ಶುಕ್ರವಾರ, ಆಗಸ್ಟ್ 07, 2009

ತೀರ್ಥಬರೆ ಜಲಧಾರೆ


೦೫-೧೦-೨೦೦೮.

ಬೆಟ್ಟಗಳಿಂದ ಆವೃತವಾಗಿರುವ ಪುಟ್ಟ ಸುಂದರ ಹಳ್ಳಿಯಿದು. ಬೆಟ್ಟಗಳಿಂದ ಇಳಿದು ಬರುವ ಐದಾರು ತೊರೆಗಳು. ಈ ಎಲ್ಲಾ ತೊರೆಗಳು ಅಲ್ಲಲ್ಲಿ ಜಲಧಾರೆಗಳನ್ನು ನಿರ್ಮಿಸಿವೆ. ಹಳ್ಳಿಯ ಸುತ್ತಲೂ ಆವೃತವಾಗಿರುವ ದಟ್ಟ ಕಾಡಿನಲ್ಲಿ ಅಡಗಿರುವ ಈ ಜಲಧಾರೆಗಳಿಗೆ ಚಾರಣಗೈಯುವುದು ಒಂದು ಸಾಹಸವೇ ಸರಿ.


ಈ ಜಲಧಾರೆಯೊಂದನ್ನು ನೋಡಿ ನಂತರ ಬೆಟ್ಟದ ಮೇಲಿರುವ ಇನ್ನೊಂದು ಹಳ್ಳಿಗೆ ಚಾರಣಗೈಯುವ ಪ್ಲ್ಯಾನ್ ಹಾಕಿಕೊಂಡು ಹೊರಟೆವು. ಸುಮಾರು ೧೫ ನಿಮಿಷ ಹಳ್ಳಿಯಲ್ಲೇ ಗದ್ದೆಗಳ ನಡುವೆ ಸಾಗಬೇಕು. ಅನತಿ ದೂರದಲ್ಲಿ ಬೆಟ್ಟವೊಂದರ ಸುಂದರ ದೃಶ್ಯ. ಗದ್ದೆಗಳನ್ನು ದಾಟಿ ಒಂದೈದು ನಿಮಿಷ ಸಾಗಿದ ಬಳಿಕ ನದಿಯೊಂದು ಎದುರಾಯಿತು.


ನದಿಯ ಹರಿವಿನ ಬದಿಯಲ್ಲೇ ಸಾಗಿ ಜಲಧಾರೆಯ ಸನಿಹ ತಲುಪಿದಾಗ ಅಲ್ಲೊಂದು ಒಂಟಿ ಮನೆ. ಈ ಸ್ಥಳಕ್ಕೆ ಮೂಜಿನಬರೆ ಎಂದು ಹೆಸರು. ಮನೆಯ ಮುಂದೆ ನಾಲ್ಕು ಗದ್ದೆಗಳು. ಗದ್ದೆಗಳಾಚೆಗಿರುವ ಕಾಡನ್ನು ದಾಟಿದರೆ ಉದ್ದಕ್ಕೂ ನಿಂತಿರುವ ಕಾಡಿನಿಂದಾವೃತ ಬೆಟ್ಟ. ಮನೆಯ ಹಿಂದೆ ಕಾಡಿನ ನಡುವಿಂದ ಜಲಧಾರೆಯ ಅಪ್ರತಿಮ ನೋಟ. ಈ ಒಂಟಿ ಮನೆಯ ಪರಿಸರವನ್ನು ನಾವೆಲ್ಲಾ ಬಹಳ ಇಷ್ಟಪಟ್ಟೆವು.


