ಬುಧವಾರ, ಡಿಸೆಂಬರ್ 03, 2008

ಕಲ್ಲೇಶ್ವರ ದೇವಾಲಯ - ಬೇತೂರು


೦೮-೦೩-೨೦೦೮.

ಬೇತೂರಿನಲ್ಲೊಂದು ಶಿವ ದೇವಸ್ಥಾನವಿದೆ ಎಂದು ಗೆಳೆಯ ನಿರಂಜನ ಪಾಟೀಲನೊಂದಿಗೆ ಹುಡುಕಿಕೊಂಡು ಹೊರಟರೆ ಆ ಊರಿನ ಯುವಕರಿಗೇ ಗೊತ್ತಿಲ್ಲದ ಪರಿಸ್ಥಿತಿ. ನಂತರ ಊರ ಹಿರಿಯರೊಬ್ಬರು ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರಲ್ಲದೆ ಅವರೇ ದೇವಸ್ಥಾನದ ಒಳಗೆಲ್ಲಾ ತೋರಿಸಿದರು. ನಮ್ಮ ಅದೃಷ್ಟಕ್ಕೆ ದೇವಸ್ಥಾನದ ಚಾವಿ ಈ ಹಿರಿಯರಲ್ಲೇ ಇತ್ತು.


ಇದು ಬೇತೂರಿನ ಕಲ್ಲೇಶ್ವರ ದೇವಸ್ಥಾನ. ಊರಿನವರು ಸುಣ್ಣ ಬಳಿದು ದೇವಾಲಯದ ಅಂದವನ್ನು ಸಾಧಾರಣ ಮಟ್ಟಕ್ಕೆ ಇಳಿಸಿದ್ದಾರೆ. ಪಾಂಡ್ಯ ದೊರೆ ತ್ರಿಭುವನ ಮಲ್ಲನ ರಾಜಧಾನಿಯಾಗಿತ್ತು ಬೇತೂರು. ಸುಂದರ ಪರಿಸರದಲ್ಲಿ ನೆಲೆಗೊಂಡಿರುವ ಕಲ್ಲೇಶ್ವರ, ಊರವರಿಂದ ದಿನಾಲೂ ಪೂಜಿಸಲ್ಪಡುತ್ತಾನೆ. ದೇವಾಲಯವನ್ನು ದಿನವೂ ಸ್ವಚ್ಛಗೊಳಿಸಲಾಗುತ್ತದೆ.


ಯಾರಿಂದ ನಿರ್ಮಿಸಲ್ಪಟ್ಟಿತು ಎಂಬ ಮಾಹಿತಿಯಿಲ್ಲ ಮತ್ತು ಊಹೆ ಮಾಡುವುದೂ ಕಷ್ಟದ ಕೆಲಸ. ಈ ಏಕಕೂಟ ದೇವಾಲಯದ ಗೋಪುರ ಬಹಳ ಸಣ್ಣದಾಗಿದೆ. ಗರ್ಭಗುಡಿ, ಅಂತರಾಳ, ೪ ಕಂಬಗಳ ನವರಂಗ/ಸುಖನಾಸಿ ಮತ್ತು ೧೬ ಕಂಬಗಳ ಮುಖಮಂಟಪ. ನಂದಿ ಅಂತರಾಳದಲ್ಲೇ ಆಸೀನನಾಗಿದ್ದಾನೆ.


