ಬುಧವಾರ, ಮೇ 07, 2008

ರಾಯಲ್ ಚಾಲೆಂಜರ್ಸ್ ಬೆಂಗಳೂರು...

ರಾಯಲ್ ಚಾಲೆಂಜರ್ಸ್, ಬೆಂಗಳೂರು. ೭ ಪಂದ್ಯಗಳಲ್ಲಿ ೫ನ್ನು ಸೋತ ಬಳಿಕ ಸಿ.ಇ.ಓ ಚಾರು ಶರ್ಮನನ್ನು ಮನೆಗೆ ಕಳಿಸಲಾಗಿದೆ. ಈ ಲೇಖನವನ್ನು ಬೆಂಗಳೂರು ತಂಡ ತನ್ನೆಲ್ಲಾ ಪಂದ್ಯಗಳನ್ನು ಆಡಿದ ಬಳಿಕ ಬರೆಯಬೇಕೆಂದಿದ್ದೆ. ಆದರೆ ಇದುವರೆಗೆ ಈ ತಂಡ ನೀಡಿದ ಹೀನಾಯ ಪ್ರದರ್ಶನದಿಂದ ಬೇಸತ್ತು ಈಗಲೇ ಗೀಚುತ್ತಿದ್ದೇನೆ.

ಅರುಣ್ ಕುಮಾರ್ ಹೇಗೆ ಆಡುತ್ತಾರೆ ನೋಡೋಣವೆಂದು ಬಹಳ ನಿರೀಕ್ಷೆಯೊಂದಿಗೆ ಕೊಲ್ಕತ್ತಾ ತಂಡದ ವಿರುದ್ಧದ ಮೊದಲ ಪಂದ್ಯ ನೋಡಲು ಕುಳಿತೆ. ಅರುಣ್ ತಂಡದಲ್ಲಿ ಇರಲೇ ಇಲ್ಲ! ಅರಂಭಿಕನಾಗಿ ಬಂದದ್ದು ವಾಸಿಮ್ ಜಾಫರ್!!!! ರಾಹುಲ್ ದ್ರಾವಿಡ್-ಗೆ ತಲೆ ಕೆಟ್ಟಿರಬೇಕೆಂದು ಊಹಿಸಿದೆ. ಅಂದು ಕೆಟ್ಟ ರಾಹುಲ್ ತಲೆ ಇದುವರೆಗೂ ಸರಿಯಾಗಿಲ್ಲ. ಅರುಣ್ ನಂತರದ ಯಾವ ಪಂದ್ಯದಲ್ಲೂ ಆಡಲಿಲ್ಲ. ಎಲ್ಲಾ ೭ ಪಂದ್ಯಗಳಲ್ಲೂ ಅರುಣ್ ಕುರ್ಚಿ ಬಿಸಿ ಮಾಡುತ್ತಾ ’ಡಗ್ ಔಟ್’ನಲ್ಲಿ ಕೂತಿದ್ದರು. ಅರುಣ್ ಹೊಡೆಬಡಿಯ ಆರಂಭಿಕ ಆಟಗಾರ. ೨೦-೨೦ ಇವರ ಆಟದ ಶೈಲಿಗೆ ಹೇಳಿ ಮಾಡಿಸಿದ್ದು. ಅರುಣ್ ಸಫಲರಾಗುತ್ತಾರೋ ಇಲ್ಲವೋ ಅರಿಯೆ ಆದರೆ ಒಂದೆರಡು ಅವಕಾಶವನ್ನಾದರೂ ಕೊಟ್ಟು ನೋಡಬಹುದಿತ್ತಲ್ವೇ...

