ಗೆಳೆಯ ದಿನೇಶ್ ಹೊಳ್ಳರದ್ದು ಮಾತು ಕಡಿಮೆ ಆದರೆ ಕೆಲಸ ಅಗಾಧ. ಚಾರಣ, ಕಥೆ, ಕವನ, ಹನಿಗವನ, ಚಿತ್ರಕಲೆ ಇವೆಲ್ಲಾ ಇವರ ಹವ್ಯಾಸ. ೨೦೦೬ ಎಪ್ರಿಲ್ ತಿಂಗಳಲ್ಲಿ ಬಿಸಿಲೆ ಘಾಟಿಯ ವೀಕ್ಷಣಾ ಕಟ್ಟೆಯ ಬಳಿ ತನ್ನ ಹನಿಗವನಗಳ ಸಂಗ್ರಹದ ಎರಡನೇ ಪುಸ್ತಕ 'ಅಡವಿಯ ನಡುವೆ'ಯ ಬಿಡುಗಡೆಯ ಕಾರ್ಯಕ್ರಮವನ್ನು ದಿನೇಶ್ ವಿಶಿಷ್ಟ ರೀತಿಯಲ್ಲಿ ಅಡವಿಯ ನಡುವೆಯೇ ಹಮ್ಮಿಕೊಂಡಿದ್ದರು. ಕರಾವಳಿಯ ಸುಮಾರು ೫೦ ಕವಿಗಳನ್ನು ಮತ್ತು ಚಿತ್ರಕಾರರನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಅವರಿಂದ ಪ್ರಕೃತಿಯ ಬಗ್ಗೆ ಕವನಗಳನ್ನು ಓದಿಸಿ ಚಿತ್ರಗಳನ್ನು ಬರೆಯಿಸಿದ್ದರು. ಈ ವರ್ಷವೂ ಅದೇ ರೀತಿಯಲ್ಲಿ ಮತ್ತೊಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಕಳೆದ ೩ ತಿಂಗಳುಗಳಿಂದ ತಯಾರಿ ನಡೆದಿತ್ತು.
ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಆದಿತ್ಯವಾರಗಳಂದು 'ಸೂರ್ಯಕಾಂತಿ' ಎಂಬ ಅಂಕಣದಲ್ಲಿ ದಿನೇಶ್, ಕರಾವಳಿಯ ಉದಯೋನ್ಮುಖ ಕವಿಗಳನ್ನು ಮತ್ತು ಎಲೆಮರೆಯ ಕಾಯಿಗಳಂತಿದ್ದ ಚಿತ್ರಕಾರರನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ಕರಾವಳಿಯಲ್ಲಿ 'ಆರ್ಟಿಸ್ಟ್ ಫೋರಂ' ಎಂದರೆ ಕೆಲವೇ ಹಳೇ ಮತ್ತು ಅದೇ ಬೋರಿಂಗ್ ಮುಖಗಳನ್ನೊಳಗೊಂಡ ಬೆರಳೆಣಿಕೆಯ ಕೆಲವೊಂದು ಹಿರಿಯ ಕಲಾವಿದರ ಆಡಂಬರದಿಂದ ಕೂಡಿದ ಒಕ್ಕೂಟವಾಗಿತ್ತು. ಯುವ, ಪ್ರತಿಭಾವಂತ ಕಲಾವಿದರಿಗೆ ಇಲ್ಲಿ ಪ್ರೋತ್ಸಾಹ, ಮನ್ನಣೆ ದೊರಕುತ್ತಿರಲಿಲ್ಲ. ಇದನ್ನು ಮನಗಂಡ ದಿನೇಶ್, ವಿಜಯ ಕರ್ನಾಟಕದಲ್ಲಿ 'ಸೂರ್ಯಕಾಂತಿ' ಅಂಕಣವನ್ನು ಬರೆಯಲಾರಂಭಿಸಿದರು. ಕೇವಲ ಕಲಾವಿದರಲ್ಲದೆ, ಯುವ ಮತ್ತು ಪ್ರತಿಭಾವಂತ ಕವಿ/ಕವಯಿತ್ರಿಗಳನ್ನು ಕೂಡಾ ಓದುಗರಿಗೆ ದಿನೇಶ್ ಸೂರ್ಯಕಾಂತಿಯ ಮುಲಕ ಪರಿಚಯಿಸಿದರು.
