧೧ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸಿದ್ಧೇಶ್ವರ ದೇವಾಲಯವಿದೆ. ಪುರಾತತ್ವ ಇಲಾಖೆ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ೩ ದ್ವಾರಗಳುಳ್ಳ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ಸಣ್ಣ ಏಕಕೂಟ ದೇವಾಲಯವಿದು.


ಮುಖಮಂಟಪದಲ್ಲಿ ೧೪ ಕಂಬಗಳಿವೆ. ನವರಂಗದಲ್ಲಿ ನಾಲ್ಕು ಸುಂದರ ಕಂಬಗಳಿವೆ. ಮುಖಮಂಟಪ ಮತ್ತು ನವರಂಗದ ನಡುವೆ ಗಣೇಶನ ಸುಂದರ ವಿಗ್ರಹವಿದೆ. ಛಾವಣಿಯಲ್ಲಿ ಎಲ್ಲೆಡೆ ಕಮಲಗಳ ಕೆತ್ತನೆಯಿದೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ ಮತ್ತು ನಂದಿಯ ಕಲಾತ್ಮಕ ಮೂರ್ತಿಯಿದೆ. ಗರ್ಭಗುಡಿಯಲ್ಲಿ ಸಿಮೆಂಟಿನ ಪಾಣಿಪೀಠವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ! ಇದರ ಮೇಲೆ ಸಣ್ಣ ಶಿವಲಿಂಗವನ್ನಿರಿಸಲಾಗಿದೆ. ಇದು ಮೂಲ ಶಿವಲಿಂಗವಿರಲಾರದು. ಸಿದ್ಧೇಶ್ವರನನ್ನು ನಾಗರಾಜ ಸದಾ ಕಾಯುತ್ತಾ ಇರುವಂತೆ ನಾಗನ ಹೆಡೆಯನ್ನು ಶಿವಲಿಂಗದ ಬಳಿ ಇರಿಸಲಾಗಿದೆ.


ಈ ದೇವಾಲಯದ ಆಕರ್ಷಣೆಯೆಂದರೆ ಸುಂದರ ಮತ್ತು ಕಲಾತ್ಮಕ ಕೆತ್ತನೆಯಿರುವ ಗೋಪುರ. ಪಶ್ಚಿಮ ಚಾಳುಕ್ಯ ಕಲೆಯ ಅಷ್ಟೂ ಗುಣಗಳನ್ನು ಈ ಒಂದು ಗೋಪುರದಲ್ಲೇ ಕಾಣಬಹುದು. ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ಎಲ್ಲಾ ಚಾಲುಕ್ಯ ದೇವಾಲಯಗಳಂತೆ ಇದು ಸೂರ್ಯ ಉದಯಿಸುವ ದಿಕ್ಕಿಗೆ ಮುಖ ಮಾಡಿಕೊಂಡಿಲ್ಲ. ಬದಲಾಗಿ ಪಶ್ಚಿಮ ದಿಕ್ಕಿಗೆ ಮುಖಮಾಡಿಕೊಂಡಿರುವಂತೆ ನಿರ್ಮಿಸಲಾಗಿದೆ.


ದೇವಾಲಯದ ಹೊರಗೋಡೆಯ ಮೇಲೆಲ್ಲಾ ಸುಂದರ ಕೆತ್ತನೆಗಳು. ಅಲ್ಲಿರುವ ಪುರಾತತ್ವ ಇಲಾಖೆಯ ಸಿಬ್ಬಂದಿಯ ವಿರೋಧದ ನಡುವೆಯೂ ಒಂದಷ್ಟು ಚಿತ್ರಗಳನ್ನು ತೆಗೆದೆ. ಸಿದ್ಧೇಶ್ವರನ ದೇವಾಲಯದ ಪಾರ್ಶ್ವದಲ್ಲೇ ಉಗ್ರನರಸಿಂಹನ ಗುಡಿಯಿದೆ. ಉಗ್ರನರಸಿಂಹ ಹಿರಣ್ಯಕಷಿಪುವಿನ ಹೊಟ್ಟೆ ಬಗೆಯುವ ಕೆತ್ತನೆಯ ಮೂರ್ತಿಯಿದೆ. ಅಲ್ಲಲ್ಲಿ ಸಿಕ್ಕಿರುವ ಭಗ್ನಗೊಂಡಿರುವ ಹಲವಾರು ಮೂರ್ತಿಗಳನ್ನು ಉಗ್ರನರಸಿಂಹನ ಸುತ್ತಲೂ ಇರಿಸಲಾಗಿದೆ.

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಸುಂದರ ಫೋಟೋಗಳು, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

Rakesh Holla ಹೇಳಿದರು...

Chennagide...

ಪಾಚು-ಪ್ರಪಂಚ ಹೇಳಿದರು...

ರಾಜೇಶ್ ಅವರೇ,

ಎಷ್ಟೊಂದು ಪ್ರಭುದ್ದತೆ ನಿಮ್ಮ ಪ್ರವಾಸ ಕಥನದಲ್ಲಿ...! ಎಲ್ಲ ವಿವರಗಳನ್ನೂ ಕಲೆ ಹಾಕಿ, ಉತ್ತಮವಾಗಿ ನಿರೂಪಿಸಿದ್ದೀರಿ..
ಚಂದದ ಫೋಟೋಗಳು..ಧನ್ಯವಾದಗಳು..

ಪ್ರಶಾಂತ್ ಭಟ್

ರಾಜೇಶ್ ನಾಯ್ಕ ಹೇಳಿದರು...

ಗುರು, ರಾಕೇಶ್, ಪ್ರಶಾಂತ್,
ಥ್ಯಾಂಕ್ಸ್!