ಇನ್ನು ವಾಸಿಮ್ ಜಾಫರ್. ಈತನನ್ನು ಬೆಂಗಳೂರು ತಂಡ ಖರೀದಿಸಿದಾಗ ನಾನು ಬಿದ್ದು ಬಿದ್ದು ನಕ್ಕಿದ್ದೆ. ಎಲ್ಲೋ ಕಟ್ಟುಪಾಡಿಗೆ ಬಿದ್ದು ಖರೀದಿಸಿರಬೇಕು (ಅನಿಲ್ ಕುಂಬ್ಳೆಯನ್ನು ಖರೀದಿಸಿದಂತೆ) ಎಂದು ತಿಳಿದುಕೊಂಡಿದ್ದೆ. ಆದರೆ ರಾಹುಲ್-ಗೆ ತಲೆ ಅಂದೇ ಕೆಟ್ಟಿತ್ತು ಅಂತ ಈಗ ತಿಳಿಯುತ್ತಿದೆ. ಎಲ್ಲಾ ಬಿಟ್ಟು ವಾಸಿಮ್ ಜಾಫರ್??!! ಈಗ ಬಂದಿರುವ ಸಿಹಿ ಸುದ್ದಿಯೆಂದರೆ ಜಾಫರ್ ಗಾಯಾಳಾಗಿ ಇನ್ನು ೩ ವಾರ ಆಡುವಂತಿಲ್ಲ.

ವಾಸಿಂ ಜಾಫರ್ ಮತ್ತು ಅನಿಲ್ ಕುಂಬ್ಳೆ ಮೇಲೆ ಖರೀದಿಯ ಸಮಯದಲ್ಲಿ ವ್ಯಯಿಸಿದ ಹಣ ವ್ಯರ್ಥ. ಸುನಿಲ್ ಜೋಶಿ ಆಡಿದ ಪಂದ್ಯಗಳಲ್ಲಿ (ದೆಹಲಿ ತಂಡದ ವಿರುದ್ಧದ ಪಂದ್ಯ ಬಿಟ್ಟು) ಚೆನ್ನಾಗಿ ಬೌಲಿಂಗ್ ಮಾಡಿದರೂ, ರಾಹುಲ್ ಅವರಿಗೆ ಎಲ್ಲಾ ೪ ಓವರ್ ಎಸೆಯಲು ಅವಕಾಶ ಒಂದು ಪಂದ್ಯದಲ್ಲೂ ನೀಡಲಿಲ್ಲ. ಉಳಿದೆಲ್ಲಾ ತಂಡಗಳು ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವಾಗ, ಬೆಂಗಳೂರು ತಂಡ ಅಪ್ಪಣ್ಣನಿಗೆ ಅವಕಾಶ ನೀಡಲೇ ಇಲ್ಲ. ಆಡಿದ ೨ ಪಂದ್ಯಗಳಲ್ಲಿ ಭರವಸೆಯ ಆಟಗಾರ ಭರತ್ ಚಿಪ್ಲಿ ನಿರಾಸೆ ಮಾಡಿದರು. ಮಿಸ್ಬಾ ಉಲ್ ಹಕ್ ೩ ಪಂದ್ಯಗಳಿಗೆ ಲಭ್ಯವಿದ್ದರೂ ಅವರನ್ನು ಆಡಿಸಲೇ ಇಲ್ಲ! ಅವರ ಬದಲಿಗೆ ಆಸಕ್ತಿ ಇಲ್ಲದಂತೆ ಆಡುತ್ತಿದ್ದ ಕ್ಯಾಲ್ಲಿಸ್-ಗೆ ಮಣೆ. ಮಾರ್ಕ್ ಬೌಚರ್ ಮುಂಬೈ ವಿರುದ್ಧ ಪಂದ್ಯದಲ್ಲಿ ಆಡಿದ್ದು ಬಿಟ್ಟರೆ ನಂತರ ಸದ್ದೇ ಇಲ್ಲ.

ಬೌಲಿಂಗ್ ಪಡೆ ಚೆನ್ನಾಗಿದೆ. ಬ್ಯಾಟಿಂಗ್ ಪಡೆಯೂ ಚೆನ್ನಾಗಿದೆ. ಹಾಗಿದ್ದರೆ ಪ್ರಾಬ್ಲೆಮ್ ಎಲ್ಲಿ?