ಇತ್ತೀಚೆಗೆ ಸೂರ್ಯಕಾಂತಿ ೧೦೦ ವಾರಗಳನ್ನು ಪೂರೈಸಿ ಶತಕ ಬಾರಿಸಿದ ಸಂದರ್ಭದಲ್ಲಿ, ಎಲ್ಲಾ ೧೦೦ ಸೂರ್ಯಕಾಂತಿಗಳನ್ನು ಒಂದೆಡೆ ಸೇರಿಸಿ ಸನ್ಮಾನ ಮಾಡುವ ಮುಲಕ ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವುದು ದಿನೇಶ್ ಯೋಜನೆಯಾಗಿತ್ತು. ಅದರಂತೆ ಎಪ್ರಿಲ್ ೨೨ ರಂದು ಮಂಗಳೂರಿನ ತಣ್ಣೀರುಬಾವಿಯ ರಮ್ಯ ಕಡಲ ಕಿನಾರೆಯಲ್ಲಿ ಸೂರ್ಯಕಾಂತಿಗಳ ಸಮ್ಮಿಲನ. ಒಟ್ಟು ೮೫ ಕಲಾವಿದರು/ ಕವಿಗಳು/ ಹಾಸ್ಯಗವಿಗಳು/ ಸಂಗೀತಗಾರರು/ ನೃತ್ಯಪಟುಗಳು ಅಲ್ಲಿದ್ದರು. ಆಕರ್ಷಕ ವೇದಿಕೆಯ ಎರಡು ಬದಿಯಲ್ಲಿ ದೈತ್ಯ ಗಾಳಿಪಟಗಳನ್ನು ಕೂರಿಸಲಾಗಿತ್ತು. ಸೂರ್ಯಕಾಂತಿ ಅಂಕಣದ ಎಲ್ಲಾ ೧೦೦ ಅಂಕಣಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ 'ಕಡಲ ತಟದ ಸೂರ್ಯಕಾಂತಿಗಳು' ಪುಸ್ತಕವನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ತುಳುನಾಡಿನ ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಕಲೆ 'ಆಟಿ ಕಳಂಜ'ವನ್ನು ಅದಕ್ಕಾಗಿಯೇ ಬಂಟ್ವಾಳದಿಂದ ಕರೆಯಿಸಲಾಗಿದ್ದ ಕಲಾವಿದರು ನಡೆಸಿಕೊಡುತ್ತಿದ್ದಂತೆ, ಖ್ಯಾತ ಚಿತ್ರಗಾರ ಮೋಹನ್ ಸೋನಾ ವೇದಿಕೆಯ ಮುಂಭಾಗದಲ್ಲಿರಿಸಲಾಗಿದ್ದ ಕ್ಯಾನ್ ವಾಸ್ ಮೇಲೆ ರೇಖಾಚಿತ್ರವೊಂದನ್ನು ಎಳೆದರೆ ಅದಕ್ಕನುಗುಣವಾಗಿ ಖ್ಯಾತ ಹನಿಗವಿ ಡುಂಡಿರಾಜ್, 'ಎನಂದಿರಿ ಕವಿಗಳೇ? ಹೆಣ್ಣು ನೆಲವೇ? ಗಂಡು ಕಡಲೆ? ಹಾಗಾದರೆ ಮಕ್ಕಳು ನೆಲಗಡಲೆ?' ಎಂಬ ಹನಿಗವನವೊಂದನ್ನು ಅದೇ ಕ್ಯಾನ್ ವಾಸ್ ಮೇಲೆ ಗೀಚಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ನಂತರ ಕವಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರೆ, ಚಿತ್ರಕಲಾವಿದರು ಅಲ್ಲಲ್ಲಿ ಕೂತು ಬಣ್ಣಗಳೊಂದಿಗೆ ಸರಸವಾಡತೊಡಗಿದರು. ಭರತನಾಟ್ಯ ಪ್ರವೀಣರಿಂದ ನೃತ್ಯ ಪ್ರದರ್ಶನವಿದ್ದರೆ, ಯುವ ಪ್ರತಿಭೆ ನಯನಗೌರಿ ಹರಿಕಥೆಯನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದಳು. ಸಾವಿತ್ರಿ ರಾಮರಾವ್ ಅವರ ವೀಣಾವಾದನ ಕಡಲ ಅಲೆಗಳೊಂದಿಗೆ ಜುಗಲ್ ಬಂದಿ ಮಾಡುತ್ತಿದ್ದರೆ, ಪಟ್ಟಾಭಿರಾಮ್ ಅವರ ಹಾಸ್ಯ ಚಟಾಕಿಗಳಿಂದ ಹೊಟ್ಟೆ ಹುಣ್ಣಾಗುವಂತೆ ನಗದೇ ಇರದವರಿರಲಿಲ್ಲ. ಅನಿಲ್ ದೇವಾಡಿಗ ಮತ್ತು ವಿನಯ್ ಕುಮಾರ್ ಸಾಯರವರು ಸೃಜನಶೀಲ ಕಲಾಕೃತಿ (ಇನ್ ಸ್ಟಲೇಶನ್ ಆರ್ಟ್) ಯನ್ನು ಪರಿಚಯಿಸಿದರು. ಉಡುಪಿಯ ವೆಂಕಟ್ರಮಣ ಕಾಮತ್ ಮತ್ತು ಶ್ರೀನಾಥ್ ಮರಳು ಶಿಲ್ಪ ರಚನೆಯಲ್ಲಿ ಮಗ್ನರಾಗಿದ್ದರು.
ಹೀಗೆ ಮುಂಜಾನೆ ೯.೩೦ರಿಂದ ಸಂಜೆ ೭ರ ತನಕ 'ಕಾವ್ಯ ತರಂಗ'ದಡಿ ಕವಿಗಳು, 'ವರ್ಣ ತರಂಗ'ದಡಿ ಚಿತ್ರಗಾರರು, 'ರಾಗ ತರಂಗ'ದಡಿ ಸಂಗೀತಗಾರರು, 'ನಾಟ್ಯ ತರಂಗ'ದಡಿ ನೃತ್ಯಪಟುಗಳು ಮತ್ತು 'ಹಾಸ್ಯ ತರಂಗ'ದಡಿ ಹಾಸ್ಯಗವಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ, 'ಕಡಲ ತಟದ ಸೂರ್ಯಕಾಂತಿಗಳಿಂದ ವರ್ಣಶರಧಿ' ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ಪಾಲ್ಗೊಂಡ ಎಲ್ಲರಿಗೂ ಸ್ಮರಣಿಕೆಯಾಗಿ ಪುಟ್ಟ ಸುಂದರ ನಾವೆಯೊಂದನ್ನು ನೀಡಲಾಯಿತು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಶ್ರೇಯ ಕೇವಲ ದಿನೇಶ್ ಹೊಳ್ಳರಿಗೆ ಸಲ್ಲತಕ್ಕದ್ದು. ಕಳೆದ ೩ ತಿಂಗಳುಗಳಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಮಾಡಲು ಅವರು ಪಟ್ಟ ಶ್ರಮ, ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಾಗ ಫಲ ಕೊಟ್ಟಿತ್ತು. ಅನಿವಾರ್ಯವಾಗಿ ವೈಯುಕ್ತಿಕ ಕಾರಣಗಳಿಂದ ನನಗೆ 'ವರ್ಣಶರಧಿ'ಯನ್ನು ಅಟೆಂಡ್ ಮಾಡಲಾಗಲಿಲ್ಲ. ಆದರೂ ತಯಾರಿಯ ಸಮಯದಲ್ಲಿ ದಿನೇಶರಿಗೆ ಸ್ವಲ್ಪವಾದರೂ ನೆರವಾಗಿದ್ದೆ ಎಂಬುದೊಂದೇ ತೃಪ್ತಿ.
೨ ವರ್ಷಗಳ ಹಿಂದೆ ವಿಜಯ ಕರ್ನಾಟಕದಲ್ಲಿ 'ಸೂರ್ಯಕಾಂತಿ' ಅಂಕಣ ಬರೆಯಲು ಆರಂಭಿಸಿದ ದಿನೇಶ್, ಕಲಾವಿದರನ್ನು ಹುಡುಕಾಡಿಕೊಂಡು ಜಿಲ್ಲೆಯ ಮುಲೆಮುಲೆಗಳಿಗೆ ತೆರಳಿ, ಅವರನ್ನು ಭೇಟಿಯಾಗಿ, ಮಾಹಿತಿ ಸಂಗ್ರಹಿಸಿ ನಂತರ ತನ್ನ ವಿಶಿಷ್ಟ ಶೈಲಿಯ ಲೇಖನದಲ್ಲಿ ಓದುಗರಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದರು. ಮಂಗಳೂರಿನ ವಿದ್ಯಾ ವಾಮಂಜೂರು ಮತ್ತು ಶಶಿಕಲಾ ಆಂಚನ್ ಹಾಗೂ ಉಡುಪಿಯ ಭಾಗ್ಯಶ್ರೀ ಕಂಬಳಕಟ್ಟ ಮತ್ತು ಕೆ.ಚಂದ್ರಕಾಂತ್ ತಮ್ಮ ಪಾಡಿಗೆ ಅಲ್ಲೊಂದು ಇಲ್ಲೊಂದು ಕವಿತೆಗಳನ್ನು ಬರೆದು ಅಪರಿಚಿತರಂತೆ ಉಳಿದುಬಿಡುತ್ತಿದ್ದರು. ಸೂರ್ಯಕಾಂತಿಯ ಮುಲಕ ಹೊರ ಜಗತ್ತಿಗೆ ಇವರ ಪರಿಚಯವಾದ ಬಳಿಕ ಈಗ ಅಲ್ಲಲ್ಲಿ ನಡೆಯುವ ಕವಿಗೋಷ್ಟಿಗಳಿಗೆ ಇವರಿಗೆ ಅಹ್ವಾನ ಬರಲು ಆರಂಭವಾಗಿದೆ!
ಮೊದಲು ಚೆನ್ನೈನಲ್ಲಿದ್ದು, ನಿವೃತ್ತಿಯ ಬಳಿಕ ಉಡುಪಿಗೆ ಬಂದು ನೆಲೆಸಿರುವ ಬಿ.ಸುಬ್ರಾಯ ಶಾಸ್ತ್ರಿಯವರದ್ದು ಚಿತ್ರಕಲೆಯಲ್ಲಿ ಪರಿಣಿತ ಕೈ. ಆದರೂ ಕರಾವಳಿಯಲ್ಲಿ ಇವರ ಹೆಸರು ಮನ್ನಣೆ ಪಡೆದಿದ್ದು ಸೂರ್ಯಕಾಂತಿಯಲ್ಲಿ ಅವರ ಬಗ್ಗೆ ದಿನೇಶ್ ಬರೆದ ಬಳಿಕ! ಅದರಂತೆ ಬ್ಯಾಂಕ್ ಉದ್ಯೋಗಿ ಕುಂದಾಪುರದ ಬಿ.ಕೆ.