ದಿನಾಂಕ: ೨೦೦೫ ಜುಲಾಯಿ ೩೧.
ಮೊದಲೊಮ್ಮೆ ಗೋಕಾಕ ಮತ್ತು ಗೊಡಚಿನಮಲ್ಕಿ ಜಲಧಾರೆಗಳಿಗೆ ಭೇಟಿ ನೀಡಿದ್ದರೂ, ನೀರಿನ ಪ್ರಮಾಣ ಕಡಿಮೆಯಿದ್ದುದರಿಂದ ಮತ್ತೊಮ್ಮೆ ಭೇಟಿ ನೀಡಬೇಕೆಂದಿದ್ದೆ. ಅಂತೆಯೇ ಧರ್ಮಸ್ಥಳ - ಅಥಣಿ ಬಸ್ಸು ನನ್ನನ್ನು ಗೋಕಾಕ ಬಸ್ಸು ನಿಲ್ದಾಣದಲ್ಲಿ ಇಳಿಸಿದಾಗ ಮುಂಜಾನೆ ೬ರ ಸಮಯ. ೧೩ ತಾಸಿನ ಬಸ್ಸು ಪ್ರಯಾಣದಿಂದ ಅಯಾಸಗೊಂಡಿದ್ದರೂ ವಿಶ್ರಾಂತಿ ಪಡೆಯಲು ನನ್ನಲ್ಲಿ ಸಮಯವಿರಲಿಲ್ಲ. ಮರಳಿ ೭ಕ್ಕೆ ಬಸ್ಸು ನಿಲ್ದಾಣಕ್ಕೆ ಬಂದಾಗ ಗೊಡಚಿನಮಲ್ಕಿಗೆ ಬಸ್ಸು ರೆಡಿ ಇತ್ತು. ಆ ಬಸ್ಸು ಹತ್ತಿದೆನಾದರೂ, ಅದೇಕೋ ಗೋಕಾಕ ಜಲಧಾರೆ ಮೊದಲು ನೋಡಿ ನಂತರ ಗೊಡಚಿನಮಲ್ಕಿಗೆ ತೆರಳೋಣವೆಂದೆನಿಸಿದಾಗ, ’ಫಾಲ್ಸ’ ಎಂದು ಗೋಕಾಕ ಜಲಧಾರೆಗೆ ಟಿಕೇಟು ಪಡೆದೆ.
ಮೊದಲ ಸಲ ಬಂದಾಗ ಸಮಾನ ಅಂತರದಲ್ಲಿ ೩ ಕವಲುಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರು ಧುಮುಕುತ್ತಿತ್ತು. ಆದರೆ ಈಗ ಜಲಧಾರೆಯ ಅಗಲಕ್ಕೆ ಒಂದೇ ಕವಲು! ದಷ್ಟಪುಷ್ಟವಾಗಿ ಬೆಳೆದ ಆನೆಯಂತೆ ಕಾಣುತ್ತಿದ್ದ ಗೋಕಾಕ ಜಲಧಾರೆ ಭೋರ್ಗರೆಯುತ್ತಿತ್ತು. ಅಷ್ಟು ಅಗಾಧ ಪ್ರಮಾಣದಲ್ಲಿ ನೀರು ಧುಮುಕುತ್ತಿದ್ದರೂ ಸದ್ದು ಮಾತ್ರ ಬಹಳ ಕಡಿಮೆ. ಕಣಿವೆ ತೆರೆದ ಜಾಗದಲ್ಲಿರುವುದರಿಂದ ಸದ್ದು ಕಡಿಮೆಯಿರಬಹುದು.
ಮೇಲೆ ಹಿಡ್ಕಲ್ ಅಣೆಕಟ್ಟಿನಲ್ಲಿ ಒಂದು ಗೇಟನ್ನು ತೆರೆದಿರಲಿಲ್ಲ. ಅದನ್ನೂ ತೆರೆದಿದ್ದರೆ ಜಲಧಾರೆಯ ಅಗಲ ಇನ್ನಷ್ಟು ವಿಸ್ತಾರಗೊಳ್ಳುತ್ತಿತ್ತು. ನಂತರ ಬ್ರಿಟೀಷ್ ಕಾಲದ ಸೇತುವೆಯ ಮೇಲೆ ತೆರಳಿದೆ. ಸೇತುವೆಯ ಅರ್ಧಕ್ಕೆ ಬಂದಾಗ, ಬೀಸುತ್ತಿದ್ದ ಗಾಳಿಗೆ ಸೇತುವೆ ಜೋರಾಗಿ ಓಲಾಡಲು ಶುರುವಾಯಿತು. ಕೆಳಗೆ ರಭಸದಿಂದ ಹರಿಯುತ್ತಿದ್ದ ಘಟಪ್ರಭಾ ಮತ್ತು ಸ್ವಲ್ಪ ಮುಂದಕ್ಕೆ ಅದು ಧುಮುಕುವ ರುದ್ರ ದೃಶ್ಯ ನೋಡುತ್ತಾ ಹೆದರಿ ಅಲ್ಲೇ ಸೇತುವೆಯ ಕಂಬವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತುಬಿಟ್ಟೆ. ನನ್ನ ಪಾಡು ನೋಡಿ ಅಲ್ಲಿನ ಜನರಿಗೆ ನಗು. ’ಏನೂ ಅಗೂದಿಲ್ರೀ...ಗಾಳಿಗೆ ಹಂಗೆ ಅಗ್ತೈತಿ...’ ಎಂದು ಧೈರ್ಯದ ಮಾತುಗಳನ್ನು ಹೇಳಿದರು. ಗಾಳಿ ಸ್ವಲ್ಪ ಕಡಿಮೆ ಆದ ಕೂಡಲೇ ಒಂದೆರಡು ಫೋಟೋ ತೆಗೆದು ಕೂಡಲೇ ಹಿಂತಿರುಗಿದೆ.
ಗೊಡಚಿನಮಲ್ಕಿಯಲ್ಲಿಳಿದು ೩ ಕಿ.ಮಿ. ದೂರದ ಜಲಧಾರೆಯತ್ತ ನಡೆಯಬೇಕಾದರೆ ದಾರಿಯುದ್ದಕ್ಕೂ ವಾಹನಗಳು, ಬೈಕುಗಳು, ಸೈಕಲ್ಲುಗಳು., ನನ್ನಂತೆ ನಡೆದು ಹೋಗುವವರು...ಅಬ್ಬಬ್ಬಾ! ಎಷ್ಟು ಜನರು. ಜಲಧಾರೆಯ ಸಮೀಪವಂತೂ ಸಂತೆ. ೨ ಸಾವಿರದಷ್ಟು ಜನರು ಅಲ್ಲಿ ತುಂಬಿದ್ದರೇನೋ. ’ಛೇ, ಬೆಳಗ್ಗೆ ನೇರವಾಗಿ ಇಲ್ಲೇ ಬರಬೇಕಿತ್ತು’ ಎಂದು ಪರಿತಪಿಸಿದೆ. ಬೆಳಗ್ಗಿನ ಬಸ್ಸಲ್ಲಿ ನೇರವಾಗಿ ಗೊಡಚಿನಮಲ್ಕಿಗೇ ಬಂದಿದ್ದರೆ ಅಷ್ಟು ಮುಂಜಾನೆ ಇಲ್ಲಿ ಯಾರೂ ಇರುತ್ತಿರಲಿಲ್ಲ. ಜಲಧಾರೆಯ ಅಂದವನ್ನು ಸಂಪೂರ್ಣವಾಗಿ ಆನಂದಿಸಬಹುದಿತ್ತು.