ಪ್ರಾಬ್ಲೆಮ್ ಇರುವುದು ಅಂತಿಮ ಹನ್ನೊಂದರ ಆಯ್ಕೆಯಲ್ಲಿ. ಜಾಫರ್-ರನ್ನು ಆಡಿಸಿದ್ದೇ ’ಜೋಕ್ ಆಫ್ ದಿ ಐಪಿಎಲ್’. ಕುಂಬ್ಳೆಯನ್ನು ಆಡಿಸಲೇಬಾರದು. ಕಟ್ಟುಪಾಡಿಗೆ ಬಿದ್ದು ಕುಂಬ್ಳೆಯನ್ನು ಆಡಿಸಿ ಹೈದರಾಬಾದ್ ವಿರುದ್ಧದ ಪಂದ್ಯ ಕೈಜಾರುತ್ತೇನೋ ಎಂಬಂತಾಗಿತ್ತು. ಇದೇ ಕುಂಬ್ಳೆ ಮೊಹಾಲಿ ತಂಡದ ವಿರುದ್ಧ ಕೆಟ್ಟದಾಗಿ ಬೌಲಿಂಗ್ ಮಾಡಿ ಗೆಲುವಿಗೆ ಇದ್ದ ಸಣ್ಣ ಅವಕಾಶವನ್ನೂ ತಂಡ ಕಳೆದುಕೊಂಡಿತು. ಕ್ಯಾಲ್ಲಿಸ್ ಆಡಿದ್ದು ಸಾಕೆನಿಸುತ್ತದೆ. ಮಿಸ್ಬಾ ಉಲ್ ಹಕ್ ಲಭ್ಯರಾದೊಡನೇ ಕ್ಯಾಲ್ಲಿಸ್ ಜಾಗದಲ್ಲಿ ಮಿಸ್ಬಾರನ್ನು ಆಡಿಸಬೇಕಿತ್ತು. ಬೌಚರ್ ಕೂಡ ಇನ್ನು ತಂಡದಿಂದ ಹೊರಗಿದ್ದರೇ ಚೆನ್ನ. ದೇವರಾಜ್ ಪಾಟೀಲ್ ಚೆನ್ನಾಗಿ ವಿಕೆಟ್ ಕೀಪ್ ಮಾಡುತ್ತಾರೆ ಮತ್ತು ಅಷ್ಟಿಷ್ಟು ಆಡುತ್ತಾರೆ ಕೂಡಾ. ಇನ್ನು ವಿನಯ್ ಕುಮಾರ್ ತುಂಬಾನೇ ನಿರಾಸೆ ಮಾಡಿದರು. ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪ್ರಮುಖ ಬೌಲರ್ ಆಗಿರುವ ವಿನಯ್, ಸ್ವಲ್ಪವೂ ತಲೆ ಖರ್ಚು ಮಾಡದೇ ಎರ್ರಾಬಿರ್ರಿ ಬೌಲಿಂಗ್ ಮಾಡಿದರು.

ಎಲ್ಲಾ ತಂಡಗಳಲ್ಲಿಯೂ ಬೌಲಿಂಗ್ ಮಾಡುವಾಗ ನಾಯಕನಿಗೆ ಆರೇಳು ಬೌಲರ್-ಗಳ ಆಯ್ಕೆಯಿರುವಂತೆ ತಂಡವನ್ನು ರಚಿಸಲಾಗಿದೆ. ಆದರೆ ಬೆಂಗಳೂರು ತಂಡದಲ್ಲಿ ತಿಪ್ಪರಲಾಗ ಹಾಕಿದರೂ ಐದಕ್ಕಿಂತ ಹೆಚ್ಚು ಬೌಲರ್-ಗಳು ಸಿಗಲಾರರು. ಇದೇ ಕಾರಣಕ್ಕಾಗಿ ಕ್ಯಾಲ್ಲಿಸ್-ನನ್ನು ಎಲ್ಲಾ ಪಂದ್ಯಗಳಲ್ಲೂ ಆಡಿಸಬೇಕಾಯಿತು. ಆಟಗಾರರನ್ನು ಖರೀದಿಸುವಾಗ ಸ್ವಲ್ಪವಾದರೂ ವಿವೇಚನೆ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಇದ್ದುದರಲ್ಲಿ ಪ್ರವೀಣ್ ಕುಮಾರ್, ರಾಸ್ ಟೇಲರ್, ಬಾಲಚಂದ್ರ ಅಖಿಲ್, ಡೇಲ್ ಸ್ಟೇಯ್ನ್ ಮತ್ತು ವಿರಾಟ್ ಕೊಹ್ಲಿ ಸ್ವಲ್ಪ ಮಾರ್ಯಾದೆ ಉಳಿಸಿದರು ಎನ್ನಬಹುದು.

ಅರುಣ್ ಕುಮಾರ್, ಚಂದರ್ ಪಾಲ್, ಕ್ಯಾಮರೊನ್ ವೈಟ್, ವಿರಾಟ್ ಕೊಹ್ಲಿ, ಮಿಸ್ಬಾ ಉಲ್ ಹಕ್, ರಾಹುಲ್ ದ್ರಾವಿಡ್, ದೇವರಾಜ್ ಪಾಟೀಲ್, ಬಾಲಚಂದ್ರ ಅಖಿಲ್, ಪ್ರವೀಣ್ ಕುಮಾರ್, ಝಹೀರ್ ಖಾನ್, ಡೇಲ್ ಸ್ಟೇಯ್ನ್ - ಈಗ ಸದ್ಯಕ್ಕೆ ಈ ಹನ್ನೊಂದು ಮಂದಿಯ ತಂಡ ಸರಿ ಎಂದೆನಿಸುತ್ತಿದೆ.

ಇದೇ ರೀತಿ ಆಡಿದರೆ ವಿಜಯ್ ಮಲ್ಯ ಖರೀದಿಸಿದ ಎಲ್ಲಾ ಆಟಗಾರರನ್ನು ಮುಂದಿನ ವರ್ಷ ಮಾರಾಟಕ್ಕೆ ಇಟ್ಟುಬಿಟ್ಟು, ರಾಹುಲ್-ನನ್ನು ’ಐಕಾನ್’ ಪಟ್ಟದಿಂದ ಕೆಳಗಿಳಿಸಿ (ಹೈದರಾಬಾದ್ ತಂಡದ ಮಾಲೀಕರಾದ ಡೆಕ್ಕನ್ ಕ್ರೋನಿಕಲ್ ಸಂಸ್ಥೆ ಲಕ್ಷ್ಮಣ್-ನೊಂದಿಗೆ ಮಾಡಿದಂತೆ), ತಂಡದ ಆಯ್ಕೆಯಲ್ಲಿ ತಾನೇ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಈ ಸಲ, ತಂಡದ ಆಯ್ಕೆಯನ್ನು ಸಂಪೂರ್ಣವಾಗಿ ರಾಹುಲ್ ಮತ್ತು ಚಾರುಗೆ ವಹಿಸಿಕೊಟ್ಟು, ತನ್ನ ’ರಾಯಲ್ ಚಾಲೆಂಜರ್ಸ್’ ಬ್ರಾಂಡ್ ಅನ್ನು ಪ್ರಮೋಟ್ ಮಾಡುವುದರಲ್ಲೇ ಮಲ್ಯ ಆಸಕ್ತಿ ವಹಿಸಿದ್ದರು. ಅತ್ತ ಫಾರ್ಮುಲಾ ಒನ್ ನಲ್ಲಿ ತನ್ನ ಫೋರ್ಸ್ ಇಂಡಿಯಾ ತಂಡವನ್ನು ಹುರಿದುಂಬಿಸುತ್ತಾ ಸ್ಪೇನ್-ನಲ್ಲಿ ಇದ್ದ ಮಲ್ಯ ೩ ದಿನಗಳ ನಂತರ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಮೊಹಾಲಿ ತಂಡಕ್ಕೆ ಹೀನಾಯವಾಗಿ ಸೋಲುವುದನ್ನು ಕಾಣಲು ಬೆಂಗಳೂರಿಗೆ ಬಂದಿದ್ದ. ತನ್ನ ವ್ಯವಹಾರದಲ್ಲಿ ’ಸೋಲು’ ಎಂಬ ಶಬ್ದ ಇರದಂತೆ ವ್ಯವಹರಿಸುವ ಮಲ್ಯ ಸಹಜವಾಗಿಯೇ ಸಿಟ್ಟಿಗೆದ್ದಿರಬೇಕು. ಈ ಸಿಟ್ಟು ತನ್ನ ಮೊದಲ ಬಲಿಯನ್ನು ಚಾರು ಶರ್ಮನ ರೂಪದಲ್ಲಿ ಪಡೆದಿದೆ. ಆದರೆ ಚಾರು ಶರ್ಮನ ಜಾಗಕ್ಕೆ ಬಂದವರು ಬೃಜೇಶ್ ಪಟೇಲ್ ಎನ್ನುವುದು ಮತ್ತೊಂದು ಜೋಕು.

