ಸೋಮವಾರ, ಫೆಬ್ರವರಿ 15, 2010

ಕಮಲ ನಾರಾಯಣ ದೇವಾಲಯ - ದೇವಗಾವಿ


ದೇವಗಾವಿಯ ಕಮಲ ನಾರಾಯಣ ದೇವಾಲಯ ಕದಂಬರ ಮಾಸ್ಟರ್ ಕ್ಲಾಸ್. ಊರೊಳಗೆ ಎಲ್ಲೋ ಮರೆಯಾದಂತೆ ತೋರುವ ದೇವಾಲಯ ನೀಡುವ ತಂಪಿನ ಅನುಭವ ಅದ್ಭುತ. ಈ ದೇವಾಲಯವನ್ನು ೧೨ನೇ ಶತಮಾನದಲ್ಲಿ ಕದಂಬ ರಾಣಿ ಕಮಲಾದೇವಿ ನಿರ್ಮಿಸಿದಳು. ವಿರಳವಾಗಿ ಕಾಣಬರುವ ಇಳಿಜಾರಿನ ಮಾಡಿನ ರಚನೆ ಇಲ್ಲೂ ಇತ್ತು (ನರೇಗಲ್ ಸರ್ವೇಶ್ವರ ದೇವಾಲಯದಲ್ಲಿ ಇದೇ ತರಹದ ರಚನೆ ಇದೆ). ಸುಖನಾಸಿಯ ಜಗುಲಿಯಲ್ಲಿ ಕುಳಿತರೆ ತಂಪು ತಂಪು. ಅಲ್ಲಿಂದ ಎದ್ದು ಬರಲು ಮನಸೇ ಬರುವುದಿಲ್ಲ. ದೇವಾಲಯ ಮತ್ತು ಪ್ರಾಂಗಣ ಸ್ವಚ್ಛವಾಗಿವೆ. ಮುಖ್ಯದ್ವಾರ ೪ ತೋಳಿನದ್ದಾಗಿದ್ದು ಪ್ರತಿ ತೋಳಿನಲ್ಲೂ ಸುಂದರವಾದ ಕೆತ್ತನೆಗಳಿವೆ.


ಆಯತಾಕಾರದ ಈ ದೇವಾಲಯದ ರಚನೆ ಸ್ವಲ್ಪ ಬೇರೆ ತರಹ ಇದೆ. ಎಲ್ಲೂ ಈ ತರಹದ ರಚನೆ ಹೆಚ್ಚಾಗಿ ಕಾಣಬರುವುದಿಲ್ಲ. ಹೆಚ್ಚಾಗಿ ಪ್ರಮುಖ ದ್ವಾರದಿಂದ ನೇರಕ್ಕೆ ಗರ್ಭಗುಡಿ ಕಾಣಬರುತ್ತದೆ. ಆದರೆ ಕಮಲ ನಾರಾಯಣ ದೇವಾಲಯದಲ್ಲಿ ಪ್ರಮುಖ ದ್ವಾರದಿಂದ ನೋಡಿದರೆ ನೇರಕ್ಕೆ ಕಾಣಬರುವುದು ಸುಖನಾಸಿಯ ಮತ್ತೊಂದು ತುದಿಯಲ್ಲಿರುವ ಖಾಲಿ ಕವಾಟ. ಹಾಗಾದರೆ ಗರ್ಭಗುಡಿ ಎಲ್ಲಿದೆ?


೩೨ ಕಂಬಗಳಿರುವ ಸುಖನಾಸಿಯ ಬಲಕ್ಕೆ ೩ ಗರ್ಭಗುಡಿಗಳಿವೆ! ಮೊದಲ ಮತ್ತು ೩ನೇ ಗರ್ಭಗುಡಿಗಳಿಗೆ ಅಂತರಾಳವಿದ್ದು ನಡುವೆ ಇರುವ ೨ನೇ ಗರ್ಭಗುಡಿಗೆ ಅಂತರಾಳವಿಲ್ಲ. ಸುಖನಾಸಿಯಿಂದಲೂ ದೇವಾಲಯದೊಳಗೆ ಎರಡು ದ್ವಾರಗಳ ತೆರೆದುಕೊಳ್ಳುತ್ತವೆ ಮತ್ತು ಇವು ಮೊದಲನೇ ಮತ್ತು ೩ನೇ ಗರ್ಭಗುಡಿಗಳಿಗೆ ನೇರವಾಗಿವೆ.

ಮೊದಲ ಗರ್ಭಗುಡಿಯಲ್ಲಿ ನಾರಾಯಣ ದೇವರ ಮೂರ್ತಿಯಿದೆ. ಎರಡನೇ ಗರ್ಭಗುಡಿಯಲ್ಲಿ ಲಕ್ಷ್ಮೀ, ನಾರಾಯಣನ ತೊಡೆಯ ಮೇಲೆ ಆಸೀನಳಾಗಿರುವ ಮೂರ್ತಿಯಿದೆ. ೩ನೇ ಗರ್ಭಗುಡಿಯಲ್ಲಿ ಕಮಲ ದೇವಿಯ ಮೂರ್ತಿಯಿದೆ.


ಎಲ್ಲಾ ಗರ್ಭಗುಡಿಗಳ ಮೊದಲು ಜಾಲಂಧ್ರಗಳ ರಚನೆಯಿವೆ. ಲಕ್ಷ್ಮೀ-ನಾರಾಯಣರಿರುವ ಗರ್ಭಗುಡಿಗೇ ಅಂತರಾಳವಿಲ್ಲದಿರುವುದು ಆಶ್ಚರ್ಯ. ಪ್ರತಿ ಗರ್ಭಗುಡಿಯ ಮೇಲೆ ಗಜಲಕ್ಷ್ಮೀಯ ಕೆತ್ತನೆಯಿದೆ. ದೇವಾಲಯದ ಹೊರಗೋಡೆಯ ಒಂದು ಪಾರ್ಶ್ವದಲ್ಲಿ ಕವಾಟವೊಂದರಲ್ಲಿ ಜೋಡಿನಾಗಗಳ ಸುಂದರ ಕೆತ್ತನೆಯಿದೆ. ದೇವಾಲಯದ ಮುಂಭಾಗದಲ್ಲಿ ಉದ್ದಕ್ಕೂ ಕೆಲವು ಉತ್ತಮ ಕೆತ್ತನೆಗಳಿವೆ. ಒಂದೆರಡು ಮಿಥುನ ಶಿಲ್ಪಗಳೂ ಇವೆ!

3 ಕಾಮೆಂಟ್‌ಗಳು: