ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಗುಳೇದಗುಡ್ಡ. ಇಲ್ಲೊಂದು ಜಲಧಾರೆಯಿರುವುದು ಸುಮಾರು ೩ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಯೋ. ರಾಜನಾಳ ಎಂಬವರು ಕನ್ನಡಪ್ರಭದಲ್ಲಿ ಬರೆದಿದ್ದ ಲೇಖನದಿಂದ ನನಗೆ ತಿಳಿದುಬಂದಿತ್ತು. ಆದರೆ ಇದು ಮಳೆ ಬಿದ್ದಾಗ ಮಾತ್ರ ಇರುವ ಜಲಧಾರೆಯೆಂದೂ ಮಲ್ಲಿಕಾರ್ಜುನ ಬರೆದಿದ್ದರು. ಉಡುಪಿಯಲ್ಲಿ ಕುಳಿತು ದೂರದ ಗುಳೇದಗುಡ್ಡದಲ್ಲಿ ಮಳೆ ಯಾವಾಗ ಬೀಳುವುದು ಎಂದು ತಿಳಿದುಕೊಳ್ಳುವುದು ಕಷ್ಟಕರವಾದರೂ ಮಳೆಗಾಲದ ಆರಂಭದಲ್ಲಿ ಸ್ವಲ್ಪ ಗಮನ ಆ ಕಡೆ ಇರುತ್ತಿತ್ತು. ಈ ವರ್ಷ ಮೇ ಅಂತ್ಯದಲ್ಲಿ ಗುಳೇದಗುಡ್ಡದಲ್ಲಿ ಭಾರಿ ಮಳೆ.
ಕಳೆದ ತಿಂಗಳು ಅಂದರೆ ಜೂನ್ ೩೦ ೨೦೦೭, ಶನಿವಾರದಂದು ಮಂಗಳೂರಿನಿಂದ ಕೂಡಲಸಂಗಮಕ್ಕೆ ಹೊರಟಿದ್ದ ಬಸ್ಸಿನಲ್ಲಿ ಬದಾಮಿಗೆ ಟಿಕೇಟು ಪಡೆದು ಉಡುಪಿಯಿಂದ ಸಂಜೆ ೭.೩೦ಕ್ಕೆ ಹೊರಟೆ. ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಬಸ್ಸು ಹೊನ್ನಾವರ ದಾಟುತ್ತಿದ್ದಂತೆ ಗೆಳೆಯ ಗಿರೀಶ ಭಟ್ಟನ ಫೋನು. ನಾನು ಬದಾಮಿಗೆ ಹೋಗುತ್ತಿರುವುದು ತಿಳಿದ ಕೂಡಲೇ ಹುಬ್ಬಳ್ಳಿಯಲ್ಲಿಳಿದು ಮನೆಗೆ ಬರಬೇಕೆಂದು ಒತ್ತಾಯ ಮಾಡತೊಡಗಿದ. ಹೀಗೆ ಪ್ರಯಾಣ ಅಥವಾ ಚಾರಣದಲ್ಲಿರುವಾಗ ಪರಿಚಯದವರ, ನೆಂಟರಿಷ್ಟರ ಅಥವಾ ಗೆಳೆಯರ ಮನೆಗೆ ನಾನೆಂದೂ ಭೇಟಿ ನೀಡುವುದಿಲ್ಲವಾದರೂ ಆತನ ಒತ್ತಾಯಕ್ಕೆ ಮಣಿದು ಮುಂಜಾನೆ ೩.೩೦ಕ್ಕೆ ಹುಬ್ಬಳ್ಳಿಯಲ್ಲಿಳಿದು ಗಿರೀಶನ ಮನೆಗೆ ತೆರಳಿದೆ.
ಆದಿತ್ಯವಾರ ಮುಂಜಾನೆ ಹುಬ್ಬಳ್ಳಿ ಹಳೇ ಬಸ್ಸು ನಿಲ್ದಾಣದಲ್ಲಿ ೩೦ ನಿಮಿಷ ಸರಕಾರಿ ಬಸ್ಸಿಗಾಗಿ ಕಾದರೂ ಯಾವುದೇ ಬಸ್ಸು ಬಂದಿರಲಿಲ್ಲ. ಕಡೆಗೆ ಬಾಗಲಕೋಟೆಗೆ ಹೊರಟಿದ್ದ ಖಾಸಗಿ ಬಸ್ಸು 'ಚನ್ನಮ್ಮಾ'ದಲ್ಲಿ 'ಕುಳಗೇರಿ ಕ್ರಾಸ್'ಗೆ ಟಿಕೇಟು ಪಡೆದು ಕುಳಿತೆ. ೯ಕ್ಕೆ ಹುಬ್ಬಳ್ಳಿ ಬಿಟ್ಟ ಚನ್ನಮ್ಮಾ ನವಲಗುಂದ, ನರಗುಂದ ಮಾರ್ಗವಾಗಿ ೧೧ಕ್ಕೆ ಕುಳಗೇರಿ ಕ್ರಾಸ್ ತಲುಪಿತು.
ಕುಳಗೇರಿ ಕ್ರಾಸಿನಿಂದ ಬದಾಮಿಗೆ ಮುಂದಿನ ಬಸ್ಸು ಇನ್ನೂ ಅರ್ಧ ಗಂಟೆ ನಂತರ. ಅಲ್ಲೇ ಅದಾಗಲೇ ೧೮ ಜನರು ಕೂತಿದ್ದ ರಿಕ್ಷಾದ ನಿರ್ವಾಹಕ 'ಬದಾಮಿ ಬದಾಮಿ' ಎಂದು ಅರಚುತ್ತಿದ್ದ. ಚೆನ್ನಾಗಿ ಬಟ್ಟೆ ಧರಿಸಿದ್ದ ನನಗೆ ರಾಜ ಮರ್ಯಾದೆ ಕೊಟ್ಟು 'ಬರ್ರೀ ಸರ, ೨೫ ನಿಮಿಷದೊಳಗ ಬದಾಮಿ ಮುಟ್ಟಸ್ತೀನಿ' ಎಂದು ಒಳಗೆ ಜಾಗ ಮಾಡಿಸಿ ಕೂರಿಸಿದ. ಅರ್ಧ ಗಂಟೆ ತಗೊಂಡ ಎನ್ನಿ ೨೧ಕಿಮಿ ದೂರವಿದ್ದ ಬದಾಮಿ ತಲುಪಲು.
ಬಸ್ಸು ನಿಲ್ದಾಣದಲ್ಲಿ ಗುಳೇದಗುಡ್ಡಕ್ಕೆ ಬಸ್ಸಿನ ಬಗ್ಗೆ ವಿಚಾರಿಸಿದರೆ, 'ಈಗಷ್ಟೆ ಹೋತಲ್ರೀ...ಇನ್ನಾ ಲೇಟ್ ಐತ್ರಿ' ಎಂದ ಅಲ್ಲಿನ ನಿಯಂತ್ರಣಾಧಿಕಾರಿ ತನ್ನ ಗಡ್ಡವನ್ನು ಸವರುತ್ತಾ. ಸ್ವಲ್ಪ ಹೊತ್ತು ಕಾದು ನಂತರ 'ಗುಳೇಗುಡ್ಡ...ಗುಳೇಗುಡ್ಡ' ಎಂದು 'ದ'ವನ್ನು ನುಂಗಿ ಒದರುತ್ತಿದ್ದ ಯುವಕ ಪಾಂಡುವಿನ ಟೆಂಪೋ ಬಳಿ ತೆರಳಿದೆ. ಎಷ್ಟು ಹೊತ್ತು ಬೇಕಪ್ಪಾ ನಿಂಗೆ ಗುಳೇದಗುಡ್ಡಕ್ಕೆ ಎಂದು ಕೇಳಲು ಪಾಂಡು, 'ಓನ್ಲೀ ಫಾರ್ಟಿ ಫಾಯಿವ್ ಮಿನಿಟ್ಸರೀ ಸರ' ಎಂದ. 'ಮಸ್ತ್ ಇಂಗ್ಲೀಷ್ ಮಾತಾಡ್ತಿಯಲ್ಲಾ...' ಎಂದು ನಾನು ಹೊಗಳಲು, ಎಲೆ ಅಡಿಕೆ ಜಗಿಯುತ್ತಿದ್ದ ಬಾಯಿಯನ್ನು ಅಗಲಿಸಿ ಕೆಂಪು ಹಲ್ಲುಗಳನ್ನು ಪ್ರದರ್ಶಿಸಿ ನಾಚಿಕೆಯ ನಗು ನಕ್ಕ ಪಾಂಡು.