ಮಾಧವ ರಾವ್, ತನ್ನನ್ನು ತಾನು ಚಿತ್ರಕಲೆಯಲ್ಲಿ ಬಹಳ ಬ್ಯುಸಿಯಾಗಿ ತೊಡಗಿಸಿಕೊಂಡಿದ್ದು ಸೂರ್ಯಕಾಂತಿಯಲ್ಲಿ ಅವರ ಬಗ್ಗೆ ಲೇಖನ ಪ್ರಕಟಗೊಂಡ ಬಳಿಕ ಕುಂದಾಪುರದ ಜನರು ತಮಗೊಂದಷ್ಟು ಚಿತ್ರಗಳನ್ನು ಬಿಡಿಸಿಕೊಡುವಂತೆ ದುಂಬಾಲು ಬಿದ್ದಾಗ. ಮಂಗಳೂರಿನ ಗೃಹಿಣಿ ಜಾನಕಿರಾಣಿಯವರಂತೂ ಅದ್ಭುತ ಚಿತ್ರಕಲಾವಿದೆ. ಇವರನ್ನೂ ಅಡಿಗೆಮನೆಯಿಂದ ಹೊರಗೆಳೆದು ತಂದಿದ್ದು ದಿನೇಶ್. ಜಾನಕಿರಾಣಿಯವರನ್ನು ಮಾತನಾಡಿಸಲು ಅವರ ಮನೆಗೆ ತೆರಳಿದಾಗಲೇ, ಅವರ ಅಮ್ಮ ಸುಬ್ಬುಲಕ್ಷ್ಮಿಯವರು ಅಸಾಧಾರಣ ಕವಯಿತ್ರಿ ಎಂದು ದಿನೇಶರಿಗೆ ತಿಳಿದದ್ದು! ಒಂದೇ ಮನೆಯಲ್ಲಿ ೨ ಪ್ರತಿಭೆಗಳು. ಅಂತೆಯೇ ಮತ್ತೊಬ್ಬ ಚಿತ್ರಕಲಾವಿದೆ ಗೃಹಿಣಿ ಸುಧಾ ಯೋಗೀಶ್ ಪರಿಚಯವಾದದ್ದೂ ಸೂರ್ಯಕಾಂತಿಯ ಮುಲಕ. ಮಂಗಳೂರಿನ ಸಮೀಪದ ಕಲ್ಲಡ್ಕದ ಜಯರಾಮ ನಾವಡರೂ ಅಸಾಧಾರಣ ಚಿತ್ರಕಲಾವಿದ. ಇವರೂ ಚಿರಪರಿಚಿತರಾದದ್ದು ಸೂರ್ಯಕಾಂತಿಯ ಮುಲಕ.
ಶ್ರೀಪತಿ ಆಚಾರ್ಯ ಕಾರ್ಕಳದಲ್ಲಿ ವಾಸವಿರುವ ಯುವಕ. ಮದುವೆಯಾಗಲು ಹೆಣ್ಣಿನ ಹುಡುಕಾಟದಲ್ಲಿದ್ದ. ಕಲಾವಿದೆಯೊಬ್ಬಳನ್ನು ವರಿಸಬೇಕು ಎಂಬುದು ಈತನ ಆಸೆಯಾಗಿತ್ತು. ಇದೇ ಕಾರಣಕ್ಕಾಗಿ ತಪ್ಪದೆ ಸೂರ್ಯಕಾಂತಿ ಅಂಕಣವನ್ನು ಓದುತ್ತಿದ್ದ. ಶಿಲ್ಪಾ ಆಚಾರ್ಯ ಒಬ್ಬ ಯುವ ಚಿತ್ರಕಲಾವಿದೆಯಲ್ಲದೆ, ನೋಡಲು ಆಕರ್ಷಕವಾಗಿಯೂ ಇದ್ದಾಳೆ. ಈಕೆಯ ಬಗ್ಗೆ ಸೂರ್ಯಕಾಂತಿಯಲ್ಲಿ ದಿನೇಶ್ ಬರೆದಿದ್ದನ್ನು ಓದಿದ ಕೂಡಲೇ ಹಳ್ಳಕ್ಕೆ ಬಿದ್ದ ಶ್ರೀಪತಿ, ಕಾರ್ಕಳದಿಂದಲೇ ಚಡಪಡಿಸಿ ಆಕೆಗೆ ಫೋನ್ ಮಾಡಿ ಸತಾಯಿಸತೊಡಗಿದ್ದ. ಆದರೆ ಆತನದ್ದು ಪ್ರಾಮಾಣಿಕ ಪ್ರೊಪೋಸಲ್ ಆಗಿತ್ತು. ದಿನೇಶರ ಮಧ್ಯಸ್ಥಿಕೆಯಲ್ಲಿ ವಿಷಯ ಮುಂದುವರೆಯಿತು. ತನ್ನ ಅಕ್ಕನ ಮದುವೆಯಾಗದೇ ತಾನು ಮದುವೆಯಾಗಲಾರೆ ಎಂದು ಶಿಲ್ಪಾಳ ಹಟ. ಆಕೆಯ ಅಕ್ಕ ಶ್ರೀದೇವಿ ಆಚಾರ್ಯ ಕೂಡಾ ಒಬ್ಬ ಚಿತ್ರಕಲಾವಿದೆ. ಕಲಾವಿದೆಯೊಬ್ಬಳನ್ನು ಮದುವೆಯಾಗಬೇಕೆಂಬ ಆಸೆಯಿದ್ದ ಶ್ರೀಪತಿ, ಶ್ರೀದೇವಿ ಕೂಡಾ ಕಲಾವಿದೆ ಎಂದು ತಿಳಿದ ಕೂಡಲೇ ಆಕೆಗೆ 'ಯಸ್' ಅಂದುಬಿಟ್ಟ. ದಿನೇಶ್ ಹೊಳ್ಳರು ಸೂರ್ಯಕಾಂತಿಯ ಮುಖಾಂತರ ಮದುವೆಯೊಂದನ್ನು ನೆರವೇರಿಸಿ ಅಕ್ಷತೆ ಹಾಕಿ ಬಂದರು.
ಕುಂದಾಪುರದ ರಾಘವೇಂದ್ರ ಹಕ್ಲಾಡಿ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಮಾಡುವುದರಲ್ಲಿ ಪರಿಣಿತ - ವೆಜಿಟೇಬಲ್ ಕಟ್ಟಿಂಗ್ ಆರ್ಟ್. ತನ್ನ ಪ್ರತಿಭೆಯಿಂದ ಈಗ ಚೆನ್ನಾಗಿ ಹಣ ಗಳಿಸುತ್ತಾ ಇದ್ದಾನೆ ಸೂರ್ಯಕಾಂತಿಯಲ್ಲಿ ದಿನೇಶ್ ಬರೆದ ಬಳಿಕ. ಮಂಗಳೂರಿನ ಸುಬ್ರಹ್ಮಣ್ಯ ಮುಗನಾದರೂ, ಉತ್ತಮ ಚಿತ್ರಗಾರ. ಸೂರ್ಯಕಾಂತಿಯಲ್ಲಿ ಈತನ ಬಗ್ಗೆ ಲೇಖನ ಪ್ರಕಟವಾದ ಬಳಿಕ ಆರ್ಥಿಕವಾಗಿ ಸ್ವಲ್ಪ ಸಬಲನಾಗಿದ್ದಾನೆ. ತನ್ನ ಚಿತ್ರಗಳ ಎಕ್ಸಿಬಿಶನ್ ಕೂಡಾ ದಿನೇಶರ ನೆರವಿನಿಂದ ಏರ್ಪಡಿಸಿದ್ದಾನೆ. ಪ್ರಶಾಂತ್ ಆಚಾರ್ಯರದ್ದು ಚಾಕ್ ಪೀಸ್ ನಲ್ಲಿ ಆಕೃತಿಗಳನ್ನು ಕೆರೆಯುವ ಕಲೆ. ಇವರ ಕಲೆ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಕೆಲವೊಂದು ಕಡೆ ಡಿಸೈನ್ ಗಳನ್ನು ಭೂತಗನ್ನಡಿ ಬಳಸಿ ನೋಡಬೇಕಾಗುತ್ತದೆ.