ಈ ಮನೆಯ ಹಿಂದೆ ಕಾಡಿನಲ್ಲಿ ಸ್ವಲ್ಪ ದೂರ ಸಾಗಿದರೆ ಅದ್ಭುತ ದೃಶ್ಯ. ೫೦-೮೦ ಅಡಿ ಎತ್ತರವಿರಬಹುದು ಎಂದು ಊಹಿಸಿದ್ದೆವು. ಆದರೆ ತೀರ್ಥಬರೆ ಜಲಧಾರೆ ೨೫೦ ಅಡಿಯಷ್ಟೆತ್ತರದಿಂದ ೨ ಪ್ರಮುಖ ಹಂತಗಳಲ್ಲಿ ಧುಮುಕುತ್ತಿತ್ತು! ಜಲಧಾರೆಗೆ ೨ ಪ್ರಮುಖ ಹಂತಗಳಿವೆ ಎನ್ನಬಹುದು. ಎರಡೂ ಹಂತಗಳು ೧೦೦ ಅಡಿಗೂ ಮಿಕ್ಕಿ ಎತ್ತರದಿಂದ ಧುಮುಕುತ್ತವೆ.


ಹಿಂತಿರುಗುವಾಗ ಹಳ್ಳದ ತಟದಲ್ಲಿ ಪ್ರಶಸ್ತ ಸ್ಥಳವೊಂದನ್ನು ಆಯ್ಕೆ ಮಾಡಿ ಜಲಕ್ರೀಡೆಯಾಡಿ ಊಟ ಮುಗಿಸಿದೆವು. ಇಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು ಕೂಡಾ. ನದಿಯ ಪ್ರಶಾಂತ ಹರಿವು ಮತ್ತು ತಂಪಿನ ವಾತಾವರಣ ಮುಂದಿರುವ ಕಠಿಣ ಚಾರಣಕ್ಕೆ ನಮ್ಮನ್ನು ಅಣಿಯಾಗಿಸಿತು.


ಈಗ ಮತ್ತೆ ಕಾಡನ್ನು ಹೊಕ್ಕಿ ಬೆಟ್ಟದ ಮೇಲಿರುವ ಹಳ್ಳಿಯೆಡೆ ಚಾರಣವನ್ನಾರಂಭಿಸಿದೆವು. ಕೂಡಲೇ ಇಂಬಳಗಳು ದಾಳಿಯನ್ನಾರಂಭಿಸಿದವು. ದಟ್ಟ ಮತ್ತು ಸುಂದರ ಕಾಡಿನಲ್ಲಿ ಸಂಪೂರ್ಣ ಏರುದಾರಿ. ಅರ್ಧ ದಾರಿ ಕ್ರಮಿಸಿದಾಗ ನಾಲ್ಕಾರು ಕಾಡುಕೋಣಗಳಿದ್ದ ಗುಂಪೊಂದು ನಮ್ಮನ್ನೇ ದುರುಗುಟ್ಟಿ ನೋಡುತ್ತಾ ನಿಂತಿದ್ದವು. ಹತ್ತೇ ಸೆಕೆಂಡು. ಬಳಿಕ ಕಾಡಿನ ಇಳಿಜಾರಿನಲ್ಲಿ ಮರೆಯಾದವು. ನಾನು ಹಿಂದೆ ಇದ್ದ ಕಾರಣ ನನ್ನೊಬ್ಬನನ್ನು ಬಿಟ್ಟು ಉಳಿದವರಿಗೆ ಈ ಕಾಡುಕೋಣಗಳು ಕಾಣಸಿಕ್ಕವು. ಅವು ಕಾಡಿನಲ್ಲಿ ಮರೆಯಾಗುತ್ತಿರುವ ಸದ್ದು ಮಾತ್ರ ನನಗೆ ಕೇಳಿಸಿತು. ಸುಮಾರು ೧೦೦ ನಿಮಿಷಗಳ ಚಾರಣದ ಬಳಿಕ ಈ ಸುಂದರ ಹಳ್ಳಿಯನ್ನು ತಲುಪಿದೆವು. ಇಲ್ಲೊಂದಿಷ್ಟು ಸಮಯ ಕಳೆದು ಮರಳಿದೆವು ಉಡುಪಿಗೆ.

ಮಾಹಿತಿ: ಶ್ರೀಪತಿ ಹೆಗಡೆ ಹಕ್ಲಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