ಗುಳೇದಗುಡ್ಡದಿಂದ ೩ಕಿಮಿ ದೂರದಲ್ಲಿರುವ ಕೋಟೆಕಲ್ಲು ಎಂಬಲ್ಲಿ ಒಂದೆರಡು ಕಿಮಿ ದೂರ ಬೆಟ್ಟದ ಬುಡಕ್ಕೆ ತೆರಳಿ ನಂತರ ಅರ್ಧ ಗಂಟೆ ನಡೆದರೆ ಕೋಟೆಕಲ್ ದಿಡುಗು. ಈ ಭಾಗದಲ್ಲಿ ಜಲಪಾತಕ್ಕೆ 'ದಿಡುಗು' ಎನ್ನುತ್ತಾರೆ. ಬದಾಮಿಯಿಂದ ಗುಳೇದಗುಡ್ಡಕ್ಕೆ ತೆರಳುವ ಹಾದಿಯಲ್ಲೇ ಕೋಟೆಕಲ್ಲು ಸಿಗುತ್ತದಾದರೂ, ನಾನು ಗುಳೇದಗುಡ್ಡ ಬಸ್ಸು ನಿಲ್ದಾಣದ ಬಳಿ ಇಳಿದು ಆಟೋವೊಂದರಲ್ಲಿ ಕೋಟೆಕಲ್ಲಿನತ್ತ ತೆರಳಿದೆ. ಊರಿನೊಳಗೆ ತಿರುವು ಪಡೆದು ಸ್ವಲ್ಪ ಮುಂದೆ ತೆರಳಿದಾಗ ಅಲ್ಲೊಂದಷ್ಟು ಹುಡುಗರು ನಿಂತಿದ್ದರು. ಅವರೆಲ್ಲಾ ಕೋಟೇಕಲ್ಲಿನವರೇ ಆಗಿದ್ದು ದಿಡುಗು ನೋಡಲು ತೆರಳಿ ಅಲ್ಲೇ ಮಧ್ಯಾಹ್ನದ ಊಟ ಮಾಡುವ ಪ್ಲ್ಯಾನ್ ಹಾಕಿದ್ದರು. ಅವರಲ್ಲಿ ಒಬ್ಬನನ್ನು ನನ್ನೊಂದಿಗೆ ಬರುವಂತೆ ವಿನಂತಿಸಿದೆ. ಊಟವಿದ್ದ ಚೀಲದೊಂದಿಗೆ ಲಕ್ಷ್ಮಣ ಎಂಬ ಹುಡುಗ ನನ್ನೊಂದಿಗೆ ಆಟೋದಲ್ಲಿ ಬಂದ.
ಕಾಲುದಾರಿ ಬೆಟ್ಟದ ಬದಿಯಲ್ಲೇ ಸಾಗಿ, ಬೆಟ್ಟಕ್ಕೊಂದು ಸುತ್ತು ಹಾಕಿ ಬೆಟ್ಟದ ಮತ್ತೊಂದು ಬದಿಯಲ್ಲಿರುವ ದಿಡುಗಿನತ್ತ ಸಾಗುತ್ತದೆ. ಹದವಾದ ಏರುಹಾದಿ. ಅಲ್ಲಿಯವನೇ ಆಗಿದ್ದ ಲಕ್ಷ್ಮಣ 'ಸರ, ಹಿಂಗೇ ನೇರಕ್ಕೆ ಬೆಟ್ಟ ಹತ್ತಿ ಬಿಡೋಣ್ರಿ...೧೫ ನಿಮಿಷ ಸಾಕ್ರಿ...ಆ ದಾರಿ ದೂರ ಆಗ್ತೈತ್ರಿ...'ಎಂದಾಗ ಸಮ್ಮತಿಸಿದೆ. ನೇರವಾಗಿ ಬೆಟ್ಟ ಹತ್ತಿ, ಆ ಕಡೆ ಸ್ವಲ್ಪ ಮುಳ್ಳುಗಿಡಗಳ ನಡುವೆ ದಾರಿ ಮಾಡಿಕೊಂಡು ನಡೆದು ೧೫ ನಿಮಿಷದಲ್ಲಿ ದಿಡುಗಿನ ಬಳಿಯಿದ್ದೆವು. ಇದೊಂದು ಸೂಪರ್ ಶಾರ್ಟ್ ಕಟ್. ನಾನು ಆಟೋ ಇಳಿದಾಗ ಕಾರಿನಲ್ಲಿ ಬಂದ ತಂಡವೊಂದು ನಾನು ತಲುಪಿದ ಅರ್ಧ ಗಂಟೆಯ ಬಳಿಕ ದಿಡುಗಿನ ಬಳಿ ತಲುಪಿತ್ತು.
ಆದಿತ್ಯವಾರವಾಗಿದ್ದರಿಂದ ಮತ್ತು ಹಿಂದಿನ ದಿನ ವಿಜಯ ಕರ್ನಾಟಕದಲ್ಲಿ ಈ ದಿಡುಗಿನ ಬಗ್ಗೆ ಪ್ರಕಟವಾಗಿದ್ದರಿಂದ ಜನಸಾಗರವೇ ಅಲ್ಲಿತ್ತು. ಸುಮಾರು ೪೦ಅಡಿ ಎತ್ತರವಿರುವ ಜಲಧಾರೆ. ಅಗಲ ಸುಮಾರು ೧೦೦ ಅಡಿಯಷ್ಟಿದ್ದರೂ ನೀರು ೨ ಕವಲುಗಳಲ್ಲಿ ಮಾತ್ರ ಧುಮುಕುತ್ತಿತ್ತು. ಪೂರ್ಣ ೧೦೦ ಅಡಿಯಷ್ಟು ಅಗಲದಷ್ಟು ನೀರಿದ್ದರೆ ಅದೊಂದು ಮನಮೋಹಕ ದೃಶ್ಯ. ಇಲ್ಲಿನ ಜನರಿಗೆ ಇದೊಂದು ಅದ್ಭುತ ಜಲಪಾತ. ಏಕೆಂದರೆ ಈ ಪರಿ ನೀರು ಮೇಲಿನಿಂದ ಬೀಳುವ ಜಾಗ ಕರ್ನಾಟಕದ ಈ ಭಾಗದಲ್ಲಿ ವಿರಳ.
ನೀರು ಕೆಳಗೆ ಬೀಳುವಲ್ಲಿ ಹೆಚ್ಚೆಂದರೆ ಸೊಂಟ ಮಟ್ಟದ ತನಕ ನೀರು ಇರುವ ಗುಂಡಿ. ಹತ್ತಾರು ಜನರು ಆರಾಮವಾಗಿ ನೀರಿನಲ್ಲಿ ಸಮಯ ಕಳೆಯಬಹುದಾದ ಇಲ್ಲಿ ಈಗ ೧೦೦ ರಷ್ಟು ಜನರಿದ್ದರು. ಎಲ್ಲೆಲ್ಲಿ ನೀರು ಬೀಳುತ್ತೋ ಅಲ್ಲಿ ತಲೆಕೊಟ್ಟು ನಿಲ್ಲಲು ಸ್ಪರ್ಧೆ ಮತ್ತು ತಾ ಮುಂದು ನಾ ಮುಂದು ಎಂದು ಜಗ್ಗಾಟ. ನೀರು ಬೀಳುವಲ್ಲಿ ತಲೆ ಕೊಟ್ಟು ನಿಂತವರನ್ನು 'ಏ ಸಾಕ್ ಬಾರಲೇ..' ಎಂದು ಈಚೆಗೆ ಎಳೆದು ಉಳಿದವರು ನಿಂತುಕೊಳ್ಳುತ್ತಿದ್ದರು. ಕೂಗಾಟ, ಅರಚಾಟ, ಚೀರಾಟ, ಸಂತೋಷದ ಚೀತ್ಕಾರ ಎಲ್ಲವನ್ನು ಕೇಳುವ ಅಪರೂಪದ ಭಾಗ್ಯ ನನ್ನದು. ಹಲವಾರು ಜಲಪಾತಗಳಿಗೆ ಭೇಟಿ ನೀಡಿರುವ ನನಗೆ ಇಂತಹ 'ಕ್ರೌಡ್ ಗೋಯಿಂಗ್ ಎಬ್ಸೊಲ್ಯೂಟ್ಲಿ ಮ್ಯಾಡ್' ಸನ್ನಿವೇಶ ಎಲ್ಲೂ ಕಂಡುಬಂದಿಲ್ಲ. ಎಲ್ಲಾ ಕಡೆ ಒಂದೆರಡು ತಾಸು ಪ್ರಕೃತಿ ಆಸ್ವಾದಿಸುವ ನನಗೆ ಇಲ್ಲಿ ಅದಕ್ಕೆ ಆಸ್ಪದವೇ ಇರಲಿಲ್ಲ. ಜನಸಾಗರ ಪ್ರಕೃತಿಯನ್ನು ತೆರೆಯ ಮರೆಗೆ ಸರಿಸಿಬಿಟ್ಟಿತ್ತು.
ಜಲಪಾತವೊಂದನ್ನು ಪ್ರಥಮ ಬಾರಿಗೆ ನೋಡಿದ ಅದೆಷ್ಟೋ ಜನರಿದ್ದರು ಇಲ್ಲಿ. ಸಿಕ್ಕಿದ ಸ್ವಲ್ಪವೇ ಸಮಯದ ಬಳಿಕ ಮಾಯವಾಗುವ ನಿಧಿಯೊಂದನ್ನು ಹೇಗೆ ಅನುಭವಿಸಬೇಕೋ ಎಂದು ಗೊತ್ತಾಗದೆ ಮನಬಂದಂತೆ ಅನುಭವಿಸುವ ಪರಿಸ್ಥಿತಿ ಮತ್ತು ಮನೋಸ್ಥಿತಿ ಅಲ್ಲಿದ್ದವರದ್ದು. ಅಷ್ಟು ಸಣ್ಣ ಜಾಗದಲ್ಲಿ ನಂಬಲಾಗದಂತಹ ಸಂಖ್ಯೆಯ ಜನರನ್ನು ಕಂಡು ನಿಬ್ಬೆರಗಾಗಿಬಿಟ್ಟೆ. ಹೆಣ್ಣು ಮಕ್ಕಳಿಗೂ ನೀರಿಗಿಳಿಯಬೇಕೆಂಬ ಆಸೆ. ಹಾಗೆಲ್ಲಾದರೂ ನೀರಿಗಿಳಿದರೆ ಗಂಡು ಹುಡುಗರ ಮಧ್ಯೆ 'ಮಾಯವಾಗುವ' ಚಾನ್ಸ್. ಆದ್ದರಿಂದ ಒಂದೆಡೆ ಬದಿಯಲ್ಲಿ ಸಣ್ಣ ನೀರು ಬೀಳುವಲ್ಲಿ ನಾಲ್ಕಾರು ಹೆಣ್ಣು ಮಕ್ಕಳು ಮುದುಡಿ ನೀರಿಗೆ ತಲೆ ಕೊಟ್ಟು ತಮ್ಮಷ್ಟಕ್ಕೆ ಸಂತೋಷಪಡುತ್ತಿದ್ದರು. ಈ ಎಲ್ಲಾ ಗಲಾಟೆಯ ನಡುವೆ ಒಬ್ಬ ಹುಡುಗ ಮರವೇರಿ ಕೊಂಬೆಯೊಂದರ ಮೇಲೆ ಆಸೀನನಾಗಿ ಗಂಭೀರವದನನಾಗಿ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದ.