ಪಾಪ ಕಟ್ರಿನಾ ಕೈಫ್ ಮುಖ ಸಪ್ಪಗೆ ಮಾಡಿ ಕುಳಿತಿರುವುದು ನೋಡಿಯೇ ಬೇಜಾರಾಗತೊಡಗಿದೆ. ಸುಂದರ ನಗು ಇರುವ ಈ ಚೆಲುವೆಯ ನಗುವನ್ನು ನೋಡುವ ಅವಕಾಶ ನಮಗೆ ಇನ್ನಷ್ಟು ಸಿಗಲಿ. ರಾಯಲ್ ಚಾಲೆಂಜರ್ಸ್ ಇನ್ನು ಮುಂದಿನ ೭ ಪಂದ್ಯಗಳಿಗಾದರೂ ತನ್ನ ಅಂತಿಮ ಹನ್ನೊಂದರ ಆಯ್ಕೆ ಸರಿಯಾಗಿ ಮಾಡಿ ಉತ್ತಮ ಪ್ರದರ್ಶನ ನೀಡಿ ನಗೆಪಾಟಲಾಗಿರುವ ತನ್ನ ಘನತೆಯನ್ನು ಸ್ವಲ್ಪವಾದರೂ ಮರಳಿ ಪಡೆಯಲಿ.

2 ಕಾಮೆಂಟ್‌ಗಳು:

  1. ಅನಾಮಧೇಯಮೇ 08, 2008 2:39 PM

    ರಾಜೇಶ್ ನಿಮ್ಮ ಮಾತು ಅಕ್ಷರಶಃ ನಿಜ, ರಾಯಲ್ ಚಾಲೆಂಜರ್ಸ್ ಗೆ ಅಂತಿಮ ಹನ್ನೊಂದು ಆಯ್ಕೆ ಮಾಡೋದೆ ದೊಡ್ಡ ತಲೆನೋವು. ಆರಂಭಿಕ ಆಟಗಾರರಾಗಿ ಬೌಚರ್, ಆರುಣ್ ಉತ್ತಮ ಜೋಡಿ ಆಗಬಲ್ಲರು. ಭಾರತದ ಅತ್ಯಂತ ವೇಗಿ ಎನಿಸಿದ ಅಯ್ಯಪ್ಪ ಗೆ ಇನ್ನೂ ಸ್ಥಾನ ಸಿಗದಿರುವುದು ದುರಾದೃಷ್ತವೇ ಸರಿ.
    ಒಟ್ಟಿನಲ್ಲಿ ಆರ್ ಸಿ ತಂಡ ಉತ್ತಮ ಮಧ್ಯಮ ಕ್ರಮಾಂಕದ ತಂಡ ಅಷ್ಟೆ. ಆರಂಭ ಆಗಲಿ , ಅಂತ್ಯವಾಗಲಿ ಬರೆಯಬಲ್ಲ ಆಟಗಾರರು ಕಾಣಸಿಗುವುದಿಲ್ಲ ಏನಂತೀರಾ?

    ಪ್ರತ್ಯುತ್ತರಅಳಿಸಿ
  2. ಮಲೆನಾಡಿಗ,

    ಆರಂಭ (ಅರುಣ್ ಕುಮಾರ್ ಮತ್ತು ಕ್ಯಾಮರೊನ್ ವೈಟ್) ಮತ್ತು ಅಂತ್ಯ (ಮಿಸ್ಬಾ ಉಲ್ ಹಕ್) ಬರೆಯಬಲ್ಲ ಆಟಗಾರರಿದ್ದಾರೆ. ಆದರೆ ಅವರನ್ನು ಅಂತಿಮ ಹನ್ನೊಂದರಲ್ಲಿ ಆಡಿಸಲಾಗುತ್ತಿಲ್ಲ. ಇಂತಹ ಆಯ್ಕೆ ಪ್ರಮಾದ ಮಾಡಿದರೆ ಗೆಲ್ಲುವುದುಂಟೆ?

    ಪ್ರತ್ಯುತ್ತರಅಳಿಸಿ