ಇಷ್ಟೆಲ್ಲಾ ಬರೆದು ಕಡೆಗೆ ನಯನಗೌರಿಯ ಬಗ್ಗೆ ಒಂದೆರಡು ಮಾತು ಬರೆಯದಿದ್ದರೆ ಅನ್ಯಾಯವಾಗುತ್ತದೆ. ೧೩ರ ಹರೆಯದ ನಯನಗೌರಿಗೆ ಸಕ್ಕರೆ ಕಾಯಿಲೆಯಿದೆ. ಷುಗರ್ ಪ್ರಮಾಣ ಕೆಲವೊಮ್ಮೆ ಹೆಚ್ಚಾಗುವುದು ಮತ್ತು ಕೆಲವೊಮ್ಮೆ ಕಡಿಮೆಯಾಗುವುದು ಈಕೆಯನ್ನು ಕಾಡುವ ಕಾಯಿಲೆ. ಈಗೆಲ್ಲಾ ಮಾತ್ರೆಯಿದೆ. ಮೊದಲು ಷುಗರ್ ಪ್ರಮಾಣ ಕಡಿಮೆಯಾದಂತೆ ಆಕೆಯ ಬಾಯೊಳಗೆ ಸ್ವಲ್ಪ ಸಕ್ಕರೆಯನ್ನು ಹಾಕಲಾಗುತ್ತಿತ್ತು. ಈ ಕಾಯಿಲೆಯಿದ್ದರೂ, ನಯನಗೌರಿ ಅದ್ಭುತವಾಗಿ ಹರಿಕಥೆ ಹಾಡುತ್ತಾಳೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ಸ್ಪಷ್ಟ ಉಚ್ಚಾರ ಮತ್ತು ರಾಗಗಳ ಅದ್ಭುತ ಬಳಕೆ ಇತ್ಯಾದಿಗಳನ್ನು ಕಣ್ಣಾರೆ ಕಂಡು ಕೇಳಿದವರು ಆಕೆಯ ಪ್ರತಿಭೆಗೆ ತಲೆತೂಗಿದರು. ಅಯ್ಯೋ ಇಂತಹ ಪ್ರತಿಭೆಯನ್ನು ಪ್ರತ್ಯಕ್ಷವಾಗಿ ನೋಡಿ ಕೇಳಲು ನಾನಲ್ಲಿರಲಿಲ್ಲವಲ್ಲ! ಕಥೆ, ಕವನ, ಕಲೆಯಲ್ಲೂ ನಯನಗೌರಿ ಪಳಗಿದವಳು. ಯಕ್ಷಗಾನವನ್ನೂ ಬಲ್ಲವಳು, ಹಲವಾರು ಪ್ರಸಂಗಗಳಲ್ಲಿ ಪಾಲ್ಗೊಂಡವಳು. ತಬಲಾ, ಹಾರ್ಮೋನಿಯಮ್ ನುಡಿಸಬಲ್ಲಳು. ಇಂತಹ ಪ್ರತಿಭೆಯನ್ನು ಭೇಟಿ ಮಾಡುವ ಅವಕಾಶ ಕಳಕೊಂಡೆ ಎಂದು ದಿನೇಶರ ಮುಂದೆ ಕೊರಗುತ್ತಿರುವಾಗ ಅವರಂದರು 'ಜೂನ್ ೨ಕ್ಕೆ ಆಕೆಗೊಂದು ಸನ್ಮಾನ ಇಟ್ಟುಕೊಂಡಿದ್ದೇನೆ' ಎಂದು. ಆಗ ಭೇಟಿ ಮಾಡಲೇಬೇಕು.