ಕೃಷ್ಣಜನ್ಮಾಷ್ಟಮಿಯ ಸಮಯದಲ್ಲಿ ಮೇಲೆ ಕಟ್ಟಿರುವ ಮೊಸರಿನ ಗಡಿಗೆಯನ್ನು ಒಡೆಯಲು ನಿರ್ಮಿಸುವ ಮಾನವ ಏಣಿಯನ್ನು ಇಲ್ಲಿ ನೀರಿನಲ್ಲಿ ನಿಂತು ಮಾಡುವ ಪ್ರಯತ್ನ ಸಾಗಿತ್ತು. ಹಾಗೆ ಮಾನವ ಏಣಿಯನ್ನು ನಿರ್ಮಿಸಿ 'ಹೋ' ಎಂದು ಕಿರುಚುತ್ತಾ ನೀರಿಗೆ ಬೀಳುವುದೇ ಅವರಿಗೆ ಮಜಾ. ಬೀಳುವ ನೀರಿನಡಿ ನಿಂತು ನೃತ್ಯ ಮಾಡುವುದೇನು...ಲಾಗ ಹಾಕುವುದೇನು....ಸೀಟಿ ಹೊಡೆಯುವುದೇನು...ತಮ್ಮ ಪರಿಚಯದವರಿಗೆ ಕೈ ಮಾಡುವುದೇನು...
ಕೆಳಗಿದ್ದಷ್ಟೇ ಸಂಖ್ಯೆಯ ಜನರು ದಿಡುಗಿನ ಮೇಲೆ ನಿಂತು ಕೆಳಗಿದ್ದವರ ಕಪಿಚೇಷ್ಟೆಗಳನ್ನು ವೀಕ್ಷಿಸುತ್ತಿದ್ದರು. ನೀರಿಗಿಳಿದವರು ಯಾರೂ ಜಲಕ್ರೀಡೆಯನ್ನು ಮುಗಿಸುತ್ತಿರಲಿಲ್ಲ. ಮತ್ತಷ್ಟು ಜನರು ನೀರಿಗಿಳಿಯುತ್ತಿದ್ದರೇ ವಿನ: ಯಾರೂ ಮೇಲೆ ಬರುತ್ತಿರಲಿಲ್ಲ. ಅವರೆಲ್ಲರ ಮುಖದ ಮೇಲಿದ್ದ 'ವರ್ಣಿಸಲಾಗದಂತಹ ಸಂತೋಷ'ದ ಭಾವ ನನ್ನಿಂದ ಮರೆಯಲು ಸಾಧ್ಯವಿಲ್ಲ. ನನಗಿದು 'ಒನ್ ಮೋರ್ ಫಾಲ್ಸ್ ಆಫ್ ಮೆನಿ' ಆಗಿದ್ದರೆ ಅವರಿಗೆ ಇದು 'ದ ಓನ್ಲೀ ಒನ್ ಫಾಲ್ಸ್' ಆಗಿತ್ತು! ಇದನ್ನು ಮನಗಂಡ ಬಳಿಕ ನನಗೆ ಅವರೆಲ್ಲರ ಗಲಾಟೆ, ಕೇಕೆ, ಚೀರಾಟ ಇತ್ಯಾದಿಗಳನ್ನು ಕ್ಷಮಿಸಬಹುದು ಎಂದೆನಿಸಿತು. ಅದೊಂದು ಜಾತ್ರೆಯ ಅಟ್ಮಾಸ್ಫಿಯರ್ ಆಗಿತ್ತು. ಜನ ಮರುಳೋ...ಫಾಲ್ಸು ಮರುಳೋ....
9 ಕಾಮೆಂಟ್ಗಳು:
super narration! Take a bow sir.
All seem to be young people, and that must have been a great fun!
ಅದೇನಾಪಾಟಿ ಜನಾನಪ್ಪಾ... ರಾಮ ರಾಮ...
ಲೇಖನ, ಪೋಟೋಗಳು ತುಂಬಾ ಚೆನ್ನಾಗಿವೆ. ಎಂತಹವರಲ್ಲು ಆಸಕ್ತಿ ಕೆರಳಿಸುವ ತಾಣ ಎಂಬುದರಲ್ಲಿ ಎರಡು ಮಾತಿಲ್ಲ.
ನೀವು ಭಾರ್ರಿ ಬಿಡ್ರಿ ಸರ್ ಅಲ್ಲೇ ಬಾಗಲಕೋಟ್ಯಾಗ ೧೫ ವರ್ಷ ಇದ್ರು ನನಗಿದು ಗೋತ್ತ ಇರಲಿಲ್ಲ, ಥ್ಯಾಂಕ್ಸರಿ.. ಸರ್
nanu saha settarige sahamat iddinri.. nanu bagalkotyalli 6-8 varsha idda nanaga gottu iralilla..
tumba chikkavaniddaga ,huligemmana koLLa anta hogidde...adu maLegaalda jaLapathne...
ಶ್ರೀಕಾಂತ್,
ನನಗಂತೂ ಅದು 'ಫನ್ ಟು ವಾಚ್' ಆಗಿತ್ತು!
ಪರಿಸರ ಪ್ರೇಮಿ,
ಸರಿಯಾಗಂದ್ರಿ. ಆಗಾಗ ಇಲ್ಲಿಗೆ ಬರ್ತಾ ಇರಿ.
ಪ್ರವೀಣ್,
ಧನ್ಯವಾದಗಳು.
ಶೆಟ್ಟರು,
ಬ್ಲಾಗಿಗೆ ಸ್ವಾಗತ. ಅದು ಯಾವಾಗಲೂ ಹಾಗೇನೆ. ನನಗೂ ಉಡುಪಿಗೆ ಸಮೀಪವಿದ್ದೂ ಗೊತ್ತಿಲ್ಲದ ಹಲವು ಪ್ರೆಕ್ಷಣೀಯ ಸ್ಥಳಗಳು ತಿಳಿದದ್ದು ಬೇರೆ ಊರಿನವರಿಂದ!
ಮಹಾಂತೇಶ್,
ನಾನೂ ಹುಲಿಗೆಮ್ಮನಕೊಳ್ಳಕ್ಕೆ ಭೇಟಿ ನೀಡಿದ್ದೆ ೨೦೦೪ರಲ್ಲಿ. ಬಹಳ ಇಷ್ಟವಾಗಿತ್ತು ಆ ಜಾಗ ನನಗೆ.
Naanu High School nalli eddaga bahala sala hogidde....... adre eeg naanirodu Bangalore nalli.... eegalu male bandag aa dinagalu nenapagutte
hi am also from guledgudd its really fantastic and i have seen more than five times....
I like the style of your explination. its so natural. I think you are a professional photographer. I like pictures very much.
ಕಾಮೆಂಟ್ ಪೋಸ್ಟ್ ಮಾಡಿ