ಗರ್ಭಗುಡಿಯಲ್ಲಿ ಪಾಣಿಪೀಠ ಸುಮಾರು ೨ ಅಡಿ ಎತ್ತರವಿದ್ದು, ಅದರ ಮೇಲೊಂದು ಸುಂದರ ಶಿವಲಿಂಗ. ಊರವರೇ ಶಿವಲಿಂಗಕ್ಕೆ ಮುಖವನ್ನೊಂದು ಮಾಡಿದ್ದು, ಈ ಮುಖದಿಂದ ಲಿಂಗವನ್ನು ಅಲಂಕರಿಸಿಯೇ ಪೂಜೆ ನಡೆಯುತ್ತದೆ. ಅಂತರಾಳದಲ್ಲೊಂದು ದೇವಿಯ ಸುಂದರ ಕಲ್ಲಿನ ಮೂರ್ತಿಯಿದೆ. ನವರಂಗದ ಛಾವಣಿಯಲ್ಲಿ ನಾಲ್ಕು ಕಂಬಗಳ ನಡುವಿನ ಜಾಗವನ್ನು ೯ ಚೌಕಗಳನ್ನಾಗಿ ವಿಂಗಡಿಸಿ, ಪ್ರತಿಯೊಂದರಲ್ಲೂ ಸುಂದರ ಕಲಾಕೃತಿಗಳನ್ನು ಕೆತ್ತಲಾಗಿದೆ. ಇವೆಲ್ಲಾ ಏನೆಂದು ತಿಳಿಯಲಿಲ್ಲ. ಒಂದೆರಡನ್ನು ಹಾಳುಮಾಡಲಾಗಿತ್ತು. ಯಾರೋ ಅದನ್ನು ನಿಧಿ ಸಿಗಬಹುದು ಎಂದು ಎಳೆದು ತೆಗೆದಿದ್ದರು. ಹೊರಗೆ ಬಿದ್ದ ಆ ತುಂಡುಗಳನ್ನು ಮತ್ತೆ ಹಾಗೇ ಜೋಡಿಸಿದ್ದೇವೆ ಎಂದು ಊರಿನವರೊಬ್ಬರು ತಿಳಿಸಿದರು. ಉಳಿದ ಚೌಕಗಳಲ್ಲಿ ಸುಂದರ ಕೆತ್ತನೆ. ಆದರೆ ಕಪ್ಪು ಬಣ್ಣ ಮೆತ್ತಿ ಎಲ್ಲವೂ ಹಾಳಾಗುತ್ತಿವೆ. ದೇವಾಲಯದ ನೆಲಕ್ಕೆ ’ರೆಡ್ ಆಕ್ಸೈಡ್’ ಸಾರಿ ’ನವೀಕರಣ’ದ ಪ್ರಯತ್ನ ಮಾಡಲಾಗಿದೆ.


ದೇವಾಲಯದ ಬದಿಯಲ್ಲೇ ಸಣ್ಣ ಕಾಲುವೆಯೊಂದಿದ್ದು ಜಲಕ್ರೀಡೆಯಾಡಲು ಸೂಕ್ತಸ್ಥಳ. ಸುತ್ತಲೂ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಇನ್ನೊಂದೆಡೆ ತೋಟಗಳಲ್ಲಿ ತೆಂಗು ಬಾಳೆ ಗಿಡಗಳು. ಇವೆಲ್ಲದರ ನಡುವೆ ಕಲ್ಲೇಶ್ವರ.


ಆ ಸುಂದರ ಪರಿಸರದಲ್ಲಿ ಹಳ್ಳಿಯ ಹಿರಿಯರೊಂದಿಗೆ ಒಂದಷ್ಟು ಹರಟೆ ಹೊಡೆದು ದಾವಣಗೆರೆಗೆ ಹಿಂತಿರುಗಬೇಕಾದರೆ ಸೂರ್ಯ ಸಂಜೆಯ ಕೆಂಪು ರಂಗನ್ನು ಪಡೆದಿದ್ದ.

5 ಕಾಮೆಂಟ್‌ಗಳು:

ಬಾನಾಡಿ ಹೇಳಿದರು...

ಸ್ಥಳ ಸರಳ ಸುಂದರವಾಗಿದೆ. ಅದಕ್ಕೇನೋ ಎಲ್ಲರಿಗೂ ಗೊತ್ತಿಲ್ಲದಿದ್ದುದು.
ಒಲವಿನಿಂದ
ಬಾನಾಡಿ

ಹಳ್ಳಿಕನ್ನಡ ಹೇಳಿದರು...

ಅಯ್ಯೋ, ಬೇತೂರಿಗೆ ಸುಮಾರು ಬಾರಿ ಹೋಗಿದ್ದರೂ ನನಗೆ ಈ ದೇವಾಲಯದ ಮಾಹಿತಿ ಇರಲಿಲ್ಲ. ಥ್ಯಾಂಕ್ಸ್ ರಾಜೇಶ್.
- ಮಂಜುನಾಥ ಸ್ವಾಮಿ

ರಾಜೇಶ್ ನಾಯ್ಕ ಹೇಳಿದರು...

ಬಾನಾಡಿ,
ಸ್ಥಳದ ಅಂದದ ಬಗ್ಗೆ ಎರಡು ಮಾತಿಲ್ಲ. ನೀವಂದಂತೆ ಸರಳವಾಗಿರುವುದೇ ಇದರ ಗೌಪ್ಯತೆಗೆ ಕಾರಣವಿರಬಹುದು.

ಮಂಜುನಾಥ,
ಧನ್ಯವಾದ. ಮುಂದಿನ ಸಲ ಬೇತೂರಿಗೆ ಹೋದಾಗ ಕಲ್ಲೇಶ್ವರನಿಗೆ ನಮಸ್ಕಾರ ಹಾಕಿ ಬರುವಿರಂತೆ.

Srik ಹೇಳಿದರು...

Thanks for introducing such little known places. I appreciate your interest in discovering and presenting these information.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಥ್ಯಾಂಕ್ಸ್.