ಮಾರ್ಕಾಂಡೇಯ ನದಿ ರೌದ್ರಾವತಾರವನ್ನು ತಾಳಿತ್ತು. ಮೇಲ್ಭಾಗದಲ್ಲಿ ಶಿರೂರು ಅಣೆಕಟ್ಟು ತುಂಬಿದ್ದರಿಂದ ಇಲ್ಲಿ ನೀರೇ ನೀರು. ಮೊದಲ ಬಾರಿಗೆ ತೆರಳಿದ್ದಾಗ ಕಂಡ ದೃಶ್ಯಕ್ಕೂ ಈಗ ಕಾಣುತ್ತಿರುವ ದೃಶ್ಯಕ್ಕೂ ಅಜಗಜಾಂತರ ವ್ಯತ್ಯಾಸ. ಎತ್ತರ ಹೆಚ್ಚೆಂದರೆ ೫೦ ಅಡಿ ಅಷ್ಟೇ. ಅದೂ ಈ ಪರಿ ನೀರು ಹರಿಯುವಾಗ ೩೦ ಅಡಿಯಷ್ಟಿದೆ ಎಂದೂ ಅನಿಸುವುದಿಲ್ಲ! ಈ ಜಲಧಾರೆಯ ಅಂದವಿರುವುದೇ ಇದರ ಅಗಲದಲ್ಲಿ. ಮುಂದೆ ಸಿಂಗಾಪುರ ಎಂಬ ಹಳ್ಳಿಯ ಬಳಿ ಮಾರ್ಕಾಂಡೇಯ ನದಿಯು ಘಟಪ್ರಭಾ ನದಿಯನ್ನು ಸೇರುತ್ತದೆ.
ಜನರಾಶಿಯ ನಡುವೆ ಅಲ್ಲಲ್ಲಿ ನುಸುಳುತ್ತಾ ಒಂದಷ್ಟು ಚಿತ್ರಗಳನ್ನು ತೆಗೆದು ಅಲ್ಲಿಂದ ಗೋಕಾಕಕ್ಕೆ ಹಿಂತಿರುಗಿ, ಬಸ್ಸಿನಲ್ಲಿ ಧಾರವಾಡಕ್ಕೆ ಹೊರಟೆ. ದಾರಿಯಲ್ಲಿ ಸೌಂದತ್ತಿ ಸಮೀಪ ನವಿಲುತೀರ್ಥದಲ್ಲಿ ಮಲಪ್ರಭಾ ನದಿಗೆ ನಿರ್ಮಿಸಿದ ಅಣೆಕಟ್ಟು ಮತ್ತು ಹಿನ್ನೀರಿನ ದೃಶ್ಯ. ಹಿನ್ನೀರಗುಂಟ ಬಸ್ಸು ಸಾಗುತ್ತಿತ್ತು. ಮತ್ತದೇ ಮುಳುಗಡೆ, ಸ್ಥಳಾಂತರ, ಪರಿಹಾರ, ಇತ್ಯಾದಿಗಳ ಚಿತ್ರಣ ಮನಸ್ಸಿನಲ್ಲಿ ತೇಲಲು ಆರಂಭಿಸಿದವು.
5 ಕಾಮೆಂಟ್ಗಳು:
ಲೇಖನ ಹಾಗೂ ಚಿತ್ರಗಳು ತುಂಬಾ ಚೆನ್ನಾಗಿದೆ. ಮೂರನೆಯ ಚಿತ್ರವಂತೂ ಸೂಪರ್.
ಲೇಖನ ಶಾರ್ಟ್ ಅಂಡ್ ಸ್ವೀಟ್ ಆಗಿದೆ. ಚಿತ್ರಗಳು ಚೆನ್ನಾಗಿವೆ.
ಫೋಟೋಗಳು ಚೆನ್ನಾಗಿವೆ. pop up ಆಗುತ್ತಿಲ್ಲ. ದೊಡ್ಡ ಇಮೇಜ್ ನೋಡಬಹುದಿತ್ತು.
- ಮಂಜುನಾಥ ಸ್ವಾಮಿ
ತುಂಬಾ ಸುಂದರವಾದ ಫೋಟೊಗಳು ಹಾಗು ಉತ್ತಮ ವಿವರಣೆ ನೀಡಿದ್ದೀರಿ.
ಅರವಿಂದ್, ಮಂಜುನಾಥ್, ಶರಶ್ಚಂದ್ರ, ಸುನಾಥ್
ಧನ್ಯವಾದಗಳು.
ಅನಾಮಿಕ,
ತಮ್ಮ ಹೆಸರನ್ನೇ ತಿಳಿಸಿಲ್ಲವಲ್ಲ ತಾವು...
ಕಾಮೆಂಟ್ ಪೋಸ್ಟ್ ಮಾಡಿ