'ಕಡಲ ತಟದ ಸೂರ್ಯಕಾಂತಿಗಳಿಂದ ವರ್ಣಶರಧಿ' ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಎಲ್ಲೂ ದಿನೇಶ್ ಹೆಸರಿರಲಿಲ್ಲ. 'ತಮ್ಮ ಆಗಮನವನ್ನು ಎದುರು ನೋಡುತ್ತಿರುವ - ಸೂರ್ಯಕಾಂತಿಗಳು' ಎಂದಷ್ಟೇ ಇತ್ತು. ದಿನೇಶ್ ಪ್ರಕಾರ ಇದೊಂದು ಸೂರ್ಯಕಾಂತಿಗಳಿಂದ ಸೂರ್ಯಕಾಂತಿಗಳಿಗಾಗಿ ಕಾರ್ಯಕ್ರಮ. ದಿನೇಶರ ಈ ಸೇವೆ ಹೀಗೆ ಮುಂದುವರೆಯಲಿ ಮತ್ತು ಮತ್ತಷ್ಟು ಸೂರ್ಯಕಾಂತಿಗಳನ್ನು ಅವರು ಕರಾವಳಿ ಜನತೆಗೆ ಪರಿಚಯಿಸುವಂತಾಗಲಿ ಎಂಬ ಶುಭ ಹಾರೈಕೆ.
ವರ್ಣಶರಧಿ ಕಾರ್ಯಕ್ರಮದಂದು ಪಾಲ್ಗೊಂಡ ಕಲಾವಿದರು ಬಿಡಿಸಿದ ಚಿತ್ರಗಳನ್ನು ಜೂನ್ ೨ರಿಂದ ಜೂನ್ ೫ರವರೆಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು.
4 ಕಾಮೆಂಟ್‌ಗಳು:
ರಾಜೇಶ್, ನಿಮ್ಮ ಪ್ರಯತ್ನ ಬಹಳ ಷ್ಲಾಘನೀಯ. ಕಡಲ ತೀರದ ಸೂರ್ಯಕಾಂತಿಗಳನ್ನು ಕರಾವಳಿಯಲ್ಲೇ ನಿಲ್ಲಲು ಬಿಡದೆ ಇಡೀ ನಾಡಿಗೇ ಪರಿಚಯಿಸಿದ ತಮಗೆ ವಂದನೆಗಳು.
ನಮ್ಮ ಆವ್ರುತ್ತಿಯಲ್ಲಿ ಈ ರೀತಿಯ ಲೇಖನಗಳು ಬರುವುದು ತೀರಾ ಕಡಿಮೆ.
ಪ್ರತಿಭೆಯನ್ನು ಗುರುತಿಸಿ, ಪ್ರಚುರ ಪಡಿಸಿ, ಸನ್ಮಾನಿಸುವ ದಿನೇಶರ ಪ್ರಯತ್ನಕ್ಕೆ hats off ಯೆಂದು ಹೇಳಲೇ ಬೇಕು.
ಶ್ರಿಕಾಂತ್,
ವಂದನೆಗಳು ಅದೇನಿದ್ದರೂ ಸೂರ್ಯಕಾಂತಿಯ ಲೇಖಕ ದಿನೇಶ್ ಹೊಳ್ಳರಿಗೆ ಸಲ್ಲತಕ್ಕದ್ದು. ನೀವಂದಂತೆ ಅವರಿಗೆ ಹ್ಯಾಟ್ಸ್ ಆಫು. ಇಂತಹ ಲೇಖನಗಳು ಬರಲು, ಆಸಕ್ತಿಯಿಂದ ಬರೆಯುವವರು ಸಿಗಬೇಕು - ಹೊಳ್ಳರಂತೆ.
ರಾಜೇಶ್,
ಇಂತಹ ಅದ್ಬುತ ಕೆಲಸ ಮಾಡುತ್ತಿರುವ ದಿನೇಶ್‍ರಿಗೆ ಅಭಿನಂದನೆಗಳು.ಅದರ ಪರಿಚಯ ಮಾಡಿಕೊಟ್ಟ ನಿಮಗೂ ವಂದನೆಗಳು.
ಎಲೆಮರೆಯ ಕಾಯಿ ಹುಡುಕಿ ಜಗಕೆ ತೋರುತ ವಿಶಿಷ್ಟ ರೀತಿಯಲ್ಲಿ ಹೊಳ್ಳ ಅವರು ಕಲಾದೇವಿಯ ಸೇವೆಗೈಯುತ್ತಿದ್ದಾರೆ
dinesh avar karya tumba shlaGhaniya.....
ಕಾಮೆಂಟ್ ಪೋಸ್ಟ್ ಮಾಡಿ